ಚಿತ್ರಕಲೆ -
ಲಲಿತ ಕಲೆಗಳಲ್ಲಿ ಮುಖ್ಯವಾದ ಒಂದು ವಿಭಾಗ. ಬಣ್ಣವನ್ನು ಉಪಯೋಗಿಸಿ ಎರಡು ಆಯಾಮಗಳ ಮೇಲ್ಮೈಯಲ್ಲಿ ಚಿತ್ರರಚನೆ ಮಾಡುವ ಕಲೆಗೆ ಈ ಹೆಸರಿದೆ. ಬಣ್ಣದ ಬಗ್ಗೆ ತಿಳಿಯಲು ಬಣ್ಣಗಳು ಎಂಬ ಲೇಖನ ನೋಡಿ. ಚಿತ್ರಕಲೆ ವಾಸ್ತು ಶಿಲ್ಪಗಳಷ್ಟೇ ಹಳೆಯದು. ಅದರ ಪ್ರಾಚೀನ ವಿವರಗಳಿಗೆ ಆದಿಮ ಜನರ ಕಲೆ ಮತ್ತು ಆದಿಮಾನವ ಕಲೆ ಎಂಬ ಲೇಖನಗಳನ್ನು ನೋಡಿ. ಗ್ರೀಕ್ ಕಲೆ, ರೋಮನರ ಕಲೆ, ಬಿಜಾóಂಟಿನ್ ಕಲೆ, ಭಾರತೀಯ ಕಲೆ ಮೊದಲಾದ ಲೇಖನಗಳು ಚಿತ್ರಕಲೆಯ ಇತಿಹಾಸವನ್ನು ಮುಂದುವರಿಸುತ್ತದೆ.
ಈ ಲೇಖನದಲ್ಲಿ ರೆನೆಸಾನ್ಸ್ ಯುಗದಿಂದ ಆಧುನಿಕ ಯುಗದವರೆಗೆ ಚಿತ್ರಕಲೆ ಯೂರೋಪಿನಲ್ಲಿ ಬೆಳೆದುಬಂದ ಬಗೆಯನ್ನು ವರ್ಣಿಸಿದೆ.
ಲೇಖನವಿನ್ಯಾಸ ಹೀಗಿದೆ : I ರೆನೆಸಾನ್ಸ್ (ಹೊಸಹುಟ್ಟು. ಪುನರುಜ್ಜೀವನ) ಯುಗ II ಬರೋಕ್ ಯುಗ III ಆಧುನಿಕ ಯುಗ ಪೋಸ್ಟ್ ಇಂಪ್ರೆಷನಿಸಮ್ ಇಂಟಮಿಸಮ್ ಫ್ರಾವಿಸಮ್ ಕ್ಯೂಬಿಸಮ್ ಫ್ಯೂಚರಿಸಮ್ ಆರ್ಫಿಸಮ್ ಎಕ್ಸ್‍ಪ್ರೆಷನಿಸಮ್ ಡಾಡಾಯಿಸಮ್ ಸರ್ರಿಯಲಿಸಮ್
ರೆನೆಸಾನ್ಸ್ (ಹೊಸಹುಟ್ಟು ; ಪುನರುಜ್ಜೀವನ) ಯುಗ : ರೆನೆಸಾನ್ಸ್ ಚಿತ್ರಕಲೆ ಎಂಬ ಮಾತನ್ನು ಮೊಟ್ಟ ಮೊದಲು ವಿಶೇಷವಾದ ಅರ್ಥದಲ್ಲಿ ಬಳಸಿದವ 16ನೆಯ ಶತಮಾನದವನಾದ ಇಟಲಿಯ ಖ್ಯಾತ ಕಲಾವಿದ, ಇತಿಹಾಸಕಾರ ಜಾರ್ಜ್ ವಸಾóರಿ. ಈತ ಇಟಲಿಯ ಶ್ರೇಷ್ಠ ಕಲಾವಿದರನ್ನು ಕುರಿತು ಬರೆದ ದಿ ಲೈವ್ಸ್ ಆಫ್ ಫೇಮಸ್ ಪೇಂಟರ್ಸ್ ಎಂಬ ಗ್ರಂಥದಲ್ಲಿ 14ನೆಯ ಶತಮಾನದಲ್ಲಿ ಇಟಲಿಯಲ್ಲಿ ಪ್ರಾರಂಭವಾಗಿ 16ನೆಯ ಶತಮಾನದಲ್ಲಿ ಉತ್ಕರ್ಷಗೊಂಡ ಕ್ಲಾಸಿಕಲ್ ಚಿತ್ರಕಲೆ, ಸಾಹಿತ್ಯ ಹಾಗೂ ಸಂಸ್ಕøತಿಗಳ ಪುನರುಜ್ಜೀವನದ ಸಂದರ್ಭವನ್ನು ಕೂಲಂಕಷವಾಗಿ ವಿವರಿಸಿದ್ದಾನೆ. ಇಟಲಿಯ ಕಲಾವಿದ ಜಾಟೋನಿಂದ ಹಿಡಿದು ಮೈಕಲ್ ಏಂಜಲೋ ವರೆಗಿನ ಕಲೆಯ ಇತಿಹಾಸವನ್ನು ವಸಾóರಿ ಸಮಗ್ರವಾಗಿ ವಿವೇಚಿಸುತ್ತ ಇಟಲಿಯ ಕಲಾಪರಂಪರೆ ರೆನೆಸಾನ್ಸ್ ಅವಧಿಯಲ್ಲಿ ಸುವ್ಯವಸ್ಥಿತವಾಗಿ ಬೆಳೆದು ಸ್ಪಷ್ಟವಾಗಿ ರೂಪಗೊಂಡಿತು-ಎನ್ನುತ್ತಾನೆ. ಅವನ ಅಭಿಪ್ರಾಯವನ್ನೇ ಅನಂತರ ಬಂದ ಮಿಚಲೆ, ರಸ್ಕಿನ್, ಬರ್ಕ್‍ಹಾಡ್ರ್ಟ್, ಆರ್ಥರ್ ಸೈಮಂಡ್ಸ್, ವಾಲ್ಪರ್ ಪೇಟರ್ ಮುಂತಾದ ಕಲಾವಿಮರ್ಶಕರು ಸಮರ್ಥಿಸಿದ್ದಾರೆ.
ರೆನೆಸಾನ್ಸ್ ಎಂಬ ಪದದ ಅರ್ಥವ್ಯಾಪ್ತಿ ಏನೇ ಇರಲಿ, ಆ ಕಾಲದ ಚಿತ್ರಕಾರರು ಮುಖ್ಯವಾಗಿ ಕ್ಲಾಸಿಕಲ್ ಮಾದರಿಗಳನ್ನು ಅನುಸರಿಸುವುದರ ಜೊತೆಗೆ ಮೌಲ್ಯವಿವೇಚನೆಯಲ್ಲಿ ಕ್ಲಾಸಿಕಲ್ ಯುಗದ ಮಾನವತಾ ಸಿದ್ಧಾಂತದ ಆದರ್ಶಗಳನ್ನೇ ಎಡೆಬಿಡದೆ ಪಾಲಿಸಿದರು ಎಂಬುದನ್ನು ಇತಿಹಾಸಕಾರರು ಗಮನಿಸಿದ್ದಾರೆ. ರೆನೆಸಾನ್ಸ್ ಚಿತ್ರಕಲೆಯನ್ನು ಶ್ರೇಷ್ಠ ಮಟ್ಟಕ್ಕೆ ಕೊಂಡೊಯ್ದವರಲ್ಲಿ ಮುಖ್ಯವಾಗಿ ಫ್ಲಾರೆನ್ಸಿನ ಕಲಾವಿದರನ್ನು ಹೆಸರಿಸುತ್ತಾರೆ. ಆದರೆ ನಿಜವಾಗಿ ನೋಡಿದರೆ, 15ನೆಯ ಶತಮಾನದ ಕೊನೆಯವರೆಗೂ ಈ ಚಿತ್ರಕಾರರಿಗೆ ರೋಮನ್ ಭಿತ್ತಿಚಿತ್ರಗಳೇ ಮುಂತಾದ ಕ್ಲಾಸಿಕಲ್ ಮಾದರಿಗಳು ಹೆಚ್ಚಾಗಿ ದೊರೆತಿರಲಿಲ್ಲ. ಪ್ರಾಚೀನ ಗ್ರೀಸಿನ ಶ್ರೇಷ್ಠ ಕಲಾವಿದರಾದ ಜೂóಕ್ಸಿಸ್, ಅಪೆಲಿಸ್ ಮುಂತಾದವರ ಕಲಾಕೃತಿಗಳು ಅಲ್ಲಿಯವರೆಗೆ ಕೇವಲ ಗ್ರಂಥಸ್ಥವಾಗಿಯೇ ಉಳಿದ್ದದ್ದು ಅವುಗಳ ವಿಷಯ ಅನೇಕರಿಗೆ ಗೊತ್ತಿರಲಿಲ್ಲ. ಆದರೆ ಇತಿಹಾಸಕಾರ ಪ್ಲಿನಿ ಮೇಲೆ ಹೇಳಿದ ಗ್ರೀಕ್ ಕಲಾಕೃತಿಗಳ ಬಗೆಗೆ ಕೊಟ್ಟ ಅಮೋಘ ವರ್ಣನೆಗಳು ರೆನೆಸಾನ್ಸ್ ಕಲಾವಿದರ ಹಾಗೂ ಕಲಾಪ್ರೇಮಿಗಳ ಆಸಕ್ತಿಯನ್ನು ಕೆರಳಿಸಿದ್ದವು. ಗ್ರೀಕ್ ಕ್ಲಾಸಿಕಲ್ ಕಲಾವಿದರು ಪ್ರಕೃತಿಯ ಸಹಜವಾಸ್ತವ ಅಂಶಗಳನ್ನು ಚಾಚೂತಪ್ಪದೆ ಅನುಸರಿಸುತ್ತಿದ್ದರು ಮತ್ತು ತಮ್ಮ ಅಭಿವ್ಯಕ್ತಿಯಲ್ಲಿ ಸಮುಚಿತ ಪ್ರಮಾಣದ ರೂಪವನ್ನು ಸಾಧಿಸಲು ಪ್ರಯತ್ನಿಸುತ್ತಿದ್ದರು ಎಂಬ ಅಂಶಗಳು ರೆನೆಸಾನ್ಸ್ ಯುಗದವರನ್ನು ಬಹಳವಾಗಿ ಸೆಳೆದವು. ಆದರೆ ಈ ಕೆಲವು ಅಂಶಗಳು ಹಿಂದಿನ ಕಲಾಸಂಪ್ರದಾಯದಲ್ಲೂ ಅಡಕವಾಗಿದ್ದುದರಿಂದ ರೆನೆಸಾನ್ಸ್ ಸಂಪ್ರದಾಯ 15ನೆಯ ಶತಮಾನಕ್ಕೂ ಹಿಂದೆಯೇ ಪ್ರಾರಂಭವಾಯಿತೆನ್ನುವುದುಂಟು. ಇಟಲಿಯ ಚಿತ್ರಕಾರರು ಬಿಜಾóಂಟಿನ್ ಚಿತ್ರಕಲೆಯ ಧಾರ್ಮಿಕ ಸಾಂಕೇತಿಕತೆಯನ್ನು ತ್ಯಜಿಸಿದಾಗ ಹೊಸ ಯುಗ ಪ್ರಾರಂಭವಾಯಿತೆನ್ನಬಹುದು. ಈ ತೆರನ ಹೊಸ ಪ್ರವೃತ್ತಿಗಳನ್ನು ಪ್ರಾರಂಭಿಸಿದವ ಜಾಟೋ. ನಶಿಸಿಹೋಗಿದ್ದ ಚಿತ್ರಕಲೆಯ ಸಂಪ್ರದಾಯವನ್ನು ಜೀವಂತವಾಗಿಸಿದವ ಅವನೇ ಎಂಬುದು ವಿಮರ್ಶಕರ ಅಭಿಮತ. ಇತಿಹಾಸಕಾರರು ಇವನ ಪೂರ್ವಜರ ಪೈಕಿ ದಾಂಟೆಯ ಮೂಲಕ ಖ್ಯಾತಿಗಳಿಸಿದ 13ನೆಯ ಶತಮಾನದ ಚಿಮಾಬೂನ ಹೆಸರನ್ನು ಮಾತ್ರ ಹೇಳುವುದುಂಟು. ಅದೇನೇ ಇರಲಿ ಫ್ಲಾರೆನ್ಸಿನಲ್ಲಿ ರೆನೆಸಾನ್ಸ್ ಚಿತ್ರಕಲೆಯನ್ನು ವಾಸ್ತವಿಕತೆಯ ತತ್ತ್ವಗಳಿಗೆ ಅನುಸಾರವಾಗಿ ರೂಪಿಸಿದವ ಜಾಟೋ. ವಾಸ್ತವಿಕತೆಯ ಕಲ್ಪನೆಯನ್ನುಂಟುಮಾಡಲು ಮೂರು ಆಯಾಮಗಳ (ತ್ರಿ-ಡಿ) ಶೈಲಿಯ ಉಬ್ಬು ಚಿತ್ರಗಳ ರಚನೆ ಪ್ರಾರಂಭವಾದದು ಅವನ ಕಾಲದಲ್ಲಿಯೇ. ಅವನಿಂದ ಪ್ರಾರಂಭವಾದ ರೆನೆಸಾನ್ಸ್ ಚಿತ್ರಕಲೆಯ ಪರಂಪರೆ, ವಸಾóರಿ ಹೇಳುವಂತೆ. ಏಕಪ್ರಕಾರವಾಗಿ ವಿಕಾಸಗೊಂಡು ಮೈಕಲೇಂಜಲೋವಿನ ಅನ್ಯಾದೃಶ ಸೃಷ್ಟಿಗಳಲ್ಲಿ ಕೊನೆಗೊಳ್ಳುತ್ತದೆ. ಮೊದಲನೆಯದಾಗಿ 14ನೆಯ ಶತಮಾನದಲ್ಲಿ ಜಾಟೋವಿನ ಅನುಪಮ ಕೃತಿಗಳು, ಫ್ಲಾರೆನ್ಸ್ ಮತ್ತು ಸಿಯೆನ್ನಾಗಳಲ್ಲಿ ಅವನ ಮುಂದಿನ ಪೀಳಿಗೆಯವರಾದ ಸಿಮೋನಿ ಮಾರ್ಟಿನಿ, ಆಂಬ್ರೊಜಿಯೋ ಲೊರೆಂಜೆóಟ್ಟಿ ಮುಂತಾದವರ ಮೇಲೆ ವ್ಯಾಪಕ ಪ್ರಭಾವ ಬೀರಿದವು. ಗಾತಿಕ್ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯ ಹೊಸಪದ್ಧತಿಗಳು ರೂಪಗೊಂಡುದೂ ಆ ಕಾಲದಲ್ಲೇ. ಇಟಲಿಯ ಗಾತಿಕ್ ಶೈಲಿ ಸಮಗ್ರ ಯೂರೋಪಿನ ಕಲಾಪರಂಪರೆಯ ಮೇಲೆ ಪ್ರಭಾವ ಬೀರುವಂತಾಗಲು ಸಿಮೋನಿ ಮಾರ್ಟಿನಿಯೇ ಕಾರಣಕರ್ತ. ಆದರೆ ನಿಜವಾಗಿ ಇಟಲಿಯ ಕಲಾಸಂಪ್ರದಾಯಕ್ಕೆ ಹೊಸತಿರುವು ದೊರೆತದ್ದು ರೆನೆಸಾನ್ಸ್ ಯುಗದ ಎರಡನೆಯ ಘಟ್ಟದಲ್ಲಿ - ಹದಿನೈದನೆಯ ಶತಮಾನದ ಮಾಸಾಬೋವಿನ (ಜನನ-1425) ಕೃತಿಗಳ ಮೂಲಕ್ಷೇತ್ರ ಬ್ರೂನಲೆಸ್ಕಿಯ ವಾಸ್ತುಶಿಲ್ಪಾಕೃತಿಗಳು, ಡೊನಾಟೆಲ್ಲೋವಿನ ಶಿಲ್ಪಾಕೃತಿಗಳು ರೂಪಗೊಂಡದ್ದು ಈ ಕಾಲದಲ್ಲೇ ಎಂಬುದು ಸ್ವಾರಸ್ಯವಾದ ಸಂಗತಿ. (ನೋಡಿ- ಇಟಾಲಿಯನ್-ಕಲೆ) ಬ್ರೂನಲೆಸ್ಕಿಯ ಅನನ್ಯ ಗಣಿತ ಪಾಂಡಿತ್ಯವನ್ನು ಬಳಸಿಕೊಂಡು, ಶಾಸ್ತ್ರರೀತಿಯಲ್ಲಿ ಕಣ್ನೆಲೆ ತಂತ್ರವನ್ನು (ಪರ್‍ಸ್ಪೆಕ್ಟಿವ್) ರೂಪಿಸಿದವ ಮಾಸಾಜೋ. ಇವನು ಕಂಡು ಹಿಡಿದ ನೂತನ ವಿಧಾನ ರೆನೆಸಾನ್ಸ್ ಚಿತ್ರಕಲೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನುಂಟು ಮಾಡುವಂತಾಯಿತು. ಆ ವರೆಗೆ ಕಲಾಕಾರರು ಕೇವಲ ಉದ್ದ ಅಗಲಗಳೆಂಬ ಎರಡು ಆಯಾಮಗಳನ್ನು ಮಾತ್ರ ಸೂಚಿಸುವಂತೆ ಚಿತ್ರಗಳನ್ನು ಬರೆಯುತ್ತಿದ್ದರು. ಆದರೆ ವಾಸಾಜೋ ಘನಾಕೃತಿಯ ದೃಶ್ಯಗಳನ್ನು ರೂಪಿಸಿ ಚಿತ್ರಗಳಿಗೆ ಹೊಸ ಆಯಾಮವೊಂದನ್ನು ಸೇರಿಸಿದ. ಈ ಕಾರಣದಿಂದ, ನೋಡುವ ಕಣ್ಣಿಗೆ ಚಿತ್ರದ ಚೌಕಟ್ಟೇ ಹೊಸ ಲೋಕವನ್ನು ತೋರಿಸುವ ಕಿಟಕಿಯಾಯಿತು. ಆ ಕಿಟಕಿಯ ಮೂಲಕ, ವ್ಯಾಪಕವಾಗಿ ಹರಡಿದ, ಅಸೀಮ ಬೃಹತ್ ಲೋಕವೇ ಎದ್ದು ಹಂತ ಹಂತವಾಗಿ ಕಾಣಿಸುವಂತೆ ಭಾಸವಾಯಿತು. ಇದರಿಂದ ಚಿತ್ರಕಲೆಗೆ ಹೊಸದಾದ ತಂತ್ರವೊಂದು ಸಿಕ್ಕಂತಾಯಿತು. ಚಿತ್ರಕಾರರು ಪರ್ಸ್‍ಸ್ಪೆಕ್ಟಿವ್ ತಂತ್ರವನ್ನು ಪರಿಣಾಮಕರವಾಗಿ ಸಾಧಿಸಲು ರೇಖಾಗಣಿತದ ಶಾಸ್ತ್ರೀಯ ಸಂಗತಿಗಳನ್ನು ಆಳವಾಗಿ ಅಧ್ಯಯನಮಾಡಿದರು. ಮನುಷ್ಯನ ಆಕಾರವನ್ನು ಸ್ಪಷ್ಟವಾಗಿ ಮೂಡಿಸಲು ಅವರು ಮಾನವ ಅಂಗ ರಚನಾಶಾಸ್ತ್ರವನ್ನು ಅಭ್ಯಾಸಮಾಡಬೇಕಾಯಿತು. ಮಾಸಾಚೋವಿನ ಚಿತ್ರಗಳಲ್ಲಿ ಕಂಡುಬರುವ ರೂಪರಚನೆಗೆ ಸಂಬಂಧಿಸಿದ ಅಂಶಗಳು ಫ್ಲಾರೆನ್ಸ್ ಮತ್ತಿತರ ಕಡೆಗಳಲ್ಲಿನ ಶಿಲ್ಪ ಕಲಾವಿದರ ಮೇಲೆ ಬಹಳಷ್ಟು ಪ್ರಭಾವ ಬೀರಿದವು. (ವಿ.ಎಸ್.; ಎಚ್.ಆರ್.)
ಈ ಕಾಲದ ಸುಮಾರಿನಲ್ಲಿ ರಚಿತವಾದ ಚಿತ್ರಗಳು ಬಹುಮಟ್ಟಿಗೆ ಕ್ಲಾಸಿಕಲ್ ಶಿಲ್ಪಾಕೃತಿಗಳನ್ನೂ ಉಬ್ಬುಚಿತ್ರಗಳನ್ನೂ ಹೋಲುತ್ತವೆ. ಮಾಂಟೆನಾನ ಭಿತ್ತಿಚಿತ್ರಗಳು ರೋಮನ್ ಶಿಲ್ಪಾಕೃತಿಗಳನ್ನೊಳಗೊಂಡಿವೆ. ದಿ ಸ್ಟೋರಿ ಆಫ್ ಸೇಂಟ್ ಜೇಮ್ಸ್ ಎಂಬ ಚಿತ್ರವನ್ನು ಬಿಡಿಸುವಾಗ ಆತ ಅದರಲ್ಲಿನ ಮಾನವಾಕೃತಿಗಳಿಗೆ ಕ್ಲಾಸಿಕಲ್ ವೇಷಭೂಷಣಗಳನ್ನು ತೊಡಿಸಿ ರೋಮನ್ ವಾಸ್ತುಶಿಲ್ಪದ ಹಿನ್ನೆಲೆಯಲ್ಲಿ ಅವುಗಳನ್ನಿರಿಸುತ್ತಾನೆ. ಟ್ರಯಂಫ್ ಆಫ್ ಸೀಸರ್ ಎಂಬ ಇನ್ನೊಂದು ಚಿತ್ರದಲ್ಲೂ ರೋಮನ್ (ಕ್ಲಾಸಿಕಲ್) ಇತಿಹಾಸದ ವಾಸ್ತವಾಂಶಗಳನ್ನೂ ಅಚ್ಚುಕಟ್ಟಾಗಿ ಬಳಸಿಕೊಳ್ಳುತ್ತಾನೆ. ಇಂಥ ಚಿತ್ರಗಳು, ಕಳೆದುಹೋದ ಕ್ಲಾಸಿಕಲ್ ಯುಗದ ಜೀವನವನ್ನು ರೆನೆಸಾನ್ಸ್ ಮಾನವತಾವಾದಗಳ ಕಣ್ಣು ಮುಂದೆ ಮತ್ತೆ ಪ್ರಕಾಶಗೊಳಿಸಿ ಪುರಾತನ ಕ್ಲಾಸಿಕಲ್ ಪ್ರಪಂಚದ ಮೌಲ್ಯಗಳತ್ತ ಅವರ ಗಮನ ಸೆಳೆಯುತ್ತವೆ. ಹೀಗೆ ರೆನೆಸಾನ್ಸ್ ಯುಗದ ಎರಡನೆಯ ಘಟ್ಟದಲ್ಲಿ ಕಲಾವಿದರು ಹೆಚ್ಚು ಹೆಚ್ಚಾಗಿ ಕ್ಲಾಸಿಕಲ್ ವಾಸ್ತು-ಶೈಲಿಗಳನ್ನೇ ಅನುಸರಿಸಿದರೆಂಬುದು ಇದರಿಂದ ಖಚಿತವಾಗುತ್ತದೆ. ಉದಾಹರಣೆಗೆ, ಚಿತ್ರಕಾರ ಕ್ಯಾಸೊನಿ ಓವಿಡ್ ಕವಿಯ ಮೆಟಮಾರ್ಫಸಿಸ್ ಕಾವ್ಯದಿಂದ ವಸ್ತುವನ್ನೆತ್ತಿಕೊಂಡರೆ, ಬಾಟಿಚೆಲಿ ಗ್ರೀಕ್ ಪುರಾಣಕಥೆಗಳ ಆಧಾರದ ಮೇಲೆ ವೀನಸ್ ದೇವತೆಯ ಜನನ, ದಿ ಪ್ರೈಮವೇರ (ದಿ ಸ್ಪ್ರಿಂಗ್) ಮುಂತಾದ ಅನ್ಯಾದೃಶ ಮಹಾಕೃತಿಗಳನ್ನು ಬರೆದ.
ರೆನೆಸಾನ್ಸ್ ಚಿತ್ರಕಾರರ ಮತ್ತೊಂದು ಸಾಧನೆಯೆಂದರೆ ಅವರು ಪ್ರಕೃತಿಯ ಕಾವ್ಯತೆಯನ್ನು ಬಳಸಿಕೊಂಡ ರೀತಿ. ಇದರಲ್ಲಿ ವಿನಿಸ್ ಪಟ್ಟಣದ ಕಲಾವಿದರದ್ದೇ ಮೇಲುಗೈ. ಜೋವನಿ ಬೆಲ್ಲಿನಿಯ ಚಿತ್ರಗಳಲ್ಲಿ ಭೂದೃಶ್ಯದ ಹಿನ್ನೆಲೆಗಳು ಆಯಾ ಸನ್ನಿವೇಶದ ಭಾವಸ್ಥಿತಿಗಳನ್ನು (ಮೂಡ್) ಸೊಗಸಾಗಿ ಸೂಚಿಸುತ್ತವೆ. ಅವನು ಆಂಟೊನೆಲ್ಲಾ ಡ ಮೆಸ್ಸಿನ ಎಂಬ ಪ್ರಸಿದ್ಧ ಕಲಾವಿದನಿಂದ ಪ್ರಭಾವಿತನಾಗಿ ತೈಲವರ್ಣವನ್ನೂ ಟೆಂಪರಾ ಬಣ್ಣವನ್ನೂ ಬೆರೆಸಿ ತನ್ನ ಚಿತ್ರಗಳಲ್ಲಿ ನೆರಳು ಬೆಳಕಿನ ಅದ್ಭುತವಿನ್ಯಾಸವನ್ನು ಸಾಧಿಸಿದ. ಅವನ ಚಿತ್ರಗಳು ವೆನಿಸ್ ನಗರ ಕಲಾಪ್ರಪಂಚದ ಕಣ್ಣು ಎನಿಸುವಂತೆ ಮಾಡಿದವು.
ವಸಾóರಿ ಹೇಳುವ ಹೈ (ಉಜ್ಜಲ) ರೆನೆಸಾನ್ಸ್ ಯುಗದ ಮೂರನೆಯ ಘಟ್ಟದಲ್ಲಿ ನಾವು ಲಿಯೋನಾರ್ಡೋ ಡ ವಿಂಚಿ, ಮೈಕಲ್ ಏಂಜಲೋ, ರಾಫೆಲ್, ಟಿಷನ್ ಮುಂತಾದ ಲೋಕ ವಿಖ್ಯಾತ ಚಿತ್ರಕಾರರನ್ನು ಕಾಣುತ್ತೇವೆ. ಇವರ ಕೃತಿಗಳಲ್ಲಿ ರೆನೆಸಾನ್ಸ್ ಕಲೆಯ ನಿಖರತೆ, ಅಚ್ಚುಕಟ್ಟು, ಸಾವಯವ ಸಮಗ್ರೀಕರಣ ಮೊದಲಾದ ಶ್ರೇಷ್ಠ ಗುಣಲಕ್ಷಣಗಳನ್ನು ನಾವು ಗ್ರಹಿಸಬಹುದು. ಜಾಟೋವಿನಿಂದ ಹಿಡಿದು ಆ ವರೆಗಿನ ಎಲ್ಲ ಕಲಾವಿದರೂ ಕಲೆಯ ಯಾವ ಅಂಶಗಳನ್ನು ಪರಿಪೂರ್ಣವಾಗಿ ಸಾಧಿಸಬೇಕೆಂದು ಕನಸು ಕಾಣುತ್ತಿದ್ದರೋ ಆ ಎಲ್ಲವನ್ನೂ ಒಂದು ಹದವಾದ, ಪರಿಪಕ್ವವಾದ, ರೂಪದಲ್ಲಿ ನಾವು ಈ ಮಹಾಕಲಾವಿದರ ಕೃತಿಗಳಲ್ಲಿ ಕಾಣಬಹುದು. ಆ ಹಿಂದಿನ ಕಲಾವಿದರುಗಳ ಕೃತಿಗಳಲ್ಲಿ ಒಂದು ತೆರನಾದ ಒರಟಾದ, ಶಿಲ್ಪಸದೃಶವಾದ, ರಚನೆಯಿತ್ತು. ಆದರೆ ಹೈ ರೆನೆಸಾನ್ಸ್ ಕೃತಿಗಳಲ್ಲಿ ಅಸಾಧಾರಣ ಸಾಮರಸ್ಯ ತುಂಬಿಕೊಂಡಿದೆ. ಅದರಲ್ಲೂ ಮುಖ್ಯವಾಗಿ ಲಿಯೋನಾರ್ಡೋವಿನ ಚಿತ್ರಗಳಲ್ಲಿ ಅನುಪಮ ಸ್ನಿಗ್ಧ ಮಾದರಿ ರಚನೆ ಇದೆ. ರಾಫೆಲ್‍ನ ಕೃತಿಗಳಲ್ಲಿ ಬೆರಗುಗೊಳಿಸುವಂಥ ಸಮ ಪ್ರಮಾಣವೂ ವೈವಿಧ್ಯಮಯವೂ ಆದ ಉನ್ನತಾಕೃತಿಗಳ ಅದ್ಭುತ ವಿನ್ಯಾಸ ಇದೆ. ಚಿತ್ರಕಾರ ಯಾವುದೇ ಉತ್ಕøಷ್ಟ ಕೃತಿಯ ಅಂಧಾನುಕರಣೆಯಲ್ಲಿ ತೊಡಗದೆ ಆತ ತಾನೇ ತಾನಾಗಿ ಕಲ್ಪನೆಯನ್ನು ಹರಿಯಬಿಡುತ್ತಾನೆ. ಮೈಕಲ್ ಏಂಜಲೋ ಸಿಸ್ಟೈನ್ ಮಂದಿರದ ಮೇಲುಚಾವಣಿಯೊಳಗೆ ಬಿಡಿಸಿರುವ ಮಹೋನ್ನತಾಕೃತಿಯ ಚಿತ್ರಗಳು ಇಂಥ ಮೇರುಕಲ್ಪನೆಯಿಂದ ಸ್ಫೂರ್ತಿ ಪಡೆದಂಥವು. ಜೌರ್ಜೌನಿಯ ದಿವ್ಯ ಗ್ರಾಮೀಣ ಚಿತ್ರಣಗಳೂ ಈ ಸಾಲಿನಲ್ಲಿ ನಿಲ್ಲಬಲ್ಲ ಕೃತಿಗಳೇ ಆಗಿವೆ.
ಮ್ಯಾನರಿಸಮ್ : ರೆನೆಸಾನ್ಸ್ ವಿಮರ್ಶಕರು. ಆ ಯುಗದ ಚಿತ್ರಕಲಾವಿದರು ಲೇಖನ ಹಾಗೂ ವರ್ಣವಿನ್ಯಾಸದಲ್ಲಿ ಸಾಧಿಸಿದ ಉನ್ನತಮಟ್ಟವನ್ನು ಸ್ಪಷ್ಟವಾಗಿ ಗುರುತಿಸಿದ್ದಾರೆ. ಟಸ್ಕನಿ ಪಂಥದವರ ರಚನಾಸಾಮಥ್ರ್ಯದ ಹಾಗೂ ರೇಖನ ಶೈಲಿಯ ಪರಾಕಾಷ್ಠೆಯನ್ನು ಮೈಕಲ್ ಏಂಜಲೋ ಮತ್ತು ಅವನ ಪರಂಪರೆಯ ಬ್ರಾಂಸಿನೋ, ವಸಾóರಿ ಮೊದಲಾದವರಲ್ಲಿ ಕಾಣಬಹುದು. ಇವರಲ್ಲಿ ಮುಖ್ಯನಾದ ವಸಾóರಿ ಪ್ರಪ್ರಥಮಾಗಿ ಒಂದು ಚಿತ್ರಕಲೆಯ ಅಕಾಡಮಿಯನ್ನೇ ಸ್ಥಾಪಿಸಿದ. ಈ ಅಕಾಡಮಿಗೆ ಸೇರಿದ ಕಲಾವಿದರು ತಮ್ಮದೇ ಆದ ಹೊಸಪಂಥವನ್ನು ಸ್ಥಾಪಿಸಿ ಕೊಂಡರು. ಅವರು ನಗ್ನ ಆಕೃತಿಗಳನ್ನು ರೂಪಿಸುವಲ್ಲಿ ಅತಿಯಾದ ಸಂಕೀರ್ಣತೆಯನ್ನೂ ಸಮತೋಲನವನ್ನು ಸೂಚಿಸುತ್ತಿದ್ದುದರಿಂದ ಅದರ ಪರಿಪೂರ್ಣತೆಯೇ ಒಂದು ಸ್ಥಾಯೀ ಅವಸ್ಥೆಯನ್ನು ಮುಟ್ಟುವಂತಾಯಿತು. ಇದರಿಂದ ಮ್ಯಾನರಿಸಮ್ ಎಂಬ ಇನ್ನೊಂದು ಹೊಸ ಕಲಾಶೈಲಿಯ ಉಗಮವಾಯಿತು. ಈ ಸಂಪ್ರದಾಯದ ಚಿತ್ರಗಳಲ್ಲಿ ರೆನೆಸಾನ್ಸ್‍ಯುಗದ ಮಾರ್ದವತೆ ಸಾಮರಸ್ಯ ಮಸುಕಾದವು. ವರ್ಣವಿನ್ಯಾಸದಲ್ಲಿ ಟಿಷನ್ನರಂಥ ವೆನಿಸ್ಸಿನ ಕಲಾವಿದರು ಪರಿಪೂರ್ಣತೆಯ ಶಿಖರವನ್ನೇರಿದರು. ಅವನ ಸಮಕಾಲೀನರಾದ, ಉತ್ತರ ಇಟಲಿಯ ಕರೆಜೋ ಮುಂತಾದವರು ಉಜ್ಜಲವಾದ ವರ್ಣವಿನ್ಯಾಸದಲ್ಲಿ ನೆಳಲು ಬೆಳಕಿನ ಹೊಂದಾಣಿಕೆಯಲ್ಲಿ ಶ್ರೇಷ್ಠರೆನಿಸಿಕೊಂಡರು. ವರೋನಾ, ಟಸ್ಕನಿ ಮುಂತಾದ ಉತ್ತರ ಇಟಲಿ ಪ್ರದೇಶಗಳಿಂದ ಬಂದ ತರುಣ ಪೀಳಿಗೆಯ ಪಾರ್ಮಜಾóನ್ ಟೆಂಟರೆಟೌ ಮುಂತಾದವರನ್ನು ರೆನೆಸಾನ್ಸ್ ಪಂಥಕ್ಕೆ ಸೇರಿದವರು ಎನ್ನುವುದಕ್ಕಿಂತ ಹೆಚ್ಚಾಗಿ ಮ್ಯಾನರಿಸಮ್ ಪಂಥದ ಚಿತ್ರಕಾರರು ಎನ್ನುವುದು ವಾಡಿಕೆಯಾಗಿದೆ.
ಇಟಲಿಯಿಂದಾಚೆಯ ಪ್ರದೇಶಗಳಲ್ಲಿ ರೆನೆಸಾನ್ಸ್‍ಯುಗದ ಪ್ರಭಾವವನ್ನು ಅಷ್ಟಾಗಿ ಗುರುತಿಸುವುದು ಸಾಧ್ಯವಿಲ್ಲ. ಜರ್ಮನಿಯಲ್ಲಿ ಚಿತ್ರಕಲೆ ತನ್ನದೇ ಆದ ಸ್ವತಂತ್ರ ರೀತಿಯಲ್ಲಿ ಬೆಳೆಯಿತು. ಆದರೂ ಡ್ಯೂರರ್‍ನಂಥ ಕೆಲವರು ರೆನೆಸಾನ್ಸ್ ಇಟಲಿಯಿಂದಲೇ ಸ್ಫೂರ್ತಿ ಪಡೆಯಲು ಬಯಸಿದರು. ಇಟಲಿಯ ಚಿತ್ರಕಾರರ ಪರ್‍ಸ್ಪೆಕ್ಟಿವ್ ತಂತ್ರ ರೇಖಾವಿಧಾನ ಪರಿಮಾಣಸಾಧನೆ ಮೊದಲಾದ ಅಂಶಗಳ ಅಧ್ಯಯನಮಾಡಿ ಕರಗತಮಾಡಿಕೊಳ್ಳಲೆಂದೇ ಡ್ಯೂರರ್ ಎರಡು ಬಾರಿ ಇಟಲಿಗೆ ಭೇಟಿಯಿತ್ತ. ಇಟಲಿಯ ಕ್ಲಾಸಿಕಲ್ (ಅಭಿಜಾತ) ಸೌಂದರ್ಯದ ರಹಸ್ಯವನ್ನು ಅರ್ಥಮಾಡಿಕೊಳ್ಳುವ ಸಲುವಾಗಿಯೇ ಆತ ಹಲವು ವಿಮರ್ಶಾತ್ಮಕ ಲೇಖನಗಳನ್ನೂ ಚಿತ್ರಗಳನ್ನೂ ಬರೆದ. ಇಷ್ಟಾದರೂ ಅವನು ರೆನೆಸಾನ್ಸ್ ಶೈಲಿಯನ್ನು ಅನುಕರಿಸಿ ಬರೆದ ಚಿತ್ರಗಳು ತೀರ ವಿರಳ. ಅವುಗಳಲ್ಲಿ ಮ್ಯೂನಿಕ್ ಸಂಗ್ರಹಾಲಯದಲ್ಲಿರುವ ಫೋರ್ ಅಪಾಸಲ್ಸ್, ಆತ್ಮಚಿತ್ರಣ (ಸೆಲ್ಫ್ ಪೋರ್ಟ್‍ರೇಟ್), ವಿಯನ್ನಾದಲ್ಲಿರುವ ದಿ ಅಡೊರೇಷನ್ ಆಫ್ ದಿ ಟ್ರಿನಿಟಿ-ಇವು ಜಗತ್ಪ್ರಸಿದ್ದ ಕೃತಿಗಳು. ಇವುಗಳಲ್ಲಿ ಬೆಲ್ಲಿನಿಯ ಪ್ರಭಾವ ನಿಚ್ಚಳವಾಗಿ ಪಡಿಮೂಡಿದೆ. ಸ್ಯಾಕ್ಸನಿ ಪ್ರದೇಶದ ಕ್ರಾನಾಖ್ ಎಂಬಾತ ರಚಿಸಿದ ಪೌರಾಣಿಕ ನಗ್ನಚಿತ್ರಗಳಲ್ಲಿಯೂ ಅಲ್ಪಸ್ವಲ್ಪ ರೆನೆಸಾನ್ಸ್ ಪ್ರಭಾವವನ್ನು ಗುರುತಿಸಬಹುದು. ಆದರೆ 15ನೆಯ ಶತಮಾನದ ಜರ್ಮನಿಯಲ್ಲಿ ಮುದ್ರಣೋದ್ಯಮಕ್ಕೆ ಹೆಸರಾಗಿದ್ದ ಬಾಸೆಲ್ ನಗರದಲ್ಲಿ ಜನಿಸಿದ (ಕಿರಿಯ) ಹಾಲೆಬೈನ್ ಸಂಪೂರ್ಣವಾಗಿ ರೆನೆಸಾನ್ಸ್ ಪಂಥಕ್ಕೇ ಮಾರುಹೋದ. ಅವನು ಪ್ರಸಿದ್ಧ ಡಚ್ ರೆನೆಸಾನ್ಸ್ ಪಂಡಿತ ಇರಾಸ್ಮಸ್ ಮತ್ತು ಇಂಗ್ಲೆಂಡಿನ ತಾಮಸ್ ಮೋರ್ ಮುಂತಾದವರ ಗೆಳೆಯನಾಗಿದ್ದು ತನ್ನ ಜೀವಿತ ಕಾಲವನ್ನೆಲ್ಲ ಇಂಗ್ಲೇಂಡಿನಲ್ಲೇ ಕಳೆದ. ರೆನೆಸಾನ್ಸ್ ಕಲೆಯ ಅಭಿರುಚಿಯನ್ನು ಇಂಗ್ಲೆಂಡಿನಲ್ಲಿ ಪ್ರಸಾರಮಾಡಿದವ ಅವನೇ. ಆತ ರಚಿಸಿದ ಚಿತ್ರಗಳಲ್ಲಿ ಮತ್ತು ದೃಶ್ಯಾವಳಿಗಳಿಗೆಂದು, ಉಡುಗೆ ತೊಡುಗೆ ಮತ್ತು ಆಭರಣಗಳ ತಯಾರಿಕೆಗೆಂದು ರೂಪಸಿದ ರೇಖಾಚಿತ್ರಗಳಲ್ಲಿ ಡಿಸೈನುಗಳಲ್ಲಿ, ರೆನೆಸಾನ್ಸ್ ಕಲೆಯ ಛಾಯೆಯನ್ನು ಕಾಣಬಹುದು.
ಇಷ್ಟಲ್ಲದೆ ನೆದರ್‍ಲೆಂಡ್ಸ್ ಪ್ರದೇಶಕ್ಕೆ ಸೇರಿದ ಲೂಕಾಸ್‍ವಾನ್ ಲೈಡನ್ ಮುಂತಾದವರ ಕೃತಿಗಳಲ್ಲಿ ಲಿಯೋನಾರ್ಡೋವಿನ ಪ್ರಭಾವ ಅಚ್ಚಳಿಯದ ಮುದ್ರೆ ಒತ್ತಿದೆ. ಹೆಚ್ಚಾಗಿ ಮ್ಯಾನರಿಸಮ್ ಪಂಥವನ್ನೇ ಅನುಸರಿಸಿದ ಫ್ರೆಂಚ್ ಮತ್ತು ನೆದರ್‍ಲೆಂಡ್ಸ್ ಚಿತ್ರಕಾರರು ಅಷ್ಟಾಗಿ ರೆನೆಸಾನ್ಸ್ ಪ್ರಭಾವಕ್ಕೆ ಸಿಕ್ಕಲಿಲ್ಲ.
2 ಬರೋಕ್ : ಬರೋಕ್ ಎಂಬ ಶಬ್ದವನ್ನು ಕಲೆ ಹಾಗೂ ಸಾಹಿತ್ಯ ವಿಮರ್ಶೆಯ ಸಂದರ್ಭದಲ್ಲಿ ಮೊಟ್ಟಮೊದಲು ಉಪಯೋಗಿಸಿದವರು 19ನೆಯ ಶತಮಾನದ ಜರ್ಮನಿಯ ಬರ್ಕ್‍ಹಾಡ್ರ್ಟ್ ಮತ್ತು ಪುಲ್ಫ್‍ಲಿನ್ ಎಂಬ ಕಲಾ ವಿಮರ್ಶಕರು. ಇಂಗ್ಲಿಷಿನಲ್ಲಿ ಈ ಶಬ್ದವನ್ನು ಮೂರು ತೆರನಾದ ಬೇರೆ ಬೇರೆ ಅರ್ಥಗಳಲ್ಲಿ ಬಳಸಲಾಗಿದೆ. ಮೊದಲನೆಯದಾಗಿ 16ನೆಯ ಶತಮಾನದ ಉತ್ತರ ಭಾಗದಿಂದ ಹಿಡಿದು 18ನೆಯ ಶತಮಾನದ ಪೂರ್ವಭಾಗದವರೆಗಿನ ಅವಧಿಯಲ್ಲಿ ಅಂದರೆ ಮ್ಯಾನರಿಸಮ್ ಪಂಥ ಮತ್ತು ರೊಕೊಕೊ ಯುಗದ ನಡುವೆ ಬರುವ ಕಾಲದಲ್ಲಿ ಪ್ರಚಲಿತವಾಗಿದ್ದ ಕಲಾ ಸಂಪ್ರದಾಯವನ್ನು ಬರೋಕ್ ಶೈಲಿ ಎನ್ನುತ್ತಾರೆ. ಎರಡನೆಯದಾಗಿ 17ನೆಯ ಶತಮಾನದಲ್ಲಿ ಬಳಸುತ್ತಿದ್ದ ವಿಶಿಷ್ಟ ಶೈಲಿಯಿಂದಾಗಿ ಆ ಶತಮಾನವನ್ನೇ ಬರೋಕ್ ಯುಗವೆನ್ನುವುದುಂಟು. ಮೂರನೆಯದಾಗಿ ಬರೋಕ್ ಎಂಬ ವಿಶೇಷಣವನ್ನು ಅಸಮರೂಪವುಳ್ಳ, ವಕ್ರ, ವಿಕೃತ, ವಿಚಿತ್ರ ಕಲ್ಪನೆಯ, ಅತ್ಯಲಂಕಾರದ, ಎಂಬ ಮಾತುಗಳಿಗೆ ಸಂವಾದಿಯಾಗಿಯೂ ಬಳಸಿದ್ದುಂಟು. ಈ ಕೊನೆಯ ಅರ್ಥವಿವರಣೆ ಈಗ ಸಮಂಜಸವಾಗಿಲ್ಲವೆಂದು ವಿಮರ್ಶಕರು ಒಪ್ಪಿಕೊಂಡಿದ್ದಾರೆ.
ಕಲೆಯ ಸಂದರ್ಭದಲ್ಲಿ ಬರೋಕ್ ಎನ್ನುವ ಮಾತನ್ನು ವೈವಿಧ್ಯಮಯವಾದದ್ದು, ವಿವಿಧ ಅಂಶಗಳನ್ನು ಒಳಗೊಂಡು ಮೇಳೈಸಿ ಸಮರಸವನ್ನು ಪ್ರಚೋದಿಸುವಂಥದ್ದು ಎಂಬ ಅರ್ಥದಲ್ಲಿ ಬಳಸಬೇಕೆಂದು ಕಲಾವಿಮರ್ಶಕರು ಹೇಳುತ್ತಾರೆ. ಬರೋಕ್ ಕಲೆಯಲ್ಲಿ ಒತ್ತು ಬೀಳುವುದು ಅದರ ಸಮರಸದ ಅಂಶದ ಮೇಲೆ. ವಿವಿಧ ಅಂಗಗಳು ಸಮ್ಮಿಳನಗೊಂಡು ಸಮಗ್ರ ಪರಿಣಾಮಕ್ಕೆ ಪೋಷಕವಾಗುವುದು ಬರೋಕ್ ಕಲೆಯ ಮುಖ್ಯ ಲಕ್ಷಣ. ಹೈ ರೆನೆಸಾನ್ಸ್ ಕಲೆಯಲ್ಲೂ ಒಂದು ರಚನೆಯ ವಿವಿಧ ಅಂಗಾಂಗಗಳು ಪರಿಪೂರ್ಣವಾಗಿದ್ದು ಅವು ಸಮತೋಲನಗೊಂಡು ಒಟ್ಟು ಪರಿಣಾಮ ಸಾಧಿಸುವಂತಿರುತ್ತವೆಯಾದ್ದರಿಂದ ಅದು ಬರೋಕ್ ಶೈಲಿಗಿಂತ ತೀರಾ ಭಿನ್ನವಾದುದೇನಲ್ಲ. ಬರೋಕ್ ಕಲೆ ಸಾಧಿಸುವ ಪರಿಣಾಮ ನೋಡುವವನ ಭಾವನೆಗಳನ್ನೂ ಹೊಂದಿಕೊಂಡಿರುತ್ತದೆ. ನೋಡುವವನಿಗೆ ಕಲೆಯ ವಸ್ತು ವಾಸ್ತವತೆಯ ಭ್ರಮೆಯನ್ನು ಕಲ್ಪಿಸುವಂತಿರಬೇಕು. ನಿಜದ ತೋರ್ಕೆಯೇ ಅದರ ಜೀವಾಳ, ಕಲೆಯಲ್ಲಿ ಪ್ರತಿರೂಪಿತವಾಗಿರುವ ವಸ್ತು. ನಿಜವಾದ ವಸ್ತುವನ್ನು ಹೋಲುವಂಥ ಆಕಾರ, ಬಣ್ಣ, ರಚನೆ ವಿನ್ಯಾಸಗಳನ್ನೊಳಗೊಂಡಿರಬೇಕು. ಅದು ಒಂದು ಕಾಲದ ಒಂದು ಸನ್ನಿವೇಶದ ವಿಸ್ತಾರದ ಭವ್ಯಕಲ್ಪನೆಯನ್ನು ಮೂಡಿಸಿ, ಅದರಲ್ಲಿನ ಪಾತ್ರಗಳ ಹಾಗೂ ನೋಡುವವರ ನಡುವೆ ಭಾವುಕ ಸಂಬಂಧವನ್ನುಂಟು ಮಾಡುವಂತಿರುತ್ತದೆ. ಸನ್ನಿವೇಶದಲ್ಲಿ ಸೂಚಿತವಾಗಿರುವ ತುರ್ತುಗತಿಯನ್ನು ವಸ್ತುವಿನ ಸ್ನಿಗ್ಧತೆಯನ್ನು ಬರೋಕ್ ಚಿತ್ರಕಾರ ನೆಳಲು ಬೆಳಕಿನ ವಿನ್ಯಾಸದಿಂದಲೇ ಸಾಧಿಸುತ್ತಾನೆ. ದೃಢವಾದ ಕರ್ಣರೇಖೆ ವಕ್ರರೇಖೆಗಳಿಂದ ತನಗೆ ಬೇಕಾದ ವೈದೃಶ್ಯದ ಪರಿಣಾಮವನ್ನು ಸೂಚಿಸುತ್ತಾನೆ. ಬರೋಕ್ ಶೈಲಿ 16ನೆಯ ಶತಮಾನದ ರೋಮಿನಲ್ಲಿ ಹುಟ್ಟಿತೆನ್ನುವುದು ವಿಮರ್ಶಕರಲ್ಲಿ ವಾಡಿಕೆ. 1580ರ ಸುಮಾರಿಗೆ ಮ್ಯಾನರಿಸಮ್ ವಿಧಾನ ಜಡವಾದಾಗ ಚಿತ್ರಕಾರರಲ್ಲಿ ಹೊಸತನದ ಬಯಕೆ ಮೂಡಿತು. ಉತ್ತರ ಯೂರೋಪಿನಲ್ಲಿ ಮ್ಯಾನರಿಸಮ್ ಹಾಗೂ ಬರೋಕ್ ವಿಧಾನಗಳು ಒಂದು ಅವಿಚ್ಛಿನ್ನ ಪರಂಪರೆಯ ಪ್ರವಾಹದಲ್ಲಿ ಸೇರಿಕೊಂಡವು. ಇದರಿಂದ ಹದಿನೇಳನೆಯ ಶತಮಾನದ ಪ್ರಾರಂಭದಲ್ಲಿ ರೂಪುಗೊಂಡ ನ್ಯಾಚುರಲಿಸ್ಟ್ ಪಂಥವೆನ್ನುವ ಸಂಪ್ರದಾಯದಲ್ಲೆ ಎರಡು ವಿಭಿನ್ನ ಪ್ರವೃತ್ತಿಗಳು ಕಾಣಿಸಿಕೊಂಡವು.
(ಎ) ಅದರಲ್ಲಿ ಕರೆವಾಜೋ (ಸು. 1591-2) ಒಂದು ಪ್ರವೃತ್ತಿಯನ್ನು ಪ್ರತಿನಿಧಿಸುತ್ತಾನೆ. ಅವನು ಹೇಳುವ ಪ್ರಕಾರ ಪ್ರಕೃತಿಯಲ್ಲಿ ನಾವು ಕಾಣುವ ವಾಸ್ತವ ಸಂಗತಿಗಳು ಕಲೆಗೆ ಆಧಾರವಾಗಬೇಕೇ ಹೊರತು ನಾವು ಕಲ್ಪಿಸಿಕೊಳ್ಳುವ ಆದರ್ಶದ ಭಾವನೆಗಳಲ್ಲ. ವಾಸ್ತವ ಜೀವನದ ನಾನಾ ಅಂಶಗಳನ್ನು ನೇರವಾಗಿ ಯಥಾರ್ಥವಾಗಿ ನಾಟಕೀಯವಾಗಿ ಪಡಿಮೂಡಿಸಲು ಕರೆವಾಜೋ ಬೆಳಕು ನೆರಳುಗಳ ವಿನ್ಯಾಸವನ್ನು ಬಳಸುತ್ತಾನೆ.
(ಬಿ) ಎರಡನೆಯದಾಗಿ ಕೆಲವು ಚಿತ್ರಕಾರರು ಹೈ-ರೆನೆಸಾನ್ಸ್ ಯುಗದತ್ತ ಕಣ್ಣು ಹೊರಳಿಸಿ ಕ್ಲಾಸಿಕ್ ವಸ್ತುಗಳನ್ನು ಆರಿಸಿಕೊಂಡರು. ರಾಫಲ್, ಮೈಕಲ್ ಏಂಜಲೋ, ಮುಂತಾದವರ ಕೃತಿಗಳಲ್ಲಿ, ಹಾಗೂ ರೋಮ್‍ನ ಪುರಾಣೇತಿಹಾಸ ಕಾವ್ಯಗಳಿಂದ ಸ್ಫೂರ್ತಿ ಪಡೆಯಲು ಉದ್ದೇಶಿಸಿದರು. ಹೀಗೆ ಕ್ಲಾಸಿಕಲ್ ರೋಮಿನ ಅಭಿಜಾತ ಪರಂಪರೆಯಿಂದ ಸ್ಫೂರ್ತಿಯನ್ನು ಪಡೆದವರಲ್ಲಿ ಅನಿಬಾಲೆ ಕರಾಚಿ ಮತ್ತು ಅವನ ಶಿಷ್ಯ ಡೊಮೆನಿಚಿನೋ ಪ್ರಮುಖರು.
ಒಂದು ಸ್ವಾರಸ್ಯದ ಸಂಗತಿಯೆಂದರೆ ಬರೋಕ್ ಕಲೆ ಮೇಲೆ ಹೇಳಿದ ಎರಡು ಪ್ರವೃತ್ತಿಗಳಿಂದ ಭಿನ್ನವಾದ ಇನ್ನೊಂದು ಜಾಡನ್ನು ಹಿಡಿದು ಪ್ರಮುಖವಾದ ಬೇರೆ ಗುಣಲಕ್ಷಣಗಳನ್ನು ಮೈಗೂಡಿಸಿಕೊಂಡಿತು. ಈ ಸಂಪ್ರದಾಯದ ರೀತಿಯನ್ನು ವೆನಿಸ್ ಪಂಥದ ಟಿಷನ್ನನ ಚಿತ್ರಗಳಲ್ಲಿ ಕಾಣಬಹುದು.
ಒಟ್ಟಿನಲ್ಲಿ ಬರೋಕ್ ಕಲೆ ವೆನಿಸ್ ಪಂಥದಿಂದ, ಕರೆವಾಜೋವಿನ ಕಲೆಯಿಂದ ವರ್ಣ ಹಾಗೂ ಬೆಳಕಿನ ವಿನ್ಯಾಸವನ್ನೂ ಕಣ್ಣುಕೋರೈಸುವಂಥ ಉಜ್ಜಲ ಆಡಂಬರಯುತ ಶೈಲಿಯನ್ನೂ ರೂಪಿಸಿಕೊಂಡಿತು. ಹೀಗೆ ರೂಪುಗೊಂಡ ಬರೋಕ್ ಶೈಲಿಯ ಸಮಗ್ರ ಲಕ್ಷಣಗಳನ್ನು ನಾವು (1608ರಲ್ಲಿ ರೋಮಿನಿಂದ ಆಂಟ್‍ವರ್ಪ್‍ಗೆ ಹಿಂದಿರುಗಿದ) ರೂಬನ್ಸ್‍ನ ಚಿತ್ರಗಳಲ್ಲಿ, 1620ರ ಸುಮಾರಿನಲ್ಲಿ ರೋಮ್‍ನಲ್ಲಿದ್ದ ಇಟಲಿಯ ಚಿತ್ರಕಾರರ ಕೃತಿಗಳಲ್ಲಿ, ಸ್ಪಷ್ಟವಾಗಿ ಗುರುತಿಸಬಹುದು.
ಇಟಲಿಯ ಬರೋಕ್ ಕಲೆಯ ಇತಿಹಾಸವನ್ನು ಸ್ಥೂಲವಾಗಿ ಮೂರು ಘಟ್ಟಗಳಾಗಿ ವಿಂಗಡಿಸಬಹುದು. 1565-1625ರ ನಡುವಣ ಪ್ರಾರಂಭಯುಗ ಅಥವಾ ಸಂಕ್ರಮಣಯುಗ, 1625-1675ರ ಸುಮಾರಿನ ಹೈ (ಉಜ್ಜಲ) ಬರೋಕ್‍ಯುಗ 1675-1715 ಅವಧಿಯ ಅಂತಿಮ ಬರೋಕ್‍ಯುಗ.
ಸಂಕ್ರಮಣ ಯುಗದ ಬರೋಕ್ ಲಕ್ಷಣಗಳನ್ನು ನಾವು ಲಡೊವಿಕೊ ಕರಾಷಿಯನ ದಿ ಕನ್‍ವರ್ಷನ್ ಆಫ್ ಸೇಂಟ್ ಪಾಲ್ ಚಿತ್ರದಲ್ಲಿ, ಫಾರ್ನಿಸ್ ಅರಮನೆಯಲ್ಲಿ ಅನಿಬಾಲೆ ಕರಾಷಿ ಮಾಡಿದ ವರ್ಣಾಲಂಕಾರಗಳಲ್ಲಿ, ರೂಬನ್ಸನ ಗ್ರಿಗರಿ ಅಂಡ್ ಡಾಮಿಟೆಲ್ಲಾ ಎಂಬ ಚಿತ್ರದಲ್ಲಿ ಡೊಮಿನಿಬೆನೋವಿನ ಲಾಸ್ಟ್ ಕಮ್ಯೂನಿಯನ್ ಆಫ್ ಸೇಂಟ್ ಜೆರೋಮ್ ಚಿತ್ರದಲ್ಲಿ ಕಾಣಬಹುದು, ಇಲ್ಲಿ ಕಾಣಿಸುವ ವರ್ಣ ವೈಭವ, ಮಾನವದುರಂತದ ಮಾರ್ದವ ಕಲ್ಪನೆ, ಬೆಳಕಿನ ವಿನ್ಯಾಸ ಇವು ಚೇತೋ ಹಾರಿಯಾಗಿವೆ. ಉಜ್ಜ್ವಲ ಬರೋಕ್ ಶೈಲಿ ಸೃಷ್ಟಿಯಾದದ್ದು ರೋಮಿನಲ್ಲಿ, ಅದನ್ನು ನಾವು ಕ್ಯಾಸಿನೋ ಲೂಡೋವಿಚಿ ಮಂದಿರದ ಮೇಲುಚಾವಣಿಯಲ್ಲಿ ಚಿತ್ರಕಾರ ಗರ್‍ಸಿನೋ ಮಾಡಿರುವ ಚಿತ್ರಾಲಂಕಾರದಲ್ಲಿ, ಸೇಂಟ್ ಆಂಡ್ರಿಯ ಮಂದಿರದ ಗುಮ್ಮಟದೊಳಗೆ ಲಾನ್ ಫ್ರಾಂಕೊ ಎಂಬಾತ ರಚಿಸಿರುವ ಚಿತ್ರಾವಳಿಗಳಲ್ಲಿ ಕಾಣಬಹುದು. ಈ ಸಂಪ್ರದಾಯದ ಅತ್ಯುತ್ಕøಷ್ಟ ಪ್ರತಿಭಾವಂತನೆಂದರೆ ಕೌರ್ಟೌನಾ. ಅವನ ದಿ ರೇಪ್ ಆಫ್ ದಿ ಸ್ಯಾಬೈನ್ಸ್ ಎನ್ನುವ ಚಿತ್ರದಲ್ಲಿ (1629ರಲ್ಲಿ ರಚಿತವಾದ ಈ ಕೃತಿ ಕ್ಯಾಪಿಟೋಲಿನ್ ಮ್ಯೂಸಿಯಮಿನಲ್ಲಿದೆ) ಸಂಯಮಪೂರ್ಣ ರೋಮನ್ ಕ್ಲಾಸಿಕಲ್ ಹಾಗೂ ಮನೋಹರವಾದ ವೆನೀಷಿಯನ್, ಸಂಪ್ರದಾಯಗಳ ನಡುವಣ ಸಂಘರ್ಷವನ್ನು ಕಾಣಬಹುದು. ಇವನು ವೆನಿಸ್, ಫ್ಲಾರೆನ್ಸ್ ನಗರಗಳಲ್ಲಿನ ಚರ್ಚುಗಳಲ್ಲಿ ಮಾಡಿರುವ ಚಾವಣಿ ಚಿತ್ರಾಲಂಕಾರಗಳ ಮಾದರಿಗಳು ಇಟಲಿಯ ಹಲವು ಚರ್ಚುಗಳಲ್ಲಿ ಕಾಣಸಿಗುತ್ತವೆ.
ರೋಮಿನಿಂದಾಚೆ ಹಲವು ದೇಶಗಳಲ್ಲಿ ಬರೋಕ್ ಪರಂಪರೆಯ ಚಿತ್ರಕಲೆ ಬೆಳೆಯುತ್ತ ಹೋದರೂ ಅದರ ಉಜ್ಜ್ವಲ ಅಭಿವ್ಯಕ್ತಿಯನ್ನು ನಾವು ಕಾಣುವುದು ಖ್ಯಾತ ಚಿತ್ರಕಾರ ಬೆಲ್ಜಿಯಮಿನ ರೂಬನ್ಸ್‍ನ ಚಿತ್ರಗಳಲ್ಲಿ, ವ್ಯಾನ್ ಡೈಕ್ ಮತ್ತು ಯೌರ್ಡೌನ್ಸ್ ಮುಂತಾದ ಖ್ಯಾತ ಕಲಾವಿದರುಗಳ ಮೇಲೆ ರೂಬನ್ಸ್ ವ್ಯಾಪಕ ಪ್ರಭಾವ ಬೀರಿದ, ರೋಮಿನಿಂದಾಚೆ ಬರೋಕ್ ಶೈಲಿಯಲ್ಲಿ ಕೃತಿರಚನೆ ಮಾಡಿದವರಲ್ಲಿ ಸ್ಪೇನಿನ ವೆಲಾಸ್‍ಕ್ವಸ್ ಮುಖ್ಯನಾದವ. ಇವನ ದಿ ಮೇಡ್ ಆಫ್ ಆನರ್, ಸರೆಂಡರ್ ಆಫ್ ಬ್ರೆಡಾ ಮುಂತಾದ ಚಿತ್ರಗಳು ಬರೋಕ್ ಶೈಲಿಯ ಉನ್ನತ ಕೃತಿಗಳು.
ಹಾಲೆಂಡಿನ ವಿಖ್ಯಾತ ಚಿತ್ರಕಾರ ರೆಮ್‍ಬ್ರ್ಯಾಂಟ್ ಬರೋಕ್ ಶೈಲಿಯಿಂದ ಮುಕ್ತನಾದರೂ ಅವನ ದಿ ನೈಟ್ ವಾಚ್, ಕ್ರೈಸ್ಟ್ ಎಟ್ ದಿ ಕಾಲಮ್ ಮುಂತಾದ ಶ್ರೇಷ್ಠ ಕೃತಿಗಳಲ್ಲಿ ಮಾನವ ಜೀವನವನ್ನು ಕುರಿತ ಗಂಭೀರವಾದ ಚಿಂತನೆಯೂ ನಿತ್ಯಜೀವನದ ಸಾಮಾನ್ಯ ಸನ್ನಿವೇಶಗಳಲ್ಲಿನ ಭಾವುಕತೆಯೂ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತವೆ. ಬರೋಕ್ ಸಂಪ್ರದಾಯ ಅತ್ಯಾಡಂಬರದಿಂದಾಗಿ ಅವನತಿಗೆ ಗುರಿಯಾದಾಗ ತನ್ನ ವೈಶಿಷ್ಟ್ಯವನ್ನು ಕಳೆದುಕೊಂಡು ಅದು ರೊಕೊಕೊ ಸಂಪ್ರದಾಯದೊಂದಿಗೆ ಬೆರೆತು ಹೋಯಿತು. 3 ಆಧುನಿಕ : ಪೋಸ್ಟ್-ಇಂಪ್ರೆಷನಿಸಮ್ : ಚಿತ್ರಕಲೆ ಆಧುನಿಕ ಯುಗದಲ್ಲಿ ನೂರೆಂಟು ಪಂಥಗಳಾಗಿ ಒಡೆದು, ಹಲವಾರು ಶೈಲಿಗಳಲ್ಲಿ ರೂಪುಗೊಳ್ಳುತ್ತಿದೆ. ಅಕ್ಯಾಡೆಮಿಕ್ ಹಾಗೂ ಸಾಂಪ್ರದಾಯಿಕ ಚಿತ್ರಕಾರರ ಜಾಡನ್ನು ಬಿಟ್ಟು ತೀರ ವಿರೋಧವಾದ ರೀತಿಯಲ್ಲಿ ಹಲವಾರು ಹೊಸ ಚಳವಳಿಗಳು ಇಂದು ಮೈದೋರುತ್ತಿವೆ. ಇವತ್ತಿನ ಹಲವೆಂಟು ಚಳವಳಿಗಳಿಗೆ ಪ್ಯಾರಿಸ್ ಹಾಗೂ ಮಧ್ಯ ಯೂರೋಪುಗಳು ಕೇಂದ್ರಗಳಾಗುತ್ತಿವೆ. ಪ್ಯಾರಿಸ್ ನಗರವಂತೂ ಕಲಾಪ್ರಪಂಚದ ರಾಜಧಾನಿಯಾಗುತ್ತಿದೆ.
1900ರ ಹೊತ್ತಿಗೆ ಪರಿಣಾಮವಾದ ಅಥವಾ ಇಂಪ್ರೆಷನಿಸಮ್ ಎಂಬ ಚಳವಳಿ ತಣ್ಣಗಾಗಿದ್ದು ಅದರ ಮೂಲ ಸೂತ್ರಗಳನ್ನೆಲ್ಲವನ್ನೂ ವಿರೋಧಿಸುವ ಹೊಸಚಳವಳಿಯೊಂದು ಹುಟ್ಟಿಕೊಂಡಿತ್ತು. ಈ ಹೊಸ ಚಳವಳಿಗೆ ಸೇರಿದ ಪಾಲ್ ಸಿಜಾóನ್, ಗಾಗಿ, ಮ್ಯಾಟೀಸ್ ಮುಂತಾದ ಫ್ರೆಂಚ್ ಚಿತ್ರಕಾರರ ಗುಂಪನ್ನು ಪೋಸ್ಟ್ ಇಂಪ್ರೆಷನಿಸ್ಟರು ಎಂದು ಕರೆಯಲಾಯಿತು. ಇವರ ಮುಖ್ಯ ಸಾಧನೆಯೆಂದರೆ ಇವರು ಪರಿಣಾಮವಿಧಾನದ ಚಿತ್ರಕಾರರಿಗಿಂತ ಮುಂದೆ ಹೋಗಿ ಹೊಸ ಕೃತಿಗಳಲ್ಲಿ ಗಟ್ಟಿ ಭದ್ರವಾದ ರೂಪ ಹಾಗೂ ರೇಖೆಗಳು ಮೂಡುವಂತೆ ಮಾಡಿದರು. ಉದಾಹರಣೆಗೆ ಜಾಜ್ರ್ಸ್ ಸ್ವೈರ ಪಾಯಿಂಟೆಲಿಸಂ ಎಂಬ ಹೊಸ ಚಿತ್ರ ವಿಧಾನವನ್ನೇ ಪ್ರಾರಂಭಿಸಿ ವರ್ಣವಿನ್ಯಾಸದಲ್ಲಿ ಚುಕ್ಕೆಗಳನ್ನೂ ಪುಟ್ಟ ಗೀಟುಗಳನ್ನೂ ಬಳಸಿದ. ಚುಕ್ಕೆ ಹಾಗೂ ಗೀಟುಗಳಿಂದಲೇ ತುಂಬಿಸಿ ಬರೆದ ಅವನ ದಿ ಸರ್ಕಸ್ ಎಂಬ ಕೃತಿ ಅತ್ಯಂತ ಸೂಕ್ಷ್ಮವೂ ಪರಿಷ್ಕಾರವೂ ಅದ ರಚನೆಯಿಂದ ಕೂಡಿದೆ.
ನೆದರ್‍ಲೆಂಡಿನ ವಾನ್ ಗೋ ಅತ್ಯಂತ ವ್ಯಗ್ರವಾದ ಭಾವನಾತ್ಮಕ ವಾದವಿಚಾರಗಳನ್ನು ಅಭಿವ್ಯಕ್ತಿಗೊಳಿಸಲು ಉಜ್ವಲವರ್ಣಗಳನ್ನು ಬಳಸಿದ. ತಿರಿಚಿಹೋದ ಸೊಟ್ಟ ಚಿತ್ರಗಳನ್ನು ಬರೆದ. ಮೇಲುನೋಟಕ್ಕೆ ಇವನ ಕುಂಚ ಲಂಗುಲಗಾಮಿಲ್ಲದಂತೆ ಕಂಡರೂ ಇವನು ಅದ್ಭುತವಾದ ಸಂಯಮವನ್ನೂ ಹಿಡಿತವನ್ನೂ ತೋರಿಸಬಲ್ಲನೆಂಬುದಕ್ಕೆ ಇವನ ಸನ್‍ಫ್ಲವರ್ ಎಂಬ ವರ್ಣಚಿತ್ರವೇ ಸಾಕ್ಷಿ. ಚಿತ್ರಕಾರರಿಗಾಗಿ ಅಸಾಂಪ್ರದಾಯಿಕ ರೀತಿಯಲ್ಲಿ ಬಣ್ಣಗಳನ್ನು ಬಳಸಿ ಸೂಚ್ಯವೂ ಸಾಂಕೇತಿಕವೂ ಆದ ಕಾಣ್ಕೆಗಳನ್ನು ಮೂಡಿಸಿದ. ಅವನ ಚಿತ್ರಗಳಲ್ಲಿ ದಿ ಸ್ಪಿರಿಟ್ ಆಫ್ ದಿ ನೈಟ್ ವಾಚಸ್ ಎಂಬುದು ಪ್ರಖ್ಯಾತ ಕೃತಿ. ಇದರಲ್ಲಿ ಅತ್ಯಾಧುನಿಕವೆನ್ನಬಹುದಾದ ಐರೋಪ್ಯ ಸಂವೇದನೆಯನ್ನು ತಾಹಿತಿ ದ್ವೀಪದ ಜೀವನದಿಂದ ಎತ್ತಿಕೊಂಡ ವಸ್ತುವಿಗೆ ಹೊಂದಿಸಲು ಯತ್ನಿಸಿದ್ದಾನೆ. ಈ ಪಂಥದ ಚಿತ್ರಕಾರರಲ್ಲಿ ಎಲ್ಲರಿಗಿಂತ ಪ್ರಮುಖನೆಂದರೆ ಪಾಲ್ ಸಿಜಾóನ್ ಇವನದು ಭವ್ಯವೂ ಉನ್ನತವೂ ಆದ ಕಲ್ಪನೆ. ಉಜ್ವಲ ರಚನೆ ಹಾಗೂ ವರ್ಣವಿನ್ಯಾಸದ ಮೂಲಕ ಗಂಭೀರವೂ ಚಿಂತನಶೀಲವೂ ಆದ ದೃಶ್ಯಗಳನ್ನು ಬಿಡಿಸಬಲ್ಲವನಾಗಿದ್ದ. ಇವನ ಚಿತ್ರಗಳೇ ಬಹುತೇಕ ಕ್ಯೂಬಿಸಂ (ಅಮೂರ್ತವಾದ) ಪಂಥಕ್ಕೆ ಸ್ಪೂರ್ತಿಯಾದವೆಂದು ಹೇಳುವುದುಂಟು. ಇವನು ಪ್ರಸಿದ್ಧ ಚಿತ್ರಸಂಗ್ರಹಾಲಯಗಳಲ್ಲಿ ಕುಳಿತು ಗಂಟೆಗಟ್ಟಲೆ, ಜಗತ್ತಿನ ವಿಖ್ಯಾತ ಕೃತಿಗಳನ್ನು ಆಧ್ಯಯನ ಮಾಡುತ್ತಿದ್ದನಂತೆ. ಒಂದು ವಸ್ತುವನ್ನು ಪದರಪದರವಾಗಿ ವಿಶ್ಲೇಷಿಸಿ ಅದರಲ್ಲಿನ ಅಮೂರ್ತವಾದ ರೇಖಾವಿನ್ಯಾಸವನ್ನು ಚಿತ್ರದಲ್ಲಿ ಪಡಿಮೂಡಿಸಬೇಕೆನ್ನುವುದು ಅವನ ತತ್ತ್ವ. ನೇರವಾದ, ಸರಾಗವಾದ ಚಿತ್ರಣವನ್ನೂ ಅಂಥ ಅನುಕರಣೆಯನ್ನೂ ವಿರೋಧಿಸಿದ ಅವನು ತನ್ನ ಪಟ್ಟಶಿಷ್ಯನಾದ ಎಮಿಲಿ ಬರ್ನಾರ್ಡ್‍ಗೆ ಕೊಟ್ಟ ಉಪದೇಶ ಗಮನಾರ್ಹವಾಗಿದೆ; ಸಿಲಿಂಡರು, ಗೋಳ, ಶಂಕು-ಇವುಗಳ ನೆರವಿನಿಂದ ನಿಸರ್ಗವನ್ನು ವ್ಯಾಖ್ಯಾನ ಮಾಡು; ವಸ್ತುಗಳ, ಅವುಗಳ ಮೇಲ್ಮೈಗಳ ಒಂದೊಂದು ಪಕ್ಕವೂ ಒಂದು ಕೇಂದ್ರ ಬಿಂದುವಿನೆಡೆಗೆ ಸರಿಯುವಂತೆ ಎಲ್ಲವನ್ನೂ ಕಣ್ನೆಲೆಯಲ್ಲಿ ನಿರೂಪಿಸು. ಕ್ಯೂಬಿಸ್ಟ್ ಪಂಥದವರು ಈ ಮಾತುಗಳನ್ನೇ ತಮ್ಮ ಆದರ್ಶಸೂತ್ರವನ್ನಾಗಿ ಎತ್ತಿಕೊಂಡರೂ ಸಿಜಾóನ್ ಕ್ಯೂಬಿಸಂ ತಂತ್ರವನ್ನು ಒಪ್ಪುತ್ತಿದ್ದನೆಂದು ಹೇಳುವುದು ಕಷ್ಟ. ಲಂಬರೇಖೆಗಳನ್ನು ಬಳಸಿ ದೃಶ್ಯದ ಅರ್ಥಸಂಕೇತಗಳನ್ನೂ ಆಳ ಅಗಾಧತೆಗಳನ್ನೂ ಸೂಚಿಸುವ ಇವನ ತಂತ್ರದಿಂದಾಗಿ ನೂತನ ರೀತಿಯಲ್ಲಿ ಭೂದೃಶ್ಯಗಳನ್ನು, ಸ್ತಬ್ಧ ಚಿತ್ರಗಳನ್ನು ಬರೆಯುವುದು ಸಾಧ್ಯವಾಯಿತು. ಆದುನಿಕ ಚಿತ್ರ ಶೈಲಿಗೆ ಸಿಜಾóನನೇ ಮೂಲ ಪುರಷನೆನ್ನುವ ಮಾತಿನಲ್ಲಿ ಉತ್ಪ್ರೇಕ್ಷೆಯಿಲ್ಲ. ಪರಿಣಾಮ ವಿಧಾನದ ವಿರುದ್ಧವಾಗಿ ಸಿಜಾóನ್ ಪ್ರಾರಂಭಿಸಿದ ಚಳವಳಿಯೇ ಆಧುನಿಕ ಚಿತ್ರಕಲೆಗೆ ಹೊಸ ನೆಲಬೆಲೆಗಳ ಅರಿವನ್ನು ಮೂಡಿಸಿತು.
ಇಂಟಿಮಿಸಮ್ : ಈ ಹೋಸ ಶೈಲಿಯ ಪ್ರವರ್ತಕರೂ ಫ್ರೆಂಚ್ ಕಲಾವಿದರೂ ಆದ ಬೌನಾ ಹಾಗೂ ವೀಯಾರ್ ಪರಿಣಾಮ ವಿಧಾನದಿಂದಲೇ ಸ್ಫೂರ್ತಿ ಪಡೆದರೆಂಬುದು ಸ್ವಾರಸ್ಯದ ಸಂಗತಿ. ಉಜ್ಜ್ವಲವರ್ಣ ವಿನ್ಯಾಸದಿಂದ ಉರಿಯುವ ಅವರ ಭೂದೃಶ್ಯಗಳೂ ರಸಬಿರಿಯುವ ಹಣ್ಣುಹೂವುಗಳ ಚಿತ್ರಣಗಳೂ ಈ ಹೊಸ ವಿಧಾನದ ಅಭಿವ್ಯಕ್ತಿಗಳಾಗಿವೆ. ಪರಿಣಾಮ ವಿಧಾನದಲ್ಲಿ ಭೂದೃಶ್ಯಗಳಿಗಾಗಿ ಬಳಸುತ್ತಿದ್ದ ಎಲ್ಲ ರಚನಾತಂತ್ರಗಳನ್ನೂ ಬಳಸಿಕೊಂಡು ಇವರು ಮಧುರವಾದ, ಸ್ನಿಗ್ಧ ಸೌಂದರ್ಯದಿಂದ, ಕಾಂತಿಯಿಂದ, ಬೆಳಗುವ ಒಳಮನೆಯ (ಇನ್‍ಡೋರ್) ದೃಶ್ಯಗಳನ್ನು ರಚಿಸಿದರು. ತೋಟ, ದಿವಾನಖಾನೆ ಮುಂತಾದ ಚಿರಪರಿಚಿತ ಪರಿಸರಗಳನ್ನು ರಾಗರಂಜಿತವಾಗಿ ಚಿತ್ರಿಸಿ ಪ್ರಸಿದ್ಧರಾದರು. ಈ ಗುಂಪಿನವರು ತಮ್ಮನ್ನು ನಾಬಿಸ್ ಅಥವಾ ಪ್ರವಾದಿಗಳು ಎಂಬ ಇನ್ನೊಂದು ಹೆಸರಿನಿಂದಲೂ ಕರೆದುಕೊಂಡರು.
ಫಾವಿಸಮ್ : 1905ರಲ್ಲಿ ನವ್ಯಚಿತ್ರಕಾರರ ಮುಖಂಡತ್ವ ನಾಬಿಸ್ ಗುಂಪಿನವರಿಂದ ಫಾವಿಸ್ ಅಥವಾ ಕಾಡುಮೃಗಗಳು ಎಂದು ಕರೆಯಲಾದ ಮತ್ತೊಂದು ಗುಂಪಿನವರ ಕೈಗೆ ಹೋಯಿತು. ಪರಿಹಾಸ್ಯಕ್ಕೆಂದು ಅವರನ್ನು ಹೀಗೆ ಕರೆದರೂ ಈ ಗುಂಪಿನಲ್ಲಿ ಹೆನ್ರಿ ಮ್ಯಾಟೀಸ್‍ರಂಥ ಮಹಾಪ್ರತಿಭಾಶಾಲಿಗಳಿದ್ದರು. (ಇವರು ಸಿಜಾóನ್ ವಾನ್ ಗೋ, ಗಾಗಿ-ಇವರಿಂದಲೇ ಸ್ಫೂರ್ತಿ ಪಡೆದರು) ಈ ಪಂಥದವರ ಪ್ರಕಾರ ಒಂದು ಚಿತ್ರ ವರ್ಣರೇಖೆಗಳ ಸಾಮರಸ್ಯದಿಂದ ಆವಿರ್ಭವಿಸಬೇಕು. ಅದು ಸ್ವಯಂಪೂರ್ಣವಾಗಿದ್ದು ಪ್ರಕೃತಿಯ ಯಥಾರ್ಥತೆಯಿಂದ ಆದಷ್ಟು ದೂರವಿರಬೇಕು. ಉಜ್ಜ್ವಲ ವರ್ಣವಿನ್ಯಾಸಗಳ ಮೂಲಕ ಫಾವಿಸ್ ಪಂಥದವರು ಅತ್ಯಂತ ಸರಳವಾದ ರೂಪಿಕೆ (ಪ್ಯಾಟರ್ನ್)ಗಳನ್ನು ರಚಿಸಿದರು. ಒಂದು ಚಿತ್ರ ಸ್ವಯಂಪೂರ್ಣವಾಗಿರಬೇಕೆಂಬ ತತ್ತ್ವವನ್ನು ಅವರು ಎಷ್ಟು ದೂರ ಕೊಂಡೊಯ್ದರೆಂದರೆ ಚಿತ್ರದ ಮಾದರಿ ರಚಿಸುವಿಕೆಯನ್ನೂ ಕಣ್ನೆಲೆಯನ್ನೂ ಸಂಪೂರ್ಣವಾಗಿ ಬಿಟ್ಟುಕೊಟ್ಟರು. ಚಿತ್ರದ ಮೂರನೆಯ ಆಯಾಮ ಕೃತಕವಾದುದು. ಏಕೆಂದರೆ ಯಾವುದೇ ಚಿತ್ರಕ್ಕೆ ನಿಜವಾಗಿ ಇರುವುದು ಎರಡೇ ಆಯಾಮಗಳು. ಮೂರನೆಯ ಆಯಾಮ ಸುಳ್ಳು ಕಲ್ಪನೆ. ಆದ್ದರಿಂದಲೇ ಫಾವಿಸ್ ಚಿತ್ರಗಳನ್ನು ಅಡ್ಡಲಾಗಿ ಅಥವಾ ಮೇಲಿಂದ, ನೋಡುವ ಕಣ್ನೆಲೆಗಳಲ್ಲಿ ವೀಕ್ಷಿಸಲು ಸಾಧ್ಯವಿಲ್ಲ. ಈ ಸೂತ್ರಗಳ ಕಾರಣದಿಂದ ಫಾವಿಸ್ ಚಿತ್ರಕಾರರು ಮಟ್ಟಸವಾದ ಆದರೆ ಸೂಕ್ಷ್ಮ, ವಿರಳ, ರೇಖಾವಿನ್ಯಾಸದಿಂದ ಕೂಡಿದ, ನೋಟಕ್ಕೆ ಅಸಂಗತವೆನಿಸುವ ಚಿತ್ರಗಳನ್ನು ಸೃಷ್ಟಿಸಿದರು. ಆಕೃತಿಗಳನ್ನು ಸಾಕಷ್ಟು ಸೊಟ್ಟಾಗಿ ತಿರಿಚಿ, ವಕ್ರರೂಪಣಗಳಿಂದಲೇ ಪರಿಣಾಮ ಸಾದಿಸಿದರು. ಆದರೆ ಈ ಸೊಟ್ಟಾದ ಆಕೃತಿಗಳು ಇನ್ನೂ ಗುರುತಿಸ ಬಹುದಾದಷ್ಟು ಸ್ಪಷ್ಟವಾಗಿವೆ. ಡರಾನ್ ಮತ್ತು ವ್ಲಾಮಂಕ್ ಎಂಬುವರ ವರ್ಣ ವಿನ್ಯಾಸ ಹೆಚ್ಚು ಗಾಢವಾಗಿದ್ದು ಚಿತ್ರಗಳು ಅತಿ ವಕ್ರವಾಗಿವೆ. ಒಂದು ವಿಚಿತ್ರ ವಿಷಯವೆಂದರೆ ಈ ನವ್ಯ ಪಂಥದವರು ಮೊದಲಿನ ಮಹಾಯುದ್ಧದ ಅನಂತರ ತಮ್ಮ ಉಗ್ರ ಸೂತ್ರಗಳನ್ನು ಬಿಟ್ಟು ಸಾಂಪ್ರದಾಯಿಕವಾದ ನ್ಯಾಚುರಲಿಸ್ಟ್ ಪಂಥದ (ಸಹಜ ವಿಧಾನ)ರೀತಿಯಲ್ಲಿ ಹೊಸ ಕೃತಿಗಳನ್ನು ರಚಿಸಿದರು. 1910ರಿಂದ 1919ರ ವರೆಗಿನ ಅವಧಿಯಲ್ಲಿ ಕ್ಯೂಬಿಸ್ಟ್ ಪಂಥದವರ ಪ್ರಭಾವ ಅತಿರೇಕಕ್ಕೆ ಹೋದುದರಿಂದ ಡರಾನ್ ಮೊದಲಾದವರು ಅದಕ್ಕೆ ವಿರೋಧವಾದ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಲೆಂದೋ ಎಂಬಂತೆ ಮತ್ತೆ ಹಳೆಯ ಜಾಡನ್ನೇ ಹಿಡಿದರು. ಕ್ಯೂಬಿಸಮ್ : ಸಿಜಾóನನ ಚಿತ್ರಗಳಿಂದ ಹಾಗೂ ಆಫ್ರಿಕದ ನೀಗ್ರೋ ಶಿಲ್ಪ ಕಲೆಯಿಂದ ಪ್ರಭಾವಿತರಾಗಿ ಫ್ರೆಂಚ್ ಚಿತ್ರಕಾರರಾದ ಪಿಕಾಸೊ ಮತ್ತು ಬ್ರಾಕ್ ಕ್ಯೂಬಿಸಮ್ (ಜ್ಯಾಮಿತಿ ಆಕಾರಗಳ ವಿಧಾನ) ಎಂಬ ಹೊಸ ಪಂಥವನ್ನು ಪ್ರಾರಂಭಿಸಿದರು. ಅವರ ಮೊಟ್ಟಮೊದಲಿನ ಪ್ರಾಯೋಗಿಕ ಕೃತಿಗಳಲ್ಲಿ ಆಕೃತಿಗಳ ಮುಖಚಹರೆ ಹಾಗೂ ಅವಯವಗಳು ಅತಿ ಸರಳಗೊಂಡಿರುವುದು ಕಂಡುಬರುತ್ತದೆ. (ಅವರು ಸಿಜಾóನನ ಶೈಲಿಯನ್ನೇ ಅನುಸರಿಸಿ ಸಂಕೀರ್ಣ ಘನಾಕೃತಿಗಳ ರಚನೆಯೊಳಗಿನ ವಿವಿಧ ಘಟಕಗಳನ್ನು ವಿಶ್ಲೇಷಿಸಿ ತೋರಿಸುತ್ತಾರೆ. ವಿಭಜನಾತ್ಮಕ ಕ್ಯೂಬಿಸಮ್ ಎನ್ನುವ ಈ ವಿಧಾನದಲ್ಲಿ ಆಕೃತಿಗಳು, ವಸ್ತುಗಳು, ಅವುಗಳ ಹಿನ್ನೆಲೆ ಮುಂತಾದವು ಜ್ಯಾಮಿತೀಯ ರೂಪಗಳನ್ನು ತಳೆದು ಅರೆಯುಬ್ಬು ಚಿತ್ರಗಳಂತೆ ಎದ್ದು ಕಾಣಿಸುತ್ತವೆ. ಕ್ಯೂಬಿಸ್ಟರು ಫಾವಿಸ್ ಪಂಥದವರಂತೆ ಉಜ್ಜ್ವಲ ರಂಗುಗಳನ್ನು ಬಳಸುವುದಕ್ಕೆ ಹೋಗದೆ ಬೂದು, ಕಂದು, ಮತ್ತು ವಿರಳವಾಗಿ ಕಣ್ಣು ಸೆಳೆಯುವ ಬಣ್ಣ ಆಕಾರಗಳಿಲ್ಲದ, ಕೇವಲ ಬುದ್ಧಿಪ್ರಧಾನವಾದ ಹೊಸ ವಿಧಾನವೊಂದು ಸೃಷ್ಟಿಯಾದಂತಾಯಿತು. ಕಠಿಣವಾದ, ಅತಿಸೂಕ್ಷ್ಮವಾದ ವಿಶ್ಲೇಷಣೆಗೆ ಒಳಪಟ್ಟ, ಚಿತ್ರದೊಳಗಿನ ಆಕೃತಿಗಳು ಗುರುತಿಸಲಾಗದಷ್ಟು ಅಮೂರ್ತವಾದವು. ಆದರೆ ಒಂದು ಅರ್ಥದಲ್ಲಿ ಅವನ್ನು ಅಮೂರ್ತವೆನ್ನುವುದು ತಪ್ಪು. ಏಕೆಂದರೆ ಅವು ಒಂದು ವಿಶಿಷ್ಟ ವಸ್ತುವಿನಿಂದಲೇ ರೂಪಗೊಂಡು ಆ ವಸ್ತುವನ್ನು ಸ್ವಲ್ಪವಾದರೂ ಹೋಲುವಂತಿದ್ದುವು. 1913ರ ಸುಮಾರಿಗೆ ಕ್ಯೂಬಿಸ್ಟ್ ವಿಧಾನ ಮತ್ತಷ್ಟು ಸಂಕೀರ್ಣಗೊಂಡು ಪಿಕಾಸೊ ಮತ್ತು ಬ್ರಾಕ್ ತಮ್ಮ ಚಿತ್ರಗಳ ಮೇಲ್ಮೈಗೆ ಅಂಟಿಕೆಗಳನ್ನು (ಕೊಲೇಜಸ್) ಅಂದರೆ ವೃತ್ತಪತ್ರಿಕೆಯ ತುಂಡುಗಳು, ಭಿತ್ತಿಪತ್ರದ ಚೂರುಗಳು, ಸಿಗರೇಟು ಪೆಟ್ಟಿಗೆ ಸೀಳುಗಳನ್ನು ಮೆತ್ತೆ ಹಾಕಲು ಪ್ರಾರಂಭಿಸಿದರು. 1909-14ರ ನಡುವೆ ಕ್ಯೂಬಿಸ್ಟ್ ಗುಂಪು ವ್ಯಾಪಕವಾಗಿ ಬೆಳೆದು ಹಲವಾರು ಪ್ರತಿಭಾವಂತರನ್ನು ತನ್ನೆಡೆಗೆ ಸೆಳೆಯಿತು. ಒಂದನೆಯ ಮಹಾಯುದ್ಧದಲ್ಲಿ ಈ ಗುಂಪಿನ ಫ್ರೆಂಚ್ ಸದಸ್ಯರು ಕಡ್ಡಾಯವಾಗಿ ಸೈನಿಕವೃತ್ತಿ ಕೈಗೊಳ್ಳಬೇಕಾಗಿ ಬಂದಾಗ ಪಿಕಾಸೋನ ನೇತೃತ್ವದಲ್ಲಿ ಹಲವು ವಿದೇಶಿ ಕಲಾವಿದರು ಇನ್ನಷ್ಟು ಉಗ್ರವಾಗಿ ಈ ಪರಂಪರೆಯನ್ನು ಮುಂದುವರಿಸಿದರು. 1914-19ರ ಅವಧಿಯಲ್ಲಿ ಪಿಕಾಸೊ ಅಮೂರ್ತ ರಚನೆಯ ಅತಿರೇಕಕ್ಕೆ ಹೋಗಿ ಮೂರನೆಯ ಆಯಾಮವಿಲ್ಲದ ತೀರ ಅಸಹಜವಾದ ಮಟ್ಟಸ ಮಾದರಿಗಳನ್ನು ಸೃಷ್ಟಿಸಿದ. ಈ ಶೈಲಿಯನ್ನು ಫ್ರಾನ್ಸಿನ ಕೆಲವರು ಅನುಸರಿಸಿದರೂ ಕ್ಯೂಬಿಸ್ಟ್ ವಿಧಾನ ಹೆಚ್ಚು ಜನಪ್ರಿಯವಾದದ್ದು ಫ್ರಾನ್ಸಿನ ಹೊರಗಡೆಯೇ. ಹಾಲೆಂಡಿನ ಮಾವಂದ್ರೀಆನ್ ಮತ್ತು ಅವನ ನಿಯೋಪ್ಲಾಸ್ಟಿಸಿಸ್ಟ್ ಪಂಥದವರು ಆಯಾಕಾರದ ಬಣ್ಣದ ಪಟ್ಟಿಗಳನ್ನೊಳಗೊಂಡ. ಪರಸ್ಪರ ಸಮಕೋನದಲ್ಲಿರುವ ಸರಳರೇಖೆಗಳಿಂದಲೇ ಚಿತ್ರರಚನೆಗಳನ್ನು ಸೃಷ್ಟಿಸಿದರು. ರಷ್ಯನ್ ಚಿತ್ರಕಾರ ಮಾಲೆವಿಚ್ ಅಮೂರ್ತ ವಿಧಾನವನ್ನು ಅಪಹಾಸ್ಯಕರವಾದ ಅತಿರೇಕಕ್ಕೆ ಒಯ್ದು ಬಿಳಿಯ ಕ್ಯಾನ್‍ವಾಸಿನ ಮೇಲೆ ಒಂದೇ ಒಂದು ಬಿಳಿ ಬಣ್ಣದ ಚೌಕವನ್ನು ಬಳಿದು ಅದನ್ನು ಚಿತ್ರವೆಂದು ಕರೆದ.
ಕ್ಯೂಬಿಸ್ಟ್ ಪಂಥದವರ ಚಿತ್ರಗಳಲ್ಲಿ ಒಂದು ವಸ್ತುವಿನ ಅಥವಾ ಮುಖದ ನಾನಾ ಭಾಗಗಳನ್ನು ವಿಭಜಿಸಿ ಒಂದು ಕಲ್ಪನೆಗೆ ಅನುಸಾರವಾಗಿ ಫಕ್ಕನೆ, ಒಮ್ಮೆಲೆ ತೋರಿಸುವ ಪ್ರಯತ್ನವಿರುತ್ತದೆ. ಇದನ್ನು ಅವರು ಏಕಕಾಲಿಕತೆಯ ವಿಧಾನ ಎಂದು ಕರೆದರು. ಇದಕ್ಕೆ ಉದಾಹರಣೆಯಾಗಿ ನಾವು ಪಿಕಾಸೋನ ಮೊಟ್ಟಮೊದಲ ಕ್ಯೂಬಿಸ್ಟ್ ಚಿತ್ರ ದಿ ಲೇಡಿಸ್ ಆಫ್ ಅವಿಗ್ನಾನ್ ಮತ್ತು ಮಾರ್ಸೆಲ್ ಡೂಷಾಂಪ್‍ನ ಮಹಡಿ ಮೆಟ್ಟಲು ಹತ್ತುತ್ತಿರುವ ಬೆತ್ತಲೆ ಆಕೃತಿ ಎಂಬ ಚಿತ್ರಗಳನ್ನು ನೋಡಬಹುದು. ಕ್ಯೂಬಿಸ್ಟರು ಮುಖ್ಯವಾಗಿ ಒಂದು ವಸ್ತುವಿನ ತ್ವರಿತಗತಿಯ ಚಲನೆಯನ್ನು ಸೂಚಿಸುವುದರಲ್ಲಿ ಯಶಸ್ವಿಯಾದರು. ಚಲನಚಿತ್ರ ತಂತ್ರ ಸಚೇತನ ವ್ಯಂಗ್ಯಚಿತ್ರಗಳನ್ನು ಜನಪ್ರಿಯಗೊಳಿಸುವ ಮುಂಚೆಯೇ ಕ್ಯೂಬಿಸ್ಟ್ ಹಾಗೂ ಪ್ಯೂಚರಿಸ್ಟ್ ಚಿತ್ರಕಾರರು ಆ ತಂತ್ರವನ್ನು ಮೈಗೂಡಿಸಿಕೊಂಡಿದ್ದರೆಂಬುದು ಸ್ವಾರಸ್ಯವಾದ ವಿಷಯ.
ಫ್ಯೂಚರಿಸಮ್ : ಈ ಶತಮಾನದ (ಇಪ್ಪತ್ತನೇ) ಆರಂಭದಲ್ಲಿ ಫ್ರಾನ್ಸಿನಲ್ಲಿ ಕ್ಯೂಬಿಸ್ಟ್ ತತ್ತ್ವ ವ್ಯಾಪಕವಾಗಿ ಕಾರ್ಯಪ್ರವೃತ್ತವಾಗಿದ್ದಾಗ ಅದೇ ಸುಮಾರಿನಲ್ಲಿ ಜರ್ಮನಿ ಮತ್ತು ಇಟಲಿಗಳಲ್ಲಿ ಇನ್ನೊಂದು ಹೊಸ ಪಂಥ ಹುಟ್ಟಿಕೊಂಡಿತು. ಸಾಮಾನ್ಯವಾಗಿ ಎಲ್ಲ ಹೊಸ ಪ್ರಭಾವಗಳೂ ಫ್ರಾನ್ಸಿನಿಂದಲೇ ಹೊಮ್ಮುತ್ತಿದ್ದಾಗ, ಈ ಪಂಥ ಇಟಲಿಯ ನೆಲದಲ್ಲೇ ಹುಟ್ಟಿ ಸ್ವತಂತ್ರವಾಗಿ ಪ್ರವರ್ಧಮಾನಕ್ಕೆ ಬಂದು ಸಮಗ್ರ ಯೂರೋಪಿನಲ್ಲಿ ಹರಡಿತು. ಈ ಪಂಥದ ಆದ್ಯ ಪ್ರವರ್ತಕರಲ್ಲಿ ಇಟಲಿಯ ವೈದ್ಯ, ಚಿತ್ರಕಾರ ಮ್ಯಾರಿನೆಟ್ಟಿ (1876-1914) ಮತ್ತು ರುಸೊಲೊ (1865-1947), ಬಲ್ಲ, ಸೆವೆರೆನಿ-ಇವರು ಪ್ರಮುಖರು. ಇವರು ಅಶಾಂತಿ, ವಿಪ್ಲವ, ಯುದ್ಧ ಇವು ಅತ್ಯಂತ ಪ್ರಯೋಜನಕಾರಿ ಶಕ್ತಿಗಳು ಎಂಬ ರಾಜಕೀಯ ತತ್ತ್ವದ ಮೇಲೆ ತಮ್ಮ ವೈಚಾರಿಕ ಸೂತ್ರಗಳನ್ನು ರೂಪಿಸಿಕೊಂಡರು. ಪುರಾತನ ಪರಂಪರೆಯ ಪ್ರತೀಕಗಳಾದ ಪುಸ್ತಕ ಭಂಡಾರಗಳು, ಅಕಾಡೆಮಿಗಳು, ಕಲಾ ಸಂಗ್ರಹಾಲಯಗಳು ಮುಂತಾದುವನ್ನು ಧ್ವಂಸ ಮಾಡುವುದರ ಮೂಲಕ ಭೂತಕಾಲವನ್ನು ನಾಶಗೊಳಿಸಬೇಕು. ಮುಂದಿನ ಜೀವನವನ್ನು ಕಟ್ಟಲು ನೆರವಾಗಬಲ್ಲ ಯಂತ್ರಸಲಕರಣೆ ಮೊದಲಾದವುಗಳ ಬಗ್ಗೆ ವೈಜ್ಞಾನಿಕವೂ ಕಲಾತ್ಮಕವೂ ಆದ ಕಾಳಜಿ ಇರಬೇಕು. ಕಲೆ ಹೊಸಕಾಲದ ಬದುಕಿನ ತ್ವರಿತಗತಿಯನ್ನು ತೋರಿಸುವುದರ ಜೊತೆಗೆ ಮಾನವನ ವ್ಯಗ್ರವಾದ ಮಾನಸಿಕ ತುಮುಲವನ್ನೂ ಸೂಚಿಸುವಂತಿರಬೇಕು ಎನ್ನವುದು ಫ್ಯೂಚರಿಸ್ಟರ ವಾದ. ಆ ಪಂಥದ ಉತ್ತಮ ಕೃತಿಗಳು ವಸ್ತುಗಳ ಧಡೂತಿ ಶಕ್ತಿಯನ್ನೂ ಸಾಮರ್ಥ್ಯವನ್ನೂ ಕೆಲವೊಮ್ಮೆ ತುರ್ತಾದ ವೇಗ ಚಲನೆಗಳನ್ನು ಚಿತ್ರಿಸುತ್ತೇವೆ. ಉದಾಹರಣೆಗೆ, ಬಲ್ಲಾ ಎಂಬಾತನ ಪ್ರಸಿದ್ಧ ಚಿತ್ರದಲ್ಲಿ ಒಂದು ನಾಯಿ ವೇಗವಾಗಿ ನಡೆಯುತ್ತಿರುವುದನ್ನು ಸೂಚಿಸಲಾಗಿದೆ. ನಾಯಿಯ ಕಾಲುಗಳು ಮತ್ತು ಬಾಲವನ್ನು ಅದು ಚಲಿಸುವಾಗ ಉಂಟಾಗುವ ಪರಿಣಾಮವನ್ನು ಸೂಚಿಸಲು ಇಪ್ಪತ್ತು ಬೇರೆ ಬೇರೆ ಭಂಗಿಗಳಲ್ಲಿ (ಚಲನಚಿತ್ರಗಳಿರುವ ಫಿಲ್ಮ್ ಪಟ್ಟಿಕೆಯಂತೆ) ತೋರಿಸಿದ್ದಾನೆ. ಫ್ಯೂಚರಿಸಮ್‍ವಾದಿಗಳು ತಮ್ಮ ರಾಜಕೀಯ ಆದರ್ಶಗಳಿಂದಾಗಿ ಇಟಲಿಯ ಫ್ಯಾಸಿಸ್ಟ್ ಪ್ರಭುಗಳ ಕೃಪೆಗೂ ಆಶ್ರಯಕ್ಕೂ ಪಾತ್ರರಾದರು. ಸಾರ್ವಲೌಕಿಕವಾದ ಕ್ರಿಯಾತ್ಮಕತೆಯಿಂದ ತ್ವರಿತಗತಿಯ ಸಂವೇದನೆಯನ್ನು ಬೆಳೆಸಿಕೊಳ್ಳಬೇಕು-ವಸ್ತುಗಳ ಸತ್ತ್ವವನ್ನು ನಾಶಪಡಿಸುವಂತೆ ಬೆಳಕಿನ ಚಲನೆಯನ್ನು ಅಳವಡಿಸಿಕೊಳ್ಳಬೇಕು-ಎಂಬುದು ಫ್ಯೂಚರಿಸ್ಟರ ಘೋಷಣೆಯಾಗಿತ್ತು.
ಇಷ್ಟಾದರೂ ಈ ಚಳವಳಿ 1918ರ ಹೊತ್ತಿಗೆ ಅವನತಿಯಾಗಿ ಹೇಳಹೆಸರಿಲ್ಲದಂತಾಯಿತು. ಏಕೆಂದರೆ ಆ ಸುಮಾರಿಗೆ ಡಾಡಾಯಿಸಮ್, ವಾರ್ಟಿಸಿಸಮ್ ಎಂದು ಮುಂತಾದ ನವ್ಯತರ ವಾದಗಳು ಕೋಲಾಹಲವೆಬ್ಬಿಸಿದ್ದವು. ಆರ್ಫಿಸಮ್ : 1912ರಲ್ಲಿ ಫ್ರೆಂಚ್ ಚಿತ್ರಕಾರ ಡೆಲಾನೆ ಪ್ರಾರಂಭಿಸಿದ ಹೊಸ ಚಳವಳಿಯನ್ನು ವಿಮರ್ಶಕರು ಆರ್ಫಿಸಮ್ ಎಂದು ಕರೆದರು. ಆರ್ಫಿಯಸನ ಸಂಗೀತದಂತೆ ಮಂತ್ರಮುಗ್ಧಗೊಳಿಸುವ ಶೈಲಿ ಎಂಬುದು ಈ ಮಾತಿನ ಅರ್ಥ. ಇದಕ್ಕೆ ಸೈಮಲ್ಟೇನಿಯಸ್‍ನೆಸ್ ಅಥವಾ ಎಕಕಾಲಿಕತ್ವ ಎಂಬುದು ಇನ್ನೊಂದು ಹೆಸರು. ಇದಕ್ಕೆ ಉದಾಹರಣೆಯಾಗಿ ಡಲಾನೆಯ ಚಿತ್ರಗಳನ್ನು ನೋಡಬಹುದು. ಅವನು ಕ್ಯಾನ್‍ವಾಸಿನ ಮೇಲೆ ದಟ್ಟವಾದ ಪರಸ್ಪರ ವೈದೃಶ್ಯ ಬೀರುವ ಬಣ್ಣಗಳಿಂದ ಪಟ್ಟೆಪಟ್ಟೆಯ ಸುಳಿಗಳನ್ನು ಸುತ್ತಿ, ಬಣ್ಣದ ಬಟ್ಟುಗಳನ್ನೂ ಪ್ಯಾಚುಗಳನ್ನು ಬಳಿದು ವಿಚಿತ್ರ ಪರಿಣಾಮ ಸಾಧಿಸಿದ್ದಾನೆ. ವಸ್ತ್ವೇತರ ವಿಧಾನ ಅಥವಾ ನಾನ್ ಆಬ್ಜಕ್ಟಿವ್ ಪೇಂಟಿಂಗ್ ಎಂಬ ಕೇವಲ ವರ್ಣಪ್ರಧಾನವಾದ ಶೈಲಿಯನ್ನು ಪ್ರಾರಂಭಿಸಿದವ ಡಲಾನೆಯೇ. ಈ ತೆರನಾದ ಚಿತ್ರಗಳಲ್ಲಿ ಚಿತ್ರವಿಚಿತ್ರವಾದ ಬಣ್ಣದ ಬೆರಕೆ. ನಿರೂಪಣಾ ಸಾಮಥ್ರ್ಯವನ್ನು ಬಿಟ್ಟರೆ ಬೇರೆ ಯಾವ ವಸ್ತುವಿನ ಆಕೃತಿಯ ಪ್ರತಿರೂಪವೂ ಇರುವುದಿಲ್ಲ. ಈ ವಿಚಿತ್ರ ವರ್ಣವಿನ್ಯಾಸವನ್ನೇ ವಿಮರ್ಶಕರು ಭಾವಗೀತಾತ್ಮಕ, ಕಾವ್ಯಾತ್ಮಕ ಎಂದೆಲ್ಲ ಬಣ್ಣಿಸುವುದುಂಟು.
1914ರಲ್ಲಿ ಪ್ರಸಿದ್ಧ ಇಂಗ್ಲೀಷ್ ವಿಮರ್ಶಕ ವಿಂಡ್‍ಹ್ಯಾಮ್ ಲೂಯಿಸ್, ವಾರ್ಟಿಸಿಸಮ್ ಎಂಬ (ಜರ್ಮನ್ ಅಭಿವ್ಯಕ್ತವಾದದಿಂದ ಪ್ರಭಾವಗೊಂಡ), ಹೊಸ ವಿಧಾನವನ್ನು ಪ್ರಾರಂಭಿಸಿ ಅದರಲ್ಲಿ ಕ್ಯೂಬಿಸ್ಟ್ ಹಾಗೂ ಫ್ಯೂಚರಿಸ್ಟರ ಮಾರ್ಗವನ್ನೂ ಬೆರೆಸಿ ಕಲಬೆರಕೆಯ ಶೈಲಿ ಸೃಷ್ಟಿಸಿದ. ಇದರಿಂದ ಹಲವು ಚಿತ್ರಕಾರರು ಪ್ರಭಾವಗೊಂಡರೂ ನಿಷೇಧಾತ್ಮಕ ಉದ್ದೇಶಗಳಿಂದ ಕೂಡಿದ್ದ ಈ ಪಂಥ ಬಹು ಬೇಗ ನಶಿಸಿತು.
ಅಭಿವ್ಯಕ್ತಿವಾದ : (ಎಕ್ಸ್‍ಪ್ರೆಷೆನಿಸಮ್) ಇಪ್ಪತ್ತನೆಯ ಶತಮಾನದ ಎರಡನೆಯ ದಶಕದ ಇಟಲಿಯಲ್ಲಿ ಫ್ಯೂಚರಿಸ್ಟ್ ಪಂಥ ಬೆಳೆದಂತೆ, ಫ್ರಾನ್ಸಿನಲ್ಲಿ ಕ್ಯೂಬಿಸ್ಟ್ ತತ್ತ್ವಕ್ಕೆ ಉತ್ತೇಜನ ಸಿಕ್ಕಿದಂತೆ, ಜರ್ಮನಿಯಲ್ಲಿ ಅಭಿವ್ಯಕ್ತಿವಾದವೆಂಬ ವ್ಯಾಪಕವಾದ ಚಳವಳಿ ಪ್ರಾರಂಭವಾಯಿತು. ಮೊಟ್ಟಮೊದಲು ಈ ತತ್ತ್ವವನ್ನು ಚಿತ್ರಕಲೆ ಹಾಗೂ ಪ್ಲಾಸ್ಟಿಕ್ ಕಲೆಗಳ ಸಂದರ್ಭದಲ್ಲಿ ಬಳಸಿದರೂ ಕ್ರಮೇಣ ಸಾಹಿತ್ಯ ಕ್ಷೇತ್ರಕ್ಕೂ ಅನ್ವಯಿಸಲಾಯಿತು, ಜರ್ಮನಿಯಿಂದಾಚೆಯೂ ಈ ಚಳವಳಿ ತನ್ನ ಗಾಢ ಪ್ರಭಾವವನ್ನು ಪ್ರಸರಿಸಿತು. ಈ ಶತಮಾನದ ಮೊದಲ ದಶಕದಲ್ಲಿ ಯೂರೋಪಿನಲ್ಲಿ ಕೈಗಾರಿಕಾ ಕ್ರಾಂತಿಯಿಂದ ಉಂಟಾದ ಜೀವನದ ಸಮೃದ್ಧಿ, ಪುಷ್ಕಳತೆಗಳು ಬುದ್ಧಿ ಜೀವನವನ್ನು ಸ್ಥಗಿತಗೊಳಿಸಲು ವಿಶೇಷ ಅವನತಿಗೆ ಕಾರಣವಾದವು. ಯಂತ್ರಯುಗದ ಶಕ್ತಿಗಳು ಮನುಷ್ಯನ ಅಂತರಂಗದ ಭಾವುಕ ಜೀವನಕ್ಕೆ ಮಾರಕವಾದವು. ಇದಕ್ಕೆ ಪ್ರತಿಕ್ರಿಯೆಗಾಗಿ, ಕಲೆ ಯಥಾರ್ತ ಜೀವನವನ್ನು ಸುಮ್ಮನೆ ಪಡಿಮೂಡಿಸಬಾರದು- ಮನುಷ್ಯನ ಅಂತರಂಗದ ಸೂಕ್ಷ್ಮಾತಿಸೂಕ್ಷ್ಮ ಪದರಗಳ ಮೇಲೆ ಬೆಳಕು ಹಾಯಿಸಿ, ಅದು ಅಂತರಂಗದ ಅರ್ಥಪೂರ್ಣ ಅಭಿವ್ಯಕ್ತಿಯಾಗಬೇಕು ಎನ್ನುವ ಹೊಸ ತತ್ತ್ವಪ್ರಚಾರಕ್ಕೆ ಬಂತು. ಫ್ರಾಯ್ಡ್ ಮತ್ತು ಬರ್ಗ್‍ಸನ್ನರ ತತ್ತ್ವಗಳು ಈ ವಿಚಾರ ಧಾರಗೆ ಸಮರ್ಥನೆ ಕೊಟ್ಟವು. ಇವರಲ್ಲಿ ವಾಸಿಲಿ ಕಾಂಡಿನ್‍ಸ್ಕಿ, ಫ್ರಾಂಸ್ ಮಾರ್ಕ್, ಎಡ್ವರ್ಡ್ ಮಂಕ್ ಇವರು ಪ್ರಮುಖರು. ಅಂತರಂಗದ ಒಂದು ಸ್ಥಿತಿಯನ್ನು ಅಭಿವ್ಯಕ್ತಗೊಳಿಸಲು ಇವರು ಮುಖ್ಯವಾಗಿ ವಕ್ರೀಕರಣ ತಂತ್ರವನ್ನು ಬಳಸಿದರು. ವರ್ಣರೇಖೆಗಳ ವಿನ್ಯಾಸಕ್ಕಿಂತ ಹೆಚ್ಚಾಗಿ ಮನಸ್ಸಿನ ಅಲೌಕಿಕ ಸೆಳವುಗಳ, ಸ್ಥಿತಿಗತಿಗಳ ಅಭಿವ್ಯಕ್ತಿಯೇ ಈ ಪಂಥದ ಕಲಾವಿದರ ಮುಖ್ಯ ಉದ್ದೇಶ, ಕ್ಯೂಬಿಸ್ಟ್ ವಿಧಾನದವರು ಅನುಸರಿಸುವ ಜ್ಯಾಮಿತೀಯ ಪರಿಪೂರ್ಣತೆಯನ್ನು ಇವರು ಸಾಧಿಸದಿದ್ದರೂ ಮನಸ್ಸಿನ ತುಡಿತ ಬಡಿತಗಳನ್ನು ಪಡಿಮೂಡಿಸುವುದರಲ್ಲಿ ಎಕ್ಸ್‍ಪ್ರೆಷನಿಸ್ಟರು ತುಂಬ ಯಶಸ್ವಿಯಾದರು. ಇಂಪ್ರೆಷನಿಸ್ಟ್ ಚಿತ್ರಕಾರ ಬಾಗು ಮತ್ತು ವಕ್ರಗಳನ್ನು ಬಳಸಿಕೊಂಡು ವಸ್ತುವನ್ನು ವಸ್ತುನಿಷ್ಠೆಯಿಂದ ಪ್ರತಿಪಾದಿಸಿದರೆ, ಎಕ್ಸ್‍ಪ್ರೆಷನಿಸ್ಟ್ ಕಲೆಗಾರ ಸಂಪೂರ್ಣ ವ್ಯಕ್ತನಿಷ್ಟೆಯಿಂದ ವಸ್ತುವಿನಲ್ಲೇ ತಲ್ಲೀನನಾಗಿ ಚಿತ್ರಿಸುತ್ತಾನೆ-ವಸ್ತುವನ್ನು ವೀಕ್ಷಿಸಿ, ಅನಂತರ ಅದು ತನ್ನ ಮೇಲೆ ಎಂಥ ಪರಿಣಾಮ ಬೀರಿದೆ ಎಂದು ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡಿಕೊಳ್ಳುತ್ತಾನೆ-ಎನ್ನುವ ಮಾತಿನಲ್ಲಿ ಇವರ ವಿಧಾನಗಳ ವಿವರಣೆ ಇದೆ. 1930ರ ಹೊತ್ತಿಗೆ ಅಭಿವ್ಯಕ್ತವಾದದ ಸೆಲೆ ಬತ್ತಿಹೋಗಿ, ಆ ಪಂಥದ ಅವನತಿ ಪ್ರಾರಂಭವಾಗಿತ್ತು. ಹಿಟ್ಕರನ ಫ್ಯಾಸಿಸ್ಟ್ ನೀತಿಯ ದೆಸೆಯಿಂದ ಹಲವು ಕಲಾವಿದರು ಜರ್ಮನಿಯನ್ನು ಬಿಟ್ಟು ಓಡಿ ಹೋದರು. ಜರ್ಮನಿಯಲ್ಲಿ ಉಳಿದಂಥವರು ಏನೊಂದು ಸ್ವಾತಂತ್ರ್ಯವಿಲ್ಲದೆ ಕ್ರಿಯಾತ್ಮಕ ಶಕ್ತಿಯನ್ನು ಕಳೆದುಕೊಳ್ಳಬೇಕಾಯಿತು.
ವಸ್ತುಶೂನ್ಯ (ನಾನ್ ಆಬ್ಜ್‍ಕ್ಟಿವ್) ವಿಧಾನಗಳು. ಕ್ಯೂಬಿಸ್ಟ್ ಪಂಥ ಆವಿರ್ಭಾವವಾದ ಸುಮಾರಿನಲ್ಲಿ ನೂರೆಂಟು ಸಣ್ಣಪುಟ್ಟ ಅಮೂರ್ತ ಚಿತ್ರಣ ರೀತಿಗಳು ಪ್ರತಿಪಾದಿತವಾದವು. ಪ್ರತಿಯೊಬ್ಬ ಕಲಾವಿದನೂ ಹಲವು ಪ್ರಭಾವಗಳಿಗೆ ಒಳಗಾಗುತ್ತಿದ್ದುದರಿಂದ ಅದರ ರೀತಿಗಳನ್ನು ಸ್ಪಷ್ಟವಾಗಿ ವಿವರಿಸುವುದು ಕಷ್ಟಸಾಧ್ಯ. ಉದಾಹರಣೆಗೆ ಜರ್ಮನಿಯ ಬೌಹೌಸ್ ಪಂಥದವರ ಗಂಭೀರ ಕೃತಿಗಳು ಸಹ ಡಾಡಾಯಿಸಮ್, ಕ್ಯೂಬಿಸಮ್ ಮತ್ತು ಎಕ್ಸ್‍ಪ್ರೆಷನಿಸಮ್ ತತ್ತ್ವಗಳಿಂದ ಪ್ರೇರಣೆ ಪಡೆದುವು. 1910ರಿಂದ 1912ರ ವರೆಗಿನ ಎರಡು ವರ್ಷದ ಅವಧಿಯಲ್ಲಿ ರೆಯಾನಿಸಮ್, ನೂಪ್ರಿಯ್ಯಾಟಿಸಮ್, ಕನ್‍ಸ್ಟ್ರಕ್ಟಿವಿಸಮ್ ಎಂದು ಮುಂತಾದ ಹಲವಾರು ಕ್ಷಣಿಕವಾದ ವಸ್ತುಶೂನ್ಯವಿಧಾನಗಳು ಬಂದು ಹೋದವು. ವಸ್ತುವಿಲ್ಲದೆ ಚಿತ್ರ ಬರೆಯಬಹುದೆನ್ನುವ ಈ ವಿಧಾನಗಳನ್ನು ತತ್ತ್ವಶಃ ಪಾಲಿಸಿದವ ರಷ್ಯನ್ ಚಿತ್ರಕಾರ ವಾಸಿಲಿ ಕಾಂಡಿನ್‍ಸ್ಕಿ. ಅವನು ಅಮೂರ್ತ ಚಿತ್ರಗಳನ್ನು ಸೃಷ್ಟಿಸುವುದರ ಜತೆಗೆ ತನ್ನದೇ ಆದ ಸೌಂದರ್ಯ ಮೀಮಾಂಸೆಯನ್ನೂ ರೂಪಿಸಿದ. ರೆಯಾನಿಸಮ್ ತತ್ತ್ವವನ್ನು ಪ್ರತಿಪಾದಿಸಿದ ಲ್ಯಾರಿಯೊನಾವ್ ಆಕೃತಿಗಳನ್ನು ವಿರಳಗೊಳಿಸಿ ಬೆಳಕಿನ ವಿನ್ಯಾಸದಿಂದಲೇ ಭಾವಾಭಿವ್ಯಕ್ತಿ ನೀಡಲು ಪ್ರಯತ್ನಿಸಿದ. ಸೂಪ್ರಿ ಮ್ಯಾಟಿಸಮ್ ವಿಧಾನವನ್ನು ಪ್ರಾರಂಭಿಸಿದ ರಷ್ಯದ ಪೋಲಿಷ್ ಚಿತ್ರಕಾರ ಮಾಲೆವಿಚ್ ಕೇವಲ ಜ್ಯಾಮಿತಿಯ ರಚನೆ, ಆಕಾರಗಳಿಂದಲೇ ಚಿತ್ರರಚನೆ ಮಾಡಿದ. ಅವನ ವೈಟ್ ಆನ್ ವೈಟ್ ಎಂಬ ಪ್ರಸಿದ್ಧ ಚಿತ್ರದಲ್ಲಿ ಬಿಳಿಯ ಚೌಕದೊಳಗಿನ ತ್ರಿಕೋನದ ಮೇಲೆ ಇಟ್ಟ ಇನ್ನೊಂದು ಬಿಳಿಯ ಚೌಕವಿದೆ. ಇವನು ಸೃಷ್ಟಿಸಿದ ವಿನ್ಯಾಸಗಳು ಅಚ್ಚುಮೊಳೆ ತಯಾರಿಸುವವರಿಗೆ ವಿಧವಿಧವಾದ ಡಿಸೈನುಗಳನ್ನು ಸೂಚಿಸಿದನೆಂದು ಹೇಳುತ್ತಾರೆ. ಕನ್‍ಸ್ಟ್ರಕ್ಟಿವಿಸ್ಟ್ ವಿಧಾನದಲ್ಲಿ ಮೂರು ಆಯಾಮಗಳ ರೀತಿಯನ್ನು ಅತಿರೇಕಕ್ಕೆ ಒಯ್ದ ಚಿತ್ರ ತಯಾರಿಕೆಗೆ ಮರ, ತಂತಿ, ಲೋಹದ ರೇಕು, ಗಾಜು, ಸಿಮೆಂಟ್ ಕಾಂಕ್ರೀಟ್ ಮುಂತಾದ ಪದಾರ್ಥಗಳನ್ನು ಬಳಸಲಾಯಿತು. ಈ ಶೈಲಿಯನ್ನು ಅನುಸರಿಸಿದವರ ಕೆಲವು ಕೃತಿಗಳನ್ನು ಶಿಲ್ಪಾಕೃತಿಗಳೆನ್ನಬೇಕೇ ಹೊರತು ಅವು ಚಿತ್ರಕಲೆಯ ಕ್ಷೇತ್ರಕ್ಕೆ ಸೇರುವುದಿಲ್ಲ.
ಡಾಡಾಯಿಸಮ್ : ಎಕ್ಸ್‍ಪ್ರೆಷನಿಸಮ್ ವಿಧಾನದ ಅಧ್ವರ್ಯುಗಳೆನಿಸಿ ಕೊಂಡ ಮೂನಿಕ್ ಚಿತ್ರಕಾರರ ಗುಂಪು ಮೊದಲನೆಯ ಮಹಾಯುದ್ಧದ ಅನಂತರ ಕರಗುತ್ತ ಬಂತು. ಕಾಂಡಿನ್‍ಸ್ಕಿ ರಷ್ಯಕ್ಕೆ ತೆರಳಿದ. ಮಾಕ್ರ್ಸ್ 1916ರಲ್ಲಿ ಮೃತನಾದ. ಅವರಲ್ಲಿ ಒಬ್ಬನಾದ ಆರ್ಪ್, ಜ್ಯೂರಿಕ್‍ಗೆ ತೆರಳಿ ಅಲ್ಲಿ ಪ್ರಾರಂಭವಾದ ಡಾಡಾಯಿಸಮ್ ಚಳವಳಿಯ ನೇತಾರನಾದ. ಡಾಡಾ ಎನ್ನುವ ಶಬ್ದಕ್ಕೆ ಫ್ರೆಂಚ್ ಭಾಷೆಯಲ್ಲಿ ಪ್ರಿಯವಾದ ಗೀಳು, ಹವ್ಯಾಸ, ಎಂಬರ್ಥವಿದೆ. ಡಾಡಾಯಿಸಮ್ ವಿಧಾನದಲ್ಲಿ ಪ್ರತಿಯೊಬ್ಬ ಕಲೆಗಾರನೂ ತನಗೆ ಖುಷಿ ಬಂದ ರೀತಿಯಲ್ಲಿ ಪ್ರಿಯವಾದ ಗೀಳಿನ ಜಾಡು ಹಿಡಿದು ನಡೆಯಬಹುದೆಂಬ ಸ್ವಾತಂತ್ರ್ಯವನ್ನು ಅನುಸರಿಸಲಾಯಿತು. ಇಂದೊಂದು ಸ್ವೇಚ್ಛಾ ಪ್ರವೃತ್ತಿಯ ಅರಾಜಕತೆಯಾಗಿ ಪರಿಣಮಿಸಿದ್ದು ಆಶ್ಚರ್ಯವೇನಲ್ಲ. ಇದಕ್ಕೆ ಮೂಲ ಪ್ರಚೋದನೆಯೆಂದರೆ ಮಹಾಯುದ್ಧದ ಅನಂತರ ಉಂಟಾದ ಮನೋವೇದನೆ, ಸಾಮಾಜಿಕ ವಿಪ್ಲವ. ಡಾಡಾ ಪಂಥೀಯವರು ಪರಂಪರಾನುಗತವಾದ ಎಲ್ಲ ಮೌಲ್ಯಗಳನ್ನೂ ನಿರಾಕರಿಸಿ, ಕಲೆಯ ಸಂಪ್ರದಾಯವನ್ನೇ ಬುಡಮೇಲು ಮಾಡಲು ಹೊರಟರು. ವಿವೇಚನೆಗೆ, ಚಿಂತನೆಗಳಿಗೆ ಯಾವ ಅರ್ಥವೂ ಇಲ್ಲ. ಇಂದಿನ ಸಾಂಸ್ಕøತಿಕ ಪರಂಪರೆಯನ್ನು ಕಿತ್ತೊಗೆದು, ಪ್ರತಿಯೊಬ್ಬನು ತನ್ನ ಚಿತ್ತಲಹರಿ ನಡೆಸಿದ ಹಾಗೆ ನಡೆಯಬೇಕು. ಇದು ಡಾಡಾ ಪಂಥದವರ ಮೂಲ ಮಂತ್ರ. ಅವರ ಒಂದು ಘೋಷಣೆಯಲ್ಲಿನ ಈ ಮಾತುಗಳು ಹೀಗಿವೆ; 'ನಮಗೆ ಏನೂ ಬೇಡ, ಏನೂ ಬೇಕಿಲ್ಲ ಬೇಕಿಲ್ಲ. ಈ ಪಂಥದ ಪ್ರಮುಖರಲ್ಲೊಬ್ಬನಾದ ಡಾಷಾಂಪ್ ಬರೆದ ಒಂದು ಪ್ರಸಿದ್ಧ ಚಿತ್ರದಲ್ಲಿ ಲೋಕವಿಖ್ಯಾತ ಮೋನಾ ಲೀಸಾ ಆಕೃತಿಗೆ ಮೀಸೆಗಳನ್ನು ಹಚ್ಚಿ ಅಲಂಕರಿಸಿ ಕೆಳಗಡೆ ಅಶ್ಲೀಲವಾದ ಆಲೇಖ್ಯ ಬರೆಯಲಾಗಿದೆ. ಅವರಲ್ಲೊಬ್ಬ ನುಡಿದಂತೆ, ಕಲಾವಿದ ಉಗುಳಿದ್ದೇ ಕಲೆ ಎನ್ನುವ ಕೆಟ್ಟ ಕಾಲಬಂತು. ಡಾಡಾಯಿಸಮ್ ಪಂಥ, ಎಕ್ಸ್‍ಪ್ರೆಷನಿಸಮ್ ಚಳವಳಿ ಖಿಲವಾಗುತ್ತಿದ್ದಾಗ ಹುಟ್ಟಿ ಅನಂತರ ಬಂದ ಸರ್ರಿಯಲಿಸಮ್ ಅಥವಾ ಅತಿವಾಸ್ತವಿಕತಾ ವಾದಕ್ಕೆ ನಾಂದಿಯಾಯಿತು. ಎಕ್ಸ್‍ಪ್ರೆಷನಿಸ್ಟರು ಕಲೆಯಲ್ಲಿ ವಿವೇಚನೆಗಿಂತ ಕಲ್ಪನೆಗೆ ಹೆಚ್ಚು ಪ್ರಾಮುಖ್ಯ ಕೊಟ್ಟರು. ಆದರೆ ಡಾಡಾ ಪಂಥದವರು ಇನ್ನೊಂದು ಹೆಜ್ಜೆ ಮುಂದೆ ಹೋಗಿ ವಿವೇಚನೆಗೆ ಏನೂ ಬೆಲೆಯೇ ಇಲ್ಲವೆಂದು ಸ್ಪಷ್ಟವಾಗಿ ಘೋಷಿಸಿದರು. ಆದರೆ ವಿವೇಚನೆಯನ್ನು ಬಿಟ್ಟರೆ ಏನು ಗತಿ ಎಂಬುದರ ಬಗ್ಗೆ ಅವರು ಚಿಂತಿಸುವ ಗೋಜಿಗೆ ಹೋಗಲಿಲ್ಲ. ಸರ್ರಿಯಲಿಸ್ಟ್ ಪಂಥದವರು ಇದನ್ನೇ ತಮ್ಮ ತಾರಕ ಮಂತ್ರವನ್ನಾಗಿ ಸ್ವೀಕರಿಸಿದರೂ ಅದಕ್ಕೆ ಕ್ರಿಯಾತ್ಮಕವಾದ ಕೆಲವು ಅಂಶಗಳನ್ನು ಸೇರಿಸಿದರು.
ಅತಿ ವಾಸ್ತವಿಕತವಾದ (ಸರ್ರಿಯಲಿಸಮ್) : 1922ರ ಹೊತ್ತಿಗೆ, ಡಾಡಾಯಿಸಮ್, ಎಕ್ಸ್‍ಪ್ರೆಷನಿಸಮ್ ಮತ್ತು ಪಿಕಾಸೋವಿನ ಅತಿಕ್ಯೂಬಿಸ್ಟ್ ತತ್ತ್ವ. ಜಿರಿಕೋವಿನ ಫ್ಯಾಂಟಸಿ ಚಿತ್ರಣ ಮೊದಲಾದ ಹಲವು ವಿಧಾನಗಳನ್ನೊಳಗೊಂಡ ಸರ್ರಿಯಲಿಸಮ್ ಎಂಬ ಕಲಬೆರಕೆ ವಿಧಾನ ಬಳಕೆಗೆ ಬಂತು. ಸರ್ರಿಯಲಿಸಮ್ ಎಂಬ ಮಾತು ಕೇವಲ ಸೌಂದರ್ಯಕ್ಕೆ ಸೀಮಿತವಾದುದಲ್ಲ-ಅದು ಬದುಕಿನ ತತ್ತ್ವಕ್ಕೆ ಸಂಬಂಧಿಸಿದ್ದು ಎಂದು ಅತಿ ವಾಸ್ತವಿಕವಾದಿಗಳು ಘೋಷಿಸಿದರು. ಮನಸ್ಸಿನ ಅಜಾಗೃತ ಸ್ಥಿತಿ ಚೈತನ್ಯಪೂರ್ಣವಾದ ಕ್ರಿಯಾತ್ಮಕವಾದ ಶಕ್ತಿಯಾಗಿ ಕೆಲಸ ಮಾಡಬಲ್ಲದು ಎಂಬ ಫ್ರಾಯ್ಡ್‍ನ ತತ್ತ್ವವನ್ನು ಅವರು ಸಂಪೂರ್ಣವಾಗಿ ಒಪ್ಪಿಕೊಂಡರು. ಸರ್ರಯಲಿಸಮ್ ಪ್ರಾರಂಭವಾದದ್ದು 1922ರ ಪ್ಯಾರಿಸ್ಸಿನಲ್ಲಿ. ಆದರೆ ಈ ವಿಧಾನದ ವಕ್ತಾರನಾದ ಆಂದ್ರೆ ಬ್ರೆಟನ್ ಪಂಥದ ಘೋಷಣೆಯನ್ನು ಹೊರಡಿಸಿದ್ದು ಎರಡು ವರ್ಷಗಳ ಅನಂತರ. ಸರ್ರಿಯಲಿಸಮ್ ಎಂದರೇನು ಎಂಬ ಪ್ರಶ್ನೆಗೆ ಯಾರೂ ಸಮಂಜಸವಾದ ಉತ್ತರ ಕೊಟ್ಟಿಲ್ಲವಾದರೂ ಬ್ರೆಟನ್ ಕೊಟ್ಟ ವಿವರಣೆ ಹೀಗಿದೆ : ವಿಚಾರದ ನಿಯಂತ್ರಣ ಲವಶೇಷವೂ ಇಲ್ಲದಂತೆ, ಸೌಂದರ್ಯ ಮತ್ತು ನೀತಿಗಳಿಗೆ ಸಂಬಂಧಿಸಿದ ಪರಿಗಣನೆಗೆ ಮೀರಿದಂತೆ ನಡೆಯುವ ಚಿತ್ತವ್ಯಾಪಾರವನ್ನು ಅದರ ಆದೇಶವನ್ನು, ಮಾತಿನಲ್ಲಾಗಲಿ ಬರಹದಲ್ಲಾಗಲಿ ಇನ್ಯಾವುದೇ ಮಾಧ್ಯಮದಲ್ಲಾಗಲೀ ಅಭಿವ್ಯಕ್ತಿಸುವ ಉದ್ದೇಶವುಳ್ಳ ಶುದ್ಧ ಮಾನಸಿಕ ಸ್ವಯಂಚಾಲಕತೆಯೇ ಅತಿ ವಾಸ್ತವಿಕತಾವಾದ.
ಈ ಪಂಥದವರು ಸುಪ್ತ ಚೇತನದಿಂದ ಹೊಮ್ಮುವ ಪ್ರತಿಮೆಗಳನ್ನು ತಮ್ಮ ಚಿತ್ರಗಳಲ್ಲಿ ಪ್ರಕ್ಷೇಪಿಸಲು ಪ್ರಯತ್ನಿಸುತ್ತಾರೆ. ಹೀಗೆ ಮಾಡುವಾಗ ಆ ಪ್ರತಿಮೆಗಳನ್ನು ಬೌದ್ಧಿಕ ಅಥವಾ ಸೌಂದರ್ಯ ತತ್ತ್ವಗಳಿಗನುಸಾರವಾಗಿ ಮಾರ್ಪಡಿಸುವ ಗೋಜಿಗೆ ಹೋಗುವುದಿಲ್ಲ. ಏಕೆಂದರೆ ಅವರಿಗೆ ಬೇಕಾಗಿರುವುದು ಕಲ್ಪನೆಯ, ಕನಸಿನ ಚಿತ್ರಣಗಳೇ ಹೊರತು ಯಥಾರ್ಥತೆಯ, ವೈಚಾರಿಕತೆಯ ಚಿತ್ರಣವಲ್ಲ. ವಿಚಾರಕ್ಕಿಂತ ವಿಭಾನೆಯ ಶಕ್ತಿಯೇ ಪ್ರಬಲವಾದದ್ದೆಂದು ಹೇಳಿ ಅವರು, ಬಾಸ್ಕ್, ಗೋಯ, ಬ್ಲೇಕ್ ಮುಂತಾದ ಹಿಂದಿನ ಚಿತ್ರಕಾರರೆಲ್ಲರೂ ತಮ್ಮ ಪರಂಪರೆಯ ಮೂಲ ಪುರುಷರೆಂದು ಹೇಳಿಕೊಂಡಿದ್ದಾರೆ. ಫ್ರಾಯ್ಡನ ಸಾರ್ವತ್ರಿಕ ಸುಪ್ತ ಚೇತನ ತತ್ತ್ವವನ್ನು ಅರ್ಥಮಾಡಿಕೊಂಡರೆ ಬೇರೆ ಬೇರೆ ಕಲಾವಿದರೂ ರೂಪಿಸುವ ವೈಯಕ್ತಿಕ ಪ್ರತಿಮೆ, ಸಂಕೇತಗಳನ್ನು ಅರ್ಥಮಾಡಿಕೊಳ್ಳುವುದೇನೂ ಕಷ್ಟವಿಲ್ಲ ಎಂದು ಅವರು ವಾದಿಸಿದರು. ಈ ಪಂಥದ ಮೂಲತತ್ತ್ವಗಳನ್ನು ಗ್ರಹಿಸಲು ನಾವು ಈ ವಿಧಾನದ ಮುಖ್ಯ ಪ್ರವರ್ತಕರಾದ ಸಾಲ್ವಡಾರೊ ಡಾಲಿ, ಜೊನ್ ಮಿರೋ ಮುಂತಾದವರ ಕೆಲವು ಕೃತಿಗಳನ್ನು ನೋಡಬಹುದು. ಅವರು ನಿತ್ಯಜೀವನದ ಚಿರಪರಿಚಿತ ವಸ್ತುಗಳನ್ನು ಅಲೌಕಿಕ ಪರಿಸರದಲ್ಲಿಟ್ಟು, ವಿಚಿತ್ರ ಭಂಗಿಗಳಲ್ಲಿ ರೂಪಿಸಿ ನಮಗೆ ಷಾಕ್ ಕೊಟ್ಟು ಅಸಾಧಾರಣ ಪರಿಣಾಮ ಸಾಧಿಸುತ್ತಾರೆ. ಉದಾಹರಣೆಗೆ ಡಾಲಿಯ ದಿ ಪರ್‍ಸಿಸ್ಟೆನ್ಸ್ ಮೆಮೊರಿ ಎಂಬ ಚಿತ್ರದಲ್ಲಿ ನೀರಿನಲ್ಲಿ ತೊಯ್ದ ಮೆತ್ತಗಾಗಿ ಜೋಲಾಡುವ ಗಡಿಯಾರಗಳ ಆಕಾರವನ್ನು ಸಾಂಪ್ರದಾಯಿಕ ರೀತಿಯಲ್ಲಿ ಚಿತ್ರಿಸಲಾಗಿದೆ. ಚಿತ್ರದಲ್ಲಿ ಸೂಚಿಸುವ ವಿಸ್ತøತತೆ ಹಾಗೂ ಕರಗಿ ಹೋಗುತ್ತಿರುವ ಗಡಿಯಾರದ ದ್ರವರೂಪ-ಇವು ಕನಸಿನ ಷಾಕ್ ಅನುಭವವನ್ನು ಅದ್ಭುತವಾಗಿ ಅರ್ಥೈಸುತ್ತವೆ. 1939ರ ಹೊತ್ತಿಗೆ ಈ ವಿಧಾನ ಹಳತಾಗಿ ಹೋದರೂ ಪಿಕಾಸೊನಂಥ ಅನನ್ಯ ಕಲಾವಿದರೂ ಅದರ ಪ್ರಭಾವದಿಂದ ಮುಕ್ತರಾಗಲಿಲ್ಲ.
ಕಲೆ ಮತ್ತು ಆಧುನಿಕ ರಾಷ್ಟ್ರ ಸರ್ಕಾರಗಳು : ಮೊದಲನೆಯ ಮಹಾಯುದ್ಧದ ತರುವಾಯ ಯೂರೋಪಿನ ಹಲವು ರಾಷ್ಟ್ರಗಳಲ್ಲಿ ಅಧಿಕಾರಶಾಹಿ ಸರ್ಕಾರ ಪಟ್ಟಭದ್ರ ಹಿತಾಸಕ್ತಿಗಳನ್ನು ಸ್ಥಾಪಿಸಿಕೊಂಡು ಚಿತ್ರಕಲೆಯನ್ನು ಹಾಗೂ ಕಲಾವಿದನನ್ನು ಸ್ವಪ್ರಯೋಜನಗಳಿಗಾಗಿ ಮಾತ್ರ ಬಳಸಿಕೊಳ್ಳಲು ಆರಂಭಿಸಿತು. ಇದರಿಂದ ಕಲೆ ರಾಷ್ಟ್ರನಿಯಂತ್ರಣಕ್ಕೆ ಒಳಗಾಗಬೇಕಾಯಿತು. ಇಟಲಿಯ ಫ್ಯಾಸಿಸ್ಟ್ ಸರ್ಕಾರ ಫ್ಯೂಚರಿಸಮ್ ವಿಧಾನ ಬೆರೆಸಿದ ವಾಸ್ತವ (ನ್ಯಾಚುರಲಿಸ್ಟ್) ಶೈಲಿಯನ್ನು ತಮ್ಮ ಜನಾಂಗ ಧೋರಣೆಯ ಬೆಳವಣಿಗೆಗಾಗಿ ಹಾಗೂ ಸರ್ಕಾರದ ಸಾಧನೆಗಳ ಪ್ರಚಾರಕ್ಕಾಗಿ ದುರುಪಯೋಗಪಡಿಸಿಕೊಂಡರು. ಜರ್ಮನಿಯಲ್ಲಿ ನಾಟ್ಜಿ ಫ್ರಭುಗಳು ನವ್ಯ ಕಲೆಯನ್ನು ಅವನತಿಯ ಚಿಹ್ನೆ ಎಂದು ಖಂಡಿಸಿದರು. ನ್ಯಾಚುರಲಿಸ್ಟ್ ವಿಧಾನದ ಮೂಲಕ ನಾಟ್ವಿ ತತ್ತ್ವಗಳ ಹಾಗೂ ಕಾರ್ಯಕ್ರಮಗಳ ಪ್ರಚಾರವನ್ನೂ ಆತ್ಮಪ್ರಶಂಸೆಯನ್ನೂ ಸಾಧಿಸಿಕೊಳ್ಳಲು ರಷ್ಯದಲ್ಲಿ ಹೊಸ ವಿಧಾನಗಳಿಗೆ ಸಾಕಷ್ಟು ಉತ್ತೇಜನ ದೊರೆತರೂ ಕಾಲಕ್ರಮೇಣ ನವ್ಯ ಕಲೆಯು ಜನಸಾಮಾನ್ಯರಿಗೆ ಎಟುಕದೆ ನಿತ್ಯಜೀವನಕ್ಕೆ ಹೆಚ್ಚು ಪ್ರಯೋಜನವಾಗಿತ್ತಿಲ್ಲವೆಂಬ ದೂರಿಗೆ ಒಳಗಾಯಿತು. ಕಮ್ಯೂನಿಸ್ಟ್ ರಾಷ್ಟ್ರಗಳಲ್ಲಿ ನವ್ಯಶೈಲಿ ತನ್ನ ಜಟಿಲತೆ ಅಸ್ಪಷ್ಟತೆಗಳಿಂದಾಗಿ ಹೆಚ್ಚು ಜನಾದರಣೆ ಗಳಿಸುವಂತಾಗಲಿಲ್ಲ.
ಇಪ್ಪತ್ತನೆಯ ಶತಮಾನದಲ್ಲಿ ಚಿತ್ರಕಲೆ ಸಾಮಾಜಿಕವಾಗಿ ಹೆಚ್ಚು ಅರ್ಥಪೂರ್ಣವಾಗಿಲ್ಲ ಎಂಬುದು ನಿಜ. ಆಧುನಿಕ ಕಲೆಗೆ ರಾಜಾಶ್ರಯ ತಪ್ಪಿ ಹೋಗಿ, ಪ್ರಭುಶಕ್ತಿಯ ಬೆಂಬಲವಿಲ್ಲದಂತಾಗಿದೆ. ತನ್ನ ಅಮೂರ್ತ ವಿಧಾನ ಹಾಗೂ ಸಂಕೀರ್ಣ ವೈಚಾರಿಕ ಸ್ವರೂಪದಿಂದಾಗಿ ಶ್ರೀಸಾಮಾನ್ಯನ ಬೆಂಬಲವನ್ನು ಗಳಿಸುವುದು ಕಷ್ಟವಾಗಿದೆ. ಇದರಿಂದಾಗಿ ಕಲಾವಿದರು ಹೆಚ್ಚು ಹೆಚ್ಚು ವೈಯಕ್ತಿಕವೂ ವ್ಯಕ್ತಿನಿಷ್ಠವೂ ಆದ ಶೈಲಿಯ ಬೆನ್ನು ಹತ್ತಿದ್ದಾರೆ. ಜನಸಂಪರ್ಕವಿಲ್ಲದ ಕಲಾವಿದರೂ ತಮ್ಮ ದಂತಗೋಪುರದಲ್ಲಿ ಗಾಳಿ ಬೆಳಕುಗಳಿಲ್ಲದ ಪರಿಸರದಲ್ಲಿ ವಾಸಿಸುತ್ತಿದ್ದಾರೆ. ದೀರ್ಘಕಾಲದ ಈ ಪರಿಸ್ಥಿತಿಯನ್ನು ಬದಲಾಯಿಸುವ ಪ್ರಯತ್ನಗಳೇನೂ ಆದಂತೆ ಕಾಣುವುದಿಲ್ಲ. ಸಮಾಜದ ಕಲಾವಿದರ ನಡುವಣ ಸಂಬಂಧ ಸುವ್ಯವಸ್ಥಿತಗೊಳ್ಳುವವರೆಗೆ ಈ ಪರಿಸ್ಥಿತಿ ಹೀಗೆಯೇ ಮುಂದುವರಿಯಬೇಕಾಗಿದೆ. ಆಧುನಿಕ ಸಮಾಜದಲ್ಲಿ ಅತಿಸೂಕ್ಷ್ಮವಾಗಿ, ಪರಿಪೂರ್ಣವಾಗಿ ಮಾಡಲು ಮೂಲಭೂತ ಆದರ್ಶಗಳನ್ನು ಅಭಿವ್ಯಕ್ತಿಸಲು ಕಲಾವಿದರು ಹೆಚ್ಚು ಅರ್ಥಪೂರ್ಣ ಪಾತ್ರವಹಿಸಬೇಕಾಗಿದೆ. (ಎಚ್.ಕೆ.ಆರ್.)