ಸೈಲ್ಲೂರಿಫಾರ್ಮೀಸ್ ಗಣದ ಸೈಲ್ಯೂರಿಡೀ ಕುಟುಂಬಕ್ಕೆ ಸೇರಿದ ಒಂದು ಬಗೆಯ ಸಿಹಿನೀರು ಮೀನಿಗಿರುವ ಸಾಮಾನ್ಯ ಹೆಸರು. ಓಂಪಾಕ್ ಬೈಮ್ಯಾಕ್ಯುಲೇಟಸ್ ಇದರ ವೈಜ್ಞಾನಿಕ ನಾಮ. ಮೀಸೆ ಮೀನು (ಕ್ಯಾಟ್ ಫಿಶ್) ಗಳ ಹತ್ತಿರದ ಸಂಬಂಧಿ. ದೊಮ್ಮೆ ಮೀನು ಪರ್ಯಾಯ ನಾಮ. ಏಷ್ಯದ ಆಫ್ಘಾನಿಸ್ತಾನದಿಂದ ಹಿಡಿದು ಚೀನ, ಭಾರತ, ಥೈಲೆಂಡ್ ದೇಶಗಳಲ್ಲಿ ಕಂಡುಬರುತ್ತದೆ. ಇದು ಭಾರತಾದ್ಯಂತ ಕಾಣಬರುತ್ತದೆ. ಕರ್ನಾಟಕದ ಕಾವೇರಿ ನದಿಯಲ್ಲಿ, ಅನೇಕ ಕೆರೆಗಳಲ್ಲಿ ಕಂಡುಬರುತ್ತದೆ. ಗರಿಷ್ಠ 30 ಸೆಂಮೀ ವರೆಗೆ ಬೆಳೆಯುವ ಮಧ್ಯಮ ಗಾತ್ರದ ಮೀನು. ಪಕ್ಕದಿಂದ ಪಕ್ಕಕ್ಕೆ ಚಪ್ಪಟೆಯಾದ ದೇಹ, ಎರಡು ಜೊತೆ ಮೀಸೆಗಳು, ಇವುಗಳಲ್ಲಿ ಒಂದು ಜೊತೆ ಗುದದ್ವಾರದ ಈಜುರೆಕ್ಕೆಯವರೆಗೂ ಚಾಚುವಂತಿರುವುದು, ಎದೆಯ ಈಜುರೆಕ್ಕೆಯ ಮೇಲ್ಭಾಗದಲ್ಲಿರುವ ಕಪ್ಪು ಮಚ್ಚೆ, ಕಪ್ಪು ಬಣ್ಣದ ಪಟ್ಟೆಗಳು ಮತ್ತು ಕಪ್ಪು ಅಂಚುಳ್ಳ ಗುದದ ಈಜು ರೆಕ್ಕೆ, ಕವಲೊಡೆದ ಬಾಲದ ಈಜು ರೆಕ್ಕೆ, ಇವು ಬೆಳ್ಳಿ ಬಣ್ಣದ ಗೊಡ್ಲೆ ಮೀನಿನ ಪ್ರಮುಖ ಗುಣಲಕ್ಷಣಗಳು.
ಗೊಡ್ಲೆ ಮೀನಿನ ಆಹಾರ ಪ್ರಧಾನವಾಗಿ ನೀರಿನಲ್ಲಿರುವ ಚಿಗಟಗಳು, ಸಣ್ಣ ಮೃದ್ವಂಗಿಗಳು, ಕಠಿಣ ಚರ್ಮಿಗಳು, ಇತರೆ ಬಗೆಯ ಮೀನುಗಳು, ಇತ್ಯಾದಿ. ಇದರ ಸಂತಾನೋತ್ಪತ್ತಿಯ ಕಾಲ ಜೂನ್ ನಿಂದ ಆಗಸ್ಟ್ ವರೆಗೆ. ಇದು ಇತರೆ ಮೀನುಗಳಿಗೆ ಮಾರಕವಾದ್ದರಿಂದ ಈ ಮೀನು ಸಾಕಲು ಯೋಗ್ಯವಾಗಿಲ್ಲ. ಆದರೆ ಇದರ ಮಾಂಸ ರುಚಿಯಾಗಿರುವುದರಿಂದ ಇದಕ್ಕೆ ಹೆಚ್ಚು ಬೇಡಿಕೆ ಇದ್ದೇ ಇದೆ. ದಾವಣಿ ಬಲೆಗಳು, ಎಸೆ ಬಲೆಗಳ ಸಹಾಯದಿಂದ ಈ ಮೀನುಗಳನ್ನು ಹಿಡಿಯುತ್ತಾರೆ.