ಭಾರತದ ಒಂದು ಮಾಜಿ ದೇಶೀಯ ಸಂಸ್ಥಾನ; ಅದರ ರಾಜಧಾನಿಯಾಗಿದ್ದ ಪಟ್ಟಣ. ಈಗ ಗುಜರಾತ್ ರಾಜ್ಯದ ರಾಜಕೋಟೆ ಜಿಲ್ಲೆಯ ಒಂದು ತಾಲ್ಲೂಕು ಮತ್ತು ಅದರ ಕೇಂದ್ರ. ಸಂಸ್ಥಾನದ ವಿಸ್ತೀರ್ಣ 1,024 ಚ.ಮೈ. 1941ರ ಗಣತಿಯ ಪ್ರಕಾರ ಅದರ ಜನಸಂಖ್ಯೆ 2,44,514 ಇತ್ತು. ಇಲ್ಲಿ ಗೊಂಡಲ್ ಮತ್ತು ಪಾನೇಲೀ ಎಂಬ ಎರಡು ಸರೋವರಗಳಿವೆ. ಹತ್ತಿ ಮತ್ತು ಉಣ್ಣೆ ಜವಳಿ, ಜರಿ, ಪಾತ್ರೆ, ಮರದ ಆಟಿಗೆ, ದಂತದ ಬಳೆ ಮುಂತಾದ ಪದಾರ್ಥಗಳು ತಯಾರಾಗುತ್ತವೆ. ಎಣ್ಣೆಯ, ಹಿಟ್ಟಿನ ಮತ್ತು ಹತ್ತಿಯ ನೂಲಿನ ಗಿರಣಿಗಳೂ ಮುದ್ರ್ರಣಾಲಯಗಳೂ ಬೆಂಕಿಪೆಟ್ಟಿಗೆಯ ಮತ್ತು ಚರ್ಮದ ಕಾರ್ಖಾನೆಗಳೂ ಇವೆ. ಹಿಂದೆ ಸಂಸ್ಥಾನದಲ್ಲಿ 172 ಪ್ರಾಥಮಿಕ ಶಾಲೆಗಳು, 2 ಪ್ರೌಢಶಾಲೆಗಳು, ಒಂದು ಕಾಲೇಜು ಇದ್ದವು. ಪ್ರಾಥಮಿಕ ಹಾಗೂ ಉಚ್ಚಶಿಕ್ಷಣಗಳು ಉಚಿತವಾಗಿದ್ದವು. ಕಡ್ಡಾಯ ಶಿಕ್ಷಣ, ಸ್ತ್ರೀ ಶಿಕ್ಷಣ ಜಾರಿಯಲ್ಲಿದ್ದವು. ಆಗಿನ ಸಂಸ್ಥಾನದ ವಾರ್ಷಿಕ ಹುಟ್ಟುವಳಿ 60 ಲಕ್ಷ ರೂ. ಅದು ಬ್ರಿಟಿಷರಿಗೆ ವರ್ಷಕ್ಕೆ 1,10,721 ರೂ. ಕಪ್ಪ ಕೊಡಬೇಕಾಗಿತ್ತು. ಗೊಂಡಲ್ ಸಂಸ್ಥಾನವನ್ನಾಳುತ್ತಿದ್ದ ರಾಜ ರಜಪುತವಂಶಸ್ಥ. ಆತನ ಮೂಲ ಪುರುಷ 17ನೆಯ ಶತಮಾನದ ಕುಂಭೋಜಿ. 1807ರಲ್ಲಿ ಬ್ರಿಟಿಷರೊಂದಿಗೆ ಆಗಿನ ರಾಜ ಸಂಧಿ ಮಾಡಿಕೊಂಡಿದ್ದ.

ಗೊಂಡಲ್ ಪಟ್ಟಣ ಗೊಂಡಲೀ ನದಿಯ ಪಶ್ಚಿಮ ದಡದಲ್ಲಿ ಉ.ಅ. 210, 58' ಮತ್ತು ಪು.ರೇ. 700, 48' ಮೇಲೆ ಇದೆ. ಜನಸಂಖ್ಯೆ 95,991 (2001). ಇದರ ನಾಲ್ಕು ಮೂಲೆಗಳಲ್ಲಿ ಬುರುಜುಗಳನ್ನೂ ಸುತ್ತ ಕೋಟೆಗೋಡೆಯ ಅವಶೇಷಗಳನ್ನೂ ಕಾಣಬಹುದು. ಇಲ್ಲಿರುವ ನೌಲಾಖಾ ಅರಮನೆ 17ನೆಯ ಶತಮಾನದ್ದಾಗಿದ್ದು ಇದರ ವಾಸ್ತುಶಿಲ್ಪ ಬಹು ಸುಂದರವಾಗಿದೆ.