ಖ್ಯಾತ ಬೃಹತ್ಕಥೆಯ ಕರ್ತೃ. ಈ ಬೃಹತ್ಕಥೆ ಪೈಶಾಚೀ ಎಂಬ ಒಂದು ಬಗೆಯ ಪ್ರಾಕೃತಭಾಷೆಯಲ್ಲಿ ರಚಿತವಾಗಿತ್ತು ಎಂದು ತಿಳಿದುಬಂದಿದೆ. ಗ್ರಂಥ ಈಗ ಇಲ್ಲ. ಲುಪ್ತವಾಗಿ ಹೋಗಿದೆ. ಪ್ರಕೃತ ಉಪಲಬ್ಧವಾಗಿರುವುದು ಅದರ ಕೇವಲ ಮೂರು ಸಂಸ್ಕೃತ ಪದ್ಯಾತ್ಮಕ ಸಂಗ್ರಹರೂಪಗಳು-ಮೊದಲನೆಯದು ನೇಪಾಳದ ಬುಧ ಸ್ವಾಮಿಯಿಂದ ಪ್ರ.ಶ. ಒಂಬತ್ತನೆಯ ಶತಮಾನದಲ್ಲಿ ರಚಿತವಾದ ಬೃಹತ್ಕಥಾ ಶ್ಲೋಕಸಂಗ್ರಹ. ಎರಡನೆಯದು ಪ್ರ.ಶ. 1047ರಲ್ಲಿ ಕಾಶ್ಮೀರದ ಕ್ಷೇಮೇಂದ್ರ ರಚಿಸಿದ ಬೃಹತ್ಕಥಾಮಂಜರಿ, ಮೂರನೆಯದು ಪ್ರ.ಶ. 1070ರಲ್ಲಿ ಕಾಶ್ಮೀರದ ಸೋಮದೇವ ಬರೆದ ಕಥಾಸರಿತ್ಸಾಗರ. ಇವುಗಳ ಜೊತೆಗೆ ಪೆರುಂಗತೈ ಎಂಬ ತಮಿಳು ರೂಪಾಂತರವೂ ಇದೆ. ಇವುಗಳ ಆಕಾರ ಸ್ವರೂಪಗಳನ್ನು ಪರೀಶೀಲಿಸಿದರೆ ಮೂಲಬೃಹತ್ಕಥೆ ನಿಜವಾಗಿಯೂ ಬೃಹದ್ಗ್ರಂಥವೆಂಬುದನ್ನೂ ಅದು ಅನೇಕಾನೇಕ ಸ್ವಾರಸ್ಯವಾದ ಕಥೆಗಳ ಆಕರವಾಗಿತ್ತೆಂಬುದನ್ನೂ ಮನಗಾಣಬಹುದು. ಅಷ್ಟೇ ಅಲ್ಲದೆ ಆರ್ಯಾಸಪ್ತಶತಿಯ ಕರ್ತೃ ಗೋವರ್ಧನ ಗುಣಾಢ್ಯನನ್ನು ವಾಲ್ಮೀಕಿ ವ್ಯಾಸರ ಪಂಕ್ತಿಯಲ್ಲಿ ಮೂರನೆಯವನನ್ನಾಗಿ ಪರಿಗಣಿಸಿರುವುದೂ ರಾಮಾಯಣ ಮಹಾಭಾರತಗಳಂತೆಯೇ ಬೃಹತ್ಕಥೆಯೂ ಭಾರತೀಯ ಕವಿಗಳಿಗೆ ಉಪಜೀವ್ಯಕಾವ್ಯವಾಗಿರುವುದೂ ಗಮನಾರ್ಹ.
ಗುಣಾಢ್ಯನ ಮತ್ತು ಅವನ ಬೃಹತ್ಕಥಾ ರಚನೆಯ ವಿಚಾರವಾಗಿ ಸೋಮದೇವ ಕಥಾಸರಿತ್ಸಾಗರದಲ್ಲಿ ಹೇಳಿರುವುದು ಹೀಗಿದೆ; ಒಂದು ದಿನ ಶಿವ ಪಾರ್ವತಿಗೆ ಏಕಾಂತವಾಗಿ ಸಪ್ತ ವಿದ್ಯಾಧರ ಚಕ್ರವರ್ತಿಗಳ ಮನೋಹರವಾದ ಕಥೆಗಳನ್ನು ಹೇಳುತ್ತಿದ್ದ. ಅದನ್ನು ಶಿವಗಣಗಳಲ್ಲೊಬ್ಬನಾದ ಪುಷ್ಪದಂತ ಮರೆಯಲ್ಲಿ ನಿಂತು ಕೇಳಿದ್ದಲ್ಲದೆ ತನ್ನ ಹೆಂಡತಿ ಜಯಾ ಎಂಬುವಳಿಗೆ ತಿಳಿಸಿದ. ಜಯಾ ಪಾರ್ವತಿಯ ಚೇಟಿ. ಅವಳು ತನ್ನ ಸಖಿಯರಿಗೆಲ್ಲ ಆ ಕಥೆಯನ್ನು ಹೇಳಿದಳು. ಕ್ರಮೇಣ ಅದು ಕರ್ಣಾಕರ್ಣಿಕೆಯಾಗಿ ಪಾರ್ವತಿಯ ಕಿವಿಗೂ ಬಿತ್ತು. ಆಗ ಅವಳು ಪುಷ್ಪದಂತನನ್ನೂ ಮಧ್ಯೆ ಪ್ರವೇಶಿಸಿದ ಅವನ ಸೋದರ ಮಾಲ್ಯವಂತನನ್ನೂ ಭೂಲೋಕದಲ್ಲಿ ಹುಟ್ಟುವಂತೆ ಶಪಿಸಿಬಿಟ್ಟಳು. ಆಗ ಜಯೆ ಮೊರೆಯಿಡಲು ಪುಷ್ಪದಂತ ತಾನು ಕೇಳಿದ್ದ ಕಥೆಗಳನ್ನು ವಿಂಧ್ಯಾಟವಿಯಲ್ಲಿ ವಾಸಿಸುತ್ತಿದ್ದ ಕಾಣಭೂತಿಯೆಂಬ ಪಿಶಾಚಕ್ಕೆ ಹೇಳಿತಿಳಿಸಿದರೆ ಅವನು ಶಾಪವಿಮುಕ್ತನಾಗುವನೆಂದೂ ಮಾಲ್ಯವಂತ ಅದೇ ಕಥೆಗಳನ್ನು ಕಾಣಭೂತಿಯಿಂದ ತಿಳಿದು ಭೂಲೋಕದಲ್ಲಿ ಪ್ರಚುರಪಡಿಸಿದರೆ ಅವನ ಶಾಪವಿಮೋಚನೆ ಆಗುವುದೆಂದೂ ಪಾರ್ವತಿ ಹೇಳಿದಳು. ಅದರಂತೆ ಪುಷ್ಪದಂತ ಕೌಶಾಂಬಿಯಲ್ಲಿ ವರರುಚಿಯಾಗಿ ಹುಟ್ಟಿ ನವನಂದರ ಕೊನೆಯ ಅಮಾತ್ಯನಾದ; ಕೊನೆಗೆ ಅಧಿಕಾರವನ್ನು ತ್ಯಜಿಸಿ, ವಿಂಧ್ಯಾಟವಿಗೆ ಹೋಗಿ, ಕಾಣಭೂತಿಯನ್ನು ಸಂಧಿಸಿ, ಅವನಿಗೆ ಸಪ್ತವಿದ್ಯಾಧರ ಚಕ್ರವರ್ತಿಗಳ ಕಥೆಯನ್ನು ಹೇಳಿ ಶಾಪದಿಂದ ಬಿಡುಗಡೆ ಹೊಂದಿದ. ಮಾಲ್ಯವಂತ ಗುಣಾಢ್ಯನಾಗಿ ಹುಟ್ಟಿ ಪ್ರತಿಷ್ಠಾನದ ರಾಜ ಶಾತವಾಹನನ ಅಮಾತ್ಯನಾದ; ರಾಜನಿಗೆ ಸಂಸ್ಕೃತ ಕಲಿಸುವ ವಿಚಾರವಾಗಿ ಮತ್ತೊಬ್ಬ ಮಂತ್ರಿಯಾದ ಶರ್ವವರ್ಮನೊಡನೆ ಪಣ ತೊಟ್ಟು ಸೋತು, ಆ ಪಣದಂತೆ ತಾನು ಅಲ್ಲಿಂದ ಮುಂದೆ ಸಂಸ್ಕೃತವನ್ನು ಉಪಯೋಗಿಸುವುದಿಲ್ಲವೆಂದು ಶಪಥಮಾಡಿ ರಾಜಸೇವೆಯನ್ನು ತ್ಯಜಿಸಿಬಿಟ್ಟ. ಬಳಿಕ ವಿಂಧ್ಯಾಟವಿಯಲ್ಲಿ ಸುತ್ತಾಡಿ ಕಾಣಭೂತಿಯನ್ನು ಕಂಡು ಅವನಿಂದ ಸಪ್ತವಿದ್ಯಾಧರ ಚಕ್ರವರ್ತಿಗಳ ಕಥೆಯನ್ನು ಕೇಳಿ ತಿಳಿದುಕೊಂಡು ತನ್ನ ಶಪಥದಂತೆ ಸಂಸ್ಕೃತವನ್ನು ಬಳಸದೆ, ಪ್ರಾಕೃತಭಾಷೆಯ ಒಂದು ಪ್ರಭೇದವಾದ ಪೈಶಾಚೀ ಎಂಬ, ಆ ಪ್ರಾಂತ್ಯದ ಆಡುಭಾಷೆಯಲ್ಲಿ ಆ ಕಥೆಗಳನ್ನು ಅಚ್ಚುಮೆಚ್ಚಾದ ರೀತಿಯಲ್ಲಿ ತನ್ನ ರಕ್ತದಿಂದಲೇ ಬರೆದಿಟ್ಟ. ಅಮೋಘವಾದ ಕೃತಿಯನ್ನು ಗುಣಾಢ್ಯನ ಶಿಷ್ಯರು ರಾಜನಿಗೆ ತೋರಿಸಲು ಅವನು ಅದನ್ನು ಓದದೆಯೇ ಅಲ್ಲಗಳೆದುದರಿಂದ ವಿಷಣ್ಣನಾದ ಗುಣಾಢ್ಯ ಆ ಕಥೆಗಳನ್ನು ಒಂದೊಂದಾಗಿ ಅಗ್ನಿಯೊಳಕ್ಕೆ ಎಸೆಯಲಾರಂಭಿಸಿದ; ಶಿಷ್ಯರ ನಿರ್ಬಂಧದಿಂದ ಕೊನೆಯ ಕಥೆಯನ್ನು ಮಾತ್ರ ಬೆಂಕಿಗೆ ಹಾಕಲಿಲ್ಲ. ಹೀಗೆ ಉಳಿದ ಕಥೆಯೇ ಬೃಹತ್ಕಥೆ-ಒಂದು ಲಕ್ಷಗ್ರಂಥಗಳ ಬೃಹತ್ಕೃತಿ. ಪ್ರಚಲಿತವಾಗಿರುವ ಜನಪ್ರಿಯ ಕಥೆಗಳಲ್ಲಿ ಇದೇ ಅತ್ಯಂತ ಪ್ರಾಚೀನ.
ಕೌಶಾಂಬಿಯ ಉದಯನರಾಜನ ಮಗನಾದ ನರವಾಹನದತ್ತನ ಸಾಹಸಗಳ ವೃತ್ತಾಂತವೇ ಬೃಹತ್ಕಥೆಯ ವಸ್ತು. ನರವಾಹನ ಮದನಮಂಜೂಷಿಕಾ ಎಂಬ ವಿದ್ಯಾಧರ ರಾಜಕುಮಾರಿಯನ್ನು ಮದುವೆಯಾದುದು, ಮಾನಸವೇಗ ಅವಳನ್ನು ಅಪಹರಿಸಿದುದು, ತನ್ನ ಗೆಳೆಯನಾದ ಗೋಮುಖನ ಸಹಾಯದಿಂದ ನರವಾಹನ ಅವಳನ್ನು ಪುನಃ ಪಡೆದು ವಿದ್ಯಾಧರ ಚಕ್ರವರ್ತಿಯಾದುದು-ಇದೇ ಕಥೆಯ ಸ್ಥೂಲರೂಪ. ಇದರೊಡನೆ ಅನೇಕ ಉಪಕಥೆಗಳೂ ಅವುಗಳ ವ್ಯೂಹಗಳೂ ಸೇರಿ ಪ್ರಧಾನಕಥೆ ತೀರ ಜಟಿಲವಾಗಿ ಬೃಹದಾಕಾರ ತಾಳಿಬಿಟ್ಟಿದೆ.
ಬೃಹತ್ಕಥೆಯಲ್ಲಿರುವ ಉದಯನಚರಿತವನ್ನು ಭಾಸ ಕಾಳಿದಾಸಾದಿಗಳು ತಮ್ಮ ಕೃತಿಗಳಲ್ಲಿ ನಿರೂಪಿಸಿದ್ದಾರೆ ಇಲ್ಲವೆ ಬಳಸಿಕೊಂಡಿದ್ದಾರೆ. ಆಂಧ್ರಭೃತ್ಯವಂಶದ ಶಾತವಾಹನ ನನ್ನು ಗುಣಾಢ್ಯ ಆಶ್ರಯದಾತನೆಂದು ಸೋಮದೇವ ಹೇಳಿದ್ದಾನೆ. ಈ ಕಾರಣಗಳಿಂದ ಗುಣಾಢ್ಯ ಪ್ರ.ಶ. ಒಂದನೆಯ ಶತಮಾನದವನೆಂದು ಹೇಳಬೇಕಾಗುತ್ತದೆ. ಬಾಣನೂ ದಂಡಿಯೂ ಬೃಹತ್ಕಥೆಯನ್ನು ಉಲ್ಲೇಖಿಸಿರುವುದರಿಂದ ಅದರ ಕರ್ತೃ ಪ್ರ.ಶ. ಐದನೆಯ ಶತಮಾನಕ್ಕಿಂತ ಹಿಂದಿನವನೇ ಆಗಿರಬೇಕೆಂಬುದರಲ್ಲಿ ಸಂಶಯವಿಲ್ಲ.
ಗುಣಾಢ್ಯನ ಬೃಹತ್ಕಥೆಯ ರಚನೆಗೆ ಬಳಸಿದ ಪೈಶಾಚೀ ಪ್ರಾಕೃತಭಾಷೆ ಗೋದಾವರೀ ತೀರದ ವಿಂಧ್ಯಪ್ರದೇಶ ಭಾಗದಲ್ಲಿ ಬಳಕೆಯಲ್ಲಿತ್ತು. ಆ ಪ್ರದೇಶದ ನೆರೆಯ ಪ್ರತಿಷ್ಠಾನದಲ್ಲೇ ಗುಣಾಢ್ಯ ವಾಸವಾಗಿದ್ದುದು. ಅವನ ತಾಯಿ ಶ್ರುತಾರ್ಥಾ ಎಂಬ ಬ್ರಾಹ್ಮಣಕನ್ಯೆಯೆಂದೂ ತಂದೆ ನಾಗರಾಜ ವಾಸುಕಿಯ ಸಂಬಂಧಿ ಕೀರ್ತಿಸೇನನೆಂದೂ ಕಥಾಸರಿತ್ಸಾಗರದಲ್ಲಿ ಹೇಳಿದೆ (ನೋಡಿ- ಬೃಹತ್ಕಥೆ).
ಗುಣೋತ್ತರ ವಿತರಣೆ: ನೋಡಿ - ಜ್ಯಾಮಿತೀಯ ವಿತರಣೆ