ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೂನು ತಿಮಿಂಗಲ

ಮೆಗಾಪ್ಟರ ಜಾತಿಗೆ ಸೇರಿದ ಒಂದು ವಿಚಿತ್ರ ಬಗೆಯ ತಿಮಿಂಗಿಲ (ಹಂಪ್ ಬ್ಯಾಕ್ ವೇಲ್). ಸಿಟೇಸಿಯ ಗಣದ ಮಿಸ್ಟಿಸೆಟಿ ಉಪಗಣಕ್ಕೆ ಸೇರಿದೆ. ಈ ತಿಮಿಂಗಿಲದ ಬೆನ್ನಿನ ಮೇಲೆ ಸಣ್ಣದಾದ ಮತ್ತು ವಕ್ರವಾಗಿರುವ ಒಂಟಿ ಈಜುರೆಕ್ಕೆ ಇರುವುದರಿಂದಲೂ ಇದು ನೀರಿನಿಂದ ಹೊರಬರುವಾಗ ಗೂನಿನಂತೆ ಬಾಗಿರುವ ಹಾಗೆ ಕಾಣುವುದರಿಂದಲೂ ಇದಕ್ಕೆ ಗೂನು ತಿಮಿಂಗಿಲ ಎಂದು ಹೆಸರು ಬಂದಿದೆ. ಈ ತಿಮಿಂಗಿಲದಲ್ಲಿ ಭ್ರೂಣಾವಸ್ಥೆಯಲ್ಲಿ ಮಾತ್ರ ಸಣ್ಣ ಹಲ್ಲುಗಳು ಇದ್ದು ತಿಮಿಂಗಿಲ ಬೆಳೆದ ಹಾಗೆಲ್ಲ ಹಲ್ಲುಗಳು ಬಿದ್ದುಹೋಗಿ ಬಾಯಲ್ಲಿ ಬೆಲೀನ್ ಅಥವಾ ತಿಮಿಂಗಿಲ ಮೂಳೆ ಬೆಳೆಯುತ್ತದೆ. ಬಾಯಂಗುಳದಿಂದ ತೂಗಾಡುವ ಇದು ಇಬ್ಭಾಗವಾಗಿದ್ದು ಇದರ ಎರಡು ಭಾಗಗಳು ಬಾಯಿಯ ಇಕ್ಕೆಡೆಗಳಲ್ಲಿ ಹೊಂದಾಣಿಕೆಯಾಗಿವೆ. ಬೆಲೀನ್ ಜರಡಿಯಂತಿರುವುದರಿಂದ ಸಣ್ಣ ಪ್ರಾಣಿಗಳನ್ನು ಆಹಾರವಾಗಿ ಹಿಡಿಯಲು ಅನುಕೂಲವಾಗಿದೆ. ಗೂನು ತಿಮಿಂಗಿಲ ದೈತ್ಯಾಕಾರದ್ದು ; ಸುಮಾರು 15ಮೀ ಉದ್ದಕ್ಕೆ ಬೆಳೆಯುತ್ತದೆ. ತೂಕ ಸುಮಾರು 4,000 ಕೆ.ಜಿ. ಗೂನು ತಿಮಿಂಗಿಲ ತನ್ನ ಆಕಾರದಲ್ಲೂ ನಡತೆಯಲ್ಲೂ ಮಿಕ್ಕ ತಿಮಿಂಗಿಲಗಳಿಗಿಂತ ಭಿನ್ನವಾಗಿದೆ. ಇದರ ಮುಂಗಾಲುಗಳು ಹುಟ್ಟುಗಳ ಹಾಗಿವೆ. ಹುಟ್ಟುಗಳ ಅಂಚುಗಳು ಒರಟಾಗಿವೆ. ಇತರ ದಂತರಹಿತ ತಿಮಿಂಗಿಲಗಳಂತೆಯೇ ಇದರಲ್ಲೂ ಹೆಬ್ಬೆಟ್ಟಿಲ್ಲ. ಆದರೆ 2ನೆಯ ಮತ್ತು 3ನೆಯ ಬೆರಳುಗಳಲ್ಲಿ, ಕೆಲವುವೇಳೆ 4ನೆಯ ಬೆರಳಿನಲ್ಲಿ ಹೆಚ್ಚು ಸಂಖ್ಯೆಯ ಮಣಿಕಟ್ಟುಗಳು ಇರುವುದರಿಂದ ಗೂನು ತಿಮಿಂಗಿಲದ ಮುಂಗಾಲುಗಳು ಉದ್ಧವಾಗಿವೆ. ಸಾಮಾನ್ಯವಾಗಿ ತಿಮಿಂಗಿಲಗಳಲ್ಲಿ ಹಿಂಗಾಲುಗಳಿಲ್ಲ. ಆದರೆ ಗೂನು ತಿಮಿಂಗಿಲ ತನ್ನ ಭ್ರೂಣಾವಸ್ಥೆಯಲ್ಲಿ ಹಿಂಗಾಲುಗಳ ಕುರುಹುಗಳನ್ನು ಪ್ರದರ್ಶಿಸುತ್ತದೆ. ತಿಮಿಂಗಿಲ ಬೆಳೆದಂತೆಲ್ಲ ಇವು ಅದೃಶ್ಯವಾಗುತ್ತವೆ. 1919 ರಲ್ಲಿ ಅಮೆರಿಕದ ವಾಂಕುವರ್ ಬಳಿ ಸಿಕ್ಕಿದ ಒಂದು ಪ್ರೌಢ ಗೂನುತಿಮಿಂಗಿಲದಲ್ಲಿ ಮಾತ್ರ, ಗುದದ ಇಕ್ಕೆಡೆಗಳಲ್ಲಿ ಸುಮಾರು 1.3 ಮೀ ಉದ್ದದ, ಮೊನಚು ತುದಿಯ, ಕೊಳವೆಯಾಕಾರದ ಅಂಗಗಳಿದ್ದವು. ಇವುಗಳಲ್ಲಿ ಮೃದ್ವಸ್ಥಿಯ ಒಂದು ಫೀಮರ್ ಮತ್ತು ಮೂಳೆಯಿಂದಾದ ಒಂದು ಮೆಟಟಾರ್ಸಸ್ ಇದ್ದವು. ಇವನ್ನೆ ಹಿಂಗಾಲುಗಳೆಂದು ಭಾವಿಸಲಾಗಿದೆ.

ಗೂನು ತಿಮಿಂಗಲ


ಗೂನು ತಿಮಿಂಗಿಲ ಬಾರ್ನಕಲ್ ಮುಂತಾದ ಕೆಲವು ಪರಾವಲಂಬಿಗಳಿಗೆ ಆಶ್ರಯದಾತ ಪ್ರಾಣಿಯಾಗಿದೆ. ಇವು ಇದರ ದೇಹದ ಹೊರ ಮೈಮೇಲೆ ಅಂಟಿಕೊಂಡಿರುತ್ತವೆ.


ಗೂನು ತಿಮಿಂಗಿಲಕ್ಕೆ ನಿರ್ದಿಷ್ಟವಾದ ಸಂತಾನೋತ್ಪತ್ತಿಯ ಕಾಲ ಇಲ್ಲ. ಗರ್ಭಾವಸ್ಥೆಯ ಅವಧಿ 11-12 ತಿಂಗಳು. ಆಗತಾನೇ ಹುಟ್ಟಿದ ಮರಿಯೂ ದೈತ್ಯಾಕಾರದ್ದೇ. ಇದರ ಉದ್ದ 5 ಮೀ ತೂಕ 1 ಟನ್. ತಾಯಿ ಮರಿಯನ್ನು ಬಹಳ ಪ್ರೀತಿಯಿಂದ ಸಾಕುತ್ತದೆ; ಅರೆಕ್ಷಣವೂ ಬಿಟ್ಟಗಲದು. ಶತ್ರುವಿನ ಕೈಗೆ ಸಿಕ್ಕಿಬಿದ್ದ ಪ್ರಸಂಗಗಳಲ್ಲೂ ಮರಿಯಿಂದ ಬೇರೆಯಾಗದೆ ಅದನ್ನು ರಕ್ಷಿಸಲು ಪ್ರಯತ್ನಿಸುತ್ತದೆ.


ಗೂನು ತಿಮಿಂಗಿಲಗಳು ಎಲ್ಲ ಸಾಗರಗಳಲ್ಲೂ ಕಂಡುಬರುತ್ತವೆ. ಒಂದು ಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಇವು ತಮ್ಮ ಸ್ನೇಹ ಸ್ವಭಾವ ಮತ್ತು ವಿನೋದಪರತೆಗಳಿಂದಾಗಿ ಬೇಟೆಗಾರರಿಗೆ ಸುಲಭವಾಗಿ ಆಹುತಿಯಾಗುವುದರಿಂದ ಇವುಗಳ ಸಂಖ್ಯೆ ಇಳಿದಿದೆ. ಆದರೆ ಈಗ ಕಾನೂನುರೀತ್ಯ ಇವುಗಳನ್ನು ಸಂರಕ್ಷಿಸಲಾಗಿದೆ.