ಚಾಟಿ ಹಾವು - ಎಲ್ಯಾಪಿಡೀ ಕುಟುಂಬಕ್ಕೆ ಸೇರಿದ ಹಲವಾರು ಬಗೆಯ ಹಾವುಗಳಿಗಿರುವ ಸಾಮಾನ್ಯ ಹೆಸರು (ವ್ಹಿಪ್ ಸ್ನೇಕ್). ಪ್ರಮುಖವಾಗಿ ಮ್ಯಾಸ್ಟಿಕಾಫಿಸ್ ಪ್ಲಾಜೆಲಮ್ ಎಂಬ ಹಾವಿಗೆ ಈ ಹೆಸರು ಅನ್ವಯವಾಗುತ್ತದೆ. ಚರ್ಮವನ್ನು ಹೆಣೆದು ರೂಪಿಸುತ್ತಿದ್ದ ಚಾಟಿಯನ್ನು ಹೋಲುವ ರೀತಿಯಲ್ಲಿ ಈ ಹಾವಿನ ಹುರುಪೆಗಳು ಜೋಡಣೆಗೊಂಡಿರುವುದರಿಂದಲೂ ಹಾವು ತೆಳುವಾಗಿ ಉದ್ದವಾಗಿ ಇರುವುದರಿಂದಲೂ ಇದಕ್ಕೆ ಚಾಟಿ ಹಾವು ಎಂಬ ಹೆಸರು ಬಂದಿದೆ. ಇದಕ್ಕೆ ಕೊಚ್‍ವ್ಹಿಪ್, ಬ್ಲ್ಯಾಕ್‍ಸ್ನೇಕ್ ಮುಂತಾದ ಹೆಸರುಗಳೂ ಉಂಟು. ಅಮೆರಿಕ ಸಂಯುಕ್ತ ಸಂಸ್ಥಾನದ ಮೂಲವಾಸಿ ಇದು. ಪೂರ್ಣ ಬೆಳೆದ ಹಾವು ಸುಮಾರು 8ಅಡಿಗೂ ಹೆಚ್ಚು ಉದ್ದವಿರುತ್ತದೆ. ದೇಹದ ಬಣ್ಣ ಕಪ್ಪು. ಮರಿಹಾವುಗಳ ಮೈಮೇಲೆ ಅಲ್ಲಲ್ಲಿ ಹಸಿರು, ಕಪ್ಪು ಇಲ್ಲವೆ ನೀಲಿ ಬಣ್ಣದ ಮಚ್ಚೆಗಳಿರುತ್ತವೆ. ಮರಿಗಳು ಬೆಳೆದಂತೆಲ್ಲ ದೇಹದ ಬಣ್ಣ ಸಾಂದ್ರವಾಗುತ್ತದೆ. ಅತ್ಯಂತ ಕ್ಷಿಪ್ರಗತಿಯಲ್ಲಿ ಚಲಿಸಬಲ್ಲ ಈ ಹಾವು, ಗಿಡಗಂಟೆ, ಕಲ್ಲು ಮುಂತಾದವನ್ನು ಲೆಕ್ಕಿಸದೆ ಗಂಟೆಗೆ ಸರಾಸರಿ 8 ಮೈಲಿ ವೇಗದಲ್ಲಿ ಸಾಗುತ್ತದೆ. ಓತಿ ಮುಂತಾದವು ಇದರ ಪ್ರಧಾನ ಆಹಾರ. ಕೆಲವೊಮ್ಮೆ ಸಣ್ಣಪುಟ್ಟ ಸ್ತನಿಗಳನ್ನೂ ಹಕ್ಕಿಗಳನ್ನೂ ತಿನ್ನುವುದುಂಟು. (ಕೆ.ಎಂ.ವಿ.) ಪರಿಷ್ಕರಣೆ ಡಿ.ಆರ್. ಪ್ರಹ್ಲಾದ್