ಚಕ್ರಗಳು (ಯೋಗದಲ್ಲಿ)
ದೇಹದಲ್ಲಿರುವ ಅನೇಕ ನಾಡಿಗಳಲ್ಲಿನ ಪ್ರಾಣಶಕ್ತಿಯ ಸೂಕ್ಷ್ಮ ಕೇಂದ್ರಗಳನ್ನು ಯೋಗಶಾಸ್ತ್ರದಲ್ಲಿ ಚಕ್ರ ಅಥವಾ ಪದ್ಮಗಳೆಂದು ಕರೆಯುತ್ತಾರೆ. ನಾಡಿಗಳು ಅತಿಸೂಕ್ಷ್ಮ ಕೊಳವೆಗಳಾಗಿದ್ದು ಮಾನಸಿಕ ಶಕ್ತಿಯ ವಾಹಕಗಳಾಗಿವೆ. ಅವುಗಳಲ್ಲಿ ಇಡಾ, ಪಿಂಗಳಾ, ಸುಷುಮ್ನಾ, ಗಾಂಧಾರೀ, ಹಸ್ತಜಿಹ್ವಾ, ಪ್ರಷಾ, ಯಶಸ್ವಿನೀ, ಅಲಂಬುಷಾ, ಕುಹು, ಶಂಖಿನೀ- ಎಂಬ ಹತ್ತು ನಾಡಿಗಳು ಪ್ರಾಣವಾಹಕಗಳಾಗಿದ್ದು ಮುಖ್ಯವೆನಿಸಿಕೊಂಡಿವೆ. ಈ ಹತ್ತರಲ್ಲಿ ಇಡಾ, ಪಿಂಗಳಾ, ಸುಷುಮ್ನಾ-ಇವು ಅತಿ ಮುಖ್ಯವಾಗಿವೆ. ಇಡಾ ಎಂಬುದು ಮೇರುದಂಡದ (ಕಶೇರುಕದ) ಎಡಭಾಗದಲ್ಲೂ ಪಿಂಗಳಾ ಎಂಬುದು ಬಲಭಾಗದಲ್ಲೂ ಸುಷುಮ್ನಾ ಎಂಬುದು ಮಧ್ಯಭಾಗದಲ್ಲೂ ಇರತಕ್ಕವು. ಗುದಸ್ಥಾನಕ್ಕೂ ಜನನೇಂದ್ರಿಯದ ಮೂಲ ಪ್ರದೇಶಕ್ಕೂ ಮಧ್ಯೆ ಇರುವ ಕಂದ ಎಂಬ ಸೂಕ್ಷ್ಮ ಭಾಗದಿಂದ ಈ ಎಲ್ಲ ನಾಡಿಗಳೂ ಹೊರಡುತ್ತವೆ. ಇವಕ್ಕೆ ಸಂಬಂಧಿಸಿದಂತೆ ಅಲ್ಲಲ್ಲಿ ಇರುವ ಎಲ್ಲ ಚಕ್ರಗಳೂ ಮೇರುದಂಡದೊಡನೆ ಸಂಪರ್ಕ ಪಡೆದಿವೆ. ಧ್ಯಾನಾದಿಗಳಲ್ಲಿ ಈ ಚಕ್ರಗಳ ಇರುವಿಕೆ ಗೋಚರವಾಗುವುದೆಂದು ಶಾಸ್ತ್ರದಲ್ಲಿ ಪ್ರತಿಪಾದಿತವಾಗಿದೆ. ಚಕ್ರಗಳ ಸಂಖ್ಯೆಯ ವಿಚಾರದಲ್ಲಿ ಭಿನ್ನಾಭಿಪ್ರಾಯವಿರುವುದನ್ನು ಗಮನಿಸಬಹುದು ; ಕೆಲವು ಹಠಯೋಗಿಗಳ ಮತದಲ್ಲಿ ಇಪ್ಪತ್ತೊಂದು ಅಪ್ರಧಾನ ಚಕ್ರಗಳೂ ಹದಿಮೂರು ಪ್ರಧಾನ ಚಕ್ರಗಳೂ ಇವೆ. ಮತ್ತೆ ಕೆಲವರ ಪ್ರಕಾರ ಈ ಚಕ್ರಗಳ ಸಂಖ್ಯೆ ನಲವತ್ತೊಂಬತ್ತು ; ಕೆಲವು ಪ್ರಾಚೀನ ಯೋಗಿಗಳು ಹೇಳಿರುವಂತೆ ಒಟ್ಟು ನೂರನಲವತ್ತನಾಲ್ಕು ಚಕ್ರಗಳಿವೆ. ಅವುಗಳಲ್ಲಿ ಬಹು ಮುಖ್ಯವೆಂದು ಸೂಚಿತವಾಗಿರತಕ್ಕದವು-ಮೂಲಧಾರ ಚಕ್ರ, ಸ್ವಾಧಿಷ್ಠಾನ ಚಕ್ರ, ಮಣಿಪೂರ ಚಕ್ರ, ಅನಾಹತ ಚಕ್ರ, ವಿಶುದ್ಧಿ ಚಕ್ರ, ಆಜ್ಞಾಚಕ್ರ ಎಂಬ ಆರು. ಚೈತನ್ಯ ಶಕ್ತಿಯ ಸೂಕ್ಷ್ಮ ಕೇಂದ್ರಗಳಾಗಿರುವ ಇವು ಶರೀರದ ವಿವಿಧ ಚಟುವಟಿಕೆಗಳನ್ನು ನಿಯಂತ್ರಣಗೊಳಿಸುತ್ತವೆ. ಈ ಎಲ್ಲ ಚಕ್ರಗಳಿಗೂ ವ್ಯಾಪಕವಾದ, ಮೂಲಭೂತ ಹಾಗೂ ವಿಶ್ವಾತ್ಮಕವಾಗಿರುವ ಕುಂಡಲಿನಿ (ನೋಡಿ- ಕುಂಡಲಿನಿ) ಎಂಬುದು ಮೂಲಾಧಾರ ಚಕ್ರದಲ್ಲಿ ಸರ್ಪದಂತೆ ಸುತ್ತಿಕೊಂಡು ನೆಲಸಿರುವ ಅವ್ಯಕ್ತ ದಿವ್ಯಶಕ್ತ.
ಹಠಯೋಗದಲ್ಲಿ ಅಷ್ಟಾಂಗಯೋಗವೆಂದು ಪ್ರಸಿದ್ಧವಾಗಿರುವ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣಾ, ಧ್ಯಾನ್ಯ, ಸಮಾಧಿ ಎಂಬ ಯೋಗಮಾರ್ಗಗಳಿಂದಲೂ ಮಹಾಮುದ್ರಾ ಮುಂತಾದ ಯೋಗಮುದ್ರಗಳಿಂದಲೂ ಕುಂಡಲಿನೀ ಶಕ್ತಿಯನ್ನು ಪ್ರಬುದ್ಧಗೊಳಿಸಬಹುದು ; ಚಿತ್ತೈಕಾಗ್ರತೆ ಮುಂತಾದ ಸಾಧನೆಗಳಿಂದ ಕುಂಡಲಿನಿ ಪ್ರಬುದ್ಧವಾಗುತ್ತದೆಂದು ರಾಜಯೋಗ ತಿಳಿಸುತ್ತದೆ. ಹಾಗೆ ಎಚ್ಚೆತ್ತ ಕುಂಡಲಿನೀ ಶಕ್ತಿ ಮೇಲೆ ಹೇಳಿದ ಷಟ್ಚಕ್ರಗಳ ಮೂಲಕ ಸಾಗಿ ಅವನ್ನೂ ಎಚ್ಚರಗೊಳಿಸಿ ಶಿರೋಭಾಗದಲ್ಲಿರುವ ಸಹಸ್ರಾರವೆಂಬ ಮುಖ್ಯಕೇಂದ್ರವನ್ನು ಸೇರುವುದೇ ಆನಂದ ಸ್ವರೂಪದ ಮುಕ್ತಿಯೆಂದು ಹೇಳಲಾಗಿದೆ. ಮೇರುದಂಡದ ತಳಭಾಗದಿಂದ ಹಿಡಿದು ಮೇಲ ಮೇಲಣ ನಾನಾ ಭಾಗಗಳೂ ಕಡೆಯದಾಗಿ ತಲೆಯಲ್ಲಿರುವ ಬ್ರಹ್ಮರಂಧ್ರವೂ ಈ ಚಕ್ರಗಳ ನಾನಾ ಸ್ಥಾನಗಳಾಗಿವೆ. ಪ್ರತಿ ಚಕ್ರಕ್ಕೂ ದೇವತೆ, ವರ್ಣ ಬೀಜಾಕ್ಷರಗಳಿವೆ.
ಮೇಲ್ಕಂಡ ಆರು ಚಕ್ರಗಳಲ್ಲಿ ಮೊದಲನೆಯದಾದ ಮೂಲಾಧಾರಚಕ್ರ ಗುದದ ಸಮೀಪದಲ್ಲಿ, ಇಡಾ ಪಿಂಗಳಾ ಸುಷುಮ್ನಾ ನಾಡಿಗಳ ಸಂಧಿಸ್ಥಾನದ ಕೆಳಭಾಗದಲ್ಲಿದೆ. ಇದು ಕುಂಡಲಿನೀ ಶಕ್ತಿ ನೆಲೆಸಿರುವ ಒಂದು ಮೂಲಕೇಂದ್ರ. ಸಾಧಕನಿಗೆ ಈ ಚಕ್ರ ಗೋಚರವಾಗುವುದಲ್ಲದೆ ಕುಂಡಲಿನಿಯನ್ನು ಪ್ರಾಣಾಯಾಮಾದಿಗಳಿಂದ ಪ್ರಬುದ್ಧಗೊಳಿಸುವ ಕ್ರಮದ ಅರಿವೂ ಉಂಟಾಗುತ್ತದೆ. ಈ ಸ್ಥಿತಿಯಲ್ಲಿ ಅವನು ಮನಸ್ಸನ್ನು ಸಂಪೂರ್ಣವಾಗಿ ನಿಗ್ರಹಿಸಬಲ್ಲದವನಾಗುತ್ತಾನೆ ; ಅವನಿಗೆ ಸಹಜವಾದ ಆನಂದ ಲಭಿಸುತ್ತದೆ.
ಎರಡನೆಯದಾದ ಸ್ವಾಧಿಷ್ಠಾನ ಚಕ್ರ ಸುಷುಮ್ನಾನಾಡಿಯಲ್ಲಿದ್ದು ಮೂಲಾಧಾರ ಚಕ್ರದಿಂದ ಸುಮಾರು ಎರಡಂಗುಲಗಳಷ್ಟು ಮೇಲೆ, ಜನನೇಂದ್ರಿಯದ ಮೂಲಭಾಗದಲ್ಲಿರುತ್ತದೆ. ಕುಂಡಲಿನೀ ಶಕ್ತಿಯಿಂದ ಈ ಚಕ್ರ ಎಚ್ಚರಗೊಂಡಾಗ ಸಾಧಕ ಅನೇಕ ಸಿದ್ಧಿಗಳನ್ನು ಪಡೆಯುತ್ತಾನೆ. ಅಲ್ಲದೆ ಕಾಮಾದಿ ಅರಿಷಡ್ವರ್ಗಗಳನ್ನು ಜಯಿಸಲು ಸಮರ್ಥನಾಗುತ್ತಾನೆ.
ಅನಂತರ ಮಣಿಪೂರಕಚಕ್ರ. ಇದು ನಾಭಿಸ್ಥಾನದಲ್ಲಿದೆ. ಸುಷುಮ್ನಾ ನಾಡಿಯಲ್ಲಿರುವ ಇದನ್ನು ಎಚ್ಚರಿಸಿಕೊಳ್ಳಬಲ್ಲ ಸಾಧಕ ರೋಗರಹಿತನೂ ಅಗ್ನಿ ಮುಂತಾದವುಗಳ ಭಯವಿಲ್ಲದವನೂ ಆಗುತ್ತಾನೆ.
ಮುಂದೆ ನಾಲ್ಕನೆಯದು ಅನಾಹತಚಕ್ರ. ಸುಷುಮ್ನಾ ನಾಡಿಯಲ್ಲಿರುವ ಇದು ಹೃದಯಸ್ಥಾನದಲ್ಲಿರತಕ್ಕದ್ದು. ಈ ಚಕ್ರದ ಅರಿವನ್ನು ಕುಂಡಲಿನೀ ಶಕ್ತಿಯ ಮೂಲಕ ಪಡೆದ ಸಾಧಕ ವಿಶ್ವಪ್ರೇಮಿಯಾಗುವುದಲ್ಲದೆ, ಕಾಯಸಿದ್ಧಿ ಮುಂತಾದ ಫಲಗಳನ್ನೂ ಪಡೆಯುತ್ತಾನೆ. ಇನ್ನು ವಿಶುದ್ಧಿಚಕ್ರ. ಸುಷುಮ್ನಾ ನಾಡಿಯಲ್ಲಿದ್ದು, ಕಂಠಸ್ಥಾನದಲ್ಲಿರುವ ಚಕ್ರ. ಕುಂಡಲಿನೀ ಶಕ್ತಿ ಇಲ್ಲಿ ನಿಂತಾಗ ಸಾಧಕ ತ್ರಿಕಾಲಜ್ಞಾನಿಯಾಗುತ್ತಾನೆ. ಅವನ ಯೌವನ, ಉತ್ಸಾಹಗಳು ಸ್ಥಿರವಾಗುತ್ತವೆ.
ಆರನೆಯದಾಗಿ ಆಜ್ಞಾಚಕ್ರ. ಇದೂ ಸುಷುಮ್ನಾ ನಾಡಿಯಲ್ಲೆ ಇದೆ. ಎರಡು ಹುಬ್ಬುಗಳ ನಡುವೆ ಇದರ ಸ್ಥಾನವಿದೆ. ಓಂಕಾರ ಈ ಚಕ್ರಕ್ಕೆ ಬೀಜಾಕ್ಷರ ಕುಂಡಲಿನಿಯಿಂದ ಇದನ್ನು ಎಚ್ಚರಿಸಬಲ್ಲ ಯೋಗಿ ತನ್ನ ಕರ್ಮವನ್ನೆಲ್ಲ ನೀಗಿಕೊಂಡು ಜೀವನ್ಮುಕ್ತನ ಸ್ಥಿತಿಯನ್ನು ಪಡೆಯುತ್ತಾನೆ. ಹೀಗೆ ಕುಂಡಲಿನೀ ಶಕ್ತಿಯನ್ನು ಸಾಕ್ಷಾತ್ಕರಿಸಿಕೊಂಡ ಯೋಗಿಗೆ ಅಣಿಮಾದಿ ಅಷ್ಟಸಿದ್ಧಿಗಳು (ನೋಡಿ- ಅಷ್ಟಸಿದ್ಧಿಗಳು) ಲಭಿಸುತ್ತವೆಂದು ಶಾಸ್ತ್ರದಲ್ಲಿ ಪ್ರತಿಪಾದಿತವಾಗಿದೆ.
ಯೋಗಶಾಸ್ತ್ರದ ಪ್ರಕಾರ ಮೇಲ್ಕಂಡಂತೆ ಚಕ್ರಗಳು ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನುಂಟು ಮಾಡಬಲ್ಲ ಸೂಕ್ಷ್ಮ ಕೇಂದ್ರಗಳಾಗಿ ಮಹತ್ತ್ವವನ್ನು ಪಡೆದಿವೆ. ಮೂಲಾಧಾರಚಕ್ರದಲ್ಲಿನ ಕುಂಡಲಿನಿ ಎಚ್ಚರಗೊಂಡು ಈ ಷಟ್ಚಕ್ರಗಳ ಮೂಲಕ ಪ್ರಸರಿಸಿ ಶಿರೋಭಾಗದಲ್ಲಿರುವ ಮತ್ತು ಶರೀರದಲ್ಲಿ ಅತಿಪ್ರಧಾನ ಕೇಂದ್ರವಾಗಿರುವ ಸಹಸ್ರಾರವನ್ನು (ಇದನ್ನೂ ಚಕ್ರ ಎಂದೇ ಕರೆದಿದ್ದಾರೆ) ಸೇರಿದಾಗ ಯೋಗಿಗೆ ಮುಕ್ತಿಯ ಪರಮಾನಂದ ಲಭಿಸುತ್ತದೆ.
ಕುಂಡಲೀ ಕುಟಿಲಾಕಾರಾ ಸರ್ಪವತ್ ಪರಿಕೀರ್ತಿತಾ | ಸಾ ಶಕ್ತಿಶ್ಚಾಲಿತಾ ಯೇನ ಸ ಮುಕ್ತೋ ನಾತ್ರ ಸಂಶಯಃ || (ಬಿ.ಕೆ.ಎಸ್.)