1717-79. ಇಂಗ್ಲೆಂಡಿನ ಜನಪ್ರಿಯ ನಟ, ನಾಟಕಕಾರ ಮತ್ತು ರಂಗಭೂಮಿಯ ನಿಯಂತ್ರಕ. ಸಹಜ ಅಭಿನಯವನ್ನು ಪ್ರಚಾರಕ್ಕೆ ತಂದವ. ಜನಿಸಿದ್ದು ಲಿಚ್ಫೀಲ್ಡ್‌ನ ಬಳಿ. ಪ್ರಾರಂಭದ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪಡೆದು ಅನಂತರ ಸ್ಯಾಮ್ಯುಯೆಲ್ ಜಾನ್ಸನ್ನೊಂದಿಗೆ ಲಂಡನಿಗೆ ಹೋದ. ಕಾನೂನು ಶಿಕ್ಷಣ ಪಡೆಯುವ ಆಶೆಯನ್ನು ತ್ಯಜಿಸಿ, ಸ್ವಲ್ಪ ಕಾಲ ದ್ರಾಕ್ಷಾರಸ ವ್ಯಾಪಾರ ಮಾಡಿದ. ಅನಂತರ ನಾಟಕದ ಗೀಳು ಹಿಡಿದು ನಟನಾದ. ಚಾಲ್ರ್ಸ್ ಮ್ಯಾಕ್ಲಿನ್ನಂಥ ಹೆಸರಾಂತ ರಂಗಭೂಮಿಯ ನಿರ್ವಾಹಕರ ಸ್ನೇಹ ಸಂಪಾದಿಸಿದ. ಸುಖಾಂತ, ದುಃಖಾಂತ ನಾಟಕಗಳ ವಿವಿಧ ಪ್ರಕಾರಗಳನ್ನು ಆಳವಾಗಿ ಅಭ್ಯಾಸಮಾಡಿದ.
ರಂಗಭೂಮಿಯ ಮೇಲೆ ಮೊದಲ ಬಾರಿಗೆ ಈತ ಕಾಣಿಸಿಕೊಂಡಿದ್ದು 1741ರಲ್ಲಿ. ಅದೇ ವರ್ಷ ಮೂರನೆಯ ರಿಚರ್ಡ್ ಆಗಿ ಅಭಿನಯಿಸಿ ಹೆಸರುಗಳಿಸಿದ. ಪ್ರವೇಶದ 7 ತಿಂಗಳ ಅವಧಿಯಲ್ಲಿ 18 ವಿವಿಧ ಪಾತ್ರಗಳನ್ನು ಅಭಿನಯಿಸಿದ. ಅಭಿನಯದಲ್ಲಿ ಸಹಜತೆಯನ್ನು ಸಾಧಿಸಿ, ನೂತನ ಮಾರ್ಗವನ್ನು ತೆರೆದು, ಲಂಡನ್ ಜನತೆಗೆ ಪ್ರಿಯನಾದ. ಈತನ ಅಭಿನಯವನ್ನು ಕವಿ ಅಲೆಗ್ಸಾಂಡರ್ ಪೋಪ್ ತುಂಬ ಮೆಚ್ಚಿಕೊಂಡಿದ್ದ.
ಗ್ಯಾರಿಕ್ ಅನಂತರ ಡ್ರೂರಿ ಲೇನ್ ಥಿಯೇಟರಿನ ನಿಯಂತ್ರಕನೂ ಅದರ ಒಬ್ಬ ಪಾಲುಗಾರನೂ ಆದ (1747). ರಂಗಭೂಮಿಯಲ್ಲಿನ ನೆರಳು ಬೆಳಕಿನ ವಿನ್ಯಾಸ ಮತ್ತು ಪೀಠೋಪಕರಣಗಳಲ್ಲಿ ಹೊಸ ಮಾರ್ಪಾಡುಗಳನ್ನು ಮಾಡಿದನಲ್ಲದೆ, ಅಭಿನಯಿಸುವ ರೀತಿಯಲ್ಲಿಯೂ ಅನೇಕ ಸುಧಾರಣೆಗಳನ್ನು ತಂದ. ಷೇಕ್ಸ್‌ಪಿಯರ್ ಮತ್ತು ಜಾನ್ಸನ್ರ ಅನೇಕ ನಾಟಕಗಳನ್ನು ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ರಂಗಭೂಮಿಯ ಮೇಲೆ ಪ್ರದರ್ಶಿಸಿ ಅವನ್ನು ಪುನರುಜ್ಜೀವನಗೊಳಿಸಿದ. ಹೊಸ ನಾಟಕಕಾರರ ಅನೇಕ ನಾಟಕಗಳನ್ನು ಪ್ರದರ್ಶಿಸಿ ಅವರನ್ನು ಪ್ರೋತ್ಸಾಹಿಸಿದ. ಈತ ಅನೇಕ ನಾಟಕಗಳನ್ನು ಬರೆದಿದ್ದಾನೆ. ಅವುಗಳಲ್ಲಿ ಮುಖ್ಯವಾಗಿ ಲೈಯಿಂಗ್ ವ್ಯಾಲೆಟ್ (1741), ಮಿಸ್ ಇನ್ ಹರ್ ಟೀನ್ಸ್ (1747) ಮತ್ತು ಐರಿಷ್ ವಿಡೊ (1772) ಇವುಗಳನ್ನು ಹೆಸರಿಸಬಹುದು.
ಈವ್ ಮೇರಿ ವಯೊಲೆಟ್ಟ ಎಂಬ ಫ್ರೆಂಚ್ ನರ್ತಕಿಯನ್ನು ಗ್ಯಾರಿಕ್ 1749ರಲ್ಲಿ ಮದುವೆಯಾದ.
ಗ್ಯಾರಿಕ್ ತನ್ನ ಜೀವಾವಧಿಯಲ್ಲಿ ಒಟ್ಟು 96 ವಿವಿಧ ಪಾತ್ರಗಳನ್ನು ಅಭಿನಯಿಸಿ ನಾಟಕ ಕಲೆಗೆ ಒಂದು ವಿಶಿಷ್ಟವಾದ ಮೆರುಗನ್ನು ಕೊಟ್ಟ. ಈತ ನಿರ್ವಹಿಸಿದ ಪಾತ್ರಗಳಲ್ಲಿ ಮುಖ್ಯವಾದುವು ಮೂರನೆಯ ರಿಚರ್ಡ್, ಹ್ಯಾಮ್ಲೆಟ್, ಕಿಂಗ್ ಲಿಯರ್ ಮತ್ತು ಅಬೆಲ್ ಡ್ರಗರ್-ಇವು. ತನ್ನ ಆಕರ್ಷಕ ಸಂಭಾಷಣೆ ಮತ್ತು ಸುಸಂಸ್ಕೃತ ನಡೆವಳಿಕೆಯಿಂದ ಅಸಂಖ್ಯಾತ ಅಭಿಮಾನಿಗಳನ್ನೂ ಸ್ನೇಹಿತರನ್ನೂ ಗ್ಯಾರಿಕ್ ಸಂಪಾದಿಸಿದ. ಈತ ಜಾನ್ಸನ್ನ ಸ್ನೇಹಕೂಟದ ಒಬ್ಬ ಸದಸ್ಯನೂ ಆಗಿದ್ದ. ಈತನ ಔದಾರ್ಯವನ್ನು ಜಾನ್ಸನ್ ಪ್ರಶಂಸಿಸಿದ್ದಾನೆ. ಗ್ಯಾರಿಕ್ನನ್ನು ಕುರಿತ ಅನೇಕ ಜೀವನ ಚರಿತ್ರೆಗಳೂ ಪ್ರಕಟವಾಗಿವೆ. ಅವುಗಳಲ್ಲಿ ಹೆಸರಿಸಬಹುದಾದ್ದು ಮಾರ್ಗರೆಟ್ ಬಾರ್ಟನ್ನಳದು(1948).
ಈತ 1779 ರ ಜನವರಿ 20 ರಂದು ನಿಧನನಾದ. ಗ್ಯಾರಿಕ್ನನ್ನು ವೆಸ್ಟ್‌ಮಿನಿಸ್ಟರ್ ಅಬೆಯಲ್ಲಿ ಪೊಯೆಟ್ಸ್ ಕಾರ್ನರ್ ಎಂಬ ಸ್ಥಳದಲ್ಲಿ ಷೇಕ್ಸ್‌ಪಿಯರನ ಪ್ರತಿಮೆಯ ಪಕ್ಕದಲ್ಲಿ ಸಮಾಧಿ ಮಾಡಿದ್ದಾರೆ. ವೆಸ್ಟ್‌ಮಿನಿಸ್ಟರ್ ಅಬೆಯಲ್ಲಿ ಸಮಾಧಿಯಾಗುವ ಗೌರವಕ್ಕೆ ಪಾತ್ರನಾದ ಮೊದಲ ನಟ ಇವನು. ಈತ ಸತ್ತಾಗ ಜಾನ್ಸನ್ ‘ರಾಷ್ಟ್ರಗಳ ಉಲ್ಲಾಸವೇ ಅಸ್ತಂಗತವಾಯಿತು’ ಎಂದು ಶೋಕಿಸಿದನಂತೆ.
ಗ್ಯಾರಿಕ್ನ ಮರಣಾನಂತರ, ಗ್ಯಾರಿಕ್ ಕ್ಲಬ್ ಎಂಬ ಒಂದು ಸಂಸ್ಥೆಯನ್ನು ಸ್ಥಾಪಿಸಲಾಯಿತು (1831). ನಾಟಕಕಲೆಗೆ ಪ್ರೋತ್ಸಾಹ ಕೊಡುವುದು, ನಟನ ಕಲೆಗೆ ಸಂಬಂಧಿಸಿದ ಗ್ರಂಥಭಂಡಾರವೊಂದನ್ನು ತೆರೆಯುವುದು ಇದರ ಮುಖ್ಯ ಉದ್ದೇಶವಾಗಿತ್ತು. ಕ್ಲಬ್ಬಿನ ಆಸ್ತಿಯಾಗಿ 1000 ನಾಟಕಸಂಬಂಧಿ ಚಿತ್ರಗಳೂ ಇತರ ಚಿತ್ರಗಳೂ ಇವೆ. ಜೊತೆಗೆ ನಾಟಕ ರಂಗಕ್ಕೆ ಸಂಬಂಧಿಸಿದ ಹಳೆಯ ದಾಖಲೆಗಳನ್ನು ವಿಪುಲವಾಗಿ ಸಂಗ್ರಹಿಸಲಾಗಿದೆ. 1881ರಲ್ಲಿ ವೆಸ್ಟ್‌ಮಿನಿಸ್ಟರ್ ನಗರದಲ್ಲಿ ಸ್ಥಾಪಿತವಾದ ಗ್ಯಾರಿಕ್ ಥಿಯೇಟರ್ ಇಂದಿಗೂ ಕ್ರಿಯಾಶೀಲವಾಗಿದೆ.