ಎಂ.ಗೋವಿಂದ ಪೈ (ಕ್ರಿ.ಶ.1883-1963). ಕನ್ನಡದ ಹೆಸರಾಂತ ವಿಮರ್ಶಕ, ಕವಿ. ರಾಷ್ಟ್ರಕವಿ ಪ್ರಶಸ್ತಿಗೆ ಭಾಜನರಾದವರು. ಅನೇಕ ವಿಧದಲ್ಲಿ ಕನ್ನಡ ನಾಡು ನುಡಿಗಳ ಏಳಿಗೆಗೆ, ಏಕೀಕರಣಕ್ಕೆ ಕೆಲಸ ಮಾಡಿದವರಲ್ಲಿ ಮುಖ್ಯರು. ಆಸ್ತಿ ಮನೆ ಎಲ್ಲ ಮಂಜೇಶ್ವರದಲ್ಲಿದ್ದು ಅಲ್ಲಿಯೇ ಇವರು ನೆಲೆ ನಿಂತರಾದರೂ ಇವರ ಹೆಸರಿನ ಮೊದಲಿಗೆ ಬರುವ ಎಂ. ಎಂಬುದು ಮಂಗಳೂರಿನ ಪ್ರತೀಕವೇ ಹೊರತು ಮಂಜೇಶ್ವರದ್ದಲ್ಲ. ಹುಟ್ಟಿದ್ದು ಮಂಗಳೂರಿನಲ್ಲಿ. ಬೆಳೆದದ್ದು ಕಡಲಕರೆಯ ನಾಡಾದ ಮಂಜೇಶ್ವರದಲ್ಲಿ. ಇವರು ಗೌಡ ಸಾರಸ್ವತ ಸಮಾಜದ ಮಂಗಳೂರಿನ ಬಾಪೈ ಮನೆತನಕ್ಕೆ ಸೇರಿದವರು.
ಪೈ ಅವರ ಆರಂಭದ ವಿದ್ಯಾಭ್ಯಾಸ ಹುಟ್ಟೂರಾದ ಮಂಗಳೂರಿನಲ್ಲಿಯೇ ನಡೆಯಿತು. ಮಂಗಳೂರು ಆಗಿನ ಕಾಲಕ್ಕೆ ತುಂಬ ಎಚ್ಚೆತ್ತ ಪಟ್ಟಣವಾಗಿತ್ತು. ಬಾಸೆಲ್ ಮಿಷನಿನ ಪಾದ್ರಿಗಳೂ ಸೇರಿದಂತೆ ದಕ್ಷರೂ ಜಾಣರೂ ಆದ ಹಲವರ ದುಡಿಮೆಯ ಫಲವಾಗಿ ಮಂಗಳೂರು ಆಗ ವಿದ್ಯೆ, ಸಂಸ್ಕೃತಿಗಳ ಒಂದು ಹಿರಿಯ ಕೇಂದ್ರವಾಗಿತ್ತು. ಅಲ್ಲದೆ ಹೊಸಗನ್ನಡದ ಮಾಸಪತ್ರಿಕೆ ಸುವಾಸಿನಿ ಇಲ್ಲಿಂದಲೇ ಪ್ರಕಟವಾಗುತ್ತಿತ್ತು. ಬೋಳಾರ ವಿಠಲರಾಯರು, ಬೆನಗಲ್ ರಾಮರಾಯರು, ಪಂಜೆ ಮಂಗೇಶರಾಯರು ಮುಂತಾದ ಹಲವಾರು ಭಾಷಾ ಸೇವಕರು ಈ ಕೇಂದ್ರದಲ್ಲಿ ಇದ್ದುಕೊಂಡು ನಾಡು, ನುಡಿಗಳಿಗೆ ಸೇವೆ ಸಲ್ಲಿಸುತ್ತಿದ್ದರು.
ತರುಣ ಗೋವಿಂದ ಪೈಗಳು ಇಂಥ ಸುಸಂಸ್ಕೃತ ಆವರಣದಲ್ಲಿ ಬೆಳೆದರು. ಪಂಜೆ ಮಂಗೇಶರಾಯರಿಂದ ನೇರವಾಗಿ ಶಾಲೆಯಲ್ಲಿ ಪಾಠ ಕಲಿತರು. ಚುರುಕು ಬುದ್ಧಿಯ ಭಾವುಕ ಮನೋಧರ್ಮದ ತರುಣನ ಮೇಲೆ ಈ ಪವಿತ್ರ ವಾತಾವರಣದ ಪ್ರಭಾವ ಬಲವಾಗಿ ಬಿತ್ತು. ಅನಂತರ ಪೈ ಪ್ರೌಢ ವಿದ್ಯಾಭ್ಯಾಸಕ್ಕೆಂದು ಮದ್ರಾಸಿಗೆ ಹೋಗಿ ಜಾಣ ಎನಿಸಿಕೊಂಡರು. ತಂದೆಯ ತೀವ್ರ ಕಾಯಿಲೆಯಿಂದಾಗಿ, ಅನಂತರ ಹಠಾತ್ತನೆ ಒದಗಿದ ಅವರ ಮರಣದಿಂದಾಗಿ ಬಿ.ಎ. ಪದವಿಯನ್ನು ಪಡೆಯಲಾಗಲಿಲ್ಲ.
ಅಪ್ಪ ತೀರಿಕೊಂಡ ಮೇಲೆ ಸಂಸಾರದ ಹೊಣೆ ಹೊತ್ತು ಊರಿನಲ್ಲಿಯೇ ನಿಂತರು. ಆದರೆ ಇವರ ಸಾಂಸಾರಿಕ ಜೀವನವೂ ಅಂಥ ಸುಖಮಯವೇನೂ ಆಗಲಿಲ್ಲ. ದಾಂಪತ್ಯ ಜೀವನದ ಹರೆಯದಲ್ಲಿಯೇ ಪತ್ನಿಯನ್ನು ಕಳೆದುಕೊಂಡರು. ಮತ್ತೆ ಮದುವೆಯಾಗಲಿಲ್ಲ. ಮಕ್ಕಳಿಲ್ಲವೆಂದು ವ್ಯಥೆಪಡಲಿಲ್ಲ. ತಮ್ಮ ಕುಟುಂಬದಲ್ಲಿಯೇ ಬೆಳೆಯುತ್ತಿದ್ದ ತಮ್ಮನ ಮಕ್ಕಳಲ್ಲಿಯೇ ಆ ಅಕ್ಕರೆಯನ್ನು ತೋರಿಸುತ್ತ ಅವರನ್ನು ಬೆಳೆಸಿದರು. ಕಿರಿಯ ಸೋದರ ಸುಬ್ಬರಾಯ ಪೈಗಳು ಅಣ್ಣನಿಗೆ ನೆರವಾಗುತ್ತ ಮನೆಗೆ ಬಂದ ಅತಿಥಿಗಳ ಸತ್ಕಾರಾದಿ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದರು.
ಗೋವಿಂದ ಪೈಗಳು ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯಾಚಾರ್ಯರುಗಳಲ್ಲಿ ಅಗ್ರಪಂಕ್ತಿಗೆ ಸೇರಿದವರು. ಪಾಂಡಿತ್ಯದಿಂದ, ಸಂಶೋಧನೆಯಿಂದ, ನಯ ವಿನಯಗಳಿಂದ, ಸರಳತೆಯಿಂದ ಜನತೆಯ ಸ್ನೇಹ ಗೌರವಗಳನ್ನಿವರು ಸಂಪಾದಿಸಿದರು. ತನು ಕನ್ನಡ, ಮನ ಕನ್ನಡ, ನುಡಿ ಕನ್ನಡ ಎಂದು ಹಾಡಿದ ರಾಷ್ಟ್ರಕವಿ ಗೋವಿಂದ ಪೈಗಳ ವ್ಯಕ್ತಿತ್ವ ಘನವಾದುದು.
ಗೋವಿಂದ ಪೈಗಳ ಮೊತ್ತಮೊದಲಿನ ಲೇಖನ 1900ರಲ್ಲಿ ಸುವಾಸಿನಿ ಪತ್ರಿಕೆಯಲ್ಲಿ ಪ್ರಕಟವಾಯಿತು. 1962ರಲ್ಲಿ ಪ್ರಕಟಗೊಂಡ ಮಂಜೇಶ್ವರ ದೇವಸ್ಥಾನದ ಮೇಲಿನ ಲೇಖನ ಇವರ ಕೊನೆಯ ಬರೆವಣಿಗೆಯಾಯಿತು. ಹೀಗೆ ಸುಮಾರು 62 ವರ್ಷಗಳ ವರೆಗೆ ಸತತವಾಗಿ ವಾಙ್ಮಯ ಸೇವೆಯಲ್ಲಿ ತೊಡಗಿದ್ದು ಕನ್ನಡ ಸಾಹಿತ್ಯವನ್ನಿವರು ಶ್ರೀಮಂತ ಗೊಳಿಸಿದರು. ಇವರು ಬರೆದದ್ದು ಗಾತ್ರದಲ್ಲಿ ಸ್ವಲ್ಪವೇ ಆದರೂ ಇವರ ಬರೆವಣಿಗೆ ಪ್ರೌಢವೂ ವಿದ್ವತ್ಪೂರ್ಣವೂ ಮೌಲಿಕವೂ ಆಗಿದೆ.
ಸಂಶೋಧನೆ, ಪ್ರಬಂಧ, ಕವಿತೆ ಮತ್ತು ನಾಟಕ - ಈ ಮೂರು ಮಾರ್ಗಗಳಲ್ಲಿ ಪೈಗಳ ಸಾಹಿತ್ಯವಾಹಿನಿ ಪ್ರವಹಿಸಿದೆ. ಸುವಾಸಿನಿ ಎಂಬಿವರ ಕವನ ಅದೇ ಹೆಸರಿನ ಪತ್ರಿಕೆಯಲ್ಲಿ ಪ್ರಕಟವಾಗಿ (1900) ಆ ಪತ್ರಿಕೆ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗಿಟ್ಟಿಸಿತು. ಅನಂತರ ನವೀನ ಚಂದ್ರಸೇನರ ಬಂಗಾಳಿ ಕೃಷ್ಣಚರಿತೆಯ ಗದ್ಯಾನುವಾದ (1909) ; ಮತ್ತು ಸಿಗಾಲ ಸುತ್ತ ಎಂಬ ಬೌದ್ಧ ಸೂತ್ರಗಳ (1911) ಕನ್ನಡ ಅನುವಾದಗಳು ಸ್ವದೇಶಾಭಿಮಾನಿ ಪತ್ರಿಕೆಯಲ್ಲಿ ಪ್ರಕಟವಾದುವು. ಇವರ ಕವನ ಸೃಷ್ಟಿಯೂ ಧರ್ಮ ಮತ್ತು ಚರಿತ್ರೆಗೆ ಸಂಬಂಧಿಸಿದ ವ್ಯಾಸಂಗವೂ ಒಟ್ಟೊಟ್ಟಿಗೆ ಸಾಗಿದವು. ಇದೇ ಕಾಲಕ್ಕೆ (1911), ಪ್ರಾಸವನ್ನು ಇಟ್ಟು, ಬಿಟ್ಟು ಪದ್ಯಗಳನ್ನು ರಚಿಸುವ ಹಲವು ಪ್ರಯೋಗಗಳನ್ನಿವರು ಕೈಕೊಂಡರು. ಆ ಮುಂದೆ, ಮಂಜೇಶ್ವರಕ್ಕೆ ಬರುತ್ತಿದ್ದ ಬುದ್ಧಿಜೀವಿಗಳೊಡನೆ ಪ್ರಾಕ್ತನ ವಿಷಯಗಳನ್ನು ಚರ್ಚಿಸುವುದರಲ್ಲಾಗಲಿ, ಕವಿಚರಿತ್ರಕಾರರೇ ಮೊದಲಾದವರೊಡನೆ ಪತ್ರವ್ಯವಹಾರದಲ್ಲಾಗಲಿ ತೊಡಗಿದ್ದರಾದರೂ ಸಂಶೋಧನಾತ್ಮಕ ಬರೆವಣಿಗೆಯಲ್ಲಿ ಇನ್ನೂ ತೊಡಗಿರಲಿಲ್ಲ. 1924ರ ಬೆಳಗಾಂವಿ ಸಾಹಿತ್ಯ ಸಮ್ಮೇಳನದ ಕಾಲಕ್ಕೆ ಇವರು ಒಬ್ಬ ಉದಯೋನ್ಮುಖ ಕವಿ ಎಂಬ ಹೆಸರನ್ನು ಮಾತ್ರ ಗಳಿಸಿದ್ದರು.
ಪೈಗಳ ಸಂಶೋಧನಾತ್ಮಕ ಬರೆವಣಿಗೆ ಪ್ರಾರಂಭವಾದದ್ದು 1924ರಲ್ಲಿ. ಮುಂದಣ ಒಂದೊಂದು ವರ್ಷಕ್ಕೆ ಸುಮಾರು ಏಳೆಂಟು ಸಂಶೋಧನ ವಿಷಯಗಳನ್ನು ಆರಿಸಿಕೊಂಡು ಬರೆಯುತ್ತ ಹೋದರು. ಭಾರತೀಯ ಇತಿಹಾಸಕಾರರಿಗೆ ಹೆಚ್ಚು ಹಿಡಿಸಬಹುದಾದ ಲೇಖನಗಳನ್ನು ಇಂಗ್ಲಿಷಿನಲ್ಲಿ ಬರೆದರು. ಅರಸುಮನೆತನಗಳ ವಂಶಾವಳಿ, ಕವಿಕಾವ್ಯಗಳ ಕಾಲನಿರ್ಣಯ, ಈ ಕೆಲಸದ ಮಧ್ಯೆ ಕವಿತಾ ರಚನೆ - ಈ ಪರಿಪಾಠ 1945 ರ ವರೆಗೆ ನಡೆಯಿತು. ಕವಿತೆ ಮತ್ತು ಸಂಶೋಧನೆ ಇವೆರಡರಲ್ಲಿ ನಿಶ್ಚಿತವಾದ ಯಾವ ಕ್ರಮವನ್ನೂ ತಾವು ಅನುಸರಿಸಿದವರಲ್ಲ ಎಂಬ ಮಾತನ್ನು ಪೈಯವರೇ ತಮ್ಮ ಆತ್ಮಕಥನದಲ್ಲಿ ಹೇಳಿಕೊಂಡಿದ್ದಾರೆ. ಗಿಳಿವಿಂಡು ಕವನಸಂಗ್ರಹ 1930 ರಲ್ಲಿ ಪ್ರಕಟವಾಯಿತು. ಪೈ ಅವರು ನಾಟಕ ಕ್ಷೇತ್ರದಲ್ಲಿ ವ್ಯವಸಾಯ ಮಾಡಲು ಮನಸ್ಸನ್ನು ತೊಡಗಿಸಿದ್ದು 1946 -47 ರಲ್ಲಿ. ಹೀಗೆ 1927ರಿಂದ 1947ರ ವರೆಗಿನ 20 ವರ್ಷಗಳ ಅವಧಿ ಪೈಗಳ ಬರೆವಣಿಗೆಯ ಉಚ್ಛ್ರಾಯಕಾಲ ಎಂದು ಹೇಳಬಹುದು. ಅನಂತರವೂ ಬರೆವಣಿಗೆ ಮುಂದೆ ಸಾಗಿತಾದರೂ ಅದರ ಗತಿ ಮಂದವಾಯಿತು. 1953ರ ಹೊತ್ತಿಗೆ, ಎಂದರೆ ಪೈ ಅವರ 70ನೆಯ ವಯಸ್ಸಿನ ಸುಮಾರಿಗೆ ಲೇಖನ ವ್ಯವಸಾಯ ತೀರ ಕುಂಠಿತವಾಯಿತು. ಕೊನೆಯದಾದ ಮಂಜೇಶ್ವರ ದೇವಸ್ಥಾನ ಲೇಖನ ಬಹುಪ್ರಯಾಸದಿಂದಲೇ ಸಿದ್ಧವಾಯಿತಲ್ಲದೆ ಅದರ ಪ್ರಕಟಣೆಯೂ ಕವಿಯ ಮರಣಾನಂತರವೇ ಆಯಿತು.
ಪೈಗಳ ಸಂಶೋಧನ ಕ್ಷೇತ್ರ ಇತಿಹಾಸ, ಹಳಗನ್ನಡ ಕವಿಕಾವ್ಯ, ಹೊಸಗನ್ನಡ ಸಾಹಿತ್ಯ - ಇವಕ್ಕೆ ಸಂಬಂಧಿಸಿದೆ. ಇತಿಹಾಸಕ್ಕೆ ಸಂಬಂಧಿಸಿದ ಲೇಖನಗಳಲ್ಲಿ ತಮ್ಮ ಪೂರ್ವಜರಾದ ಗೌಡ ಸಾರಸ್ವತರ ಮೂಲಕ್ಕೆ ಸಂಬಂಧಿಸಿದ ಸಂಶೋಧನೆ ಅತ್ಯಂತ ಮಹತ್ತ್ವಪೂರ್ಣವಾದುದು. ಹಲವು ಪುರಾಣಗಳನ್ನೂ ಶಾಸನಗಳನ್ನೂ ಕೂಲಂಕಷವಾಗಿ ಪರಿಶೀಲಿಸಿ ಸಾರಸ್ವತರ ಉಲ್ಲೇಖ ಎಲ್ಲೆಲ್ಲಿ ಬಂದಿದೆ ಎಂಬುದನ್ನು ಗುರುತಿಸಿ ಫ್ಲ್ಯಾಷಸ್ ಫ್ರಮ್ ದಿ ಪಾಸ್ಟ್ ಎಂಬ ಲೇಖನವನ್ನು ಬರೆದರು. ಅದೇ ಮುಂದೆ ಮತ್ತಷ್ಟು ಘನೀಭೂತವಾಗಿ ನಮ್ಮ ಹಿರಿಯರನ್ನು ಕುರಿತು - ಎಂಬ ಲೇಖನದಲ್ಲಿ (ಜೀವೋತ್ತಮ, 1955) ನಿರ್ಣಯಾತ್ಮಕ ರೂಪ ತಾಳಿತು. ಸಾರಸ್ವತರು ಮೂಲತಃ ಪಂಜಾಬದ ಸರಸ್ವತೀ ನದೀತೀರದವರೆಂದು ಸಾಧಾರವಾಗಿ ಹೇಳಿದುದಲ್ಲದೆ, ಕೊಂಕಣಿ ಭಾಷೆಯ ಮೂಲದ ಬಗ್ಗೆಯೂ ಆಳವಾದ ಸಂಶೋಧನೆಯನ್ನು ನಡೆಸಿ ಅದು ಮರಾಠಿ ಜನ್ಯವಲ್ಲ, ಮಾಗಧೀ ಪ್ರಾಕೃತದಿಂದ ಜನಿಸಿದ ಭಾಷೆ ಎಂಬುದನ್ನು ಪೈಗಳು ಸ್ಥಾಪಿಸಿದ್ದಾರೆ. ಅಷ್ಟೇ ಅಲ್ಲದೆ ಮರಾಠಿಯೂ ಈಚಿನ ಕಾಲದ್ದಾದ ಮಹಾರಾಷ್ಟ್ರ ಪ್ರಾಕೃತದಿಂದ ಹುಟ್ಟಿದ್ದಾದುದರಿಂದ ಕೊಂಕಣಿ ಭಾಷೆ ಮರಾಠಿಗಿಂತಲೂ ಪ್ರಾಚೀನ ಎಂದೂ ಮಂಜೇಶ್ವರದ ಅನಂತೇಶ್ವರ ದೇವಾಲಯವೂ ಮೂಲತಃ ಸಾರಸ್ವತರ ದೇವಸ್ಥಾನವೇ ಎಂದೂ ಪೈಗಳ ಅನಿಸಿಕೆ.
ಇನ್ನೊಂದು ಪ್ರಮುಖ ಸಂಶೋಧನೆ ತುಳುನಾಡಿನ ಇತಿಹಾಸವನ್ನು ಕುರಿತದ್ದು. 1927ರಲ್ಲಿ ಮೊದಲು ರೂಪುಗೊಂಡು ಕೊನೆಗೆ 1947ರಲ್ಲಿ ತುಳುನಾಡು ಪೂರ್ವಸ್ಮೃತಿ ಎಂಬ ಹೆಸರಿನಲ್ಲಿ ಪ್ರಚುರಗೊಂಡ ಲೇಖನದಲ್ಲಿ 20 ವರ್ಷಗಳ ಸತತ ಸಂಶೋಧನೆಯ ಸಾರವಿದೆ. ಇದರಲ್ಲಿ ತುಳುನಾಡ ಹೆಸರಿನ ಉತ್ಪತ್ತಿ, ಪ್ರಾಚೀನತೆಗಳನ್ನು ಕುರಿತು ವಿಚಾರ ಮಾಡುತ್ತ 2ನೆಯ ಶತಮಾನದಿಂದ 15ನೆಯ ಶತಮಾನದ ವರೆಗೆ ಆಳಿದ ಆಳುಪರೆಂಬ ರಾಜಮನೆತನದ ಇತಿಹಾಸವನ್ನು ಹೇಳಿರುವುದಲ್ಲದೆ ಇವರಲ್ಲಿ ಪ್ರಮುಖನಾದ ಭೂತಾಳ ಪಾಂಡ್ಯ ಆಳುಪ ಮನೆತನದವನೇ ಎಂಬುದನ್ನು ನಿರ್ಧರಿಸಿದ್ದಾರೆ. ಅಲ್ಲಿನ ಧಾರ್ಮಿಕ ಇತಿಹಾಸವನ್ನು ವಿವರವಾಗಿ ತಿಳಿಸುತ್ತ ನಾಥ ಸಂಪ್ರದಾಯದ ಪ್ರಭಾವವನ್ನೂ ಅಲ್ಲಿನ ಶಿವಲಿಂಗಕ್ಕೆ ಮಂಜುನಾಥ ಎಂದು ಹೆಸರು ಬರಲು ಈ ಸಂಪ್ರದಾಯದ ಪ್ರಭಾವವೇ ಕಾರಣವೆಂಬುದನ್ನೂ ಹೇಳಿದ್ದಾರೆ. ತುಳುನಾಡಿನಲ್ಲಿ ಜನಿಸಿದ ಮಧ್ವಾಚಾರ್ಯ, ರತ್ನಾಕರವರ್ಣಿ, ಪಾರ್ತಿಸುಬ್ಬ, ಮುದ್ದಣ ಮೊದಲಾದ ವ್ಯಕ್ತಿಗಳ ವಿಷಯದಲ್ಲಿದ್ದ ಸಂದಿಗ್ಧತೆಗಳನ್ನು ಪರಿಹರಿಸಿದ್ದಾರೆ.
ಕರ್ನಾಟಕಕ್ಕೆ ಸಂಬಂಧಿಸಿದ ವಿಷಯದಲ್ಲಿ ಹೆಚ್ಚಿನ ಸಂಶೋಧನೆ ನಡೆಸಿ ದಕ್ಷಿಣಕ್ಕೆ ಭದ್ರಬಾಹು ಮುನಿಯೊಂದಿಗೆ ಬಂದ ದೊರೆ ಚಂದ್ರಗುಪ್ತ ಮೌರ್ಯನಲ್ಲ, ಮಧ್ಯ ಭಾರತದ ಉಜ್ಜಯಿನಿಯಲ್ಲಿ ರಾಜ್ಯಭಾರ ಮಾಡುತ್ತಿದ್ದ ಸಂಪ್ರತಿ ಚಂದ್ರಗುಪ್ತ ಎಂದು ನಿರ್ಣಯಿಸಿ ಆತ ಕರ್ನಾಟಕಕ್ಕೆ ಬಂದ ಕಾಲ ಪ್ರ.ಶ.ಪು. 300 ಅಲ್ಲ, ಪ್ರ.ಶ.ಪು. 250 ಎಂದೂ ಇವರೇ ಪ್ರಪ್ರಥಮವಾಗಿ ಕರ್ನಾಟಕಕ್ಕೆ ಕಾಲಿರಿಸಿದ ಜೈನರು ಎಂದೂ ಇವರು ದಿಗಂಬರ ಶಾಖೆಯವರೆಂದೂ ಪೈಗಳು ನಿರ್ಣಯಿಸಿದ್ದಾರೆ. ಅನಂತರ ಟಾಲೆಮಿಯ ಪುಸ್ತಕದಲ್ಲಿ ಬಂದಿರುವ ಕರ್ನಾಟಕದ ಊರುಗಳನ್ನು ಗುರುತಿಸಿದ್ದಾರೆ. ಕೆಲವು ಪ್ರಾಚೀನ ಕರ್ನಾಟಕದ ರಾಜಮನೆತನಗಳ, ಅದರಲ್ಲೂ ಸಾತವಾಹನ, ಪುನ್ನಾಟ, ಗಂಗ ಮತ್ತು ಕದಂಬರ ಇತಿಹಾಸವನ್ನು ಅಧಿಕೃತವಾಗಿ ಸಂಶೋಧಿಸಿ ಬರೆದಿದ್ದಾರೆ.
ಕರ್ನಾಟಕವಷ್ಟೇ ಅಲ್ಲದೆ ಭಾರತೀಯ ಇತಿಹಾಸಕ್ಕೂ ಸಂಬಂಧಿಸಿದಂತೆ ಸಂಶೋಧನೆ ನಡೆಸಿ, ಸೆಲ್ಯೂಕಸನನ್ನು ಸೋಲಿಸಿದ ಚಂದ್ರಗುಪ್ತ ಬಸಿಲೆಸ್ ಎಂಬ ಬಿರುದನ್ನು ಪಡೆದಿದ್ದಿರಬೇಕೆಂದೂ ಅದನ್ನು ವಿಶಾಖದತ್ತ ತನ್ನ ಮುದ್ರಾರಾಕ್ಷಸ ನಾಟಕದಲ್ಲಿ ವೃಷ (ಶೂದ್ರ) ಎಂದು ತಪ್ಪಾಗಿ ಗ್ರಹಿಸಿ ಅದನ್ನು ಚಾಣಕ್ಯನ ಬಾಯಲ್ಲಿ ಹೇಳಿಸಿರುವನೆಂದೂ ಹೇಳಿದ್ದಾರೆ. ಅಲ್ಲದೆ ಭಾರತ, ಗ್ರೀಕ್ ಸಂಬಂಧವನ್ನು ಬೇಸ್ನಗರ ಎಂಬಲ್ಲಿಯ ಗರುಡಗಂಬದ ಮೇಲಿದ್ದ ಪ್ರಾಕೃತ ಭಾಷೆಯ ಶಾಸನದಿಂದ (ಪ್ರ.ಶ.ಪು. 105) ನಿರ್ಧರಿಸಿದ್ದಾರೆ. ಇದರ ಜೊತೆಗೆ ಹೊರಗಿನಿಂದ ಭಾರತಕ್ಕೆ ಪ್ರಸಕ್ತ ಶಕೆಯ ಆರಂಭದಲ್ಲಿ ಬಂದು ಆಳಿದ ಮಾಬಸ್ ರಾಜನಿಂದ (ಪ್ರ.ಶ.ಪು. 105) ಆರಂಭವಾದ ಶಕರಾಜರ ಆಳಿಕೆಯ ಮತ್ತು ಅವರ ಯುದ್ಧಯಾತ್ರೆಗಳ ಕಾಲಗಳನ್ನು ನಿರ್ಧರಿಸಿದ್ದಾರೆ.
ಶಕರಾಜನನ್ನು ಸೋಲಿಸಿ 78ರಲ್ಲಿ ಸಾತವಾಹನ ಶಕಯುಗವನ್ನು ಸ್ಥಾಪಿಸಿದಂತೆ 136-137 ಗುಪ್ತ ವಲ್ಲಭೀ ಯುಗಗಳು ಒಂದೇ ಎಂದೂ ಆಲ್ಬೆರೂನಿ ಹೇಳಿದ ಕಾಲ ತಪ್ಪೆಂದೂ 272ರಂದು ಆರಂಭವಾದ ಗುಪ್ತಯುಗ 366ರಲ್ಲಿ ಲುಪ್ತವಾದ ಮೇಲೆಯೇ ವಲಭೀಯುಗ ಆರಂಭವಾಯಿತೆಂದೂ ಹೊಸ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಪ್ರಾಚೀನ ಭಾರತದಲ್ಲಿ ರಾಜ್ಯವಾಳಿದ ವಿಂಧ್ಯಪ್ರದೇಶದ ವಾಕಾಟಕರ (174-515) ಮತ್ತು ದಕ್ಷಿಣ ಪಲ್ಲವರ (87-900) ಚರಿತ್ರೆಯನ್ನು ಬರೆದಿದ್ದಾರೆ.
ಧಾರ್ಮಿಕ ವಿಷಯಗಳಲ್ಲಿನ ಸಂಶೋಧನೆಯಲ್ಲಿಯೂ ಪೈಗಳ ಶುದ್ಧ ಐತಿಹಾಸಿಕ ದೃಷ್ಟಿಯನ್ನು ಕಾಣಬಹುದು. ಆಯಾ ಮತಧರ್ಮಗಳ ಜಿಜ್ಞಾಸೆಗೆ ತೊಡಗದೆ ಜೈನ, ಬೌದ್ಧ, ವೀರಶೈವ-ಇವುಗಳಿಗೆ ಸಂಬಂಧಿಸಿದಂತೆ ಕೆಲವು ಐತಿಹಾಸಿಕ ಅಂಶಗಳನ್ನೂ ವ್ಯಕ್ತಿಗಳ ಜೀವನ ಕಾಲಗಳನ್ನೂ ಕುರಿತು ಇವರು ಪ್ರೌಢವಾಗಿ ವಿಚಾರ ನಡೆಸಿದ್ದಾರೆ. ಗೊಮ್ಮಟೇಶ್ವರ, ಪಾರ್ಶ್ವನಾಥ ತೀರ್ಥಂಕರ, ತೀರ್ಥಂಕರರಲ್ಲಿ ಕೊನೆಯವನಾದ ಮಹಾವೀರಸ್ವಾಮಿ ಇವರ ವಿಷಯದಲ್ಲಿ ಸಂಶೋಧನೆ ನಡೆಸಿ ಆ ಬಗ್ಗೆ ಅತ್ಯಂತ ನಿರ್ದಿಷ್ಟವಾಗಿ ಕಾಲ, ತಿಥಿಗಳನ್ನು ಕೊಟ್ಟಿದ್ದಾರೆ, ಬೌದ್ಧ ಧರ್ಮದ ವಿಷಯದಲ್ಲಿ ಬುದ್ಧನ ಚರಿತ್ರೆ ಮತ್ತು ಅವನ ಬದುಕಿನ ಕೆಲವು ಪ್ರಮುಖ ಘಟನೆಗಳ ಕಾಲನಿರ್ಣಯ ಮಾಡಿದ್ದಾರೆ. ವೀರಶೈವಧರ್ಮದಲ್ಲಿ ಬಸವೇಶ್ವರನ ಉಲ್ಲೇಖವಿರುವ ಹತ್ತಾರು ಶಾಸನಗಳನ್ನೂ ವಿಶೇಷವಾಗಿ ಅರ್ಜುನವಾಡ ಶಿಲಾಶಾಸನವನ್ನು ಕೂಲಂಕಷವಾದ ವಿವೇಚನೆಗೆ ಒಳಪಡಿಸಿ ಬಸವೇಶ್ವರನ ವಂಶಾವಳಿ ಹಾಗೂ ಅವನ ಜೀವನದ ಮಹತ್ತ್ವದ ಘಟನೆಗಳ ಕಾಲವನ್ನು ನಿರ್ಣಯಿಸಿದ್ದಾರೆ. ಜೊತೆಗೆ ದೇವರದಾಸಿಮಯ್ಯ ಹಾಗೂ ರೇವಣಸಿದ್ಧ, ಮರುಳಸಿದ್ಧ, ಏಕೋರಾಮಿತಂದೆ, ಮಲ್ಲಿಕಾರ್ಜುನ ಪಂಡಿತಾರಾಧ್ಯರ ಕಾಲನಿರ್ಣಯ ಮಾಡಿದ್ದಾರೆ.
ಕನ್ನಡ ಸಾಹಿತ್ಯದ ಪ್ರಾಚೀನತೆಯನ್ನು ಕುರಿತು ಹೇಳುತ್ತ ಹಲ್ಮಿಡಿ ಶಾಸನದ ಕಾಲವನ್ನು ಪೈಗಳು ಬಹಳ ಹಿಂದಕ್ಕೆ ತೆಗೆದುಕೊಂಡು ಹೋಗುತ್ತಾರೆ. ಕನ್ನಡ ಸಾಹಿತ್ಯದ ಆರಂಭವನ್ನು ಪ್ರಸಕ್ತ ಶಕೆಯ ಆರಂಭಕ್ಕೆ ಕೊಂಡೊಯ್ಯುತ್ತಾರೆ. ಕನ್ನಡದ ಪ್ರಾಚೀನತೆಯನ್ನು ಕುರಿತು ಹೇಳುವಾಗ ಗ್ರೀಕ್ ಪ್ರಹಸನದಲ್ಲಿರುವ ವಾಕ್ಯಗಳನ್ನು ಕನ್ನಡವೆಂದು ಗುರುತಿಸಿ ಚರ್ಚೆ ಮಾಡಿದ್ದಾರೆ. ಕನ್ನಡದಲ್ಲಿ ಪ್ರಮುಖರಾದ ಪಂಪ, ರನ್ನ, ನಾಗಚಂದ್ರ, ನಾಗವರ್ಮ(ರು), ದುರ್ಗಸಿಂಹ, ಬ್ರಹ್ಮಶಿವ, ಹರಿಹರ, ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೀಶ, ಶಿಶುಮಾಯಣ, ಸೋಮರಾಜ, ರತ್ನಾಕರವರ್ಣಿ, ಪಾರ್ತಿಸುಬ್ಬ ಮುದ್ದಣ ಮುಂತಾದ ಕವಿಗಳ ಜೀವನ, ಕಾಲ, ಸ್ಥಳ, ಕಾಲಾದಿ ವಿಷಯಗಳನ್ನು ಚರ್ಚಿಸಿದ್ದಾರೆ. ಕರ್ಣ ಮುಂತಾದ ಪಾತ್ರಗಳ ರಸವಿಮರ್ಶೆ ಮಾಡಿದ್ದಾರೆ. ಷಟ್ಪದಿ ಛಂದಸ್ಸನ್ನು ಕುರಿತು ಬರೆದಿದ್ದಾರೆ. ಹೊಸಗನ್ನಡ ಸಾಹಿತ್ಯದ ಪ್ರಕಾರಗಳಾದ ಸಣ್ಣಕತೆ, ಶಿಶು ಸಾಹಿತ್ಯ, ಕಾದಂಬರಿ, ಪ್ರಬಂಧಗಳ ಆದಿಗ್ರಂಥಗಳ ಹೆಸರನ್ನೂ ಕಾಲವನ್ನೂ ತಿಳಿಸಿದ್ದಾರೆ, ಕಿಟ್ಟೆಲ್, ಎಂ.ಎನ್. ಕಾಮತ್, ಪಂಜೆ, ಎನ್.ಎಸ್. ಕಿಲ್ಲೆ, ಬಿ.ಎಂ. ಶ್ರೀಕಂಠಯ್ಯ, ಎಂ.ಆರ್. ಶ್ರೀ.
ಮುಂತಾದವರ ವ್ಯಕ್ತಿಚಿತ್ರಗಳನ್ನು ಕೊಡುತ್ತ ಈ ವ್ಯಕ್ತಿಗಳು ಕನ್ನಡ ಸಾಹಿತ್ಯಕ್ಕೆ ನೀಡಿದ ಕಾಣಿಕೆಯೇನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಕೊನೆಗೆ ತಮ್ಮ ಆತ್ಮಕಥನವನ್ನೂ ಗುರುತಿಸಿದ್ದಾರೆ. ಇಷ್ಟೇ ಅಲ್ಲದೆ ಅನೇಕ ಪುಸ್ತಕಗಳಿಗೆ ಮುನ್ನುಡಿಗಳನ್ನು ಬರೆದಿದ್ದಾರಲ್ಲದೆ ಪುಸ್ತಕ ವಿಮರ್ಶೆಯನ್ನೂ ಮಾಡಿದ್ದಾರೆ.
ಗೋವಿಂದ ಪೈ ಅವರ ವಿದ್ವತ್ತು, ಬಹು ಭಾಷಾಜ್ಞಾನ ಅಗಾಧವಾದುದು, ಕೌತುಕವನ್ನುಂಟು ಮಾಡುವಂಥದು. ಕನ್ನಡ, ಕೊಂಕಣಿ, ತುಳು, ಇಂಗ್ಲಿಷ್, ಮರಾಠಿ, ಮಲಯಾಳಂ, ಸಂಸ್ಕೃತ, ಪ್ರಾಕೃತ, ಪಾಳಿ, ಅರ್ಧಮಾಗಧಿ, ಹಿಂದಿ, ಉರ್ದು, ತಮಿಳು, ತೆಲುಗು, ಒರಿಯ, ಬಂಗಾಳಿ, ಜಪಾನಿ, ಗ್ರೀಕ್, ಲ್ಯಾಟಿನ್, ಪರ್ಷಿಯನ್ ಮುಂತಾದ ಭಾಷೆಗಳಲ್ಲಿ ಪರಿಣತಿಯನ್ನು ಪಡೆದು ಆಯಾ ವಿಷಯಗಳನ್ನು ಆಯಾ ಭಾಷೆಗಳಲ್ಲಿಯೇ ಅಧ್ಯಯನ ಮಾಡಿ ಸಂಶೋಧನೆ ನಡೆಸಿದ್ದಾರೆ. ಇವರು ಮಂಡಿಸಿದ ನಿರ್ಣಯಗಳನ್ನೆಲ್ಲ ಒಪ್ಪುವುದು ಕಷ್ಟವಾದರೂ ಇವರ ವಿವೇಚನಾ ಸಾಮರ್ಥ್ಯ, ಹರಿತ ತರ್ಕಸರಣಿ, ಇತಿಹಾಸಪ್ರಜ್ಞೆ, ವಸ್ತುನಿಷ್ಠೆ ಮುಂತಾದ ಗುಣಗಳನ್ನು ಇವರ ಸಂಶೋಧನೆಗಳಲ್ಲಿ ಕಾಣಬಹುದು.
ಪೈಗಳ ಸೃಷ್ಟ್ಯಾತ್ಮಕ ಸಾಹಿತ್ಯ ಅದ್ಭುತವಾಗಿದೆ. 1947ರ ಅನಂತರ ಇವರು ನಾಟಕ ರಚನೆಗೆ ಕೈಹಾಕಿ ಏಕಲವ್ಯನನ್ನು ಕುರಿತು ಹೆಬ್ಬೆರಳು ಎಂಬ ಪದ್ಯಾತ್ಮಕ ಏಕಾಂಕವನ್ನೂ 1942ರ ಚಳವಳಿಯನ್ನು ಆಧಾರವಾಗಿಟ್ಟುಕೊಂಡು ಚಿತ್ರಭಾನು ಎಂಬ ಗದ್ಯನಾಟಕವನ್ನೂ ಬರೆದಿದ್ದಾರೆ. ಇವುಗಳ ಜೊತೆಗೆ ಜಪಾನಿನ ಎಂಟು ನೋ ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಿಕೊಟ್ಟಿರುವುದಲ್ಲದೆ, ವಿಶಿಷ್ಟ ನಾಟಕ ಪ್ರಕಾರದ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಇವರಿಂದ ರಚಿತವಾದ ಏಕೈಕ ಸಾಮಾಜಿಕ ಏಕಾಂಕ ನಾಟಕ ತಾಯಿ ಎಂಬುದು.
ಇವೆರಡು ಪ್ರಕಾರಗಳಿಗಿಂತ ಪೈ ಅವರ ಕಾವ್ಯಸೃಷ್ಟಿ ಉತ್ತಮವೆನ್ನಲಾಗಿದೆ. 1900ರಿಂದ ಕೊನೆಗಾಲದ ವರೆಗೆ ಇವರು ರಚಿಸಿದ ಸಣ್ಣದೊಡ್ಡ ಕವನಗಳ ಸಂಖ್ಯೆ 180. ಇವರ ಗಿಳಿವಿಂಡು ಕವನ ಸಂಕಲನದಲ್ಲಿ 45 ಭಾವಗೀತಗಳೂ ನಂದಾದೀಪದಲ್ಲಿ 37 ಕವನಗಳೂ ನಾಡಿನ ವಿವಿಧ ಪತ್ರಿಕೆಗಳಲ್ಲಿ 95 ಕವನಗಳೂ ಅಚ್ಚಾಗಿವೆ. ಇವರ ಕಾವ್ಯಸೃಷ್ಟಿಯಲ್ಲಿ ಯೇಸುವಿನ ಅಂತ್ಯವನ್ನು ಚಿತ್ರಿಸುವ ಗೊಲ್ಗೊಥಾ ಮತ್ತು ಬುದ್ಧನ ಕಡೆಯ ದಿನಗಳನ್ನು ಚಿತ್ರಿಸುವ ವೈಶಾಖಿ ಎಂಬ ಎರಡು ನೀಳ್ಗವನಗಳು ಮುಖ್ಯವಾದವು. ಭಕ್ತಿ, ಪ್ರೇಮಭಾವನೆ, ಜೀವನ ವಿವೇಕ, ಸ್ನೇಹ ಸೌಹಾರ್ದ, ಸ್ವಾತಂತ್ರ್ಯ ಪ್ರೇಮ-ಇವು ಇವರ ಕಾವ್ಯಸೃಷ್ಟಿಯ ಸ್ಫೂರ್ತಿಗಳಾಗಿವೆ. ಅಸಂದಿಗ್ಧ ಭಾಷೆ, ಅಚ್ಚಗನ್ನಡ ಪದಪ್ರಯೋಗ, ಹೊಸ ಪದಸೃಷ್ಟಿ, ಭಾಷೆಯಲ್ಲಿನ ಪ್ರಾದೇಶಿಕ ಬನಿ-ಇವುಗಳಿಂದಾಗಿ ಪೈಗಳ ಸಾಹಿತ್ಯ ಗಮನಾರ್ಹವಾಗಿದೆ.
ಹಿಂದಿನ ಮದ್ರಾಸು ಸರ್ಕಾರ ಪೈಗಳಿಗೆ ರಾಷ್ಟ್ರಕವಿ ಪ್ರಶಸ್ತಿಯನ್ನಿತ್ತು (1949) ಗೌರವಿಸಿತು. ಪೈಗಳು 1951ರಲ್ಲಿ ಮುಂಬಯಿಯಲ್ಲಿ ಸೇರಿದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಪೈಗಳು ಉತ್ಕಟ ಕನ್ನಡಾಭಿಮಾನಿಗಳು. ತಾವು ಬೆಳೆದು ಬಾಳಿದ ಮಂಜೇಶ್ವರದ ನೆಲ ಕನ್ನಡನಾಡಿಗೆ ಸೇರಲಿಲ್ಲವಲ್ಲ ಎಂಬ ಕೊರಗು ಕನ್ನಡದ ಈ ನಿಷ್ಠಾವಂತ ಅಭಿಮಾನಿಯನ್ನು ಕೊನೆಯವರೆಗೂ ಬಾಧಿಸುತ್ತಿತ್ತು.
ಪೈಗಳ ಜೀವನ ಮತ್ತು ಸಾಹಿತ್ಯದ ವಿವರಗಳನ್ನು ತಿಳಿಯಲು ದೀವಿಗೆ (ಭಂಡಾರ್ಕರ್ಸ್ ಕಾಲೇಜು, ಕುಂದಾಪುರ), ಗೋವಿಂದ ಪೈ ವಾಙ್ಮಯ ದರ್ಶನ (ಮಹಾತ್ಮಗಾಂಧಿ ಮೆಮೋರಿಯಲ್ ಕಾಲೇಜು, ಉಡುಪಿ)- ಈ ಗ್ರಂಥಗಳು ನೆರವಾಗುತ್ತವೆ.