ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗುಪ್ತ, ಪರಮೇಶ್ವರಿಲಾಲ್

1914-2001. ಭಾರತದ ಹೆಸರಾಂತ ನಾಣ್ಯಶಾಸ್ತ್ರ ತಜ್ಞರು. ಭಾರತೀಯ ನಾಣ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ಸಂಸ್ಥೆಯ ಸಂಸ್ಥಾಪಕರು. ಉತ್ತರ ಪ್ರದೇಶದ ಆಜ಼ಮ್ಗಡ್ನಲ್ಲಿ ಜನಿಸಿದರು. 8ನೆಯ ತರಗತಿಯಲ್ಲಿದ್ದಾಗ ಜವಹರಲಾಲ್ ನೆಹರು ಬಂಧಿತರಾದಾಗ ಶಾಲೆಯನ್ನು ಬಹಿಷ್ಕರಿಸಿದರು. ಶಾಲೆ ಇವರಿಗೆ ದಂಡವನ್ನು ವಿಧಿಸಿತು. ಆದರೆ ಇವರು ದಂಡವನ್ನು ಕೊಡಲು ನಿರಾಕರಿಸಿದಾಗ ಇವರನ್ನು ಶಾಲೆಯಿಂದ ಹೊರಹಾಕಲಾಯಿತು. ಅನಂತರ ಇವರು ಭಾರತ ರಾಷ್ಟ್ರೀಯ ಕಾಂಗ್ರೆಸ್ ಸೇರಿ ಕಾನೂನು ಭಂಗ ಚಳವಳಿಯ ನೇತೃತ್ವ ವಹಿಸಿದರು. ಇದರ ಪರಿಣಾಮವಾಗಿ ತಮ್ಮ ಪ್ರದೇಶದಲ್ಲಿ ಆಜ಼ಮ್ಗಟ್-ಕ-ನೆಹರು ಎಂದು ಪ್ರಸಿದ್ಧರಾದರು. ಸ್ವಾತಂತ್ರ್ಯ ಬಂದ ಅನಂತರ ರಾಜಕೀಯದಿಂದ ದೂರಸರಿದು ಶಾಸ್ತ್ರೀಯ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. 1948ರಿಂದ (18 ವರ್ಷಗಳ ಅನಂತರ) ತಮ್ಮ ವಿದ್ಯಾಭ್ಯಾಸ ಮುಂದುವರಿಸಿದರು. ಬಾಹ್ಯವಿದ್ಯಾರ್ಥಿಯಾಗಿ ಪದವಿ ಹಾಗೂ ಎಂ.ಎ. ಪದವಿಯನ್ನು ಮೊದಲ ಶ್ರೇಣಿಯಲ್ಲಿ ಪಡೆದರು. ಪಂಚ್ ಮಾಕ್ರ್ಡ್‌ ಕಾಯಿನ್ಸ್‌ ಇನ್ ಏನ್ಷೆಂಟ್ ಇಂಡಿಯ-ಇವರ ಪಿಎಚ್.ಡಿ. ಪ್ರಬಂಧ. ಈ ಸಂಶೋಧನೆ ಇವರಿಗೆ ಒಳ್ಳೆಯ ಹೆಸರನ್ನು ತಂದಿತು. 1953ರಲ್ಲಿ ಬೊಂಬಾಯಿನ ಪ್ರಿನ್ಸ್‌ ಆಫ್ ವೇಲ್ಸ್‌ ಮ್ಯೂಸಿಯಂನಲ್ಲಿ ಶಾಸನತಜ್ಞರಾಗಿ ನೇಮಕಗೊಂಡರು. 1962ರ ತನಕ ಅಲ್ಲಿ ಕೆಲಸ ಮಾಡಿದರು. 6 ತಿಂಗಳು ಬ್ರಿಟಿಷ್ ಮ್ಯೂಸಿಯಂನಲ್ಲಿ ಕೆಲಸ ಮಾಡಿದರು. 1963ರಲ್ಲಿ ಪಾಟ್ನ ವಸ್ತುಸಂಗ್ರಹಾಲಯದ ನಿರ್ದೇಶಕರಾದರು. 1972ರಲ್ಲಿ ನಿವೃತ್ತಿ ಹೊಂದಿದರು. ಇವರ ಪ್ರಶಂಸನೀಯ ಕಾರ್ಯವೆಂದರೆ ನಾಸಿಕದಲ್ಲಿಯ ಅಂಜನೇರಿ ಬಳಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ರಿಸರ್ಚ್ ಇನ್ ನ್ಯೂಮಿಸ್ಮ್ಯಾಟಿಕ್ ಸ್ಟಡೀಸ್ ಸಂಸ್ಥೆಯನ್ನು ತನ್ನ ಶಿಷ್ಯ ಕೆ.ಕೆ. ಮಹೇಶ್ವರಿಯವರನ್ನು ಪ್ರೇರೇಪಿಸಿ ಸ್ಥಾಪನೆ ಮಾಡಿದ್ದು. ಇದಕ್ಕೆ ತಮ್ಮ ಗ್ರಂಥ ಭಂಡಾರವನ್ನು ದಾನ ಮಾಡಿದರು. ಶಿಷ್ಯನ ಕೋರಿಕೆಯ ಮೇರೆಗೆ ಈ ಸಂಸ್ಥೆಯ ಮುಖ್ಯಸ್ಥರಾದರು. ಅನಾರೋಗ್ಯ ದಿಂದ 1989ರಲ್ಲಿ ಈ ಜವಾಬ್ದಾರಿಯಿಂದ ಬಿಡುಗಡೆ ಹೊಂದಿದರು. 2001 ಜುಲೈ 27ರಂದು ನಿಧನರಾದರು. ಇವರು ನಾಣ್ಯಗಳನ್ನು ಕುರಿತು ಸು. 250ಕ್ಕೂ ಹೆಚ್ಚು ಲೇಖನಗಳನ್ನೂ ಪುಸ್ತಕಗಳನ್ನೂ ಬರೆದಿದ್ದಾರೆ. ರಾಷ್ಟ್ರೀಯ ಪುಸ್ತಕ ಪ್ರಾಧಿಕಾರ ಪ್ರಕಟಿಸಿದ ಕಾಯಿನ್ಸ್‌ ಇವರ ಒಂದು ಮುಖ್ಯ ಕೃತಿ. ಇವರಿಗೆ ಯು.ಕೆ.ಯ ದಿ ರಾಯಲ್ ನ್ಯೂಮಿಸ್ಮ್ಯಾಟಿಕ್ ಸೊಸೈಟಿಯ ಲೋಟ್ಕ ಪಾರಿತೋಷಕ (1969), ಅಮೆರಿಕದ ನ್ಯೂಮಿಸ್ಮ್ಯಾಟಿಕ್ ಸೊಸೈಟಿಯ ಹಂಟಿಂಗ್ಟನ್ ಪ್ರಶಸ್ತಿ, ಭಾರತದ ನ್ಯೂಮಿಸ್ಮ್ಯಾಟಿಕ್ ಸೊಸೈಟಿ ಆಫ್ ಇಂಡಿಯದ ಚಕ್ರವಿಕ್ರಮ ಪದಕ (1954), ಏಷ್ಯಾಟಿಕ್ ಸೊಸೈಟಿ ಆಫ್ ಕಲ್ಕತ್ತ ಸಂಸ್ಥೆಯ ಜದುನಾಥ್ ಸರ್ಕಾರ್ ಪದಕ ಮೊದಲಾದ ಪ್ರತಿಷ್ಠಿತ ಪ್ರಶಸ್ತಿ ಪದಕಗಳು ಲಭಿಸಿವೆ. 1969-86ರ ವರೆಗೆ ಹಲವಾರು ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಇವರಿಗೆ ವಿಶಿಷ್ಟ ಪದಕಗಳನ್ನು ನೀಡಿ, ತಮ್ಮ ತಮ್ಮ ಸಂಸ್ಥೆಗಳ ಗೌರವ ಸದಸ್ಯರನ್ನಾಗಿ ಮಾಡಿಕೊಂಡವು.