ಗುಣಗಳು:- ಸಾಂಖ್ಯದ ಪ್ರಕಾರ ಗುಣಗಳು ಮೂರು-ಸತ್ತ್ವ, ರಜಸ್ಸು ಮತ್ತು ತಮಸ್ಸು. ಇವನ್ನು ಕುರಿತ ಪ್ರಕ್ರಿಯೆ ಆ ದರ್ಶನದಲ್ಲಿ ಬಹು ಮುಖ್ಯವಾದದು. ಗುಣಗಳ ಸಾಮ್ಯಾವಸ್ಥೆ ಎನ್ನುವುದೇ ಪ್ರಕೃತಿ. ಪುರುಷನ ಸಂಯೋಗದಿಂದ ಈ ಸಾಮ್ಯಾವಸ್ಥೆ ಒಡೆದು ಪ್ರಕೃತಿಯ ಪರಿಣಾಮಕ್ಕೆ ದಾರಿಯಾಗುತ್ತದೆ. ಎಲ್ಲ ಪ್ರಕೃತಿವಿಕೃತಿಗಳಿಗೂ ವಿಕಾರಗಳಿಗೂ ಕಾರಣ ಈ ಗುಣಗಳೇ. ಇವುಗಳ ವಿಶೇಷ ಭೇದದಿಂದ ಪ್ರಕೃತಿ ವಿಕೃತಿಯಾಗುವುದೆಂದು ಸಾಂಖ್ಯರ ಮತ. ಸತ್ತ್ವವೆನ್ನುವುದು ಲಘು, ಪ್ರಕಾಶ ಮತ್ತು ಪ್ರಿಯದಾಯಕ, ರಜಸ್ಸೆನ್ನುವುದು ಚಲನಕಾರಿ, ಉದ್ರೇಕಕಾರಿ, ತಮಸ್ಸೆನ್ನುವುದು ಭಾರವಾದದ್ದು ಮತ್ತು ಆವರಿಸತಕ್ಕದ್ದು.
ಕಾವ್ಯಮೀಮಾಂಸೆಯಲ್ಲಿ ಗುಣಗಳ ಪ್ರಸ್ತಾಪ ಬರುತ್ತದೆ. ಶ್ಲೇಷೆ, ಪ್ರಸಾದ, ಸಮತೆ, ಮಾಧುರ್ಯ, ಸೌಕುಮಾರ್ಯ, ಅರ್ಥವ್ಯಕ್ತಿ, ಉದಾರತ್ವ, ಓಜಸ್ಸು, ಕಾಂತಿ, ಸಮಾಧಿ-ಈ ಹತ್ತೂ ಕಾವ್ಯಗುಣಗಳೆಂದು ಭರತಾದಿ ಪ್ರಾಚೀನಾಲಂಕಾರಿಕರ ಮತ. ದಂಡಿ ಮತ್ತು ನಾಗವರ್ಮರು ಇವನ್ನು ಹೇಳಿದ್ದಾರೆ. ಇವುಗಳ ಲಕ್ಷಣಗಳನ್ನು ನೋಡಿದರೆ ಶ್ಲೇಷೆ, ಸಮತೆ, ಸೌಕುಮಾರ್ಯ ಮತ್ತು ಓಜಸ್ಸುಗಳು ಶಬ್ದಗುಣಗಳೆಂದೂ ಮಾಧುರ್ಯ ಉಭಯಗುಣವೆಂದೂ ಉಳಿದವು ಅರ್ಥಗುಣಗಳೆಂದೂ ತಿಳಿದುಬರುತ್ತದೆ.
ಆದರೆ ದಂಡಿಯ ಪ್ರಕಾರ ಶ್ಲೇಷೆ, ಸಮತೆ, ಪ್ರಸಾದ, ಅರ್ಥವ್ಯಕ್ತಿ, ಉದಾರತ್ವ, ಕಾಂತಿ, ಸಮಾಧಿ ಇವು ಶಬ್ದಗುಣಗಳಾಗಿದ್ದು; ಸೌಕುಮಾರ್ಯ ಮತ್ತು ಓಜಸ್ಸು ಅರ್ಥಗುಣಗಳಾಗಿದ್ದು; ಮಾದುರ್ಯವು ಉಭಯಗುಣವಾಗಿದೆ(ಅರ್ಥಗುಣ ಮತ್ತು ಶಬ್ದಗುಣ).
ಧ್ವನಿ, ರಸ, ವಕ್ರೋಕ್ತಿ, ರೀತಿ ಮತ್ತು ಗುಣಗಳು ಕಾವ್ಯಸೌಂದರ್ಯಕ್ಕೆ ಕಾರಣಗಳಷ್ಟೆ.. ಇವುಗಳಲ್ಲಿ ಧ್ವನಿ ಮತ್ತು ರಸಗಳು ಕಾವ್ಯದ ಅತ್ಮವಿದ್ದಂತೆ. ರೀತಿ ಮಾರ್ಗ ಮೊದಲಾದವು ಅಂಗಾಂಗ ಸನ್ನಿವೇಶ ವಿಶೇಷತೆಗಳಂತೆ. ಗುಣಗಳು ಶೌರ್ಯಧೈರ್ಯಾದಿಗಳಂತೆ. ಅಲಂಕಾರಗಳೋ ಮೇಲೆ ತೊಡುವ ಆಭರಣಾದಿಗಳಿದ್ದಂತೆ.