ಚೆನ್ನವೀರ ಕಣವಿ : - ಸಮನ್ವಯ ಕವಿ, ವಿಮರ್ಶಕ. 1928 ಜೂನ್ 28ರಂದು ಧಾರವಾಡ ಜಿಲ್ಲೆ ಹೊಂಬಳ ಗ್ರಾಮದಲ್ಲಿ ಜನಿಸಿದರು. ತಂದೆ ಸಕ್ರಪ್ಪ, ತಾಯಿ ಪಾರ್ವತವ್ವ. ಗದಗ, ಧಾರವಾಡಗಳಲ್ಲಿ ವಿದ್ಯಾಭ್ಯಾಸ ನಡೆಸಿದರು. 1950ರಲ್ಲಿ ಬಿ.ಎ., 1952ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪೂರೈಸಿದರು. 1952ರಲ್ಲಿ ಆ ವಿಶ್ವವಿದ್ಯಾಲಯದ ಪ್ರಸಾರಾಂಗದ ಕಾರ್ಯದರ್ಶಿಯಾಗಿ ಅನಂತರ ಅದರ ನಿರ್ದೇಶಕರಾಗಿ (1958) ಸೇವೆ ಸಲ್ಲಿಸಿ ನಿವೃತ್ತರಾದರು.
ಇವರು ಕಾವ್ಯ, ವಿಮರ್ಶೆ ಈ ಎರಡೂ ಕ್ಷೇತ್ರಗಳಲ್ಲೂ ವ್ಯವಸಾಯ ಮಾಡಿದವರಾದರೂ ಇವರ ಒಲವು ಕಾವ್ಯದ ಕಡೆಗೇ. ಹಾಗೆಂದು ವಿಮರ್ಶೆಯನ್ನು ಕಡೆಗಣಿಸಿದವರಲ್ಲ. ಇವರ ಕಾವ್ಯದ ಹಿನ್ನೆಲೆಯಲ್ಲಿ ವಿಮರ್ಶನ ಪ್ರe್ಞÉ ಇದ್ದರೂ ಅದು ಹಾಲಿನಲ್ಲಿ ಬೆರೆತ ಸಕ್ಕರೆಯಂತೆ ಸುಪ್ತವಾಗಿದ್ದು ತನ್ನ ಪ್ರಭಾವವನ್ನು ಬೀರುತ್ತದೆ. ಪ್ರe್ಞÉ ಪ್ರತಿಭೆಗಳ ಹದವಾದ ಕೂಡುವಿಕೆಯ ಫಲ ಇವರ ಕವಿತೆ ಎನ್ನಬಹುದು.
ಕಾವ್ಯಾಕ್ಷಿ ಇವರ ಪ್ರಥಮ ಕವನ ಸಂಕಲನ (1949). ಇದಕ್ಕೂ ಮೊದಲು ನಾಲ್ಕೈದು ವರ್ಷಗಳಿಂದ ಕವನ ರಚನೆಯಲ್ಲಿ ಗಂಭೀರವಾಗಿ ತೊಡಗಿದ್ದರು. ಅನಂತರ ಕಾವ್ಯ ವ್ಯವಸಾಯ ಸಮೃದ್ಧಿಯಾಗುತ್ತಾ ಹೋಯಿತು. ಅನೇಕ ಕವನ ಸಂಕಲನಗಳನ್ನು ಪ್ರಕಟಿಸಿದರು. ಕಾವ್ಯ ಮಾರ್ಗದಲ್ಲಿ ಇವರ ಗಂಭೀರ ನಡಿಗೆ, ಅತಿಯಾದ ಏರಿಳಿತಗಳಾಗಲಿ, ವಿವಿಧ ಕಾವ್ಯ ಮಾರ್ಗಗಳ ಹೊಯ್ದಾಟಗಳಾಗಲಿ ಅವುಗಳ ತೀವ್ರ ಪ್ರಭಾವವಾಗಲಿ ಎಲ್ಲೂ ಎದ್ದು ಕಾಣುವಂತಿರಲಿಲ್ಲ. ಅತಿರೇಕ ಎನಿಸುವಂತಿರಲಿಲ್ಲ. ಇವರು ಕಾವ್ಯರಚನೆಯಾರಂಭಿಸಿದಾಗ ಕನ್ನಡದಲ್ಲಿ ನವೋದಯ ಕಾವ್ಯ ಪರಾಕಾಷ್ಠೆಯ ಸ್ಥಿತಿ ಪಡೆದಿತ್ತು. ಅನಂತರ ಕೆಲವೇ ವರ್ಷಗಳಲ್ಲಿ ನವ್ಯಕಾವ್ಯದ ಉರುಬು ಆರಂಭವಾಯಿತು. ಇವರು ಆ ಹಂತದಲ್ಲಿ ನವ್ಯತೆಯ ಕಡೆಗೆ ವಾಲಿದಂತೆ ಕಂಡರೂ ಬಹು ಎಚ್ಚರದಿಂದ ಕಾವ್ಯ ರಚನೆಯಲ್ಲಿ ತೊಡಗಿದರು. ಇವರು ಮುಖ್ಯವಾಗಿ ಭಾವನಾಪ್ರಧಾನ ಕವಿ ಎಂಬುದು ಕುರ್ತುಕೋಟಿಯವರ ಅಭಿಪ್ರಾಯ.
ಇವರ ದೀಪಧಾರಿ (1956) ಕವನ ಸಂಕಲನದಲ್ಲಿ ಕೆಲವು ನವ್ಯಕಾವ್ಯ ಮಾರ್ಗದ ಹಲವು ಅಂಶಗಳನ್ನು ಓದುಗರು ಕಾಣಬಹುದಾದರೂ ಆ ಮಾರ್ಗದಲ್ಲಿ ನಡೆದ ಯಶಸ್ವಿ ಪ್ರಯೋಗಗಳೆಂದು ತಾವು ಇದನ್ನು ಕರೆಯುತ್ತಿಲ್ಲವೆಂದು ಆಧುನಿಕ ಭಾವಗೀತೆ ಹಾಗೂ ನವ್ಯಮಾರ್ಗಗಳ ನಡುವೆ ನಿರ್ಮಾಣಗೊಂಡಿರುವ ಕಂದರಕ್ಕೆ ಇದು ಸೇತುವೆಯಾದೀತೆಂಬ ನಮ್ಮ ಭಾವನೆ ತಮಗಿದೆಯೆಂದೂ ಕಣವಿಯವರು ಆ ಸಂಕಲನದ ಮುನ್ನುಡಿಯಲ್ಲಿ ಹೇಳಿಕೊಂಡಿದ್ದಾರೆ. ಇವೆರಡೂ ಮಾರ್ಗಗಳ ನಡುವೆ ಇದೊಂದು ಸೇತುವೆಯಾದೀತೆಂಬ ಮಾತನ್ನು ವಿಮರ್ಶಕರು ಗಮನಿಸಿ ಇವರನ್ನು `ಸಮನ್ವಯ ಕವಿ ಎಂದು ವರ್ಣಿಸತೊಡಗಿದರು. ನವೋದಯವಾಗಲಿ, ನವ್ಯವಾಗಲಿ ಮೂಲತಃ ಅದು ಕಾವ್ಯವಾಗಿರಬೇಕಾದ್ದು ಮುಖ್ಯ ಎಂಬುದು ಕಣವಿಯವರನಂಬಿಕೆ. ವಿವಿಧ ಕಾವ್ಯ ಪ್ರಕಾರಗಳಿಗೆ ಸಾಮಾನ್ಯವಾದ ಹಲವು ಅಂಶಗಳಿರುತ್ತವೆ. ಒಂದೊಂದು ಪ್ರಕಾರದಲ್ಲಿ ಕೆಲಕೆಲವು ಅಂಶಗಳಿಗೆ ಒತ್ತು ಬೀಳುತ್ತದೆ. ಇದೊಂದು ಸಹಜ ಪ್ರತಿಕ್ರಿಯೆ ಎನ್ನಬಹುದಾಗಿದೆ. ನಾನು ಯಾವ ಪಂಥದ ಕವಿಯೋ, ನನಗೆ ತಿಳಿದಿಲ್ಲ. ಆ ಕುರಿತು ಚರ್ಚೆ ಮಾಡುವವರು ಮಾಡಿಕೊಳ್ಳಲಿ. ಒಟ್ಟಿನಲ್ಲಿ ನಾನು ಕವಿ ಎಂಬುದಷ್ಟೇ ಮುಖ್ಯವಾದದ್ದು, ಅಷ್ಟು ಸಾಕು ಎಂಬ ಅಭಿಪ್ರಾಯವನ್ನು ಕಣವಿಯವರು ವ್ಯಕ್ತಪಡಿಸಿದ್ದುಂಟು. ಪ್ರಕೃತಿಲೀಲೆ, ಪ್ರಣಯ, ದಾಂಪತ್ಯ, ವಾತ್ಸಲ್ಯ ಈ ಮೊದಲಾದ ರಮ್ಯ ಪರಂಪರೆಯ ವಿಷಯಗಳೊಡನೆ ನವ್ಯ ವಿಷಯಗಳೂ ಕಣವಿಯವರ ಕೃತಿಗಳಲ್ಲಿ ಸೇರಿರುತ್ತದೆ. ಒಂದೊಂದಕ್ಕೂ ತಾಕಲಾಟವಿಲ್ಲ. ಸಮಾನ ಭೂಮಿಕೆ ಅವನ್ನು ಸುತ್ತ ಹೊಂದಿಸುತ್ತದೆ. ಎಂಬುದು ಮುಗಳಿಯವರ ಅಭಿಪ್ರಾಯ.
ಕಣವಿಯವರ ಕೃತಿಗಳು
ಸಂಪಾದಿಸಿಕಾವ್ಯ ಸಂಕಲನಗಳು :- ಕಾವ್ಯಾಕ್ಷಿ (1949), ಭಾವಜೀವಿ (1950), ಆಕಾಶಬುಟ್ಟಿ (1953), ಮಧುಚಂದ್ರ (1954), ದೀಪಧಾರಿ (1956), ಮಣ್ಣಿನಮೆರವಣಿಗೆ (1960), ನೆಲಮುಗಿಲು (1965), ನಗರದಲ್ಲಿನೆರಳು (1974), ಜೀವಧ್ವನಿ (1980), ಕಾರ್ತಿಕಮೋಡ (1986), ಜೀನಿಯಾ (1989), ಶಿಶಿರದಲ್ಲಿ ಬಂದ ಸ್ನೇಹಿತ (1994), ಹಕ್ಕೀಪುಚ್ಚ (1985). ಚಿರಂತನದಾಹ (1975) ಇವರ ಆಯ್ದ ಕವನಗಳ ಸಂಕಲನ. ಸಮಗ್ರಕಾವ್ಯ 1996ರಲ್ಲಿ ಪ್ರಕಟವಾಯಿತು. ಹಕ್ಕೀಪುಚ್ಚ ಎಂಬುದು ಮಕ್ಕಳ ಕವಿತೆಗಳ ಸಂಗ್ರಹ.
ಇವರು ಸಾನೆಟ್ ಅಥವಾ ಸುನೀತಕ್ಕೆ ಒಂದು ರೂಪವನ್ನು ನೀಡಿದ್ದಾರೆ. ವ್ಯಕ್ತಿ ಚಿತ್ರಗಳ ರಚನೆಗೆ ಈ ಪ್ರಕಾರವನ್ನು ಮುಖ್ಯವಾಗಿ ಬಳಸಿಕೊಂಡಿದ್ದಾರೆ.
ಬೆಳಕಿಗಾಗಿ ತುಡಿಯುವುದು, ಬೆಳಕಿನತ್ತ ಸಾಗುವುದು ಇವರ ಕಾವ್ಯದ ನಿತ್ಯ ಹಂಬಲ ಎಂದು ಹೇಳಬಹುದು. ಅದು ಒಂದು ರೀತಿಯಲ್ಲಿ ಇವರ ಕಾವ್ಯ ನಿರ್ಮಾಣ ಪ್ರಕ್ರಿಯೆಯ ಉದ್ದಕ್ಕೂ ಧಾರೆಯಂತೆ ಹರಿದು ಬಂದಿದೆ. ಇವರ ಆಯ್ದ ಕವನಗಳ ಸಂಕಲನದ ಚಿರಂತನದಾಹವೂ ಇದನ್ನೇ ಸಂಕೇತಿಸುತ್ತದೆ. ಇವರ ದಾಹ ಪ್ರಜ್ಞೆ ಬೆಳಕಿಗಾಗಿ. ಜಗವ ತುಂಬಿದ ಬೆಳಕು ನಮಗೇಕೊ ಸಾಲದಿದೆ. ಎನಿತು ಮಾನವನೆದೆಯ ಆಳ ಅಗಲ ಎಂಬುದಾಗಿ ಇವರ ಕವಿಹೃದಯ ಹಂಬಲಿಸುತ್ತದೆ. ಇವರ ಮೊದಲನೆಯ ಕಾವ್ಯ ಸಂಕಲನವಾದ ಕಾವ್ಯಾಕ್ಷಿಯ ಮೊದಲನೆಯ ಕವಿತೆ ಇದನ್ನೇ ಕುರಿತದ್ದು. ನೀನು ಪೇಳ್ದ ಕವಿತೆಯ ತಂತ್ರ ಸವಿಯ ಹಾಡಲೊರೆದ ಮಂತ್ರ, ಬಾಳ ಹಣತೆಯಲ್ಲಿ ತಾಯೆ ಬೆಳಕು ಚಿಮ್ಮಿತು ಎನ್ನುತ್ತಾರೆ ಕವಿ. ಯುಗಯುಗಾಂತ್ಯದವರೆಗೆ ಜಗವ ಬೆಳಗಿಸಬಲ್ಲ ಎಲೆ ಚಿರಂತನ ಬೆಳಕೆ ನೀನೆ ಬೇಕು ಎಂಬುದು ಇನ್ನೊಂದು ಕವನದಲ್ಲಿಯ ಪ್ರಾರ್ಥನೆ.
ಕಣವಿಯವರ ಕಾವ್ಯಕರ್ಮದ ವಿಕಾಸದ ಹಾದಿಯ ಹಲವು ಘಟ್ಟಗಳನ್ನು ಇವರ ಕವನಗಳಲ್ಲಿ ಗುರುತಿಸುವುದು ಸಾಧ್ಯ. ಇವರ ಪ್ರಾರಂಭದ ಕವಿತೆಗಳಲ್ಲಿ ಕುವೆಂಪು, ಬೇಂದ್ರೆ, ಪುತಿನ, ಮಧುರಚೆನ್ನ ಮೊದಲಾದವರ ಕಾವ್ಯ ಪ್ರಭಾವವನ್ನು ಕಾಣಬಹುದು. ಭಾವಜೀವಿ ಎಂಬ ಕವನ ಇವರ ಆತ್ಮಕಥನ. ಅದರ ಮೇಲೆ ಮಧುರಚೆನ್ನರ `ನನ್ನ ನಲ್ಲ ಕವಿತೆಯ ಪ್ರಭಾವವಿದೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಪ್ರಕೃತಿ ಗೀತೆಗಳ ರಚನೆಯೂ ಬೇಂದೆ, ಕುವೆಂಪು ರಚನೆಗಳಿಂದ ಪ್ರಭಾವಿತವಾಗಿರುವುದು ಕಂಡುಬರುತ್ತದೆ.
ಕಣವಿಯವರು ಕ್ರಮೇಣ ಅನುಕರಣೆಯ ಹಾದಿ ಬಿಟ್ಟು ಸ್ವತಂತ್ರ ಮನೋಧರ್ಮದ ಗರಿಕೂಡಿಸಿಕೊಂಡು ಕಾವ್ಯಾಕಾಶದಲ್ಲಿ ಉಡ್ಡಯನ ಮಾಡಿದ್ದರ ಲಕ್ಷಣಗಳು ಅನಂತರದ ಕವನಗಳಲ್ಲಿ ಕಾಣಬರುತ್ತದೆ. ಕಣವಿಯವರು ಬದುಕನ್ನು ವ್ಯಾಪಕವಾದ ಹಿನ್ನೆಲೆಯಲ್ಲಿ ಕಾಣತೊಡಗುತ್ತಾರೆ. ಸ್ವೋಪಜ್ಞತೆಯನ್ನು ಮೆರೆಯುತ್ತಾರೆ. ಸಮಾಜದ ದೋಷಗಳ ಮೇಲೆ ಬೆಳಕು ಚೆಲ್ಲುತ್ತಾರೆ, ಅದನ್ನು ಟೀಕಿಸುತ್ತಾರೆ. ವ್ಯಂಗ್ಯದ ಬಾರುಕೋಲುಗಳನ್ನು ಬೀಸುತ್ತಾರೆ. ಪ್ರಗತಿಶೀಲ ಚಳವಳಿಯ ಮತ್ತು ಆ ಮನೋಧರ್ಮದ ಲೇಖಕರ ಪ್ರಭಾವಕ್ಕೆ ಇವರು ಒಳಗಾಗದಂತೆ ಕಾಣುತ್ತಾರೆ. ಒಮ್ಮೊಮ್ಮೆ ಕಾವ್ಯ ಗುಣ ಹಿಂದಕ್ಕೆ ಸರಿಯಿತೋ, ಕವಿತೆ ವಾಚ್ಯವಾಗುತ್ತಿದೆಯೋ ಎನಿಸಿದರೂ ಅದೊಂದು ದೋಷವೆಂದು ಗುರುತಿಸಲಾಗದಷ್ಟು ತೆಳ್ಳಗಿರುತ್ತದೆ. ಒಂದು ರೀತಿಯಲ್ಲಿ ರಮ್ಯಕಾವ್ಯ ಪ್ರಭಾವದಿಂದ ಬಿಡುಗಡೆ ಹೊಂದದ ಇದೊಂದು ಸಾಧನವಾಗಿ ಪರಿಣಮಿಸಿದ್ದಿರಬಹುದು. ಆದರೆ ದೂರ ಹೋಗಬಹುದಾದ ಅಪಾಯಕ್ಕೆ ಇವರು ಸಿಲುಕದೆ ವಿಕಾಸದ ಹಾದಿಯಲ್ಲಿ ಮುನ್ನಡೆಯುತ್ತಾರೆ.
ಆ ವೇಳೆಗೆ ನವ್ಯಕಾವ್ಯದ ಯುಗದ ಉದಯವಾಗುತಿತ್ತು. ಅಡಿಗರ ಏರುದನಿ, ಪರಿಸರಕ್ಕೆ ಅವರ ತೀವ್ರ ಪ್ರತಿಕ್ರಿಯೆ, ಸಮಾಜ ಮುಖಿಯಾಗುವುದಕ್ಕಿಂತ ವ್ಯಕ್ತಿಗತವಾಗಿ ಚಿಂತನೆಯ ಹರಿವು, ಭಾಷೆ, ಲಯ ಮುಂತಾದವನ್ನೂ ಹೊಸದುಗೊಳಿಸಿಕೊಳ್ಳುವ ಕಾಳಜಿ, ಅವಕ್ಕೆ ಹೊಸದಾಗಿ ಶಕ್ತಿ ಪೂರಣ ಮಾಡುವ ಪ್ರಯತ್ನ, ಪ್ರತಿಮೆ ಸಂಕೇತಗಳನ್ನು ಅಂದಿನ ಸಂದರ್ಭದ ಅನುಭವಗಳ ಹಂದರದ ಮೇಲೆ ಹೆಣೆಯುವ ಪ್ರಯತ್ನ, ಆಗಾಗ್ಗೆ ಕಾಮದ ಅತಿರೇಕ, ಒಂಟಿತನದ ಅಳಲು ಅಸಹನೆ ಇವೇ ಪ್ರಧಾನವಾಗಿ ಕಂಡುಬಂದ ನವ್ಯಮಾರ್ಗದೊಂದಿಗೆ ಕಣವಿಯವರಾಗಲೀ, ಅವರಂಥ ಅವರ ಸಮಕಾಲೀನ ಕವಿಗಳಾಗಲಿ ನೇರವಾಗಿ ಹೋರಾಟದ ಕಣಕ್ಕೆ ಇಳಿಯಲಿಲ್ಲವಾದರೂ ಅದರಲ್ಲಿಯ ಕೆಲವು ಲಕ್ಷಣಗಳನ್ನು ಗುರುತಿಸಿ ಅವನ್ನು ತಮ್ಮ ಕಾವ್ಯದಲ್ಲಿ ಬೆಸುಗೆ ಮಾಡಿಕೊಳ್ಳುವುದರ ಜೊತೆಗೆ ಇದೊಂದು ಬಗೆಯ ಸಮನ್ವಯ ಪ್ರಯತ್ನವೋ, ನವೋದಯ ನವ್ಯಮಾರ್ಗಗಳ ಸೇತುಬಂಧವೋ ಎನಿಸುವ ಮಟ್ಟಿಗೆ ಇವರು ಕಾವ್ಯ ರಚನೆ ಮಾಡಿದರು. ಪ್ರಾರಂಭದಲ್ಲಿ ಇವರು ನವೋದಯ ಕಲಿಕಾ ಮಾರ್ಗಕ್ಕೆ ಸಂಪೂರ್ಣವಾಗಿ ತೆತ್ತುಕೊಂಡು, ಆಗ ಗಟ್ಟಿಯಾಗಿ ನಿರ್ಮಿಸಿಕೊಂಡ ಮನೋಧರ್ಮದ ಬಲದಿಂದಾಗಿ ಪ್ರಗತಿದೃಷ್ಟಿಗೂ ಸಂಪೂರ್ಣವಾಗಿ ಮಾರುಹೋಗದೆ, ನವ್ಯಮಾರ್ಗವನ್ನು ತಮ್ಮ ಸ್ವಭಾವಕ್ಕೆ ತಕ್ಕಂತೆ ಹೊಂದಿಸಿಕೊಂಡು, ಅರಗಿಸಿಕೊಂಡು, ಒಂದು ರೀತಿಯಲ್ಲಿ ನವೋದಯ ಕಾವ್ಯದ ಪಾತ್ರವನ್ನು ವಿಸ್ತರಿಸಲು ನಡೆಸಿದ ಯತ್ನ ಇವರ ಕವಿತೆಗಳಲ್ಲಿ ನಮಗೆ ಕಾಣುತ್ತದೆ.
ಚೆನ್ನವೀರ ಕಣವಿ ಸಾರ್ಥಕ ಕವಿ. ಕವಿತಾ ರಚನೆಯೇ ಅಲ್ಲದೆ ವಿಮರ್ಶೆಯ ಹಾದಿಯಲ್ಲೂ ಇವರು ನಡೆದು ಬಂದಿದ್ದಾರೆ. ಸಾಹಿತ್ಯ ಚಿಂತನ, ಕಾವ್ಯಾನುಸಂಧಾನ, ಸಮಾಹಿತ, ಸಮತೋಲನ, ಮಧುರಚೆನ್ನ, ಶುಭನುಡಿಯೆ ಹಕ್ಕಿ ಮುಂತಾದ ಕೃತಿಗಳಲ್ಲಿ ಕವಿ ಕೃತಿ ದರ್ಶನ, ವಿವೇಚನ, ನೆನಪಿನ ಚಿತ್ರಗಳು ಮತ್ತು ವಚನಗಳ ಹಾಗೂ ಜನಪದ ಗೀತೆಗಳ ವಿಶ್ಲೇಷಣೆಗಳೂ ಇವೆ. ಇವರ ಇತರ ಕೃತಿಗಳಿವು, ನವಿಲೂರ ಮನೆಯಿಂದ, ನವ್ಯಧ್ವನಿ, ನೈವೇದ್ಯ, ನಮ್ಮೆಲ್ಲರ ನೆಹರು, ಜೀವನಸಿದ್ಧಿ, ಸಿದ್ಧಿವಿನಾಯಕ. `ಬಾಬಾ ಪರೀದ್ ಎಂಬುದು ಅನುವಾದ. ಇವರಿಗೆ ಹಲವಾರು ಪ್ರಶಸ್ತಿಗಳು ಬಂದಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1981), ಜೀವನದ ಒಟ್ಟಾರೆ ಸಾಧನೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1985), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1989), ಭಾರತ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಸಂಸ್ಕøತಿ ವಿಭಾಗದ ಎಮೆರಿಟಸ್ ಫೆಲೋಶಿಪ್ (1996-98), ಪಂಪ ಪ್ರಶಸ್ತಿ (1999) ಇವು ಕೆಲವು. ಇವರು 1996ರಲ್ಲಿ ಹಾಸನದಲ್ಲಿ ನಡೆದ 65ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರ ಕೆಲವು ಕವನಗಳು ಧ್ವನಿಸುರಳಿಯಲ್ಲಿ ಬಂದಿವೆ.
ಇವರ ಪತ್ನಿ ಶಾಂತಾದೇವಿ. ಇವರಿಗೆ ಐವರು ಮಕ್ಕಳು ನಾಲ್ವರು ಗಂಡು, ಒಂದು ಹೆಣ್ಣು. ಕಣವಿಯವರ ಧಾರವಾಡದ ನಿವಾಸದ ಹೆಸರು `ಚೆಂಬೆಳಕು, ಅಲ್ಲಿಯ ಕಲ್ಯಾಣನಗರದಲ್ಲಿ. ಇವರ ಸಮಗ್ರ ಕಾವ್ಯದ ಹೆಸರು `ಹೊಂಬೆಳಕು. ಕಣವಿಯವರು ಈಗ ಧಾರವಾಡದಲ್ಲಿ ನೆಲೆಸಿದ್ದಾರೆ. (ಎಚ್.ಎಸ್.ಕೆ.)