ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೈಡುಗಳು ಮತ್ತು ಗೈಡು ಪದ್ಧತಿ
ಬಾಯ್ಸ್ಕೌಟುಗಳು ಮತ್ತು ಸ್ಕೌಟು ಪದ್ಧತಿಗಳ ಮಾದರಿಯಲ್ಲೆ ಬಾಲಕಿಯರಿಗಾಗಿ ಏರ್ಪಟ್ಟ ವ್ಯವಸ್ಥೆಯನ್ನು ಗೈಡುಪದ್ಧತಿ ಎಂದೂ ಅದರ ಸದಸ್ಯರನ್ನು ಗೈಡುಗಳು ಎಂದೂ ಕರೆಯಲಾಗಿದೆ.
ಸ್ಕೌಟು ಪದ್ಧತಿಯ ಜನಕನೂ ಸ್ಥಾಪನಾಚಾರ್ಯನೂ ಆದ ಲಾರ್ಡ್ ಬೇಡನ್ ಪೋವೆಲನನ್ನು ಯಾರೋ ಒಮ್ಮೆ ಗೈಡು ಪದ್ಧತಿ ನಿನ್ನ ಆಲೋಚನೆಗೆ ಬಂದದ್ದು ಹೇಗೆ ಎಂದು ಪ್ರಶ್ನಿಸಿದಾಗ ಆತ ಹೀಗೆ ಉತ್ತರ ಕೊಟ್ಟನಂತೆ: “ನಿಜವಾಗಿ ಗೈಡುಗಳ ಆಲೋಚನೆ ನನಗೆ ಇರಲೇ ಇಲ್ಲ. ಬಾಲಕಿಯರು ತಾವೇ ಅದನ್ನು ಪ್ರಾರಂಭಿಸಿದರು. 1909ರಲ್ಲಿ ಕ್ರಿಸ್ಟಲ್ ಪ್ಯಾಲೆಸ್ ಆವರಣದಲ್ಲಿ ನಾನು ಕೂಡಿಸಿದ ಸ್ಕೌಟುಗಳ ಪ್ರಪ್ರಥಮ ಮೇಳಕ್ಕೆ ಬಾಲಕಿಯರು ಆಹ್ವಾನ ಕೋರದೆ ಬಂದರು. ತಾವೂ ಸ್ಕೌಟುಗಳೆಂದೂ ಸ್ಕೌಟುಗಳೊಂದಿಗೆ ನಡೆಯುವುದೇ ತಮ್ಮ ಇಚ್ಛೆಯೆಂದೂ ಹಠತೊಟ್ಟರು. ನಾನೂ ಹಠ ತೊಟ್ಟೆ. ‘ನೀವು ಸ್ಕೌಟು ಬಾಲಕಿಯರಾದರೂ ನಿಮ್ಮ ಆಟಪಾಟ ಪ್ರತ್ಯೇಕವಾಗಿ ಇರತಕ್ಕದ್ದು’ ಎಂದು. ಪ್ರತ್ಯೇಕ ವ್ಯವಸ್ಥೆಯ ಜವಾಬ್ದಾರಿಯನ್ನು ನನ್ನ ಸಹೋದರಿ ಅಗ್ನಿಸ್ ಬೇಡನ್ ಪೋವೆಲಳಿಗೆ ವಹಿಸಿಕೊಟ್ಟೆ. ಆಕೆ 1910ರಲ್ಲಿ ‘ಬಾಲಕಿಯರಿಂದ ಚಕ್ರಾಧಿಪತ್ಯಕ್ಕೆ ಸಹಾಯ ಹೇಗೆ’ ಎಂಬ ಚಿಕ್ಕ ಹೊತ್ತಗೆಯನ್ನು ಪ್ರಕಟಿಸಿದಳು. ಕೂಡಲೆ ಸ್ಕೌಟು ಪದ್ಧತಿಯಂಥ ಅನೇಕ ಬಾಲಿಕಾ ಸಮೂಹಗಳು ಕೆಲಸಮಾಡತೊಡಗಿದುವು. ಸ್ಕೌಟು ಬಾಲಕಿ ಎಂದಿದ್ದುದನ್ನು ನನ್ನ ಪತ್ನಿ ಬದಲಾಯಿಸಿ ಗೈಡು ಬಾಲಕಿ ಎಂಬ ಪದವನ್ನು ಜಾರಿಗೆ ತಂದಳು. ಅದೇ ಅತಿಶಯವಾಗಿ ಪ್ರಪಂಚದಲ್ಲೆಲ್ಲ ಬಳಕೆಗೆ ಬಂದಿದ್ದರೂ ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲೂ ಇತರ ಕೆಲವು ಕಡೆಗಳಲ್ಲೂ ಸ್ಕೌಟು ಬಾಲಕಿ ಎಂಬ ಹೆಸರೇ ಉಳಿದು ಬಂದಿದೆ.”
ಹಳೆಯ ಸಂಪ್ರದಾಯವಾದಿಗಳು ತೀವ್ರವಾಗಿ ಪ್ರತಿಭಟಿಸಿದರೂ ಈ ಹೊಸ ಪದ್ಧತಿ ಬೇಗ ಬೇಗ ಬೆಳೆಯುತ್ತಲೇ ಹೋಯಿತು. 1915ರಲ್ಲಿ ಬ್ರಿಟಿಷ್ ಸರ್ಕಾರ ಇದಕ್ಕೆ ಸಂಘ ಸ್ಥಾಪನಾಧಿಕಾರವನ್ನು ಕೊಟ್ಟಿತು: 1923ರಲ್ಲಿ ಪ್ರಭುಸನ್ನದನ್ನೂ ಗಳಿಸಿಕೊಂಡು ಇದು ಅಧಿಕೃತವಾಗಿ ಗರ್ಲ್ ಗೈಡಿಂಗ್ ಸಂಸ್ಥೆಯಾಯಿತು.
ಗೈಡುಪದ್ಧತಿ ಭಾರತಕ್ಕೆ 1911ರಲ್ಲೇ ಬಂದಿತೆಂದು ಗೊತ್ತಾಗಿದೆ. ಜಬಲ್ಪುರದಲ್ಲಿ ಮೊದಲ ಗೈಡುದಳ ಪ್ರಾರಂಭವಾಯಿತು. ಆಮೇಲೆ ಕಲ್ಕತ್ತ, ಮದ್ರಾಸು, ಮುಂಬಯಿಗಳಲ್ಲೂ ಗೈಡುಗಳು ತಲೆಯೆತ್ತಿದರು. ಕ್ರಮೇಣ ಗೈಡುಪದ್ಧತಿಯ ಕಿರಿಯ ಹಿರಿಯ ಶಾಖೆಗಳಾದ ಬ್ರೌನೀ ಬಳಗ (ಇದು ಆಮೇಲೆ ಬ್ಲೂಬರ್ಡ್ ಫ್ಲಾಕ್-ನೀಲ ಹಕ್ಕಿ ಬಳಗ-ಎಂಬ ನಾಮಾಂತರ ಹೊಂದಿತು) ಮತ್ತು ರೇಂಜರ್ ವೃಂದಗಳೂ ಹುಟ್ಟಿಬಂದುವು. 1915ರಲ್ಲಿ ಭಾರತಕ್ಕೂ ಒಂದು ಕೇಂದ್ರ ಕಚೇರಿ ಬಂತು. ಆದರೆ ಲಂಡನಿನ ಮುಖ್ಯ ಕಚೇರಿಯ ಮೇಲುಸ್ತುವಾರಿ ಕುಗ್ಗದೇ ಇತ್ತು. ಭಾರತ ಎನ್ನುವಾಗ ಐರೋಪ್ಯ ಇಲ್ಲವೆ ಆಂಗ್ಲೊ- ಇಂಡಿಯನ್ ಮತ್ತು ದೇಶೀಯ (ನೇಟಿವ್) ಎಂಬ ಅತಾರ್ಕಿಕ ವ್ಯತ್ಯಾಸ ಇದ್ದದ್ದನ್ನು ಮರೆಯಲಾಗದು. ಗೈಡು ದಳಕ್ಕೆ ಸೇರಬಹುದಾದ ಬಾಲಕಿಯರೆಲ್ಲ ಐರೋಪ್ಯರಾಗಿರಬೇಕಾಗಿತ್ತು: ದೇಶೀಯ ಬಾಲಕಿಯರಿಗೆ ಅದರಲ್ಲಿ ಸುತರಾಂ ಪ್ರವೇಶವಿರಲಿಲ್ಲ.
ಆನಿ ಬೆಸೆಂಟ್ (1847-1933) ಭಾರತದ ಸ್ಕೌಟು ಸಂಘವನ್ನು ಸ್ಥಾಪಿಸಿ (1916) ದೇಶೀಯ ಬಾಲಕರಿಗೂ ಆ ಪದ್ಧತಿಯ ಪ್ರಯೋಜನ ದೊರಕುವಂತೆ ವ್ಯವಸ್ಥೆ ಮಾಡಿದಳು. ಅಲ್ಲದೆ ಚಿಕ್ಕ ಹುಡುಗಿಯರೂ ಆ ಸಂಘಕ್ಕೆ ಸೇರಿಕೊಳ್ಳಲು ಅವಕಾಶವಾಗು ವಂತೆ ಗೈಡು ಸೋದರಿ ಎಂಬ ಶಾಖೆೆಯನ್ನು ತೆರೆದಳು. ಅವಳು ಉಪಯೋಗಿಸಿಕೊಂಡ ಸಮವಸ್ತ್ರ, ಕೊರಳು ಚೌಕ, ಸಂಘ ಬಿಲ್ಲೆಗಳ ವಿಚಾರದಲ್ಲಿ ತಮಗೆ ಮಾತ್ರ ಸರ್ವಸ್ವಾಮ್ಯ ಇರುವುದೆಂದು ಬ್ರಿಟನಿನ ಅಧಿಕಾರವರ್ಗ ಆಕ್ಷೇಪಣೆ ಎತ್ತಿದಾಗ ಆನಿ ಬೆಸೆಂಟ್ ಸ್ಕೌಟು ನಿಯಮದ ನಾಲ್ಕನೆಯ ಅಂಶದತ್ತ ಅವರ ಗಮನ ಸೆಳೆದು ಅವರ ಬಾಯಿ ಮುಚ್ಚಿಸಿದಳಂತೆ.
ಈ ಮಧ್ಯೆ ಲಖನೌದಲ್ಲಿ ಓಲೆಕಾರ ಬಾಲಕಿ (ಗರ್ಲ್ ಮೆಸೆಂಜರ್) ಎಂಬ ವ್ಯವಸ್ಥೆ ಏರ್ಪಟ್ಟು (1910) ಐರೋಪ್ಯ, ದೇಶೀಯ ಎಂಬ ಭೇದವನ್ನಿಡದೆ ಅದು ಗೈಡು ಪದ್ಧತಿಯ ರೀತಿಯಲ್ಲೇ ನಡೆಯುತ್ತ ಬಂತು. ಮದನ ಮೋಹನ ಮಾಳವೀಯ ಮತ್ತು ಕುನ್ಜ್ರು, ಅವರ ಆಶ್ರಯದಲ್ಲಿ ‘ಸೇವಾ ಸಮಿತಿ ಸ್ಕೌಟುಗಳು‘ ಉದ್ಭವವಾಯಿತು (1917). ಅದರಲ್ಲಿ ಗೈಡುಗಳಿಗೂ ಪ್ರವೇಶ ಸಿಕ್ಕಿತು.
ಬೇಡನ್ ಪೋವೆಲ್ ದಂಪತಿಗಳು ಭಾರತಕ್ಕೆ ಆಗಮಿಸಿ (1921) ಇಲ್ಲಿನ ಹಲವಾರು ಸ್ಕೌಟು ಮತ್ತು ಗೈಡು ಸಂಘಗಳಿಗೆ ಭೇಟಿಕೊಟ್ಟು ಅವೆಲ್ಲವನ್ನು ಒಟ್ಟಿಗೆ ಸೇರಿಸಿ ಏಕೆ ಸಂಸ್ಥೆಯಾಗಿ ಮಾಡಲು ಪ್ರಯತ್ನಿಸಿದರು. ಓಲೆಕಾರ ಬಾಲಕಿ ಮತ್ತು ಗೈಡು ಸೋದರಿ ಸಂಘಗಳು ಭಾರತದ ಗೈಡು ಸಂಘದೊಳಗೆ ವಿಲೀನಗೊಳ್ಳಲು ಒಪ್ಪಿದುವು; ಸ್ಕೌಟು-ಗೈಡು ಪ್ರತಿಜ್ಞೆಯಲ್ಲಿ ಕಡ್ಡಾಯವಾಗಿದ್ದ, ಭಾರತದ ಸಾರ್ವಭೌಮನಿಗೆ ತನ್ನ ಶ್ರದ್ಧಾಭಕ್ತಿಯನ್ನು ಅರ್ಪಿಸಬೇಕೆಂಬ-ಸೂತ್ರವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ ಸೇವಾ ಸಮಿತಿ ಮಾತ್ರ ಈ ವಿಲೀನಕ್ಕೆ ಒಪ್ಪದೆ ಪ್ರತ್ಯೇಕವಾಗಿ ನಿಂತಿತು. ಈ ಸೂತ್ರ ಹಲವು ಕಡೆಗಳಲ್ಲಿ ಬಾಲಕಬಾಲಕಿ ತರುಣತರುಣಿಯರಿಗೆ ನುಂಗಲಾರದ ತುತ್ತಾಗಿತ್ತು. ಗೈಡುಗಳೂ ಸ್ಕೌಟುಗಳೂ ಈ ಸೂತ್ರವನ್ನು ವಿರೋಧಿಸಿ ಎಷ್ಟೊ ಕಡೆ ಮುಷ್ಕರ ಹೂಡಿದ್ದುಂಟು.
ಕ್ರಮೇಣ ಜಗತ್ತಿನ ನಾನಾ ದೇಶಗಳಲ್ಲಿ ಗೈಡು ಪದ್ಧತಿ ಹಬ್ಬಿ ಪುಷ್ಟಿಗೊಂಡಿತು. ಮೊದಲನೆಯ ಪ್ರಪಂಚ ಶಿಬಿರ (ವಲ್ರ್ಡ್ ಕ್ಯಾಂಪ್) ಫಾಕ್ಸ್‌ಲೀಸ್ ಎಂಬಲ್ಲಿ ಜರುಗಿತು (1924). ಒಂದು ವಾರದ ಪರ್ಯಂತ ನಡೆದ ಈ ಶಿಬಿರದಲ್ಲಿ ಸಾವಿರ ಮಂದಿ ಗೈಡುಗಳು ಪಾಲ್ಗೊಂಡು ಅನುಭವ ವಿನಿಮಯ ಮಾಡಿಕೊಂಡರು. 1929ರಲ್ಲಿ ಪ್ರಪಂಚ ಸಮ್ಮೇಳನ, ಪ್ರಪಂಚ ಕಾರ್ಯಸಮಿತಿ, ಪ್ರಪಂಚ ಕಾರ್ಯಶಾಲೆ ಮೊದಲಾದ ವಿಭಾಗಗಳು ಹುಟ್ಟಿಕೊಂಡವು. 1930ರಲ್ಲಿ ಲೇಡಿ ಬೇಡನ್ ಪೋವೆಲ್ ಅವರನ್ನು ಪ್ರಪಂಚದ ಗೈಡು ಮುಖ್ಯೆಯಾಗಿ ಸರ್ವಾನುಮತದಿಂದ ಚುನಾಯಿಸಲಾಯಿತು. ಅಮೆರಿಕದ ಸ್ಟರ್ರೊ ಎಂಬ ಮಹಿಳೆ ನೀಡಿದ ದ್ರವ್ಯಸಹಾಯದಿಂದ ಸ್ವಿಟ್ಜರ್ಲೆಂಡಿನಲ್ಲಿ ಗೈಡುಗಳಿಗಾಗಿ ಒಂದು ದಾರುಕುಟಿ (ಷಾಲೇ) ನಿರ್ಮಾಣಗೊಂಡಿತು (1922).
1937ರಲ್ಲಿ ಬೇಡನ್ ಪೋವೆಲ್ ದಂಪತಿಗಳು ಪುನಃ ಭಾರತಕ್ಕೆ ಭೇಟಿಯಿತ್ತರು. ದೇಶದಲ್ಲಿದ್ದ ಮೂರು ಪ್ರಮುಖ ಸ್ಕೌಟು ಸಂಘಗಳನ್ನು ಒಕ್ಕೂಟಗೊಳಿಸುವುದು ಅವರ ಉದ್ದೇಶವಾಗಿತ್ತು. ಆಗ ಅದು ಕಾರ್ಯಗತವಾಗಲಿಲ್ಲ. ಸೇವಾ ಸಮಿತಿ ಮತ್ತು ರಾಷ್ಟ್ರೀಯ ಸ್ಕೌಟು ಸಂಘಗಳು ಒಂದಾಗಿ (1938) ಹಿಂದೂಸ್ತಾನ್ ಸ್ಕೌಟ್ ಸಂಘ ಏರ್ಪಟ್ಟಿತು. ಎರಡನೆಯ ಮಹಾಯುದ್ಧ ಮುಗಿದು ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ಬರುವ ಆಶಾಭಾವ ಮೂಡಿದಾಗ ಭಾರತದ ವೈಸರಾಯ್ ಅವರ ಪತ್ನಿ ಲೇಡಿ ಮೌಂಟ್ಬ್ಯಾಟನಳ ಅಭಿಲಾಷೆಯಂತೆ ಆಗಿನ ವಿದ್ಯಾಸಚಿವ ಆಜ಼ಾದ್ ಒಂದು ಜಂಟಿ ಸಭೆಯನ್ನು 1947ನೆಯ ಮೇ 9ರಂದು ಕರೆದರು. ಪಕ್ವಾಸ ಅವರ ಅಧ್ಯಕ್ಷತೆಯಲ್ಲಿ ಒಂದು ಕ್ರಿಯಾಸಮಿತಿ ರಚಿತವಾಯಿತು. ಅದರ ಸಂಧಾನದ ಫಲವಾಗಿ ಇಂಡಿಯ ಸ್ಕೌಟು, ಹಿಂದೂಸ್ತಾನ್ ಸ್ಕೌಟು ಸಂಘಗಳು 1950ನೆಯ ನವೆಂಬರ್ 7ರಂದು ಒಂದಾದುವು. ಇಂಡಿಯ ಗೈಡು ಸಂಘ ಕೆಲವು ಸಂದೇಹ ಪರಿಹಾರಕ್ಕೋಸ್ಕರ ತನ್ನ ಸೇರ್ಪಡೆಯನ್ನು ಮುಂದಕ್ಕೆ ತಳ್ಳಿತು. ಸ್ಕೌಟು ಮುಖಂಡರಿಂದ ಭರವಸೆ ಸಿಕ್ಕಿದ ಅನಂತರ 1951ರ ಆಗಸ್ಟ್ 5ರಂದು ಅದೂ ಸೇರಿಕೊಂಡಿತಾಗಿ, ಭಾರತ ಸ್ಕೌಟುಗಳು ಮತ್ತು ಗೈಡುಗಳು ಎಂಬ ಒಂದೇ ಸಂಘ ರೂಪುಗೊಂಡಿತು. ಈ ಬಗೆಯ ವ್ಯವಸ್ಥೆ ಭಾರತವಲ್ಲದೆ ಇನ್ನೆರಡು ದೇಶಗಳಲ್ಲಿ ಮಾತ್ರ ಇದೆ. ಆದ್ದರಿಂದ ಪ್ರಪಂಚ ಕಾರ್ಯಶಾಲೆ ತನ್ನೊಂದು ಅಂಗವಾಗಿ ಭಾರತ ಸ್ಕೌಟು ಗೈಡು ಸಂಘವನ್ನು ಸ್ವೀಕರಿಸಲು ಮೊದಲಿಗೆ ತಡಮಾಡಿತಾದರೂ 1953ರಲ್ಲಿ ಅದನ್ನು ಸ್ವೀಕರಿಸಿತು.
ಜಗತ್ತಿನ ನಾಲ್ಕು ಸ್ಥಳಗಳಲ್ಲಿ ಮಾತ್ರ ಗೈಡುಗಳ ದಾರುಕುಟಿ ಅಥವಾ ವಿಹಾರ ಕೇಂದ್ರಗಳಿವೆ: ಸ್ವಿಟ್ಜರ್ಲೆಂಡಿನ ‘ನಮ್ಮ ಕುಟೀರ’, ಲಂಡನಿನ ‘ಒಲೇವ್ ನಿವಾಸ’ ಮೆಕ್ಸಿಕೊದ ‘ನಮ್ಮ ಮರ ಜೋಪಡಿ’, ಪುಣೆ ಬಳಿಯ ‘ಸಂಗಮ್‘,-ಇವೇ ಆ ನಾಲ್ಕು ಕೇಂದ್ರಗಳು. ಸುಮಾರು 12.8 ಲಕ್ಷ (2005) ಗೈಡುಗಳುಳ್ಳ ಭಾರತದ ಸಂಘ ಸಂಖ್ಯಾಬಲದಲ್ಲಿ ಪ್ರಪಂಚದಲ್ಲಿ ಮೂರನೆಯ ಸ್ಥಾನಗಳಿಸಿದೆ.
ಹೆಸರು, ಧ್ಯೇಯ, ಸಂಘ ನೀತಿ, ಶಿಕ್ಷಣ ರೀತಿ : ಗೈಡ್ ಶಬ್ದಕ್ಕೆ ಇದ್ದದ್ದು ಎರಡು ಮುಖ್ಯಾರ್ಥ. ಭಾರತದ ವಾಯವ್ಯ ಗಡಿಯಲ್ಲಿ ಸೈನ್ಯದ ಮುಂಭಾಗದಲ್ಲಿಯೇ ಇರುತ್ತ ಉಪಯುಕ್ತ ಸುದ್ದಿಸಂಗತಿಯನ್ನು ಪತ್ತೆಹಚ್ಚುವ ಮುಂಚೂಣಿ ಯೋಧ, ಅಪಾಯಕ್ಕೂ ಕಷ್ಟಕ್ಕೂ ಜಗ್ಗದ ಧೀರಜೀವಿ ಮತ್ತು ಯುರೋಪಿನ ಆಲ್ಸ್ ಪರ್ವತದ ಕಡಿದು ಎತ್ತರಗಳನ್ನು ಏರಬಂiÀÄಸುವ ಧೈರ್ಯಶಾಲಿಗಳಿಗೆ ದಾರಿ ತೋರುಗ, ಬಹಳ ಶಕ್ತ, ಸಾಹಸಗಾರ_ಎಂಬುವು. ಬಾಲಕಿಯನ್ನು ಗೈಡು ಎನ್ನುವಾಗ ಅದರ ತಾತ್ಪರ್ಯ ಬೇರೆಯಾಗುತ್ತದೆ. ಶೀಲ ಕರುಣೆ ಧರ್ಮಶ್ರದ್ಧೆ ಇತ್ಯಾದಿ ಗುಣಗಳಲ್ಲಿ ಹೆಂಗಸು ಗಂಡಸಿಗೆ ಮೇಲ್ಪಂಕ್ತಿಯೂ ಮಾರ್ಗದರ್ಶಿಯೂ ಆಗುತ್ತಾಳೆಂದು ಕವಿ ಜಾನ್ ರಸ್ಕಿನ್ ಗೈಡ್ ಎಂಬ ಪದಕ್ಕೆ ಅರ್ಥಮಾಡಿದ್ದ. ಹೆಸರಿನಲ್ಲೇ ಆ ಆದರ್ಶ ಅಡಗಿರಬೇಕೆಂದು ಗೈಡ್ ಪದ್ಧತಿಯ ಆಕಾಂಕ್ಷೆ.
ಗಂಡಾಗಲಿ ಹೆಣ್ಣಾಗಲಿ ನಾಡಿನ ಸತ್ಪ್ರಜೆಯಾಗಿ ಬಾಳಬೇಕು ಎಂಬುದು ಲೋಕ ನೀತಿ. ಅದು ಸಿದ್ಧಿಯಾಗುವುದಕ್ಕೆ ತಕ್ಕ ಶಿಕ್ಷಣ ಮನೆಯಲ್ಲೂ ವಿದ್ಯಾಶಾಲೆಯಲ್ಲೂ ಮಕ್ಕಳಿಗೂ ಕಿರಿಯರಿಗೂ ದೊರಕುವುದೇನೋ ನಿಜ. ಆದರೆ ಅಷ್ಟೇ ಸಾಲದು. ಆ ಕೊರೆಯನ್ನು ತುಂಬಿಕೊಡುವ ಪುರಕ ತರಬೇತಿ ಒದಗಿಸುವುದೇ ಗೈಡುಪದ್ಧತಿಯ ಉದ್ದೇಶ. ಸ್ನೇಹವಿಲ್ಲದ ಬದುಕು ಬೆಂಗಾಡಿನ ಬದುಕು. ಬಾಲಕಿಯರಿಗೆ ಉತ್ತಮ ಗೆಳತಿಯರು ಗೈಡುದಳದಲ್ಲಿ ಅನಾಯಾಸವಾಗಿ ಸಿಗುತ್ತಾರೆ. ವಿರಾಮಕಾಲದ ಸದುಪಯೋಗ ಯಾವಾಗಲೂ ಒಂದು ಸಮಸ್ಯೆಯೆ; ಗೈಡು ಪದ್ಧತಿ ಒಳ್ಳೆಯ ಹವ್ಯಾಸವಾದ್ದರಿಂದ ಅದನ್ನು ಸುಲಭವಾಗಿಯೂ ಸಂತಸಪ್ರದವಾಗಿಯೂ ಬಿಡಿಸಿಬಿಡುತ್ತದೆ. ಇದು ಜಗದ್ವ್ಯಾಪಿಯಾಗಿ ವರ್ಧಿಸುತ್ತಿರುವ ಸಂಘವೂ ಹೌದು. ಅದರ ಸದಸ್ಯತ್ವಕ್ಕೆ ದೇಶದೇಶದ ಗೈಡುಗಳ ಸೌಹಾರ್ದವೂ ಸೋದರಿತನವೂ ತಾನಾಗಿ ಲಭಿಸುತ್ತದೆ. ಜನಾಂಗ, ಬಣ್ಣ, ಭಾಷೆ ಮುಂತಾದ ಸಂಕುಚಿತತ್ತ್ವವನ್ನು ಬದಿಗೊತ್ತಿದ ಸಹಜಮಾನವತೆಯ ನಿಜಾನುಭವಕ್ಕೆ ಗೈಡುಪದ್ಧತಿ ಒಂದು ದಾರಿ. ಗುಣಶೀಲ, ಪರೋಪಕಾರ ಎಂಬೆರಡು ಮಾತುಗಳಲ್ಲಿ ಮನುಷ್ಯಜೀವನದ ಸಾರ-ಸತ್ವ ವರ್ಣಿತವಾಗುತ್ತದೆ. ಇವೆರಡನ್ನೂ ತನ್ನ ವಯಸ್ಸಿಗೆ ತಕ್ಕಂತೆ ಗೈಡು ರೂಢಿಸಿಕೊಳ್ಳ ಬೇಕೆಂಬುದೇ ಈ ಪದ್ಧತಿಯ ಸ್ಪಷ್ಟ ಗುರಿ.
ವಿಶಾಲಭಾವನೆ, ಮೈತ್ರಿ, ನೇರತನ, ನಿರಾಡಂಬರ ಸೌಜನ್ಯಾಸಕ್ತಿಗಳ ತಳಹದಿಯ ಮೇಲೆ ಗೈಡುಪದ್ಧತಿಯ ಸಂಘನೀತಿಯನ್ನು ರೂಪಿಸಲಾಗಿದೆ. ಸಮವಸ್ತ್ರ, ಗುಂಪು ಕವಾಯಿತು, ದಳಶಿಸ್ತು, ಇತ್ಯಾದಿ ಗೈಡುಗಳಿಗೆ ಇವೆಯಾದರೂ ಗೈಡುಪದ್ಧತಿ ಯುದ್ಧದ ಕಡೆಗೆ ಎಂದೂ ಮನಸ್ಸನ್ನು ತಿರುಗಗೊಡುವುದಿಲ್ಲ; ಅದರ ಪಡೆಗಳೆಲ್ಲ ಶಾಂತಿಪಡೆ. ಯಾವೊಂದು ಮತಧರ್ಮಕ್ಕೂ ಅದು ಆಳಲ್ಲವಾದರೂ ಯಾವೊಂದು ಮತಧರ್ಮವನ್ನೂ ಅದು ವಿರೋಧಿಸುವುದಿಲ್ಲ, ಎಂದರೆ ಅದು ಧರ್ಮಬಾಹಿರವಲ್ಲ. ಸರ್ವಮತಗಳೂ ಸಕಲಪ್ರವಾದಿಗಳೂ ಸಮಾನವಾಗಿ ಸಾರುವ ಅನ್ಯೋನ್ಯ ಪ್ರೀತಿ, ಅನುಕಂಪೆ, ದಯೆ, ಸತ್ಯನಿಷ್ಠೆ, ಪರಿಶುದ್ಧತೆ, ದೈವಭಕ್ತಿ ಮೊದಲಾದವನ್ನು ಒತ್ತಿ ಹೇಳುತ್ತ ಅನುಷ್ಠಾನಕ್ಕೆ ತರುವಂತೆ ಪ್ರಚೋದಿಸುತ್ತ ವಿಶೇಷ ಬಗೆಯ ಧಾರ್ಮಿಕ ಸೊಬಗನ್ನು ಅದು ತಳೆದಿದೆ. ಸತ್ತ್ವಶಾಸ್ತ್ರ, ಅರ್ಥಶಾಸ್ತ್ರ, ರಾಜಕೀಯತೆ, ಸಮಾಜ ಸುಧಾರಣೆಗಳಿಗೆ ಸೇರಿದ ಯಾವೊಂದು ಪಕ್ಷವೂ ಅದು ತನ್ನದೆಂದು ಹೇಳುವಂತಿಲ್ಲ. ಕಿರಿಯರ ವಿದ್ಯಾಭ್ಯಾಸಕ್ಕೆ ಅದು ಮೀಸಲಾಗಿದೆಯೆಂದು ವಿವರಿಸಬಹುದು; ಅದೊಂದು ನೂತನ ಶೈಕ್ಷಣಿಕ ಪ್ರಯೋಗ. ಚಿಕ್ಕವರಿಗಾಗಿ ಇರುವ ಇತರ ಯಾವ ಸಂಸ್ಥೆಯನ್ನೂ ಗೈಡುಪದ್ಧತಿ ನಿಷೇಧಿಸುವುದಿಲ್ಲ, ಅಣಕಿಸುವುದಿಲ್ಲ; ಎಲ್ಲ ಸಂಸ್ಥೆಗಳ ಬಗ್ಗೆಯೂ ಅದಕ್ಕೆ ಪ್ರಾಮಾಣಿಕ ಸಹಾನುಭೂತಿ. ಹಣದ ವಿಚಾರವಾಗಿ ಹೇಳುವುದಾದರೆ ಸ್ವಾವಲಂಬನಕ್ಕೇ ಪ್ರಾಧಾನ್ಯ.
ಗೈಡುಪದ್ಧತಿಯ ಕಟ್ಟುಪಾಡು ಬಾಲಕಿಯರ ವಯಸ್ಸಿಗೂ ದೇಹದಾಢರ್ಯ್‌ಕ್ಕೂ ಮನಸ್ಸಿನ ಬೆಳೆವಣಿಗೆಗೂ ಅನುರೂಪವಾಗಿ ಹೊಂದಿಕೊಂಡು ಮೂರು ಹಂತಗಳ ಕ್ರಮದಲ್ಲಿದೆ. 7-10 ವಯಸ್ಸಿನ ಮಕ್ಕಳನ್ನು ಬುಲ್ಬುಲ್ ಬಳಗದವರೆಂದೂ (ಇತರ ದೇಶಗಳಲ್ಲಿ ಬ್ರೌನಿ, ಬ್ಲೂ ಬರ್ಡ್, ಕಬ್ ಗೈಡ್ ಇತ್ಯಾದಿ ಅಂಕಿತಗಳಿವೆ) 10-17 ವಯಸ್ಸಿನ ಮಕ್ಕಳನ್ನು ಗೈಡು ದಳವೆಂತಲೂ ಆಮೇಲೆ 21 ವಯಸ್ಸಿನ ವರೆಗೆ ರೇಂಜರ್ ವೃಂದದವರೆಂದೂ ಕರೆಯುವ ವಾಡಿಕೆಯಿದೆ.
ವಿನೋದವರ್ತನೆಯೆಲ್ಲ ಆಯಾ ವಯೋಮಿತಿಗೆ ಸ್ವಾಭಾವಿಕವಾಗುವಂತೆ ನಿಯಮಿತವಾಗಿರುವುದರಿಂದ ಈ ಬಳಗಗಳಲ್ಲಿ ಏನೇನೂ ಕೃತಕತೆಯಿಲ್ಲ, ಬಲಾತ್ಕಾರವಿಲ್ಲ, ಅಹಿತವಿಲ್ಲ. ಮೊದಲು ಬುಲ್ಬುಲ್ಲಾಗಿದ್ದು ಆಮೇಲೆ ಗೈಡ್ ಆಗಿ ಕೊನೆಗೆ ರೇಂಜರ್ ಆಗುವುದು ಸಹಜ ಸರಣಿ. ಆದರೂ ಬುಲ್ಬುಲ್ಲಾಗದೆ ಗೈಡಾಗಬಯಸುವವರಿಗೂ ಗೈಡಾಗದೆ ರೇಂಜರ್ ಆಗಬಂiÀÄಸು ವವರಿಗೂ ಗೈಡುಪದ್ಧತಿಯಲ್ಲಿ ಆಸ್ಪದವುಂಟು. ಅದು ಬಾಲಕಿಯ ಸ್ವಂತ ಇರಾದೆಗೆ ಸೇರಿದ್ದಾದ್ದರಿಂದ ಅಂಥ ಅವಕಾಶ ಇರುವುದು ಕ್ಷೇಮ.
ಗೈಡುಪದ್ಧತಿಯಲ್ಲಿ ಅನುಸರಿಸುವ ಶಿಕ್ಷಣರೀತಿಯೂ ವಿಶಿಷ್ಟಬಗೆಯದು. ಸ್ವಯಂ ಶಿಕ್ಷಣ ಮತ್ತು ಕ್ರೀಡಾಮನೋಭಾವ-ಈ ಎರಡೂ ಅದರ ಚಾಲಕ ತತ್ತ್ವ. ಗೈಡು ಪದ್ಧತಿ ಒಂದು ಗುಂಪು ಆಟದಂತೆ; ಅದರ ಎಲ್ಲ ಕಾರ್ಯಕ್ರಮವೂ ನಲವಿನಿಂದ ಕೂಡಿ ಸೊಗಸಾಗಿರುತ್ತದೆ. ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತ ಗೈಡುಗಳು ತಾವು ತಾವೇ ಪಾಠ ಕಲಿಯುತ್ತಾರೆ, ತಮ್ಮನ್ನು ತಾವೇ ತಿದ್ದಿಕೊಳ್ಳುತ್ತಾರೆ. ಇಂಥ ಆಧುನಿಕ ವಿಧಾನದಿಂದ ಅವರಿಗೆ ಸಿದ್ಧಿಸುವ ವಿದ್ಯಾಭ್ಯಾಸದಲ್ಲಿ ಆರೋಗ್ಯ-ಶಾರೀರಿಕ ಬೆಳೆವಣಿಗೆ, ದೃಢತೆ, ತಡೆದುಕೊಳ್ಳುವ ಶಕ್ತಿ, ನೈರ್ಮಲ್ಯ, ನಿರೋಗ; ಹಸ್ತಕೌಶಲ-ಕೈಗೆಲಸಗಳ ಮೂಲಕ, ಸಮಯಕ್ಕೆ ಸಲ್ಲುವ ಸಾಮಾನುಗಳ ತಯಾರಿಕೆಯ ಮೂಲಕ ಕುದುರುವ ನೈಪುಣ್ಯ; ಒಳ್ಳೆಯ ನಡೆನುಡಿ- ಕರ್ತವ್ಯಪರತೆ, ಸಂಯಮ, ಸ್ವಾವಲಂಬನ, ಗುರಿಸಾಧನೆ, ಹೆಚ್ಚು ವಿನಯ, ಔದಾರ್ಯ ಮೊದಲಾದ ಸದ್ಗುಣಗಳ ಪೋಷಣೆಯಿಂದ ಉಂಟಾಗುವ ಸೌಶೀಲ್ಯ; ಸೇವೆ-ಗೈಡು ತಾನೇ ದಕ್ಷಳಾಗಿರುವುದರಿಂದ ಅದಕ್ಷರಿಗೆ ಸಹಾಯಮಾಡುವ ಆಕಾಂಕ್ಷೆ-ಈ ನಾಲ್ಕೂ ಅವಳಲ್ಲಿ ತಾನಾಗಿ ವಿಕಾಸಗೊಳ್ಳುತ್ತವೆ.
ಗೈಡು ಪದ್ಧತಿಯ ವಿಭಾಗಗಳು
ಸಂಪಾದಿಸಿಬುಲ್ಬುಲ್ ವಿಭಾಗ
ಸಂಪಾದಿಸಿ12-24ರ ಸಂಖ್ಯೆಯ ವರೆಗೆ ಬುಲ್ಬುಲ್ಗಳು ಕೂಡಿದರೆ ಅದು ಒಂದು ಬಳಗ (ಫ್ಲಾಕ್) ಆಗುತ್ತದೆ. ಬಳಗಕ್ಕೆ 19 ವರ್ಷಕ್ಕೆ ಕಡಿಮೆಯಿಲ್ಲದ ಒಬ್ಬಳು ಮುಂದಾಳು (ಫ್ಲಾಕ್ ಲೀಡರ್) ಮತ್ತು 17 ವರ್ಷಕ್ಕೆ ಕಡಿಮೆಯಿಲ್ಲದ ಒಬ್ಬಳು ಸಹಾಯಕಿ (ಅಸಿಸ್ಟೆಂಟ್ ಫ್ಲಾಕ್ ಲೀಡರ್) ಇರುತ್ತಾರೆ. ಬುಲ್ಬುಲ್ಗಳು ಆರು ಆರಾಗಿ ವಿಂಗಡಗೊಂಡು ಪೆಟ್ರೋಲುಗಳಾಗುತ್ತವೆ; ಹಸಿರು ನೀಲಿ ಕೆಂಪು ಇತ್ಯಾದಿ ಬಣ್ಣ ಪೆಟ್ರೋಲಿನ ನಾಮಧೇಯ. ಪ್ರತಿ ಪೆಟ್ರೋಲಿನಲ್ಲೂ ಸಿಕ್ಸರ್ ಎಂಬ ಮೊದಲಗಿತ್ತಿ, ಸೆಕೆಂಡ್ ಎಂಬ ಎರಡನೆಯವಳು ಇದ್ದು ಅವರು ತಮ್ಮ ಪೆಟ್ರೋಲಿಗೆ ಜವಾಬ್ದಾರರಾಗಿರುತ್ತಾರೆ. ಮುಂದಾಳು, ಸಹಾಯಕಿ, ಎಲ್ಲ ಬುಲ್ಬುಲ್ಗಳೂ ಸೇರಿದ ಬಳಗದ ಸಭೆ ಏರ್ಪಡುತ್ತದೆ.
ಬಳಗಕ್ಕೆ ಸೇರಿದ, ಚಿಕ್ಕ ಹುಡುಗಿ ಈ ಪಟ್ಟಿಯಲ್ಲಿ ನಮೂದಿಸಿರುವಷ್ಟನ್ನೂ ಕಲಿತು ಕೋಮಲವಾದ (ಟೆಂಡರ್ಫುಟ್) ದೀಕ್ಷೆಗೆ ಅನುವಾಗುತ್ತಾಳೆ. ಬುಲ್ಬುಲ್ ಭಾಷೆ, ನಿಯಮ, ಆದರ್ಶ ವಚನ, ವಂದನೆ; ಎರಡು ಗೀತಕೃತಿಗಳು; ದಿನಚರಿ ಉಪಕಾರ; ರಾಷ್ಟ್ರಗೀತೆ; ನಾಲ್ಕು ಬಳಗಗೋಷ್ಠಿಯಲ್ಲಿ ಹಾಜರಾತಿ.
ಭಾಷೆ
ಸಂಪಾದಿಸಿಇದು ನನ್ನ ಪ್ರತಿಜ್ಞೆ; ನನ್ನ ಕೈಲಾದಮಟ್ಟಿಗೂ 1 ದೇವರಲ್ಲೂ ಸ್ವದೇಶದಲ್ಲೂ ಶೃದ್ಧಾಭಕ್ತಿ ಇಟ್ಟುಕೊಂಡು, ಬುಲ್ಬುಲ್ ನಿಯಮದಂತೆ ನಡೆದುಕೊಳ್ಳುತ್ತೇನೆ; ಮತ್ತು 2 ಪ್ರತಿದಿನವೂ ಒಂದಾದರೂ ಉಪಕಾರಮಾಡುತ್ತೇನೆ (ಜೈನ, ಬೌದ್ಧ ಇತ್ಯಾದಿ ಮತಗಳ ಬಾಲಕಿಯರು ದೇವರು ಎಂಬ ಪದದ ಬದಲು ಧರ್ಮ ಎಂಬ ಪದವನ್ನು ಬಳಸಬಹುದು). ನಿಯಮ :
- ಬುಲ್ಬುಲ್ ಹಿರಿಯರು ಹೇಳಿದ್ದನ್ನು ಕೇಳುತ್ತಾಳೆ.
- ಆದರ್ಶವಚನ; ಕೈಲಾದಷ್ಟನ್ನೂ ಮಾಡು.
ವಂದನೆ
ಸಂಪಾದಿಸಿಬಲಗೈಯನ್ನು ಮಡಿಸಿ ಮೇಲಕ್ಕೆತ್ತಿ ಸೂಚನೆಬೆರಳು ನಡುಬೆರಳು ಎರಡನ್ನೂ ಅಗಲ ಬಿಡಿಸಿಕೊಂಡು ಬಲಗಡೆ ತಲೆಯನ್ನು ಮುಟ್ಟಿಸುವುದು. ಕೋಮಲಪಾದದ ಮುಂದಣ ಮಜಲಿಗೆ ಒಂಬತ್ತು ಲಘುಪರೀಕ್ಷೆಗಳಲ್ಲಿ (ಟೆಸ್ಟ್‌ಸ್) ಹುಡುಗಿ ಉತ್ತೀರ್ಣಳಾಗಬೇಕು; ಆಗ ಅವಳಿಗೆ ಮೊದಲನೆಯ ಚುಕ್ಕಿ (ಫಸ್ಟ್ ಸ್ಟಾರ್) ದೊರೆಯುತ್ತದೆ. ರಾಷ್ಟ್ರಬಾವುಟ; ಗೈಡು ಬಾವುಟಗಳ ಪರಿಚಯ; ಸಮಗಂಟನ್ನೂ ಮೂಲೆಗಂಟನ್ನೂ ಹಾಕುವುದು; ಯಾವುದಾದರೂ ಒಂದು ನಿಸರ್ಗ ವಸ್ತುವಿನ ವರ್ಣನೆ; ಗಡಿಯಾರ ನೋಡಿ ಘಂಟೆ ಹೇಳುವುದು; ಎರಡು ಬಟ್ಟೆಗುಂಡಿ ಹೊಲಿಯುವುದು; ಏನಾದರೂ ಒಂದು ಪದಾರ್ಥದ ತಯಾರಿಕೆ; ಉಗುರು ಕತ್ತರಿಸಿಕೊಳ್ಳುವುದು, ಮೂಗಿನಲ್ಲೇ ಉಸಿರಾಡುವುದು ಏತಕ್ಕೆ ಎಂಬುದನ್ನು ತಿಳಿಯುವುದು; ಚೆಂಡನ್ನು ಎಸೆದು ತಿರುಗಿ ತನಗೆ ಬಂದ ಚೆಂಡನ್ನು ಬುತ್ತಿಹಿಡಿಯುವುದು; ಇಬ್ಬರಿಗೆ ಊಟ ಬಡಿಸುವುದು.
ಅನಂತರ ಎರಡನೆಯ ಚುಕ್ಕಿ (ಸೆಕೆಂಡ್ ಸ್ಟಾರ್); ಇದನ್ನು ಗಳಿಸುವುದಕ್ಕೆ 16 ಲಘು ಪರೀಕ್ಷೆಗಳನ್ನು ದಾಟಬೇಕು. ಜಗತ್ತಿನ ಗೈಡು ಬಾವುಟದ ಪರಿಚಯ; ಬಾವುಟಗಳ ಮೂಲಕ ವರ್ತಮಾನ ಅಥವಾ ವೀಕ್ಷಕಿ ಬಿಲ್ಲೆಗೊ ತೋಟಗಾತಿ ಬಿಲ್ಲೆಗೊ ಅಗತ್ಯವಾದ ಪರಿಜ್ಞಾನ; ದಿಕ್ಸೂಚಿಯ ತಿಳಿವಳಿಕೆ; ಬೀಜ ಅಥವಾ ರೆಂಬೆ ಹುಟ್ಟಿ ಹಾಕಿ ಗಿಡ ಬೆಳೆಸುವುದು; ಕೊಟ್ಟಿಗೆ ಗಂಟನ್ನೂ ಕುಣಿಕೆ ಗಂಟನ್ನೂ ಹಾಕುವುದು; ಗೈಡು ಪದ್ಧತಿ ಬೆಳೆದು ಬಂದ ವಿಷಯದ ಜ್ಞಾನ; ಒಲೆ ಹೊತ್ತಿಸುವುದು; ಟೀ ಅಥವಾ ಕಾಫಿ ತಯಾರಿಕೆ, ಅಥವಾ ಮೊಸರು ಕಡೆಯುವುದು; ಲಾಂದ್ರ ಹೊತ್ತಿಸುವಿಕೆ; ಸಣ್ಣದೊಂದು ಉಡುಪನ್ನು ಹೊಲಿಯುವುದು; ಅಥವಾ ಹೆಣೆಯುವುದು; ಶಿರದ ಮೇಲೆ ಪುಸ್ತಕಗಳನ್ನೊ ಇತರ ವಸ್ತುವನ್ನೊ ಇರಿಸಿಕೊಂಡು ಅದು ಬೀಳದಂತೆ ನಡೆಯುವುದು; 30ಬಾರಿ ಹಗ್ಗ ಕುಪ್ಪಳಿಕೆ ಮಾಡುವುದು; ಹತ್ತಿರ ಆಸ್ಪತ್ರೆ ಅಥವಾ ವೈದ್ಯ, ಅಂಚೆಕಚೇರಿ, ಪೋಲಿಸು ಠಾಣೆಗಳು ಎಲ್ಲಿವೆಯೆಂಬುದರ ಮಾಹಿತಿ; ಹನ್ನೆರಡು ಪದಗಳ ವಾಕ್ಯವನ್ನು ಸುದ್ದಿಯಾಗಿ ಕೊಂಡೊಯ್ಯುವುದು; ಉಟ್ಟ ಬಟ್ಟೆಗೆ ಬೆಂಕಿ ತಗಲಿದರೆ ಏನು ಮಾಡಬೇಕೆಂಬುದರ ಮಾಹಿತಿ; ಗಾಯಗೊಂಡ ಬೆರಳಿಗೊ ಮೊಣಕಾಲಿಗೊ ಬ್ಯಾಂಡೇಜು ಕಟ್ಟುವುದು. ಅಲ್ಲದೆ ಬುಲ್ಬುಲ್ ಬಳಗಕ್ಕೆ ಸೇರಿ 9 ತಿಂಗಳು ಕಳೆದಿರತಕ್ಕದ್ದು.
ಬುಲ್ಬುಲ್ ಆಮೇಲೆ ಬಲ್ಲಿಕೆ ಬಿಲ್ಲೆಗಳಲ್ಲಿ (ಪೊಫಿಶಿಯನ್ಸಿ ಬ್ಯಾಡ್ಜ್) ಆದಷ್ಟನ್ನು ಪಡೆಯಲು ಪ್ರಯತ್ನಿಸುತ್ತಾಳೆ. ಅಂಥವು 15 ಇವೆ. ಅವುಗಳಲ್ಲಿ ಮನೆಯ ಒಪ್ಪ ಓರಣ, ವೀಕ್ಷಕಿ, ಈಜುಗಾತಿ, ವ್ಯಾಯಾಮ ಪಟು, ಆಟ ಪಟು ಮುಂತಾದ ಕೆಲವನ್ನು ಆರ್ಜಿಸಿಕೊಂಡ ಬಾಲಕಿಗೆ ಹಾರುವ ಬುಲ್ಬುಲ್ (ಫ್ಲಯಿಂಗ್ ಬುಲ್ಬುಲ್) ಎಂಬ ಗೌರವಪದಕ ದೊರೆಯುತ್ತದೆ.
ಗೈಡು ವಿಭಾಗ
ಸಂಪಾದಿಸಿ12 ರಿಂದ 32ರ ಸಂಖ್ಯೆಯ ವರೆಗೆ ಗೈಡುಗಳಿದ್ದರೆ ಅದು ದಳ (ಗೈಡು ಕಂಪನಿ) ಎನಿಸುತ್ತದೆ. ದಳದಲ್ಲಿ ಗೈಡು ಕ್ಯಾಪ್ಟನ್ ಎಂಬ ಮುಂದಾಳೂ ಅವಳ ಸಹಾಯಕಿಯೂ ಇರುವರು. ಪೆಯಟ್ರೋಲಿಗೆ ಎಂಟು ಗೈಡುಗಳು; ಮೊದಲಗಿತ್ತಿಯೂ ಎರಡನೆಯವಳೂ ಪೆಟ್ರೋಲಿಗೆ ಹೊಣೆಗಾರರು. ದಳದ ಬಲು ಮುಖ್ಯವಾದ ಅಂಗ ಅದರ ಶೀಲಮಂಡಲಿ (ಕೋರ್ಟ್ ಆಫ್ ಆನರ್). ಅದರಲ್ಲಿ ಮುಂದಾಳು, ಸಹಾಯಕಿ, ಮೊದಲಗಿತ್ತಿ, ಎಲ್ಲರೂ ಸದಸ್ಯರಾಗಿರುತ್ತಾರೆ; ದಳದ ಕಾರ್ಯಾವಳಿ, ಯೋಗಕ್ಷೇಮ, ಒಳ್ಳೆಯ ಹೆಸರು ಮುಂತಾದ ವಿಚಾರವಷ್ಟೂ ಶೀಲಮಂಡಲಿಯ ಹೊಣೆಗಾರಿಕೆ ಯಾಗಿರುತ್ತದೆ.
ದಳಕ್ಕೆ ಪ್ರವೇಶ ಪಡೆದ ಬಾಲಕಿಗೆ ಉತ್ಕಾಂಕ್ಷಿ (ಆಸ್ಪಿರಂಟ್) ಎಂದು ಹೆಸರು. ಬಾಲಕಿ ಕೋಮಲಪಾದ ದೀಕ್ಷೆಗೆ ಅನುವಾಗಬೇಕಾದರೆ ಗೈಡು ಭಾಷೆ, ಗೈಡು ನಿಯಮ, ಆದರ್ಶ ವಚನ, ಗೈಡು ವಂದನೆ ಉಪಕಾರ, ಜಾಡು ಹಿಡಿಯುವ ಕುರುಹುಗಳು, ಸೀಟಿಯ ಸಂಜ್ಞೆ, ಕೈಸಂಜ್ಞೆಗಳು, ಹುರಿ ಸುತ್ತುವಿಕೆ ಮತ್ತು ಏಳರಲ್ಲಿ ನಾಲ್ಕು ಗಂಟುಗಳು, ಸಮಗಂಟು, ಮೂಲೆಗಂಟು, ಕೊಟ್ಟಿಗೆ ಗಂಟು, ಕುಣಿಕೆ ಗಂಟು, ಬೆಸ್ತ ಗಂಟು, ಕುರಿಗಂಟು, ಎರಡು ಅರೆಗಂಟು ಒಂದು ಸುತ್ತು, ರಾಷ್ಟ್ರಬಾವುಟ, ಭಾರತದ ಸ್ಕೌಟು-ಗೈಡು ಬಾವುಟ, ಜಗತ್ತಿನ ಗೈಡು ಬಾವುಟಗಳ ಪರಿಚಯ, ರಾಷ್ಟ್ರಗೀತೆ, ದಳಗೋಷ್ಠಿಗಳಲ್ಲಿ ಒಂದು ತಿಂಗಳು ಹಾಜರಾತಿ-ಇವೆಲ್ಲ ಅಗತ್ಯ. ಇವುಗಳ ವಿವರ ಹೀಗಿದೆ.
ಭಾಷೆ
ಸಂಪಾದಿಸಿಇದರ ವಿಚಾರ ಹಿಂದೆ ಬಂದಿದೆ.
ನಿಯಮ
ಸಂಪಾದಿಸಿ- ಗೈಡು ನಂಬಿಕೆಗೆ ಯೋಗ್ಯ. (ಮನಸ್ಸಿನಲ್ಲಿರುವುದನ್ನು ಆಡುತ್ತಾಳೆ, ಆಡಿದಂತೆ ಮಾಡುತ್ತಾಳೆ.)
- ಗೈಡು ಶ್ರದ್ಧಾಭಕ್ತಿಯುಳ್ಳವಳು. (ದೇವರು ದೇಶ ಕುಟುಂಬ ಗೆಳತಿಯರು ತನಗಿಂತ ಮೇಲಣವರು ತನ್ನ ಕೈಕೆಳಗಿನವರು-ಎಲ್ಲರಿಗೂ ತನ್ನ ಹೊಣೆಯನ್ನು ಪಾಲಿಸುತ್ತಾಳೆ).
- ಗೈಡು ತನ್ನ ಕರ್ತವ್ಯವನ್ನು ಬಲ್ಲಳು (ದೇವರಲ್ಲಿ ಭಕ್ತಿ, ದೇಶಕ್ಕೆ ಸೇವೆ, ಇತರರಿಗೆ ನೆರವಾಗುವುದು-ಇವು ತನ್ನ ಕಾರ್ಯಶೀಲವೆಂದು ಅವಳಿಗೆ ಗೊತ್ತು).
- ಗೈಡು ಸರ್ವರಿಗೂ ಸ್ನೇಹಿತೆ; ಇತರ ಎಲ್ಲ ಗೈಡುಗಳಿಗೂ ಸೋದರಿ.
- ಗೈಡು ವಿನಯಶೀಲೆ. (ಮುಖ್ಯವಾಗಿ ವೃದ್ಧರು ದುರ್ಬಲರು ಎಂದರೆ ಅವಳ ಆದರಣೆ ಯುಕ್ತವಾಗಿಯೇ ಹೆಚ್ಚು).
- ಗೈಡು ಪ್ರಾಣಿಗಳನ್ನು ಕುರಿತು ದಯಾನ್ವಿತೆ.
- ಗೈಡು ಶಿಸ್ತಿನಾಕೆ, ಆಜ್ಞೆಗೆ ವಿಧೇಯಳು.
- ಗೈಡು ಧೈರ್ಯಶಾಲಿ, ಕಷ್ಟಬಂದಾಗ ಆಕೆ ಧೈರ್ಯಗೆಡಳು.
- ಗೈಡು ಮಿತವ್ಯಯಿ (ಕಾಲ, ಹಣ, ಸೌಕರ್ಯ, ಸ್ವಶಕ್ತಿ ಮುಂತಾದುವನ್ನು ಪೋಲುಮಾಡದೆ ಸಮಂಜಸವಾಗಿ ಬಳಸಿಕೊಳ್ಳುತ್ತಾಳೆ).
- ಗೈಡು ಕಾಯೇನವಾಚಾ ಮನಸಾ ಪರಿಶುದ್ಧೆ.
ಆದರ್ಶವಚನ
ಸಂಪಾದಿಸಿಸಿದ್ಧಳಾಗಿರು (ಬೀ ಪ್ರಿಪೇರ್ಡ್).
ಗೈಡು ವಂದನೆ
ಸಂಪಾದಿಸಿಬಲಗೈಯಿನ ತರ್ಜಿನಿ ಮಧ್ಯಮ ಅನಾಮಿಕ ಬೆರಳುಗಳನ್ನು ಒಟ್ಟುಗೂಡಿಸಿ ಮಿಕ್ಕೆರಡರ ವರ್ತುಳದಿಂದ ಬಂಧಿಸಿ ಕೈಯೆತ್ತಿ ತಲೆಯ ಬಲಗಡೆ ಮುಟ್ಟಬೇಕು.
ಕೋಮಲಪಾದ ಮಜಲನ್ನು ದಾಟಿದ ಬಾಲಕಿ ಗೈಡು ದೀಕ್ಷೆ ಪಡೆದು, ಎರಡನೆಯ ದರ್ಜೆ ಲಘುಪರೀಕ್ಷೆಗಳಿಗೆ ತರಬೇತಿ ಹೊಂದುತ್ತಾಳೆ. ಆ ಪರೀಕ್ಷೆಗಳು ನಾಲ್ಕು ವಿಧದವು:
(ಅ) ಬುದ್ಧಿಶಕ್ತಿ : ಗೈಡು ಭಾಷೆ ಮತ್ತು ನಿಯಮಗಳ ಹೆಚ್ಚು ತಿಳಿವಳಿಕೆ, ಬಾಳಿನಲ್ಲಿ ಅವುಗಳ ಅನ್ವಯ; ಮಾರ್ಸ್ ಅಥವಾ ಸೆಮಾಫೋರ್ ಬಾವುಟ ಸಂಕೇತದ ಮೂಲಕ ವರ್ತಮಾನ ಕಳಿಸುವುದು, ಸ್ವೀಕರಿಸುವುದು; ಅಥವಾ ಎರಡರಿಂದ ಐದರ ಒಳಗಿನ ಮಗುವನ್ನು ನೋಡಿಕೊಳ್ಳುವುದು ಹೇಗೆ ಎಂಬುದರ ಅರಿವು; ಅಥವಾ ಮೂರು ಬಗೆ ಹೂ, ಮೂರು ಬಗೆ ತರಕಾರಿ ಬೆಳೆಯುವುದು; ಕಾಡಿಗೆ ಸಂಬಂಧಿಸಿದ ಕುರುಹುಗಳಿಂದಲೊ ಚೂರು ಕಾಗದ ಕಲ್ಲುಗಳು ಮುಂತಾದವುಗಳಿಂದಲೊ ಜಾಡು ಹಾಕುವುದು, ಹಾಕಿದ ಜಾಡನ್ನು ಗುರುತಿಸುವುದು; ಆರು ಸಾಮಾನ್ಯ ಮರಗಳ ಹೆಸರು, ಲಕ್ಷಣ, ಉಪಯೋಗಗಳ ಅರಿವು.
(ಆ) ಕರಕೌಶಲ : ಇವುಗಳಲ್ಲಿ ಏಳು ಗಂಟುಗಳ ಪರಿಚಯ; ಸಮ, ಮೂಲೆ, ಕೊಟ್ಟಿಗೆ, ಕುಣಿಕೆ, ಬೆಸ್ತ, ಕುರಿ, ಸುತ್ತು ಮತ್ತು ಎರಡು ಅರೆಗಂಟು, ನಾಟಾ ಅರೆ ಗಂಟು, ಚೌಕ ಬಿಗಿತ; ಎರಡಕ್ಕೆ ಹೆಚ್ಚಾಗಿ ಬೆಂಕಿಕಡ್ಡಿ ಉಪಯೋಗಿಸದೆ ಒಲೆ ಹೊತ್ತಿಸಿ, ಮನೆಯೊಳಗಲ್ಲದೆ ಹೊರಗಡೆ ಎರಡು ಸಾಮಾನ್ಯ ಊಟತಿಂಡಿ ಮಾಡುವುದು, ಉರಿ ನಂದಿಸಿ, ಅಡುಗೆ ಜಾಗ ಅಡುಗೆ ಪಾತ್ರೆಗಳನ್ನು ಚೊಕ್ಕಟಗೊಳಿಸುವುದು; ಬೆಂಕಿ ತಾಕದಂತೆಯೂ ಹರಡದಂತೆಯೂ ಇರಲು ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕ್ರಮ; ಉಡುಪೊಂದಕ್ಕೆ ಬಣ್ಣ ಹಾಕುವುದು, ಬಣ್ಣಹಾಕಿದ ಉಡುಪಿನ ಜೋಪಾನ.
(ಇ) ಆರೋಗ್ಯ : ನಡೆಯುವಾಗ ಕುಳ್ಳಿರುವಾಗ ನಿಂತಿರುವಾಗ ಯಾವ ಬಗೆಯ ದೇಹ ಭಂಗಿ ಸರಿ ಎಂಬುದರ ತಿಳಿವಳಿಕೆ ಮತ್ತು ಅಭ್ಯಾಸ (ಇದನ್ನು ದಳದ ಶೀಲಮಂಡಲಿ ಮೆಚ್ಚಬೇಕು); ಸ್ಕೌಟು ಹೆಜ್ಜೆಯಲ್ಲಿ 12 ನಿಮಿಷಕ್ಕೆ 1.5 ಕಿಮೀ ಹೋಗತಕ್ಕದ್ದು; ಅರ್ಧ ಸೇರಿನಷ್ಟು ಕಾಳನ್ನು ಬೀಸುವಕಲ್ಲಿನಲ್ಲಿ ಹಿಟ್ಟು ಮಾಡುವುದು, ಅಥವಾ 100 ಹಗ್ಗ ಕುಪ್ಪಳಿಕೆ. ನಿರ್ಬಲರಾದ ಗೈಡುಗಳಿಗೆ ಸ್ಕೌಟು ಹೆಜ್ಜೆ ಮತ್ತು ಕುಪ್ಪಳಿಕೆಯಿಂದ ರಿಯಾಯಿತಿ ಉಂಟು; ಉಡುಪು ಊಟತಿಂಡಿ ಗಾಳಿ ಬೆಳಕು ಅಂಗ ವ್ಯಾಯಾಮಗಳ ವಿಚಾರದಲ್ಲಿ ಯುಕ್ತಕ್ರಮಗಳ ಪರಿಜ್ಞಾನ; ಸಾಧಾರಣ ಡ್ರಿಲ್ ಸಂಜ್ಞೆಗಳ ತಿಳಿವಳಿಕೆ.
(ಈ) ಸೇವೆ : ಪ್ರಥಮ ಚಿಕಿತ್ಸೆಗೆ ಸಂಬಂಧಪಟ್ಟಂತೆ
- ಚೂರಿಗಾಯ, ಸುಟ್ಟಗಾಯ, ಉಸಿರುಕಟ್ಟುವಿಕೆ, ಬವಳಿ, ರಕ್ತಸೋರಿಕೆಗಳಿಗೆ ಚಿಕಿತ್ಸೆ ಮತ್ತು ಕಟ್ಟು ಬಿಗಿತ,
- ದೊಡ್ಡ ಕೈತೂಗು,
- ಉಳುಕಿದ ಹಿಮ್ಮಡಿಗೆ ಕಟ್ಟು,
- ಕಣ್ಣುರಿ, ಕಜ್ಜಿ, ಪಾದರಕ್ಷೆಯ ಕಚ್ಚುಗಳ ಚಿಕಿತ್ಸೆ-ಇವನ್ನು ಅಭ್ಯಾಸ ಮಾಡುವುದು; ದಳಕ್ಕೆ ಬೇಕಾಗುವ ಸಂಜ್ಞಾ ಬಾವುಟವನ್ನೋ ಹೆಗಲು ಸಂಚಿಯನ್ನೋ ಮತ್ತಾವ ಪದಾರ್ಥವನ್ನೋ ತಯಾರಿಸುವುದು; ಭಾರತಕ್ಕೆ ಸೇವೆ ಸಲ್ಲಿಸಿದ ನಾಲ್ಕು ಸುಪ್ರಸಿದ್ಧ ಭಾರತೀಯರ ಜೀವನಕಥೆಯ ಪರಿಚಯ.
ಎರಡನೆಯ ದರ್ಜೆಯನ್ನು ಮುಟ್ಟಿದ ಗೈಡಿಗೆ ಎರಡು ರೀತಿಯ ಮುಂದುವರಿಕೆ ಸಾಧ್ಯ : ಜಾಣಬಿಲ್ಲೆಗಳ ಗಳಿಕೆ ಮತ್ತು ಮೊದಲನೆಯ ದರ್ಜೆ. ಜಾಣ ಬಿಲ್ಲೆಗಳು: ಕಲಾವಿದೆ, ಪುಸ್ತಕಪ್ರೇಮಿ, ದುಭಾಷಿ, ಪ್ರಕೃತಿಪ್ರೇಮಿ, ತೋಟಗಾತಿ, ದರ್ಜಿ, ಜೇನುಸಾಕಣೆ, ನರ್ತಕಿ, ಈಜುಗಾತಿ. ಆಂಬ್ಯುಲೆನ್ಸ್, ರೋಗದಾದಿ, ಮುಂತಾದ 67 ಬಿಲ್ಲೆಗಳಿವೆ; ತನ್ನ ಕೈಲಾದಷ್ಟಕ್ಕೆ ಗೈಡು ಅರ್ಹತೆ ಹೊಂದತಕ್ಕದ್ದು.
ಮೊದಲನೆಯ ದರ್ಜೆ :
- ಪೀಠಿಕೆ : ಎರಡನೆಯ ದರ್ಜೆ ಗೈಡಾಗಿ ಸ್ವಲ್ಪ ಕಾಲ ಕಳೆದಿರಬೇಕು; ದಳದ ಇತರ ಗೈಡುಗಳಿಗೆ ಅವಳನ್ನು ಕುರಿತು ಪ್ರೀತಿಯೂ ಗೌರವವೂ ಉಂಟಾಗುವಂತೆ ಅವಳು ನಡೆದುಕೊಳ್ಳತಕ್ಕದ್ದು; ಗೈಡು ಪದ್ಧತಿಯ ಮೂಲ ಉದ್ದೇಶ ಇತಿಹಾಸಗಳ ಸಾಕಷ್ಟು ಅರಿವು, ಭಾರತದ ಗೈಡುಪದ್ಧತಿಯ ಚರಿತ್ರೆಯ ಮುಖ್ಯಾಂಶಗಳ ಅರಿವು.
- ಬುದ್ಧಿಶಕ್ತಿ; ಈ ಐದರಲ್ಲಿ ಮೂರರ ಅಂದಾಜು ಮಾಡುವ ಜಾಣತನ; ಎತ್ತರ, ತೂಕ, ದೂರ, ಸಂಖ್ಯೆ, ಕಾಲ (ಅಂದಾಜಿಗೂ ವಾಸ್ತವತೆಗೂ ಅಂತರ ಶೇಕಡ 25ನ್ನು ಮೀರಿರಬಾರದು); ದಿಕ್ಸೂಚಿಯನ್ನು ಉಪಯೋಗಿಸುವ ವಿಧಾನವನ್ನು ಅರಿತುಕೊಂಡು, 16 ದಿಕ್ಕುಗಳನ್ನು ಇಂಗ್ಲಿಷಿನಲ್ಲೂ ತಾಯ್ನುಡಿಯಲ್ಲೂ ಹೇಳುವುದು, ಹಾಗೂ ನಕ್ಷತ್ರ ಸೂರ್ಯ ಚಂದ್ರರ ಮೂಲಕ ದಿಕ್ಕುಗಳನ್ನು ಗುರುತಿಸುವುದು; ದಳ ಗೋಷ್ಠಿಗೆ ಕ್ಲುಪ್ತ ಸಮಯದಲ್ಲಿ ಹಾಜರಿ, ಆದಾಯ ವೆಚ್ಚದ ಲೆಕ್ಕ ಇಡುವ ತಿಳಿವಳಿಕೆ; ಒಬ್ಬ ಹೊಸ ಉಮೇದುವಾರಳನ್ನು ಕೋಮಲಪಾದ ಬ್ಯಾಡ್ಜಿಗೆ ಅರ್ಹಳಾಗುವಂತೆ ಕಲಿಕೆ ನೀಡುವುದು. ಮನಿ ಆರ್ಡರ್, ರಿಜಿಸ್ಟ್ರೇಷನ್, ಇನ್ಷೂರೆನ್ಸ್ ಪಾರ್ಸೆಲು, ಟೆಲಿಗ್ರಾಮ್ ಕಳುಹಿಸುವ ಸ್ವೀಕರಿಸುವ ಕ್ರಮಗಳ ಪರಿಚಯ, ರಸೀತಿ ಬರೆದುಕೊಡುವುದರ ಪರಿಚಯ; ಸುಳಿವು ಕೊಡದೆ ಬೆನ್ನಟ್ಟುವ ಉಪಾಯ ಮರೆ ಕಂಡು ಕೊಳ್ಳುವ ಜಾಣ್ಮೆ.
- ಕರಕೌಶಲ: ಅಡುಗೆ, ಸೂಜಿಕೆಲಸ, ಮಗುವಿನ ದಾದಿ-ಈ ಮೂರು ಜಾಣಬಿಲ್ಲೆಗಳ ಗಳಿಕೆ; ಸೀಮೆಸುಣ್ಣ, ಎಲೆ, ಹೂಗಳಿಂದ ಕೊಠಡಿಯನ್ನೋ ಅಂಗಳವನ್ನೋ ಸಿಂಗರಿಸುವುದು.
- ಆರೋಗ್ಯ : ಅರ್ಧ ಗಂಟೆಯಲ್ಲಿ 3 ಕಿಮೀ ದೂರ ನಡೆಯುವುದು; ಕೋಮಲಪಾದ ಗೈಡೊಬ್ಬಳಿಗೆ ಆರೋಗ್ಯಸೂತ್ರಗಳನ್ನು ಸ್ಫುಟವಾಗಿ ಮನಮುಟ್ಟುವಂತೆ ಬೋಧಿಸಬಲ್ಲ ಚಾತುರ್ಯ; 45 ಮೀ.ನಷ್ಟು ದೂರ ಈಜುವುದು ಅಥವಾ ವ್ಯಾಯಾಮಪಟು ಅಥವಾ ಗೃಹಕೃತ್ಯ ಜಾಣಬಿಲ್ಲೆಯನ್ನು ಆರ್ಜಿಸುವುದು.
- ಸೇವೆ : ಆಂಬ್ಯುಲೆನ್ಸ್ ಅಥವಾ ರೋಗದಾದಿ ಜಾಣಬಿಲ್ಲೆಯ ಗಳಿಕೆ; ಮನೆಯ ಅಥವಾ ಗೈಡು ಕಚೇರಿಯ ಸುತ್ತ 1 ಕಿಮೀ ಸರಹದ್ದಿನಲ್ಲಿರುವ ರಸ್ತೆ, ವಸತಿ, ಜನರ ಖಚಿತ ಪರಿಚಯ, ಪರಸ್ಥಳದವರಿಗೆ ಹತ್ತಿರದ ವೈದ್ಯ, ಪೊಲೀಸು ಠಾಣೆ, ರೈಲ್ವೆಸ್ಟೇಷನ್ನು, ಬಸ್ಸು ನಿಲ್ದಾಣ, ಪೆಟ್ರೋಲು ಮಳಿಗೆ, ಅಂಚೆ ಕಚೇರಿ ಮೊದಲಾದುವನ್ನು ತೋರಿಸಿಕೊಡುವ ಅರಿವು; ಭೂಪಟದ ಪರಿಚಯ ಮತ್ತು ಉಪಯೋಗಕ್ಕೆ ಬರುವ ಮ್ಯಾಪು (ನಕ್ಷೆ) ತಯಾರಿಕೆ, ಅಥವಾ ಜಮಾ ಖರ್ಚಿನ ಲೆಕ್ಕವನ್ನು ಎರಡು ತಿಂಗಳು ಬರೆದು, ಮನೆಯಲ್ಲಿ ಒಂದು ವಾರಕ್ಕೆ ಸಮವಾಗುವ ತಿಂಡಿಊಟಗಳ ತಪಶೀಲು, ಅಂಗಡಿ ಸಾಮಾನಿನ ಪಟ್ಟಿ, ಖರೀದಿಗಳ ಅಂದಾಜು ಮಾಡುವಿಕೆ; ಇಬ್ಬರು ಎರಡನೆಯ ದರ್ಜೆ ಗೈಡುಗಳೊಂದಿಗೆ ಮ್ಯಾಪನ್ನು ಅನುಸರಿಸಿ ನಡೆದು ಸುಮಾರು 4.5 ಗಂಟೆಯ ಅರ್ಧದಿವಸವನ್ನು ಊರಿನ ಹೊರಗೆ ಬೀಡು ಬಿಡಬೇಕು, ತಮ್ಮದೇ ಊಟ ಉಪಚಾರ ಅಗತ್ಯ; ಆಕಸ್ಮಿಕ ದಿಗಿಲು, ಉಸಿರುಕಟ್ಟುವಿಕೆ, ಬೆಂಕಿ ಉಪದ್ರವ, ಬಿಸಿಲು ಹೊಡೆತ, ಹಾವು ಕುಟುಕು, ವಿದ್ಯುದಾಘಾತ ಮುಂತಾದ ಆಕಸ್ಮಿಕಗಳು ಉಂಟಾದ ಸಂದರ್ಭಕ್ಕೆ ತಕ್ಕ ಚಿಕಿತ್ಸಾಕ್ರಮದ ಅರಿವು; ಇನ್ಫ್ಲುಯೆಂಜó, ಕ್ಷಯ, ಕಾಲರ, ಪ್ಲೇಗು, ಸಿಡುಬು, ಟೈಫಾಯಿಡ್, ಆಮಶಂಕೆ, ಮಲೇರಿಯ, ದಡಾರ ಮುಂತಾದ ಕಾಯಿಲೆಗಳ ವಿಚಾರದಲ್ಲಿ ಆವಶ್ಯಕವಾದ ಮುನ್ನೆಚ್ಚರಿಕೆಯ ಪರಿಜ್ಞಾನ; ಋತುವ್ಯತ್ಯಾಸದಿಂದಾಗಿ ಸಾಮಗ್ರಿಗಳು ಕೆಡದಂತೆ ಜೋಪಾನಿಸುವ ಜಾಣ್ಮೆ. ಮೊದಲನೆಯ ದರ್ಜೆಯ ಗೈಡು ಇನ್ನು ಕೆಲವು ಕೌಶಲಗಳನ್ನು ಗಳಿಸಿ ರಾಷ್ಟ್ರಾಧ್ಯಕ್ಷರ ಗೈಡ್ (ಪ್ರೆಸಿಡೆಂಟ್ಸ್ ಗೈಡ್) ಮಟ್ಟಕ್ಕೆ ಏರಬಹುದು. ಇದಕ್ಕೆ ಪ್ರಾಯ 15ಕ್ಕೆ ಕಡಮೆ ಇರಕೂಡದು ಎಂಬ ವಿಧಿಯಿದೆ. 14 ವರ್ಷ ತುಂಬಿದ ಮೇಲೆ ಸೀನಿಯರ್ ಗೈಡು ಎಂಬ ದಳದ ಉಪಶಾಖೆಗೆ ಸದಸ್ಯಳಾಗಬಹುದು. ಆದರೆ ಎಲ್ಲ ಕಡೆಯೂ ಈ ಉಪಶಾಖೆಯ ಸೌಲಭ್ಯವಿಲ್ಲ.
ರೇಂಜರ್ ವಿಭಾಗ
ಸಂಪಾದಿಸಿರೇಂಜರ್ ವೃಂದದಲ್ಲಿ 4ರಿಂದ 24ರ ಸಂಖ್ಯೆಯ ವರೆಗೆ 16, 17 ವಯಸ್ಸು ತುಂಬಿದ ಹೆಣ್ಣುಮಕ್ಕಳಿಗೆ ಅವಕಾಶ ಉಂಟು. ವೃಂದಕ್ಕೆ ಮುಂದಾಳೂ (ರೇಂಜರ್ ಲೀಡರ್) ಸಹಾಯಕಿಯೂ ಇರುತ್ತಾರೆ. ವೃಂದಗಳು ಪೆಟ್ರೋಲುಗಳಾಗಿಯೋ ಒಟ್ಟಾಗಿಯೋ ಕೆಲಸಮಾಡಬಹುದು. 4ರಿಂದ 6 ರೇಂಜರುಗಳು ಇರುವ ಒಂದು ಪೆಟ್ರೋಲಿಗೆ ಮೊದಲಗಿತ್ತಿ (ರೇಂಜರ್ಮೇಟ್) ಹೊಣೆಗಾತಿಯಾಗಿರುತ್ತಾಳೆ. ವೃಂದದ ಆಶಯ, ಕಾರ್ಯಾವಳಿ, ಒಳಗೋಷ್ಠಿ, ಹೊರಪಯಣ, ಸೇವಾಯೋಜನೆ, ಎಲ್ಲವನ್ನೂ ನಿರ್ಧರಿಸಿ ಆಚರಣೆಗೆ ತರುವ ಹೊಣೆ ಶೀಲಮಂಡಲಿಯದು. ವೃಂದದಲ್ಲಿ ಬಳಗ, ದಳಗಳಿಗಿಂತ ಶೀಲ ಮಂಡಲಿಯದೇ ಹೆಚ್ಚಿನ ಆಡಳಿತ, ಅಧಿಕಾರ.
ವೃಂದಕ್ಕೆ ಸೇರಿದ ಉತ್ಕಾಂಕ್ಷಿ ಈ ಲಘುಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ರೇಂಜರ್ ದೀಕ್ಷೆಗೆ ಅನುವಾಗುತ್ತಾಳೆ. ಗೈಡು ವಿಭಾಗದ ಕೋಮಲಪಾದ ಬ್ಯಾಡ್ಜಿಗೆ ಬೇಕಾದ ಜ್ಞಾನದ ಸ್ವಾಮ್ಯ; ಪ್ರಪಂಚದ ಗೈಡಿಂಗ್ ಸ್ಕೌಟಿಂಗುಗಳ ಅರಿವು; ಯುವಕ ಯುವತಿಯರಿಗಾಗಿ ಏರ್ಪಾಡಾಗಿರುವ ಇನ್ನೆರಡು ಬೇರೆ ಸಂಘಗಳ ಪರಿಚಯ; ಭಾರತದ ಗೈಡು ಪದ್ಧತಿಯ ಮೇಲಣ ಗ್ರಂಥಗಳ ವ್ಯಾಸಂಗ; ಅಂಚೆ ಟೆಲಿಫೋನು ರೈಲ್ವೆ ಮುಂತಾದವುಗಳ ಖಚಿತ ಮಾಹಿತಿ; ದಿಕ್ಸೂಚಿ ಮತ್ತು ದಿಕ್ಕುಗಳ ಅರಿವು; ಮ್ಯಾಪನ್ನು ಓದುವುದು, ರಚಿಸುವುದು; ಐದು ಮೈಲಿ ಕಾಲ್ನಡೆ (ಹೈಕ್) ಮಾಡಿ ವರದಿ ಒಪ್ಪಿಸುವುದು; ಸರಳ ಅಡುಗೆ ತಯಾರಿಸಿ ಬಡಿಸುವುದು; ಆರೋಗ್ಯ ಸೂತ್ರಗಳ ಜ್ಞಾನ ಅಥವಾ ಮಗುವಿನ ಆರೈಕೆ; ಭಾಷೆ ನಿಯಮ, ಒಳ ತಾತ್ಪರ್ಯದ ಅರಿವು, ವಾಕ್ಯರಚನೆ ಒಂದೇ ಆದರೂ ಅರ್ಥಗ್ರಹಿಕೆಯಲ್ಲಿ ರೇಂಜರ್ ದೃಷ್ಟಿಗೆ ಹೆಚ್ಚು ವೈಶಾಲ್ಯ.
ಆಮೇಲೆ ರೇಂಜರ್ ತಾರೆ (ರೇಂಜರ್ ಸ್ಟಾರ್) ದರ್ಜೆಗೆ ಏರಲು ಪ್ರಯತ್ನಿಸಬೇಕು. ಗೈಡುಗಳ ಜಾಣಬಿಲ್ಲೆ 10ರಲ್ಲಿ 6ನ್ನು ಗಳಿಸಿಕೊಳ್ಳತಕ್ಕದ್ದು: ಅಡುಗೆ, ದಾದಿ, ಪೌರತನ, ಶಿಬಿರಪಟು, ಗೃಹಕೃತ್ಯ, ಜಗತ್ತಿನ ನಾಗರಿಕ, ಊರಿನ ನೈರ್ಮಲ್ಯ, ರಕ್ಷಕಿ (ರೆಸ್ಕ್ಯೂಯರ್), ಸಂಕೇತ ಸುದ್ದಿಗಾತಿ, ದುಭಾಷಿ; ತನ್ನ ಸರಹದ್ದಿನ ರಸೆ,್ತ ವಸತಿ, ಜನಗಳ ಅರಿವು; ಒಂದು ರಾತ್ರಿ ಕಾಲ್ನಡೆ (ಓವರ್ನೈಟ್ ಹೈಕ್), ವಯಸ್ಕರ ಶಿಕ್ಷಣ, ಆಸ್ಪತ್ರೆ ಸೇವೆ, ಶ್ರಮದಾನ, ಮಕ್ಕಳ ಯೋಗಕ್ಷೇಮ ಮುಂತಾದುವಲ್ಲಿ ಒಂದನ್ನು ಆರಿಸಿಕೊಂಡು ಒಂದು ತಿಂಗಳು ದುಡಿಮೆ.
ಅನಂತರ ಒಬ್ಬಳು ಗೈಡಿಗೆ ಮೊದಲನೆಯ ದರ್ಜೆ ಗೈಡಾಗಲು ಕಲಿಸಿಕೊಟ್ಟು, ಮತ್ತೆ 6 ಜಾಣಬಿಲ್ಲೆ ಪಡೆದು, ಒಂದು ವಾರ ಗುಡಾರದಲ್ಲಿ ಶಿಬಿರವಾಸ ಕೈಗೊಂಡು, ಗೈಡು ಪದ್ಧತಿಯಲ್ಲಿ ಉತ್ತಮ ದರ್ಜೆಯದಾದ ಭಾರತ ರೇಂಜರ್ ಎನ್ನಿಸಿಕೊಳ್ಳಬಹುದು.
ಸಮವಸ್ತ್ರ, ಲಾಂಛನ, ಸಿಲ್ಪಿ, ಇತ್ಯಾದಿ
ಸಂಪಾದಿಸಿಗೈಡಿನ ಸಮವಸ್ತ್ರ ಎಂದರೆ ದಪ್ಪಬಟ್ಟೆಯ ನೀಲಿ ಲಂಗ (ಓವರ್ಆಲ್ ಅಥವಾ ಫ್ರಾಕ್) ಅಥವಾ ನೀಲಿ ಸೀರೆ ಮತ್ತು ಬಿಳಿಯ ಕುಪ್ಪಸ-ಇವು ಸೇರಿರುತ್ತವೆ. ಲಂಗವಾದರೆ ಅದು ಮೊಳಕಾಲಿನಿಂದ ಸ್ವಲ್ಪ ಕೆಳಕ್ಕೆ ಇಳಿದಿದ್ದು, ಅರೆತೋಳುಗಳನ್ನು ಹೊಂದಿ ನಾಲ್ಕು ಮುಚ್ಚಳ ಜೇಬುಗಳನ್ನೂ (ಪ್ಯಾಚ್ ಪ್ಯಾಕೆಟ್ಸ್) ಹೆಗಲುಪಟ್ಟಿಗಳನ್ನೂ (ಎಪಾಲೆಟ್ಸ್) ಉಳ್ಳದ್ದಾಗಿರಬೇಕು. ಕುಪ್ಪಸಕ್ಕೂ ಎರಡು ಮುಚ್ಚಳ ಜೇಬು ಹೆಗಲುಪಟ್ಟಿಗಳು ಇರಬೇಕು. ತೋಳಿನ ಅಂಚು 1.5 ಎತ್ತಿ ಮಡಿಸಿರಬೇಕು. ಕುಪ್ಪಸ ಸೊಂಟದಿಂದ ನಾಲ್ಕು ಅಂಗುಲ ಕೆಳಕ್ಕೆ ಬರುವಷ್ಟು ಉದ್ದವಿರತಕ್ಕದ್ದು. ಸೀರೆಗೆ ಅಂಚು ಬೇಕಾಗಿಲ್ಲ; ಅಂಚು ಅಪೇಕ್ಷಿತವಾದರೆ ಅದು ಕಾಲಂಗುಲದ ಅಗಲದ ಬಿಳಿಯ ಬಣ್ಣದ್ದಾಗಿರಬೇಕು. ಮುಮ್ಮೂಲೆಯ ಕೊರಳುವಸ್ತ್ರದ (ಸ್ಕಾರ್ಫ್) ಎರಡು ತುದಿಗಳೂ ಸೊಂಟದ ವರೆಗೂ ಇಳಿದಿರಬೇಕು. ಕೊರಳುವಸ್ತ್ರದ ಬಣ್ಣ ಗುಂಪು ಗುಂಪಿಗೆ ಬೇರೆಯದಾಗಿರುತ್ತದೆ. ಯಾವ ಬಳಗ, ದಳ, ವೃಂದ ಎಂಬುದನ್ನು ಸುಲಭವಾಗಿ ಗುರ್ತಿಸುವುದಕ್ಕೆ ಬಣ್ಣದ ಭೇದ ಅಗತ್ಯ. ಕೊರಳುವಸ್ತ್ರದ ಎರಡು ಭಾಗಗಳನ್ನು ಕೂಡಿಸಿ ಹಿಡಿಯುವುದಕ್ಕೆ ಅಗಲ ಉಂಗುರದಂಥ ವಾಗಲ್ ಎಂಬ ಸಾಧನ ಉಪಯುಕ್ತ. ಸೊಂಟಪಟ್ಟಿ (ಬೆಲ್ಟ್), ಒಂಟೆಬಣ್ಣದ ಕಾಲುಚೀಲ (ಸಾಕ್ಸ್), ಕಂದು ಬಣ್ಣದ ಪಾದರಕ್ಷೆ-ಇವು ಭಾರತದಲ್ಲಿ ಗುಂಪುಗಳ ಇಚ್ಛೆಗೆ ಬಿಟ್ಟದ್ದಾಗಿವೆ; ಇವನ್ನು ಬಯಸಿದ್ದಾದರೆ ಒಂದು ಗುಂಪಿಗೆಲ್ಲ ಒಂದೇ ಮಾದರಿಯ ಬಣ್ಣ ಇರತಕ್ಕದ್ದು. ಇವುಗಳ ಜೊತೆಗೆ ಗೈಡು ದರ್ಜೆಯ ಭುಜಪಟ್ಟಿ, ಲಾಂಛನ, ಸಿಲ್ಪಿ ಸಿಲ್ಪಿಹುರಿ-ಇವೂ ಇರುವುದುಂಟು.
ಗೈಡುಪದ್ಧತಿಯ ಒಂದು ವೈಶಿಷ್ಟ್ಯವೇನೆಂದರೆ, ಬುಲ್ಬುಲ್ನಿಂದ ಹಿಡಿದು ಲೇಡಿ ಬೇಡನ್ ಪೋವೆಲಳ ವರೆಗೆ ಸಕಲ ಗೈಡು ಗೈಡರ್ (ಗೈಡರ್ ಎಂಬುದು ಎಲ್ಲ ಮುಂದಾಳುಗಳಿಗೂ ಅನ್ವಯಿಸುವ ಏಕನಾಮ) ಕಮಿಷನರುಗಳಿಗೂ ಸಮವಸ್ತ್ರದಲ್ಲಿ ಯಾವ ಭೇದವೂ ಕಾಣದು; ಒಂದೆರಡು ಲಾಂಛನ ಮಾತ್ರ ವ್ಯತ್ಯಾಸಗಳಿರುತ್ತವೆ.
ಆಡಳಿತ ವ್ಯವಸ್ಥೆ
ಸಂಪಾದಿಸಿಗೈಡುಪದ್ಧತಿಯಲ್ಲಿ ಆಡಳಿತಾಧಿಕಾರ ಸೂಕ್ತರೀತಿಯಲ್ಲಿ ಹಂಚಿಕೆಯಾಗಿದೆಯಾಗಿ ಕ್ರಮಬದ್ಧ ಪ್ರಜಾಪ್ರಭುತ್ವ ಅದರ ಲಕ್ಷಣವೆನ್ನಬಹುದು. ಆಜ್ಞೆಮಾಡುವವರಾಗಲೀ ದಂಡನೆಗೆ ಗುರಿಯಾಗುವವರಾಗಲೀ ಇಲ್ಲಿಲ್ಲ. ಆವಶ್ಯಕವಾಗಿ ಇರಲೇಬೇಕಾದ ಹಲವಾರು ನಿಯಮಗಳು ಗೈಡಿಂಗ್ ಎಂಬ ಆಟ-ಶಿಕ್ಷಣದ ಅಭ್ಯಾಸಕ್ಕೆ ಒದಗುವ ದಾರಿ ಕಂಬಗಳೇ ಹೊರತು ಅವು ಶಾಸನಗಳಲ್ಲ, ಕಾನೂನುಗಳಲ್ಲ, ಕಬ್ಬಿಣ ಕಟ್ಟುಗಳಲ್ಲ. ಆದ್ದರಿಂದ ಗೈಡು ಪದ್ಧತಿಯ ಮುಖ್ಯ ಆಧಾರವೆಂದರೆ ಬಳಗ, ದಳ, ವೃಂದಗಳು. ಹಲವಾರು ಅಂಥ ಗುಂಪುಗಳು ಒಟ್ಟು ಸೇರಿ ಒಂದು ಸ್ಥಳೀಯ ಸಂಸ್ಥೆ ಏರ್ಪಡುತ್ತದೆ. ಹಲವು ಸ್ಥಳೀಯ ಸಂಸ್ಥೆಗಳಿಂದ ಒಂದು ಜಿಲ್ಲಾ ಸಂಸ್ಥೆಯಾಗುತ್ತದೆ. ಹಲವು ಜಿಲ್ಲಾ ಸಂಸ್ಥೆಗಳಿಂದ ಒಂದು ವಿಭಾಗ ಅಥವಾ ಕೌಂಟೀ ಸಂಸ್ಥೆ (ಡಿವಿಷನಲ್ ಅಥವಾ ಕೌಂಟೀ ಅಸೋಸಿಯೇಷನ್) ಆಗುತ್ತದೆ. ಇಂಥ ಕೌಂಟೀ ಸಂಸ್ಥೆಗಳು ಸೇರಿ ರಾಜ್ಯಸಂಸ್ಥೆ ಏರ್ಪಾಡು. ರಾಜ್ಯಸಂಸ್ಥೆಗಳು ಕೂಡಿ ರಾಷ್ಟ್ರಸಂಸ್ಥೆ ರೂಪುಗೊಳ್ಳುತ್ತದೆ. ಅದಕ್ಕೆ ಇದು ಆಶ್ರಯ, ಇದಕ್ಕೆ ಅದು ಆಶ್ರಯ, ಇದೇ ರಚನಾತತ್ತ್ವ; ಯಾವುದು ಯಾವುದನ್ನೂ ಯಜಮಾನ-ಸೇವಕ ಸಂಬಂಧದಲ್ಲಿ ಅವಲಂಬಿಸಿಕೊಂಡಿಲ್ಲ. ಎಲ್ಲ ಮಟ್ಟಗಳಲ್ಲಿಯೂ ಮಂತ್ರಾಲೋಚನ ಸಭೆ ಮತ್ತು ಕಾರ್ಯಸಮಿತಿಗಳು ಚುನಾಯಿತಗೊಂಡಿರುತ್ತವೆ. ಇನ್ನೊಂದು ಕಡೆ, ಕಮಿಷನರುಗಳು ನೇಮಿತರಾಗಿ ಸಮರ್ಪಕ ರೀತಿಯಲ್ಲಿ ಗೈಡುಗಳ ವ್ಯಾಸಂಗ, ವ್ಯಾಯಾಮ, ವಿನೋದಬ್ಯಾಡ್ಜು ಗಳಿಕೆ, ಪರೋಪಕಾರ-ಮೊದಲಾದವುಗಳ ಮೇಲುಸ್ತುವಾರಿ ನಡೆಸುತ್ತಾರೆ.
ಗೈಡರುಗಳಿಗೆ ಶಿಕ್ಷಣ ಕೊಡುವುದಕ್ಕಾಗಿ ಒಂದೆರಡು ವಾರಗಳ ಶಿಬಿರ ಆಗಾಗ ಜರುಗುತ್ತದೆ. ಸರಿಸುಮಾರಾಗಿ ಒಂದೇ ಮಾದರಿಯ ಶಿಕ್ಷಣಕ್ರಮ ಪ್ರಪಂಚದಲ್ಲೆಲ್ಲ ಅಂಗೀಕೃತವಾಗಿದೆ; ದೇಶೀಯ ಸ್ಥಳೀಯ ವ್ಯತ್ಯಾಸಗಳು ಬಹಳ ಕಡಿಮೆ. ಗೈಡು ಪದ್ಧತಿ ಜಗತ್ತಿಗೆಲ್ಲ ಒಂದೇ ಆಗಿದೆ.