ಸ್ತನಿವರ್ಗ, ಆರ್ಟಿಯೊಡ್ಯಾಕ್ಟಿಲ ಗಣ, ಬೋವಿಡೀ ಕುಟುಂಬಕ್ಕೆ ಸೇರಿದ ಒಂದು ಪ್ರಾಣಿ. ಬೈಬಾಸ್ ಫ್ರಾಂಟ್ಯಾಲಿಸ್ ಇದರ ಶಾಸ್ತ್ರೀಯ ನಾಮ. ಭಾರತ ಮತ್ತು ಆಗ್ನೇಯ ಏಷ್ಯದಲ್ಲಿ ಕಾಣಬರುವ ಕಾಡುಕೋಣದ (ಗೌರ್) ಸಾಕುತಳಿ ಇದು ಎಂದು ಅನೇಕ ಪ್ರಾಣಿ ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ಆದರೆ ಕಾಡುಕೋಣಕ್ಕೂ ಗೇಯಲಿಗೂ ಹಲವಾರು ವ್ಯತ್ಯಾಸಗಳಿವೆ. ಕಾಡುಕೋಣಕ್ಕೆ ಹೋಲಿಸಿದರೆ ಗೇಯಲ್ ಚಿಕ್ಕಗಾತ್ರದ್ದು. ಇದರ ಎತ್ತರ 1.3 ಮೀ (5'), ಉದ್ದ 3 ಮೀ (9') ತೂಕ ಸುಮಾರು 540 ಕಿಗ್ರಾಂ. ದೇಹದ ಬಣ್ಣ ಕಪ್ಪುಮಿಶ್ರಿತ ಕಂದು. ಕೆಲವು ಸಲ ನೀಲಿ ಛಾಯೆಯಿರುವುದುಂಟು. ಮಂಡಿಯ ಕೆಳಗಿನ ಭಾಗ ಮತ್ತು ಬಾಲದ ತುದಿಗಳು ಮಾತ್ರ ಬೆಳ್ಳಗಿವೆ. ಕೊಂಬುಗಳು ಮೋಟು. ತಲೆಯ ಆಚೀಚೆ ಅಗಲವಾಗಿ ಹರಡಿವೆ. ವ್ಯವಸಾಯಕ್ಕಾಗಲಿ, ಗಾಡಿಗೆ ಕಟ್ಟುವುದಕ್ಕಾಗಲಿ, ಹೈನಿಗಾಗಲಿ ಗೇಯಲ್ ಉಪಯುಕ್ತವಿಲ್ಲ. ಆದರೆ ಇದರ ಮಾಂಸ ಬಹಳ ರುಚಿಯಾದುದು. ಇದಕ್ಕಾಗಿಯೇ ಅಸ್ಸಾಂ, ಟೆನಸ್ಸಿರಂ ಮತ್ತು ಉತ್ತರ ಮಯನ್ಮಾರ್ನಲ್ಲಿ ಇದನ್ನು ಸಾಕುತ್ತಾರೆ.

ಗೇಯಲ್