ಆಟಿಕೆಗಳಲ್ಲಿ ಬಹು ಮುಖ್ಯವಾದ ಒಂದು ವಿಭಾಗ. ಗೊಂಬೆಗಳಲ್ಲಿ ಮನುಷ್ಯರ ಆಕೃತಿಗಳಂತೆ ಮೃಗಪಕ್ಷಿ, ಗಿಡಮರಗಳ ಆಕೃತಿಗಳನ್ನೂ ಕಾಣಬಹುದು. ಜನಪದ ಸಾಹಿತ್ಯ ಮತ್ತು ವಸ್ತುಗಳ ಸಂಗ್ರಹಕಾರ್ಯ ನಡೆದಂತೆಲ್ಲ ಅತಿ ಹಿಂದಿನ ಕಾಲದ ಆಟಿಕೆಗಳನ್ನು ಉತ್ಖನನ ಮಾಡಿ ವಸ್ತುಸಂಗ್ರಹಾಲಯಗಳಲ್ಲಿ ಕೂಡಿಡುತ್ತ ಬಂದಿದ್ದಾರೆ.
ಗೊಂಬೆಗಳ ತಯಾರಿಕೆ ಭಾರತದ ಒಂದು ಪ್ರಾಚೀನ ಕೈಗಾರಿಕೆ ಎಂಬುದನ್ನು ಐತಿಹಾಸಿಕ ಸಂಶೋಧನೆಗಳು ತೋರಿಸಿಕೊಟ್ಟಿವೆ. ನಾಗರಿಕತೆಯ ಉಗಮವಾದಾಗಿ ನಿಂದಲೂ ಕುತೂಹಲಕಾರಿಯಾದ ಅನೇಕ ಗೊಂಬೆಗಳನ್ನು ಕಾಣಬಹುದಾಗಿದೆ. ತನ್ನ ಉದರ ಪೋಷಣೆಗೆ ಆದಿಮಾನವ ಬೇಟೆಯನ್ನು ಅವಲಂಬಿಸಬೇಕಾಯಿತಷ್ಟೆ. ಇದಕ್ಕಾಗಿ ಕೋಲುಗಳು, ಬಿಲ್ಲುಗಳು, ಅನೇಕ ಕಲ್ಲಿನ ಉಪಕರಣಗಳು ಮುಂತಾದವನ್ನು ಬಳಸುತ್ತಿದ್ದ. ತನ್ನ ಬಳಕೆಯ ವಸ್ತುಗಳ ಆಕೃತಿಯಲ್ಲೇ ತನ್ನ ಮಕ್ಕಳಿಗೆ ಆಟದ ವಸ್ತುಗಳನ್ನು ಆತ ಮಾಡಿಕೊಟ್ಟ. ಕಾಲಕ್ರಮಿಸಿದಂತೆ ಅವನ ಜೀವನದಲ್ಲಿ ಪರಿವರ್ತನೆಯಾಗುತ್ತ ಬಂದು ವ್ಯವಸ್ಥಿತವಾದ ಒಂದು ಬದುಕಿನ ಹಾದಿಯನ್ನು ಆತ ಕಂಡುಕೊಂಡಾಗ, ಮಡಕೆ, ಕುಡಿಕೆ ಮುಂತಾದ ಪದಾರ್ಥಗಳನ್ನೂ ಬಟ್ಟೆಬರೆಗಳನ್ನೂ ಲೋಹದ ವಸ್ತುಗಳನ್ನೂ ಬಳಸಲು ಅರಿತಾಗ, ಮಕ್ಕಳ ಆಟದ ಗೊಂಬೆಗಳಿಗೂ ಅದೇ ಆಕೃತಿಗಳು ದೊರೆತವು. ಪೂರ್ವಭಾವಿ ಇತಿಹಾಸ ಯುಗಕ್ಕೆ ಸೇರಿದ ಹರಪ್ಪ, ಮೊಹೆಂಜೊದಾರೋಗಳಲ್ಲಿ ದೊರೆತಿರುವ ಆಟದ ಸಾಮಾನುಗಳಲ್ಲಿ ಗೊಂಬೆಗಳಿಗೆ ಒಂದು ವಿಶಿಷ್ಟ ಪ್ರಾಮುಖ್ಯವಿದೆ.
ಅಲ್ಲಿನ ಗೊಂಬೆಗಳಲ್ಲಿ, ಹಾಸಿಗೆಯಲ್ಲಿ ಮಲಗಿಕೊಂಡ ಮಗುವೊಂದನ್ನು ಆರೈಕೆ ಮಾಡುತ್ತಿರುವ ಸ್ತ್ರೀಮೂರ್ತಿಯೊಂದು ತುಂಬ ಕುತೂಹಲಜನಕವಾಗಿದೆ. ಆ ಗೊಂಬೆಗೆ ಒಂದು ವಿಧವಾದ ಒಳಲಂಗವನ್ನು ತೊಡಿಸಿ ಒಂದು ವಿಚಿತ್ರವಾದ ಟೋಪಿಯನ್ನು ಹಾಕಲಾಗಿದೆ. ಆಟದ ಗೊಂಬೆಗಳ ಸಮೂಹದಲ್ಲಿ ಪ್ರಾಣಿಗಳೂ ಇವೆ. ತಲೆಯನ್ನು ಅತ್ತಿಂದಿತ್ತ ಅಲ್ಲಾಡಿಸಬಲ್ಲ ಗೂಳಿಗಳು ದೊರೆತಿವೆ. ಹೀಗೆ ಅಲ್ಲಾಡಬಲ್ಲ ಅನೇಕ ಬಿಡಿ ತಲೆಗಳು ದೊರೆತಿವೆ. ಅನೇಕ ಪಕ್ಷಿರಥಗಳೂ ಮಣ್ಣಿನ ಟಗರುಗಳೂ ಸಿಕ್ಕಿವೆ. ಟಗರಿನ ಗೊಂಬೆಯ ಮೈಮೇಲಿನ ಉಣ್ಣೆಯನ್ನು ಸೂಚಿಸಲು ಕೆಂಪುವರ್ಣದ ಗೆರೆಗಳನ್ನು ಎಳೆಯಲಾಗಿದೆ. ಅದಕ್ಕೆ ದಾರ ಕಟ್ಟಿ ಎಳೆದಾಡುವ ಸಲುವಾಗಿ ಕತ್ತಿನಲ್ಲಿ ಒಂದು ಸಣ್ಣ ರಂಧ್ರವನ್ನು ಮಾಡಲಾಗಿದೆ. ಇವುಗಳ ಜೊತೆಗೆ ಸುಟ್ಟ ಜೇಡಿಮಣ್ಣಿನ ಗುಳಿಗೆಗಳಿರುವ ಮಣ್ಣಿನ ಗಿಲಿಕೆಗಳೂ ಕೋಳಿ ಹಾಗೂ ಪಾರಿವಾಳಗಳ ಆಕಾರದಲ್ಲಿರುವ ಪೀಪಿಗಳೂ ಮಣ್ಣಿನ ಚಕ್ರಗಳೂ ಶಂಖಗಳೂ ದೊರೆತಿವೆ. ಸುಟ್ಟಮಣ್ಣಿನ ಚಿಕ್ಕ ಆಟದ ಬಂಡಿಗಳು ಚನ್ಹುದಾರೋದಲ್ಲಿ ದೊರೆತವು. ಹರಪ್ಪದಲ್ಲಿ ಪುಟ್ಟ ತಾಮ್ರದ ಬಂಡಿ ಸಿಕ್ಕಿದೆ. ಅದಕ್ಕೆ ಒಂದು ಛತ್ರಿಯನ್ನು ಅಳವಡಿಸಲಾಗಿದೆ. ಆದರೆ ಬಂಡಿಯ ಚಕ್ರಗಳು ದೊರೆತಿಲ್ಲ. ಕೇವಲ ಎರಡು ಅಂಗುಲ ಎತ್ತರದ ಈ ಬಂಡಿಯ ಹಿಂದಿನ ಭಾಗಗಳು ತೆರೆದಂತಿದ್ದು ಎಡಬಲ ಪಕ್ಕಗಳು ಮುಚ್ಚಿವೆ. ಮುಂದೆ ಸಾರಥಿಯೂ ಇದ್ದಾನೆ.
ಈ ಎಲ್ಲವುಗಳಲ್ಲಿಯೂ ಉನ್ನತ ಮಟ್ಟದ ಕಲೆಗಾರಿಕೆಯನ್ನು ಕಾಣಬಹುದು. ಗೊಂಬೆ ಮತ್ತು ಚೆಂಡುಗಳನ್ನು ಜೇಡಿಮಣ್ಣು ಮತ್ತು ಕಲ್ಲುಗಳಲ್ಲಿ ಮಾಡುತ್ತಿದ್ದರೆಂದು ಊಹಿಸಬಹುದು. ಮೊಹೆಂಜೊದಾರೋದಲ್ಲಿ ಜೀವಸದೃಶವಾಗಿರುವ ಕೆಲವು ಹುಂಜಗಳು ದೊರೆತಿವೆ. ಅಲ್ಲಿನ ಗೂಳಿಗಳೂ ಕೋಣಗಳೂ ಕಾಳಗಕ್ಕೆ ಸಿದ್ಧವಾದ ರೀತಿಯಲ್ಲಿ ನಿರ್ಮಿತವಾಗಿವೆ. ಒಂದು ಕಡೆ ಒಂದು ಕೋಣ ಅನೇಕ ಜನರನ್ನು ತಿವಿದು ಬೀಳಿಸಿರುವ ದೃಶ್ಯವೂ ದೊರೆಯುತ್ತದೆ.
ಹೀಗೆ ನಿರ್ದಿಷ್ಟವಾದ ಕೆಲವು ಕಾಲದಲ್ಲಿ ವಸ್ತು, ಕಲ್ಪನೆ ಮತ್ತು ಕಲೆಗಾರಿಕೆಗಳಲ್ಲಿ ಏಕಸೂತ್ರತೆ ಇರುವ ಗೊಂಬೆಗಳನ್ನು ಕಾಣಬಹುದು. ಈ ವಿಪುಲ ವಸ್ತುಗಳು ಭಾರತೀಯ ಸಂಸ್ಕೃತಿಯ ಒಂದು ನಿಧಿ ಎಂದೇ ಹೇಳಬೇಕು. ಪಟಣದ ಕುಮ್ರಹಾರ್, ಖುಲಂದಿಬಾಗಿನ ಕದಮ್ಖಾನ್, ಬಿಹಾರದ ಮುಜಾಪಾವರ್, ಅಲಹಾಬಾದಿನ ಕೌಶಾಂಬಿ, ಶರಣ್ ಜಿಲ್ಲೆಯ ಬೆಲ್ಸಾ, ಕೊಲ್ಹಾಪುರ ಭಾಗದ ಬ್ರಹ್ಮಪುರಿ, ಕರ್ನಾಟಕದ ಬ್ರಹ್ಮಗಿರಿ-ಇಲ್ಲೆಲ್ಲ ಮಕ್ಕಳ ಆಟದ ವಿವಿಧ ರೀತಿಯ ಪ್ರಾಣಿಗಳು, ಹಕ್ಕಿಗಳು, ಗಾಡಿಗಳು, ವರ್ಣರಂಜಿತ ಕುಡಿಕೆಗಳು, ಗೋಲಿಗಳು ಮುಂತಾದವು ದೊರೆತಿವೆ. ಈ ವಸ್ತುಗಳಲ್ಲಿ ಆಯಾ ಪ್ರದೇಶದ ಒಂದೊಂದು ವೈಲಕ್ಷಣ್ಯವನ್ನು ಕಾಣಬಹುದು. ಕೆಲವು ಕಡೆಗಳಲ್ಲಿನ ಗೊಂಬೆಗಳಲ್ಲಿ ಅಷ್ಟು ನಯ, ನಾಜೂಕು ಇಲ್ಲದಿರುವ ನಿದರ್ಶನಗಳೂ ಉಂಟು.
ಗೊಂಬೆಗಳ ತಯಾರಿಕೆಯಲ್ಲಿ ವಿವಿಧ ಮಾಧ್ಯಮಗಳನ್ನು ಕಾಣಬಹುದು. ಎಷ್ಟೋ ವೇಳೆ ಜೇಡಿಮಣ್ಣನ್ನು ಒಣ ಹುಲ್ಲಿನೊಡನೆ ಬೆರಸುತ್ತಿದ್ದರು. ಮೊದಲು ಸುಣ್ಣವನ್ನು ಲೇಪಿಸಿ, ಅನಂತರ ಕೆಮ್ಮಣ್ಣನ್ನು ಬಳಿದ ಗೊಂಬೆಗಳೂ ಇವೆ. ಕೆಲವು ಕಂದು ಹಾಗೂ ಕಪ್ಪು ಜೇಡಿಮಣ್ಣಿನಿಂದ ತಯಾರಾದವು. ಬಡವ ತನ್ನ ಶಿಲ್ಪಸಿದ್ಧಿಯನ್ನು ಮೆರೆಯಬಲ್ಲ ಏಕೈಕ ಸಾಧನವಾದ ಜೇಡಿಮಣ್ಣಿನಲ್ಲಿ ಹೆಚ್ಚು ಗೊಂಬೆಗಳು ನಿರ್ಮಿತವಾಗಿವೆ. ಗಾಜು, ಕಲ್ಲು, ಕಂಚು, ತಾಮ್ರ ಮತ್ತು ಮರಗಳನ್ನು ಬಳಸಿರುವ ನಿದರ್ಶನಗಳೂ ಉಂಟು.
ಪಾಟ್ನ ವಸ್ತುಸಂಗ್ರಹಾಲಯದಲ್ಲಿ ಈ ಬಗೆಯ ಅನೇಕ ಮಾದರಿಗಳನ್ನು ಕಾಣಬಹುದು. ವಸ್ತು, ರೀತಿ, ಶೈಲಿಗಳೊಂದೊಂದರಲ್ಲೂ ವೈಶಿಷ್ಟ್ಯದಿಂದ ಕೂಡಿದ ಅನೇಕ ಅಪುರ್ವ ಗೊಂಬೆಗಳನ್ನು ಅಲ್ಲಿ ಸಂಗ್ರಹಿಸಲಾಗಿದೆ. ಶುಂಗ, ಕುಶಾನ ಮತ್ತು ಸಾತವಾಹನರ ಕಾಲಕ್ಕೆ ಸೇರಿದ ವಸ್ತುಗಳೂ ಅಲ್ಲುಂಟು. ದಖನ್ ಪ್ರದೇಶದ ಬ್ರಹ್ಮಪುರಿಯ ಕಂಚಿನ ಗಾಡಿಗಳನ್ನೂ ನರ್ಮದಾತೀರದ ಮಹೇಶ್ವರ ಮುಂತಾದ ಮಧ್ಯಪ್ರದೇಶಕ್ಕೆ ಸೇರಿದ ನೆಲೆಗಳ ಕೆಲವು ಪ್ರಾಣಿಗಳ ಗೊಂಬೆಗಳನ್ನೂ ಅಲ್ಲಿ ನೋಡಬಹುದು.
ಮೆದು ಕಲೆಯಲ್ಲಿ ಕಲಾವಿದರು ಶೀಘ್ರ ಕರಕೌಶಲ ಮತ್ತು ವ್ಯಕ್ತಿತ್ವ ಪ್ರದರ್ಶನಕ್ಕೆ ಹೆಚ್ಚು ಗಮನ ಕೊಡಬೇಕಾಗುತ್ತದೆ. ಅಲಂಕಾರ ವಿಷಯಗಳಲ್ಲಿ ರೇಖೆಯ ಸೌಂದರ್ಯ ಮತ್ತು ಆಕೃತಿಗಳಲ್ಲಿ ಆಭರಣದ ಬೆಡಗುಗಳನ್ನು ತರಲು ಯತ್ನಿಸಬೇಕಾಗುತ್ತದೆ. ಶುಂಗಕಾಲದ ವಸ್ತುಗಳಲ್ಲಿ ನಾಲ್ಕು ಹೋರಿಗಳನ್ನು ಕಟ್ಟಿದ ಮಣ್ಣಿನ ರಥ, ಗಂಭೀರವಾದ ಕುದುರೆ, ಮೊಂಡುಬುದ್ಧಿಯಟಗರು ಮುಂತಾದವುಗಳಲ್ಲಿ ಮಣ್ಣಿನ ಕೈಕೆಲಸದ ಅತ್ಯಂತ ಶ್ರೇಷ್ಠಮಟ್ಟದ ಕಲೆಗಾರಿಕೆಯನ್ನು ಕಾಣುತ್ತೇವೆ. ಕುಶಾನರ ಕಾಲದ ಗೊಂಬೆಗಳಲ್ಲಿ ಸರಳ ರೇಖಾ ವಿನ್ಯಾಸವಿದ್ದರೂ ಅಪಾರ ಆಭರಣಗಳ ಅಲಂಕಾರವು ಇಲ್ಲದಿಲ್ಲ.
ದಕ್ಷಿಣ ಸಾತವಾಹನರ ಕಾಲದ ಕಂಚಿನ ಗೊಂಬೆಗಳಿಗೆ ಒಂದು ಅಪುರ್ವ ಸ್ಥಾನವಿದೆ. ಮಣ್ಣಿನ ಗೊಂಬೆಗಳಿಗಿಂತ ತೀರ ಭಿನ್ನವಾದ ಇವು ಲೋಹ ಪ್ರಾಮುಖ್ಯವನ್ನು ಹೊಂದಿದ ಒಂದು ಉನ್ನತ ನಾಗರಿಕತೆಯ ಸಂಕೇತಗಳಾಗಿವೆ. ಕಂಚಿನ ಒಂದು ಆನೆಯ ಬೆನ್ನಿನ ಮೇಲೆ ಒಂದು ಇಡೀ ಸಂಸಾರವನ್ನೇ ಬಿಡಿಸಲಾಗಿದೆ. ಹುಲಿ ತನ್ನ ಪಂಜವನ್ನು ಮೇಲೆತ್ತಿ ಅಪ್ಪಳಿಸಲು ಅನುವಾದಂತೆ ಕಡೆಯಲಾಗಿದೆ.
ಹೀಗೆ ಭಾರತದ ಸಂಸ್ಕೃತಿಯಲ್ಲಿ ಗೊಂಬೆಗಳಿಗೆ ಒಂದು ಪ್ರಮುಖ ಸ್ಥಾನವಿತ್ತು. ಪ್ರಾಚೀನ ಕಾಲದಲ್ಲಿಯೇ ಭಾರತೀಯರು ಒಂದು ಉನ್ನತ ಸಂಸ್ಕೃತಿಯನ್ನು ಬೆಳೆಸಿಕೊಂಡು ಕಲಾಪುರ್ಣವಾದ ಜೀವನವನ್ನು ನಡೆಸಿದರೆಂಬುದಕ್ಕೆ ಇವು ಉತ್ತಮ ನಿದರ್ಶನಗಳಾಗಿದೆ. ಆಧುನಿಕ ಕಾಲದಲ್ಲಿ ಊಹಿಸಲೂ ಆಗದಂಥ ಅದ್ಭುತ ಕಲೆಗಾರಿಕೆ ಆಗಿನ ಗೊಂಬೆಗಳಲ್ಲಿ ಕಾಣಬರುತ್ತದೆ. ಇನ್ನು ಜನಪದ ಕಲೆಗಳನ್ನು ತೆಗೆದುಕೊಂಡರೆ ಅಲ್ಲಿ ವಿಶಿಷ್ಟವಾದ ಗೊಂಬೆಗಳನ್ನು ಗಮನಿಸಬಹುದಾಗಿದೆ. ತೊಗಲು ಬೊಂಬೆಗಳು, ಸೂತ್ರದ ಗೊಂಬೆಗಳು, ಕೀಲುಗೊಂಬೆಗಳು -ಇವು ಮುಖ್ಯವಾದವು. ಕಿಳ್ಳೇಕ್ಯಾತರ ತೊಗಲಗೊಂಬೆಗಳ ಆಟ ಅತಿ ಪ್ರಾಚೀನ ಕಾಲದಿಂದ ಬೆಳೆದುಬಂದ ಕಲೆ. ಈ ಕಲೆ ಭಾರತದ ಒಳಗೂ ಹೊರಗೂ ಪ್ರಚಾರದಲ್ಲಿದೆ. ಇದು ಮಹಾರಾಷ್ಟ್ರದಲ್ಲಿ ಪ್ರಾರಂಭವಾಯಿತೆಂದು ತಿಳಿದುಬರುತ್ತದೆ. ಅಲ್ಲಿಂದ ಇದು ಕರ್ನಾಟಕ, ಆಂಧ್ರದ ರಾಯಲಸೀಮೆ ಮತ್ತು ತಮಿಳುನಾಡುಗಳಿಗೆ ಪಸರಿಸಿತು.
ಈ ಗೊಂಬೆಗಳ ರಚನೆ ವಿಶಿಷ್ಟವಾದುದು. ಹುಲ್ಲೆಯ ಕರು ಇಲ್ಲವೆ ಎಳೆಯ ಆಡುಗಳ ಹದಮಾಡಿದ ಚರ್ಮದಿಂದ ಇವನ್ನು ಮಾಡುತ್ತಾರೆ. ಅನಂತರ ತೊಗಲಿನ ಮೇಲೆ ರೇಖೆಗಳಿಂದ ಚಿತ್ರ ಬಿಡಿಸುತ್ತಾರೆ. ಅಲ್ಲಲ್ಲಿ ಕತ್ತರಿಸಿ ಚಿತ್ರಗಳ ಆಕಾರ ಬಿಡಿಸುತ್ತಾರೆ. ಅನಂತರ ಗಿಡಮೂಲಿಕೆಗಳಿಂದ ತೆಗೆದ ಬಣ್ಣಗಳನ್ನು ಲೇಪಿಸಿ ನೆರಳಿನಲ್ಲಿ ಒಣಗಿಸುತ್ತಾರೆ. ರಾತ್ರಿಯ ದೀಪದ ಬೆಳಕು ಬಿದ್ದಕೂಡಲೇ ಅವುಗಳ ಕಾಂತಿ ಎದ್ದು ತೋರುತ್ತದೆ. ಗೊಂಬೆಗಳು ನೇರವಾಗಿ ನಿಲ್ಲಲು ಅವುಗಳಿಗೆ ಬಿದಿರಿನ ಕಡ್ಡಿಯನ್ನು ಜೋಡಿಸಿರುತ್ತಾರೆ. ಇವನ್ನು ಗೊಂಬೆರಾಮರು ಪುಜಾವಸ್ತುಗಳೆಂದೇ ತಿಳಿದು ಪುಜಿಸುತ್ತಾರೆ. 3’-4’ ಉದ್ದದ ತೊಗಲ ಗೊಂಬೆಗಳು ಚಿಕ್ಕ ಆಟದಲ್ಲೂ ‘5-6‘ ಉದ್ದದ ಗೊಂಬೆಗಳು ದೊಡ್ಡ ಆಟದಲ್ಲೂ ಬಳಕೆಯಲ್ಲಿವೆ. ಅನೇಕ ವೇಳೆ ಬೊಂಬೆಯ ತಲೆ, ಎದೆ, ಕೈ ಕಾಲುಗಳು ಬೇರೆಬೇರೆಯಾಗಿದ್ದು ಅವನ್ನು ದಾರಗಳಿಂದ ಜೋಡಿಸಲಾಗಿರುತ್ತದೆ. ಕೈ, ಕಾಲು, ದೇಹ, ತಲೆ ಸರಿದಾಡುವ ಅವುಗಳಿಗೆ ಬಿದಿರಿನ ಅಥವಾ ಈಚಲ ಕಡ್ಡಿಗಳನ್ನು ಜೋಡಿಸಿರುತ್ತಾರೆ.
ಸೂತ್ರದ ಗೊಂಬೆ (ಪುತಲಿ ಗೊಂಬೆ) ಆಟವೂ ಬಹಳ ಹಿಂದಿನಿಂದಲೂ ಬೆಳೆದು ಬಂದ ಒಂದು ಅಪುರ್ವ ಜನಪದ ಕಲೆ. ಈ ಆಟ ಚಕ್ಕಳ ಗೊಂಬೆಯಾಟದಿಂದ ಕೆಲವು ರೀತಿಯಲ್ಲಿ ಬೇರೆಯಾಗಿದೆ. ಈ ಗೊಂಬೆಗಳು ಮರದಲ್ಲಿ ತಯಾರಾದುವು. ಉದ್ದ 2’-3’ ಕೈ, ಕಾಲು, ಮೂಗು, ಕಣ್ಣು, ತಲೆ, ಎದೆ ಎಲ್ಲವನ್ನೂ ನಯವಾಗಿ ಮಾಟವಾಗಿ ಕಡೆದಿರುತ್ತಾರೆ. ಆಯಾ ಗೊಂಬೆಗೆ ತಕ್ಕಂತೆ ಬಣ್ಣಗಳನ್ನು ಲೇಪಿಸಿರುತ್ತಾರೆ. ಪಾತ್ರಕ್ಕೆ ತಕ್ಕಂತೆ ಉಡುಪು, ಒಡವೆ, ಸರ, ಸೊಂಟಕ್ಕೆ ವಡ್ಯಾಣ, ಪಾದಕ್ಕೆ ನೂಪುರ, ಕಾಲುಂಗುರ, ತಲೆಗೆ ಜಡೆಬಿಲ್ಲೆ, ಕೆನ್ನೆಸರ ಮುಂತಾದುವನ್ನು ಬೇರೆಬೇರೆಯಾಗಿ ತೊಡಿಸಿರುತ್ತಾರೆ. ಗೊಂಬೆಯ ಎಲ್ಲ ಭಾಗಗಳೂ ಸುಲಭವಾಗಿ ಚಲಿಸುವಂತಿರುತ್ತವೆ. ಆಟ ಆಡಿಸುವವರು ನೂಲು ಅಥವಾ ಸಲಾಕಗಳಿಂದ ಗೊಂಬೆಗಳ ಮೇಲೆ ಹತೋಟಿಯನ್ನಿಟ್ಟುಕೊಂಡಿರುತ್ತಾರೆ. ಆಟದಲ್ಲಿವರು ತಮ್ಮ ಎಲ್ಲ ಕೈಚಳಕವನ್ನು ಆ ಗೊಂಬೆಗಳ ಮೇಲೆ ಪ್ರಯೋಗ ಮಾಡುತ್ತಾರೆ. ತಮ್ಮ ಕಲಾವಂತಿಕೆಯನ್ನು ಮೆರೆಯುತ್ತಾರೆ. ಪ್ರಪಂಚದ ಎಲ್ಲೆಡೆಯೂ ಈ ಸೂತ್ರದ ಬೊಂಬೆ ಆಟ ಇದ್ದಂತೆ ತೋರುತ್ತದೆ. ಗ್ರೀಕರು ಈ ಆಟಗಳಿಂದ ಮನೋರಂಜನೆ ಪಡೆಯುತ್ತಿದ್ದರು. ಚೀನ, ಇಂಗ್ಲೆಂಡ್ಗಳಲ್ಲೂ ಈ ಕಲೆ ಇತ್ತೆಂದು ಹೇಳಲಾಗಿದೆ. ಫ್ರಾನ್ಸ್‌ನಲ್ಲಿ ಈಗಲೂ ಈ ಆಟಗಳನ್ನು ನಡೆಸಲಾಗುತ್ತಿದೆ. ಅಮೆರಿಕ, ಲ್ಯಾಟಿನ್ ಅಮೆರಿಕ ಭಾಗಗಳಲ್ಲಿ ಇಟಲಿ ಜನ ಆಗಾಗ ಹೋಗಿ ಈ ಆಟ ಪ್ರದರ್ಶಿಸಿ ಬರುವುದುಂಟು. ಭಾರತದಲ್ಲಿ ಈ ಆಟಕ್ಕೆ ಹಿಂದಿದ್ದ ಪುರಸ್ಕಾರ ಈಗ ದೊರಕದ ಕಾರಣ ಈ ಒಂದು ಕಲೆ ಅಳಿಸಿ ಹೋಗುವ ಭಯ ಉಂಟಾಗಿದೆ.
ಗೌರಿಗೊಂಬೆಗಳೂ ದಸರೆ ಗೊಂಬೆಗಳೂ ಭಾರತದಲ್ಲಿ ಈಗಲೂ ಅನೇಕ ನಗರಗಳ, ಪಟ್ಟಣಗಳ, ಗ್ರಾಮಗಳ ಮನೆಮನೆಗಳಲ್ಲಿ ಉಳಿದು ಬಂದಿವೆ. ಹಬ್ಬಗಳಲ್ಲಿ ಅವನ್ನು ಓರಣವಾಗಿ ಕೂರಿಸಿ ಪುಜಿಸುವುದು ಮುಂದುವರಿದಿದೆ. ಈ ಗೊಂಬೆಗಳನ್ನು ಮರದ ಹೊಟ್ಟಿನಲ್ಲಿ ಇಲ್ಲವೆ ಜೇಡಿಮಣ್ಣಿನಲ್ಲಿ ಮಾಡಿರುತ್ತಾರೆ. ಚಂದನದ ಗೊಂಬೆಗಳೂ ಉಂಟು. ಈ ಗೊಂಬೆಗಳಿಗೆ ಬಟ್ಟೆ, ಆಭರಣಗಳನ್ನು ತೊಡಿಸಿ ಅಲಂಕರಿಸಿ ಪ್ರದರ್ಶಿಸುತ್ತಾರೆ. ದಸರೆಯ ಗೊಂಬೆಯ ಪ್ರದರ್ಶನ ಮನೆಯವರಿಗೊಂದು ಕಲಾ ಪ್ರದರ್ಶನಾವಕಾಶವನ್ನು ಒದಗಿಸುತ್ತದೆ. ಜೊತೆಗೆ ಗೊಂಬೆಯ ಎದುರು ಹೆಣ್ಣುಮಕ್ಕಳು ಕೋಲಾಟವಾಡುವ ಸಂಪ್ರದಾಯ ಹಿಂದಿನಿಂದ ನಡೆದು ಬಂದಿದೆ.
ಗ್ರಾಮದಿಂದ ಗ್ರಾಮಕ್ಕೆ ಸಾಗುವ ಮಾರಮ್ಮ, ಉಡುಗೋಲಜ್ಜಿಗಳ ಮರದ ವಿಗ್ರಹಗಳನ್ನು ಇಂದಿಗೂ ನೋಡಬಹುದಾಗಿದೆ. ಒಂದು ಊರಿನ ಗಡಿಯಿಂದ ಮತ್ತೊಂದು ಊರಿನ ಗಡಿಗೆ ಮಾರಮ್ಮನ ವಿಗ್ರಹವನ್ನು ಆಯಾ ಊರಿನ ಜನ ಸಾಗಿಸಿಕೊಂಡು ಹೋಗುತ್ತಾರೆ. ಹೀಗೆ ನೂರಾರು ಮೈಲಿಗಳ ಆಚೆ ಪ್ರಯಾಣ ಬೆಳೆಸಿ ಕೊನೆಗೆ ಸಮುದ್ರದಲ್ಲೊ ಕೆರೆಯಲ್ಲೊ ಅದನ್ನು ವಿಸರ್ಜನೆ ಮಾಡುತ್ತಾರೆ. ಊರಿಗೆ ಬರುವಂಥ ಪ್ಲೇಗು, ಕಾಲರ ಮುಂತಾದ ರೋಗರುಜಿನಗಳು ಸಾಮೂಹಿಕವಾಗಿ ಈ ದೇವತೆಯ ಮೂಲಕವಾಗಿ ಸಾಗಿ ಹೋಗಲಿ ಎಂಬರ್ಥದಲ್ಲಿ ಈ ದೈವವನ್ನು ರಚಿಸಿ, ಪುಜಿಸಿ, ಸಾಗಿಸುವ ಜನಪದ ನಂಬಿಕೆ ನಮ್ಮಲ್ಲಿ ಬಹಳ ಹಿಂದಿನಿಂದಲೂ ಬೆಳೆದುಬಂದಿದೆ.
ಗ್ರಾಮಗಳ ದೇವಾಲಯಗಳಲ್ಲಿ ತಲೆಭೂತ ಕೈಭೂತ ಸೋಮ ಮುಂತಾದ ದೈವದ ಮೂರ್ತಿಗಳನ್ನು ಕಾಣಬಹುದಾಗಿದೆ. ಆಯಾ ಗ್ರಾಮಗಳಲ್ಲಿ ಇರುವ ಕುಶಲಕರ್ಮಿಗಳು ಇವನ್ನು ಬಹಳ ಕಲಾತ್ಮಕವಾಗಿ ರಚಿಸಿಕೊಡುತ್ತಾರೆ. ಸಿರಿಯಾಳ ಷಷ್ಠಿ, ಗೋಕುಲಾಷ್ಟಮಿ, ಗಣಪತಿ ಮಹೋತ್ಸವ ಮೊದಲಾದ ಹಬ್ಬಗಳಲ್ಲಿ ಮನೆಯವರೇ ಎರೆಯ ಮಣ್ಣಿನಿಂದ ಆಯಾ ವಿಗ್ರಹಗಳನ್ನು ಮಾಡುವ ಹವ್ಯಾಸ ಇನ್ನೂ ಅನೇಕ ಕಡೆ ಉಳಿದು ಬಂದಿದೆ. ರಥೋತ್ಸವ ಮತ್ತು ಜಾತ್ರೆಗಳ ಸಮಯದಲ್ಲಿ ಹಳ್ಳಿಯ ಕಸಬುದಾರರು ಬೊಂಬೆಗಳನ್ನು ಮಾಡಿ ಬಣ್ಣ ಕಟ್ಟಿ ಮಾರಾಟಕ್ಕೆ ಇಡುವುದನ್ನು ಇಲ್ಲಿ ನೆನೆಯಬಹುದು. ಬಹುಮಟ್ಟಿಗೆ ಹಳ್ಳಿಯ ಮಕ್ಕಳಿಗೆ ಇಲ್ಲಿ ಸಿಗುವ ರಾಟೆ, ಕಿಸಗಾಲು ಗೊಂಬೆ, ಅಂಬೆಗಾಲು ಕೃಷ್ಣ, ಪೀಪಿ, ಕುದುರೆ, ಗಿಣಿ, ಗುಬ್ಬಿ, ರಾಜ, ರಾಣಿ-ಈ ವಸ್ತುಗಳೇ ಬಹು ಪ್ರಿಯವಾದ ಆಟದ ಸಾಮಾನುಗಳು.
ಬಿದಿರ ಬೊಂಬಿನಿಂದ, ಅರಗಿನಿಂದ, ಬಟ್ಟೆಗಳಿಂದ, ಕಪ್ಪೆಚಿಪ್ಪಿನಿಂದ ನಾನಾ ನಮೂನೆಯ ಗೊಂಬೆಗಳನ್ನು ರಚಿಸಲಾಗುತ್ತಿದೆ. ಭಾರತದ ಸರ್ಕಾರ ಈ ಗೊಂಬೆಗಳಿಗೆ ಬಹಳ ಪ್ರೋತ್ಸಾಹ ನೀಡಿ ಈ ಕಲೆಯ ಉಳಿವಿಗೆ ನೆರವಾಗಿದೆ.
ವಿಜ್ಞಾನ ಬೆಳೆದಂತೆಲ್ಲ ಕೈಕೆಲಸ ಹಿಂದಾಗಿ ಯಂತ್ರಗಳು ಪ್ರಾಮುಖ್ಯಕ್ಕೆ ಬರುತ್ತಿದೆ. ಅದರ ಪರಿಣಾಮವಾಗಿ ಪ್ಲಾಸ್ಟಿಕ್, ರಬ್ಬರ್ ಮೊದಲಾದವನ್ನು ಬಳಸಿಕೊಂಡು ಯಂತ್ರ ದಿಂದ ತಯಾರಿಸಿದ ಬಹು ಮುದ್ದಾದ ಗೊಂಬೆಗಳು ಈಗ ಜನಪ್ರಿಯವಾಗಿವೆ.