ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಯಲಕ್ಷ್ಮೀ ಆಳ್ವ

ಜಯಲಕ್ಷ್ಮೀ ಆಳ್ವ (1933- ). ನಶಿಸಿಹೋಗುತ್ತಿದ್ದ ಸಂಪ್ರದಾಯ ನೃತ್ಯಗಳಾದ ನವಸಂಧಿ. ನವಗ್ರಹ ಸ್ತೋತ್ರಂ ಇತ್ಯಾದಿ ನೃತ್ಯ ಪ್ರಕಾರಗಳನ್ನು ಪುನರ್ ಜಾಗೃತಿಗೊಳಿಸಿದ್ದಲ್ಲದೆ ಸಮಕಾಲೀನವಾಗಿಯೂ ಹಲವಾರು ನೃತ್ಯಗಳನ್ನು ಸಂಯೋಜಿಸಿ ರಂಗ ಪ್ರಯೋಗ ಮಾಡಿದವರು. ಆಳ್ವ ಅವರು 1933ರಲ್ಲಿ ತಮಿಳುನಾಡಿನ ಕುಂಭಕೋಣಂನಲ್ಲಿ ಜನಿಸಿದರು. ಅವರ ಪತಿ ರಾಮಕೃಷ್ಣ ಆಳ್ವರವರೊಂದಿಗೆ ಮಂಗಳೂರಿನಲ್ಲಿ ನೆಲೆಸಿ ಅದನ್ನೇ ತಮ್ಮ ಕಾರ್ಯಕ್ಷೇತ್ರವಾಗಿಸಿ ಇಂದಿಗೂ ಮುಂದುವರಿಸುತ್ತಿದ್ದಾರೆ. ಪದ್ರಶ್ರೀ ದಂಡಾಯುಧಪಾಣಿ ಪಿಳ್ಳೆ ಅವರಲ್ಲಿ ಭರತನಾಟ್ಯವನ್ನು, ಸ್ವರಂ ಸರಸ್ವತಿ ಹಾಗೂ ಗೌರಿ ಅಮ್ಮಾಳ್ ಅವರಲ್ಲಿ ಅಭಿನಯವನ್ನೂ ಕರುಣಾಕರ ಪಣಿಕರ್ ಅವರಲ್ಲಿ ಕಥಕ್ಕಳಿ ನೃತ್ಯ ಪದ್ಧತಿಯಲ್ಲಿ ಪರಿಣಿತಿ ಪಡೆದರು.

ಮೊಟ್ಟಮೊದಲ ರಂಗಪ್ರವೇಶ 1948ರ ಮಾರ್ಚ್ ಏಳರಂದು. ಅಂದಿನಿಂದ ನೃತ್ಯ ಕಾರ್ಯಕ್ರಮಗಳನ್ನು ನಿರಂತರವಾಗಿ ನೀಡುತ್ತಿದ್ದಾರೆ. ನೃತ್ಯಗಾರಿಕೆಯಲ್ಲಿ ಸಂಚಾರಿಭಾವದ ಶ್ರೀಮಂತಿಕೆ ಹಾಗೂ ನಾಯಿಕಾ ಪಾತ್ರದಲ್ಲಿ ಸಹಜ ಅಭಿನಯ ಶ್ರೀಮತಿ ಜಯಲಕ್ಷ್ಮೀ ಆಳ್ವ ಅವರಿಗೆ ಕರಗತವಾಗಿದೆ. 1953-56ರಲ್ಲಿ ಖ್ಯಾತ ನರ್ತನಗಾರ್ತಿ ಮೃಣಾಲಿನಿ ಸಾರಾಭಾಯಿ ಅವರ ದರ್ಪಣ್ ನೃತ್ಯ ಕಲಾ ತಂಡದೊಡನೆ ರೋಮ್, ಇಟಲಿ, ಸ್ವಿಡ್ಜರ್‍ಲ್ಯಾಂಡ್, ಜಪಾನ್, ಜರ್ಮನಿ, ರಷ್ಯಾ ಮೊದಲಾದ ದೇಶಗಳಲ್ಲಿ ಎರಡು ಬಾರಿ ಪ್ರವಾಸ ಮಾಡಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಮುಂಬಯಿಯ ಕಲಾ ತರಂಗ್ ಅವರಿಗೆ ಸೌಗಂಧ ಎಂಬ ನೃತ್ಯ ನಾಟಕವನ್ನು ರೂಪಿಸಿ ನಿರ್ದೇಶಿಸಿದ್ದಾರೆ. 1959ರಲ್ಲಿ ಮುಂಬಯಿಯಲ್ಲಿಯೇ ಚಿತ್ರಾಂಬಲಮ್ ನೃತ್ಯ ಕೇಂದ್ರ ಆರಂಭಿಸಿದರು. 1974ರಿಂದ ಮಂಗಳೂರಿನಲ್ಲಿ ಶ್ರೀದೇವಿ ನೃತ್ಯ ಕೇಂದ್ರ ನಡೆಸುತ್ತಿದ್ದಾರೆ. ಸಂಪ್ರದಾಯಿಕ ಚೌಕಟ್ಟಿನಲ್ಲಿ ಆಧುನಿಕ, ಸಮಕಾಲೀನ ವಾಸ್ತವ್ಯವನ್ನು ಭಾವನೆಗಳನ್ನು ಪ್ರೇರೆಪಿಸುವಂತೆ ಅನೇಕ ಗೀತ ನೃತ್ಯಗಳನ್ನು ರೂಪಿಸಿದರು. ಅವುಗಳಲ್ಲಿ ಚಿತ್ತಾಂಬಲ, ಕುರವಂಜಿ, ಸ್ವಾತಿ ತಿರುನಾಳ್ ಅವರ ರಾಮಾಯಣ, ಕೃಷ್ಣ ಕೀರ್ತನ, ಕೃಷ್ಣ ತುಲಾಭಾರ, ವಸಂತವಲ್ಲಿ, ಬಾಲ ರಾಮಾಯಣ, ನವಗ್ರಹ, ನೃತ್ಯ ಗೋವಿಂದ, ಕರಾವಳಿಗಾಥೆ ಹಾಗೂ ಇತ್ತೀಚಿನ ಪಂಚಕನ್ಯೆಗಳನ್ನು ಉದಾಹರಿಸಬಹುದು.

ಈವರೆಗೆ ನೂರಕ್ಕೂ ಹೆಚ್ಚು ಶಿಷ್ಯೆಯರಿಗೆ ರಂಗಪ್ರವೇಶ ಯಶಸ್ವಿಯಾಗಿ ಮಾಡಿಸಿದ್ದು, ತಮ್ಮ ಶ್ರೀದೇವಿ ನೃತ್ಯ ಕೇಂದ್ರದಿಂದ ಪ್ರತಿ ವರ್ಷ ವಾರ್ಷಿಕೋತ್ಸವ, ವಿಚಾರ ಸಂಕಿರಣ, ನೃತ್ಯ ಕಲಾಶಿಬಿರ, ಕಲಾ ಪ್ರಾತ್ಯಕ್ಷಿಕೆಗಳಲ್ಲದೆ ನೃತ್ಯೋತ್ಸವ ಸಹ ನಡೆಸುತ್ತಿದ್ದಾರೆ. ಜಯಲಕ್ಷ್ಮಿ ಆಳ್ವರವರ ಶಿಷ್ಯ ಪರಂಪರೆ ಬಹಳ ದೊಡ್ಡದು. ಇವರ ಶಿಷ್ಯರುಗಳಲ್ಲಿ ಸದ್ಭಾವನಾ ಕಾಲೇಜಿನ ಪ್ರಾಂಶುಪಾಲರಾದ ಆರತಿ ಶೆಟ್ಟರಲ್ಲದೆ, ಖ್ಯಾತ ಕಲಾವಿದರಾದ ಪದ್ಮಾ ಸುಬ್ರಹ್ಮಣ್ಯಂ, ವಹೀದಾ ರೆಹಮಾನ್, ಕುಮಾರಿ ಜಯಾ ಮುಂತಾದವರೆಲ್ಲಾ ಸೇರಿದ್ದಾರೆ.

ಜಯಲಕ್ಷ್ಮಿ ಆಳ್ವ ಅವರಿಗೆ ಪ್ರಶಸ್ತಿ ಗೌರವಗಳು ಸಂದಿವೆ. 1949ರಲ್ಲೇ ಚೆನ್ನೈನಲ್ಲಿ ನೃತ್ಯಕಲಾ ಸರಸ್ವತಿ ಎಂಬ ಬಿರುದು ನೀಡಿ ಸನ್ಮಾನಿಸಲಾಗಿತ್ತು. ನಂತರ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾ ತಿಲಕ ಪ್ರಶಸ್ತಿ (1986), ರಾಜ್ಯೋತ್ಸವ ಪ್ರಶಸ್ತಿ (1993), ಚೆನ್ನೈನ ಭಾರತೀಯ ವಿದ್ಯಾಭವನದಿಂದ ಸ್ತ್ರೀರತ್ನ ಪ್ರಶಸ್ತಿ (1998), ಕರ್ನಾಟಕ ನೃತ್ಯ ಕಲಾ ಪರಿಷತ್ ಪ್ರಶಸ್ತಿ (2000), ಉಡುಪಿಯ ಸಂಸ್ಕಾರ ಭಾರತೀಯವರಿಂದ ನೃತ್ಯಕಲಾರತ್ನ ಪ್ರಶಸ್ತಿ (2001), ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಶ್ರೀ ಪ್ರಶಸ್ರಿ (2003), ಕರ್ನಾಟಕ ನೃತ್ಯ ಕಲಾ ಪರಿಷತ್‍ನಿಂದ ನೃತ್ಯಕಲಾ ಶಿರೋಮಣಿ (2004) ಮೊದಲಾದ ಪ್ರಶಸ್ತಿಗಳು ಲಭಿಸಿವೆ.

ಏಕಾಗ್ರತೆ, ಕ್ರಿಯಾಶೀಲತೆ ಮತ್ತು ಸಾಂಪ್ರದಾಯಿಕ ನೃತ್ಯ ಕ್ಷೇತ್ರಕ್ಕೆ ಅನನ್ಯ ಸೇವೆ ನೀಡಿದ ಖ್ಯಾತ ನೃತ್ಯ ಕಲಾವಿದೆ ಶ್ರೀಮತಿ ಜಯಲಕ್ಷ್ಮಿ ಆಳ್ವ ಅವರಿಗೆ 2004ನೆಯ ಸಾಲಿನ ಶಾಂತಲಾ ನಾಟ್ಯ ಪ್ರಶಸ್ತಿಯನ್ನು ಕರ್ನಾಟಕ ಸರಕಾರವು ನೀಡಿ ಗೌರವಿಸಿದೆ. *