ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗುರುಲಿಂಗವಿಭು

"ಗುರುಲಿಂಗವಿಭು" : - ಸು. 1550ರಲ್ಲಿದ್ದ ಕವಿ. ಭಿಕ್ಷಾಟನ ಚರಿತ್ರೆ ಎಂಬ ಕನ್ನಡ ಕಾವ್ಯವನ್ನು ಬರೆದಿದ್ದಾನೆ. ಈತ ತನ್ನನ್ನು ಕವಿರಾಯ ಎಂದೂ ಆಶುಮಧುರಂ ಚಿತ್ರ ವಿಸ್ತಾರವೆಂದೆಂಬ ನಾಲ್ಕು ಬಗೆಯ ವಿರಚಿಸಲು ಬಲ್ಲವಸ್ತುಕ ಕವೀಂದ್ರರ, ವರ್ಣಕ ಕವೀಶ್ವರರ ಕರ್ಣಾಭರಣ ಎಂದು ಕರೆದುಕೊಂಡಿದ್ದಾನೆ. ಇದನ್ನು ನೋಡಿದರೆ ಭಿಕ್ಷಾಟನ ಚರಿತ್ರೆಯನ್ನಲ್ಲದೆ ಈತ ಇತರ ಕೃತಿಗಳನ್ನೂ ಬರೆದಿರುವಂತೆ ತೋರುತ್ತದೆ. ಆದರೆ ಸಿಕ್ಕಿರುವುದು ಇದೊಂದೇ ಕೃತಿ.

ವಾರ್ಧಕ ಷಟ್ಪದಿಯಲ್ಲಿರುವ ಈ ಕಾವ್ಯ ಮೂರು ಸಂಧಿಗಳಿಂದ ಕೂಡಿ ಒಟ್ಟು 150 ಪದ್ಯಗಳನ್ನೊಳಗೊಂಡಿರುವ ಒಂದು ಚಿಕ್ಕ ಕೃತಿ. ಶಿವ, ಅಜಕಪಾಲವನ್ನು ಹಿಡಿದು ಭಿಕ್ಷಾಟನೆ ಮಾಡಿದುದು ಈ ಕಾವ್ಯದ ವಸ್ತು. ಧರೆಯೊಳಗೆ ಗೋಪಾಲ ಕೃಷ್ಣ ಹರಿನಾಮ ಸಾವಿರ ಗೋಪಿಯರೊಳಿಹುದ ನೋಡಬೇಕೆಂದು ಪುರಹರನು ಭಿಕ್ಷುಕನಾಗಿ ದ್ವಾರಾವತಿಗೆ ಬಂದ ಪರಿಯ ನಾನು ವರ್ಣಿಸುವೆನು_ಎಂದು ಕಥಾ ಬೀಜವನ್ನು ಸೂಚಿಸಿ ಗ್ರಂಥವನ್ನು ಪ್ರಾರಂಭಿಸುತ್ತಾನೆ. ಅಜಕಪಾಲಕ್ಕೆ ರಕ್ತವನ್ನು ತುಂಬುವಂತೆ ಕೃಷ್ಣನಿಗೆ ಹೇಳಲು, ಕೃಷ್ಣ ತನ್ನ ತಲೆಯಿಂದ ರಕ್ತದ ಧಾರೆಯನ್ನು ಹರಿಸಿ ಅದನ್ನು ತುಂಬಲು ಪ್ರಯತ್ನಿಸುತ್ತಾನೆ. ಆದರೆ ಎಷ್ಟು ರಕ್ತ ಹರಿಸಿದರೂ ಅದು ತುಂಬುವುದಿಲ್ಲ. ಶಿವ, ಕುರುಕ್ಷೇತ್ರದ ಯುದ್ಧದಲ್ಲಿ ಕೌರವ ಪಾಂಡವ ಸೈನ್ಯಗಳಿಂದ ಸುರಿಯುವ ರಕ್ತದಿಂದ ಅದು ತುಂಬುತ್ತದೆಂದು ಹೇಳುತ್ತಾನೆ. ಮುಂದೆ ಕುರುಕ್ಷೇತ್ರದ ಯುದ್ಧ ನಡೆದು ಅಲ್ಲಿನ ರಕ್ತವೆಲ್ಲ ಕಪಾಲಕ್ಕೆ ಹರಿದರೂ ಅದು ಆರ್ಧ ಮಾತ್ರ ತುಂಬುತ್ತದೆ. ಆಗ ಶಿವ ಅದನ್ನು ಎಸೆದು ಕಾಳ ಮೇಘಗಳ ನೀರನ್ನೇ ಆಹಾರ ಮಾಡಿಕೊಂಡು ತೃಪ್ತಿ ಹೊಂದುವಂತೆ ಆ ಬ್ರಹ್ಮಕಪಾಲಕ್ಕೆ ಹೇಳಿ ಹೊರಟುಹೋಗುತ್ತಾನೆ. ಇದಿಷ್ಟು ಭಿಕ್ಷಾಟನ ಚರಿತ್ರೆಯ ಕಥೆ. ಇದನ್ನೊಂದು ಚಿಕ್ಕ ಕಾವ್ಯವನ್ನಾಗಿ ರಚಿಸಿ ಕೊಟ್ಟಿದ್ದಾನೆ, ಗುರುಲಿಂಗ ವಿಭು.

ಈ ಕಥೆಯನ್ನು ಹಿಂದೆ ಸೂತಮುನಿಗಳು ನೈಮಿಷಾರಣ್ಯದಲ್ಲಿ ಸನಕಾದಿ ಮುನಿಗಳಿಗೆ ಹೇಳಿದರಂತೆ. ಆ ಕ್ರಮದಲ್ಲಿ ಇಲ್ಲಿ ಇದನ್ನು ನಿರೂಪಿಸಲಾಗಿದೆ. ಗ್ರಂಥದ ಪ್ರಾರಂಭದಲ್ಲಿ ನಂದೀಶನನ್ನು ಸ್ತುತಿಸಿ ಅನಂತರ ಕವಿ ಬಸವ, ಚನ್ನಬಸವ, ಅಲ್ಲಮ, ರೇವಣಾರ್ಯ, ಮಡಿವಾಳ ಮಾಚ, ಸಿದ್ಧರಾಮ, ಮಾದಿರಾಜರನ್ನು ಸ್ಮರಿಸಿದ್ದಾನೆ. ಕೇಳ್ವ ರಸಿಕರ ಹೃದಯವೆಂಬ ರಂಗಮಧ್ಯದೊಳು ನರ್ತಿಸುವ ನಚ್ಚಣೆಯಂತೆ ಶಿವನ ಭಿಕ್ಷಾಟನ ಕೃತಿ ಮೋಹನವನೀವುದು-ಎಂದು ತನ್ನ ಕೃತಿಯನ್ನು ಕುರಿತು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಗುರುಲಿಂಗ ವಿಭು. ಈ ಕೃತಿಯಲ್ಲಿ ಅಲ್ಲಲ್ಲಿ ಬರುವ ವರ್ಣನೆಗಳು ಈತ ತಕ್ಕಮಟ್ಟಿಗೆ ಒಳ್ಳೆಯ ಕವಿ, ಷಟ್ಪದಿಗಳ ರಹಸ್ಯವನ್ನು ಬಲ್ಲವನು-ಎಂಬುದಕ್ಕೆ ಸಾಕ್ಷಿಯಾಗಿವೆ. ಈ ಗ್ರಂಥಕ್ಕೆ ಒಂದು ಕನ್ನಡ ವ್ಯಾಖ್ಯಾನವಿರುವುದು ಇದರ ಜನಪ್ರಿಯತೆಯನ್ನು ಸೂಚಿಸುತ್ತದೆ. (ಎಚ್.ಟಿ.)