ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೋ, ವಿನ್‍ಸೆಂಟ್ ವ್ಯಾನ್ (ವ್ಯಾನ್‍ಗೋ)
1853-90. ಖ್ಯಾತ ಡಚ್ ಚಿತ್ರ ಕಲಾವಿದ. ತಂದೆ ಹಾಲೆಂಡಿನ ಹಳ್ಳಿಯೊಂದರಲ್ಲಿ ಒಬ್ಬ ಪಾದ್ರಿಯಾಗಿದ್ದನಾಗಿ ಉತ್ತಮ ಧಾರ್ಮಿಕ ಮನೋಭಾವವುಳ್ಳ ತಂದೆತಾಯಿಗಳ ಪೋಷಣೆಯಲ್ಲಿ ಬೆಳೆದ. ದೊಡ್ಡವನಾದ ಮೇಲೆ ಕಲಾಕೃತಿಗಳ ಮಾರಾಟದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಗಳಿಸಿದ್ದ ಗೌಪಲ್ ಅಂಡ್ ಕಂಪನಿ ಎಂಬ ಸಂಸ್ಥೆಯಲ್ಲಿ ಒಂದು ಸಣ್ಣ ಉದ್ಯೋಗ ಗಳಿಸಿಕೊಂಡ. ಆಗ ಇವನ ಪ್ರಾಯ 16. ಕಲಾಕೃತಿಗಳ ಮಾರಾಟದ ಸಂಬಂಧದಲ್ಲಿ ಇಂಗ್ಲೆಂಡಿಗೆ ಹೋದ (1873). ಅಲ್ಲಿ ಶಾಲಾ ಉಪಾಧ್ಯಾಯಿನಿಯೊಬ್ಬಳನ್ನು ಮೋಹಿಸಿದ. ಪ್ರೇಮ ವಿಫಲಗೊಂಡಾಗ ಜುಗುಪ್ಸೆಗೊಂಡು ಗೌಪಲ್ ಕಂಪನಿಯ ಹುದ್ದೆಗೆ ರಾಜೀನಾಮೆ ಕೊಟ್ಟ. ಅನಂತರ ಇಂಗ್ಲೆಂಡಿನ ರ್ಯಾಮ್ಸ್‌ಗೇಟ್ ಮತ್ತು ಐಲ್ವರ್ತ್ ಎಂಬಲ್ಲಿ ಶಾಲಾ ಉಪಾಧ್ಯಾಯ ನಾಗಿ ಕೆಲಸ ಮಾಡಿದ (1876). ಈ ವೃತ್ತಿಯಲ್ಲೂ ಉತ್ಸಾಹ ಕಂಡುಬರಲಿಲ್ಲವಾಗಿ ಅದನ್ನು ತೊರೆದು ಹಾಲೆಂಡಿಗೆ ಹಿಂತಿರುಗಿ ಆಮ್‍ಸ್ಟರ್‍ಡ್ಯಾಮ್‍ನ ಥಿಯಲಾಜಿಕಲ್ ಕಾಲೇಜಿನಲ್ಲಿ ಆಧ್ಯಾತ್ಮ ವಿಷಯವನ್ನು ಕುರಿತು ಅಧ್ಯಯನ ನಡೆಸಿದ. ಬೆಲ್ಜಿಯನ್ ಗಣಿಗಾರರಿಗೆ ಮತ ಪ್ರಚಾರ ಮಾಡುವ ಕೆಲಸವನ್ನು ಈತನಿಗೆ ವಹಿಸಲಾಯಿತು. ಆಧ್ಯಾತ್ಮಿಕ ವ್ಯಾಸಂಗ ಮತ್ತು ಮತಪ್ರಚಾರದ ವಿಷಯದಲ್ಲೂ ವ್ಯಾನ್‍ಗೋ ಜಯಶಾಲಿಯಾಗಲಿಲ್ಲ. ಗಣಿ ಕಾರ್ಮಿಕರ ಹಿತಚಿಂತನೆ ಮಾಡಹೋಗಿ ಗಣಿಮಾಲೀಕರ ಕೋಪಕ್ಕೆ ಪಾತ್ರನಾಗಿ 1879 ರಲ್ಲಿ ಕೆಲಸ ಕಳೆದುಕೊಂಡ. ಜೀವನ ದುಸ್ತರವಾಯಿತು. ಉದ್ದಕ್ಕೂ ಅಪಜಯದ ಸರಣಿಯನ್ನೇ ಕಂಡ ಈತನಿಗೆ ಆಧ್ಯಾತ್ಮಿಕ ಚಿಂತನೆಯಿಂದ ಯಾವ ದಾರಿಯೂ ಕಾಣದಾಯಿತು. ಅನೇಕ ತಿಂಗಳುಗಳ ಒಳತೋಟಿಯ ಅನಂತರ ಚಿತ್ರಕಲಾವಿದನಾಗಲು ನಿರ್ಧರಿಸಿದ (1880). ಚಿತ್ರಕಲೆಯಲ್ಲಿ ಮೊದಲಿಂದ ಬೆಳೆಸಿಕೊಂಡ ಆಸ್ಥೆ ಈಗ ಜೀವನೋಪಾಯವನ್ನು ಒದಗಿಸಿತು.
ವ್ಯಾನ್ಗೋ 1881 ರಲ್ಲಿ ಬ್ರಸಲ್ಸ್‌ಗೆ ತೆರಳಿದ. ಅಲ್ಲಿದ್ದ ಸಮಯದಲ್ಲಿ ನಾನಾ ರೀತಿಯ ಚಿತ್ರಕೃತಿಗಳನ್ನು ರಚಿಸಿದ. ಇವನ ತಮ್ಮ ಥೀಯೋ ಎಂಬುವನ ನೆರವು ದೊರೆಯಿತಾಗಿ ಚಿತ್ರಕಲೆಗೆ ಸಂಬಂಧಿಸಿದಂತೆ ಯಥಾದೃಷ್ಟಿ ರೂಪಣದಲ್ಲೂ (ಪರ್ಸ್ಪೆಕ್ಟಿವ್) ಅಂಗರಚನಾಶಾಸ್ತ್ರದಲ್ಲೂ (ಅನಾಟಮಿ) ಹೆಚ್ಚಿನ ಶಿಕ್ಷಣ ಪಡೆದುಕೊಂಡ. ಕೆಲಕಾಲ ಛಾಯಾ ಚಿತ್ರಕಲೆಯಲ್ಲಿಯೂ ವ್ಯಾಸಂಗ ಮಾಡಿದ. ಸೋದರ ಸಂಬಂಧಿ ಯೊಬ್ಬಳಲ್ಲಿ ವ್ಯಾಮೋಹಗೊಂಡು ವಿಫಲನಾದ. ಇದರಿಂದಾಗಿ ಮತ್ತೆ ಜುಗುಪ್ಸೆಗೊಂಡು ಬ್ರಸಲ್ಸನ್ನು ತೊರೆದು ದಿ ಹೇಗ್ ಪಟ್ಟಣಕ್ಕೆ ಬಂದು ನೆಲೆಸಿದ. ಅಲ್ಲಿ ಕ್ರಿಶ್ಚನ್ ಎಂಬ ವೇಶ್ಯೆಯ ಸಂಗ ಮಾಡಿ ಆಕೆಯನ್ನು ಮದುವೆಯಾಗಲು ಬಹು ವಿಧದಲ್ಲಿ ಪ್ರಯತ್ನಪಟ್ಟ. ಕೊನೆಗೊಮ್ಮೆ ಆಕೆಯ ಶೀಲದ ಬಗ್ಗೆ ಶಂಕೆಗೊಂಡು ಅವಳನ್ನು ತ್ಯಜಿಸಿದ. ಈತನ ಕಲಾಕೃತಿ ಸಾರೋ (1882) ಮತ್ತು ಸೀನ್ ಪೋಸಿಂಗ್ಗಳಲ್ಲಿ (1883) ಈಕೆಯ ಭಾವಭಂಗಿಗಳು ಕಾಣಸಿಗುತ್ತವೆ. ಅವ್ಯವಸ್ಥಿತ ಕಾಮುಕ ಜೀವನದಿಂದಾಗಿ ಈತನ ದೇಹಸ್ಥಿತಿ ಕ್ರಮೇಣ ಕ್ಷೀಣಿಸಿತು. ಔಷಧೋಪ ಚಾರಗಳು ನಡೆದು ಚೇತರಿಸಿಕೊಳ್ಳುವ ಸಮಯದಲ್ಲೇ ಮತ್ತೊಬ್ಬ ಮಹಿಳೆಯ ಪ್ರೇಮಪಾಶ ಈತನ ಕೊರಳಿಗೆ ಬಿತ್ತು. ಆದರೆ ಆಕೆಯನ್ನು ಈತ ಪರಿಗ್ರಹಿಸಲಿಲ್ಲ. ಇಷ್ಟಾದರೂ ಈತನ ಚಿತ್ರಕಲಾ ಹವ್ಯಾಸ ಅವ್ಯಾಹತವಾಗಿ ಮುಂದುವರಿದಿತ್ತು. ಕಡಲತೀರ ಪ್ರದೇಶದ ರಮ್ಯಚಿತ್ರಗಳನ್ನೂ ಬೆಸ್ತರಜೀವನವನ್ನೂ ನಿರೂಪಿಸುವ ಚಿತ್ರಗಳನ್ನು ತನ್ನದೇ ಆದ ಶೈಲಿಯಲ್ಲಿ ಮೂಡಿಸಿದ. ಮರೀನ್ ಡ್ರೈವ್ ಎಂಬಲ್ಲಿಗೆ ಹೋಗಿ ಅಲ್ಲಿಯ ರೈತಾಪಿ ಜನರ ಜೀವನವನ್ನು ಚಿತ್ರಿಸಿದ. ತನ್ನ ತಂದೆಯ ಸ್ಥಳ ನ್ಯೂನೆನ್ಗೆ ಹೋಗಿ ಅಲ್ಲಿನ ಬೇಟೆಯ ದೃಶ್ಯಗಳನ್ನೂ ರೈತರ ಬಡಜೀವನವನ್ನೂ ಕುರಿತಂಥ ಚಿತ್ರಗಳನ್ನು ರಚಿಸಿದ. ದಿ ಪೊಟೆಟೋ ಈಟರ್ಸ್ (1885) ಎಂಬ ಚಿತ್ರಣ ಈತನ ಮೇರುಕೃತಿ. ಈ ಚಿತ್ರದಲ್ಲಿ ಬಳಸಿರುವ ವರ್ಣಗಳು ಮತ್ತು ವಿನ್ಯಾಸಗಳನ್ನು ಕುರಿತು ತನ್ನ ತಮ್ಮನಿಗೆ ಬರೆದ ಪತ್ರದಲ್ಲಿ ವ್ಯಾನ್‍ಗೋ ತನ್ನ ಭಾವನೆಯೇನೆಂಬುದನ್ನು ವ್ಯಕ್ತಪಡಿಸಿದ್ದಾನೆ. ಚಿತ್ರದಲ್ಲಿ ರೂಪುಗೊಂಡಿರುವ ಅಲ್ಲಿನ ಬಂಧುಗಳ ಸರಳಸ್ವಭಾವ, ಅವರು ಆಲೂಗಡ್ಡೆಯನ್ನು ಭೂಮಿಯಿಂದ ಹೊರತೆಗೆದು ಸೇವಿಸುವ ರೀತಿ, ಅವರ ಕಾಯಕ- ಇವೆಲ್ಲವನ್ನೂ ಯಥಾರ್ಥವಾಗಿ ಮೂಡಿಸಿರುವುದರ ಬಗ್ಗೆ ಹೇಳಿಕೊಳ್ಳುತ್ತ ತನ್ನ ಪ್ರಯತ್ನ ಸಫಲವಾಗುತ್ತಿದೆ ಎಂಬುದಾಗಿ ಆ ಪತ್ರದಲ್ಲಿ ತಿಳಿಸಿದ್ದಾನೆ. ಇವನ ಮತ್ತೊಂದು ಹೆಸರಾಂತ ಕೃತಿ ಬೂಟ್ಸ್. 1880 ಮತ್ತು 1886ರ ನಡುವೆ ಈತ ಪ್ಯಾರಿಸಿಗೆ ತೆರಳಿದ. ಇವನ ತಮ್ಮ ಥೀಯೋ ಕೂಡ ಒಬ್ಬ ಕಲಾಸಕ್ತ. ಈತ ತನ್ನ ಅಣ್ಣನಿಗೆ ಚಿತ್ರಕಲಾಭ್ಯಾಸವನ್ನು ಪ್ಯಾರಿಸಿನಲ್ಲಿ ಮುಂದುವರಿಸಲು (1866-88) ನೆರವು ನೀಡಿದ. ಈ ಸಮಯದಲ್ಲಿ ಕಾರ್ಮನ್ ಎಂಬ ಚಿತ್ರ ಕಲಾವಿದನ ಮಾರ್ಗದರ್ಶನ ವ್ಯಾನ್ಗೋಗೆ ದೊರಕಿತು. ಅಲ್ಲಿದ್ದಾಗ ಗೋಗ್ಯಾನ್, ಟುಲೂಜ಼್- ಲೋಟ್ರೆಕ್ ಮುಂತಾದ ಫ್ರೆಂಚ್ ಚಿತ್ರಕಲಾವಿದರ ಸಂಪರ್ಕವೂ ಖ್ಯಾತ ಕಲಾವಸ್ತು ಸಂಗ್ರಾಹಕನಾದ ಟಾಂಗೈ ಎಂಬ ಕಲಾಸಕ್ತನ ಪರಿಚಯವೂ ಈತನಿಗೆ ದೊರೆಯಿತು. ಪರಿಣಾಮ ವಿಧಾನದ (ಇಂಪ್ರೆಷನಿಸ್ಟಿಕ್) ಚಿತ್ರಕಾರರ ಕಲಾಕೃತಿಗಳು ಇವನ ಮನಸ್ಸಿನ ಮೇಲೆ ಹೆಚ್ಚಿನ ಪ್ರಭಾವ ಬೀರಿದವು. ವಸ್ತು ಮತ್ತು ಶೈಲಿಗಳ ವಿಚಾರದಲ್ಲಿ ಈತ ಹೊಸ ಸಂಗತಿಗಳನ್ನು ಕಂಡುಕೊಂಡ. ಈತ ಚಿತ್ರಿಸಿರುವ ಭಾವಚಿತ್ರಗಳಲ್ಲಿ (1887 - 88) ಟಾಂಗೈನ ಭಾವಚಿತ್ರವೂ ಒಂದು. ಹೊಸಹೊಸ ವಿಚಾರಗಳನ್ನು ಕುರಿತು ಆಲೋಚಿಸುವ ಸಲುವಾಗಿ ಲೋಟ್ರೆಕ್ನ ಆದೇಶದಂತೆ ಈತ ಪ್ಯಾರಿಸಿನಿಂದ ಆರ್ಲೆಗೆ ಬಂದ. ಅಲ್ಲಿನ ವಿಕಸಿತ ಪುಷ್ಪಭರಿತ ವೃಕ್ಷಗಳು, ನಗುಮುಖದ ತರುಣಿಯರು, ಇವೆಲ್ಲ ಇವನ ಚಿತ್ರಕಲಾ ಪ್ರಜ್ಞೆಗೆ ಹೆಚ್ಚಿನ ಪೋಷಕಾಂಶಗಳಾದವು. ಆ ಸ್ಥಳದಲ್ಲಿ ಇವನು ಚಿತ್ರಿಸಿದ ಕೃತಿಗಳಲ್ಲಿ ಸನ್‍ಫ್ಲವರ್ (1888), ದಿ ಚೇರ್ ಅಂಡ್ ದಿ ಪೈಪ್ (1888) ಸೇರಿವೆ. ಇವನ ಆಗಿನ ರೇಖಾವಿನ್ಯಾಸದಲ್ಲಿ ನಿಶ್ಚಿತ ಜ್ಞಾನ ಮತ್ತು ದೃಢತೆಗಳಿದ್ದವು. ವರ್ಣ ಮಿಶ್ರಣದಲ್ಲಿ ನವೀನ ಕ್ರಮವನ್ನನುಸರಿಸಿದುದರಿಂದ ಚಿತ್ರಗಳಲ್ಲಿ ಸೊಬಗೂ ಸೊಗಡೂ ಎದ್ದು ಕಾಣುತ್ತಿದ್ದವು. ಬಿಸಿಲು, ಗಾಳಿಗಳನ್ನು ಲೆಕ್ಕಿಸದೆ ವ್ಯಾನ್ಗೋ ತನ್ನ ಚಿತ್ರ ಕಲಾಭ್ಯಾಸವನ್ನು ಮುಂದುವರಿಸಿದ. ಸುಮಾರು ಹದಿನೈದು ತಿಂಗಳ ಅವಧಿಯಲ್ಲಿ ಈತ ಇನ್ನೂರು ಚಿತ್ರಕೃತಿಗಳನ್ನು ತಯಾರಿಸಿದ. ತನ್ನ ಚಿತ್ರಕೃತಿಗಳನ್ನೂ ಅಲ್ಲಿನ ಚಿತ್ರ ಕಲಾವಂತರನ್ನೂ ಪರಿಚಯ ಮಾಡಿಕೊಡುವ ಸಲುವಾಗಿ ಗೋಗ್ಯಾನನ್ನು ಈತ ಅಲ್ಲಿಗೆ ಆಹ್ವಾನಿಸಿದ. ಆತ ಬಂದ ಕೆಲವೇ ದಿವಸಗಳಲ್ಲಿ ಇಬ್ಬರಲ್ಲೂ ವೈಮನಸ್ಯ ತಲೆದೋರಿತು. ಆಗ ನಡೆದಂಥ ಘಟನೆ ವಿಚಿತ್ರವಾದ್ದು. ಒಮ್ಮೆ ತರುಣಿಯೊಬ್ಬಳು ವ್ಯಾನ್ಗೋನನ್ನು ಚಹ ಅಂಗಡಿಯೊಂದರಲ್ಲಿ ಭೇಟಿ ಮಾಡಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದಳು. ತನಗೇನಾದರೂ ಬಹುಮಾನವನ್ನು ಕೊಡಲೇಬೇಕೆಂದು ಆಕೆ ಈತನನ್ನು ಆಗಾಗ ಒತ್ತಾಯ ಮಾಡುತ್ತಿದ್ದು, ಏನೂ ಇಲ್ಲದಿದ್ದರೆ ಕಿವಿಯನ್ನಾದರೂ ಕೊಡಬೇಕೆಂದು ಕುಚೋದ್ಯ ಮಾಡಿದಳು. ಕ್ರಿಸ್ಮಸ್ ಹಬ್ಬಕ್ಕೆ ಮುಂಚೆ ತನಗೆ ಬಂದ ಭಾಂಗಿಯೊಂದನ್ನು ಬಿಚ್ಚಿ ನೋಡಿದಾಗ ಅದರಲ್ಲಿ ವ್ಯಾನ್ಗೋನ ಕಿವಿ ಇದ್ದುದನ್ನು ಕಂಡು ಆಕೆ ಗಾಬರಿಗೊಂಡಳು. ಅತ್ತ ಕಿವಿ ಕತ್ತರಿಸಿಕೊಂಡ ವ್ಯಾನ್ಗೋನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆಸ್ಪತ್ರೆಯಿಂದ ಹಿಂದಿರುಗಿದ ಅನಂತರ ಈತ ತನ್ನ ಎರಡೂ ಬಗೆಯ ಸ್ವಚಿತ್ರಣವನ್ನು ರೂಪಿಸಿದ. ಕತ್ತರಿಸಿಹೋದ ಕಿವಿಯ ಜಾಗದಲ್ಲಿ ಕಟ್ಟುಕಟ್ಟಿ, ತಲೆಯ ಮೇಲೆ ಟೋಪಿ, ಬಾಯಲ್ಲಿ ಸಿಗರೇಟ್ ಇಟ್ಟಂತೆ ರೂಪಿಸಿರುವ ಚಿತ್ರ ಅವುಗಳಲ್ಲೊಂದು.
ಬುದ್ಧಿಭ್ರಮಣೆ ಮತ್ತು ಮನೋವಿಕಾರಗಳಿಂದ ನರಳುತ್ತಿದ್ದ ವ್ಯಾನ್ಗೋನನ್ನು ಇವನ ಇಷ್ಟದಂತೆ ಸೇಂಟ್ ರೆಮಿಯಲ್ಲಿನ ಮಾನಸಿಕರೋಗಿಗಳ ಆಸ್ಪತ್ರೆಗೆ ಸೇರಿಸಲಾಯಿತು (1889). ಅಲ್ಲಿದ್ದಾಗ ಈತ ರವೀನ್ (1889) ಎಂಬ ಚಿತ್ರಕೃತಿಯನ್ನು ಸೃಷ್ಟಿಸಿದ. ಅಲ್ಲಿ ಈತ ರೂಪಿಸಿದ ಚಿತ್ರಗಳು ಪರಿಣಾಮ ವಿಧಾನೋತ್ತರ (ಪೋಸ್ಟ್ ಇಂಪ್ರೆಷನಿಸ್ಟಿಕ್) ಚಿತ್ರಕಲಾ ಶೈಲಿಗೆ ಸೇರಿದವೆನ್ನಲಾಗಿದೆ. ಈ ಕೃತಿಗಳಲ್ಲಿ ಇವನದೇ ಆದ ಶೈಲಿಗಳು ಕಾಣಬರುತ್ತವೆ. 1890ರಲ್ಲಿ ರವೀನ್ ನಿಂದ ಈತ ಪ್ಯಾರಿಸಿಗೆ ಮರಳಿದ. ಅಲ್ಲಿ ಇವನಿಗೆ ಗೋಗ್ಯಾನನ ಮಿತ್ರನಾದ ವೈದ್ಯನೊಬ್ಬನ ಆಶ್ರಯ ಲಭಿಸಿತು. ಆ ವೈದ್ಯನ ಭಾವಚಿತ್ರವನ್ನೂ (ಡಾ. ಪಾಲ್ ಗ್ಯಾಚೆಟ್ - 1890) ಈತ ಬಿಡಿಸಿದ. ಆ ವರ್ಷ ಒರಿಯರ್ ಎಂಬಾತ ಈತನ ಕಲಾಕೃತಿಗಳನ್ನು ಕುರಿತ ಒಂದು ಲೇಖನವನ್ನು ಪ್ರಕಟಿಸಿದ. ಇದರಿಂದಾಗಿ ಈತನಿಗೆ ಪ್ರಚಾರ ಸಿಕ್ಕಿದಂತಾಯಿತು. ಮನೋವಿಕಲ್ಪದಿಂದಾಗಿ 1890 ರ ಜುಲೈ 27ರಂದು ತಾನೇ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡ. ಪ್ರಾಣಹತ್ಯೆ ಮಾಡಿಕೊಂಡದ್ದು ತಾನೇ ರಚಿಸಿದ ಕೃತಿಯೊಂದರ (ಕಾರ್ನ್ಫೀಲ್ದ್ಸ್ ವಿತ್ ಫ್ಲೈಟ್ ಆಫ್ ಬಡ್ರ್ಸ್) ಎದುರಿನಲ್ಲಿ. ಇವನ ಸಾವಿನ ವಾರ್ತೆಯನ್ನು ಕೇಳಿದ ಇವನ ತಮ್ಮ ಬಹಳ ದುಃಖಪಟ್ಟು ಅಣ್ಣ ಸತ್ತ ಆರು ತಿಂಗಳುಗಳಲ್ಲಿಯೇ ತಾನೂ ಅಸುನೀಗಿದ.
ನೂತನ ಚಿತ್ರಕಲಾ ಸಂಪ್ರದಾಯದಲ್ಲಿ ಪ್ರಸಿದ್ಧನಾದ ವ್ಯಾನ್ಗೋ ತನ್ನದೇ ಆದ ಸ್ವಂತಿಕೆಯನ್ನು ಪ್ರದರ್ಶಿಸಿದ. ಸಾಂಪ್ರದಾಯಿಕ ಪರಿಣಾಮ ವಿಧಾನದ ಚಿತ್ರಕಲಾವಿದರು ಬಳಸುವ ವರ್ಣಗಳನ್ನು, ರೂಪಿಸುವ ಕ್ರಮವನ್ನು ಇವನು ಸ್ವಾಗತಿಸಿದನಾದರೂ ಚಿತ್ರ ಬಿಡಿಸುವುದರಲ್ಲಿ ನವೀನ ವಿನ್ಯಾಸವನ್ನೂ ಕಲಾವಂತಿಕೆಯನ್ನೂ ಬಳಸಿದ. ಅಭಿವ್ಯಕ್ತಿವಾದದ ಪ್ರವರ್ತಕರಲ್ಲಿ ಈತ ಒಬ್ಬ ಎನ್ನಲಾಗಿದೆ. 20ನೆಯ ಶತಮಾನದ ಅನೇಕ ಚಿತ್ರ ಕಲಾವಿದರ ಮೇಲೆ ಈತ ಬೀರಿದ ಪ್ರಭಾವ ವಿಶೇಷ ರೀತಿಯದು. ಇವನ ಜೀವನವನ್ನು ಚಿತ್ರಿಸುವ ಹಲವಾರು ಸಂಪಾದಿತ, ಸಂಗ್ರಹಿತ ಗ್ರಂಥಗಳಲ್ಲಿ ಕಂಪ್ಲೀಟ್ ಲೆಟರ್ಸ್ (1958), ಪರ್ಸನಲ್ ರಿಕಲೆಕ್ಷನ್ಸ್ (ಅನು: 1913) ಎಂಬವೂ ಇವನ ಜೀವನವನ್ನಾಧರಿಸಿ ರಚಿತವಾದ ಕಾದಂಬರಿ ಲಸ್ಟ್ ಫಾರ್ ಲೈಫ್ ಎಂಬುದೂ ಮುಖ್ಯವಾದವು.