ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚೇರಮಾನ್, ಪೆರುಮಾಳ್ ನಾಯನಾರ್

ಚೇರಮಾನ್, ಪೆರುಮಾಳ್ ನಾಯನಾರ್

63 ನಾಯನಾರುಗಳಲ್ಲಿ ಒಬ್ಬ. ಈತನ ಕಾಲದ ಬಗ್ಗೆ ಭಿನ್ನಾಭಿಪ್ರಾಯಗಳಿವೆಯಾದರೂ ಆತ ಕ್ರಿ.ಶ. 9ನೆಯ ಶತಮಾನದವನೆಂದು ಬಹು ಜನರ ಅಭಿಮತ. ಈತ ಅರಸುಕುಲಕ್ಕೆ ಸೇರಿದವ. ಈತನ ನಿಜನಾಮಧೇಯ ಪೆರುಮಾಕ್ಕೋದೆಯಾರ್. ಪಶುಪಕ್ಷಿಗಳ ಮಾತುಗಳನ್ನು ಅರಿಯಬಲ್ಲವನಾದ್ದರಿಂದ ಕಳರಿಟ್ರರಿವಾರ್ (ಸರ್ವಜ್ಞ) ಎಂದೂ ಚೇರನಾಡನ್ನು ಪಾಲಿಸಿದ್ದರಿಂದ ಚೇರಮಾನ್ ನಾಯನಾರ್ ಎಂದೂ ಈತನನ್ನು ಕರೆದಿದ್ದಾರೆ.

ದೈವಭಕ್ತನಾದ ಈತ ಶಿವಸೇವೆಯನ್ನು ಪ್ರಾರಂಭಿಸಿದ್ದು ಸಂಘಯುಗದ ಚೇರನಾಡಿನ ಪ್ರಭು ಸೆಂಗೋಲ್ ಪೊರೈಯನ್ ವೃದ್ಧಾಪ್ಯದಿಂದ ವಾನಪ್ರಸ್ಥಾಶ್ರಮ ಸ್ವೀಕರಿಸಿದಾಗ ಪ್ರಜೆಗಳ ಪ್ರೀತಿಯ ಕರೆಗೆ ಓಗೊಟ್ಟು, ಶಿವನ ಅಣತಿಯ ಮೇರೆಗೆ ಚೇರಮಾನ್ ಪೆರುಮಾಳೇ ರಾಜ್ಯಾಧಿಕಾರ ವಹಿಸಿಕೊಂಡ. ರಾಜ್ಯಾಭಿಷೇಕದಂದು ಚೇರಮಾನ್ ಚೌಳುಮಣ್ಣಿನಿಂದ ಲೇಪಿತವಾದ ಅಗಸನೊಬ್ಬನನ್ನು ಕಂಡು ಚೌಳು ವಿಭೂತಿಯಂತೆ ಭಾಸವಾಗಲಾಗಿ ಅಗಸನೇ ಶಿವಶರಣನೆಂದು ತಿಳಿದು ಅಡಿಗೆರಗಿದನೆಂದು ಹೇಳಲಾಗಿದೆ.

ಶಿವಪೂಜೆಯ ಅನಂತರ ಚೇರಮಾನನಿಗೆ ಶಿವನ ಅಂದಿಗೆಯ ಸದ್ದು ಕೇಳುತ್ತಿತ್ತೆಂದೂ ಅದನ್ನು ಕೇಳಕೇಳುತ್ತ ಆತ ಸುಖಿಸುತ್ತಿದ್ದನೆಂದೂ ಪ್ರತೀತಿ.

ಸುಂದರಮೂರ್ತಿ ನಾಯನಾರ್ ಮತ್ತು ಚೇರಮಾನ್ ಇಬ್ಬರೂ ಆತ್ಮೀಯ ಗೆಳೆಯರು. ತಿರುವಾರೂರ್, ತಿರುಮರೈಕ್ಕಾಡು (ವೇದಾರಣ್ಯಂ) ಮೊದಲಾದ ತೀರ್ಥಸ್ಥಳಗಳಲ್ಲಿ ಇಬ್ಬರೊಂದಿಗೆ ಶಿವಾರ್ಚನೆ ನಡೆಸಿದರು. ಸುಂದರಮುರ್ತಿ ನಾಯನಾರ್‍ಗೆ ಶಿವಪ್ಪೆರುಮಾನ್ ಬಿಳಿಯ ಆನೆಯೊಂದನ್ನು ಕೊಟ್ಟು ಕೈಲೈಗೆ ಬರುವಂತೆ ಹೇಳಿದಾಗ ಇದನ್ನರಿತ ಚೇರಮಾನ್ ಕುದುರೆಯನ್ನೇರಿ ಅವನ ಜೊತೆಯಲ್ಲೇ ಕೈಲೈಗೆ ಹೋದ.

ಚೇರಮಾನ್ ಬರೆದಿರುವ ಗ್ರಂಥಗಳು ಮೂರು: ಪೊನ್‍ವಣ್ಣತಂದಾತಿ, ತಿರುವಾರೂರ್ ಮುಮ್ಮಣಿಕ್ಕೋವೈ, ತಿರುಕ್ಕಯಿಲಾಯ ಜ್ಞಾನವುಲಾ. (ವಿ.ಪಿಇ.)