ಭಾರತದ ಮಧ್ಯಪ್ರದೇಶ ರಾಜ್ಯದಲ್ಲಿರುವ ಒಂದು ನಗರ ; ಅದೇ ಹೆಸರಿನ ಜಿಲ್ಲೆಯ ಮತ್ತು ವಿಭಾಗದ ಆಡಳಿತ ಕೇಂದ್ರ. ನಗರ ಹಿಂದೆ ಗ್ವಾಲಿಯರ್ ಸಂಸ್ಥಾನದ ರಾಜಧಾನಿಯಾಗಿತ್ತು. ಜನಸಂಖ್ಯೆ 2,030, 543(2011) ಉ.ಅ. 26o 12' ಮತ್ತು ಪು.ರೇ. 70o 10' ಮೇಲಿರುವ ಈ ನಗರ ಆಗ್ರ ನಗರದ ದಕ್ಷಿಣಕ್ಕೆ 122 ಕಿಮೀ ದೂರದಲ್ಲಿದೆ. ಮುಂಬಯಿ ರಾಷ್ಟ್ರೀಯ ಹೆದ್ದಾರಿ ಗ್ವಾಲಿಯರ್ ಮೂಲಕ ಹಾದುಹೋಗುತ್ತದೆ. ಗಂಗಾ ಯಮುನಾ ದೋಆಬ್ ಪ್ರದೇಶಕ್ಕೂ ದಖನ್ ಪ್ರಸ್ಥಭೂಮಿಗೂ ನಡುವೆ ಚಂಬಲ್ ಮಾರ್ಗದಲ್ಲಿ ಆಯಕಟ್ಟಿನ ಸ್ಥಳದಲ್ಲಿರುವುದರಿಂದ ಗ್ವಾಲಿಯರ್ ಬಹಳ ಹಿಂದಿನಿಂದಲೂ ಪ್ರಾಮುಖ್ಯಗಳಿಸಿದೆ. ಬ್ರಿಟಿಷರು ಭಾರತವನ್ನಾಳುತ್ತಿದ್ದಾಗ ಈ ನಗರಕ್ಕೆ ದೇಶದ ಇತರ ಮುಖ್ಯ ಸ್ಥಳಗಳೊಂದಿಗೆ ರೈಲ್ವೆ ಸಂಪರ್ಕ ಏರ್ಪಟ್ಟಿತು. ಈ ನಗರ ಮೂರು ಬದಿಗಳಲ್ಲಿ ಬೆಟ್ಟಗಳಿಂದ ಸುತ್ತುವರಿಯಲ್ಪಟ್ಟಿದೆ.
ಗ್ವಾಲಿಯರಿನ ಹಳೆಯ ನಗರ ಪ್ರದೇಶ ಇರುವುದು ಸುಮಾರು 91 ಮೀ ಎತ್ತರದ ಬಂಡೆಯೊಂದರ ಮೇಲೆ. ಇದರ ಸುತ್ತ ಕೋಟೆಯೊಂದಿದೆ. ಇದು ಭಾರತದ ಹಳೆಯ ಕೋಟೆಗಳಲ್ಲೊಂದು. 525 ರ ಶಾಸನವೊಂದರಲ್ಲಿ ಇದರ ಉಲ್ಲೇಖವುಂಟು. 9-10 ಮೀ ಎತ್ತರದ ಕೋಟೆಯ ಒಳಭಾಗದಲ್ಲಿ ಎಂಟು ಕೊಳಗಳೂ ಆರು ಅರಮನೆಗಳೂ ಆರು ದೇವಸ್ಥಾನಗಳೂ ಒಂದು ಮಸೀದಿಯೂ ಇನ್ನೂ ಹಲವಾರು ಕಟ್ಟಡಗಳೂ ಇವೆ. 11ನೆಯ ಶತಮಾನದ ತೇಲೀಕ ಮಂದಿರ, ಅತ್ತೆ-ಸೊಸೆಯರ ದೇಗುಲ, 15ನೆಯ ಶತಮಾನದಲ್ಲಿ ನಿರ್ಮಿತವಾದ ಮಾನ್ ಮಂದಿರ - ಇವು ಹಿಂದೂ ವಾಸ್ತುಶಿಲ್ಪದ ಉತ್ತಮ ನಿದರ್ಶನಗಳು. ಕರಣ್ ಅರಮನೆ ಇಂಡೋ-ಮುಸ್ಲಿಂ ಶಿಲ್ಪಕ್ಕೆ ಹೆಸರಾದ್ದು. ತೇಲಿಕ ಮಂದಿರ ಅತ್ಯುನ್ನತ ಕಟ್ಟಡ. ಅದರ ಗೋಪುರದ ಎತ್ತರ 33 ಮೀ ಗ್ವಾಲಿಯರಿನ ಹೊರವಲಯದಲ್ಲಿ ಬಂಡೆಗೋಡೆ ಗಳಲ್ಲಿ ಕೊರೆಯಲಾದ ಹಲವಾರು ಜೈನಮೂರ್ತಿಗಳುಂಟು. ಅವುಗಳ ಪೈಕಿ 25ಮೀ.ಎತ್ತರದ ಆದಿನಾಥಮೂರ್ತಿ ಪ್ರಮುಖವಾದ್ದು. ಕೋಟೆಯ ಹೊರಗಡೆ ಇರುವ ಕಟ್ಟಡಗಳಲ್ಲಿ ಮಹಮ್ಮದ್ ಗೌಸ್ ಮತ್ತು ತಾನ್ಸೇನ್ ಗೋರಿಗಳು ಮುಖ್ಯವಾದುವು.
ಹಳೆಯ ಗ್ವಾಲಿಯರ್ ಕೋಟೆಗೆ 1.5 ಕಿಮೀ ದೂರದಲ್ಲಿರುವ ಲಷ್ಕರ್ ಆಧುನಿಕ ನಗರ ಭಾಗ. ಇದು ಬಾರಾ ಬಜಾರ್, ದಾಲ್ ಜಾಜಾರ್, ಮಾಧವ ಗಂಜ್, ಫಾಲ್ಕಾ ಬಜಾರ್, ಜಾನಕ್ ಗಂಜ್ಗಳಿಂದ ಕೂಡಿದೆ. ಗ್ವಾಲಿಯರಿನ ಜನಸಂಖ್ಯೆಯಲ್ಲಿ ಶೇ. 40- ಶೇ. 50 ವಾಸಿಸುವುದು ಈ ಭಾಗದಲ್ಲಿ. ಗ್ವಾಲಿಯರ್ ನಗರ ಶಿಲ್ಪಕಲೆ, ಹೊಳಪಿನ ಹೆಂಚುಗಳು ಮತ್ತು ಆಭರಣಗಳಿಗೆ ಪ್ರಸಿದ್ಧವಾಗಿತ್ತು. ಈಗ ಇದು ಒಂದು ಕೈಗಾರಿಕಾ ಕೇಂದ್ರ. ರೇಯಾನ್, ಹತ್ತಿ ಮತ್ತು ರೇಷ್ಮೆ ಗಿರಣಿಗಳೂ ಚರ್ಮ, ಬಿಸ್ಕತ್ತು, ಎಂಜಿನಿಯರಿಂಗ್, ಬೆಂಕಿಕಡ್ಡಿ ಮತ್ತು ಕುಂಭ ಕಾರ್ಖಾನೆಗಳೂ ಇವೆ. ಗ್ವಾಲಿಯರ್ನಲ್ಲಿ ಹಲವಾರು ಪ್ರಮುಖ ಶೈಕ್ಷಣಿಕ ಸಂಸ್ಥೆಗಳಿವೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫ಼ರ್ರ್ಮೇಷನ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್ಮೆಂಟ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರ್ಯಾವಲ್ ಆ್ಯಂಡ್ ಟೂರಿಸಮ್ ಮ್ಯಾನೇಜ್ಮೆಂಟ್, ಮಾಧವ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಸೈನ್ಸ್, ಲಕ್ಮೀಬಾಯ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫಿಸಿóಕಲ್ ಎಜುಕೇಷನ್, ಅಲ್ಲದೆ ಆರು ವಿಶ್ವವಿದ್ಯಾನಿಲಯಗಳಿವೆ: ಜಿವಾಜಿ ಯೂನಿವರ್ಸಿಟಿ, ಮಹಾರಾಜ ಮಾನ್ಸಿಂಗ್ ತೋಮರ್ ಮ್ಯೂಸಿಕ್ ಆ್ಯಂಡ್ ಆಟ್ರ್ಸ್ ಯೂನಿವರ್ಸಿಟಿ, ರಾಜ್ಮಾತಾ ವಿಜಯರಾಜೆ ಸಿಂಧ್ಯಾ ಅಗ್ರಿಕಲ್ಚರಲ್ ಯೂನಿವರ್ಸಿಟಿ, ಲಕ್ಮೀಬಾಯ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫಿಸಿóಕಲ್ ಎಜುಕೇಷನ್, ಆ್ಯಮಿಟಿ ಯೂನಿವರ್ಸಿಟಿ, ಗ್ವಾಲಿಯರ್, ಐ.ಟಿ.ಎಂ ಯೂನಿವರ್ಸಿಟಿ.
ಇತಿಹಾಸ: ಗ್ವಾಲಿಯರ್ಗೆ ಆ ಹೆಸರು ಬರಲು ಇಲ್ಲಿ ವಾಸಿಸುತ್ತಿದ್ದ ಗ್ವಾಲಿಪ ಎಂಬ ತಪಸ್ವಿ ಕಾರಣವೆಂಬುದನ್ನು ಸ್ಥಳಪುರಾಣ ತಿಳಿಸುತ್ತದೆ. ಕುಷ್ಠರೋಗದಿಂದ ನರಳುತ್ತಿದ್ದ ಸೂರಜ್ ಸೇನ್ ಎಂಬ ಅರಸನ ರೋಗವನ್ನು ಆ ಸಂನ್ಯಾಸಿ ಗುಣಪಡಿಸಿದನೆಂದು ಪ್ರತೀತಿ. ಆತನ ಹೆಸರಾಗಿ ಆ ದೊರೆ ಗ್ವಾಲಿಯರ್ ಕೋಟೆಯನ್ನು ಕಟ್ಟಿಸಿದನೆಂದೂ ಗ್ವಾಲಿಪನ ಸೂಚನೆಯಂತೆ ತನ್ನ ಮುಂದೆ ಪಾಲ ಎಂಬ ಹೆಸರನ್ನು ಸೇರಿಸಿಕೊಂಡನೆಂದೂ ಈತನ ವಂಶದ ಅರಸನೊಬ್ಬ ತನ್ನನ್ನು ಪಾಲನೆಂದು ಕರೆದುಕೊಳ್ಳದಿದ್ದಾಗ ಪತನ ಹೊಂದಿದನೆಂದೂ ಹೇಳಲಾಗಿದೆ. ಗ್ವಾಲಿಯರಿಗೆ ಸಂಬಂಧಿಸಿದ ಶಾಸನಗಳಲ್ಲಿ ಈ ಬೆಟ್ಟವನ್ನು ಗೋಪಗಿರಿ, ಗೋಪಾದ್ರಿ, ಗೋಪಾಚಲ, ಎಂದು ಕರೆಯಲಾಗಿದೆ. ಇತಿಹಾಸದ ಪ್ರಕಾರ ಗ್ವಾಲಿಯರಿನ ಪ್ರಥಮ ಒಡೆಯರೆಂದರೆ ಹೂಣ ದೊರೆ ತೋರಮಾನ ಮತ್ತು ಆತನ ಮಗ ಮಿಹಿರಗುಲ. ಕೋಟೆಯಲ್ಲಿರುವ 525ರ ಶಾಸನವೊಂದರಿಂದ ಈ ವಿಷಯ ಗೊತ್ತಾಗುತ್ತದೆ. 9ನೆಯ ಶತಮಾನದಲ್ಲಿ ಕನೌಜಿನ ಗುರ್ಜರ-ಪ್ರತೀಹಾರ ದೊರೆಯಾದ ಭೋಜನಿಗೆ ಸೇರಿತ್ತು. ಇದು 1232 ವರೆಗೂ ಹಿಂದೂ ದೊರೆಗಳ ವಶದಲ್ಲೇ ಮುಂದು ವರೆಯಿತು. 1021ರಲ್ಲಿ ಸುಲ್ತಾನ್ ಮಹಮ್ಮದ್ ಇದನ್ನು ರಜಪುತರಿಂದ ಕಿತ್ತುಕೊಳ್ಳಲು ಯತ್ನಿಸಿದ. 1232ರಲ್ಲಿ ಸುಲ್ತಾನ ಅಲ್ತಮಶ್ ಇದನ್ನು ಗೆದ್ದುಕೊಂಡ. 1398ರಲ್ಲಿ ಇದು ಮತ್ತೆ ರಜಪುತರ ವಶಕ್ಕೆ ಬಂದು 1518ರ ವರೆಗೂ ಅವರ ಅಧೀನದಲ್ಲೇ ಇತ್ತು. ಈ ದೊರೆಗಳ ಪೈಕಿ ಪ್ರಸಿದ್ಧನಾದವನು ಮಾನ್ಸಿಂಗ್ (1456-1517). ಅವನು ಸುಂದರವಾದ ಅರಮನೆಯೊಂದನ್ನು ಕಟ್ಟಿಸಿದ. ಅವನ ರಾಣಿ ಮೃಗನಯನಾ ಎಂಬುವಳು ಕಲೆಗೆ ವಿಶೇಷ ಪ್ರೋತ್ಸಾಹ ನೀಡಿದಳು. ಗ್ವಾಲಿಯರ್ ಸಂಗೀತ ಕಲಾಕೇಂದ್ರವಾಯಿತು. ತಾನ್ಸೇನ್ ಗ್ವಾಲಿಯರಿನ ಆಸ್ಥಾನದಲ್ಲಿದ್ದ. ಆತ ಕೊನೆಯುಸಿರೆಳೆದದ್ದೂ ಗ್ವಾಲಿಯರ್ನಲ್ಲೇ.
ಗ್ವಾಲಿಯರ್ ಕೋಟೆ 1542ರಲ್ಲಿ ಷೇರ್ಷಹನ ವಶವಾಯಿತು. ಅವನ ವಂಶಜರಿಂದ 1559 ರಲ್ಲಿ ಅಕ್ಬರ್ ಇದನ್ನು ಗೆದ್ದುಕೊಂಡ. ಮೊಗಲ್ ಚಕ್ರವರ್ತಿಗಳು ಇದನ್ನು ರಾಜಕೀಯ ಬಂದಿಗಳನ್ನಿಡಲು ಬಳಸುತ್ತಿದ್ದರು. ಈ ಕೋಟೆ ಮರಾಠರ ವಶವಾದದ್ದು 1751ರಲ್ಲಿ. 1777ರಲ್ಲಿ ಇದು ಸಿಂಧ್ಯ ಮನೆತನದ ದೊರೆಗಳ ರಾಜಧಾನಿಯಾಯಿತು. 1780ರಲ್ಲಿ ಇದನ್ನು ಬ್ರಿಟಿಷರು ವಶಪಡಿಸಿಕೊಂಡರು. ಅವರಿಂದ 1783ರಲ್ಲಿ ಮರಾಠರ ಕೈಗೆ ಹೋಗಿದ್ದ ಈ ಕೋಟೆಯನ್ನು ಬ್ರಿಟಿಷರು ಮತ್ತೆ 1804ರಲ್ಲಿ ಗೆದ್ದುಕೊಂಡು 1805ರಲ್ಲಿ ಸಿಂಧ್ಯ ಮನೆತನಕ್ಕೆ ಕೊಟ್ಟರು. 1844ರಲ್ಲಿ ಬ್ರಿಟಿಷ್ ಸೇನೆ ಇಲ್ಲಿ ನೆಲಸಿತು. 1853ರಲ್ಲಿ ಇದನ್ನು ಸಿಂಧ್ಯ ರಾಜನಿಗೆ ಮತ್ತೆ ಮರಳಿಸಲಾಯಿತು. 1857ರಲ್ಲಿ ಸಂಭವಿಸಿದ ಬಂಡಾಯದಲ್ಲಿ ಗ್ವಾಲಿಯರ್ ಪ್ರಧಾನ ಪಾತ್ರವಹಿಸಿತ್ತು. ಇದು ಬಂಡಾಯಗಾರರ ಕೊನೆಯ ನೆಲೆಯಾಗಿತ್ತು. 1858ರಲ್ಲಿ ಇದನ್ನು ಬ್ರಿಟಿಷರು ಮತ್ತೆ ವಶಪಡಿಸಿಕೊಂಡು, 1886ರಲ್ಲಿ ಝಾನ್ಸಿಗೆ ಪ್ರತಿಯಾಗಿ ಇದನ್ನು ಸಿಂಧ್ಯನಿಗೆ ಕೊಟ್ಟರು. ಭಾರತಕ್ಕೆ ಸ್ವಾತಂತ್ರ್ಯ ಬಂದಮೇಲೆ ದೇಶೀಯ ಸಂಸ್ಥಾನಗಳು ಭಾರತ ಒಕ್ಕೂಟದಲ್ಲಿ ವಿಲೀನಗೊಂಡಾಗ ಗ್ವಾಲಿಯರ್ ಮಧ್ಯಪ್ರದೇಶಕ್ಕೆ ಸೇರಿತು. ‘ರೂಪ್ಸಿಂಗ್ ಸ್ಟೇಡಿಯಮ್’ ಎಂಬ ಅಂತಾರಾಷ್ಟ್ರೀಯ ದರ್ಜೆಯ ಭಾರಿ ಕ್ರಿಕೆಟ್ ಮೈದಾನ ಗ್ವಾಲಿಯರ್ನಲ್ಲಿದೆ. (ಎಸ್.ಜಿ.ಆರ್.)
ಗ್ವಾಲಿಯರ್ ಜಿಲ್ಲೆ: ಮಧ್ಯ ಪ್ರದೇಶದ 50 ಜಿಲ್ಲೆಗಳಲ್ಲೊಂದು. ಇದರ ವಿಸ್ತೀರ್ಣ 52142 ಚ.ಕಿಮೀ. ಜನಸಂಖ್ಯೆ 2030543 (2011). ಜಿಲ್ಲೆಯ ಐದನೆಯ ಒಂದು ಭಾಗ ಅರಣ್ಯಮಯ. ಉಳಿದ ಭಾಗ ಫಲವತ್ತಾದ ಸಾಗುವಳಿ ನೆಲ. ಗೋದಿ, ಬತ್ತ, ಮುಸುಕಿನ ಜೋಳ, ಕಬ್ಬು ಜಿಲ್ಲೆಯ ಮುಖ್ಯ ಬೆಳೆಗಳು. ಜಿಲ್ಲೆಯಲ್ಲಿ ಕಟ್ಟಡಕ್ಕೆ ಉಪಯುಕ್ತವಾದ ಕಲ್ಲು ಹೇರಳವಾಗಿ ಸಿಗುತ್ತದೆ. ಗ್ವಾಲಿಯರ್ ನಗರದ ಭವ್ಯ ಕಟ್ಟಡಗಳ ಕಲ್ಲು ಜಿಲ್ಲೆಯದೇ.
ಗ್ವಾಲಿಯರ್ ವಿಭಾಗ: ಭಿಂಡ್, ಮೊರೇನಾ, ಶಿವಪುರಿ, ಗೂನಾ, ದಾತಿಯಾ, ಗ್ವಾಲಿಯರ್-ಇವು ಗ್ವಾಲಿಯರ್ ವಿಭಾಗಕ್ಕೆ ಸೇರಿರುವ ಜಿಲ್ಲೆಗಳು. ಗ್ವಾಲಿಯರ್ ವಿಭಾಗದ ವಿಸ್ತೀರ್ಣ 17,216 ಚ.ಮೈ ಜನಸಂಖ್ಯೆ 43,49,753 (1971). (ಕೆ.ಆರ್)
ಗ್ವಾಲಿಯರ್ ಸಂಸ್ಥಾನ: ಗ್ವಾಲಿಯರ್ ಸಂಸ್ಥಾನದ ಸ್ಥಾಪಕ ರಾಣೋಜಿ ಸಿಂಧ್ಯ. ಮರಾಠಾ ಪೇಷ್ವೆಯರ ಸೇನಾಧಿಕಾರಿಯಾಗಿದ್ದ ಸಿಂಧ್ಯ 18ನೆಯ ಶತಮಾನದಲ್ಲಿ ಸ್ವತಂತ್ರವಾದ ನೀತಿ ಅನುಸರಿಸತೊಡಗಿದ. ಈತ ತೀರಿಕೊಂಡದ್ದು 1745ರಲ್ಲಿ. 1761ರಲ್ಲಿ ಪಾಣಿಪಟ್ ಯುದ್ಧದಲ್ಲಿ ಪೇಷ್ವೆಗಳು ಸೋತಾಗ ಗ್ವಾಲಿಯರ್ನಲ್ಲಿ ಆಳುತ್ತಿದ್ದ ಮಹದಾಜಿ ಸಿಂಧ್ಯ ಬಲಿಷ್ಠನಾದ. ಹೆಸರಿಗೆ ಇವನು ಪೇಷ್ವೆಯರ ಅಧೀನನಾಗಿದ್ದರೂ ಮಧ್ಯಭಾರತ ಮತ್ತು ಸುತ್ತಮುತ್ತಣ ವಿಶಾಲವಾದ ಪ್ರದೇಶವನ್ನಾಳುತ್ತಿದ್ದ. 1785ರಲ್ಲಿ ದೆಹಲಿಯ ಸಿಂಹಾಸನದ ಮೇಲೆ ಷಾ ಆಲಮನನ್ನು ಕೂರಿಸಿದ್ದನಲ್ಲದೆ, ಅನೇಕ ರಜಪುತ ದೊರೆಗಳಿಂದ ಕಪ್ಪಕಾಣಿಕೆ ವಸೂಲು ಮಾಡುತ್ತಿದ್ದ. 1794ರಲ್ಲಿ ಗ್ವಾಲಿಯರ್ ಸಿಂಹಾಸನವನ್ನೇರಿದ ದೌಲತ್ ರಾವ್ ಬ್ರಿಟಿಷರಿಗೆ ಸೋತು ತನ್ನ ಸಂಸ್ಥಾನದ ಹಲವು ಭಾಗಗಳನ್ನು ಕಳೆದುಕೊಳ್ಳಬೇಕಾಯಿತು. 1857ರಲ್ಲಿ ಸಂಭವಿಸಿದ ಬಂಡಾಯದಲ್ಲಿ ಗ್ವಾಲಿಯರ್ ಸಂಸ್ಥಾನಾಧೀಶ ಬ್ರಿಟಿಷರಿಗೆ ವಿಧೇಯನಾಗಿದ್ದನಾದರೂ ಆ ನಗರದ ಕೋಟೆಯಲ್ಲಿ ಬಂಡಾಯದ ವೀರರು ಸೇರಿಕೊಂಡು ಕೊನೆಯ ತನಕ ಹೋರಾಡಿದರು.
ಗ್ವಾಲಿಯರ್ ಸಂಸ್ಥಾನದ ಆಡಳಿತ ಕೇಂದ್ರವಾಗಿದ್ದುದು ಲಷ್ಕರ್. ಚಂಬಲ್ ನದಿಯ ದಕ್ಷಿಣಕ್ಕೆ ಭೂಪಾಲ್ ಸಂಸ್ಥಾನದ ಎಲ್ಲೆಯವರೆಗಿನ ಪ್ರದೇಶ, ವಿಂಧ್ಯ ಪರ್ವತದ ಉತ್ತರಕ್ಕೆ ಕಾಲಿಸಿಂಧ್ ನದಿಯ ಉಗಮದ ಪ್ರದೇಶ, ಇದಕ್ಕೆ ಪಶ್ಚಿಮದಲ್ಲಿರುವ ಪ್ರದೇಶಗಳು, ನರ್ಮದಾ ನದಿಯ ಉತ್ತರ ಪ್ರದೇಶ - ಇವು ಗ್ವಾಲಿಯರ್ ಸಂಸ್ಥಾನಕ್ಕೆ ಸೇರಿದ್ದ ಭಾಗಗಳು. ಪ್ರಾಚೀನ ಉಜ್ಜಯಿನಿ, ಭಿಲ್ಲಾ, ಬೆಸ್ನಗರ್, ಉದಯಗಿರಿ, ಬಾಗ್ - ಇವು ಹಿಂದಿನ ಗ್ವಾಲಿಯರ್ ಸಂಸ್ಥಾನ ಪ್ರದೇಶದಲ್ಲಿವೆ. ಚಂದೇರಿ, ಮಂಡಸೋರ್, ಗೋಹುದ್ - ಈ ಸ್ಥಳಗಳಲ್ಲಿ ಅನೇಕ ಐತಿಹಾಸಿಕ ಸ್ಮಾರಕಗಳಿವೆ. ಗ್ವಾಲಿಯರ್ ನಗರದ ಬಳಿಯಲ್ಲಿರುವ ಆಂಟ್ರಿಯಲ್ಲಿ ಅಬುಲ್ ಫಜ಼ಲ್ ಅಲ್ಲಾಮಿಯ ಗೋರಿಯಿದೆ. ನಳಮಹಾರಾಜನ ರಾಜಧಾನಿ ಶಿವಪುರ ಜಿಲ್ಲೆಯಲ್ಲಿತ್ತೆಂದು ಪ್ರತೀತಿ. ನಾರ್ವಾರ್ ಕೋಟೆ ಅವನದೆನ್ನಲಾಗಿದೆ. ತಾನ್ಸೇನ್ನ ಸಮಾಧಿಯ ಬಳಿಯಲ್ಲೇ ಮಹಮ್ಮದ್ ಗೌಸನ ಘೋರಿಯುಂಟು. ಇದು ಮೊಗಲ್ ವಾಸ್ತುಶಿಲ್ಪಕ್ಕೆ ಉತ್ತಮ ನಿದರ್ಶನ. ಗ್ವಾಲಿಯರ್ ಸಂಸ್ಥಾನ 1948ರ ಮೇ 28ರಂದು ಮಧ್ಯಭಾರತದಲ್ಲಿ ವಿಲೀನಗೊಂಡಿತು. 1956ರ ನವೆಂಬರ್ 1ರಂದು ಮಧ್ಯಪ್ರದೇಶದ ಭಾಗವಾಯಿತು. (ಎಚ್.ಜಿ.ಆರ್)