ಬರ್ಸರೇಸೀ ಕುಟುಂಬಕ್ಕೆ ಸೇರಿದ ಒಂದು ಕಾಡುಮರ. ಅರೆನೆಲ್ಲಿ, ಬೋಳಮಟೆ, ಹಾಲಉಲಿಗೆ ಇದರ ಪರ್ಯಾಯ ನಾಮಗಳು. ಗಾರುಗ ಪಿನೇಟ ವೈಜ್ಞಾನಿಕ ಹೆಸರು. ಭಾರತಾದ್ಯಂತ ಮಿಶ್ರಪರ್ಣಪಾತಿ ಕಾಡುಗಳಲ್ಲಿ ತೇಗ ಮತ್ತು ಸಾಲ ವೃಕ್ಷಗಳ ಜೊತೆಯಲ್ಲಿ ಕಂಡುಬರುತ್ತದೆ. ಆಗ್ನೇಯ ಏಷ್ಯ ಮತ್ತು ಪೆಸಿಫಿಕ್ ಸಾಗರದ ಕೆಲವು ದ್ವೀಪಗಳಲ್ಲೂ ಇದರ ವ್ಯಾಪ್ತಿಯಿದೆ. ಸುಮಾರು 15 ಮೀ ಎತ್ತರಕ್ಕೆ ಬೆಳೆಯುವ ಮರ ಇದು. ಮುಖ್ಯ ಕಾಂಡವೇ ಸುಮಾರು 8 ಮೀ ಇದ್ದು ನೇರವಾಗಿ ಉರುಳೆಯಂತೆ ಬೆಳೆಯುತ್ತದೆ. ಮರದ ತೊಗಟೆ ಬೂದಿಮಿಶ್ರಿತ ಕಂದುಬಣ್ಣದ್ದು. ಆಗಿಂದಾಗ್ಗೆ ತೊಗಟೆ ಹಾಳೆಗಳಂತೆ ಕಳಚಿ ಬೀಳುತ್ತದೆ. ಎಲೆಗಳು ಸಂಯುಕ್ತ ಮಾದರಿಯವು; ಕೆಲವು ವೇಳೆ ಎಲೆಗಳ ಮೇಲೆ ಕೆಂಪುಬಣ್ಣದ ಗಂಟುಗಳನ್ನು ಗಮನಿಸಬಹುದು. ಹೂಗಳು ಹಳದಿ ಅಥವಾ ಹಸಿರುಮಿಶ್ರಿತ ಬಿಳಿಬಣ್ಣದವು; ಏಕಲಿಂಗಿಗಳಾಗಿರಬಹುದು ಇಲ್ಲವೆ ದ್ವಿಲಿಂಗಿಗಳಾಗಿರಬಹುದು. ಒಂದೇ ಮರದಲ್ಲಿ ಎರಡು ಬಗೆಗಳೂ ಇವೆ. ಹಣ್ಣು ಅಷ್ಟಿಫಲ ಮಾದರಿಯದು; ಆಕಾರ ಗುಂಡಗೆ; ಬಣ್ಣ ಹಳದಿಮಿಶ್ರಿತ ಹಸುರು ಬಣ್ಣದಿಂದ ಕಪ್ಪು ಬಣ್ಣದವರೆಗೂ ವ್ಯತ್ಯಾಸವಾಗುತ್ತದೆ. ಹಣ್ಣಿನಲ್ಲಿ 3-4 ಬೀಜಗಳಿರುತ್ತವೆ.


ಗೊದ್ದನಮರಕ್ಕೆ ಹೆಚ್ಚು ಬಿಸಿಲು ಬೇಕು. ಇದು ಕಡುಚಳಿಯನ್ನಾಗಲೀ ಶುಷ್ಕತೆಯನ್ನಾಗಲೀ ಸಹಿಸುವುದಿಲ್ಲ. ಆದರೆ ಕಾಳ್ಗಿಚ್ಚಿಗೆ ಬೇಗನೆ ತುತ್ತಾಗುವುದಿಲ್ಲ. ಮರವನ್ನು ಕಡಿದು ಹಾಕಿದಾಗ ಉಳಿಯುವ ಮೋಟಿನಿಂದ ಬೇಗನೆ ಚಿಗುರುತ್ತದೆ. ಅಲ್ಲದೆ ಯಥೇಚ್ಛವಾಗಿ ಬೇರುಸಸಿಗಳನ್ನೂ ಉತ್ಪಾದಿಸುತ್ತದೆ. ಇದರ ಸ್ವಾಭಾವಿಕ ಪುನರುತ್ಪತ್ತಿ ಬೀಜಗಳ ಮೂಲಕ. ಪ್ರತಿವರ್ಷ ಮಳೆಗಾಲದ ವೇಳೆಗೆ ಇದರ ಹಣ್ಣುಗಳು ಮಾಗಿ ನೆಲಕ್ಕೆ ಬಿದ್ದು ಬಿರಿಯುತ್ತವೆ. ಒಳಗಿನ ಬೀಜಗಳು ಮರು ವರ್ಷದ ಮಳೆಗಾಲದಲ್ಲಿ ಮೊಳೆತು ಸಸಿಗಳಾಗುತ್ತವೆ. ಗೊದ್ದನಮರವನ್ನು ಕೃತಕವಾಗಿ ವೃದ್ಧಿಸಲು ಬೀಜಗಳನ್ನೇ ಬಳಸಬಹುದಾದರೂ ಬೀಜಗಳು ಮೊಳೆಯಲು ಒಂದು ವರ್ಷ ಬೇಕಾಗುತ್ತದಲ್ಲದೆ ಸಸಿಗಳ ಬೆಳೆವಣಿಗೆ ನಿಧಾನವಾದ್ದರಿಂದ ಕಾಂಡ ತುಂಡುಗಳನ್ನು ನೆಟ್ಟು ಬೆಳೆಸುವುದೇ ವಾಡಿಕೆಯಲ್ಲಿರುವ ಮತ್ತು ಸೂಕ್ತವಾದ ಕ್ರಮವಾಗಿದೆ. ಇಂಥ ಗಿಡಗಳು ಶೀಘ್ರಗತಿಯಲ್ಲಿ ಬೆಳೆಯುತ್ತವೆ.


ಗೊದ್ದನಮರದ ಚೌಬೀನೆಯ ರಸಕಾಷ್ಠ ಬಿಳಿಯಬಣ್ಣದ್ದು. ಚೇಗು ಕೆಂಪುಮಿಶ್ರಿತ ಕಂದು ಬಣ್ಣದ್ದು. ಚೇಗು ಗಟ್ಟಿಯಾಗಿದೆ. ಚೌಬೀನೆಯನ್ನು ಗಾಳಿಯ ಸಹಾಯದಿಂದ ಒಣಗಿಸಬಹುದಾದರೂ ರಸಕಾಷ್ಠ ಸುಲಭವಾಗಿ ಒಣಗದು. ಇದರಿಂದಾಗಿ ರಸಕಾಷ್ಠವನ್ನು ಸೂಕ್ತ ವಿಧಾನಗಳಿಂದ ಸಂಸ್ಕರಿಸಬೇಕು. ಚೌಬೀನೆಯನ್ನು ಸುಲಭವಾಗಿ ಗರಗಸದಿಂದ ಕೊಯ್ಯಬಹುದು. ಅಲ್ಲದೆ ಇದು ಮರಗೆಲಸಗಳಿಗೆ ಒಗ್ಗುತ್ತದೆ. ಚೇಗಿನಿಂದ ಪೀಠೋಪಕರಣಗಳನ್ನು ತಯಾರಿಸಬಹುದು. ಸಣ್ಣ ದೋಣಿ, ಮರದ ಹಲಗೆ, ಪೆಟ್ಟಿಗೆ, ಪೀಪಾಯಿ, ಪ್ಲೈವುಡ್, ಮನೆಕಟ್ಟಲು ಬೇಕಾಗುವ ಮರದ ವಸ್ತುಗಳು ಮುಂತಾದವನ್ನು ತಯಾರಿಸಲು ಚೌಬೀನೆಯನ್ನು ಉಪಯೋಗಿಸುತ್ತಾರೆ. ಕೆಳದರ್ಜೆಯ ಪೆನ್ಸಿಲುಗಳು ಹಾಗೂ ಬೆಂಕಿಪೊಟ್ಟಣದ ತಯಾರಿಕೆಗೆ ಸಹ ಬಳಸುವುದುಂಟು. ಇದರಿಂದ ಒಳ್ಳೆಯ ದರ್ಜೆಯ ಇದ್ದಲನ್ನೂ ಪಡೆಯಬಹುದು. ಗೊದ್ದನಮರದ ತಿರುಳನ್ನು ಗೊಡ್ಡೆಮರದ ತಿರುಳಿನೊಂದಿಗೆ ಸೇರಿಸಿ ಕಂದುಬಣ್ಣದ ಕಾಗದವನ್ನು ತಯಾರಿಸಲು ಬಳಸುತ್ತಾರೆ.


ಗೊದ್ದನಮರದ ಹಣ್ಣುಗಳನ್ನು ಹಸಿಯಾಗಿ, ಬೇಯಿಸಿ ಹಾಗೂ ಉಪ್ಪಿನಕಾಯಿ ರೂಪದಲ್ಲಿ ತಿನ್ನಬಹುದು. ಹುಳಿಯಾಗಿರುವ ಇವಕ್ಕೆ ತಂಪುಕಾರಕ ಹಾಗೂ ಜೀರ್ಣಕಾರಕ ಗುಣಗಳಿವೆ. ಎಲೆಯ ರಸವನ್ನು ಜೇನು ಹಾಗೂ ಇತರ ವಸ್ತುಗಳೊಡನೆ ಉಬ್ಬಸ ನಿವಾರಣೆಗೆ ಬಳಸುತ್ತಾರೆ. ಫಿಲಿಪೀನ್ಸಿನಲ್ಲಿ ಇದರ ಬೇರಿನ ಕಷಾಯವನ್ನು ಪುಪ್ಫುಸ ಸಂಬಂಧವಾದ ರೋಗಗಳ ಚಿಕಿತ್ಸೆಯಲ್ಲಿ ಬಳಸುವುದಿದೆ. ಇದರ ಎಲೆಗಳು ಹಾಗೂ ಎಳೆ ಚಿಗುರುಗಳು ದನಕರುಗಳಿಗೆ ಒಳ್ಳೆಯ ಮೇವು. ಮರದ ತೊಗಟೆ ಹಾಗೂ ಎಲೆಯ ಮೇಲಿನ ಗಂಟುಗಳನ್ನು ಚರ್ಮ ಹದ ಮಾಡಲು ಉಪಯೋಗಿಸುತ್ತಾರೆ. ಗೊದ್ದನಮರಕ್ಕೆ ಬೆಂಕಿಯನ್ನು ನಿರೋಧಿಸುವ ಸಾಮಥರ್ಯ್‌ವಿರುವುದರಿಂದ ಮತ್ತು ಈ ಮರ ಸುಲಭವಾಗಿ ಬೆಳೆಯುವುದರಿಂದ ಇದನ್ನು ಅರಣ್ಯ ವೃದ್ಧಿಗೆ ಉಪಯೋಗಿಸುತ್ತಾರೆ.