ಕೋಳಿಯನ್ನು ಹೆಚ್ಚು ಕಡಿಮೆ ಹೋಲುವ ಒಂದು ಹಕ್ಕಿ. ಗ್ಯಾಲಿಫಾರ್ಮೀಸ್ ಗಣಕ್ಕೂ ಕ್ರ್ಯಾಸಿಡೀ ಕುಟುಂಬಕ್ಕೂ ಸೇರಿದೆ. ಇದು ಮಧ್ಯ ಹಾಗೂ ಉತ್ತರ ಅಮೆರಿಕದ ಕೆಲವು ಪ್ರದೇಶಗಳಲ್ಲಿ ವಿರಳವಾಗಿಯೂ ದಕ್ಷಿಣ ಅಮೆರಿಕದಲ್ಲಿ ಹೇರಳವಾಗಿಯೂ ಕಂಡುಬರುತ್ತದೆ.
ಇದು ಸುಮಾರು 3/4 ಮೀ ಉದ್ದಕ್ಕೆ ಬೆಳೆಯುವ ಮಧ್ಯಮಗಾತ್ರದ ಹಕ್ಕಿ. ದೇಹದ ಬಣ್ಣ ಕಂದು ಇಲ್ಲವೆ ಆಲಿವ್ ಹಸುರು. ಕತ್ತು ಮತ್ತು ತಲೆಗಳ ಮೇಲೆ ಗರಿಗಳೇ ಇಲ್ಲ. ಆದರೆ ನೆತ್ತಿಯ ಮೇಲೆ ಮಾತ್ರ ಬಿಳಿಯ ಬಣ್ಣದ ಪುಕ್ಕಗಳ ಕಿರೀಟವಿದೆ. ಕತ್ತಿನ ಮುಂಭಾಗದಲ್ಲಿ ಜೋಲಾಡುವ ಮಾಂಸದ ಪಟಲವೊಂದಿದೆ. ಕೊಕ್ಕು ಚಿಕ್ಕದು; ದೃಢವಾಗಿದೆ. ಕಾಲುಗಳು ಬಲವಾಗಿದ್ದು ಭೂಮಿಯ ಮೇಲೆ ಓಡಾಡುವುದಕ್ಕೂ ಕ್ರಿಮಿ, ಕೀಟ ಮತ್ತು ಧಾನ್ಯಕ್ಕಾಗಿ ನೆಲವನ್ನು ಕೆರೆಯುವುದಕ್ಕೂ ನೆರವಾಗುತ್ತದೆ. ಕಾಲಿನಲ್ಲಿ ಐದು ಬೆರಳುಗಳಿವೆ. ಇವುಗಳಲ್ಲಿ ಒಂದು ಹಿಮ್ಮುಖವಾಗಿ ಬೆಳೆದಿರುವುದು ಈ ಕೋಳಿಗಳಲ್ಲಿನ ಮುಖ್ಯ ಲಕ್ಷಣಗಳಲ್ಲೊಂದು. ವನ್ಯವೃಕ್ಷಗಳ ತುದಿಗಳಲ್ಲೇ ಇದರ ವಾಸ. ಸದ್ದುಗದ್ದಲ ಮಾಡದೆ ಮರದಿಂದ ಮರಕ್ಕೆ ಸಾಗುತ್ತ ಹಣ್ಣುಹಂಪಲನ್ನು ತಿಂದು ಬದುಕುತ್ತದೆ. ಇವು ದೊಡ್ಡ ಗುಂಪುಗಳಲ್ಲಿರುವುದು ಸಾಮಾನ್ಯವಾದರೂ ಸಂತಾನೋತ್ಪತ್ತಿಯ ಕಾಲದಲ್ಲಿ ಗಂಡು ಮತ್ತು ಹೆಣ್ಣು ಹಕ್ಕಿಗಳು ಗುಂಪಿನಿಂದ ಬೇರೆಯಾಗಿ ಜೋಡಿಗಳಲ್ಲಿ ವಾಸಿಸತೊಡಗುತ್ತವೆ. ಗೂವನ್ ಹಕ್ಕಿಗಳಲ್ಲಿ ಅನೇಕ ಬಗೆಗಳಿವೆ. ಇವುಗಳಲ್ಲಿ ಪೆನೆಲೊಪೆ, ಅಬೂರಿಯ, ಕ್ಯಾಮೀಪೆಟಿಸ್ ಮತ್ತು ಓರಿಯೋಫ್ಯಾಸಿಸ್ ಎಂಬವು ಮುಖ್ಯವಾದವು.