ಗೊರಟೆ- ಅಕ್ಯಾಂತೇಸೀ ಕುಟುಂಬಕ್ಕೆ ಸೇರಿದ ಒಂದು ಪ್ರಸಿದ್ಧ ಸಸ್ಯಜಾತಿ. ಜಾತಿಯ ವೈಜ್ಞಾನಿಕ ಹೆಸರು ಬಾರ್ಲೀರಿಯ. ಸ್ಫಟಿಕದ ಗಿಡ, ಮುಳ್ಳು ಗೋರಂಟಿ, ಮುಳ್ಳು ಮದರಂಗಿ, ಗುಬ್ಬಿಮುಳ್ಳುಗಿಡ ಮುಂತಾದವು ಪರ್ಯಾಯ ನಾಮಗಳು. ಇದು ಸುಮಾರು 180 ಪ್ರಭೇದಗಳನ್ನೊಳಗೊಂಡಿದೆ. ಪ್ರಪಂಚದ ಉಷ್ಣವಲಯ ದೇಶಗಳಲ್ಲೆಲ್ಲ ಇವು ಕಾಣಸಿಗುತ್ತವೆ. ಭಾರತದಲ್ಲಿ 30 ಪ್ರಭೇದಗಳಿವೆ. ಇವುಗಳಲ್ಲಿ ಕೆಲವು ವನ್ಯವಾಸಿಗಳಾದರೆ (ಉದಾಹರಣೆಗೆ ಬಕ್ಸಿಫೋಲಿಯ, ಕುರ್ಟಾಲಿಕ, ಲಾಂಜಿಫೋಲಿಯ, ಸ್ಟ್ರೈಗೋಸ ಪ್ರಭೇದಗಳು) ಇನ್ನು ಕೆಲವು ತಮ್ಮ ಚೆಲುವಾದ ಹೂಗಳಿಂದಾಗಿ ಅಲಂಕಾರ ಸಸ್ಯಗಳೆಂದು ಹೆಸರಾಗಿವೆ (ಉದಾಹರಣೆಗೆ ಕ್ರಿಸ್ಟೇಟ, ಗಿಬ್ಸೋನಿಯೈ, ಪ್ರಿಯೋನೈಟಿಸ್, ನಾಕ್ಟಿಫ್ಲೋರ ಮುಂತಾದ ಪ್ರಭೇದಗಳು).
ಎಲ್ಲ ಪ್ರಭೇದಗಳೂ ಸಾಮಾನ್ಯವಾಗಿ 2/3 - 2 ಮೀ. ಎತ್ತರಕ್ಕೆ ಬೆಳೆಯುವ ಪೊದೆ ಸಸ್ಯಗಳು. ಎಲೆಗಳು ಸರಳ; ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಕೆಲವು ಪ್ರಭೇದಗಳ ಎಲೆಗಳ ಕಂಕುಳಲ್ಲಿರುವ ವೃಂತಪತ್ರಗಳು ಮುಳ್ಳುಗಳಾಗಿ ಪರಿವರ್ತಿತವಾಗಿವೆ. ಹೂಗಳು ಎಲೆಗಳ ಕಂಕುಳಲ್ಲಿ ಸಮಾವೇಶಗೊಂಡಿವೆ. ಹೂಗಳ ಬಣ್ಣ ವಿವಿಧ ಪ್ರಭೇದಗಳಲ್ಲಿ ವಿವಿಧ ರೀತಿ. ಉದಾಹರಣೆಗೆ ಕ್ರಿಸ್ಟೇಟ ಪ್ರಭೇದದ ಬೇರೆ ಬೇರೆ ತಳಿಗಳಲ್ಲಿ ಹೂಗಳ ಬಣ್ಣ ಊದಾಮಿಶ್ರಿತ ನೀಲಿ, ಬಿಳಿ, ನಸುಗೆಂಪು, ಗುಲಾಬಿ ಮುಂತಾಗಿಯೂ ಗಿಬ್ಸೋನಿಯೈ ಪ್ರಭೇದದಲ್ಲಿ ಕಡುನೀಲಿಯಾಗಿಯೂ ಪ್ರಿಯೋನೈಟಿಸ್ ಪ್ರಭೇದದಲ್ಲಿ ಕಿತ್ತಳೆ ಇಲ್ಲವೆ ಹಳದಿಯಾಗಿಯೂ ಇರುತ್ತದೆ. ಹೂಗಳು ಚಳಿಗಾಲದವೇಳೆಗೆ ಅರಳುತ್ತವೆ. ಗೊರಟೆಯನ್ನು ಕಾಂಡತುಂಡುಗಳಿಂದ ಇಲ್ಲವೆ ಬೀಜಗಳಿಂದ ವೃದ್ಧಿಸಬಹುದು. ಗೊರಟೆಗೆ ಔಷಧೀಯ ಗುಣಗಳೂ ಉಂಟು. ಇದರ ಎಲೆಗಳಿಗೆ ಕಹಿರುಚಿಯಿರುತ್ತದೆ. ಎಲೆಗಳ ರಸವನ್ನು ಸಕ್ಕರೆ ಮತ್ತು ಜೇನುತುಪ್ಪಗಳೊಂದಿಗೆ ಬೆರೆಸಿ ಕಫಹಾರಿಯಾಗಿ ಬಳಸುತ್ತಾರೆ. ಹುಣ್ಣು ಮತ್ತು ಬಾವುಗಳಿಗೆ ಇದರ ಬೇರಿನ ಸರಿಯನ್ನು ಹಚ್ಚುವುದುಂಟು.
(ಎಸ್‍ಐ.ಎಚ್.)