ಚೋಳ

ದಕ್ಷಿಣ ಭಾರತದ ಅತ್ಯಂತ ಪ್ರಾಚೀನ ರಾಜಮನೆಗಳಲ್ಲೊಂದು. ಚೇರ ಪಾಂಡ್ಯರ ಜೊತೆಗೆ ಚೋಳರು ಕ್ರಿ.ಪೂ.ದಲ್ಲೇ ಇದ್ದುದಕ್ಕೆ ಆಧಾರಗಳಿವೆ. ಕಾವೇರಿ ತೀರ ಇವರ ಮೂಲನೆಲೆ. ಕಾವೇರಿಯ ಮುಖದಲ್ಲಿಯ ಕಾವೇರಿ ಪಟ್ಟಣ ಮತ್ತು ಅದೇ ನದಿಯ ದಡದ ಮೇಲಿರುವ ಒರೆಯೂರ್ ಇವರ ಪ್ರಾಚೀನ ನಗರಗಳು. ಚೋಳ ಎಂಬ ಹೆಸರು ಬರಲು ಕಾರಣ ತಿಳಿಯದು. ಕಪ್ಪು ಎಂಬ ಅರ್ಥವುಳ್ಳ ಕಾಲ ಎಂಬ ಸಂಸ್ಕøತ ಶಬ್ದದಿಂದಾಗಲಿ, ಇಲ್ಲಿಯ ಮೂಲನಿವಾಸಿಗಳನ್ನು ನಿರ್ದೇಶಿಸುವ ಕೋಲ ಎಂಬ ಪದದಿಂದಾಗಲಿ ಒಂದು ಧಾನ್ಯದ ಹೆಸರಾದ (ಜೋಳ) ಎಂಬ ಎಂಬುದರಿಂದಾಗಲಿ ಈ ಹೆಸರು ಬಂದಿರಬಹುದೆಂಬ ವಾದಗಳು ಸಮಂಜಸವಾಗಿ ಕಾಣಿಸವು. ಚೋಳರಿಗೆ ಕಿಳ್ಳಿ, ವಳವನ್, ಶೆಂಬಿಯನ್ ಎಂಬ ಹೆಸರುಗಳೂ ಉಂಟು.

ಚೋಡ ಎಂಬ ಹೆಸರು ಕಾತ್ಯಾಯನಿಗೆ ತಿಳಿದಿತ್ತು. ಅಶೋಕನ ಶಾಸನಗಳಲ್ಲಿ ಪಾಂಡ್ಯರ ಜೊತೆಗೆ ಚೋಳರನ್ನು ಹೆಸರಿಸಿದೆ. ಪೆಪ್ಲಸ್ ಮಾರಿಸ್ ಏರಿತ್ರೈ ಎಂಬ ಗ್ರೀಕ್ ಗ್ರಂಥದಲ್ಲಿ ಚೋಳರ ಹೆಸರಿಲ್ಲದಿದ್ದರೂ ಅರ್ಗರು ಅಥವಾ ಒರೆಯೂರಿನ ಹೆಸರಿದೆ. ಸೊರಂಗೇಯನ್ನು-ಎಂದರೆ ಚೋಳರ ರಾಜಧಾನಿ ಅರ್ಥುರಾ ಅಥವಾ ಒರೆಯೂರನ್ನು-ಟಾಲಮಿ ಸ್ಪಷ್ಟವಾಗಿ ತಿಳಿಸುತ್ತಾನೆ. ಎಳಾಲ ಎನ್ನುವವನು ಚೋಳರಾಷ್ಟ್ರದಿಂದ ಸಿಂಹಳಕ್ಕೆ ಹೋಗಿ 42 ವರ್ಷಗಳ ಕಾಲ ಆಳಿದನೆನ್ನುವ ವಿಷಯ ಮಹಾವಂಶದಲ್ಲಿದೆ. ಕ್ರಿ.ಶ. ಸು. 2-3ನೆಯ ಶತಮಾ ನಗಳಲ್ಲಿ ರಚಿತವಾಗಿದ್ದಿರಬಹುದಾದ ಸಂಗಂ ತಮಿಳು ಸಾಹಿತ್ಯದಲ್ಲಿ ಹಲವು ಚೋಳರಾಜರ ಕಥೆಗಳು ಹೆಣೆದುಕೊಂಡಿದ್ದರೂ ಆಗಿನ ಚೋಳರ ರಾಜರ ವಂಶಾವಳಿಯನ್ನು ಗುರುತಿಸಲು ಸಾಧ್ಯವಾಗದು. ಇವು ತಿಳಿಸುವ ರಾಜರಲ್ಲಿ ಪ್ರಸಿದ್ಧನಾದವನು. ಇರುಜೆಟ್ ಚೆನ್ನಿಯ ಮಗ ಕರಿಕಾಲ, ಕರಿಕಾಲ ಚಿಕ್ಕಂದಿನಲ್ಲಿ ಅಗ್ನಿಯ ಅನಾಹುತಕ್ಕೊಳಗಾಗಿ ಅವನ ಕಾಲು ಸುಟ್ಟದ್ದರಿಂದ ಅವನಿಗೆ ಕರಿಕಾಲನೆಂದು ಹೆಸರು ಬಂತು. ಅವನು ರಾಜ್ಯಕ್ಕೆ ಬಂದ ತರುಣದಲ್ಲೇ ಅವನನ್ನು ಹಿಡಿದು ಸೆರೆಯಲ್ಲಿ ಹಾಕಲಾಯಿತು. ಆದರೆ ಕೆಚ್ಚಿನಿಂದ ತಪ್ಪಿಸಿಕೊಂಡು ರಾಜ್ಯಕ್ಕೆ ಮತ್ತೆ ಅಧಿಪತಿಯಾದ. ವೆಣ್ಣಿ ಎಂಬಲ್ಲಿ ನಡೆದ ಯುದ್ಧದಲ್ಲಿ ಪಾಂಡ್ಯಚೇರರನ್ನು ಸೋಲಿಸಿ ಹಲವಾರು ರಾಜರನ್ನು ಓಡಿಸಿದ. ವಾಹೈ ಪರಂದಲೈ ಎಂಬಲ್ಲಿ ಅವನು ನಡೆಸಿದ ಮತ್ತೊಂದು ಯುದ್ಧದಲ್ಲಿ ಒಂಬತ್ತು ಜನ ಶತ್ರುರಾಜರು ಅವನಿಗೆ ಶರಣಾಗತರಾದರು. ಅವನ ಕಾಲದ ಕಾವೇರಿಪಟ್ಟಣದ ಸುಂದರವಾದ ವರ್ಣನೆ ಈ ಸಾಹಿತ್ಯದಲ್ಲಿ ತುಂಬಿದೆ.

ಚೋಳರಾಜಪುತ್ರರ ಅಂತಃಕಲಹದ ಉಲ್ಲೇಖವೂ ಈ ಸಾಹಿತ್ಯದಲ್ಲಿದೆ. ನಲಂಗಿಳ್ಳಿ ಮತ್ತು ನೆಡುಂಗಿಳ್ಳಿ ಇವರ ನಡುವೆ ಕಾಡಿಯೂರಿನಲ್ಲಿ ನಡೆದ ಯುದ್ಧವನ್ನು ಹಲವು ಬಗೆಯಲ್ಲಿ ವಿವರಿಸಿದೆ. ಇವರು ಪುಹಾರ್ ಅಥವಾ ಕಾವೇರಿಪಟ್ಟಣ ಮತ್ತು ಒರೆಯೂರ್‍ಗಳಲ್ಲಿ ಆಳುತ್ತಿದ್ದ ಎದುರಾಳಿ ಚೋಳರಾಜಕುಮಾರರು. ಇವರಲ್ಲದೆ ಕಿಳ್ಳವಳವನ್, ಕೋಷ್ಟಿರುಂಜನ್, ಚೋಳನ್, ಪೆರುನಾರ್ ಕಿಳ್ಳಿ, ಕೋಚ್ಚಂಗಣಾನ್ ಮೊದಲಾದವರ ಹೆಸರುಗಳೂ ಅವರ ಸಾಹಸಗಳೂ ಆ ಕಾಲದ ಕಾವ್ಯದ ವಸ್ತುಗಳಾಗಿ ಉಳಿದುಬಂದಿದೆ.

ಸಂಗಂ ಕಾಲವಾದ ಮೇಲೆ ಚೋಳರು ವಿಷಯ ಹೆಚ್ಚು ತಿಳಿದುಬರುವುದಿಲ್ಲ. ತಮಿಳುನಾಡಿನ ಉತ್ತರದಲ್ಲಿ ಪಲ್ಲವರು, ದಕ್ಷಿಣದಲ್ಲಿ ಪಾಂಡ್ಯರು ಪ್ರಬಲರಾಗಿ ಮುನ್ನೂರು ವರ್ಷಗಳ ಕಾಲ ಆಳುತ್ತಿದ್ದಾಗ ಬಹುಶಃ ಚೋಳರು ಸಣ್ಣಸಣ್ಣ ಪಾಳೆಯಪಟ್ಟುಗಳಾಗಿ ಅವರ ಅಧೀನರಾಗಿ ಅಲ್ಲಲ್ಲಿ ಆಳುತ್ತಿದ್ದರು. ಒರೆಯೂರು ಚೋಳರ ಅಧಿಕಾರದಲ್ಲೇ ಉಳಿದಿದ್ದಿರಬೇಕು ಮತ್ತು ಈ ಮನೆತನದವರು ತಮ್ಮ ತಾಯಿನಾಡಿನಿಂದ ದೂರವಾಗಿ ಬೇರೆಬೇರೆ ಪ್ರಾಂತ್ಯಗಳಲ್ಲಿ ಹರಡಿ ಹೋಗಿದ್ದರೆಂಬುದಕ್ಕೆ ಕಾಂದಾಲೂರು, ಶಿಯ್ಯಾಳಿ, ಮಾಲೆಪಾಡು, ನೆಕ್ಕುಂದಿ ಮೊದಲಾದ ಕಡೆ ಇದ್ದ ಸಣ್ಣಪುಟ್ಟ ರಾಜರು ತಾವು ಚೋಳ ಮನೆತನಕ್ಕೆ ಸೇರಿದವರೆಂದು ಹೇಳಿಕೊಂಡಿರುವುದನ್ನು ನೋಡಬಹುದು. ಆಂಧ್ರ ಮತ್ತು ಕರ್ನಾಟಕಗಳಲ್ಲಿ ನೆಲೆಸಿದ್ದ ಚೋಳರು ಕಾಶ್ಯಪ ಗೋತ್ರದವರೆಂದೂ ಕರಿಕಾಲನ ವಂಶಸ್ಥರೆಂದೂ ಒರೆಯೂರು ಪುರವರಾಧೀಶ್ವರರೆಂದೂ ಹೇಳಿಕೊಂಡಿದ್ದಾರೆ. ಪಲ್ಲವರ ಮತ್ತು ಬಾದಾಮಿ ಚಾಳುಕ್ಯರ ಶಾಸನಗಳಲ್ಲಿ ಚೋಳರಾಜ್ಯದ ಉಲ್ಲೇಖ ಅಲ್ಲಲ್ಲಿ ಕಂಡುಬರುತ್ತದೆ. ಬುದ್ಧವರ್ಮ ಚೋಳಸೈನ್ಯವೆಂಬ ಸಮುದ್ರಕ್ಕೆ ಬಡಬಾನಲನಾಗಿದ್ದ. ಕಾವೇರೀ ತೀರದಲ್ಲಿ ಅಡಕೆ ತೋಟಗಳು ಮತ್ತು ಬತ್ತದ ಗದ್ದೆಗಳಿಂದ ಸಮೃದ್ಧವಾಗಿದ್ದ ಚೋಳನಾಡನ್ನು ಸಿಂಹವಿಷ್ಣು ಆಕ್ರಮಿಸಿಕೊಂಡಿದ್ದ. ಒಂದನೆಯ ವಿಕ್ರಮಾದಿತ್ಯ ಚೋಳರಾಜ್ಯವನ್ನು ಗೆದ್ದುದ್ದಾಗಿಯೂ ಒರೆಯೂರಿನಲ್ಲಿ ಬೀಡು ಬಿಟ್ಟದ್ದಾಗಿಯೂ ಅವನ ಗದ್ವಾಲ್ ಶಾಸನ ತಿಳಿಸುತ್ತದೆ. ಹೀಗೆ ಚೋಳರು 3-4ನೆಯ ಶತಮಾನಗಳಿಂದ ಹೆಚ್ಚು ಪ್ರಬುದ್ಧಮಾನರಾಗದೆ ಹೋದರೂ 9ನೆಯ ಶತಮಾನದವರೆಗೂ ಅಲ್ಲಲ್ಲಿ ಚಿಕ್ಕಪುಟ್ಟ ಪಾಳೆಯಪಟ್ಟುಗಳಲ್ಲಿ ಅಸ್ತಿತ್ವದಲ್ಲಿದ್ದರೆಂಬುದಕ್ಕೆ ಆಧಾರಗಳೂ ದೊರೆಯುತ್ತವೆ.

9ನೆಯ ಶತಮಾನದಲ್ಲಿ ಪಲ್ಲವರ ಅವನತಿಯ ಆರಂಭದೊಂದಿಗೆ ಚೋಳರು ಉತ್ಕರ್ಷಕ್ಕೆ ಬಂದರು. ಚೋಳ ರಾಜ್ಯವನ್ನು ಭದ್ರಗೊಳಿಸಲು ಮೂಲ ಕಾರಣನಾದವನು ವಿಜಯಾಲಯ. ಇವನು ಪಲ್ಲವರ ಸಾಮಂತನಾಗಿದ್ದು ಒರೆಯೂರಿನ ಬಳಿ ಒಂದು ಚಿಕ್ಕ ರಾಜ್ಯವನ್ನು ಆಳುತ್ತಿದ್ದುದಾಗಿ ತೋರುತ್ತದೆ. ಆ ಕಾಲದಲ್ಲಿ ತಂಜಾವೂರಿನ ಸುತ್ತಮುತ್ತಣ ಪ್ರದೇಶವನ್ನು ಮುತ್ತರೆಯರು ಎಂಬ ಪುಟ್ಟ ರಾಜ ಮನೆತನದವರು ಶಂದಲೈ ಎಂಬಲ್ಲಿಂದ ಆಳುತ್ತಿದ್ದರು. ಇವರು ಸಮಯಕ್ಕೆ ತಕ್ಕಂತೆ ಪಲ್ಲವರ ಅಥವಾ ಪಾಂಡ್ಯರ ಅಧೀನರಾಗಿ ವರ್ತಿಸುತ್ತಿದ್ದರು. ಪಾಂಡ್ಯವರಗುಣನ ಆಳ್ವಿಕೆಯಲ್ಲಿ ಮುತ್ತರೆಯರು ಪಾಂಡ್ಯರ ಪಕ್ಷ ವಹಿಸಿದ್ದಂತೆ ತೋರುತ್ತದೆ. ಪಲ್ಲವ ಸಾಮಂತನಾಗಿದ್ದ ವಿಜಯಲನು ತಂಜಾವೂರನ್ನು ಮುತ್ತಿ ವಶಪಡಿಸಿಕೊಂಡ. ಈ ವಿಜಯ ಮುಂದೆ ದೊಡ್ಡದಾದ ಚೋಳ ಚಕ್ರಾಧಿಪತ್ಯದ ನಿರ್ಮಾಣಕ್ಕೆ ನಾಂದಿಯಾಯಿತ್ತೆನ್ನಬಹುದು. ಇದು ನಡೆದದ್ದು 850ಕ್ಕೆ ಮೊದಲು. ಸುಮಾರು 871ರ ವರೆಗು ವಿಜಯಾಲನು ಆಳುತ್ತಿದ್ದ. ಇವನನ್ನು ಶಾಸನಗಳು ತಂಜೈಕೊಂಡ ಪರಕೇಸರಿ ಎಂದು ವರ್ಣಿಸಿವೆ. ಈತ ಪಲ್ಲವಸಾಮಂತನಾಗಿಯೇ ಮುಂದುವರಿದರೂ ಶಾಸನಗಳಲ್ಲಿ ತನ್ನ ಆಳ್ವಿಕೆಯ ವರ್ಷಗಳನ್ನು ತಿಳಿಸಿರುವುದು ಇವನು ಪ್ರಬಲನಾಗುತ್ತಿದ್ದನೆನ್ನುವುದರ ಸೂಚನೆ. ಇವನು ತಂಜಾವೂರಿನಲ್ಲಿ ನಿಷುಂಭಸೂದಿನಿಯ ದೇವಾಲಯವನ್ನು ಕಟ್ಟಿಸಿದ. ಮುಂದೆ ತಂಜಾವೂರು ಚೋಳರ ರಾಜಧಾನಿಯಾಯಿತು. (ಡಿ.ಎಚ್.ಕೆ.; ಎಂ.ಎಸ್.)

ಮುತ್ತರೆಯವ ಸೋಲಿಗೆ ಪ್ರತೀಕಾರವಾಗಿ ಪಲ್ಲವರ ಮೇಲೆ ಪಾಂಡ್ಯರ ಇಮ್ಮಡಿ ವರಗುಣವರ್ಮ ಯುದ್ಧ ಹೂಡಿ ಕಾವೇರೀ ತೀರದಲ್ಲಿರುವ ಇಡವೈವರೆಗೂ ನುಗ್ಗಿದ. ಆದರೆ ಆಗ ಆಳುತ್ತಿದ್ದ ಪಲ್ಲವ ಯುವರಾಜ ಅಪರಾಜಿತ ವಿಜಯಾಲಯನ ಮಗ ಒಂದನೆಯ ಆದಿತ್ಯ ಮತ್ತು ಗಂಗ ಒಂದನೆಯ ಪೃಥಿವೀಪತಿ ಇವರನ್ನು ಕೂಡಿಕೊಂಡು, ಕುಂಭಕೋಣದ ಬಳಿ ಶ್ರೀಪುರಂಬಿಯಮ್ ಎಂಬಲ್ಲಿ 880ರಲ್ಲಿ ಅವನ್ನೆದುರಿಸಿದ. ಈ ಯುದ್ಧದಲ್ಲಿ ಪೃಥಿವೀಪತಿ ಸತ್ತರೂ ಪಾಂಡ್ಯರಿಗೆ ಸೋಲಾಯಿತು. ಮುತ್ತರೆಯನಿಂದ ವಿಜಯಾಲಯ ಪಡೆದಿದ್ದ ಪ್ರದೇಶಗಳ ಜೊತೆಗೆ ಇನ್ನಷ್ಟು ಪ್ರದೇಶವನ್ನು ಅವನ ಮಗ ಆದಿತ್ಯ ಪಡೆದ. ಆದರೆ ಸಾಮಂತನಾಗಿ ಉಳಿಯುವುದರಲ್ಲಿ ತೃಪ್ತಿಯಿಲ್ಲದ ಆದಿತ್ಯ 897ರಲ್ಲಿ ತೊಂಡೈಮಂಡಲದ ಮೇಲೆ ಸುಗ್ಗಿ ಅಪರಾಜಿತನನ್ನು ಕೊಂದು ಪಲ್ಲವ ರಾಜ್ಯವನ್ನು ವಶಪಡಿಸಿಕೊಂಡು ಸ್ವತಂತ್ರನಾದ. ಮುಂದೆ ಸ್ವಲ್ಪ ಕಾಲದಲ್ಲೇ ಗಂಗ ಇಮ್ಮಡಿ ಪೃಥಿವೀಪತಿಯೂ ಇವನ ಅಧೀನನಾದ. ಆದಿತ್ಯ ಅನಂತರ ಪಾಂಡ್ಯರಾಜ ಪರಾಂತಕ ವೀರನಾರಾಯಣನಿಂದ ಕೊಂಗುದೇಶವನ್ನು ಗೆದ್ದುಕೊಂಡ. ಆದಿತ್ಯನೊಡನೆ ಚೇರರ ಸ್ಥಾಣುರವಿ ಸ್ನೇಹ ಬೆಳೆಸಿದ; ಅವನ ಮಗ ಪರಾಂತಕನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದ.

ಆದಿತ್ಯನಿಗೆ ಕೋದಂಡರಾಮ ಎಂಬ ಮತ್ತೊಂದು ಹೆಸರೂ ಉಂಟು. ಅವನು ಕಾವೇರಿಯ ಎರಡು ದಂಡಗಳ ಮೇಲೂ ಹಲವಾರು ಉನ್ನತ ಶಿವಾಲಯಗಳನ್ನು ಕಟ್ಟಿಸಿದ ಉಲ್ಲೇಖಗಳಿವೆ. ಅವನು ಕಾಳಹಸ್ತಿಯ ಬಳಿ ತೊಂಡೈಮಾನಾಡಿನಲ್ಲಿ ತೀರಿಕೊಂಡಾಗ ಅವನ ಮಗ ಪರಾಂತಕ ಅವನ ಹೆಸರಿನಲ್ಲಿ ಆದಿತ್ಯೇಶ್ವರ ದೇವಾಲಯವನ್ನು ಕಟ್ಟಿಸಿದ. ಚಿಕ್ಕ ರಾಜ್ಯವೊಂದರಲ್ಲಿ ಸಾಮಂತವಾಗಿ ಆಳಲಾರಂಭಿಸಿದ ಆದಿತ್ಯ ಸ್ವತಂತ್ರವಾದ ವಿಸ್ತಾರವಾದ ರಾಜ್ಯವೊಂದನ್ನು ತನ್ನ ಮಗ ಪರಾಂತಕನಿಗೆ ಬಿಟ್ಟುಹೋದ, ವಿಜಯಾಲಯನ ವಂಶದವರು ಆ ಹೊತ್ತಿಗಾಗಲೇ ತಾವು ಸೂರ್ಯವಂಶಕ್ಕೆ ಸೇರಿದವರೆಂದು ತಮ್ಮ ಪೌರಾಣಿಕ ವಂಶಾವಳಿಯನ್ನು ಕೊಡಲಾರಂಭಿಸಿದ್ದರು.

ಪರಾಂತಕ ಪಟ್ಟಕ್ಕೆ ಬಂದದ್ದು 907ರಲ್ಲಿ. ಈತ 48 ವರ್ಷಗಳ ಕಾಲ ರಾಜ್ಯಭಾರ ಮಾಡಿದ. 910ರಲ್ಲಿ ಪಾಂಡ್ಯರಾಜ್ಯದ ಮೇಲೆ ದಂಡೆತ್ತಿ ಹೋಗಿ ಮಧುರೈಕೊಂಡ ಎಂಬ ಬಿರುದು ಪಡೆದ. ಪಾಂಡ್ಯರಾಜ ಇಮ್ಮಡಿ ರಾಜಸಿಂಹ ಮಾರವರ್ಮ (900-920) ಸಿಂಹಳದ 5ನೆಯ ಕಶ್ಯಪನ ಸಹಾಯ ಕೋರಿದ. ಆದರೆ ಪರಾಂತಕ ಈ ಇಬ್ಬರ ಸೈನ್ಯವನ್ನು ವೆಲ್ಲೂರಿನ ಬಳಿ ಸೋಲಿಸಿದ. ರಾಜಸಿಂಹ ಸಿಂಹಳಕ್ಕೆ ಓಡಿಹೋದ. ಪಾಂಡ್ಯ ರಾಜ್ಯ ಚೋಳರ ವಶವಾಯಿತು.

ರಾಷ್ಟ್ರಕೂಟ ಇಮ್ಮಡಿ ಕೃಷ್ಣನ ಮಗಳೊಬ್ಬಳನ್ನು ಆದಿತ್ಯ ಮುದುವೆಯಾಗಿದ್ದ. ಅವಳ ಮಗ ಕನ್ನರದೇವ, ಆದಿತ್ಯನ ಅನಂತರ ಪರಾಂತಕ ಪಟ್ಟಕ್ಕೆ ಬಂದಾಗ ಕನ್ನರದೇವನ ಪಕ್ಷವನ್ನು ಕೃಷ್ಣ ವಹಿಸಿ, ಬಾಣ ಮತ್ತು ವೈದುಂಬರನ್ನು ಕೂಡಿಕೊಂಡು ಚೋಳ ರಾಜ್ಯಕ್ಕೆ ಮುತ್ತಿಗೆ ಹಾಕಿದ. ಪರಾಂತಕನಿಗೆ ಗಂಗರ ಇಮ್ಮಡಿ ಪೃಥಿವೀಪತಿಯ ನೆರವು ದೊರೆಯಿತು. ವಲ್ಲಾಲದ (ತಿರುವಲ್ಲಂ) ಬಳಿ ನಡೆದ ಯುದ್ಧದಲ್ಲಿ ಕೃಷ್ಣ ಸೋತುಹೋದ. ಬಾಣರಾಜ್ಯ ಪೃಥಿವೀಪತಿಗೆ ಸೇರಿತು. ವೈದುಂಬರೂ ನಷ್ಟವನ್ನನುಭವಿಸಿದರು. ಈ ಯುದ್ಧ ನಡೆದದ್ದು 916ಕ್ಕೆ ಮೊದಲು. ಬಹುಬೇಗನೆ ವಿಸ್ತರಿಸಿದ ತನ್ನ ಚಕ್ರಾಧಿಪತ್ಯವನ್ನು ಎಲ್ಲ ದಿಕ್ಕುಗಳಿಂದಲೂ ಸಮರ್ಥವಾಗಿ ರಕ್ಷಿಸಿಕೊಳ್ಳುವುದು ಪರಾಂತಕನಿಗೆ ಅಸಾಧ್ಯವೆನಿಸಿತು. 940ರಿಂದ ಈಚೆಗೆ ಪರಾಂತಕನಿಗೆ ಕಷ್ಟದ ದಿನಗಳು ಪ್ರಾಪ್ತವಾದುವು. ಅವನ ನಂಬಿಕೆಯ ಸಾಮಂತ ಇಮ್ಮಡಿ ಪೃಥಿವೀಪತಿ ತೀರಿಕೊಂಡಿದ್ದ. ಮುಮ್ಮಡಿ ಕೃಷ್ಣನ ಸೋದರಿಯನ್ನು ಗಂಗರ ಇಮ್ಮಡಿ ಬೂತುಗ ಮದುವೆಯಾಗಿದ್ದುದರಿಂದ ಗಂಗರೂ ರಾಷ್ಟ್ರಕೂಟರೂ ಒಂದಾಗಿದ್ದರು. ಬಾಣ ಮೈದುಂಬರು ರಾಷ್ಟ್ರಕೂಟರ ಅಧೀನರಾಗಿದ್ದರು. ತನ್ನ ರಾಜ್ಯದ ವಾಯುವ್ಯ ಭಾಗದಲ್ಲಿ ಇವರಿಂದ ಆಗಬಹುದಾದ ಮುತ್ತಿಗೆಯನ್ನು ಎದುರಿಸಲು ಪರಾಂತಕ ತನ್ನ ಹಿರಿಯ ಮಗ ರಾಜಾದಿತ್ಯವನ್ನು ದೊಡ್ಡ ಸೈನ್ಯದೊಂದಿಗೆ ಅಲ್ಲಿ ಇರಿಸಿದ್ದ. ಅವನಿಗೆ ಸಹಾಯಕನಾಗಿ ತನ್ನ ಇನ್ನೊಬ್ಬ ಮಗ ಅರಿಕುಲ ಕೇಸರಿಯನ್ನು ಅಲ್ಲಿಗೆ ಕಳುಹಿಸಿದ್ದ, ಮುಮ್ಮಡಿ ಕೃಷ್ಣ 949ರಲ್ಲಿ ಬೂತುಗನನ್ನು ಕೂಡಿಕೊಂಡು ಚೋಳರಾಜ್ಯಕ್ಕೆ ದಂಡೆತ್ತಿ ಬಂದಾಗ ಅರಕೋಣದ ಬಳಿ ತಕ್ಕೋಲಂ ಎಂಬಲ್ಲಿ ಘೋರವಾದ ಯುದ್ಧ ನಡೆಯಿತು. ರಾಜಾದಿತ್ಯ ಶತ್ರುಸೈನ್ಯಕ್ಕೆ ಹೆಚ್ಚಾದ ನಷ್ಟವನ್ನುಂಟು ಮಾಡಿದರೂ ಬೂತುಗ ಕೆಚ್ಚೆದೆಯಿಂದ ರಾಜಾದಿತ್ಯನಿದ್ದ ಆನೆಯನ್ನೇರಿ ಅವನನ್ನಿರಿದು ಕೊಂದು ಕೃಷ್ಣನಿಗೆ ಜಯ ಲಭಿಸುವಂತೆ ಮಾಡಿದ. ಚೋಳರು ಅನುಭವಿಸಿದ ಈ ಸೋಲಿನಿಂದ ಅವರ ರಾಜ್ಯದ ಬುಡ ಅಲುಗಿತು. ಕ್ರಮೇಣ ಕೃಷ್ಣ ಈ ರಾಜ್ಯದ ಉತ್ತರಭಾಗವನ್ನೆಲ್ಲ ಆಕ್ರಮಿಸಿದ. ಕಂಚಿಯಿಂದ ತಂಜಾವೂರಿನವರೆಗೆ ರಾಷ್ಟ್ರಕೂಟರ ಆಧಿಪತ್ಯ ನಡೆಯುವಂತಾಯಿತು. ಇದಾದ ಸ್ವಲ್ಪ ಕಾಲದಲ್ಲೇ ರಾಜ್ಯದ ದಕ್ಷಿಣಭಾಗದ ಸಾಮಂತರು ದಂಗೆಯೆದ್ದು ಸ್ವತಂತ್ರರಾದರು. ನೂರು ವರ್ಷಗಳಷ್ಟು ಕಾಲ ಬೆಳೆಸಿಕೊಂಡು ಬಂದಿದ್ದ ಚೋಳ ರಾಜ್ಯ ಉಡುಗಿಹೋಯಿತು. ಪರಾಂತಕನ ಆಳ್ವಿಕೆ ಮುಗಿದ ಮೇಲೆ ಮೂವತ್ತು ವರ್ಷಗಳ ಕಾಲ ಚೋಳ ಮನೆತನ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿತ್ತು. ಪರಾಂತಕನ ಅನಂತರ ಅವನ ಮಕ್ಕಳು ಗಂಡರಾದಿತ್ಯ ಮತ್ತು ಅರಿಂಜಯರು ಅನುಕ್ರಮವಾಗಿ ಸ್ವಲ್ಪ ಕಾಲ ಆಳಿದ ಮೇಲೆ ಅರಿಂಜಯನ ಮಗ ಸುಂದರ ಚೋಳ ಇಮ್ಮಡಿ ಪರಾಂತಕ 957ರಲ್ಲಿ ಪಟ್ಟಕ್ಕೆ ಬಂದ. ಸ್ವಲ್ಪ ಕಾಲದಲ್ಲೇ ಇವನು ತನ್ನ ಮಗ ಇಮ್ಮಡಿ ಆದಿತ್ಯನನ್ನು ಯುವರಾಜನನ್ನಾಗಿ ಮಾಡಿದ. ದಕ್ಷಿಣದಲ್ಲಿ ಸ್ವಾತಂತ್ರ್ಯ ಘೋಷಿಸಿದ್ದ ವೀರಪಾಂಡ್ಯನ ಕಡೆಗೆ ಮೊದಲು ಸುಂದರನ ಗಮನ ಹರಿಯಿತು. ಸಿಂಹಳದ ದೊರೆ ನಾಲ್ವಡಿ ಮಹಿಂದನ ನೆರವಿನಿಂದ ವೀರಪಾಂಡ್ಯ ಅವನ್ನೆದುರಿಸಿದರೂ ಎರಡೂ ಬಾರಿ ಯುದ್ಧ ನಡೆದು ಕಡೆಗೆ ಇಮ್ಮಡಿ ಆದಿತ್ಯ ವೀರಪಾಂಡ್ಯನನ್ನು ಕೊಂದು ಸಿಂಹಳಕ್ಕೆ ಮುತ್ತಿಗೆಹಾಕಿದ (959). ಆದರೂ ಅಲ್ಲಿ ಚೋಳರ ಆಧಿಪತ್ಯವನ್ನು ಸ್ಥಾಪಿಸಲಾಗಲಿಲ್ಲ. ರಾಜ್ಯದ ಉತ್ತರಭಾಗದಲ್ಲಿ ಸುಂದರ ಚೋಳಯುದ್ಧ ಮಾಡುತ್ತಿದ್ದಾಗಲೇ ಕಂಚಿಯಲ್ಲಿ 973ರಲ್ಲಿ ತೀರಿಕೊಂಡ. ಇವನ ಕಡೆಗಾಲದಲ್ಲಿ ಗಂಡರಾದಿತ್ಯನ ಮಗ ಉತ್ತಮ ಚೋಳ ಯುವರಾಜ ಇಮ್ಮಡಿ ಆದಿತ್ಯನನ್ನು ಕೊಲ್ಲಿಸಿ. ಆದಿತ್ಯನ ತಮ್ಮ ಅರುಮಳಿದೇವನ ಬದಲು ತನ್ನನ್ನೇ ಉತ್ತರಾಧಿಕಾರಿಯನ್ನಾಗಿ ಮಾಡುವಂತೆ ರಾಜನನ್ನು ನಿರ್ಬಂಧಿಸಿದ. ಅದರಂತೆ ಸುಂದರ ಚೋಳನ ಮರಣಾನಂತರ ಉತ್ತಮ ಚೋಳ ಪಟ್ಟಕ್ಕೆ ಬಂದ. ಆ ವೇಳೆಗೆ ತೊಂಡೈಮಂಡಲದ ಬಹುಭಾಗವನ್ನು ರಾಷ್ಟ್ರಕೂಟರಿಂದ ಹಿಂದಕ್ಕೆ ಗೆದ್ದುಕೊಳ್ಳಲಾಗಿತ್ತು.

ಇಮ್ಮಡಿ ಪರಾಂತಕಸುಂದರಚೋಳ ಮತ್ತು ವಾನವನ್ ಮಹಾದೇವಿಯವರ ಮಗ ರಾಜಕೇಸರಿ ಅರುಮೋಳಿವರ್ಮ 935ರಲ್ಲಿ ರಾಜರಾಜನೆಂಬ ಹೆಸರಿನಿಂದ ಪಟ್ಟಕ್ಕೆ ಬಂದ. ಇವನು 30 ವರ್ಷಗಳ ಕಾಲ ಆಳಿದ. ಪಟ್ಟಕ್ಕೆ ಬಂದಾಗ ಅಷ್ಟೇನೂ ದೊಡ್ಡದಾಗಿರದಿದ್ದ ಚೋಳ ನಾಡನ್ನು ವಿಸ್ತಾರವಾದ ಚಕ್ರಾಧಿಪತ್ಯವಾಗಿ ಸಮುದ್ರದಾಚೆಗೂ ಪಸರಿಸುವಂತೆ ಮಾಡಿದ ರಾಜರಾಜ ದಕ್ಷತೆಯಿಂದ ಆಡಳಿತ ನಿರ್ವಹಿಸಿದ. ಅತ್ಯಂತ ಸತ್ತ್ವಶಾಲಿಯಾದ ರಾಜನೆಂಬ ಕೀರ್ತಿ ಪಡೆದ. ಮುಮ್ಮಡಿ ಚೋಳದೇವ ಎಂಬುದು ಇವನ ಮೊದಲಿನ ಬಿರುದುಗಳಲ್ಲೊಂದು. ಪಟ್ಟಕ್ಕೆ ಬರುತ್ತಿದ್ದಂತೆಯೇ ಕೇರಲದ ಮೇಲೆ ದಂಡೆತ್ತಿಹೋಗಿ ಕಾನ್ದಳೂರ್ಶಾಲೈಕ್ಕಳ ಮರುತ್ತ ಎಂಬ ಬಿರುದು ಹೊತ್ತ. ಇವನ ದಕ್ಷಿಣದ ದಂಡಯಾತ್ರೆ ಪಾಂಡ್ಯಚೇರರ ಮೇಲೆ ಒಟ್ಟಾಗಿ ನಡೆಯಿತು. ಅಷ್ಟೇ ಅಲ್ಲ, ಹಲವು ಸಲ ಇವನು ಈ ದಂಡ ಯಾತ್ರೆಗಳನ್ನು ನಡೆಸಿರಬೇಕು. ಕೊಲ್ಲಂ ಎಂಬಲ್ಲಿ ನಡೆಸಿದ ಯುದ್ಧ ಇವುಗಳಲ್ಲೊಂದು ಇದರಂತೆ ಮಲೆನಾಡಿನಲ್ಲಿ ಚೇರ ಪಾಂಡ್ಯರನ್ನು ಅವನು ಎದುರಿಸಿದನೆಂದು ತಂಜಾವೂರಿನ ಶಾಸನದಲ್ಲಿ ತಿಳಿಸಿರುವ ಯುದ್ಧ ಕಾನ್ದಲೂರು ಮತ್ತು ವಿಳಿನಂ ಯುದ್ಧಗಳಿಗಿಂತ ಬೇರೆಯಾಗಿರಬೇಕು. ಇವನು ಈಳ ಮಂಡಳವನ್ನು (ಸಿಂಹಳ) ಗೆದ್ದ ವಿಷಯವನ್ನು 993ರ ಹೊತ್ತಿಗೇ ಶಾಸನಗಳು ತಿಳಿಸುತ್ತವೆ. ಸಿಂಹಳದಲ್ಲಿ ಚೋಳರ ಆಧಿಪತ್ಯ ಸ್ಥಾಪಿತವಾದ ಮೇಲೆ, ಅಲ್ಲಿ ಬಹುಕಾಲದಿಂದ ರಾಜಧಾನಿಯಾಗಿದ್ದ ಅನುರಾಧಪುರದ ಬದಲು ಪೊಲೊನ್ನರುವವನ್ನು ಅವರು ರಾಜಧಾನಿಯಾಗಿ ಮಾಡಿಕೊಂಡರು. ಅದಕ್ಕೆ ಜನನಾಥ ಮಂಗಲ ಎಂಬ ನಾಮಕರಣವಾಯಿತು; ಅಲ್ಲಿ ಒಂದು ಶಿವದೇವಾಲಯವೂ ನಿರ್ಮಿತವಾಯಿತು. ದಕ್ಷಿಣದ ದಿಗ್ವಿಜಯ ಮುಗಿಯುತ್ತಿದ್ದಂತೆಯೇ ರಾಜರಾಜನ ಕಣ್ಣು ತಲಕಾಡಿನ ಗಂಗರ ಮೇಲೆ ಬಿತ್ತು. ಅಷ್ಟು ಹೊತ್ತಿಗೆ ರಾಷ್ಟ್ರಕೂಟ ಸಾಮ್ರಾಜ್ಯ ಅಳಿದಿತ್ತು; ಚಾಳುಕ್ಯರು ಕುಂತಳವನ್ನಾಕ್ರಮಿಸಿದ್ದರು. ಇದರಿಂದ ಗಂಗರ ಶಕ್ತಿ ಉಡುಗಿತ್ತು. ರಾಜಾದಿತ್ಯನನ್ನು ಬೂತುಗ ಕೊಂದಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಚೋಳ ಸೈನ್ಯ ಕೊಂಗುನಾಡಿನ ಮೂಲಕ ಸಾಗಿ ಕಾವೇರಿಯನ್ನು ದಾಟಿ ನುಗ್ಗಿ ಸುಲಭವಾಗಿ ತಲಕಾಡನ್ನು ವಶಪಡಿಸಿಕೊಂಡಿತು. ಇದರಿಂದ ಗಂಗವಾಡಿಯ ಬಹುಭಾಗ ಚೋಳ ರಾಜ್ಯಕ್ಕೆ ಸೇರಿದಂತಾಯಿತು. ಆಗ ಕರ್ನಾಟಕದ ದಕ್ಷಿಣಭಾಗದಲ್ಲಿ ಬಲವಾದ ರಾಜ್ಯವೊಂದಿರಲಿಲ್ಲ. ಆದರೂ ಅಳಿದುಳಿದ ಚಿಕ್ಕಪುಟ್ಟ ರಾಜರು ಸೇರಿ ಚೋಳರನ್ನೆದುರಿಸುವ ಸಾಹಸ ನಡೆಸಿ ರಾಜರಾಜನ ದಂಡನಾಯಕ ಅಪ್ರಮೇಯನನ್ನು ಕಲಿಯೂರಿನ ಬಳಿ ಎದುರಿಸಿ ಸಂಪೂರ್ಣವಾಗಿ ಸೋತುಹೋದರು. ಅವರಲ್ಲಿ ಹೊಯ್ಸಳ, ನೊಳಂಬ, ಗಂಗ ಮೊದಲಾದ ಮನೆತನಗಳಿಗೆ ಸೇರಿದವರಾಗಿದ್ದರು. ರಾಜರಾಜ ರಟ್ಟವಾಡಿಯನ್ನು ಗೆದ್ದನೆಂದು ಅವನ ಶಾಸನಗಳು ತಿಳಿಸುತ್ತವೆ. ಆದರೆ ಚೋಳ ಸೈನ್ಯ ರಟ್ಟವಾಡಿಗೆ ನುಗ್ಗಿ ಕೊಲೆ ಸುಲಿಗೆ ನಡೆಸಿ ತುಂಬ ಹಾವಳಿ ಮಾಡಿತೇ ಹೊರತು ಆ ರಾಜ್ಯವನ್ನಾಗಲಿ ಅದರ ಯಾವ ಭಾಗವನ್ನಾಗಲಿ ಚೋಳ ರಾಜ್ಯಕ್ಕೆ ಸೇರಿಸಿಕೊಳ್ಳಲು ಅದಕ್ಕೆ ಸಾಧ್ಯವಾಗಲಿಲ್ಲವೆಂದು ಹೂಟ್ಟೂರು ಶಾಸನದಿಂದ ಗೊತ್ತಾಗುತ್ತದೆ. ಚಾಳುಕ್ಯ ಸತ್ಯಾಶ್ರಯ ಅವರನ್ನು ಹಿಮ್ಮೆಟ್ಟಿಸಿದ. ಈ ಯುದ್ಧಗಳಲ್ಲೆಲ್ಲ ಮಹಾದಂಡನಾಯಕನಾಗಿ ಬಂದಿದ್ದವನು ಪಂಚವನ್ಮಹಾರಯಾನೆಂಬ ಬಿರುದು ಪಡೆದಿದ್ದ ರಾಜೇಂದ್ರ ಚೋಳ, ರಾಜರಾಜನ ಮಗ.

ರಾಜರಾಜ ತನ್ನ ರಾಜ್ಯದ ಉತ್ತರ ಭಾಗದಲ್ಲಿ ಹಿಂದೆ ಪರಾಂತಕನ ಕಾಲದಲ್ಲಿ ಚೋಳರಾಜ್ಯಕ್ಕೆ ಸೇರಿದ್ದ ಭಾಗಗಳನ್ನು ಪುನಃ ವಶಪಡಿಸಿಕೊಳ್ಳಲು ಅತ್ತಕಡೆ ಸೈನ್ಯವನ್ನು ಕಳಿಸಿದ. ವೆಂಗಿನಾಡಿನಲ್ಲಿ ಅಂತರ್ಯುದ್ಧವಾಗಿ, ವಾನಾರ್ಣವನ ಮಕ್ಕಳು ಶಕ್ತಿವರ್ಮ ಮತ್ತು ವಿಮಲಾದಿತ್ಯರು ಚೋಳನಾಡಿನಲ್ಲಿ ನೆಲೆಸಿದ್ದರು. ರಾಜರಾಜ ಪಟ್ಟಕ್ಕೆ ಬಂದಮೇಲೆ ಇವರ ಪಕ್ಷ ವಹಿಸಿ ವೆಂಗಿಯ ರಾಜಕೀಯದಲ್ಲಿ ತಲೆಹಾಕಿದ. ಚೋಳರ ಸಹಾಯದಿಂದ ಶಕ್ತಿವರ್ಮ ವೆಂಗಿಯ ಅಧಿಪತಿಯಾಗಿ ಅದರ ಸಾಮಂತನಾದ. ಹೀಗೆ ರಾಜರಾಜ ವೆಂಗಿನಾಡಿನಲ್ಲಿ ಅಂತರ್ಯುದ್ಧವನ್ನು ಕೊನೆಗಾಣಿಸಿ ಅಲ್ಲಿ ಸುಸ್ಥಿತಿ ನೆಲೆಸುವಂತೆ ಮಾಡಿದನಾದರೂ ಗಂಗವಾಡಿಯಂತೆ ವೆಂಗಿನಾಡನ್ನು ಪೂರ್ಣವಾಗಿ ತನ್ನ ರಾಜ್ಯಕ್ಕೆ ಸೇರಿಸುವ ಯೋಚನೆ ಮಾಡಲಿಲ್ಲ. ವೆಂಗಿನಾಡಿನಲ್ಲಿ ಶಕ್ತಿವರ್ಮನ ಅನಂತರ ವಿಮಲಾದಿತ್ಯ ಪಟ್ಟಕ್ಕೆ ಬಂದ. ರಾಜರಾಜ ತನ್ನ ಮಗಳು ಕುಂದವೆಯನ್ನು ಅವನಿಗೆ ಕೊಟ್ಟು ಮದುವೆ ಮಾಡಿದ. ಕಡೆಯದಾಗಿ ರಾಜರಾಜ ತನ್ನ ನೌಕಾಬಲವನ್ನು ಕಳುಹಿಸಿ ಮಾಲ್ಡೀವ್ ದ್ವೀಪಗಳನ್ನು ಗೆದ್ದನೆಂದು ಅವನ ಆಳ್ವಿಕೆಯ ಕೊನೆಯ ವರ್ಷಗಳ ಶಾಸನಗಳು ತಿಳಿಸುತ್ತವೆ. ಮುಂದೆ ಅವನ ಮಗ ರಾಜೇಂದ್ರ ನೌಕಾದಳವನ್ನು ವಿಸ್ತರಿಸಿ ದೂರದೇಶಗಳನ್ನು ಗೆದ್ದ. ಇದಕ್ಕೆ ದೊಡ್ಡದಾದ ನೌಕಾಸೈನ್ಯವಿದ್ದುದೇ ಕಾರಣ. ಬಾಣ ರಾಜನೊಬ್ಬನನ್ನು ರಾಜರಾಜ ಓಡಿಸಿದನೆಂದೂ ಭೋಗದೇವ ಎನ್ನುವವನ ತಲೆಯನ್ನು ಕತ್ತರಿಸಿದನೆಂದೂ ಕರಂದೈ ಶಾಸನ ತಿಳಿಸುತ್ತದೆ. ಆದರೆ ಇವರು ಯಾರೆಂಬುದಕ್ಕೆ ವಿವರಗಳಿಲ್ಲ.

ರಾಜರಾಜನ ಆಳ್ವಿಕೆಯ ಕಡೆಯ ವರ್ಷಗಳಲ್ಲಿ ಅವನ ಮಗ ರಾಜೇಂದ್ರ ಆಡಳಿತದಲ್ಲಿ ಪಾಲ್ಗೊಂಡಿದ್ದ. 1012ರಲ್ಲಿ ರಾಜರಾಜ ಅವನನ್ನು ಯುವರಾಜನನ್ನಾಗಿ ನೇಮಿಸಿದ. ರಾಜರಾಜನ ಮಹತ್ತ್ವ ಪೂರ್ಣ ಆಡಳಿತ 1014ರಲ್ಲಿ ಕೊನೆಗೊಂಡಿತು. ಅವನು ತಂಜಾವೂರಿನಲ್ಲಿ ಕಟ್ಟಿಸಿದ ರಾಜರಾಜೇಶ್ವರ ದೇವಾಲಯ ಚೋಳ ಸಾಮ್ರಾಜ್ಯದ ವೈಭವದ ಪ್ರತೀಕವಾಗಿ ನಿಂತಿದೆ. ರಾಜರಾಜ ದಕ್ಷ ಆಡಳಿಗಾರನಾಗಿ ಆಡಳಿತದಲ್ಲಿ ಹೆಚ್ಚಿನ ಸುಧಾರಣೆ ತಂದ. ಗೆದ್ದ ರಾಜ್ಯವನ್ನು ತನ್ನ ಆಡಳಿತಕ್ಕೆ ನೇರವಾಗಿ ಸೇರಿಸಿಕೊಂಡು ಅವುಗಳ ಆಡಳಿತಕ್ಕೆ ಅಧಿಕಾರಗಳನ್ನು ನೇಮಿಸಿದ. ಬಲವಾದ ಸೈನ್ಯ ವ್ಯವಸ್ಥೆಯನ್ನು ಏರ್ಪಡಿಸಿದ. ಅವನಿಗೆ ಚೋಳೇಂದ್ರ ಸಿಂಹ, ಶಿವಪಾದಶೇಖರ, ಕ್ಷತ್ರಿಯ ಶಿಖಾಮಣಿ, ಜನನಾಥ, ಸಿಗರಿಲಿಶೋಲ, ರಾಜೇಂದ್ರ ಸಿಂಹ, ಚೋಳ ಮಾರ್ತಾಂಡ, ರಾಜಾಶ್ರಯ, ರಾಜಮಾರ್ತಾಂಡ, ನಿತ್ಯ ವಿನೋದ, ಪಾಂಡ್ಯ ಕುಲಾಶಿನಿ, ಕೇರಳಾಂತಕ, ಶಿಂಗಳಾಂತಕ, ರವಿಕುಲಮಾಣಿಕ್ಯ, ತೆಲಿಂಗಕುಲಕಾಲ ಮುಂತಾದ ಹಲವು ಬಿರುದುಗಳಿದ್ದುವು.

ರಾಜರಾಜ ಮತ್ತು ವಾಣವನ್ ಮಹಾದೇವಿ ಅಥವಾ ತ್ರಿಭುವನ ಮಹಾದೇವಿ ಇವರ ಮಗ ಪರಾಕೇಸರಿವರ್ಮ ರಾಜೇಂದ್ರ ಚೋಳವರ್ಮ 1014ರಲ್ಲಿ ರಾಜರಾಜನ ಅನಂತರ ಪಟ್ಟಕ್ಕೆ ಬಂದ. ಅವನನ್ನು ರಾಜರಾಜ ಯುವರಾಜನನ್ನಾಗಿ ನೇಮಿಸಿದ 1012ನೆಯ ವರ್ಷವನ್ನೇ ತನ್ನ ಆಡಳಿತದ ಆರಂಭವರ್ಷವನ್ನಾಗಿ ಶಾಸನಗಳಲ್ಲಿ ಎಣಿಸಿದ್ದಾನೆ. ರಾಜರಾಜ ಸುಭದ್ರವಾದ, ವಿಸ್ತಾರವಾದ ರಾಜ್ಯವನ್ನು ಇವನಿಗೆ ಬಿಟ್ಟುಹೋದ, ಚೋಳರಾಜ್ಯ ತಮಿಳುನಾಡು, ಕೇರಳ, ಕರ್ನಾಟಕದ ದಕ್ಷಿಣಭಾಗ, ಆಂಧ್ರಪ್ರದೇಶ ಮತ್ತು ಸಿಂಹಳದ ಭಾಗವನ್ನು ಒಳಗೊಂಡಿತ್ತು. ರಾಜರಾಜನನ್ನು ಮೀರಿಸಿದ ಪ್ರಬಲವಾದ ಚಕ್ರವರ್ತಿ ರಾಜೇಂದ್ರ ಚೋಳ. ಇವನ 33 ವರ್ಷಗಳ ಆಡಳಿತದ ಮೊದಲ ಭಾಗವೆಲ್ಲ ಯುದ್ಧಗಳು ಮತ್ತು ರಾಜ್ಯ ವಿಸ್ತರಣೆಗಳಿಂದ ತುಂಬಿತ್ತು.

ರಾಜೇಂದ್ರ ತನ್ನ ಆಳ್ವಿಕೆ ಆರಂಭವಾದ ತರುಣದಲ್ಲೇ 1018ರಲ್ಲಿ ತನ್ನ ಮಗ ರಾಜಾಧಿರಾಜನನ್ನು ಯುವರಾಜನನ್ನಾಗಿ ಆರಿಸಿ ತನ್ನ ಆಡಳಿತದಲ್ಲಿ ನೆರವಾಗುವಂತೆ ಏರ್ಪಡಿಸಿದ. ರಾಜಾಧಿರಾಜ 25 ವರ್ಷಗಳ ಕಾಲ ಯುವರಾಜನಾಗಿದ್ದು ಚಕ್ರಾಧಿಪತ್ಯದ ಆಡಳಿತದ ಹೊಣೆ ಹೊತ್ತು ತನ್ನ ತಂದೆಗೆ ನೆರವಾದ. ಇದೇ ರೀತಿ ರಾಜೇಂದ್ರನ ಬೇರೆಬೇರೆ ಮಕ್ಕಳು ಪ್ರಾಂತ್ಯಾಧಿಕಾರಿಗಳಾಗಿ ರಾಜ್ಯ ನಿರ್ವಹಣೆ ಮಾಡಿದರು. ಇದರಿಂದ ರಾಜ್ಯದ ಆಡಳಿತ ಬಿಗಿಯಾಗಿ, ಉತ್ತರಾಧಿಕಾರ ನಿರಾತಂಕವಾಗುವಂತಾಯಿತು. ರಾಜೇಂದ್ರ ಚೋಳನ ಶಾಸನಗಳಲ್ಲಿ ಕಂಡುಬರುವ ಅವನ ಪ್ರಶಸ್ತಿಗಳು ರಾಜರಾಜ ಹಾಕಿಕೊಟ್ಟ ಮೇಲ್ಪಂಕ್ತಿಯನ್ನನುಸರಿಸಿ ಅವನ ಆಡಳಿತದ ಆರಂಭ ವರ್ಷದಿಂದ ಕ್ರಮಕ್ರಮವಾಗಿ ಅವನು ನಡೆಸಿದ ಯುದ್ಧಗಳನ್ನೂ ಮಹತ್ಸಾಧನೆಗಳನ್ನೂ ವಿವರಿಸುತ್ತ ಹೋಗುವುದರಿಂದ ಅವನ ಆಡಳಿತದ ವಿವರಗಳನ್ನು ಅರಿಯಲು ಅವು ಸಹಾಯಕವಾಗಿವೆ.

ರಾಜೇಂದ್ರನ ಆಳ್ವಿಕೆಯ ಮೂರನೆಯ ವರ್ಷದ ಶಾಸನಗಳಲ್ಲೇ ಅವನು ಎಡತೊರೆನಾಡು, ಬನವಾಸಿ, ಕೊಲ್ಲಿಪಾಕಿ, ಮಣ್ಣೈಕಡಕಂ ಅಥವಾ ಮಾನ್ಯಖೇಟ ಇವುಗಳನ್ನು ಗೆದ್ದ ಉಲ್ಲೇಖವಿದೆ. ತನ್ನ ತಂದೆಯ ಕಾಲದಲ್ಲೇ ಅವನು ಈ ಪ್ರದೇಶಗಳಲ್ಲಿ ನಡೆಸಿದ ಯುದ್ಧಗಳನ್ನು ಬಹುಶಃ ಅವು ಸೂಚಿಸುತ್ತವೆ. ಅವನ ಮುಂದಿನ ದಂಡಯಾತ್ರೆ ನಡೆದದ್ದು ಈಳಮಂಡಳ ಅಥವಾ ಸಿಂಹಳದ ಮೇಲೆ. ಈ ದಂಡೆಯಾತ್ರೆ ಅವನ ಆಳ್ವಿಕೆಯ 5ನೆಯ ವರ್ಷದಲ್ಲಿ. ಎಂದರೆ 1017-18ರಲ್ಲಿ, 5ನೆಯ ಮಹಿಂದ ಅಲ್ಲಿ ಆಳುತ್ತಿದ್ದಾಗ ನಡೆದಿರಬೇಕು. ಹಿಂದೆಯೇ ಸಿಂಹಳದಲ್ಲಿ ಸೈನಿಕರು ದಂಗೆಯೆದ್ದಿದ್ದ ಸಮಯವನ್ನು ಸಾಧಿಸಿ ರಾಜರಾಜ ಚೋಳ ಆ ರಾಜ್ಯದ ಬಹುಭಾಗವನ್ನಾಕ್ರಮಿಸಿದ್ದ. ಆದರೂ ಅದರ ದಕ್ಷಿಣದ ಸ್ವಲ್ಪಭಾಗ ಸಿಂಹಳೀಯರ ವಶದಲ್ಲೇ ಉಳಿದಿತ್ತು. ರಾಜೇಂದ್ರನ ದಂಡಯಾತ್ರೆಯಿಂದ ಮಹಿಂದನೂ ಅವನ ಪರಿವಾರದವರೂ ಸೆರೆಸಿಕ್ಕಿದರಲ್ಲದೆ ಅಪಾರವಾದ ಸಂಪತ್ತು ರಾಜೇಂದ್ರನ ಕೈವಶವಾಯಿತು. ಮಹಿಂದನನ್ನು ಚೋಳ ರಾಜ್ಯದಲ್ಲಿ ಸೆರೆಯಿಡಲಾಯಿತು. ಸಿಂಹಳ ಚೋಳರಾಜ್ಯದ ಒಂದು ಪ್ರಾಂತ್ಯವಾಯಿತು. ಈ ಕಾಲದಲ್ಲಿ ಪೋಲನ್ನುರುವದಲ್ಲಿ ಶೈವ ಮತ್ತು ವೈಷ್ಣವ ದೇವಾಲಯಗಳನ್ನು ಕಟ್ಟಿಸಿದಂತೆ ತೋರುತ್ತದೆ. ರಾಜೇಂದ್ರ ಸಿಂಹಳವನ್ನು ಗೆದ್ದ 12 ವರ್ಷಗಳ ಅನಂತರ ಚೋಳರ ಮೇಲೆ ಮಹಿಂದನ ಮಗ ಕಸ್ಯ ತಿರುಗಿ ಬಿದ್ದು ಸ್ವತಂತ್ರವಾಗಿ ರೋಹಣದಿಂದ ಆಳಲಾರಂಭಿಸಿದ. ರಾಜೇಂದ್ರ ಸಿಂಹಳನ್ನು ಗೆದ್ದ ಅನಂತರ. ಅವನ ಆಳ್ವಿಕೆಯ 6ನೆಯ ವರ್ಷದಲ್ಲಿ, ಕೇರಳ ಅವನಿಗೆ ಸೋತು ಶರಣಾಯಿತು. ರಾಜೇಂದ್ರ ತನ್ನ ಮಗ ಜಟಾವರ್ಮ ಚೋಳಪಾಂಡ್ಯನೆಂಬ ಬಿರುದಿನಿಂದ ಪಾಂಡ್ಯ ರಾಜ್ಯದಲ್ಲಿ ಮಧುರೈಯಲ್ಲಿ ರಾಜಪ್ರತಿನಿಧಿಯನ್ನಾಗಿ ನೇಮಿಸಿದ. ಅನಂತರ ಸ್ವಲ್ಪ ಕಾಲದಲ್ಲೇ ಅವನ ಕೇರಳದಲ್ಲೂ ರಾಜಪ್ರತಿನಿಧಿಯಾದ ರಾಜಪ್ರತಿನಿಧಿಗಳಿಗೆ ಹೆಚ್ಚಿನ ಸ್ವಾತಂತ್ರ ಇರುತ್ತಿತ್ತು.

ರಾಜೇಂದ್ರ 1021 ಮತ್ತು 1022ರಲ್ಲಿ ಚಾಳುಕ್ಯ ಚಕ್ರವರ್ತಿ ಜಯಸಿಂಹನ ಮೇಲೆ ಮತ್ತೆ ಯುದ್ಧವನ್ನಾರಂಭಿಸಿದ. ಮುಷಂಗಿ ಅಥವಾ ಮುಯಂಗಿ ಎಂಬಲ್ಲಿ ನಡೆದ ಯುದ್ಧದಲ್ಲಿ ರಾಜೇಂದ್ರ ಜಯಗಳಿಸಿದುದಾಗಿ ಶಾಸನಗಳು ತಿಳಿಸಿದರೂ ಅದರಿಂದ ಅವನ ರಾಜ್ಯವಿಸ್ತರಣೆಯೇನೂ ಆದಂತೆ ತೋರುವುದಿಲ್ಲ. ವೆಂಗಿಯಲ್ಲಿ ವಿಮಲಾದಿತ್ಯ 1019ರಲ್ಲಿ ತೀರಿಕೊಂಡಾಗ ಅವನ ಮಗ ರಾಜರಾಜ ತನ್ನ ಸೋದರಮಾವನಾದ ರಾಜೇಂದ್ರನ ನೆರವನ್ನು ಕೋರಿದ. ಆದ್ದರಿಂದ ಚೋಳರ ದಂಡನಾಯಕ ಅರೈಯನ್ ರಾಜರಾಜನ್ ಅಥವಾ ವಿಕ್ರಮಚೋಳ ಚೋಳಿಯ ವರಯ್ಯನ್ ಎಂಬುವನು ವೆಂಗಿಯ ಕಡೆ ದಂಡೆತ್ತಿದಾಗ ವಿಜಯಾದಿತ್ಯ ಓಡಿಹೋದ. ಇದೇ ಸಂದರ್ಭದಲ್ಲಿ ಈ ಚೋಳ ದಂಡನಾಯಕ ತನ್ನ ದಂಡಯಾತ್ರೆಯನ್ನು ಮುಂದುವರಿಸಿ ಗಂಗಾತೀರದವರೆಗೂ ನುಗ್ಗಿ, ರಾಜೇಂದ್ರ ಹೊಸದಾಗಿ ಕಟ್ಟಿಸುತ್ತಿದ್ದ ರಾಜಧಾನಿಗೆ ಪವಿತ್ರ ಗಂಗಾಜಲವನ್ನು ತಂದ. ಈ ಸಂದರ್ಭದಲ್ಲಿ ರಾಜೇಂದ್ರ ಗೋದಾವರಿಯವರೆಗೂ ಬಂದಿದ್ದು ಗಂಗೆಯ ಕಡೆಗೆ ಹೊರಟಿದ್ದ ತನ್ನ ಸೈನ್ಯದ ಮೇಲೆ ಕಳಿಂಗರೂ ಓಡ್ರರೂ ತಿರುಗಿಬೀಳದಂತೆ ನೋಡಿಕೊಂಡ. ಗಂಗಾತೀರದವರೆಗೆ ದಂಡಯಾತ್ರೆ ಹೋಗಿದ್ದ ಸೈನ್ಯ ಗೆದ್ದ ರಾಜರಲ್ಲಿ ಇಂದ್ರರಥ, ರಣಶೂರ, ಧರ್ಮಪಾಲ ಮುಂತಾದವರ ಹೆಸರುಗಳು ಬರುತ್ತವೆ. ಈ ವಿಜಯದ ನೆನಪಿಗಾಗಿ ರಾಜೇಂದ್ರ ತನ್ನ ರಾಜಧಾನಿಯಲ್ಲಿ ಚೋಳಗಂಗ ಎಂಬ ಕೆರೆಯನ್ನು ಕಟ್ಟಿಸಿದ. ಚೈತ್ರಯಾತ್ರೆಯ ಅಂತ್ಯದಲ್ಲಿ ರಾಜರಾಜ ನರೇಂದ್ರನ ಪಟ್ಟಾಭಿಷೇಕ ನೆರವೇರಿತ್ತು. ಅದೇ ಕಾಲದಲ್ಲಿ ಅವನು ರಾಜೇಂದ್ರನ ಮಗಳು ಅಮ್ಮಂಗಾ ದೇವಿಯನ್ನು ವಿವಾಹವಾದ. ರಾಜರಾಜ ನರೇಂದ್ರ ವೆಂಗಿಯಲ್ಲಿ 41 ವರ್ಷಗಳ ಕಾಲ ಆಳಿದರೂ ಅನೇಕ ಬಾರಿ ದೇಶವನ್ನು ಬಿಟ್ಟು ಓಡಿಹೋಗಬೇಕಾದ ಪರಿಸ್ಥಿತಿ ಉಂಟಾಗಿತ್ತು. ಚೋಳ ಸೈನ್ಯಕ್ಕೆ ಹೆದರಿ ಓಡಿಹೋಗಿದ್ದ ವಿಜಯಾದಿತ್ಯ ಚಾಳುಕ್ಯರ ಸಹಾಯದಿಂದ ರಾಜರಾಜನನ್ನು ಓಡಿಸಿ ತಾನೇ ವೆಂಗಿಯ ರಾಜನಾಗಿ 1031ರಲ್ಲಿ ಪಟ್ಟಕ್ಕೆ ಬಂದ. ರಾಜರಾಜ ನರೇಂದ್ರ ಪುನಃ ರಾಜೇಂದ್ರನತ್ತ ಸಹಾಯಕ್ಕಾಗಿ ತಿರುಗಬೇಕಾಯಿತು. ಬ್ರಹ್ಮಮಹಾರಾಜನೆಂಬ ದಂಡನಾಯಕನೊಡನೆ ಬಲವಾದ ಸೈನ್ಯವನ್ನು ರಾಜೇಂದ್ರ ಕಳುಹಿಸಿದ. ಅವನೊಂದಿಗೆ ಉತ್ತಮ ಚೋಳ ಮೆಲಾಡುಡೈಯಾನ್ ಮತ್ತು ಉತ್ತಮ ಚೋಳ ಚೋಳಕೋನ್ ಎಂಬ ಅಧಿಕಾರಿಗಳು ಇದ್ದರು. ಕಲಿದಿಂಡಿ ಎಂಬಲ್ಲಿ ನಡೆದ ಯುದ್ಧದಲ್ಲಿ ಈ ಮೂವರು ಸತ್ತರು. ಆದರೂ ರಾಜರಾಜ ನರೇಂದ್ರ ಜಯಗಳಿಸಿ ಮತ್ತೆ ಸು. 1035ರ ವೇಳೆಗೆ ವೆಂಗಿರಾಜ್ಯದ ರಾಜನಾದಂತೆ ತೋರುತ್ತದೆ. 1042ರ ಹೊತ್ತಿಗೆ ಚಾಳುಕ್ಯ 1ನೆಯ ಸೋಮೇಶ್ವರ ವೆಂಗಿಯ ಮೇಲೆ ದಂಡೆತ್ತಿ ಬಂದಾಗ ರಾಜರಾಜ ಪುನಃ ರಾಜೇಂದ್ರನ ಸಹಾಯ ಕೋರಬೇಕಾಯಿತು. ರಾಜೇಂದ್ರನ ಮಗ ರಾಜಾಧಿರಾಜ ಸೈನ್ಯದೊಂದಿಗೆ ವೆಂಗಿನಾಡಿಗೆ ಹೋದಾಗ ಪುನಃ ಚೋಳ ಚಾಳುಕ್ಯರ ನಡುವೆ ಯುದ್ಧವಾಯಿತು.

ರಾಜೇಂದ್ರನ 14ನೆಯ ವರ್ಷದ ಶಾಸನದಲ್ಲಿ ಮೊದಲ ಬಾರಿಗೆ ಅವನು ಕಡಾರದ ಮೇಲೆ ಯುದ್ಧಕ್ಕೆ ಹೋದ ವಿಷಯ ಕಂಡುಬರುತ್ತದೆ. ಅನೇಕ ಹಡಗುಗಳಲ್ಲಿ ಸಮುದ್ರ ದಾಟಿ, ಕಡಾರದ ರಾಜ ಸಂಗ್ರಾಮ ವಿಜಯೋತ್ತುಂಗ ವರ್ಮನನ್ನು ಸೆರೆಹಿಡಿದು, ವಿದ್ಯಾಧರ ತೋರಣ, ಶ್ರೀವಿಜಯ, ಪಣ್ಣೈ, ಮಲೆಯೂರ್, ನೂಯಿರುಡಿಂಗಂ ಇಲಂಗಾಶೋಕ, ಮಾಪಪ್ಪಾಳಂ, ಮೋವಿಳಂಬಂಗ, ನಳೈಪ್ಪಂದೂರ್, ತಲೈತ್ತಕ್ಕೋಲಂ, ಮಾದಮಾಲಿಂಗಂ, ಇಲಾಮುರಿದೇಶಂ ಮಾನಕ್ಕವಾರಂ ಮತ್ತು ಕಡಾರಗಳನ್ನು ಗೆದ್ದನೆಂದು ಅವನ ಪ್ರಶಸ್ತಿ ಸಾರುತ್ತದೆ. ಹಿಗೆ ಅವನ ರಾಜ್ಯ ಸಮುದ್ರದಾಚೆಗೂ ಹರಡುವಂತಾಯಿತು. ಇನ್ನು ಮುಂದೆ ರಾಜೇಂದ್ರ ಯುದ್ಧಗಳಲ್ಲಿ ತಾನೇ ಭಾಗವಹಿಸದೆ ತನ್ನ ಮಕ್ಕಳಿಗೆ ಆ ಅವಕಾಶವನ್ನೊದಗಿಸಿದ. ಪಾಂಡ್ಯ ಕೇರಳ ರಾಜ್ಯಗಳಲ್ಲಿ ದಂಗೆಯೆದ್ದಾಗ ಅದನ್ನು ಅಡಗಿಸಿದವನು ರಾಜಾಧಿರಾಜ. ಇದೇ ರೀತಿ ಸಿಂಹಳದಲ್ಲಿ 1ನೆಯ ವಿಕ್ರಮಬಾಹುವಿನೊಂದಿಗೆ ರಾಜಾಧಿರಾಜ ನಡೆಸಿದ ಯುದ್ಧಗಳು ರಾಜೇಂದ್ರನ ಆಳ್ವಿಕೆಯಲ್ಲೆ ಆರಂಭವಾದುವು.

ಹೀಗೆ ರಾಜೇಂದ್ರನ ಆಳ್ವಿಕೆ ವಿಜಯಾಲಯನ ಪೀಳಿಗೆಯ ಚೋಳ ವಂಶದಲ್ಲೇ ಅಮೋಘವಾದ್ದಾಗಿತ್ತು. ಅವನ ರಾಜ್ಯ ಅತ್ಯಂತ ವಿಸ್ತಾರವಾದ್ದಾಯಿತು. ಸೈನ್ಯ ಮತ್ತು ನೌಕಾಬಲ ಅತ್ಯಂತ ಬಲಯುತವಾದ್ದಾಗಿತ್ತು. ರಾಜೇಂದ್ರನಿಗೆ ಹಲವಾರು ಬಿರುದುಗಳಿದ್ದುವು. ಅವುಗಳಲ್ಲಿ ಮುಖ್ಯವಾದವು ಮುಡಿಗೊಡ ಚೋಳ, ಪಂಡಿತ ಚೋಳ, ಗಂಗೈಕ್ಕೊಂಡ ಚೋಳ. ಗಂಗೈಕ್ಕೊಂಡ ಚೋಳನೆಂಬ ಬಿರುದು ಅವನಿಗೆ ಅತ್ಯಂತ ಪ್ರಿಯವಾದದ್ದು. ಈ ಹೆಸರಿನಿಂದ ಅವನು ಹೊಸ ರಾಜಧಾನಿಯನ್ನು ಕಟ್ಟಿಸಿ ಅಲ್ಲಿ ಭವ್ಯವಾದ ಗಂಗೈಕ್ಕೊಂಡ ಚೋಳೇಶ್ವರ ದೇವಾಲಯವನ್ನು ಕಟ್ಟಿಸಿದ. 1044ರಲ್ಲಿ ರಾಜೇಂದ್ರ ಕಾಲವಾದ. ಅವನ ರಾಣಿಯರಲ್ಲಿ ವೀರಮಹಾದೇವಿ ಅವನೊಂದಿಗೆ ಸಹಗಮನ ಮಾಡಿದಳು. ಅವನ ಮಕ್ಕಳಲ್ಲಿ ರಾಜಾಧಿರಾಜ, ರಾಜೇಂದ್ರ ಮತ್ತು ವೀರರಾಜೇಂದ್ರರು ಅವನ ಅನಂತರ ಅನುಕ್ರಮವಾಗಿ ರಾಜ್ಯಭಾರ ಮಾಡಿದರು.

ರಾಜೇಂದ್ರ ಚೋಳನ ಮರಣದೊಂದಿಗೆ ಚೋಳ ಸಾಮ್ರಾಜ್ಯದ ಒಂದು ಹಿರಿಯ ಅಧ್ಯಾಯ ಮುಕ್ತಾಯವಾದಂತಾಯಿತು. 1044ರಲ್ಲಿ ಅವನ ಅನಂತರ ಅವನ ಮಗ 1ನೆಯ ರಾಜಾಧಿರಾಜ ಪಟ್ಟಕ್ಕೆ ಬಂದ. ವೆಂಗಿಯಲ್ಲಿ ಚೋಳರ ಆಧಿಪತ್ಯವನ್ನು ಮುಂದುವರಿಸಬೇಕೆಂಬ ಇಚ್ಚೆಯಿಂದ ಅವನು ರಾಜನಾದ ಕೂಡಲೇ ಅತ್ತಕಡೆ ಚೈತ್ರಯಾತ್ರೆ ಹೊರಟ. ಕನ್ನಡ ಅಥವಾ ಧ್ಯಾನ್ಯಕಟಕದ ಬಳಿ ಚಾಳುಕ್ಯರ ಸೈನ್ಯವನ್ನು ಸೋಲಿಸಿ ವಿಕ್ರಮಾದಿತ್ಯ ಮತ್ತು ವಿಜಯಾದಿತ್ಯರನ್ನು ಹಿಮ್ಮೆಟ್ಟಿಸಿ ಚಾಳುಕ್ಯರ ರಾಜ್ಯದೊಳಗೆ ನುಗ್ಗಿ ಕೊಲ್ಲಿಪಾಕಿಗೆ ಬೆಂಕಿಯಿಟ್ಟ. ಪಶ್ಚಿಮದ ಕಡೆ ನುಗ್ಗಿದ ಕೊಲ್ಲಿಪಾಕಿಗೆ ಬೆಂಕಿಯಿಟ್ಟ. ಪಶ್ಚಿಮದ ಕಡೆ ನುಗ್ಗಿದ ಅವನ ಸೈನ್ಯ ಅನೇಕ ಚಾಳುಕ್ಯ ದಂಡನಾಯಕರನ್ನೂ ಸಾಮಂತರನ್ನೂ ಬಂಧಿಸಿ ಕಂಪಿಲಿಯಲ್ಲಿಯ ಚಾಳುಕ್ಯ ಅರಮನೆಯನ್ನು ದೋಚಿ ನಾಶಮಾಡಿತು. ಕಡೆಗೆ ಕೃಷ್ಣಾ ನದಿಯ ದಡದಲ್ಲಿ ಪೂನ್ದೂರಿನ ಬಳಿ ನಡೆದ ಘೋರ ಯುದ್ಧದಲ್ಲಿ ಶತ್ರುಸೈನ್ಯ ಸೋತುಹೋಯಿತು. ಚೋಳಸೈನ್ಯ ಕೃಷ್ಣಾ ನದಿಯನ್ನು ದಾಟಿ ಯಾದಗಿರಿಯಲ್ಲಿ ಬೀಡುಬಿಟ್ಟು ವಿಜಯಸ್ತಂಭ ಸ್ಥಾಪಿಸಿತು. ವಿಜಯದಿಂದ ಮುಂದುವರಿದ ಈ ಸೈನ್ಯ ಕಡೆಗೆ ಚಾಳುಕ್ಯ ರಾಜಧಾನಿ ಕಲ್ಯಾಣವನ್ನು ಸೂರೆ ಮಾಡಿತು. ರಾಜಾಧಿರಾಜ ಶತ್ರುವಿನ ರಾಜಧಾನಿಯಲ್ಲೇ ವೀರಾಭಿಷೇಕ ಮಾಡಿಕೊಂಡು ವಿಜಯರಾಜೇಂದ್ರ ಎಂಬ ಬಿರುದನ್ನು ತಳೆದ. ಆದರೆ 1050ರ ಹೊತ್ತಿಗೆ ಚಾಳುಕ್ಯ ಸೋಮೇಶ್ವರ ಚೋಳರನ್ನು ತನ್ನ ರಾಜ್ಯದಿಂದ ಓಡಿಸಿದನಲ್ಲದೆ ವೆಂಗಿಯಲ್ಲಿ ರಾಜರಾಜ ಚೋಳರನ್ನು ಬಿಟ್ಟು ತನ್ನನ್ನು ಅಧಿರಾಜನನ್ನಾಗಿ ಸ್ವೀಕರಿಸುವಂತೆ ಮಾಡಿದ. ಚೋಳ ರಾಜ್ಯದಲ್ಲಿ ಕಂಚಿಯವರೆಗೂ ಸೈನ್ಯ ನುಗ್ಗಿಸಿದ. ಇದಕ್ಕೆ ಪ್ರತೀಕಾರವಾಗಿ ರಾಜಾಧಿರಾಜ ತನ್ನ ತಮ್ಮ ಯುವರಾಜ ಇಮ್ಮಡಿ ರಾಜೇಂದ್ರನೊಂದಿಗೆ ಚಾಳುಕ್ಯ ರಾಜ್ಯದೊಳಗೆ ನುಗ್ಗಿ ಕೃಷ್ಣಾನದಿಯ ದಡದಲ್ಲಿ ರೊಪ್ಪಂ (ಕೊಪ್ಪಳ) ಎಂಬಲ್ಲಿ ಚಾಳುಕ್ಯ ಸೈನ್ಯವನ್ನೆದುರಿಸಿದ. ಅಲ್ಲಿ ನಡೆದ ತೀವ್ರ ಹೋರಾಟದಲ್ಲಿ ರಾಜಾಧಿರಾಜ ಹತನಾದರೂ ಇಮ್ಮಡಿ ರಾಜೇಂದ್ರ ಪರಾಕ್ರಮದಿಂದ ಹೋರಾಡಿ ಜಯಗಳಿಸಿದ. ಚಾಳುಕ್ಯರ ಕಡೆ ಹಲವು ದಂಡನಾಯಕರು ಸತ್ತರು. ಹೇರಳವಾದ ಸೂರೆ ರಾಜೇಂದ್ರನ ವಶವಾಯಿತು. ಯುದ್ಧಭೂಮಿಯಲ್ಲೇ ಪಟ್ಟ ಕಟ್ಟಿಸಿಕೊಂಡ ಇಮ್ಮಡಿ ರಾಜೇಂದ್ರ ಕೊಲ್ಲಾಪುರದವರೆಗೂ ನುಗ್ಗಿ ವಿಜಯಸ್ತಂಭವನ್ನು ನಿಲ್ಲಿಸಿ ಹಿಂದಿರುಗಿದ. ಇದಕ್ಕಾಗಿ ಸೇಡು ತೀರಿಸಲು ಸೋಮೇಶ್ವರ ಯುದ್ಧವನ್ನು ಮರುಕಳಿಸಿದರೂ ಕೂಡಲಸಂಗಮದಲ್ಲಿ ನಡೆದ ಯುದ್ಧದಲ್ಲಿ ಸೋತು ಹಿಂದಿರುಗಬೇಕಾಯಿತು. ಇದಾದ ಸ್ವಲ್ಪ ಕಾಲದಲ್ಲೇ ಚೋಳ ಯುವರಾಜ ಮಹೇಂದ್ರ ಮತ್ತು ಇಮ್ಮಡಿ ರಾಜೇಂದ್ರರು ತೀರಿಕೊಂಡರು. ವೀರರಾಜೇಂದ್ರ 1063ರಲ್ಲಿ ರಾಜನಾದ. ಚೋಳ-ಚಾಳುಕ್ಯರ ತಿಕ್ಕಾಟ ಮುಂದುವರಿಯಿತು. ವೆಂಗಿನಾಡಿನಲ್ಲಿ ಸೋಮೇಶ್ವರ ತನ್ನ ಸಾಮಂತರಾದ ಧಾರಾವರ್ಷ, ಗಂಗರ ಮುಮ್ಮಡಿ ವಜ್ರಹಸ್ತರ ನೆರವನ್ನು ಪಡೆದು ಪರಮಾರ ಜನನಾಥನನ್ನು ದೊಡ್ಡ ಸೈನ್ಯದೊಡನೆ ಬೆಜವಾಡದ ಬಳಿ ಇರಿಸಿದ್ದ. ಪಶ್ಚಿಮದಲ್ಲಿ ವಿಜಯಾದಿತ್ಯ ಚೋಳ ರಾಜ್ಯದೊಳಗೆ ನುಗ್ಗಿದ. ಪಟ್ಟವಾದ ಮೇಲೆ ವೀರ ರಾಜೇಂದ್ರ ಯುದ್ಧರಂಗಕ್ಕೆ ಹಿಂದಿರುಗಿದ. ಮೊದಲು ಚೋಳರಿಗೆ ಹೆಚ್ಚಿನ ಜಯ ದೊರೆಯಲಿಲ್ಲ. ಆದರೆ 1066ರಲ್ಲಿ ತುಂಗಭದ್ರಾತೀರದಲ್ಲಿ ಸೋಮೇಶ್ವರನ ಪಡೆಯನ್ನು ಸೋಲಿಸಿದ. ಆದರೂ ಮತ್ತೊಮ್ಮೆ ಕೂಡಲ ಸಂಗಮದಲ್ಲಿ ಯುದ್ಧದ ಸಿದ್ಧತೆಗಳು ನಡೆದುವು. ಕಡೆಗೆ ವೀರ ರಾಜೇಂದ್ರ ಚಾಳುಕ್ಯರ ಮೇಲೆ ಬಿದ್ದು ಅವರನ್ನು ಸಂಪೂರ್ಣವಾಗಿ ಸೋಲಿಸಿ ಜಯಸ್ತಂಭ ನಿಲ್ಲಿಸಿದ. ಆಗ ಅವನ ಗಮನ ವೆಂಗಿಯತ್ತ ತಿರುಗಿತು. ಅಲ್ಲೂ ಬೆಜವಾಡದ ಬಳಿ ನಡೆದ ಯುದ್ಧದಲ್ಲಿ ಚಾಳುಕ್ಯರಿಗೆ ಸೋಲಾಯಿತು. ವೀರರಾಜೇಂದ್ರ ಕೃಷ್ಣಾ ನದಿಯನ್ನು ದಾಟಿ ಕಳಿಂಗದತ್ತ ಮುನ್ನುಗ್ಗಿದ ಚಾಳುಕ್ಯರ ಕಡೆ ವಿಜಯಾದಿತ್ಯ ಮತ್ತು ಮುಮ್ಮಡಿ ವಜ್ರಹಸ್ತನ ಮಗ ರಾಜರಾಜರಲ್ಲದೆ ವಿಕ್ರಮಾದಿತ್ಯನೂ ಚೋಳರ ಕಡೆ ಮುಂದೆ 1ನೆಯ ಕುಲೋತ್ತುಂಗನೆಂಬ ಹೆಸರಿನಿಂದ ಆಳಿದ ರಾಜೇಂದ್ರನೂ ಯುದ್ಧದಲ್ಲಿ ಭಾಗವಹಿಸಿದರು. ಸಿಂಹಲದಲ್ಲಿ ವಿಜಯಬಾಹು ಸ್ವತಂತ್ರನಾಗಲು ಪ್ರಯತ್ನಿಸಿದ್ದರಿಂದ 1067ರಲ್ಲಿ ವೀರ ರಾಜೇಂದ್ರ ಸೈನ್ಯವನ್ನು ಕಳುಹಿಸಿ ಅವನನ್ನು ಸೋಲಿಸಿದ. ಸಿಂಹಳದ ರಾಣಿ ಸೆರೆಸಿಕ್ಕಳು. 1068ರಲ್ಲಿ ವೀರ ರಾಜೇಂದ್ರ ನೌಕಪಡೆಯೊಂದನ್ನು ಕಳುಹಿಸಿ ಕಡಾರವನ್ನು ಗೆದ್ದ. ಇಷ್ಟರಲ್ಲಿ ಸೋಮೇಶ್ವರ ತೀರಿಕೊಂಡ. ಇಮ್ಮಡಿ ಸೋಮೇಶ್ವರ ಪಟ್ಟಕ್ಕೆ ಬರುತ್ತಿದ್ದಂತೆಯೇ ವೀರರಾಜೇಂದ್ರ ಅವನ ಮೇಲೆ ಯುದ್ಧಕ್ಕೆ ಬಂದು ಗುತ್ತಿಯನ್ನು ಮುತ್ತಿದ. ಅದೇ ಕಾಲದಲ್ಲಿ ಸೋಮೇಶ್ವರನಿಗೆ ವಿಕ್ರಮಾದಿತ್ಯ ಎದುರುಬಿದ್ದು ವೀರ ರಾಜೇಂದ್ರನೊಡನೆ ಸಂಧಾನ ನಡೆಸಿದ. ಇದರಿಂದ ಚೋಳ ಚಾಳುಕ್ಯರ ನಡುವಣ ಸಂಬಂಧ ವ್ಯತ್ಯಸ್ತಗೊಂಡಿತು. ವೀರರಾಜೇಂದ್ರನಿಗೆ ವಿಜಯಾದಿತ್ಯ ಶರಣಾಗಿ ಅವನಿಗೆ ಅಧೀನವಾಗಿ ವೆಂಗಿಯನ್ನು ಆಳಲಾರಂಭಿಸಿದ. ವೀರ ರಾಜೇಂದ್ರ ತನ್ನ ಒಬ್ಬ ಮಗಳನ್ನು ವಿಕ್ರಮಾದಿತ್ಯನಿಗೂ ಇನ್ನೊಬ್ಬ ಮಗಳನ್ನು ಕಳಿಂಗ ಗಂಗರ ರಾಜಕುಮಾರ ರಾಜರಾಜನಿಗೂ ಕೊಟ್ಟ. ಇದರಿಂದ ಚೋಳ ಚಾಳುಕ್ಯರ ನಡುವಣ ದ್ವೇಷ ಕೊನೆಗೊಂಡಂತೆ ಆಯಿತು. ಆದರೆ 1070ರಲ್ಲಿ ವೀರ ರಾಜೇಂದ್ರ ತೀರಿಕೊಂಡಾಗ ಮತ್ತೆ ಪರಿಸ್ಥಿತಿ ಬದಲಾಯಿಸಿತು.

ವೆಂಗಿಯಲ್ಲಿ 7ನೆಯ ವಿಜಯಾದಿತ್ಯ ವೀರ ರಾಜೇಂದ್ರನನ್ನು ಪಟ್ಟಕ್ಕೆ ತಂದಿದ್ದರಿಂದ ಆ ರಾಜ್ಯದ ಹಕ್ಕುದಾರನಾಗಿದ್ದ. ರಾಜೇಂದ್ರನ ಮಗಳ ಮಗನೂ ಇಮ್ಮಡಿ ರಾಜೇಂದ್ರನ ಮಗಳಾದ ಮಧುರಾಂತಕಿಯ ಗಂಡನೂ ಆಗಿದ್ದ. ರಾಜೇಂದ್ರ ವೆಂಗಿ ಮತ್ತು ಚೋಳ ಸಿಂಹಾಸನಗಳೆರಡಕ್ಕೂ ಹಕ್ಕು ಸ್ಥಾಪಿಸಲು ಪ್ರಯತ್ನಿಸಿದ. ವೀರರಾಜೇಂದ್ರನ ಮಗ ಅಧಿರಾಜೇಂದ್ರನ ಪರವಾಗಿ ಪರವಾಗಿ ವಿಕ್ರಮಾದಿತ್ಯ ಕಂಚಿಗೆ ಹೋಗಿ ಅಲ್ಲಿಯ ದಂಗೆಯನ್ನಡಗಿ ಗಂಗೈಕ್ಕೊಂಡ ಚೋಳಪುರದಲ್ಲಿ ಅಧಿರಾಜೇಂದ್ರನಿಗೆ ಪಟ್ಟಗಟ್ಟಿ ಹಿಂದಿರುಗಿದ. ಆದರೆ ಸ್ವಲ್ಪ ಸಮಯದಲ್ಲೇ ಅಧಿರಾಜ ಹತನಾದ. ವೆಂಗಿಯಿಂದ ವಿಜಯಾದಿತ್ಯನನ್ನು ಓಡಿಸಿದ್ದ ರಾಜರಾಜ ಚೋಳ ಚಕ್ರವರ್ತಿಯಾಗಿ 1ನೆಯ ಕುಲೋತ್ತುಂಗನೆಂಬ ಹೆಸರಿನಿಂದ ಆಳಲಾರಂಭಿಸಿದ. ವಿಕ್ರಮಾದಿತ್ಯನಿಗೆ ಇಕ್ಕಟ್ಟಿನ ಸ್ಥಿತಿಯೊದಗಿತು. ಇಮ್ಮಡಿ ಸೋಮೇಶ್ವರ ಕುಲೋತ್ತುಂಗನ ಸ್ನೇಹ ಬೆಳೆಸಿದ. 1075ರ ಹೊತ್ತಿಗೆ ಕುಲೋತ್ತುಂಗನಿಗೂ ವಿಕ್ರಮಾದಿತ್ಯನಿಗೂ ನರಿಗಲಿಯ ಬಳಿ ಯುದ್ಧ ಸಂಭವಿಸಿತು. ಚಾಳುಕ್ಯ ಸೈನ್ಯವನ್ನು ಕುಲೋತ್ತುಂಗ ಸೋಲಿಸಿ ತುಂಗಭದ್ರೆಯವರೆಗೂ ನುಗ್ಗಿದ. ಗಂಗವಾಡಿಯ ಬಹುಭಾಗ ಅವನ ವಶವಾಯಿತು. ಆದರೆ ಅವನಿಗೆ ಸಹಾಯ ಮಾಡಲು ಬಂದ ಸೋಮೇಶ್ವರ ಮಾತ್ರ ವಿಕ್ರಮಾದಿತ್ಯನಿಗೆ ಸೆರೆಸಿಕ್ಕಿದ. ವಿಕ್ರಮಾದಿತ್ಯ ಚಾಳುಕ್ಯ ಚಕ್ರವರ್ತಿಯಾದ. ಸಿಂಹಳದಲ್ಲಿ ವಿಜಯಬಾಹು ತನ್ನೆಲ್ಲ ಬಲದೊಂದಿಗೆ ಚೋಳರನ್ನು ಓಡಿಸಿ ಸ್ವತಂತ್ರನಾದ.

ಪಾಂಡ್ಯ ಕೇರಳ ರಾಜ್ಯಗಳಲ್ಲಿಯ ದಂಗೆಯನ್ನಡಗಿಸಲು ಕುಲೋತ್ತುಂಗ ದಕ್ಷಿಣದ ಕಡೆ ದಂಡೆಯಾತ್ರೆ ಹೊರಟು ಶೆಂಪೋನ್ಮಾರಿ, ಕೊಟ್ಟಾರೆ, ವಿಲಿನಂ ಮತ್ತು ಶಾಲೈಗಳಲ್ಲಿ ನಡೆದ ಯುದ್ಧಗಳಲ್ಲಿ ತನ್ನನ್ನು ಎದುರಿಸಿದ ಪಾಂಡ್ಯ ಕೇರಳ ರಾಜಕುಮಾರರನ್ನು ಬಗ್ಗು ಬಡೆದು ತನ್ನ ಅಧೀನಕ್ಕೆ ತಂದ.

1084-5ರಲ್ಲಿ ವಿಜಯಬಾಹು ಚೋಳರ ಮೇಲೆ ಯುದ್ಧ ಹೂಡಲು ಯತ್ನಿಸಿದಾಗ ಅವನ ಸೈನ್ಯದಲ್ಲೇ ದಂಗೆ ನಡೆಯಿತು. ಅವನು ಕಡೆಗೆ ಅದನ್ನು ಅಡಗಿಸಿದ. ಕುಲೋತ್ತುಂಗ ಅವನೊಡನೆ ರಾಜಿಯಾಗಿ, ತನ್ನ ಮಗಳೊಬ್ಬಳನ್ನು ಸಿಂಹಳದ ರಾಜಕುಮಾರ ವೀರಪ್ಪರುಮಾಳನಿಗೆ ಕೊಟ್ಟು ಮದುವೆ ಮಾಡಿದ. ವೆಂಗಿಯಲ್ಲಿ 7ನೆಯ ವಿಜಯಾದಿತ್ಯ ತೀರಿಕೊಂಡ ಮೇಲೆ (1076) ಕುಲೋತ್ತುಂಗ ತನ್ನ ಮಕ್ಕಳನ್ನು ರಾಜಪ್ರತಿನಿಧಿಗಳಾಗಿ ಆಳಲು ಅಲ್ಲಿಗೆ ಕಳುಹಿಸಿದ. ವಿಕ್ರಮಚೋಳ ಅಲ್ಲಿ ಆಳುತ್ತಿದ್ದಾಗ 1097ರಲ್ಲಿ ಕಳಿಂಗದ ಅನಂತವರ್ಮನೂ ತನ್ನ ಅಧೀನವಾಗುವಂತೆ ಮಾಡಿದ. ಮುಂದೆ 1110ರಲ್ಲಿ ಅನಂತವರ್ಮ ಕಪ್ಪವನ್ನು ಕೊಡುವುದನ್ನು ನಿಲ್ಲಿಸಿದಾಗ ಎರಡನೆಯ ಬಾರಿ ಕಳಿಂಗದ ಮೇಲೆ ಚೋಳಸೈನ್ಯ ನುಗ್ಗಿತು. ಈ ಸೈನ್ಯದ ದಂಡನಾಯಕ ಕರುಣಾಕರ ತೊಂಡೈಮಾನ ಅನಂತವರ್ಮನನ್ನು ಸೋಲಿಸಿ ಹೇರಳವಾದ ಐಶ್ವರ್ಯವನ್ನು ದೋಚಿಕೊಂಡು ಬಂದ.

1115ರ ವರೆಗೂ ಚೋಳ ಚಕ್ರಾಧಿಪತ್ಯ ಸಿಂಹಳವನ್ನು ಬಿಟ್ಟು ಉಳಿದಂತೆ ವಿಸ್ತಾರವಾದ್ದಾಗಿಯೇ ಮುಂದುವರಿಯಿತು. ಆದರೆ ಅಷ್ಟುಹೊತ್ತಿಗೆ ಪ್ರಬಲನಾಗಿದ್ದ ಹೊಯ್ಸಳ ದೊರೆ ವಿಷ್ಣುವರ್ಧನ ತಲಕಾಡಿನಲ್ಲಿ ಚೋಳರ ಅಧಿಕಾರಿಯಾಗಿದ್ದ ಅದಿಯಮನನ್ನು ಸೋಲಿಸಿ ಗಂಗವಾಡಿಯಿಂದ ಚೋಳರನ್ನು ಓಡಿಸಿದ. ಅದೇ ಸಮಯದಲ್ಲಿ ವಿಕ್ರಮಾದಿತ್ಯ ವೆಂಗಿಯ ಮೇಲೆ ತನ್ನ ಕಣ್ಣು ಹಾಯಿಸಿದ. 1118ರ ಹೊತ್ತಿಗೆ ವಿಕ್ರಮಚೋಳ ವೆಂಗಿಯಿಂದ ಹಿಂದಿರುಗಿದ್ದ. ಅಲ್ಲಿ ವಿಕ್ರಮಾದಿತ್ಯನ ದಂಡನಾಯಕ ಅನಂತಪಾಲ ಆಳುತ್ತಿದ್ದ. ಹೀಗೆ ಕುಲೋತ್ತುಂಗನ ಆಳ್ವಿಕೆಯ ಕೊನೆಯ ವರ್ಷಗಳ ಹೊತ್ತಿಗೆ ಚೋಳರಾಜ್ಯ ತಮಿಳು ಸೀಮೆಗೆ ಮಾತ್ರ ಸೀಮಿತವಾಗಿತ್ತು. ಕುಲೋತ್ತುಂಗ ಚೋಳರಲ್ಲಿ ಪ್ರಸಿದ್ಧರಾಗಿದ್ದ ದೊರೆಗಳಲ್ಲಿ ಒಬ್ಬ. ಅನಾವಶ್ಯಕವಾಗಿ ಯುದ್ಧದಲ್ಲಿ ಭಾಗಿಯಾಗದೆ, ದೇಶವನ್ನು ಭದ್ರವಾದ ತಳಹದಿಯ ಮೇಲೆ ನಿಲ್ಲಿಸಲು ಪ್ರಯತ್ನಿಸಿದ. ಜನಗಳ ಮೇಲೆ ತೆರಿಗೆಯ ಹೊರೆಯನ್ನು ಹೊರಿಸದೆ, ಶುಂಗಂ ಪವಿತನ್ (ಸುಂಕವನ್ನು ತೆಗೆದುಹಾಕಿದವನು) ಎಂಬ ಬಿರುದು ಪಡೆದ. ಉಳಿದಷ್ಟು ರಾಜ್ಯ ಮುಂದೆ ನೂರು ವರ್ಷಗಳ ಕಾಲ ಭದ್ರವಾಗಿ ಮುಂದುವರಿಯಲು ಇವನ ರಾಜನೀತಿ ಸಹಾಯಕವಾಯಿತು.

ಕುಲೋತ್ತುಂಗ 1122ರ ವರೆಗೂ ಬದುಕಿದ್ದರೂ ವಿಕ್ರಮಚೋಳನ ಆಳ್ವಿಕೆ 1118ರಿಂದಲೇ ಆರಂಭವಾಗುತ್ತದೆ. 1133ರ ಹೊತ್ತಿಗೆ ವಿಕ್ರಮಚೋಳ ವೆಂಗಿಯನ್ನು ಪುನಃ ಸ್ವಾಧೀನಕ್ಕೆ ತೆಗೆದುಕೊಂಡ. ಅವನ 17 ವರ್ಷಗಳ ಆಳ್ವಿಕೆ ಸಾಮಾನ್ಯವಾಗಿ ಶಾಂತಿಯಿಂದ ಕೂಡಿತ್ತು. ಅವನು ಚಿದಂಬರ ನಟರಾಜನ ದೇವಾಲಯವನ್ನು ಬಹುವಾಗಿ ವಿಸ್ತರಿಸಿದ. ಅವನ ಮಗ ಇಮ್ಮಡಿ ಕುಲೋತ್ತುಂಗ 1133ರಿಂದ 1150ರವರೆಗೂ ಅನಂತರ ಅವನ ಮಗ ಇಮ್ಮಡಿ ರಾಜರಾಜ 1173ರ ವರೆಗೂ ಆಳಿದರು. ಅವರ ಆಳ್ವಿಕೆಯ ಕಾಲವೂ ಸಾಮಾನ್ಯವಾಗಿ ಶಾಂತಿಯಿಂದ ಕೂಡಿತ್ತು. ರಾಜರಾಜನಿಗೆ ಮಕ್ಕಳಿದ್ದರಿಂದ ವಿಕ್ರಮಚೋಳನ ಮಗಳ ಮಗ ಇಮ್ಮಡಿ ರಾಜಾಧಿರಾಜನನ್ನು ಯುವರಾಜನನ್ನಾಗಿ ಆರಿಸಿದ. ರಾಜರಾಜನ ಆಳ್ವಿಕೆಯಲ್ಲಿ ಆಡಳಿತದ ಬಿಗಿ ಕುಸಿಯುತ್ತಿತ್ತು. ಸಾಮಂತರಾಜರು ಹೆಚ್ಚುಹೆಚ್ಚು ಸ್ವತಂತ್ರರಾಗಿ ವರ್ತಿಸತೊಡಗಿದರು. ಪಾಂಡ್ಯ ನಾಡಿನಲ್ಲಿ ಸಿಂಹಾಸನಕ್ಕಾಗಿ ನಡೆದ ಹೋರಾಟದಲ್ಲಿ ಚೋಳರೂ ಸಿಂಹಳದವರೂ ವಿರುದ್ಧ ಪಕ್ಷ ವಹಿಸಿ ಕಾದಾಡಿದರು. ಪರಾಕ್ರಮ ಮತ್ತು ಕುಲಶೇಖರರಲ್ಲಿ ನಡೆದ ಅಂತರ್ಯುದ್ಧದಲ್ಲಿ ಪರಾಕ್ರಮನ ಪಕ್ಷ ವಹಿಸಿ ಸಿಂಹಳದ ಪರಾಕ್ರಮಬಾಹು ಲಂಕಾಪುರನೊಂದಿಗೆ ಸೈನ್ಯ ಕಳುಹಿಸಿದ. ಆದರೆ ಕುಲಶೇಖರ ಅವನು ಬರುವುದರೊಳಗೆ ಪರಾಕ್ರಮನನ್ನೂ ಅವನ ತಾಯಿ ಮತ್ತು ಮಕ್ಕಳನ್ನೂ ಕೊಂದುಹಾಕಿದ್ದ. ಆದರೂ ಯುದ್ಧ ನಡೆಯಿತು. ಇದರಿಂದ ಕುಲಶೇಖರ ಚೋಳರ ಸಹಾಯ ಕೋರಿದ. ಮೊದಲು ಸಿಂಹಳದ ಸೈನ್ಯಕ್ಕೆ ಗೆಲುವು ಉಂಟಾಗಿ, ಪರಾಕ್ರಮನ ಮಕ್ಕಳಲ್ಲಿ ಒಬ್ಬನಾಗಿದ್ದ ವೀರಪಾಂಡ್ಯನನ್ನು ಸಿಂಹಾಸನದ ಮೇಲೆ ಲಂಕಾಪುರ ಕೂಡಿಸಿದ. ಆದರೆ ಚೋಳರ ಕಡೆ ಪಲ್ಲವರಾಯ ಸಿಂಹಳದ ಸೈನ್ಯವನ್ನು ಸೋಲಿಸಿ ಲಂಕಾಪುರ ಮತ್ತು ಇತರ ದಂಡನಾಯಕರ ತಲೆಗಳನ್ನು ಊರ ಬಾಗಿಲಿಗೆ ನೇತುಹಾಕಿಸಿದ. ಈ ಸುದ್ಧಿಯನ್ನು ಕೇಳಿದ ಪರಾಕ್ರಮಬಾಹು ಮತ್ತೊಮ್ಮೆ ಯುದ್ಧಸನ್ನಾಹ ನಡೆಸುತ್ತಿರುವಷ್ಟರಲ್ಲಿ ಪಲ್ಲವರಾಯ ಸಿಂಹಳಕ್ಕೆ ದಂಡೆತ್ತಿ ಹಲವು ಸ್ಥಳಗಳನ್ನು ಹಿಡಿದ. ಪಾಂಡ್ಯನ ಪಕ್ಷ ವಹಿಸಿದ್ದರಿಂದ ತನಗಾದ ಅನಾಹುತವನ್ನರಿತ ಪರಾಕ್ರಮಬಾಹು ಆ ಪಕ್ಷವನ್ನು ಬಿಟ್ಟು, ಕುಲಶೇಖರನೇ ಪಾಂಡರಾಜ್ಯದ ಉತ್ತರಾಧಿಕಾರಿಯೆಂದು ತಿಳಿಸಿ ಚೋಳರಿಗೆ ವಿರುದ್ಧವಾಗಿ ಅವನೊಡನೆ ಸ್ನೇಹ ಬೆಳೆಸಿದ. ಕುಲಶೇಖರನ ದ್ರೋಹವನ್ನರಿತ ಪಲ್ಲವರಾಯ ಕುಲಶೇಖರನನ್ನಟ್ಟಿ ವೀರಪಾಂಡ್ಯನಿಗೆ ಪಟ್ಟಗಟ್ಟಿದ.

ರಾಜರಾಜನ ಅನಂತರ ಪಟ್ಟಕ್ಕೆ ಬಂದ 2ನೆಯ ರಾಜಾಧಿರಾಜನ ಕಾಲದಲ್ಲಿ ಕೇಂದ್ರ ಬಲ ಮತ್ತಷ್ಟು ಕುಗ್ಗಿ ಸಾಮಂತರ ಪ್ರಾಬಲ್ಯ ಹೆಚ್ಚಾಗುತ್ತಾ ಬಂತು. ಅವರು ತಮ್ಮತಮ್ಮಲ್ಲೇ ಕಾದಾಡತೊಡಗಿದರು. 1182ರ ವರೆಗೂ ಇಮ್ಮಡಿ ರಾಜಾಧಿರಾಜ ಆಳುತ್ತಿದ್ದರೂ ಮುಮ್ಮಡಿ ಕುಲೋತ್ತುಂಗ 1178ರಲ್ಲೇ ಆಡಳಿತ ನಡೆಸಲಾರಂಭಿಸಿದ. ಈ ಕುಲೋತ್ತುಂಗನಿಗೂ ರಾಜಾಧಿರಾಜನಿಗೂ ಇದ್ದ ಸಂಬಂಧ ಎಂಥದೆಂಬುದು ತಿಳಿಯದು. ಕುಲೋತ್ತುಂಗನೇ ಚೋಳ ಚಕ್ರವರ್ತಿಗಳಲ್ಲಿ ಕಡೆಯವನೆಂದು ಹೇಳಬಹುದು. ಅವನು ಪಟ್ಟಕ್ಕೆ ಬರುತ್ತಿದ್ದಂತೆಯೇ ಪಾಂಡ್ಯ ರಾಜ್ಯದ ಕಡೆ ಗಮನ ಹರಿಸಬೇಕಾಯಿತು. ವೀರ ಪಾಂಡ್ಯನೊಡನೆ ಸಿಂಹಳದ ಪರಾಕ್ರಮಬಾಹು ಸೇರಿ ಚೋಳರನ್ನೆದುರಿಸುವ ಸಿದ್ಧತೆಯಲ್ಲಿದ್ದ. ಬಹುಶಃ ಕುಲಶೇಖರನಿಗೆ ಸಂಬಂಧಿಸಿದ ವಿಕ್ರಮಪಾಂಡ್ಯ ವೀರಪಾಂಡ್ಯನಿಗೆ ಎದುರಾಗಿ ಕುಲೋತ್ತುಂಗನ ಸಹಾಯ ಬೇಡಿದ. ಈ ಯುದ್ಧದಲ್ಲಿ ವೀರಪಾಂಡ್ಯ ಓಡಿ ಹೋದ. ವಿಕ್ರಮಪಾಂಡ್ಯ ಮಧುರೆಯಲ್ಲಿ ಸಿಂಹಾಸನವನ್ನೇರಿದ. ವೀರಪಾಂಡ್ಯ ತನ್ನ ಸಂಗಡಿರೊಡಗೂಡಿ ಮತ್ತೆ ಯುದ್ಧಕ್ಕೆ ಬಂದಾಗ ನೆತ್ತೂರು ಎಂಬಲ್ಲಿ ಸಂಪೂರ್ಣವಾಗಿ ಸೋತುಹೋದ. ಅನಂತರ ವೀರಪಾಂಡ್ಯ ಶರಣಾಗತನಾದ. ಹೊಯ್ಸಳರೊಂದಿಗೆ ಕುಲೋತ್ತುಂಗ ಮಧುರಬಾಂಧವ್ಯ ಹೊಂದಿದ್ದಂತೆ ತೋರುತ್ತದೆ. ಚೋಳ ಮನೆತನದ ಚೋಳಮಹಾದೇವಿಯನ್ನು ಇಮ್ಮಡಿ ಬಲ್ಲಾಳ ಲಗ್ನವಾಗಿದ್ದ. ಬಹುಶಃ ತನ್ನ ಮಗಳು ಸೋಮಲದೇವಿಯನ್ನು ಕುಲೋತ್ತುಂಗನಿಗೆ ಕೊಟ್ಟಿದ್ದ.

ವಿಕ್ರಮಪಾಂಡ್ಯನಾದ ಮೇಲೆ ಜಟಾವರ್ಮ ಕುಲಶೇಖರ 1190ರಲ್ಲಿ ಪಾಂಡ್ಯ ಸಿಂಹಾಸನವನ್ನೇರಿದ. ಇವನು ಚೋಳರ ಆಧಿಪತ್ಯವನ್ನು ತಿರಸ್ಕರಿಸಿದ. ಆದ್ದರಿಂದ 1205ರಲ್ಲಿ ಕುಲೋತ್ತುಂಗ ಮೂರನೆಯ ಬಾರಿಗೆ ಪಾಂಡ್ಯನಾಡಿಗೆ ದಂಡೆತ್ತಿ ಹೋಗಿ ರಾಜಧಾನಿಯನ್ನು ಸೂರೆಮಾಡಿದ. 10 ವರ್ಷಗಳ ಅನಂತರ ಕುಲೋತ್ತುಂಗನ ಆಳ್ವಿಕೆಯ ಕೊನೆಯಲ್ಲಿ ಪಾಂಡ್ಯರಾಜ್ಯಕ್ಕೆ ಪಟ್ಟಕ್ಕೆ ಬಂದ ಜಟಾವರ್ಮ ಕುಲಶೇಖರನ ತಮ್ಮ ಮಾರವರ್ಮ ಸುಂದರಪಾಂಡ್ಯ ಇದಕ್ಕೆ ಸೇಡು ತೀರಿಸಿಕೊಳ್ಳಲು ಚೋಳ ನಾಡಿನ ಮೇಲೆ ದಂಡೆತ್ತಿ ಒರೆಯೂರು, ತಂಜಾವೂರುಗಳನ್ನು ಸೂರೆಮಾಡಿ ತನ್ನ ಅಧಿರಾಜನಾಗಿದ್ದ ಕುಲೋತ್ತುಂಗನನ್ನೂ ಅವನ ಮಗ ಯುವರಾಜ ಮುಮ್ಮಡಿ ರಾಜರಾಜನನ್ನೂ ದೇಶಾಂತರ ಹೋಗುವಂತೆ ಮಾಡಿ ವೀರಾಭಿಷೇಕ ಮಾಡಿಕೊಂಡ. ಹಿಂದೆ ಪಾಂಡ್ಯ ರಾಜ್ಯದ ಮೇಲೆ ಕುಲೋತ್ತುಂಗ ನಡೆಸಿದ್ದ ಕ್ರೌರ್ಯವನ್ನು ಸುಂದರ ಪಾಂಡ್ಯ ಅಷ್ಟೇ ಬಿರುಸಾಗಿ ಹಿಂದಿರುಗಿಸಿದ್ದ. ಚೋಳರ ಸ್ವಾತಂತ್ರ್ಯಹರಣವಾಯಿತು. ಸುಂದರ ಪಾಂಡ್ಯ ಕೊನೆಗೆ ಚೋಳರಾಜ್ಯವನ್ನು ಕುಲೋತ್ತುಂಗನಿಗೆ ಹಿಂದಿರುಗಿಸಬೇಕಾಗಿ ಬಂದರೂ ಅಧಿರಾಜನಾಗಿದ್ದ ಕುಲೋತ್ತುಂಗ ಸಾಮಂತನಾಗಿದ್ದ ಪಾಂಡ್ಯನನ್ನು ಅಧಿರಾಜನೆಂದು ಒಪ್ಪಿಕೊಳ್ಳಬೇಕಾಯಿತು. ಆದರೆ ಸುಂದರಪಾಂಡ್ಯ ಚೋಳರಾಜ್ಯವನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಳ್ಳದೆ ಕುಲೋತ್ತುಂಗನಿಗೆ ಹಿಂದಿರುಗಿಸಲು ಮುಖ್ಯವಾದ ಕಾರಣ ಆಗ ಕರ್ನಾಟಕದಲ್ಲಿ ಪ್ರಬಲರಾಗಿದ್ದ ಹೊಯ್ಸಳರ ಮಧ್ಯಪ್ರವೇಶ. ಯುದ್ಧದಲ್ಲಿ ಹಿಮ್ಮೆಟ್ಟಿ ಓಡಿಹೋದ ಕುಲೋತ್ತುಂಗ ಹೊಯ್ಸಳ ಇಮ್ಮಡಿ ಬಲ್ಲಾಳನ ಸಹಾಯವನ್ನು ಕೋರಿದ. ಬಲ್ಲಾಳ ತನ್ನ ಮಗ ನರಸಿಂಹನನ್ನು ಸೈನ್ಯದೊಡನೆ ಶ್ರೀರಂಗದ ಕಡೆಗೆ ಕಳುಹಿಸಿದ. ಸುಂದರಪಾಂಡ್ಯ ಸಂಧಿ ಮಾಡಿಕೊಳ್ಳಬೇಕಾಯಿತು. ಚೋಳರಾಜ್ಯವನ್ನು ಕುಲೋತ್ತುಂಗನಿಗೆ ಬಿಟ್ಟುಕೊಡಬೇಕಾಯಿತು. ಬಲ್ಲಾಳನಿಗೆ ಚೋಳರಾಜ್ಯ ಪ್ರತಿಷ್ಠಾಚಾರ್ಯ, ಪಾಂಡ್ಯ ಗಜಕೇಸರಿ ಎಂಬ ಬಿರುದುಗಳು ಬಂದುವು. ಹಾಗೆಯೇ ನರಸಿಂಹನನ್ನೂ ಶಾಸನಗಳು ಚೋಳಕುಲರಕ್ಷಕನೆನ್ನುತ್ತವೆ; ಮತ್ತು ಅವನು ಆ ಯುದ್ಧದಲ್ಲಿ ತೋರಿಸಿದ ಪರಾಕ್ರಮವನ್ನು ವರ್ಣಿಸುತ್ತವೆ; ಇದಾದ ಸ್ವಲ್ಪ ಕಾಲದಲ್ಲೇ (1218) ಕುಲೋತ್ತುಂಗ ತೀರಿಕೊಂಡ.

ಚಿತ್ರ-ಚೋಳ-ವಂಶಾವಳಿ-1

ಕುಲೋತ್ತುಂಗನಿಗೆ ವೀರರಾಜೇಂದ್ರದೇವ ಎಂಬ ಮತ್ತೊಂದು ಹೆಸರು ಇತ್ತು. ಕೊಮರ ಅಥವಾ ಕುಮಾರ ಕುಲೋತ್ತುಂಗ, ಮುಡಿನ ವಿಂಗುಶೋ¿, ತ್ರಿಭುವನವೀರ ಚೋಳದೇವ, ತ್ರಿಭುವನ ಚಕ್ರವರ್ತಿ ಚೋಳ ಕೇರಳದೇವ ಮುಂತಾದವು ಇವನ ಬಿರುದುಗಳು. ಗಂಗೈಕ್ಕೊಂಡಚೋಳಪುರ ಇವನ ರಾಜಧಾನಿಯಾಗಿತ್ತು. ತಂಜಾವೂರು, ಒರೆಯೂರು, ಆಯಿರತ್ತಳಿ ಮತ್ತು ವಿಕ್ರಮಚೋಳಪುರಗಳು ಮುಖ್ಯಪಟ್ಟಣಗಳಾಗಿದ್ದುವು. ಕುಲೋತ್ತುಂಗ ಅನೇಕ ದೇವಾಲಯಗಳನ್ನು ಕಟ್ಟಿಸಿದ. ಅವುಗಳಲ್ಲೆಲ್ಲ ತ್ರಿಭುವನದಲ್ಲಿ ಕಟ್ಟಸಿದ ತ್ರಿಭುವನೇಶ್ವರ ದೇವಾಲಯ (ಕಂಪಹರೇಶ್ವರ) ಭವ್ಯವಾಗಿದೆ. ತಂಜಾವೂರಿನ ಬೃಹದೀಶ್ವರದ ಮಾದರಿಯಲ್ಲೇ ಇರುವ ಈ ದೇವಾಲಯದ ಹೊರಗೋಡೆಗಳ ಮೇಲೆ ರಾಮಾಯಣ, ಭಾರತಗಳಲ್ಲದೆ ಅಲಂಕರಣ ಶಿಲ್ಪಗಳೂ ತುಂಬಿವೆ. ಇದರೊಂದಿಗೆ ಚಿದಂಬರದಲ್ಲಿ ಸಭಾಪತಿಯ ಮುಖಮುಂಟಪ ಪ್ರಾಕಾರ ಹಮ್ರ್ಯ ಮತ್ತು ಶಿವಕಾಮಿ ದೇವಾಲಯದ ಮೇಲಿನ ಗೋಪುರಗಳನ್ನೂ ತಿರುವಾಯೂರಿನಲ್ಲಿ ಸಭಾಮಂಟಪ ಮತ್ತು ವಾಲ್ಮೀಕೇಶ್ವರ ದೇವಾಲಯದ ಬೃಹದ್ಗೋಪುರ ಮೊದಲಾದವನ್ನೂ ಕಟ್ಟಿಸಿದ.

ಕುಲೋತ್ತುಂಗನ ಅನಂತರ ಮುಮ್ಮಡಿ ರಾಜರಾಜ ಪಟ್ಟಕ್ಕೆ ಬಂದ. ಇವನು ದಕ್ಷನಾಗಿರಲಿಲ್ಲ. ದಕ್ಷಿಣದಲ್ಲಿ ಪಾಂಡ್ಯರು, ಪಶ್ಚಿಮದಲ್ಲಿ ಹೊಯ್ಸಳರು ಪ್ರಬಲರಾಗಿದ್ದರು. ಇವರಿಬ್ಬರಿಗೂ ಇದ್ದ ವೈಷಮ್ಯವನ್ನೇ ಚೋಳರಾಜ್ಯದ ಉಳಿವು ಹೊಂದಿಕೊಂಡಿತ್ತು. ಸುಂದರಪಾಂಡ್ಯ ಕೈಯಲ್ಲಿ ಇವರು ಸೋತುದರಿಂದ ಚೋಳರ ಸಾಮಂತರು ತಮ್ಮ ನಿಷ್ಠೆಯನ್ನು ಬದಲಾಯಿಸಲು ಸಿದ್ಧರಾಗಿದ್ದರು. ರಾಜರಾಜ ತನ್ನ ಪರಿಸ್ಥಿತಿಯನ್ನರಿಯದೆ ಪಾಂಡ್ಯರ ಅಧಿಕಾರವನ್ನು ಅಲ್ಲಗಳೆದ, ಸುಂದರಪಾಂಡ್ಯ ಅವನನ್ನು ಸೋಲಿಸಿ ಅಪಾರವಾದ ಐಶ್ವರ್ಯವನ್ನು ಕೊಳ್ಳೆ ಹೊಡೆದು ಅವನ ರಾಣಿಯನ್ನು ಸೆರೆಹಿಡಿದ. ರಾಜರಾಜ ತನ್ನ ಮಿತ್ರರೊಂದಿಗೆ ಕೂಡಿಕೊಳ್ಳಲು ಪ್ರಯತ್ನಿಸಿದ. ಆದರೆ ಪಾಂಡ್ಯರ ಪಕ್ಷಕ್ಕೆ ಸೇರಿದ್ದ ಕಾಡನ ಕೊಪ್ಪೆರುಂಜಿಂಗ ಅವನನ್ನು ತೆಳ್ಳಾರು ಎಂಬಲ್ಲಿ ಸೋಲಿಸಿ ಸೆರೆಹಿಡಿದ. ಇದನ್ನು ಕೇಳಿದ ಹೊಯ್ಸಳ ನರಸಿಂಹ ಅವನ ಸಹಾಯಕ್ಕೆ ಬಂದು, ಕಾಡವನ ಮಿತ್ರನಾಗಿದ್ದ, ಮಗರ ರಾಜ್ಯದ ರಾಜನನ್ನು ಸೋಲಿಸಿ ಶ್ರೀರಂಗದ ಕಡೆಗೆ ಹೊರಟು ತನ್ನ ದಂಡನಾಯಕರು ಅಪ್ಪಣ್ಣ ಮತ್ತು ಗೋಪಯ್ಯರನ್ನು ಕೊಪ್ಪೆರುಂಜಿಂಗನ ಮೇಲೆ ಕಳುಹಿಸಿದ. ಅವರು ಕೊಪ್ಪೆರುಂಜಿಂಗನ ಹಲವು ಊರುಗಳನ್ನು ಹಿಡಿದ ಶೆಂದಮಂಗಲಕ್ಕೆ ಮುತ್ತಿಗೆ ಹಾಕಿದರು. ಕೊಪ್ಪೆರುಂಜಿಂಗ ಚೋಳರಾಜನನ್ನು ಸೆರೆಯಿಂದ ಬಿಡಿಸಿದ. ಅದೇ ಸಮಯದಲ್ಲಿ ನರಸಿಂಹನೂ ಸುಂದರ ಪಾಂಡ್ಯನನ್ನು ಸೋಲಿಸಿದ. ಹೀಗೆ ಎರಡನೆಯ ಬಾರಿಗೆ ಚೋಳರಾಜ್ಯ ಪಾಂಡ್ಯರಾಜ್ಯದಲ್ಲಿ ವಿಲೀನವಾಗುವ ಅವಕಾಶ ಹೊಯ್ಸಳದಿಂದ ತಪ್ಪಿತು. ರಾಜರಾಜ ಚೋಳಚಕ್ರಾಧಿಪತ್ಯದಲ್ಲಿ ಮುಂದುವರಿದ. ಮುಮ್ಮಡಿ ಕುಲೋತ್ತುಂಗನ ಕಾಲದಲ್ಲಿದ್ದಷ್ಟೇ ವಿಸ್ತಾರವಾಗಿದ್ದರೂ ಚೋಳರಾಜ್ಯ ಶಕ್ತಿಹೀನವಾಗಿತ್ತು; ಮತ್ತು ಈ ರಾಜ್ಯದ ಮೇಲೆ ಹೊಯ್ಸಳರ ಪ್ರಭಾವ ಹೆಚ್ಚುತ್ತ ಹೋಯಿತು. ಈ ಪ್ರಭಾವವನ್ನು ತಡೆಯಲು ರಾಜರಾಜನಿಗೆ ಸಾಧ್ಯವಾಗದಾಯಿತು. ಪ್ರಬಲನಾದ ಜಟಾವರ್ಮ ಸುಂದರಪಾಂಡ್ಯ ಪಟ್ಟಕ್ಕೆ ಬರುವವರೆಗೂ ಪಾಂಡ್ಯರೂ ಹೊಯ್ಸಳರ ಪ್ರಭಾವಕ್ಕೆ ಮನ್ನಣೆ ಕೊಡಬೇಕಾಯಿತು.

1246ರಲ್ಲೇ ಯುವರಾಜನಾಗಿ ಆರಿಸಲ್ಪಟ್ಟ ರಾಜೇಂದ್ರ 1260ರಲ್ಲಿ, ರಾಜರಾಜ ಕಾಲವಾದ ಮೇಲೆ, ಪಟ್ಟಕ್ಕೆ ಬಂದ. ಇವನು ರಾಜರಾಜನಿಗಿಂತ ಶಕ್ತನಾದ ದೊರೆಯಾಗಿದ್ದು ಯುವರಾಜನಾಗಿದ್ದಾಗಲೇ ಹೆಚ್ಚು ಪ್ರಭಾವಶಾಲಿಯಾಗಿದ್ದ. ಇವನ ಪ್ರಶಸ್ತಿಗಳಲ್ಲಿ ಪಾಂಡ್ಯನ ತಲೆಯನ್ನು ಕತ್ತರಿಸಿದ ಮತ್ತು ಪಾಂಡ್ಯ ರಾಜ್ಯವನ್ನು ಸೂರೆಹೊಡೆದ ವಿಷಯವಿದೆ. ಪಾಂಡ್ಯ ರಾಜ್ಯದಲ್ಲಿ 1ನೆಯ ಮಾರವರ್ಮ ಸುಂದರ ಪಾಂಡ್ಯನ ಅನಂತರ ಬಂದ ಇಮ್ಮಡಿ ಸುಂದರ ಪಾಂಡ್ಯ ಅಷ್ಟು ಶಕ್ತನಾಗಿರಲಿಲ್ಲ. ಆಗ ಅವನ ರಾಜ್ಯದಲ್ಲೂ ಹೊಯ್ಸಳರ ಪ್ರಭಾವ ಹೆಚ್ಚಿತು. ರಾಜೇಂದ್ರ ಆ ಕಾಲದಲ್ಲಿ ಪಾಂಡ್ಯರ ಮೇಲೆ ಯುದ್ಧ ಹೂಡಿ ಜಯ ಪಡೆದಿರಬಹುದು. ಆದರೆ ಹೊಯ್ಸಳರನ್ನು ಧಿಕ್ಕರಿಸಿ ಪಾಂಡ್ಯರ ಮೇಲೆ ಅವನು ನುಗ್ಗಿದಾಗ ಹೊಯ್ಸಳ ವೀರಸೋಮೇಶ್ವರ ಪಾಂಡ್ಯರ ಪಕ್ಷ ವಹಿಸಿ ಚೋಳ ರಾಜೇಂದ್ರನನ್ನು ಸೋಲಿಸಿ ಪಾಂಡ್ಯಕುಲ ಸಂರಕ್ಷಣ ದಕ್ಷದಕ್ಷಿಣಭುಜನೆಂಬ ಬಿರುದು ಪಡೆದ. ಹೀಗೆ ಹೊಯ್ಸಳರು ಪಾಂಡ್ಯ ಚೋಳರಲ್ಲಿ ಕಡಿಮೆ ಬಲವುಳ್ಳವರ ಪಕ್ಷ ವಹಿಸಿ ಅವರಿಬ್ಬರಲ್ಲಿ ಸಮತೋಲನವನ್ನುಂಟು ಮಾಡಿ ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಂಡರು. ಪಾಂಡ್ಯರ ಮೇಲಿನ ಯುದ್ಧವನ್ನು ರಾಜೇಂದ್ರ ಕೈಬಿಡಬೇಕಾಯಿತು. ಇದರಿಂದ ಸೋಮೇಶ್ವರನಿಗೂ ರಾಜೇಂದ್ರನಿಗೂ ವೈಮನಸ್ಯ ಬೆಳೆಯಿತು. ಆಗ ಹೊಯ್ಸಳ ವಿರೋಧಿಯಾಗಿದ್ದ ರಾಜೇಂದ್ರ ನೆಲ್ಲೂರಿನ ತೆಲುಗು ಚೋಡರಾಜ ತಿಕ್ಕನ್ನಪನ ಸ್ನೇಹ ಬೆಳೆಸಿದ. ತಿಕ್ಕನ್ನಪ ಸೋಮೇಶ್ವರನನ್ನು ಸೋಲಿಸಿ ಚೋಳಸ್ಥಾಪನಾಚಾರ್ಯ ಎಂಬ ಬಿರುದು ಪಡೆದಂತೆ ತಿಳಿದುಬರುತ್ತದೆ. ಆದರೆ ಮುಂದೆ ಚೋಳರೂ ಹೊಯ್ಸಳರೂ ಸ್ನೇಹದಿಂದಿದ್ದು ಹೆಚ್ಚು ನಿಕಟವರ್ತಿಗಳಾದರು. ಇದಕ್ಕೆ ಕಾರಣ ಪಾಂಡ್ಯ ಪ್ರಾಬಲ್ಯ. 1251ರಲ್ಲಿ ಪಟ್ಟಕ್ಕೆ ಬಂದ ಜಟಾವರ್ಮ ಸುಂದರಪಾಂಡ್ಯ ಅತ್ಯಂತ ಪ್ರಬಲನಾಗಿದ್ದು ತನ್ನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಚೋಳರು ಮತ್ತು ಹೊಯ್ಸಳರನ್ನು ಚೋಳ ರಾಜ್ಯದಿಂದ ಅಟ್ಟಿದ. ಸೋಮೇಶ್ವರ 1264ರಲ್ಲಿ ಮತ್ತೆ ಯುದ್ಧಕ್ಕೆ ಬಂದಾಗ ಕಣ್ಣನ್ನೂರಿನಲ್ಲಿ ಯುದ್ಧ ನಡೆದು ಸೋಮೇಶ್ವರ ಹತನಾದ. ಜಟಾವರ್ಮ ಬಹು ಬೇಗನೆ ಕಾಡವ, ತೆಲುಗು ಚೋಳರನ್ನು ಸೋಲಿಸಿ ವೀರಾಭಿಷೇಕ ಮಾಡಿಕೊಂಡ. ರಾಜೇಂದ್ರ ಮತ್ತು ಹೊಯ್ಸಳ ರಾಮನಾಥರಿಬ್ಬರೂ ಈ ಪ್ರಬಲ ಶತ್ರುವಿನ ಮುಂದೆ ಒಂದಾಗಿ ಯುದ್ಧ ಮಾಡಬೇಕಾಯಿತು. 1279ರಲ್ಲಿ ಜಟಾವರ್ಮನ ಮಗ ಮಾರವರ್ಮ ಕುಲಶೇಖರ ಇವರಿಬ್ಬರನ್ನೂ ಸೋಲಿಸಿದ. ಅಲ್ಲಿಗೆ 400 ವರ್ಷಗಳಷ್ಟು ದೀರ್ಘಕಾಲ ವೈಭವದಿಂದ ಮೆರೆದ ಚೋಳ ಸಾಮ್ರಾಜ್ಯ ಹೆಸರಿಲ್ಲದಂತೆ ಉಡಗಿದಂತೆ ಆಯಿತು. ಪಾಂಡ್ಯ ಚಕ್ರಾಧಿಪತ್ಯದಲ್ಲಿ ಚೋಳ ರಾಜ್ಯ ಒಂದು ಪಾಂ್ರತ್ಯವಾಗಿ, ಚೋಳಮಂಡಲವೆಂಬ ಹೆಸರಿನಿಂದ ಬಹುಕಾಲ ಮುಂದುವರಿಯಿತು. ಮುಂದೆ ಚೋಳಮಂಡಲ ಎಂಬ ಹೆಸರು ಅಪಭ್ರಂಶ ಹೊಂದಿ ಕೋರಮಂಡಲ ಎಂದು ರೂಪಾಂತರ ಹೊಂದಿತ್ತು. ಚೋಳ ವಂಶದವರೆಂದು ಹೇಳಿಕೊಳ್ಳುವ ಕೆಲವು ಚಿಕ್ಕಪುಟ್ಟ ಮಾಂಡಲಿಕರು ಸ್ವಲ್ಪ ಕಾಲ ಅಲ್ಲಲ್ಲಿ ಆಳುತ್ತಿದ್ದರು. ಆಡಳಿತ : ಚೋಳ ರಾಜ್ಯದಲ್ಲಿ ಆ ಕಾಲದ ಇತರ ರಾಜ್ಯಗಳಲ್ಲಿದ್ದಂತೆ ಆಡಳಿತದ ಎಲ್ಲ ವಿಷಯಗಳಲ್ಲೂ ರಾಜನದೇ ಪರಮಾಧಿಕಾರ, ರಾಜತ್ವ ವಂಶಪಾರಂಪರ್ಯವಾಗಿ ನಡೆದು ಬರುತ್ತಿತ್ತು. ರಾಜರಾಜನ ಕಾಲದಲ್ಲಿ ವಿಸ್ತಾರವಾದ ಸಾಮ್ರಾಜ್ಯ ಹೊಂದಿದ್ದ ಚೋಳ ಚಕ್ರವರ್ತಿಗಳು ತಮ್ಮ ರಾಜ್ಯದಲ್ಲಿ ಹುಟ್ಟುವಳಿಯಾಗುತ್ತಿದ್ದ ಅಥವಾ ಯುದ್ಧಗಳಲ್ಲಿ ದೋಚಿ ತಂದ ಅಪಾರ ಐಶ್ವರ್ಯವನ್ನು ತಮ್ಮ ವೈಭವಯುತ ಜೀವನಕ್ಕೆ ವಿನಿಯೋಗಿಸುವುದರೊಂದಿಗೆ ರಾಜ್ಯರಕ್ಷಣೆಗೂ ಅನೇಕ ಜನೋಪಯುಕ್ತ ಸಾಮಾಜಿಕ ಕಾರ್ಯಗಳಿಗೂ ಉಪಯೋಗಿಸುತ್ತಿದ್ದರು. ಹಬ್ಬ ಹರಿದಿನಗಳು ಮತ್ತು ವಿಶೇಷ ಉತ್ಸವಗಳು ವಿಜೃಂಭಣೆಯಿಂದ ನಡೆಯುತ್ತಿದ್ದವು. ರಾಜರ ಪಟ್ಟಾಭಿಷೇಕಗಳು ವಿಶೇಷವಾದ ವೈಭವದಿಂದ ಕೂಡಿರುತ್ತಿದ್ದುವು. ಮುಖ್ಯಪಟ್ಟಣಗಳಾದ ತಂಜಾವೂರು, ಗಂಗೈಕ್ಕೊಂಡ ಚೋಳಪುರ, ಚಿದಂಬರ, ಕಾಂಚೀಪುರ ಮೊದಲಾದೆಡೆ ನಡೆಯುತ್ತಿದ್ದುವು, ದೊರೆಗಳು ಆ ಸಂದರ್ಭದಲ್ಲಿ ಉದಾರವಾದ ದಾನಧರ್ಮಾದಿಗಳನ್ನು ಮಾಡುತ್ತಿದ್ದರು. ಯುದ್ಧದಲ್ಲಿ ಗೆದ್ದು, ಶತ್ರುರಾಜ್ಯವನ್ನಾಕ್ರಮಿಸಿಕೊಂಡಾಗ ಅವರು ಶತ್ರುವಿನ ರಾಜಧಾನಿಯಲ್ಲೇ ವೀರಾಭಿಷೇಕ ಮಾಡಿಕೊಳ್ಳುತ್ತಿದ್ದದ್ದೂ ಉಂಟು. ರಾಜನ ಹಿರಿಯ ಮಗನೇ ಪಟ್ಟಕ್ಕೆ ಬರುವ ರೂಢಿ ಇತ್ತು. ರಾಜರು ತಮ್ಮ ಜೀವಿತಕಾಲದಲ್ಲೇ ಯುವರಾಜನನ್ನು ಆರಿಸುವ ಪದ್ಧತಿ ಇಟ್ಟುಕೊಂಡಿದ್ದರಿಂದ ಉತ್ತರಾಧಿಕಾರಕ್ಕಾಗಿ ಪೈಪೋಟಿಗೆ ತಡೆಯುಂಟಾಗುತ್ತಿತ್ತು. ಆದರೂ ಒಮ್ಮೊಮ್ಮೆ ಪೈಪೋಟಿ ನಡೆಯುತ್ತಿದ್ದದ್ದುಂಟು. ಇಮ್ಮಡಿ ಆದಿತ್ಯನನ್ನು ಉತ್ತಮಚೋಳ ಕೊಲ್ಲಿಸಿ, ತನ್ನನ್ನು ಉತ್ತರಾಧಿಕಾರಿಯನ್ನಾಗಿ ಆರಿಸುವಂತೆ ಪರಾಂತಕನ ಮೇಲೆ ಒತ್ತಡ ತಂದದ್ದು ಒಂದು ನಿದರ್ಶನ. ರಾಜಪರಿವಾರ ಹಿರಿದಾಗಿತ್ತು. ಅರಮನೆಯಲ್ಲಿ ಬೇರೆಬೇರೆ ಕೆಲಸಗಳನ್ನು ನೋಡಿಕೊಳ್ಳಲು ಬೇರೆಬೇರೆ ಸೇವಕ ಪಡೆಗಳೇ ಇರುತ್ತಿದ್ದುವು. ಅರಮನೆಯ ಊಳಿಗದವರನ್ನು ಬೇರೆಬೇರೆ ವೇಳೆಗಳಾಗಿ ಏರ್ಪಡಿಸಲಾಗಿತ್ತು. ಅವರು ರಾಜಧಾನಿಯ ಬೇರೆಬೇರೆ ಭಾಗಗಳಲ್ಲಿ ನೆಲೆಸಿರುತ್ತಿದ್ದರು. ಭೋಜನಕೂಟಗಳಲ್ಲಿ ರಾಜನ ಅವಶ್ಯಕತೆಗಳನ್ನು ನೋಡಿಕೊಳ್ಳಲೂ ಅಂಗರಕ್ಷಣೆಗೂ 3,000 ಸುಂದರಿಯರು ಸರದಿಯ ಮೇಲೆ ಹಾಜರಿರುತ್ತಿದ್ದರೆಂದು ಚೀನೀ ಯಾತ್ರಿಕನೊಬ್ಬ ತಿಳಿಸಿದ್ದಾನೆ. ರಾಜನಂತೆ ಉಳಿದ ರಾಜಮನೆತದನವರೂ ತಮ್ಮ ಅಂತಸ್ತಿಗೆ ತಕ್ಕಂತೆ ಊಳಿಗದವರ ಪಡೆ ಹೊಂದಿರುತ್ತಿದ್ದರು.

ಚೋಳ ಚಕ್ರಾಧಿಪತ್ಯದ ಆಡಳಿತ ಕೇಂದ್ರೀಕೃತವಾಗಿ ಹೆಚ್ಚು ಬಿಗಿಯದಾಗಿತ್ತು. ಕೇಂದ್ರಕ್ಕೂ ಸಾಮಂತರಿಗೂ ನಡುವಣ ಆಗುಹೋಗುಗಳನ್ನು ಸಂಧಿವಿಗ್ರಹಿಗಳು ನೋಡಿಕೊಳ್ಳುತ್ತಿದ್ದರು. ಮುಖ್ಯಭಾಗಗಳಲ್ಲಿ ರಾಜಕುಮಾರರನ್ನು ರಾಜಪ್ರತಿನಿಧಿಗಳನ್ನಾಗಿ ನೇಮಿಸಲಾಗುತ್ತಿತ್ತು. ಸೋತ ರಾಜರನ್ನು ತಮ್ಮ ಸಾಮಂತರನ್ನಾಗಿ ಸ್ವೀಕರಿಸಿ ಅವರಿಂದ ಕಪ್ಪಗಳನ್ನು ಪಡೆಯುವಷ್ಟಕ್ಕೇ ಚೋಳ ರಾಜರು ತೃಪ್ತರಾಗಿರಲಿಲ್ಲ. ರಾಜ್ಯಗಳನ್ನು ಗೆದ್ದಂತೆಲ್ಲ ಆ ಭಾಗಗಳನ್ನು ನೇರವಾಗಿ ಸಾಮ್ರಾಜ್ಯಕ್ಕೆ ಸೇರಿಸಿಕೊಂಡು ಅಲ್ಲಿ ತಮ್ಮ ಅಧಿಕಾರಿಗಳನ್ನು ನೇಮಿಸುವ ಪದ್ಧತಿ ಬೆಳೆಸಿಕೊಂಡರು. ರಾಜರಾಜ ಗಂಗಮಂಡಲವನ್ನು ಗೆದ್ದಾಗ ಗಂಗವಂಶ ಅಳಿಸಿ ಹೋಯಿತು. ಗಂಗಮಂಡಲ ಚೋಳಸಾಮ್ರಾಜ್ಯದ ಒಂದು ಪ್ರಾಂತ್ಯವಾಯಿತು. ತಲಕಾಡಿನಲ್ಲಿ ಚೋಳ ಅಧಿಕಾರ ಆಡಳಿತ ನಡೆಸಲಾರಂಭಿಸಿದ.

ಚೋಳ ಸಾಮ್ರಾಜ್ಯದ ಸೈನ್ಯಬಲ ಅಪಾರವೂ ಸುಶಿಕ್ಷಿತವೂ ಆಗಿತ್ತು. ಸಾಮ್ರಾಜ್ಯ ಬೆಳೆದಂತೆಲ್ಲ ಸೈನ್ಯ ಮತ್ತು ನೌಕಬಲವೂ ಬೆಳೆದಂತೆ ತೋರುತ್ತದೆ. ಸೈನ್ಯವನ್ನು ಅನೇಕ ತುಕಡಿಗಳಾಗಿ ಭಾಗಿಸಲಾಗಿತ್ತು. ಒಂದೊಂದು ತುಕಡಿಗೂ ತನ್ನದೇ ಆದ ಹೆಸರು. ಈ ಹೆಸರು ಸಾಮಾನ್ಯವಾಗಿ ರಾಜನ ಬಿರುದುಗಳಲ್ಲಿ ಒಂದಾಗಿರುತ್ತಿತ್ತು. ಆ ತುಕಡಿಗಳನ್ನು ಯಾರ ಕಾಲದಲ್ಲಿ ಸ್ಥಾಪಿತಲಾಯತೆನ್ನುವುದು ಅವುಗಳ ಹೆಸರುಗಳಿಂದ ಗೊತ್ತಾಗುತ್ತದೆ. ಸಮರಕೇಸರಿ, ವಿಕ್ರಮಶಿಂಗ, ತಾಯತೊಂತ ಮುಂತಾದ ಹಲವಾರು ಹೆಸರುಗಳನ್ನು ಶಾಸನಗಳಲ್ಲಿ ನೋಡಬಹುದು. ರಾಜರಾಜನ ಕಾಲದಲ್ಲಿ ಇಂಥ ತುಕಡಿಗಳ ಸುಮಾರು ಮೂವತ್ತು ಹೆಸರುಗಳಿವೆ. ಚೋಳರ ಕಾಲದಲ್ಲಿ ಎಪ್ಪತ್ತಕ್ಕೂ ಹೆಚ್ಚು ತುಕಡಿಗಳಿದ್ದ ಸೂಚನೆ ಶಾಸನಗಳಲ್ಲುಂಟು. ಒಂದೊಂದು ಸೈನ್ಯದಲ್ಲೂ ಬೇರೆ ಬೇರೆ ಭಾಗಗಳು ಇದ್ದುವು. ಕುಂಚರ ಮಲ್ಲರು ವಿಲ್ಲಿಗಳು (ಬಿಲ್ಲುಗಾರರು), ವಾಳ್ಪೆಟ್ರಾ ಕೈಕ್ಕೋಳರು (ಕತ್ತಿ ಹಿಡಿದು ಯುದ್ಧ ಮಾಡುವವರು), ವೇಳೆಕಾರರು ಇತ್ಯಾದಿ. ಸೈನ್ಯಗಳು ನಡೆಸಿದ ಕಾರ್ಯಚರಣೆಯಲ್ಲಿ ಕೆಲವನ್ನು ಕುರಿತ ವಿವರಗಳೂ ದೊರೆತಿವೆ. ಬಹುಶಃ ರಾಜರಾಜ ಮತ್ತು ರಾಜೇಂದ್ರರ ಕಾಲಕ್ಕೆ ಸೇರಿದ್ದ ಮೂನ್ರುಕೈ ಮಹಾಸೇನೈ ಎಂಬ ಒಂದು ದೊಡ್ಡ ತುಕಡಿ ನಡೆಸಿದ ಮಹಾ ಸಾಹಸಗಳ ವಿವರಗಳು ದೊರೆಯುತ್ತವೆ. ಅದು ಕನ್ನರನನ್ನು ಸೋಲಿಸಿ ಅಟ್ಟಿಸಿಕೊಂಡುಹೋಯಿತು. ಗಾಂಗೇಯನನ್ನು ಕೊಂದಿತು; ಕಲ್ಮಾಡವನ್ನು ಹಿಡಿದು ವಿ¿Éನವನ್ನು ನಾಶಮಾಡಿತು; ಸಮುದ್ರವನ್ನು ದಾಟಿ ಮಾತೋಟ್ಟವನ್ನು ನೆಲಸಮ ಮಾಡಿತು; ವಲ್ಲಭನನ್ನು ಓಡಿಸಿ ವನವಾಸಿ ಉಚ್ಚಂಗಿಗಳನ್ನು ಹಿಡಿಯಿತು; ವಾತಾಪಿಯ ಕೋಟೆಯನ್ನು ಹಾಳುಗೆಡವಿತು. ಇಂಥ ಸಾಹಸಗಳನ್ನು ನಡೆಸಿದ ಈ ಚೋಳ ಸೈನ್ಯ ಹಲವು ದೇವಾಲಯಗಳ ರಕ್ಷಣೆ ಪೋಷಣೆಗಳನ್ನು ನಿರ್ವಹಿಸುತ್ತಿತ್ತು.

ಚೋಳರ ಸೈನ್ಯದಲ್ಲಿ ಅರವತ್ತು ಸಾವಿರ ಆನೆಗಳಿದ್ದುವೆಂದೂ ಒಂದೊಂದು ಆನೆಯ ಮೇಲೂ ಹಲವು ಸೈನಿಕರು ಕುಳಿತು ಬಿಲ್ಲುಬಾಣಗಳಿಂದಲೂ ಈಟಿಗಳಿಂದಲೂ ಯುದ್ಧ ಮಾಡುತ್ತಿದ್ದರೆಂದೂ ಗೆದ್ದ ಆನೆಗಳಿಗೆ ಮೆಚ್ಚಿಕೆಯ ಹೆಸರುಗಳನ್ನಿಡುತ್ತಿದ್ದುದಲ್ಲದೆ ಅವನ್ನು ವಿಶೇಷವಾಗಿ ಶೃಂಗರಿಸುತ್ತಿದ್ದರೆಂದೂ ಚೀನದ ಲೇಖಕನೊಬ್ಬ ತಿಳಿಸಿದ್ದಾನೆ.

ಅಸಂಖ್ಯಾತ ಹಡಗುಗಳನ್ನು ಭೋರ್ಗರೆವ ಸಮುದ್ರವನ್ನು ದಾಟಿ ಶ್ರೀವಿಜಯವನ್ನು ಗೆದ್ದು ಬಂದ ವಿವರವನ್ನು ರಾಜೇಂದ್ರನ ಶಾಸನಗಳು ತಿಳಿಸುತ್ತವೆ. ಇವರ ಕಾಲದ ನೌಕಾಬಲ ಅತ್ಯಂತ ಬಲಯುತವಾಗಿತ್ತೆಂಬುದು ಇದರಿಂದ ಸ್ಪಷ್ಟ.

ರಾಜ್ಯದ ನಾನಾಭಾಗಗಳಲ್ಲಿ ಸೈನ್ಯಗಳು ನೆಲೆಸುವಂತೆ ಮಾಡಿದ್ದುದರ ಸೂಚನೆಯುಂಟು. ಸೈನ್ಯಗಳು ನೆಲೆಸಿದ್ದ ಇಂಥ ಸ್ಥಳಗಳಿಗೆ ಕಟಕ ಎಂಬ ಹೆಸರಿತ್ತು. ಎನಮಲ್ಲೂರು ಕಟಕದ ವಿಲ್ಲಿಗಳು, ಇವ್ವೂಪ್ರ್ಪಡೈ ತಲೈವನ್ ಮುಂತಾದ ಉಲ್ಲೇಖಗಳು ಶಾಸನಗಳಲ್ಲಿ ಕಂಡುಬರುತ್ತವೆ. ಹೀಗೆ ಅಲ್ಲಲ್ಲಿ ಕಟಕಗಳಿರುತ್ತಿದ್ದುದರಿಂದ ಸೈನಿಕರಿಗೆ ತರಬೇತು ನೀಡಲಾಗುತ್ತಿತ್ತೆಂಬುದು ಸ್ಪಷ್ಟ.

ಆಡಳಿತದ ಮುಖ್ಯ ವಿಷಯಗಳಲ್ಲಿ ರಾಜನೇ ಆಜ್ಞೆ ಮಾಡುತ್ತಿದ್ದ. ಅಧಿಕಾರಿಗಳು ಈ ಆಜ್ಞೆಗಳನ್ನು ಶ್ರೀಮುಖಗಳನ್ನಾಗಿ ಹೊರಡಿಸಿ ಇವು ಅನುಷ್ಠಾನಕ್ಕೆ ಬರುವಂತೆ ನೋಡಿಕೊಳ್ಳುತ್ತಿದ್ದರು. ಸಾಮಾನ್ಯ ಜನತೆಯ ನಿತ್ಯಜೀವನಕ್ಕೆ ಸಂಬಂಧಿಸಿದ ಆಡಳಿತಕ್ಕೆ ರಾಜನ ಅಧಿಕಾರಿಗಳು ಕೈಹಾಕದೆ ಅದನ್ನು ಆಯಾ ಭಾಗದ ಗ್ರಾಮದ ಸಭೆಗಳಿಗೆ ಬಿಟ್ಟಿದ್ದರು. ಸಮರ್ಥರೂ ದಕ್ಷರೂ ಆಗಿದ್ದ ಅಧಿಕಾರಿಗಳಿಗೆ ಏನಾದಿ, ಮಾರಾಯ ಮುಂತಾದ ಬಿರುದುಗಳಿರುತ್ತಿದ್ದುವು. ಮೇಲಧಿಕಾರಿಗಳನ್ನು ಪೆರುಂದರಮ್ ಎಂದೂ ಕೆಳಗಿನ ಅಧಿಕಾರಿಗಳನ್ನು ಶಿರುತರಮ್ ಎಂದೂ ಕರೆಯುತ್ತಿದ್ದರು. ಕರುಮಿಗಳು, ಪಣಿಮಕ್ಕಳು ಮುಂತಾದ ವರ್ಗಗಳೂ ಇದ್ದುವು.

ಚೋಳ ರಾಜ್ಯದಲ್ಲಿ ಪ್ರತಿ ಗ್ರಾಮಕ್ಕೂ ಅದರದೇ ಆದ ಆಡಳಿತಯಂತ್ರವಿತ್ತು. ಅದೊಂದು ಸ್ವತಂತ್ರ ಘಟಕವಾಗಿತ್ತು. ಹಲವು ಹಳ್ಳಿಗಳು ಸೇರಿ ಒಂದು ಕೂಟ್ರ ಅಥವಾ ನಾಡು, ಹಲವು ಕೂಟ್ರಗಳು ಸೇರಿ ವಳನಾಡು, ವಳನಾಡುಗಳ ಗುಂಪುಮಂಡಲ, ಮಂಡಲಗಳು ತಕ್ಕಷ್ಟು ವಿಸ್ತಾರವಾಗಿದ್ದ ಪ್ರಾಂತ್ಯಗಳು. ರಾಜರಾಜನ ವಿಸ್ತಾರವಾದ ಸಾಮ್ರಾಜ್ಯ ಎಂಟು ಅಥವಾ ಒಂಬತ್ತು ಮಂಡಲಗಳಾಗಿ ವಿಭಾಗವಾಗಿತ್ತು. ರಾಜರಾಜರನ ಅನಂತರವೂ ಅಷ್ಟಕ್ಕಿಂತ ಹೆಚ್ಚಿನ ಮಂಡಲಗಳು ಇದ್ದಂತೆ ತೋರುವುದಿಲ್ಲ. ಮಂಡಲ ಮತ್ತು ವಳನಾಡುಗಳಿಗೂ ಕೆಲವು ನಾಡು ಮತ್ತು ಊರುಳಿಗೂ ಅವುಗಳವೇ ಆದ ಹೆಸರುಗಳನ್ನು ಕೊಡುವ ಪದ್ಧತಿ ಇತ್ತು. ಹೀಗಾಗಿ, ಮುಡಿಗೊಂಡ ಶೋ¿ಮಂಡಲ ಮತ್ತು ನಿಗರಿಲಿ ಶೋ¿ಮಂಡಲಗಳಲ್ಲಿ ಗಂಗವಾಡಿ ಸೇರಿಹೋಯಿತು. ತಲಕಾಡು ರಾಜರಾಜಪುರವಾಯಿತು. ನಾಡು, ವಳನಾಡುಗಳನ್ನು ಪುನರ್ವಿಂಗಡಿಸುತ್ತಿದ್ದುದು ಸಾಮಾನ್ಯವಾಗಿದ್ದುದರಿಂದ ಚೋಳರ ಕಾಲದಲ್ಲಿದ್ದ ನಾಡು, ವಳನಾಡುಗಳನ್ನು ಸ್ಪಷ್ಟವಾಗಿ ಗುರುತಿರುಸುವುದು ಕಠಿಣ.

ರಾಜರಿಗೆ ಆಡಳಿತದಲ್ಲಿ ನೆರವಾಗಲು ಸಚಿವರನ್ನು ನೇಮಿಸುವ ಪದ್ಧತಿ ಇದ್ದುದು ಸ್ಪಷ್ಟವಾಗಿಲ್ಲ. ಆದರೆ ರಾಜನ ಆಪ್ತಾಲೋಚನೆಗಾಗಿ ಹಿರಿಯ ಅಧಿಕಾರಿಗಳಿಂದ ಕೂಡಿದ ಉಡನ್ ಕೂಟ್ಟಮ್ ಎಂಬ ಮಂತ್ರಾಲೋಚನಾ ಸಭೆ ಇದ್ದುದಾಗಿ ತಿಳಿದುಬರುತ್ತದೆ. ಈ ಸಭೆಯಲ್ಲಿ ಬಹುಶಃ ಆಡಳಿತದ ಎಲ್ಲ ಭಾಗಗಳನ್ನು ಪ್ರತಿನಿಧಿಸುವ ಅಧಿಕಾರಿಗಳೂ ಇದ್ದರು. ರಾಜಾಜ್ಞೆಗಳು ಸರಿಯಾದ ರೀತಿಯಲ್ಲಿ ಜಾರಿಯಾಗಿ ಅವು ನೆರವೇರಿದುದನ್ನು ರಾಜನಿಗೆ ಅರಿಕೆ ಮಾಡುವುದು ಅವರ ಕರ್ತವ್ಯವಾಗಿತ್ತು. ರಾಜನೇ ಅಲ್ಲಲ್ಲಿ ಸಂಚರಿಸಿ ಗ್ರಾಮಾಂತರಗಳ ಆಡಳಿತವನ್ನು ಪರೀಕ್ಷಿಸುತ್ತಿದ್ದುದೂ ಉಂಟು.

ನ್ಯಾಯನಿರ್ವಹಣೆಯಲ್ಲಿ ಗ್ರಾಮಸಭೆಗಳ ಪಾತ್ರ ಹಿರಿದಾದ್ದು. ಶಾಸನಗಳಲ್ಲಿ ಬರುವ ಧರ್ಮಾಸನ ಎಂಬುದು ರಾಜನ ನ್ಯಾಯಪೀಠವಾಗಿತ್ತು. ಅಲ್ಲಿ ನ್ಯಾಯ ನಿರ್ವಹಣೆಗೆ ಧರ್ಮಾಸನ ಭಟ್ಟರು ನೆರವಾಗುತ್ತಿದ್ದರು. ಕೊಲೆ, ಸುಲಿಗೆ, ಕಳ್ಳತನ ಮುಂತಾದವನ್ನೂ ಸಾಮಾನ್ಯವಾದ ಅಪರಾಧಗಳಂತೆ ವಿಚಾರಣೆ ನಡೆಸಿ ದಂಡ ವಿಧಿಸಲಾಗುತ್ತಿತ್ತು. ಕೊಲೆ ಮಾಡಿದವರು ಕೂಡ, ದೇವಸ್ಥಾನಗಳಿಗೆ ನಂದಾದೀಪಕ್ಕಾಗಿ ಮತ್ತು ಇತರ ಪೂಜೆಗಳಿಗಾಗಿ ದತ್ತಿ ಬಿಟ್ಟು, ಅಪರಾಧದಿಂದ ಬಿಡುಗಡೆ ಹೊಂದಬಹುದಾಗಿತ್ತು. ರಾಜದ್ರೋಹದ ಆಪಾದನೆಗಳಲ್ಲಿ ರಾಜನೇ ತೀರ್ಪು ನೀಡುತ್ತಿದ್ದ. ರಾಜರಾಜನ ಅಣ್ಣ ಇಮ್ಮಡಿ ಆದಿತ್ಯನ ಕೊಲೆಗೆ ಕಾರಣರಾದವರ ಆಸ್ತಿಯನ್ನೆಲ್ಲ ಮುಟ್ಟುಗೋಲು ಹಾಕಿಕೊಳ್ಳುವಂತೆ ರಾಜರಾಜ ಆಜ್ಞೆ ಮಾಡಿದ. ಚೋಳ ರಾಜ್ಯದಲ್ಲಿ ಸಾಧಾರಣವಾದ ತಪ್ಪಿಗೆ ಛಡಿ ಏಟಿನ ಮತ್ತು ತೀವ್ರ ಅಪರಾಧಗಳಿಗೆ ತಲೆ ಕತ್ತರಿಸುವ ಅಥವಾ ಆನೆಯ ಕಾಲಿನಿಂದ ತುಳಿಸಿ ಕೊಲ್ಲಿಸುವ ಶಿಕ್ಷೆ, ಮರಣದಂಡನೆ, ವಿಧಿಸಲಾಗುತ್ತಿತ್ತೆಂದು ಚೀನೀಯಾತ್ರಿಕ ಚೌಜುಕುವ ತಿಳಿಸಿದ್ದಾನೆ.

ಗ್ರಾಮಗಳ ಆಡಳಿತ ಮುಖ್ಯವಾಗಿ ಆಯಾ ಗ್ರಾಮಗಳ ಸಭೆಗಳಿಗೆ ಸೇರಿತ್ತು. ಸಭೆ, ಮಹಾಸಭೆ, ಕುರಿ, ಪೆರುಂಗುರಿ ಮಹಾಸಭೆ ಎಂದು ಮುಂತಾಗಿ ಕರೆಯಲಾಗುತ್ತಿದ್ದ ಈ ಸಂಸ್ಥೆಗಳನ್ನು ತಮ್ಮ ಪರಿಮಿತಿಯೊಳಗಿನ ಪ್ರದೇಶದ ಎಲ್ಲ ಆಗುಹೋಗುಗಳನ್ನು ನೋಡಿಕೊಳ್ಳುವ, ಅಧಿಕಾರ ನಡೆಸುವ ಸ್ವಾತಂತ್ರ್ಯ ಹೊಂದಿದ್ದುವು. ಈ ಸಭೆಗಳಿಗೆ ಚುನಾವಣೆಗಳು ನಡೆಯುತ್ತಿದ್ದ ರೀತಿ ಆಶ್ಚರ್ಯಕರವಾಗಿದೆ. ಚುನಾವಣೆಗೆ ನಿಲ್ಲುವ ಉಮೇದುವಾರರಿಗೆ ಹಲವು ಅರ್ಹತೆಗಳಿರಬೇಕಾಗಿತ್ತು. ಅವರ ಸ್ಥಿತಿಗಳು, ವಯೋಮಿತಿ, ನಡತೆ ಮುಂತಾದವು ನಿರ್ಧರಿಸಲ್ಪಟ್ಟಿದ್ದುವು. ಅನರ್ಹತೆಗಳೆಂಬುದನ್ನು ಶಾಸನಗಳು ವಿವರಿಸಿವೆ. ಚುನಾವಣೆಗಾಗಿ ಗ್ರಾಮವನ್ನು ಹಲವು ಭಾಗಗಳನ್ನಾಗಿ ಮಾಡಿ ಚುನಾವಣೆ ನಡೆಸಲು ಒಂದೊಂದು ಭಾಗದಲ್ಲೂ ಬಾಯಿಕಟ್ಟಿದ ಒಂದೊಂದು ಮಡಕೆಯನ್ನಿಡುತ್ತಿದ್ದರು. ಮತ ಚೀಟಿ ಹಾಕಲು ಅದರಲ್ಲಿ ಒಂದು ಸಂದು ಇರುತ್ತಿತ್ತು. ತಾಲಪತ್ರದ ಚಿಕ್ಕ ಚಿಕ್ಕ ಚೀಟಿಗಳ ಮೇಲೆ ಚುನಾವಣೆಗೆ ನಿಂತವರ ಹೆಸರು ಬರೆದು ಅದರೊಳಗೆ ಹಾಕುತ್ತಿದ್ದರು. ಚುನಾವಣೆಯ ದಿನ ಎಲ್ಲ ಮಡಕೆಗಳ ಚೀಟಿಗಳನ್ನೂ ಖಾಲಿ ಮಡಕೆಯೊಂದಕ್ಕೆ ಸುರಿದು ಹಳ್ಳಿಯ ಎಲ್ಲ ಪ್ರಜೆಗಳೆದುರಿಗೂ ಒಬ್ಬ ಹುಡುಗನಿಂದ ಒಂದು ಚೀಟಿಯನ್ನೆತ್ತಿಸಿ ಹೆಸರನ್ನು ಓದುತ್ತಿದ್ದರು. ಹೀಗೆ ಒಂದೊಂದು ಭಾಗದಿಂದ ಒಬ್ಬೊಬ್ಬರಂತೆ ಚುನಾಯಿತರಾದ ಪ್ರತಿನಿಧಿಗಳ ಸಭೆಯಿಂದ ಗ್ರಾಮದ ಬೇರೆ ಬೇರೆ ಕೆಲಸಗಳನ್ನು ನೋಡಿಕೊಳ್ಳಲು ಬೇರೆಬೇರೆ ಸಮಿತಿಗಳನ್ನು ರಚಿಸುತ್ತಿದ್ದರು. ತೋಟಗಳು, ಕೆರೆಗಳು, ಹೊಲಗದ್ದೆಗಳು, ಹಣ, ನ್ಯಾಯನಿರ್ವಹಣೆ ಎಲ್ಲಕ್ಕೂ ಬೇರೆಬೇರೆ ಸಮಿತಿಗಳಿದ್ದುವು. ಈ ಸಮಿತಿಗಳಿಗೆ ವಾರಿಯಮ್‍ಗಳೆಂದು ಹೆಸರು. ಊರಿನ ಏಳಿಗೆಗಾಗಿ ತೆರಿಗೆಗಳನ್ನು ಎತ್ತುವ, ಅವನ್ನು ಮನ್ನಾ ಮಾಡುವ ಅಧಿಕಾರ ಗ್ರಾಮಸಭೆಗೆ ಇತ್ತು. ಭೂಕಂದಾಯವೇ ರಾಜ್ಯದ ಮುಖ್ಯ ಆದಾಯವಾದ್ದರಿಂದ ಭೂಮಿಯನ್ನು ಸರಿಯಾಗಿ ಆಳತೆಮಾಡಿಸಿ ತೆರಿಗೆಯ ಪ್ರಮಾಣವನ್ನು ಎಚ್ಚರಿಕೆಯಿಂದ ನಿಗದಿಗೊಳಿಸಲಾಗುತ್ತಿತ್ತು. ಪ್ರತಿ ಊರಿನಲ್ಲೂ ಜನ ವಾಸಿಸುವ ಪ್ರದೇಶ, ದೇವಾಲಯಗಳು, ಕೆರೆಗಳು, ಕಾಲುವೆಗಳು, ಪರಚ್ಚೇರಿ ಕಮ್ಮಾಣಚ್ಚೇರಿ (ಕುಶಲ ಕಲೆಗಾರರ ಕೇರಿ), ಸುಡುಗಾಡು-ಇವಕ್ಕೆ ಯಾವ ತೆರಿಗೆಯೂ ಇರುತ್ತಿರಲಿಲ್ಲ. ಒಟ್ಟು ಭೂಮಿಯಲ್ಲಿ ಇವುಗಳ ವಿಸ್ತೀರ್ಣವನ್ನು ಕಳೆದು ಉಳಿದ ಭೂಮಿಯನ್ನು ಗುಣಮಟ್ಟ ಮತ್ತು ಬೆಳೆಗನುಸಾರವಾಗಿ ವಿಂಗಡಿಸಿ ಅದರ ಮೇಲೆ ತೆರಿಗೆ ನಿರ್ಧರಿಸುತ್ತಿದ್ದರು. ರಾಜನ ಬೊಕ್ಕಸಕ್ಕೆ ಗ್ರಾಮದಿಂದ ತುಂಬಬೇಕಾದ ಒಟ್ಟು ತೆರಿಗೆಗೆ ಇಡೀ ಗ್ರಾಮವೇ ಹೊಣೆಯಾಗಬೇಕಾಗಿತ್ತು. ತೆರಿಗೆಯನ್ನು ಹಣದ ರೂಪದಲ್ಲಾಗಲಿ ಧಾನ್ಯರೂಪದಲ್ಲಾಗಲಿ ಕೊಡಬಹುದಾಗಿತ್ತು. ಭೂಮಿಯ ಮೇಲಿನ ತೆರಿಗೆಗಳಲ್ಲದೆ ಸಾರಿಗೆಯ ಸುಂಕ, ಮನೆ ತೆರಿಗೆ, ವೃತ್ತಿ ತೆರಿಗೆ, ಮದುವೆಯೇ ಮುಂತಾದ ವಿಶೇಷ ಸಮಾರಂಭಗಳ ಮೇಲಿನ ತೆರಿಗೆ ಅಪರಾಧಗಳಿಗಾಗಿ ತೆರಬೇಕಾದ ದಂಡ ಮುಂತಾದವೂ ರಾಜ್ಯಕ್ಕೆ ಆದಾಯ ತರುತ್ತಿದ್ದುವು. ಹೀಗೆ ಬರುತ್ತಿದ್ದ ಆದಾಯವನ್ನು ಸೈನ್ಯ, ಆಡಳಿತ, ಅರಮನೆಗಳ ವೆಚ್ಚ ಕಳೆದು ಉಳಿದುದರ ಬಹುಭಾಗ ಕೆರೆಗಳು, ದೇವಾಲಯಗಳು, ವಿದ್ಯಾಲಯಗಳು, ಆಸ್ಪತ್ರೆಗಳು ಮುಂತಾದವನ್ನು ಕಟ್ಟಿಸುವುದು, ಅದನ್ನು ನಡೆಸಿಕೊಂಡು ಹೋಗುವುದು ಮುಂತಾದ ಜನೋಪಯುಕ್ತವಾದ ಕಾರ್ಯಗಳಿಗಾಗಿ ವಿನಿಯೋಗಿಸಲಾಗುತ್ತಿತ್ತು. ಇವುಗಳಲ್ಲಿ ದೇವಾಲಯಗಳ ಪಾತ್ರ ಹಿರಿದಾದದ್ದು. ಅವು ಸಂಸ್ಕøತಿ, ವಿದ್ಯೆ, ಕಲೆ ಮೊದಲಾದವುಗಳ ಕೇಂದ್ರವಾಗಿ ಜನಜೀವನದ ಮೇಲೆ ಮಹತ್ತರ ಪರಿಣಾಮ ಬೀರಿದ್ದುವು.

ವಾಸ್ತುಶಿಲ್ಪ : ಚೋಳರು ಆಳಿದ 400 ವರ್ಷಗಳ ಕಾಲದಲ್ಲಿ (850-1250) ಚೋಳ ಸಾಮ್ರಾಜ್ಯದಲ್ಲಿ ವಾಸ್ತುಶಿಲ್ಪಕ್ಕೆ ಅದ್ಭುತ ಪ್ರಗತಿ ಹೊಂದಿತು. ಪಲ್ಲವರು ಆರಂಭಿಸಿ ಬೆಳೆಸಿಕೊಂಡು ಬಂದಿದ್ದ ಶೈಲಿಯನ್ನೇ ಚೋಳರು ಮೊದಲು ಬಳಸಿದರೂ ಅವರು ಮುಂದುವರಿದೆಂತೆಲ್ಲ ತಮ್ಮದೇ ಆದ ರೀತಿಯನ್ನು ಅವುಗಳಲ್ಲಿ ಹೆಚ್ಚಾಗಿ ಅಳವಡಿಸುತ್ತ ಹೋಗಿ ಕಡೆಗೆ ಚೋಳ ಶೈಲಿ ಎಂದು ಸ್ಪಷ್ಟವಾಗಿ ಗುರುತಿಸಬಹುದಾದಷ್ಟು ಖಚಿತವಾದ ಸ್ವರೂಪವನ್ನು ಅದಕ್ಕೆ ಕೊಟ್ಟರು. ಅವರು ಕಟ್ಟಿಸಿದ ದೇವಾಲಯಗಳಿಗೆ ಲೆಕ್ಕವಿಲ್ಲ. ಚೋಳ ರಾಜ್ಯದಲ್ಲಷ್ಟೇ ಅಲ್ಲ. ಅವರು ಗೆದ್ದ ಸಿಂಹಳ, ಕರ್ಣಾಟಕ, ಆಂಧ್ರಗಳ ಭಾಗಗಳಲ್ಲೂ ತಮ್ಮ ವಾಸ್ತುಶಿಲ್ಪ ಶೈಲಿಯನ್ನು ಅನುಷ್ಠಾನಕ್ಕೆ ತಂದರು. ಸಮುದ್ರದಾಚೆಗಿನ ಮಲಯ, ಸುಮಾತ್ರ, ಜಾವ ಈ ದ್ವೀಪಗಳಲ್ಲಿ ಕೂಡ ಇದರ ಪ್ರಭಾವವನ್ನು ಕಾಣಬಹುದು. ಈ ಅಸಂಖ್ಯಾತ ದೇವಾಲಯಗಳಲ್ಲಿ ಹಲವನ್ನು ಕಟ್ಟಿದ ಕಾಲ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೂ ಕಟ್ಟಡಗಳ ರಚನೆ, ಶೈಲಿ, ಶಿಲ್ಪಗಳ ಸೂಕ್ಷ್ಮ ಪರಿಶೀಲನೆಯಿಂದ ಅವುಗಳ ಕಾಲವನ್ನು ಸ್ಥೂಲವಾಗಿ ಹೇಳಲು ಸಾಧ್ಯ.

ಚೋಳರು ಸ್ವತಂತ್ರರಾಗುವ ಹೊತ್ತಿಗೆ ಪಲ್ಲವರಲ್ಲಿ ಗುಹಾ ವಾಸ್ತು ಕೊನೆಗೊಂಡು, ಇಟ್ಟಿಗೆಯ, ಕಲ್ಲಿನ ಸಣ್ಣಸಣ್ಣ ದೇವಾಲಯಗಳನ್ನು ಕಟ್ಟುವ ಪದ್ಧತಿ ಬೆಳೆದಿತ್ತು. ಅದನ್ನೇ ಮುಂದುವರಿಸಿದ ಮೊದ ಮೊದಲಿನ ಚೋಳರಾಜರು ಇಟ್ಟಿಗೆಯ ಕಟ್ಟಡಗಳಿಗಿಂತ ಕಲ್ಲು ಕಟ್ಟಡಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಟ್ಟರು. ಆಗಲೆ ಕಟ್ರಾಳಿಯನ್ನು (ಪೂರ್ಣವಾಗಿ ಶಿಲೆಯಿಂದ ನಿರ್ಮಿತವಾದ ದೇವಾಲಯ) ಕಟ್ಟಿಸುವುದು ಹೆಮ್ಮೆಯಿಂದ ಹೇಳಿಕೊಳ್ಳುವ ವಿಷಯವಾಗಿತ್ತು. ಹಿಂದಿನ ಹಲವು ಇಟ್ಟಿಗೆ ಕಟ್ಟಡಗಳನ್ನು ಅವರು ಹೀಗೆ ಕಲ್ಲು ಕಟ್ಟಡಗಳಾಗಿ ಮಾರ್ಪಡಿಸಿದ ನಿದರ್ಶನಗಳುಂಟು. ತಿರುಕ್ಕುಳ ಕುಮಡ್ರದಲ್ಲಿದ್ದ ಇಟ್ಟಿಗೆ ಕಟ್ಟಡಕ್ಕೆ ಬದಲಾಗಿ 1ನೆಯ ಆದಿತ್ಯ ಕಲ್ಲಿನ ಕಟ್ಟಡವನ್ನು ಕಟ್ಟಿಸಿ ಆ ದೇವಾಲಯಕ್ಕೆ ಹಿಂದೆ ಸ್ಕಂದ ಶಿಷ್ಯ ಬಿಟ್ಟಿದ್ದ ದತ್ತಿಯನ್ನು ಮುಂದುವರಿಸಿದಂತೆ ತಿಳಿಸುವ ಶಾಸನಗಳು ಅಲ್ಲಿವೆ. ಆದಿತ್ಯ ಸಹ್ಯಾದ್ರಿಯಿಂದ ಸಮುದ್ರದವರೆಗೂ ಕಲ್ಲಿನಿಂದ ದೇವಾಲಯಗಳನ್ನು ಕಟ್ಟಿಸಿದುದಾಗಿ ಶಾಸನಗಳು ತಿಳಿಸುತ್ತವೆ. ಅದರೂ ಇಟ್ಟಿಗೆ ಕಟ್ಟಡಗಳನ್ನೂ ಈ ಕಾಲದಲ್ಲಿ ಕಟ್ಟಿದ್ದುಂಟು. ಆದಿತ್ಯನ ಸಾಮಂತ ಕಂದನ್ನ ಮಾರವರ್ಮನ್ ಎಂಬುವನು ಇಟ್ಟಿಗೆಯಲ್ಲಿ ಕಟ್ಟಿಸಿದ್ದ ತಿರುತೊಟ್ಟಮುಡೈಯ ಮಹಾದೇವರ ದೇವಾಲಯವನ್ನು 1ನೆಯ ಕುಲೋತ್ತುಂಗ ಚೋಳನ ಕಾಲದಲ್ಲಿ ಕಲ್ಲಿನಿಂದ ಪುನರ್ನಿಮಾಣ ಮಾಡಿದಂತೆ ಕಂಡುಬರುತ್ತದೆ. ಚೋಳರ ಕಾಲದಲ್ಲಿ ಇಟ್ಟಿಗೆಯಲ್ಲಿ ಕಟ್ಟಿದ ಕೆಲವು ದೇವಾಲಯಗಳು ಈಗಲೂ ಉಳಿದುಬಂದಿವೆ.

10ನೆಯ ಶತಮಾನದವರೆಗಿನ ಕಾಲದ ದೇವಾಲಯಗಳ ಗಾತ್ರ ಹೇಳುವಂಥದೇನೂ ಅಲ್ಲ. ಆದರೂ ಆ ಕಾಲದಲ್ಲಿ ಅವನು ಕಟ್ಟಿಸಿದ ದೇವಾಲಯಗಳಲ್ಲಿ ಹಂತಹಂತವಾದ ಬೆಳೆವಣಿಗೆಯನ್ನು ಕಾಣಬಹುದು. ಆರಂಭಕಾಲದ ಅಂದರೆ ವಿಜಯಾಲಯ ಮತ್ತು 1ನೆಯ ಆದಿತ್ಯನ ಕಾಲದ ದೇವಾಲಯಗಳು ಸಣ್ಣ ಅಥವಾ ಮಧ್ಯಮ ಪ್ರಮಾಣದವಾಗಿದ್ದುವು. ಅವು ಹೆಚ್ಚಾಗಿ ಪಲ್ಲವ ಶೈಲಿಯಂತೆಯೇ ಇವೆ. ವಿಶಾಲೂರು, ತಿರುಪ್ಪೂರು, ಕಾಳಿಯಾಪಟ್ಟಿ, ಪನಂಗುಡಿ, ಏನಾದಿ ಮುಂತಾದ ಕಡೆ ಇರುವ ಚಿಕ್ಕ ಗುಡಿಗಳು ಈ ಗುಂಪಿಗೆ ಸೇರುತ್ತವೆ. ಇವುಗಳಲ್ಲಿ ಕಾಣುವ ಉಪಪೀಠ, ಗೂಡುಗಳು, ಅರೆಗಂಬಗಳು, ವಿಮಾನ ಎಲ್ಲವೂ ಪಲ್ಲವರೂ ಕಂಚಿಯಲ್ಲಿ ಕಟ್ಟಿಸಿರುವ ಮತಂಗೇಶ್ವರ, ಮುಕ್ತೇಶ್ವರ ದೇವಾಲಯಗಳ ಅನುಕರಣೆ ಗರ್ಭಗೃಹ ಮತ್ತು ಅಂತರಾಳಗಳೆರಡನ್ನೂ ಸೇರಿಸಿಕೊಂಡು ಮೇಲೇಳುವ ಪಲ್ಲವರ ವಿಮಾನ ಚೋಳರ ಕಾಲಕ್ಕೆ ಗರ್ಭಗುಡಿಯ ಮೇಲೆ ಮಾತ್ರ ಇರುತ್ತವೆ. ಹಾಗೆಯೇ ಸಿಂಹಸ್ತಂಭಗಳು ಕಡಿಮೆಯಾಗಿ ಕ್ರಮೇಣ ಬಿಟ್ಟುಹೋದವು. ಇನ್ನೊಂದು ಮುಖ್ಯ ವ್ಯತ್ಯಾಸವೆಂದರೆ, ಪಲ್ಲವರಲ್ಲಿ ಮೂಲದೇವಾಲಯದ ಸುತ್ತಲೂ ಅದರ ಗೋಡೆಗಳಿಗೆ ಹೊಂದಿಕೊಂಡಂತೆ ಹೊರಮುಖವಾದ ಕಿರುಗುಡಿಗಳಿದ್ದರೆ, ಚೋಳ ಸಂಪ್ರದಾಯದಲ್ಲಿ ಮಧ್ಯದ ಮೂಲೆಗುಡಿಯ ಸುತ್ತಲೂ ಪ್ರಕಾರಕ್ಕೆ ಹೊಂದಿಕೊಂಡಂತೆ ಒಳಮುಖವಾಗಿರುವ ಕಿರುಗುಡಿಗಳಿರುತ್ತವೆ. ನಾರ್ತಾಮಲೈಯಲ್ಲಿರುವ ವಿಜಯಾಲಯ ಚೋಳೇಶ್ವರ ಇಂಥ ದೇವಾಲಯಗಳಲ್ಲೆಲ್ಲ ಮಾದರಿಯಾದ್ದು, ಅದರ ಹೆಸರೇ ತಿಳಿಸುವಂತೆ ಅದು ವಿಜಯಾಲಯನ ಕಾಲದಲ್ಲಿ ನಿರ್ಮಿತವಾದಂತೆ ತೋರುತ್ತದೆ. ನಡುವೆ ಮೂಲದೇವಾಲಯ, ಸುತ್ತಲೂ ಏಳು ಚಿಕ್ಕಚಿಕ್ಕ ಗುಡಿಗಳು, ನುಣುಪಾದ ಹೊರಮೈಯುಳ್ಳ ಬೆಣಚುಕಲ್ಲಿನ ದಪ್ಪ ದಿಮ್ಮಿಗಳಿಂದ ನಿರ್ಮಿತವಾಗಿರುವ ಮೂಲದೇವಾಲಯದ ಗರ್ಭಗುಡಿ ವೃತ್ತಾಕಾರವಾಗಿದೆ. ಅದರ ಗೋಡೆಗಳ ದಪ್ಪ 5'. ಗರ್ಭಗುಡಿಯನ್ನು ಬೆಳಸಿದ ಮತ್ತೊಂದು ಚೌಕನೆಯ ಕಟ್ಟಡ ಇದೆ. ದಕ್ಷಿಣಾಪಥ ಇರುವುದು ಇವುಗಳ ನಡುವೆ. ಮುಂದೆ 6 ಕಂಬಗಳ ಮೇಲೆ ನಿಂತಿರುವ ಅಂತರಾಳ. ಇದರ ಹೊರಗೋಡೆಯ ಮೇಲಿರುವ ಅಲಂಕೃತ ಅರೆಗಂಬಗಳು ಚೋಳ ಶಿಲ್ಪದ ವೈಶಿಷ್ಟ್ಯ. ಆದರೆ ನಡುವೆ ಗೂಡುಗಳಿಲ್ಲ. ಲೋವೆಯ ಕೆಳಭಾಗದಲ್ಲಿ ಕುಬ್ಜರ ಸಾಲು, ಮೇಲೆ ಯಾಳಿಗಳ ಸಾಲು, ಮಂಟಪದ ಕಂಬಗಳು ಕೆಳಗೆ ಮತ್ತು ಮೇಲೆ ಚೌಕಾಕೃತಿಯಲ್ಲಿದ್ದು, ನಡುವೆ ಅಷ್ಟಮುಖವುಳ್ಳವಾಗಿ ಪಲ್ಲವ ಶೈಲಿಯನ್ನುಳಿಸಿಕೊಂಡಿವೆ. ಪ್ರವೇಶದ್ವಾರದ ಎರಡೂ ಕಡೆಯೂ ಅರೆಮಂಟಪದಲ್ಲಿ ಎದುರುಮುಖವಾಗಿದ್ದು ದೇಹವನ್ನು ಬಾಗಿಲ ಕಡೆ ತಿರುಗಿಸಿ ಅಡ್ಡಗಾಲು ಹಾಕಿ ನಿಂತಿರುವ ದ್ವಾರಪಾಲಕ ಮೂರ್ತಿಗಳಿವೆ. ಅವುಗಳಿಗೆ ಪಲ್ಲವರ ದ್ವಾರಪಾಲಕ ಮೂರ್ತಿಗಳಂತೆ ಎರಡೇ ಕೈಗಳು. ಮೇಲಿನ ವಿಮಾನ ಮೂರು ಅಂತಸ್ತುಗಳಲ್ಲಿದೆ. ಮೂರನೆಯದು ವೃತ್ತಾಕಾರ, ಸುತ್ತಲೂ ಇರುವ ಕೈಪಿಡಿಯ ಪಂಜರಗಳ ಗೂಡುಗಳಲ್ಲಿ ಮನೋಹರವಾದ ನಾಟ್ಯಭಂಗಿಯಲ್ಲಿರುವ ನರ್ತಕಿಯರ ಮೂರ್ತಿಗಳಿವೆ. ಕಣ್ಣನ್ನೂರಿನಲ್ಲಿ 1ನೆಯ ಆದಿತ್ಯನ ಕಾಲದಲ್ಲಿ ಕಟ್ಟಿಸಿದ ಬಾಲಸುಬ್ರಹ್ಮಣ್ಯ ದೇವಾಲಯ ಇದೇ ಮಾದರಿಯದು. ಕುಂಭಕೋಣದ ಸುಂದರವಾದ ನಾಗೇಶ್ವರ ದೇವಾಲಯವೂ ಇದೇ ರೀತಿಯಲ್ಲಿದ್ದರೂ ಇದರ ಗರ್ಭಗೃಹದ ಹೊರಗೋಡೆಗಳಲ್ಲಿರುವ ಗೂಡುಗಳಲ್ಲಿ ಅರ್ಧನಾರಿ, ಬ್ರಹ್ಮ, ದಕ್ಷಿಣಾಮೂರ್ತಿಯರ ವಿಗ್ರಹಗಳಿವೆ. ಉಳಿದ ಗೂಡುಗಳಲ್ಲಿ ಆಳೆತ್ತರದ ಸುಂದರವಾದ ಭಂಗಿಗಳಲ್ಲಿರುವ ಸ್ತ್ರೀಪುರುಷರ ಅರೆಯುಬ್ಬು ಮೂರ್ತಿಗಳುಂಟು. ಇವಲ್ಲದೆ ಜಗತಿಯಲ್ಲಿ ಅರೆಗಂಬಗಳ ಕೆಳಗಿರುವ ಪೌರಾಣಿಕ ವಸ್ತುಗಳ ಶಿಲ್ಪಗಳು ಕುಸುರಿ ಕೆಲಸದಿಂದ ತುಂಬಿವೆ.

ಶ್ರೀನಿವಾಸದನಲ್ಲೂರಿನಲ್ಲಿರುವ ಕೊರಂಗನಾಥ ದೇವಾಲಯ 1ನೆಯ ಪರಾಂತಕನ ಕಾಲದ್ದು. ಇದು ಮುಂದಿನ ಹಂತ. ಚೌಕವಾದ ಗರ್ಭಗೃಹ, ಉದ್ದುದ್ದನೆಯ ಮಂಟಪ 50'ಗಳಷ್ಟು ಎತ್ತರವಾಗಿರುವ ಶಿಖರ. ಇದೊಂದು ಮಧ್ಯ ಗಾತ್ರದ ದೇವಾಲಯ. ಇದರಲ್ಲಿ ಹಿಂದಿನ ದೇವಾಲಯುಗಳಲ್ಲಿಯ ಸರಳತೆ ಇದೆ. ಆದರೆ ಒಳಗೆ ಚೋಳ ರೀತಿಯ ಕಂಬಗಳು, ಸ್ತಂಭಾಗ್ರದಲ್ಲಿ ಕಳಶದ ಆಕೃತಿಯನ್ನಳವಡಿಸಿದೆ. ಅದರ ಮೇಲೆ ಹೆಚ್ಚು ಅಗಲವಾದ ಪುಷ್ಪಬೋದಿಗೆಗಳಿವೆ. ಈ ದೇವಾಲಯದ ಹೊರಗೂಡುಗಳಲ್ಲಿರುವ ದಕ್ಷಿಣಾಮೂರ್ತಿ, ವಿಷ್ಣು, ಬ್ರಹ್ಮ ಇವರ ಮತ್ತು ಇತರ ಸ್ತ್ರೀಪುರುಷರ ಮೂರ್ತಿಗಳು ಬಹುತೇಕ ಪೂರ್ಣವಾಗಿ ಬಿಡಿಸಲ್ಪಟ್ಟಿವೆ. ಇವು ಕಲಾಪೂರ್ಣವಾಗಿವೆ. ಕೋಡಂಬಾಳೂರಿನ ಮೂವರ್ ಕೋಯಿಲ್ ಸೊಗಸಾದ ವಾಸ್ತುಶೈಲಿಗೂ ಮೂರ್ತಿಶಿಲ್ಪಗಳ ಸೌಂದರ್ಯಕ್ಕೂ ಹೆಸರಾಗಿವೆ. ಇಮ್ಮಡಿ ಪರಾಂತಕನ ಕಾಲದಲ್ಲಿ ಅವನ ಸಾಮಂತ ಭೂತಿವಿಕ್ರಮ ಕೇಸರಿ ಕಟ್ಟಿಸಿದ. ಒಂದು ಸಾಲಿನಲ್ಲಿರುವ, ಈ ಮೂರೂ ಗುಡಿಗಳಲ್ಲಿ ಒಂದೊಂದೂ 21' ಚೌಕವಾಗಿದೆ. ಒಂದಕ್ಕೂ ಇನ್ನೊಂದಕ್ಕೂ 10' ಅಂತರ. ಒಂದೊಂದರ ಮುಂದೆಯೂ ಒಂದೊಂದು ಅರ್ಧ ಮಂಟಪವುಂಟು. ಇವುಗಳ ಮುಂದೆ 8' ಅಂತರದಲ್ಲಿ ಇವು ಮೂರಕ್ಕೂ ಸೇರುವ ಒಂದು ದೊಡ್ಡ ಮಹಾಮಂಟಪ-ಇದರ ಮುಂದೆ, ನಡುವೆ. ಒಂದು ನಂದಿಮಂಟಪ; ಈ ಮಂಟಪಕ್ಕೂ ಪ್ರಾಕಾರದ್ವಾರಕ್ಕೂ ನಡುವೆ ಬಲಿಪೀಠ ಅಥವಾ ಧ್ವಜಸ್ತಂಭ; ಇವೆಲ್ಲವನ್ನೂ ಒಳಗೊಂಡಂತೆ ಸುತ್ತಾಲಯ; ಅದಕ್ಕೆ ಸೇರಿದಂತೆ ಸುತ್ತಲೂ 15 ಕಿರುಗುಡಿಗಳು. ಹೊರಪ್ರಾಕಾರ ದಪ್ಪ ಗೋಡೆಯದು. ಪಶ್ಚಿಮದಲ್ಲಿ ಪ್ರವೇಶದ್ವಾರಗೋಪುರವೊಂದಿತ್ತು. ಹೊರಗೋಡೆಯ ಶಿಲ್ಪಗಳು ಇತರ ದೇವಾಲಯಗಳಲ್ಲಿರುವಂತೆಯೇ ಇವೆ. ಆದರೆ ಅವು ಹೆಚ್ಚು ನವುರವು. ಲೋವೆಯ ಕೆಳಗಿನ ಗಣಗಳು ಹಲವು ಭಂಗಿಗಳಲ್ಲಿ ಆಕರ್ಷಕವಾಗಿವೆ. ಅಲ್ಲಿಯ ಶಿಲ್ಪಗಳಲ್ಲಿ ಅರ್ಧನಾರಿ, ವೀಣಾಧರ, ದಕ್ಷಿಣಾಮೂರ್ತಿ, ಗಜಾರಿ, ಗಂಗಾಧರ ಮುಂತಾದವು ಗಮನಿಸಬೇಕಾದವು. ಕಿಳಿಯನೂರಿನ ಅಗಸ್ತ್ಯೇಶ್ವರ, ತಿಂಡಿವನದ ತಿರುತ್ತಿಂಡೀಶ್ವರ, ತಿರುವೆರುಂಬಿಯೂರಿನ ಪಿಪೀಲಿಕೇಶ್ವರ, ಬ್ರಹ್ಮದೇಶದ ತಿರುವಾಳೀಶ್ವರ ಮೊದಲಾದವು ಈ ಗುಂಪಿಗೆ ಸೇರುತ್ತವೆ.

ರಾಜರಾಜ ಮತ್ತು ರಾಜೇಂದ್ರನ ಕಾಲದಲ್ಲಿ ಚೋಳರ ವಾಸ್ತುಶಿಲ್ಪಶೈಲಿ ಪರಾಕಾಷ್ಠೆ ಮುಟ್ಟಿತು. ಬೃಹತ್ತಿಗೂ ಮಹತ್ತಿಗೂ ಹೆಸರಾಯಿತು. ಅವರ ಸಾಮ್ರಾಜ್ಯ ದೊಡ್ಡದಾದಂತೆ ಅವರು ದೊಡ್ಡ ದೇವಾಲಯಗಳನ್ನು ಕಟ್ಟಿಸಿ ವಾಸ್ತುಶಿಲ್ಪ ಇತಿಹಾಸದಲ್ಲಿ ಚೋಳಶೈಲಿಗೆ ಪ್ರಮುಖ ಸ್ಥಾನ ದೊರಕಿಸಿಕೊಟ್ಟರಲ್ಲದೆ ತಮ್ಮ ಕೀರ್ತಿಯನ್ನು ಅಜರಾಮರಗೊಳಿಸಿಕೊಂಡರು. ಇವರ ಸಾಮ್ರಾಜ್ಯದ ಉದ್ದಗಲಕ್ಕೂ ದೇವಾಲಯಗಳು ಹರಡಿಕೊಂಡುವು. ರಾಜರಾಜನ ಆಳ್ವಿಕೆಯ ಮೊದಲ ಭಾಗದಲ್ಲಿ ಅವನು ಕಟ್ಟಿಸಿದ ದೇವಾಲಯಗಳು ಹಿಂದಿನ ದೇವಾಲಯಗಳಿಗಿಂತ ದೊಡ್ಡವಾಗಿದ್ದರೂ ಮುಂದೆ ಅವನು ತಂಜಾವೂರಿನಲ್ಲಿ ಕಟ್ಟಿಸಿದ ರಾಜರಾಜ ದೇವಾಲಯದ (ಬೃಹದೀಶ್ವರ ದೇವಾಲಯ) ಮುಂದೆ ತೀರ ಚಿಕ್ಕವೇ. ಇವುಗಳಲ್ಲಿ ತಿರುವಾಳೇಶ್ವರ ದೇವಾಲಯ ತನ್ನ ಶಿಲ್ಪಬಾಹುಳ್ಯ ಮತ್ತು ವೈವಿಧ್ಯದಿಂದ ಅತ್ಯಂತ ಆಕರ್ಷಕವಾಗಿದೆ. ಅದರಲ್ಲೂ ಲೋವೆಯ ಕೆಳಗಿನ ಗಣಗಳ ವಿವಿಧ ನಾಟ್ಯಭಂಗಿಗಳು, ವಿಚಿತ್ರ ಮುಖಮುದ್ರೆಗಳು, ಹಾಸ್ಯಮಯವಾದ ನಡೆನೋಟಗಳು ಗಮನಾರ್ಹವಾಗಿವೆ. ತಂಜಾವೂರಿನಲ್ಲಿ ರಾಜರಾಜ ಕಟ್ಟಿಸಿದ ರಾಜರಾಜೇಶ್ವರ ಮತ್ತು ಗಂಗೈಕ್ಕೊಂಡ ಚೋಳಪುರದಲ್ಲಿ 1ನೆಯ ರಾಜೇಂದ್ರ ಕಟ್ಟಿಸಿದ ಗಂಗೈಕ್ಕೊಂಡ ಚೋಳೇಶ್ವರ ದೇವಾಲಯಗಳು ಚೋಳಶೈಲಿಯ ಉತ್ತುಂಗ ಶಿಖರಗಳು. ಗಾತ್ರದಲ್ಲಷ್ಟೇ ಅಲ್ಲ. ರಚನೆಯಲ್ಲಿ, ಶಿಲ್ಪದಲ್ಲಿ, ಯಾವುದೇ ದೃಷ್ಟಿಯಿಂದಲೂ ಇವನ್ನು ಮೀರಿಸಿದ ಚೋಳ ದೇವಾಲಯಗಳಿಲ್ಲ, ರಾಜರಾಜೇಶ್ವರ ಅಥವಾ ಬೃಹದೀಶ್ವರ ದೇವಾಲಯ ರಾಜರಾಜನ ಅತ್ಯದ್ಭುತ ಸಾಧನೆ. 1003ರಲ್ಲಿ ಆರಂಭವಾದ ಈ ದೇವಾಲಯ ನಿರ್ಮಾಣ 1009-10ರ ಹೊತ್ತಿಗೆ, ಎಂದರೆ ರಾಜರಾಜನ ಆಳ್ವಿಕೆಯ 25ನೆಯ ವರ್ಷದಲ್ಲಿ ಮುಗಿಯಿತು. ಚೋಳರ ಬಲ ಮತ್ತು ಐಶ್ವರ್ಯಗಳು ರಾಜರಾಜನ ಕಾಲದಲ್ಲಿ ಹೇಗೆ ಬೆಳೆದುವೆಂಬುದಕ್ಕೆ ಇದು ಸಾಕ್ಷಿಯಾಗಿದೆ. 180' ಉದ್ದವಿರುವ ದೇವಾಲಯದ ವಿಮಾನ 190' ಎತ್ತರವಾಗಿದೆ. ಇದು ಭಾರತದಲ್ಲೇ ಅತ್ಯುನ್ನತ ದೇವಾಲಯ. ವಿಮಾನ, ಅರ್ಧಮಂಟಪ, ಮಹಾಮಂಟಪ, ನಂದಿಮಂಟಪಗಳು. ಅವನ್ನು ಬಳಸಿದ ಒಂದು ದೊಡ್ಡ ಪ್ರಾಕಾರ, ಆ ಪ್ರಾಕಾರದ ಒಳಭಾಗದಲ್ಲಿ 35 ಸಣ್ಣ ಗುಡಿಗಳು. ಪ್ರಾಕಾರದ ಪ್ರವೇಶದ್ವಾರದ ಮೇಲೊಂದು ಗೋಪುರ. ಅಲ್ಲಿಂದ ಹೊರಗಡೆಗೆ ಎರಡನೆಯ ಪ್ರಾಕಾರಕ್ಕೆ ಸೇರಿದಂತೆ ಮತ್ತೊಂದು ಗೋಪುರ, ಇದರ ಭವ್ಯವಾದ ವಿಮಾನ 90' ಚೌಕದ ಭದ್ರವಾದ ಬುನಾದಿಯ ಮೇಲೆ ನಿಂತಿದೆ. ಹೊರಮುಖದಲ್ಲಿರುವ ಹಲವು ಭಾಗಗಳು ಒಳಸರಿದೋ ಹೊರಚಾಚಿಯೋ ಇದ್ದು ದೇವಾಲಯದ ಒಟ್ಟಿನ ಆಕೃತಿಗೆ ಮೆರಗು ನೀಡಿವೆ. ಗರ್ಭಗೃಹದ ಗೋಡೆಯ ಎತ್ತರ 50'. ಅದರ ಮೇಲೆ 13 ಅಂತಸ್ತುಗಳಲ್ಲಿ ಗೋಪುರಾಕೃತಿಯಲ್ಲಿ ನೇರವಾಗಿ ಮೇಲೆದ್ದಿರುವ ವಿಮಾನದ ತುದಿಯಲ್ಲಿ ಗುಂಡಾದ ಶಿಖರವಿದೆ. ಅದರ ಭವ್ಯತೆ ಅಡಗಿರುವುದು ವಿಮಾನದ ಸರಳವಾದ ನೇರವಾದ ನಿಲುವಿನಲ್ಲಿ ಮತ್ತು ಅದರ ಮೇಲಿನ ಗೋಳಾಕೃತಿಯ ಬೃಹತ್ ಶಿಖರದಲ್ಲಿ. ಮಧ್ಯದಲ್ಲಿ ಅಡ್ಡವಾಗಿ ಹಾದುಹೋಗಿರುವ ದಿಂಡುಕಲ್ಲಿನಿಂದ ಹೊರಗೋಡೆ ಎರಡು ಭಾಗವಾಗಿದೆ. ಈ ದಿಂಡಿನ ಕೆಳಗು ಮೇಲೂ ಅರೆಗಂಬಗಳ ಸಾಲು ಮತ್ತು ಇತರ ಅಲಂಕೃತ ಶಿಲ್ಪಗಳಿವೆ. ಗೋಡೆಗೆ ಹಲವು ಮುಖಗಳಿವೆ. ಒಂದೊಂದು ಮುಖದಲ್ಲೂ ಅರೆಮಂಟಪಗಳು ಅಥವಾ ಆಳವಾದ ದೇವಗೋಷ್ಠಗಳಿವೆ. ಅವುಗಳಲ್ಲಿ ಅತ್ಯಂತ ಸುಂದರವಾಗಿ ಕಡೆದ ಮೂರ್ತಿಶಿಲ್ಪಗಳು ತುಂಬಿವೆ. ಮೇಲೇರುತ್ತ ಕಿರಿದಾಗುವ ವಿಮಾನದ 13 ಅಂತಸ್ತುಗಳೂ ರಚನೆಯಲ್ಲಿ ಒಂದೇ ಬಗೆ, ಒಂದೊಂದರಲ್ಲೂ ಅಲಂಕೃತ ಕಿರುಗೋಪುರಗಳ ಸಾಲು. ಇದು ಅತ್ಯಂತ ಸುಂದರವಾದ ಶಿಲ್ಪ ಜೋಡಣೆ. ಚೌಕಾಕೃತಿಯಲ್ಲೇ ಮೇಲೆದ್ದ ಈ ವಿಮಾನದ ತುದಿಯಲ್ಲಿಯ ಕಂಠ ಭಾಗದಿಂದ ಅದರ ಮೇಲೆ ನಾಲ್ಕು ಕಡೆಯೂ ಅಲಂಕೃತ ಗೂಡುಗಳಿರುವ ಗೋಲಾಕೃತಿಯ ದೊಡ್ಡ ಶಿಖರದಿಂದ ಅದರ ಸೌಂದರ್ಯ ಇಮ್ಮಡಿಸಿದೆ. 45' ಚೌಕದ ಗರ್ಭಗೃಹದ ಸುತ್ತಲೂ ಇರುವ 6' ಅಗಲದ ಪ್ರದಕ್ಷಿಣಾಪಥದ ಒಳಚಾವಣಿ ಆ ಕಾಲದ ಸೊಗಸಾದ ವರ್ಣಚಿತ್ರಗಳಿಂದ ತುಂಬಿದೆ. ಗರ್ಭಗೃಹದಲ್ಲಿರುವ ಲಿಂಗ, ನಂದಿಮಂಟಪದಲ್ಲಿರುವ ನಂದಿ ಎರಡೂ ದೊಡ್ಡವು. ಅರ್ಧ ಮಂಟಪ ಹೊರಗೋಡೆಗಳ ಗೂಡುಗಳಲ್ಲಿರುವ ದೇವತಾಮೂರ್ತಿಗಳು ಕಲಾತ್ಮಕವಾದವು. ಒಟ್ಟಿನಲ್ಲಿ ಈ ದೇವಾಲಯದ ರಚನೆ ಸುಭದ್ರ, ಸ್ಥೂಲ, ಭವ್ಯ ಮತ್ತು ಪ್ರಮಾಣಬದ್ಧ.

ರಾಜರಾಜೇಂದ್ರ ಸು. 1030ರಲ್ಲಿ ಕಟ್ಟಿಸಿದ ಗಂಗೈಕ್ಕೊಂಡ ಚೋಳೇಶ್ವರ ದೇವಾಲಯ ಇದೇ ಮಾದರಿಯದು. ಇದು ವಿಸ್ತಾರದಲ್ಲಿ ಹಿರಿದಾಗಿದ್ದರೂ ಗಾತ್ರದಲ್ಲಿ ಕಿರಿದು. ಇದರ 8 ಅಂತಸ್ತುಗಳ 160' ಎತ್ತರದ ವಿಮಾನದಲ್ಲಿ ರಾಜರಾಜೇಶ್ವರ ದೇವಾಲಯದ ನೇರವಾದ ನೀಳ ರಚನೆ ಇಲ್ಲ. ಅದರ ಬುಡ ಅಗಲ; ಮೇಲೇರುತ್ತಿದ್ದಂತೆ ಹೊರರಚನೆಯಲ್ಲಿ ಒಂದು ಬಳುಕಿದೆ. ಅದರಲ್ಲಿ ರಾಜರಾಜೇಶ್ವರ ದೇವಾಲಯದ ಗಂಡುತನ ಇಲ್ಲದಿದ್ದರೂ ಗಾಂಭೀರ್ಯವಿದೆ. ದೇವಾಲಯದ ಹೊರರಚನೆಯಲ್ಲೂ ಅಲಂಕರಣ ಹೆಚ್ಚು. ದ್ವಾರಪಾಲಕರು, ಹೊರಗೋಡೆಯ ಮೇಲಿನ ಮೂರ್ತಿಗಳು ಜೀವಂತ ಸೌಂದರ್ಯವನ್ನು ಹೊಮ್ಮಿಸುವ ಮಹತ್ತರ ಕೃತಿಗಳು.

ಮುಂದೆ ಒಂದು ಶತಮಾನಕಾಲ ಚೋಳ ವಾಸ್ತುಶಿಲ್ಪಗಳು ಬಹುಮುಖವಾಗಿ ಬೆಳೆದುವು. ಅನೇಕ ದೇವಾಲಯಗಳ ನಿರ್ಮಾಣವಾಯಿತು. ಇವುಗಳಲ್ಲಿ ದಾರಾಸುರದ ಐರಾತೇಶ್ವರ ದೇವಾಲಯ ಇಮ್ಮಡಿ ರಾಜರಾಜನ ಕಾಲದ ಭವ್ಯ ಕಟ್ಟಡ. ಇದು ತಂಜಾವೂರಿನ ಮಾದರಿಯಲ್ಲೇ ಇದ್ದರೂ ಇದನ್ನು ಹಲವು ಪ್ರಾಕಾರಗಳು ಸುತ್ತುವರಿದಿವೆ. ಅಲ್ಲದೆ ಇದರ ಮಹಾಮಂಟಪದ ಮುಂದೆ ರಾಜಗಂಭೀರವೆಂಬ ಮತ್ತೊಂದು ಮಂಟಪವಿದೆ. ಅದು ಆನೆಗಳು ಎಳೆಯುತ್ತಿರುವ ರಥದ ಮಾದರಿಯಲ್ಲಿದೆ. ಮುಮ್ಮಡಿ ಕುಲೋತ್ತುಂಗನ ಕಾಲದಲ್ಲಿ ತ್ರಿಭುವನದಲ್ಲಿ ಕಟ್ಟಿದ ಕಂಪಹರೇಶ್ವರ ದೇವಾಲಯವೂ ಮೇಲೆ ತಿಳಿಸಿದ ಬೃಹದ್ದೇವಾಲಯಗಳ ಮಾದರಿಯದೇ ಆದರೂ ಅದರಲ್ಲಿ ಚೋಳರ ಕಾಲದ ಅನಂತರ ಬೆಳೆದ ದೇವಾಲಯಗಳ ರಚನೆಯ ವೈವಿಧ್ಯವನ್ನು ಗುರುತಿಸಬಹುದು.

ಚೋಳರ ಕಾಲದ ಮೂರ್ತಿಶಿಲ್ಪ ಜೀವಂತವಾದ ಶಿಲ್ಪಮಾದರಿ. ಪಲ್ಲವರ ಕಾಲದಲ್ಲಿ ತೆಳುವುಬ್ಬು ಶಿಲ್ಪದಲ್ಲಿರುತ್ತಿದ್ದ ಮೂರ್ತಿಗಳು ಚೋಳರ ದೇವಾಲಯಗಳ ಮೇಲೆ ಹೆಚ್ಚು ಗುಂಡು ರೂಪ ತಾಳುತ್ತವೆ. ಅವರ ಕಾಲದ ಕಂಚು ಶಿಲ್ಪಗಳಂತೂ ಲೋಕಪ್ರಸಿದ್ಧವಾಗಿವೆ.

ಶಾಸನಗಳು : ವಿಜಯಾಲಯನ ಕಾಲದಿಂದ ಆರಂಭವಾಗುವ ಚೋಳವಂಶದ ದೊರೆಗಳು ಹೆಚ್ಚಿನ ಸಂಖ್ಯೆಯ ಶಾಸನಗಳನ್ನು ಹಾಕಿಸಿದ್ದಾರೆ. ಇವುಗಳಲ್ಲಿ ಕೆಲವು ತಾಮ್ರಶಾಸನಗಳು, ಹೆಚ್ಚಿನವು ಶಿಲಾಶಾಸನಗಳು. ಈ ಶಾಸನಗಳನ್ನು ಸಾಮಾನ್ಯವಾಗಿ ದೇವಾಲಯಗಳ ತಳಪಾಯದ ದಿಂಡುಗಳ ಮೇಲೆ, ಹೊರಭಿತ್ತಿಗಳ ಮೇಲೆ, ಕಂಬಗಳ ಬುಡದಲ್ಲಿ, ಮೂರ್ತಿಗಳ ಕೆಳಗೆ, ಪ್ರಾಕಾರದ ಗೋಡೆಗಳ ಮೇಲೆ ಹಾಕಿಸಿರುತ್ತದೆ. ಕೆಲವು ದೇವಾಲಯಗಳ ಗೋಡೆಗಳಂತೂ ಶಾಸನಗಳಿಂದ ತುಂಬಿ ಹೋಗಿವೆ. ದೊಡ್ಡ ದೇವಾಲಯಗಳೊಂದೊಂದರಲ್ಲೂ ಚೋಳರ ನೂರಾರು ಶಾಸನಗಳನ್ನು ಕಾಣಬಹುದು. ಅಲ್ಲಲ್ಲಿ ಕಲ್ಲಿನ ಹಲಗೆಗಳ ಮೇಲೆ ಹಾಕಿಸಿರುವ ಶಾಸನಗಳುಂಟು. ಇಟ್ಟಿಗೆಯ ದೇವಾಲಯಗಳನ್ನು ಕಲ್ಲಿನಿಂದ ಹೊಸದಾಗಿ ಕಟ್ಟಿಸಿದಾಗ ಹಳೆಯ ದೇವಾಲಯಗಳ ಮೇಲಿದ್ದ ಶಾಸನಗಳನ್ನು ಹೊಸ ದೇವಾಲಯದ ಗೋಡೆಗಳ ಮೇಲೆ ಪ್ರತಿಮಾಡಿಸುವ ಪದ್ಧತಿಯನ್ನು ಚೋಳರು ಆಚರಣೆಗೆ ತಂದಿದ್ದರು.

ಚೋಳರ ತಾಮ್ರಶಾಸನಗಳು ಅತ್ಯಂತ ದೊಡ್ಡವು. ಚೆನ್ನಾಗಿ ತಟ್ಟಿ ಮಾಡಿದ ಅಗಲವಾದ ಹಲಗೆಗಳನ್ನು ದೊಡ್ಡದಾದ ಬಳೆಯೊಂದಕ್ಕೆ ಪೋಣಿಸಿ ಬಳೆಯ ತುದಿಗಳನ್ನು ಗುಂಡು ಮುದ್ರೆಯೊಂದಕ್ಕೆ ಬೆಸೆದು ಸೇರಿಸಿರುತ್ತದೆ. ಅವುಗಳಲ್ಲಿ ಒಂದೊಂದೂ ಹೆಚ್ಚು ತೂಕವುಳ್ಳವಾಗಿರುತ್ತವೆ. ಲೇಡನ್ ವಸ್ತುಸಂಗ್ರಹಾಲಯದಲ್ಲಿರುವ 1ನೆಯ ರಾಜರಾಜನ ತಾಮ್ರಶಾಸನದಲ್ಲಿ 21 ಹಲಗೆಗಳಿವೆ; 443 ಪಂಕ್ತಿಗಳುಂಟು. ರಾಜೇಂದ್ರ ಚೋಳನ 6ನೆಯ ವರ್ಷದ ತಿರುವಾಲಂಗಾಡು ಶಾಸನದಲ್ಲಿ 31 ಹಲಗೆಗಳಿವೆ. ಇದು ದೊಡ್ಡದಾದ ಬಳೆ ಮುದ್ರೆಗಳಿಂದ ಕೂಡಿ, 7,980 ತೊಲ ತೂಗುತ್ತದೆ. ಇದರಲ್ಲಿ 816 ಪಂಕ್ತಿಗಳುಂಟು. ಇದುವರೆಗೆ ದೊರೆತಿರುವ ತಾಮ್ರಶಾಸನಗಳಲ್ಲೆಲ್ಲ ಅತ್ಯಂತ ದೊಡ್ಡದಾದ್ದು 1ನೆಯ ರಾಜೇಂದ್ರನ ಕರಂದೈ ಶಾಸನ. ಗಳ 55 ಹಲಗೆಗಳ ಮೇಲೆ 2,500 ಪಂಕ್ತಿಗಳಿಗೂ ಉದ್ದವಾದ ಶಾಸನವಿದೆ. ಇದರ ತೂಕ 89,645 ತೊಲಗಳು. ಜೊತೆಗೆ ಇದರ ಮುದ್ರೆ ಮತ್ತು ಉಂಗುರಗಳ ತೂಕ 753 ತೊಲಗಳು. 1,500 ಪಂಕ್ತಿಗಳಲ್ಲಿ ಚೋಳರ ದೀರ್ಘವಾದ ವಂಶಾವಳಿಯನ್ನು ಕೊಟ್ಟಿರುವ ಈ ಶಾಸನದಲ್ಲಿ 1,073 ಬ್ರಾಹ್ಮಣರಿಗೆ ದತ್ತಿಯನ್ನು ಕೊಟ್ಟ ವಿಷಯವನ್ನು ವಿವರವಾಗಿ ತಿಳಿಸಿದೆ. ಈ ತಾಮ್ರಶಾಸನಗಳಲ್ಲಿ ಸೂರ್ಯವಂಶದ ಪೌರಾಣಿಕ ರಾಜಮನೆತನದಿಂದ ಆರಂಭಿಸಿ ಅತಿ ದೀರ್ಘವಾಗಿ ಚೋಳ ವಂಶಾವಳಿಯ ಪಟ್ಟಿ ಕೊಟ್ಟಿದೆಯಲ್ಲದೆ ರಾಜರ ಪ್ರಶಸ್ತಿಗಳನ್ನೂ ತಿಳಿಸಿದೆ.

ಚೋಳರ ಮೊದಮೊದಲಿನ ತಾಮ್ರಶಾಸನಗಳಲ್ಲಿ ಸ್ವಲ್ಪಭಾಗ ಸಂಸ್ಕøತದಲ್ಲೂ ಉಳಿದ ಭಾಗ ತಮಿಳಿನಲ್ಲೂ ಇರುವುದು ರೂಢಿ; ರಾಜರಾಜರ ಲೇಡನ್ ಶಾಸನ, ರಾಜೇಂದ್ರನ ತಿರುವಾಲಂಗಾಡು ಶಾಸನ. ಸುಂದರ ಚೋಳನ ಅನ್‍ಬಿಲ್ ಶಾಸನ ಮುಂತಾದವು ಈ ಗುಂಪಿಗೆ ಸೇರಿದವು. ಆದರೆ ಮುಂದೆ ಇವರು ಶಾಸನಗಳನ್ನು ಪೂರ್ಣವಾಗಿ ತಮಿಳಿನಲ್ಲೇ ಹಾಕಿಸಿದರು. ರಾಜೇಂದ್ರನ ತಿರುಕ್ಕಲರ್ ಶಾಸನ ತಮಿಳಿನಲ್ಲೇ ಇದೆ. ಅದೇ ತಿರುಕ್ಕಲರಿನ 1ನೆಯ ರಾಜಾಧಿರಾಜ, 1ನೆಯ ಕುಲೋತ್ತುಂಗ, ಇಮ್ಮಡಿ ರಾಜರಾಜ, ಮುಮ್ಮಡಿ ಕುಲೋತ್ತುಂಗ ಮುಂತಾದವರ ತಾಮ್ರಶಾಸನಗಳೂ ಪೂರ್ಣವಾಗಿ ತಮಿಳಿನಲ್ಲೇ ಇವೆ. ಬಳೆಯ ತುದಿಗಳನ್ನು ಬಂಧಿಸಿರುವ ಗುಂಡು ಮುದ್ರೆಗಳ ಮೇಲೆ ಛತ್ರ, ಚಾಮರ, ದೀಪಸ್ತಂಭಗಳು, ಹುಲಿ ಮುಂತಾದ ಚಿಹ್ನೆಗಳಿವೆ.

ಶಿಲಾಶಾಸನಗಳು ವೈವಿಧ್ಯಮಯವಾದವು. ಮೂರ್ತಿಗಳ ಹೆಸರನ್ನು ಸೂಚಿಸುವ ಒಂದೇ ಪದವುಳ್ಳ ಶಾಸನಗಳಿಂದ ಹಿಡಿದು, ಬೃಹದೀಶ್ವರ ದೇವಾಲಯದಲ್ಲಿರುವ 55' ಎತ್ತರದ, 55ಕ್ಕಿಂತ ಹೆಚ್ಚು ಸಾಲುಗಳಿರುವ, 1ನೆಯ ರಾಜರಾಜನ ಶಾಸನದಂತೆ ದೀರ್ಘವಾದವೂ ಇವೆ. ದಾರಾಸುರಂನಲ್ಲಿ ಐರಾವತೇಶ್ವರ ದೇವಾಲಯದ ಗೋಡೆಗಳ ಗೂಡುಗಳಲ್ಲಿರುವ ಮೂರ್ತಿಗಳ ಪೀಠಗಳ ಮೇಲೆ ಮೂರ್ತಿಗಳ ಹೆಸರುಗಳನ್ನು ತಿಳಿಸುವ ಸಣ್ಣಸಣ್ಣ ಶಾಸನಗಳಿವೆ. ಶಿಲಾ ಶಾಸನಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯವು ರಾಜನೋ, ಅಧಿಕಾರಿಗಳೋ, ಗ್ರಾಮ ಸಭೆಗಳೋ, ಸೈನ್ಯಗಳ ತುಕಡಿಗಳೊ ಸಾಮಾನ್ಯ ಜನತೆಯೋ ದೇವಾಲಯಗಳಿಗೆ, ಮಠಗಳಿಗೆ, ಬ್ರಾಹ್ಮಣರಿಗೆ ಕೊಟ್ಟ ದತ್ತಿಯನ್ನು ಅಥವಾ ನಂದಾದೀಪಕ್ಕಾಗಿ, ದೇವರಪೂಜೆಗಾಗಿ ಇಟ್ಟಪುದುವಟ್ಟು ಅಥವಾ ಬಿಟ್ಟ ಹಸು ಕುರಿಗಳ ವಿಷಯವನ್ನು ತಿಳಿಸುತ್ತವೆ. ಗ್ರಾಮಸಭೆಗಳು ನಡೆಸುತ್ತಿದ್ದ ವ್ಯವಹಾರ, ಕೊಡುತ್ತಿದ್ದ ತೀರ್ಪು, ಹಾಕುತ್ತಿದ್ದ ದಂಡ, ಸ್ವತ್ತುಗಳ ಮಾರಾಟ, ಈಡುಮಾಡುವುದು ಮುಂತಾದುವುಗಳ ವಿವರಗಳನ್ನು ದೇವಾಲಯಗಳ ಗೋಡೆಗಳ ಮೇಲೆ ದಾಖಲು ಮಾಡಿರುವುದೂ ಉಂಟು. ಚಾರಾಲ ತಾಮ್ರಶಾಸನದಲ್ಲಿರುವ ಸಂಸ್ಕøತ ಪ್ರಶಸ್ತಿ ಕನ್ಯಾಕುಮಾರಿ ಶಿಲಾಶಾಸನದ ಪ್ರತಿ. ತಿರುವಿಡೈವಾಯಿಲ್‍ನಲ್ಲಿರುವ ಅಪರೂಪದ ಶಾಸನವೊಂದು ಜ್ಞಾನಸಂಬಂಧರು ಅಲ್ಲಿಯ ದೇವಾಲಯವೊಂದರ ವಿಷಯದಲ್ಲಿ ಹಾಡಿರುವ ತೇವಾರವನ್ನು ಒಳಗೊಂಡಿದೆ.

ಚೋಳರ ಶಾಸನಗಳು ತಮಿಳುಗ್ರಂಥ ಅಥವಾ ವಟ್ಟೆಳುತ್ತು ಲಿಪಿಯಲ್ಲಿವೆ. ವಟ್ಟೆಳುತ್ತನ್ನು ತಮಿಳುನಾಡಿನಲ್ಲಿ 10ನೆಯ ಶತಮಾನದಿಂದೀಚೆಗೆ 16ನೆಯ ಶಾಸನದಿಂದೀಚೆಗೆ ಬಳಸುವುದು ನಿಂತುಹೋಯಿತು. ಚೋಳಸರು ಗೆದ್ದ ಇತರ ಪ್ರಾಂತ್ಯಗಳಲ್ಲಿ ಆಯಾ ಪ್ರಾಂತ್ಯದ ಭಾಷೆ ಮತ್ತು ಲಿಪಿಯನ್ನು ಬಳಸಿರುವುದುಂಟು. ಒಂದನೆಯ ರಾಜರಾಜನ ಸೇನಾಧಿಪತಿ ಅಪ್ರಮೇಯ ಕಲಿಯೂರಿನಲ್ಲಿ ಹಾಕಿಸಿರುವ ಜಯಸ್ತಂಭ ಶಾಸನವೂ ಒಂದನೆಯ ರಾಜೇಂದ್ರನ ಬಲಮುರಿ ಶಾಸನವೇ ಮುಂತಾದವೂ ಸುಂದರವಾದ ಕನ್ನಡ ಲಿಪಿ ಮತ್ತು ಭಾಷೆಯಲ್ಲಿವೆ. ಕೆಲವು ಶಾಸನಗಳು ತಮಿಳು ಭಾಷೆ ಮತ್ತು ಕನ್ನಡಲಿಪಿ ಮತ್ತು ಭಾಷೆಯಲ್ಲಿವೆ. ಕೆಲವು ಶಾಸನಗಳು ತಮಿಳು ಭಾಷೆ ಮತ್ತು ಕನ್ನಡಲಿಪಿಯಲ್ಲಿರುವುದೂ ಉಂಟು. ಅನಂತಪುರ ಜಿಲ್ಲೆಯು ಕೊತ್ತ ಶಿಖರದಲ್ಲಿರುವ, 1ನೆಯ ರಾಜೇಂದ್ರನ ಕಾಲದ, ತಮಿಳು ಶಾಸನವೊಂದು ಕನ್ನಡ ಲಿಪಿಯಲ್ಲಿದೆ. ವೆಂಗಿನಾಡಿನಲ್ಲೂ ಚೋಳರ ಹಲವು ಶಾಸನಗಳುಂಟು. ಆದರೆ ಅಲ್ಲಿ ಹಾಕಿಸಿದ ಹೆಚ್ಚು ಶಾಸನಗಳು ತಮಿಳನವು. ಕೋಲಾರದ ಕೋಲಾರಮ್ಮನ ದೇವಾಲಯದ ಗೋಡೆಯ ಮೇಲೆ ತಮಿಳು ಶಾಸನಗಳು ತುಂಬಿವೆ.

ರಾಜರ ವಂಶಾವಳಿಯನ್ನು ಕೊಟ್ಟು ಆಯಾ ರಾಜರ ಕಾಲದಲ್ಲಿ ನಡೆದ ಕೆಲವು ಘಟನೆಗಳನ್ನು ತಿಳಿಸುವುದು ರಾಜರಾಜನ ಕಾಲದವರೆಗಿನ ಪದ್ಧತಿಯಾಗಿತ್ತು. ಆದರೆ ರಾಜರಾಜ ತನ್ನ ಶಿಲಾಶಾಸನಗಳಲ್ಲಿ ತನ್ನ ಆಡಳಿತ ಕಾಲದಲ್ಲಿ ಆಯಾ ವರ್ಷ ನಡೆದ ಮುಖ್ಯ ಘಟನೆಗಳನ್ನು ಒಂದು ಗೊತ್ತಾದ ರೀತಿಯಲ್ಲಿ ವರ್ಣಿಸುವ ಪದ್ಧತಿಯನ್ನು ಅನುಷ್ಠಾನಕ್ಕೆ ತಂದ. ಕಾಲ ಕಳೆದಂತೆ ಆ ವರ್ಣನೆಯ ಜೊತೆಗೆ ಹೊಸ ಹೊಸ ಘಟನೆಗಳನ್ನೂ ವರ್ಣನೆಯನ್ನೂ ಸೇರಿಸುತ್ತ ಹೋಗುವ ಪದ್ಧತಿ ಬೆಳೆಯಿತು. ಇದರಿಂದ ಅವನ ಕಾಲದಲ್ಲಿ ನಡೆದ ಮುಖ್ಯ ಘಟನೆಗಳ ಅನುಕ್ರಮಣಿಕೆಯನ್ನು ತಿಳಿಯಲು ಅನುಕೂಲವಾಗಿದೆ. ಇದೇ ಪದ್ಧತಿಯನ್ನೇ ರಾಜರಾಜನ ಅನಂತರ ಬಂದ ರಾಜರೂ ಅನುಸರಿಸಿದರು. ಹೀಗೆ ಒಬ್ಬೊಬ್ಬ ರಾಜನೂ ತನ್ನ ಮೈ, ಕೀರ್ತಿ ಅಥವಾ ಪ್ರಶಸ್ತಿಯನ್ನು ಒಂದು ಗೊತ್ತಾದ ರೀತಿಯಲ್ಲಿ ಆರಂಭಿಸಿರುವುದನ್ನು ಕಾಣಬಹುದು. ರಾಜರಾಜನ ಪ್ರಶಸ್ತಿ ತಿರುಮಗಳ್ ಪೋಲ ಎಂದು ಆರಂಭವಾದರೆ, ರಾಜೇಂದ್ರನ ಪ್ರಶಸ್ತಿ ಆರಂಭವಾಗುವುದು ತಿರುಮಣ್ಣಿವಳರ ಎಂದು. ರಾಜೇಂದ್ರನ ಚಿಕ್ಕ ಶಾಸನಗಳಲ್ಲಿ ಪೂರ್ವ ದೇಶಮುಂ ಗಂಗೆಯೂ ಕಡಾರಮುಂಕೊಣ್ಣಕೋಪರ ಕೇಸರಿ, ಪನ್ಮರಾನ-ಎಂದು ಮಾತ್ರ ಇರುತ್ತದೆ. ಇದೇ ರೀತಿ ಒಂದನೆಯ ರಾಜಾಧಿರಾಜನ ಶಾಸನಗಳು ತಿಙ್ಗಳೇರ್ತರು ಎಂದೂ ಇಮ್ಮಡಿ ರಾಜೇಂದ್ರನ ಶಾಸನಗಳು ತಿರುಮಾಡು ಪುವಿಯೆನುಂ ಎಂದೂ ವೀರರಾಜೇಂದ್ರನವು ತಿರುಳರ್ ತಿರುಳ್ ಪುಯತ್ತು ಎಂದೂ ಆರಂಭವಾಗಿ ಅವರವರ ಸಾಧನೆಗಳನ್ನು ವರ್ಣಿಸುತ್ತವೆ.

ಚೋಳರ ಶಾಸನಗಳ ವಿಷಯಗಳು ಹೆಚ್ಚು ವೈವಿಧ್ಯಮಯ. ದತ್ತಿ ಶಾಸನಗಳೇ ಸಾಮಾನ್ಯ. ಆದರೆ ಚಾರಿತ್ರಿಕ ವಿಷಯಗಳನ್ನು ಮಾತ್ರ ತಿಳಿಸುವ ಶಾಸನಗಳೂ ಇಲ್ಲದಿಲ್ಲ. ರಾಜರಾಜ ಪಾಂಡ್ಯರಿಂದ ಸೋತು ಓಡಿಹೋದದ್ದನ್ನೂ ಅನಂತರ ಹೊಯ್ಸಳ ವೀರ ಬಲ್ಲಾಳನ ನೆರವಿನಿಂದ ರಾಜ್ಯಕ್ಕೆ ಹಿಂದಿರುಗಿದ್ದನ್ನೂ ತಿರುವೇಂಡಿಪುರದಲ್ಲಿರುವ ಮುಮ್ಮಡಿ ರಾಜರಾಜನ ಕಾಲದ ಇಂಥ ಒಂದು ಶಾಸನ ನೇರವಾಗಿ ತಿಳಿಸುತ್ತದೆ. ಕಲಿಯೂರಿನಲ್ಲಿರುವ ಅಪ್ರಮೇಯನ ಶಾಸನ, ಅವನು ಕನ್ನಡನಾಡಿನ ಹಲವು ರಾಜಮನೆತನಗಳನ್ನು ಒಟ್ಟಾಗಿ ಎದುರಿಸಿ ಸೋಲಿಸಿದುದನ್ನು ವರ್ಣಿಸುವ ಒಂದು ಜಯಸ್ತಂಭ. ತಿರುವಾಲೀಶ್ವರದ ಅಪರೂಪ ಶಾಸನವೊಂದು, ಮೂನ್ರುಕೈ ಮಹಾ ಸೇನೈ ಎಂಬ ಒಂದು ಸೈನ್ಯದ ತುಕಡಿಯ ಸಾಹಸ; ಅದು ನಡೆಸಿದ ಯುದ್ಧಗಳು, ಗೆದ್ದ ಗೆಲುವುಗಳು-ಇವನ್ನು ಇದು ವಿವರಿಸುತ್ತದೆ. ಒಂದನೆಯ ಪರಾಂತಕನ ಕಾಲದ ಉತ್ತರ ಮೇರೂರಿನ ಎರಡು ಶಾಸನಗಳು ಗ್ರಾಮಸಭೆಗೆ ವಾರಿಯಂಗಳಿಗೆ ಕುಡುವೋಲೈ ಮೂಲಕ ನಡೆಸುವ ಚುನಾವಣೆಯ ಬಗ್ಗೆ ವಿವರವಾದ ತಿಳುವಳಿಕೆಯನ್ನು ಕೊಡುವುದಲ್ಲದೆ, ಚುನಾವಣೆಗೆ ನಿಲ್ಲಬೇಕಾದವರ ಅರ್ಹತೆಗಳೇನಿರಬೇಕೆಂಬುದನ್ನೂ ನಿಗದಿಪಡಿಸುತ್ತವೆ. ಮಧುರಾಂತಕ ಉತ್ತಮ ಚೋಳನ 14ನೆಯ ವರ್ಷಕ್ಕೆ ಸೇರಿದ ತಿರುಮಲಾಪುರದ ಒಂದು ಶಾಸನ ಮೂರು ವರ್ಷಗಳಷ್ಟು ಕಾಲ ನಡೆದ ವ್ಯವಹಾರವೊಂದನ್ನು ವಿವರಿಸುತ್ತದೆ. ಒಂದನೆಯ ಆದಿತ್ಯನ ಕಾಲದಲ್ಲಿ ಶೆಟ್ರಿಯೂರನ್ನು ದೇವದಾನವಾಗಿ ಪುದುಪ್ಪಾಕ್ಕಂ ಸಭೆಯ ವಶಕ್ಕೆ ಬಿಟ್ಟಿತು. ಆದರೆ ಶಾಸನ ಹಾಕಿಸಿದ್ದರೂ ಅದು ಕಡತಗಳಲ್ಲಿ ಸೇರಿದ್ದುದರಿಂದ ದೇವಾಲಯಕ್ಕೆ ಅದರ ಉತ್ಪತ್ತಿ ತಲುಪುತ್ತಿರಲಿಲ್ಲ. ಒಂದನೆಯ ಪರಾಂತಕನ ಕಾಲದಲ್ಲಿ 4ನೆಯ ವರ್ಷದಲ್ಲಿ ಈ ತಪ್ಪನ್ನು ಸರಿಪಡಿಸಿದ ಮೇಲೆ ಪುದುಪ್ಪಾಕ್ಕಂ ಸಭೆ ದೇವಾಲಯಕ್ಕೆ ಅಲ್ಲಿಯ ಉತ್ಪತ್ತಿಯನ್ನು ಕೊಡಲಾರಂಭಿಸಿತು. ಪರಾಂತಕನ ಆಳ್ವಿಕೆಯ ಮೂವತ್ತಾರನೆಯ ವರ್ಷದಲ್ಲಿ ಮತ್ತೊಂದು ದತ್ತಿ ಬಿಟ್ಟುದರಿಂದ ಅದೂ ಸೇರಿದಂತೆ ಹೆಚ್ಚಿನ ವರಮಾನವನ್ನು ಆ ಸಭೆ ದೇವಸ್ಥಾನಕ್ಕೆ ಕೊಡಬೇಕಾಗಿತ್ತು. ಹಾಗೆ ಕೊಡದೆ ಹೆಚ್ಚಿನ ಬಾಕಿಯನ್ನು ಸಭೆ ಉಳಿಸಿಕೊಂಡಿತ್ತು. ಉತ್ತಮ ಚೋಳನ ಕಾಲದಲ್ಲಿ ದೇವಸ್ಥಾನದ ಅಧಿಕಾರಿಗಳು ರಾಜನಲ್ಲಿ ದೂರಿತ್ತಾಗ ರಾಜ ಅದನ್ನು ಸರಿಪಡಿಸಿ ಆಜ್ಞೆ ಹೊರಡಿಸಿದ. ಕಿಲಿಯ್ಯೂರಿನ ಮತ್ತೊಂದು ಶಾಸನ, ಮುಮ್ಮಡಿ ಕುಲೋತ್ತುಂಗನ ಕಾಲಕ್ಕೆ ಸೇರಿದ್ದು. ಅದರಲ್ಲಿ ನ್ಯಾಯ ನಿರ್ವಹಣೆಯ ವಿಷಯವಿದೆ. ಆ ಊರಿನ ಇಬ್ಬರು ಜಗಳವಾಡಿ ಊರಿಗೆ ತೊಂದರೆ ಕೊಟ್ಟಿದ್ದರಿಂದ ಅವರನ್ನು ವಿಚಾರಣೆಗೆ ಗುರಿಪಡಿಸಿ ರಾಜಾಜ್ಞೆಯ ಮೇರೆಗೆ ಸಾವಿರ ಕಾಶು ದಂಡ ಹಾಕಲಾಯಿತು. ಅವರ ನೆರವಿಗೆ ಯಾರೂ ಬಾರದಿರಲು ಅವರ ಆಸ್ತಿಯನ್ನು ಸಾವಿರದರವತ್ತು ಕಾಶುಗಳಿಗೆ ಮಾರಿ ದಂಡವನ್ನು ಉತ್ತಾರ ಹಾಕಿಕೊಂಡದ್ದಲ್ಲದೆ ಅದನ್ನು ಕೊಡಲು ತಡಮಾಡಿದ್ದಕ್ಕಾಗಿ ಹೆಚ್ಚಿಗೆ ಬಂದ ಅರವತ್ತು ಕಾಶುಗಳನ್ನೂ ದಂಡವನ್ನಾಗಿ ಪರಿಗಣಿಸಲಾಯಿತು.

ಗ್ರಾಮಾಡಳಿತಕ್ಕೆ, ನ್ಯಾಯನಿರ್ವಹಣೆಗೆ, ಸಂಘ ಸಮುದಾಯಗಳಿಗೆ ಸಂಬಂಧಿಸಿದ ವಿವರಗಳನ್ನು ಕೊಡುವ ಶಾಸನಗಳಿರುವಂತೆ, ದೇವಾಲಯಗಳ ಆಡಳಿತಕ್ಕೆ ಸಂಬಂಧಿಸಿದ ಪರಿಚಯ ನೀಡುವ ಹಲವು ಶಾಸನಗಳಿವೆ. ತಂಜಾವೂರಿನ ಬೃಹದೀಶ್ವರ ದೇವಾಲಯದ ಮೇಲಿರುವ ಶಾಸನದಲ್ಲಿ ರಾಜರಾಜ ಆ ದೇವಾಲಯವನ್ನು ನಿರ್ಮಿಸಿದ್ದನ್ನೂ ರಾಜರಾಜೇಶ್ವರ ದೇವರ ಪ್ರತಿಷ್ಠೆ ಮಾಡಿದ್ದನ್ನೂ ಅವನೂ ಅವನ ಸೋದರಿ ಕುಂದವೈಯೂ ಅಧಿಕಾರಿಗಳೂ ದಂಡನಾಯಕರೂ ದೇವರಿಗೆ ಮಾಡಿದ ದಾನಗಳನ್ನೂ ಸಂಪೂರ್ಣವಾದ ವಿವರಗಳೊಡನೆ ನೀಡಲಾಗಿದೆ. ನೂರಾರು ಆಭರಣಗಳ ಹೆಸರು, ತೂಕ, ಬೆಲೆ-ಎಲ್ಲವೂ ಅದರಲ್ಲಿವೆ. ರಾಜರಾಜ ಯುದ್ಧದಲ್ಲಿ ದೋಚಿ ತಂದ ಐಶ್ವರ್ಯದ ಬಹುಭಾಗ ಇದರಲ್ಲಿ ಸೇರಿತ್ತು. ಚಿನ್ನವೇ 41,500 ಕ¾ಂಜುಗಳಷ್ಟಿತ್ತು. 10,200 ಕಾಶುಗಳ ಬೆಲೆಯ ಒಡವೆಗಳಿದ್ದುವು. ಅವನು 50,650 ಕರಂಜುಗಳ ತೂಕದ ಬೆಳ್ಳಿಯನ್ನು ದೇವಾಲಯಕ್ಕೆ ಕೊಟ್ಟ; ಸಾಮ್ರಾಜ್ಯದ ನಾನಾ ಬಾಗಗಳಲ್ಲಿ ಅನೇಕ ಹಳ್ಳಿಗಳನ್ನೂ ಭೂಮಿಗಳನ್ನೂ ದತ್ತಿ ಬಿಟ್ಟಿದ್ದ ಇದರಿಂದ 1,16,000 ಕಲಂ ಬತ್ತದ ಆದಾಯವಿತ್ತು; ದೇವಸ್ಥಾನದ ಆಡಳಿತವರ್ಗದಲ್ಲಿ 400 ಜನರಿದ್ದರು. ಆಸ್ಪತ್ರೆಗಳನ್ನೂ ವಿದ್ಯಾಶಾಲೆಗಳನ್ನೂ ನಡೆಸಲು ಬಿಟ್ಟಿದ್ದ ದತ್ತಿಗಳ ವಿವರಗಳೂ ಇವೆ. ಒಂದನೆಯ ರಾಜೇಂದ್ರನ ಎಣ್ಣಾಯಿರಂ ಶಾಸನದಲ್ಲಿ ಶಾಲೆಗಳ, ಶಾಲಾಭೋಗಗಳ ವಿವರಗಳನಿತ್ತಿದೆ. 270 ಬ್ರಹ್ಮಚಾರಿಗಳು, 70 ಶಾತ್ತಿರಾರ್‍ಗಳು ಮತ್ತು 14 ಪ್ರಾಧ್ಯಾಪಕರಿಗೆ ಅಲ್ಲಿ ಊಟ, ವಾಸ ಮತ್ತು ವಿದ್ಯಾಭ್ಯಾಸಕ್ಕೆ ಅವಕಾಶಮಾಡಿಕೊಡಲಾಗಿತ್ತು.

ಹೀಗೆ ಚೋಳರ ಶಾಸನಗಳು ಇತರ ರಾಜವಂಶಗಳ ಶಾಸನಗಳಿಗಿಂತ ವಿಶಿಷ್ಟವಾಗಿದ್ದು, ಆ ಕಾಲದ ಆಡಳಿತ, ವಿದ್ಯಾಬ್ಯಾಸ, ಮತ, ಧರ್ಮ, ನ್ಯಾಯನಿರ್ವಹಣೆ ಸಂಸ್ಕøತಿ ಮುಂತಾದ ಹಲವು ವಿಷಯಗಳ ಮೇಲೆ ಅಮೂಲ್ಯವಾದ ಬೆಳಕನ್ನು ಚೆಲ್ಲುತ್ತವೆ.

ನಾಣ್ಯಗಳು : ಚೋಳರ ಈಗ ದೊರೆತಿರುವ ನಾಣ್ಯಗಳ ಸಂಖ್ಯೆ ಹೆಚ್ಚಿಲ್ಲ. ಅವರ ಚಿನ್ನ, ಬೆಳ್ಳಿ ಮತ್ತು ತಾಮ್ರ ನಾಣ್ಯಗಳು ದೊರೆತಿದ್ದರೂ ಮೊದಲಿನ ಚಕ್ರವರ್ತಿಗಳು ಹಾಕಿಸಿದ್ದ ಶುದ್ಧ ಚಿನ್ನದ ನಾಣ್ಯಗಳು ದೊರೆತಿರುವುದು ವಿರಳ. ಮುಂದಿನ ಚೋಳರಾಜರು ಬೇರೆ ಲೋಹಗಳನ್ನು ಬೆರೆಸಿ ಅಚ್ಚು ಹಾಕಿಸಿದ್ದ ಅಶುದ್ಧ ಚಿನ್ನದ ನಾಣ್ಯಗಳಲ್ಲಿ ಅವು ಸೇರಿಹೋಗಿರಬೇಕು. ಇಲ್ಲವೆ ಈಚೆಗೆ ದೊರೆತ ಈ ನಾಣ್ಯಗಳ ಬಹುಭಾಗ ಕರಗಿ ಚಿನ್ನವಾಗಿ ಮಾರ್ಪಟ್ಟಿರಬೇಕು.

ಉತ್ತಮ ಚೋಳ ಪರಾಕೇಸರಿಯ ನಾಣ್ಯಗಳೇ ಈಗ ದೊರೆತಿರುವ ನಾಣ್ಯಗಳಲ್ಲಿ ಪ್ರಾಚೀನವಾದವು. ಇವನ ಬೆಳ್ಳಿಯ ನಾಣ್ಯ 62 ಗುಂಜಿ ತೂಕವಿದೆ. ಮುಂಬದಿಯಲ್ಲಿ ಮೇಲೆ ಛತ್ರ. ಅದರ ಇಕ್ಕೆಲ್ಲಗಳಲ್ಲಿ ಚಾಮರಗಳು, ಕೆಳಗೆ ಅತ್ತ ಇತ್ತ ದೀಪದ ಕಂಬಳು, ನಡುವೆ ಅನುಕ್ರಮವಾಗಿ ಬಿಲ್ಲು, ಮುಂಗಾಲುಗಳನ್ನೂರಿ ಕುಳಿತ ಹುಲಿ ಮತ್ತು ಜೋಡಿ ಮೀನುಗಳು; ಹಿಂಬದಿಯಲ್ಲೂ ಸುತ್ತಲೂ ಚುಕ್ಕೆಗಳು, ನಡುವೆ ನಾಗರಿಯಲ್ಲಿ, ಉತ್ತಮ ಚೋಳಃ ಎಂಬ ಅಂಕನ, ಬಿಲ್ಲು ಮತ್ತು ಜೋಡಿ ಮೀನುಗಳು ಚೇರ ಮತ್ತು ಪಾಂಡ್ಯರನ್ನು ಇವನ್ನು ಗೆದ್ದದ್ದರ ಕುರುಹು. ಹುಲಿ ಚೋಳರ ಲಾಂಛನ. ಈ ಉಪಲಬ್ಧವಿಲ್ಲದ ಚಿನ್ನದ ನಾಣ್ಯವೊಂದನ್ನು ಇಲಿಯಟ್ ಪ್ರಕಟಿಸಿದ್ದಾರೆ. ಅದರ ತೂಕ 50-60 ಗುಂಜಿ. ಅದರ ಎರಡು ಬದಿಗಳಲ್ಲೂ ಮೀನು ಮತ್ತು ಹುಲಿ, ಅವುಗಳ ಸುತ್ತಲೂ ಉತ್ತಮ ಶೋರನ್ ಎಂಬ ಅಂಕನ ಇವೆ. ಇದರಿಂದ ಚೋಳರು ದಕ್ಷಿಣ ಭಾರತದಲ್ಲಿ ಆಗ ಪ್ರಚಾರದಲ್ಲಿದ್ದ, ಸರಾಸರಿ 58 ಗುಂಜಿ ತೂಕದ ಗದ್ಯಾಣ ಅಥವಾ ಕ¿ಂಜನ್ನು ಮೊದಲು ತಮ್ಮ ನಾಣ್ಯವಾಗಿ ಬಳಸಿದಂತೆ ಕಂಡುಬರುತ್ತದೆ. ಮುಂದೆ ಅವರು 20 ಮಂಜಾಳಿಗಳ ಕ¿ಂಜನ್ನು-72ರಿಂದ 80 ಗುಂಜಿ ವರೆಗಿನ ತೂಕದ ನಾಣ್ಯಗಳನ್ನು ಬಳಕೆಗೆ ತಂದರು. ಆದರೆ ಅದು ಬಳಕೆಗೆ ಬಂದುದು ಯಾವಾಗ ಎನ್ನುವುದು ತಿಳಿಯದು. ಒಂದನೆಯ ಪರಾಂತಕನ 30ನೆಯ ವರ್ಷದ ಶಾಸನವೊಂದರಲ್ಲಿ ಈ ತೂಕವನ್ನು ಸೂಚಿಸುವ ನಿಷ್ಕದ ಹೆಸರಿಸಿದೆ. ಮಧುರಾಂತಕದೇವನ್ ಮಾಡೈ ಎಂಬ ನಾಣ್ಯದ ಹೆಸರು ಒಂದನೆಯ ರಾಜರಾಜನ ಶಾಸನವೊಂದರಲ್ಲಿದೆ. ಇದು ಬಹುಶಃ ಮಧುರಾಂತಕ ಉತ್ತಮ ಚೋಳನ ನಾಣ್ಯವಾಗಿದ್ದಿರಬೇಕು. ರಾಜರಾಜನ ಕಾಲದ ರಾಜರಾಜನ್ ಕಾಶು ಈ ಮಾಡೈನ ಅರ್ಧದಷ್ಟಿದೆ.

ರಾಜರಾಜನ ಬೆಳ್ಳಿ ನಾಣ್ಯದ ಮುಂಬದಿ ಉತ್ತಮ ಚೋಳನ ನಾಣ್ಯದ್ದರಂತೆಯೇ ಇದೆ; ಅದರ ಮೇಲೆ ನಾಗರೀಲಿಪಿಯಲ್ಲಿ ರಾಜರಾಜ ಎಂಬ ಅಂಕನವಿದೆ. ಅದರ ಹಿಂಬದಿಯಲ್ಲಿ ಸುಖಾಸೀನನಾಗಿ ಕುಳಿತ ರಾಜನ ಅಂಕನ. ರಾಜರಾಜನ ಚಿನ್ನದ ನಾಣ್ಯವೊಂದರ ಮುಂಬದಿಯಲ್ಲಿ ರಾಜನನ್ನು ನಿಂತಿದ್ದಂತೆ ತೋರಿಸಲಾಗಿದೆ. ಅವನ ಕಾಲಿನ ಬಳಿ ಎಡಕ್ಕೆ ಕಮಲದ ಬಳ್ಳಿ ಮತ್ತು ಶಂಖ, ಬಲಕ್ಕೆ ಸೂರ್ಯನ ಚಿಹ್ನೆ ಇವೆ. ಹಿಂಬದಿಯಲ್ಲಿ ರಾಜನನ್ನು ಕುಳಿತಂತೆ ತೋರಿಸಿದೆ. ಬಲಕ್ಕೆ ಶ್ರೀ ರಾಜರಾಜ ಎಂಬ ಹೆಸರಿದೆ. ಈ ಬಗೆಯ ನಾಣ್ಯಗಳನ್ನು ಸಿಂಹಳದ ನಾಣ್ಯಗಳ ಮಾದರಿಯನ್ನನುಸರಿಸಿ ಅಚ್ಚು ಹಾಕಿಸಿದಂತೆ ತೋರುತ್ತದೆ. ಪಾಂಡ್ಯನಾಡನ್ನು ಗೆದ್ದ ಮೇಲೆ ಅಲ್ಲಿ ಪ್ರಚಾರದಲ್ಲಿದ್ದ ಸಿಂಹಳ ರೀತಿಯ ನಾಣ್ಯಗಳನ್ನನುಸರಿಸಿ ಈ ರಾಜರು ತಮ್ಮ ನಾಣ್ಯಗಳನ್ನು ಹಾಕಿಸಿ ಆ ಪ್ರಾಂತ್ಯದಲ್ಲಿ ಚಲಾವಣೆಗೆ ತಂದಿರಬೇಕು. ರಾಜರಾಜನ ಸಿಂಹಳದ ರೀತಿಯ ನಾಣ್ಯಗಳು ಬೆರಕೆಯ ಲೋಹ ಉಪಯೋಗಿಸಿರುವುದು ಕಂಡುಬರುತ್ತದೆ. ಲಂಕವೀರ ಎಂಬ ಅಂಕನವುಳ್ಳ ಕೆಲವು ನಾಣ್ಯಗಳು ಕೆಲವು ನಾಣ್ಯಗಳು ರಾಜರಾಜ ಸಿಂಹಳವನ್ನು ಗೆದ್ದ ಮೇಲೆ ಹಾಕಿಸಿರುವ ನಾಣ್ಯಗಳಾಗಿರಬೆಕು. ಒಂದನೆಯ ರಾಜೇಂದ್ರನ ನಾಣ್ಯಗಳಲ್ಲಿರುವಂತೆ ಛತ್ರಚಾಮರಾದಿ ಚಿಹ್ನೆಗಳೂ ನಾಗರಿಲಿಪಿಯಲ್ಲಿ ಶ್ರೀ ರಾಜೇಂದ್ರಃ ಅಥವಾ ಗಂಗೈಕ್ಕೊಂಡ ಚೋಳಃ ಎಂಬ ಬರಹವೂ ಇರುತ್ತವೆ. ಧವಳೇಶ್ವರ ಎಂಬಲ್ಲಿ ದೊರೆತ, ಇವನ ನಾಣ್ಯಗಳ ಪೈಕಿ ದೊರೆತ ಇವನ ನಾಣ್ಯಗಳಲ್ಲಿ ತಮಿಳು ಗ್ರಂಥಾಕ್ಷರಗಳಲ್ಲಿ ಗಂಗೈಕೊಂಡ ಚೋಳನ್ ಎಂದಿದೆ; ಇವನ ಆಳ್ವಿಕೆಯ ವರ್ಷವನ್ನೂ ಸೂಚಿಸಿದೆ. ಅದೇ ಗುಂಪಿನ ನಾಣ್ಯಗಳ ಪೈಕಿ ದೊರೆತ ಮಲನಾಡು ಕೊಂಡಚೋಳನ್ ಎಂಬ ಅಂಕನವುಳ್ಳ ನಾಣ್ಯಗಳು ಒಂದನೆಯ ರಾಜಾಧಿರಾಜನ ಕಾಲಕ್ಕೆ ಸೇರಿದವು. ವಿಕ್ರಮಚೋಳನ ಕಾಲದಿಂದೀಚೆಗೆ ಚೋಳರ ನಾಣ್ಯಗಳಲ್ಲಿ ಗೂಳಿಯ ಚಿಹ್ನೆಯನ್ನು ಕಾಣಬಹುದು. ಗೂಳಿಯ ಜೊತೆಗೆ ಕತ್ತಿಯೋ ಶಂಖವೋ ತ್ರಿಶೂಲವೋ ಇರುತ್ತದೆ. ಮುಮ್ಮಡಿ ಕುಲೋತ್ತುಂಗನ ನಾಣ್ಯಗಳಲ್ಲಿಯು ಅಂಕನ ಕೋನೇರಿರಾಯನ್ ಎಂಬುದು. ಜೋಡಿ ಕುದುರೆ ಸವಾರರದೋ ಕುದುರೆಯನ್ನೇರಿದ ರಾಜನದೋ ಚಿಹ್ನೆಯಿದ್ದು ರಾಜರಾಜ ಎಂಬ ಅಂಕನವಿರುವ ನಾಣ್ಯಗಳು ಬಹುಶಃ ಮುಮ್ಮಡಿ ರಾಜನದಿರಬೇಕು. ಮುಮ್ಮಡಿ ಕುಲೋತ್ತುಂಗನ ಕಾಲದಿಂದ ಕಡಿಮೆ ಬೆಲೆಯ ತಾಮ್ರದ ನಾಣ್ಯಗಳಿಗೂ ಕಾಶು ಎಂಬ ಹೆಸರು ಬಂತು. ಇವಲ್ಲದೆ ಒಂದನೆಯ ಕುಲೋತ್ತಂಗನ ಅನಂತರ ಹಲವು ಚೋಳ ಸಾಮಂತರು ನಾಣ್ಯಗಳನ್ನು ಅಚ್ಚು ಹಾಕಿಸಿದ್ದಾರೆ. ಶಾಸನಗಳಲ್ಲಿ ಬರುವ ಜಯಮಾಡ, ಉತ್ತಮಗಂಡಮಾಡ, ಬಿರುದಮಾಡ, ನಕ್ಕಿಮಾಡ, ಗಂಡಗೋಪಾಲಮಾಡ ಮೊದಲಾದವು ಈ ಗುಂಪಿಗೆ ಸೇರಿದವು. (ಎಂ.ಎಚ್.)