ಜಾಷುವಾ 1895-1971 ತೆಲುಗಿನ ಪ್ರಸಿದ್ಧ ಕವಿ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ವಿನುಕೊಂಡ ಇವನ ಸ್ವಗ್ರಾಮ. ತೆಲುಗು ಮತ್ತು ಸಂಸ್ಕøತಗಳೆರಡರಲ್ಲೂ ವಿದ್ವಾಂಸ. ಇವನಿಗೆ ಕವಿಕೋಕಿಲ, ಕವಿತಾವಿಶಾರದಾ,ನವಯುಗ ಚಕ್ರವರ್ತಿ ಮುಂತಾದ ಬಿರುದುಗಳಿವೆ. ಆಂಧ್ರವಿಶ್ವವಿದ್ಯಾಲಯ ಕಳಾಪ್ರಪೂರ್ಣ ಎಂಬ ಹೆಸರಿನ ಡಾಕ್ಟರೇಟ್ ಪದವಿಯನ್ನೂ ಭಾರತ ಸರ್ಕಾರ ಪಧ್ಮಭೂಷಣ ಪ್ರಶಸ್ತಿಯನ್ನೂ ಈತನಿಗೆ ನೀಡಿ ಗೌರವಿಸಿವೆ. ಕ್ರೀಸ್ತುಚರಿತಮು (ಯೇಸುವಿನ ಜೀವನವನ್ನು ವಿವರಿಸುವ ಗ್ರಂಥ) ಎಂಬ ಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿಯ ಪುರಸ್ಕಾರ ಲಭಿಸಿದೆ.
ಇವನ ಕೃತಿಗಳಲ್ಲಿ ಪಿರದೌಸಿ, ಗಬ್ಬಿಲಮು ಮುಂತಾಜ ಮಹಲು ಮುಂತಾದ ಕಾವ್ಯಗಳನ್ನು ತೆರಚಾಟು, ಮೀರಾಬಾಯಿ ಮುಂತಾದ ನಾಟಕಗಳನ್ನೂ ಹೆಸರಿಸಬಹುದು. ಇವಲ್ಲದೇ ಈತ ಅನೇಕ ಖಂಡಕಾವ್ಯಗಳನ್ನೂ ಬರೆದಿದ್ದಾನೆ. ಪಿರದೌಸಿ ಎಂಬುದು ಪಾರಸಿ ಕವಿ ಫಿರ್ ದೌಸಿಯ ಚರಿತ್ರೆ. ಷಾ ನಾಮಾ ಎಂಬ ಗ್ರಂಥ ರಚಿಸುವಂತೆ ಘಜ್ನಿ ಮಹಮದ್ ಫಿರ್ ದೌಸಿಯನ್ನು ಕೇಳಿದನಂತೆ. ಈ ರಚನೆಯನ್ನು ತನಗೆ ಅರ್ಪಿಸಿದರೆ ಒಂದೊಂದು ಪದ್ಯಕ್ಕೂ ಒಂದೊಂದು ದೀನಾರ (ಬಂಗಾರದ ನಾಣ್ಯ) ಕೊಡುವುದಾಗಿ ಹೇಳಿದನಂತೆ. ಆದರೆ ಕೊನೆಗೆ ಚಿನ್ನಕ್ಕೆ ಬದಲು ಬೆಳ್ಳಿಯ ನಾಣ್ಯ ನೀಡಿದಾಗ ಫಿರದೌಸಿ ವ್ಯಥೆಪಟ್ಟು ರಾಜನನ್ನು ನಿಂದಿಸಿದ. ಕವಿ ಈ ಪ್ರಸಂಗವನ್ನು ನಾಲ್ಕು ಆಶ್ವಾಸಗಳಲ್ಲಿ ಮಧುರವಾಗಿ ರಚಿಸಿದ್ದಾನೆ. ಕಾಳಿದಾಸನ ಮೇಘಸಂದೇಶವನ್ನು ಹೋಲುವ ಆಧುನಿಕ ಕಾವ್ಯ ಗಬ್ಬಿಲಮು. ಇವನ ಖಂಡಕಾವ್ಯಗಳು ವೈವಿಧ್ಯಪೂರ್ಣವಾಗಿದ್ದು ಈ ಕವಿಯ ನಿಶ್ಚಿತ ಪರೀಶೀಲನಾ ದೃಷ್ಟಿಗೆ ನಿದರ್ಶನವಾಗಿವೆ. ಶಿವಾಜಿ, ವಿವೇಕಾನಂದ, ಗಾಂಧೀಜಿ, ನೇತಾಜಿ ಮುಂತಾದವರನ್ನು ಕುರಿತ ಕವನಗಳು ಈ ಖಂಡಕಾವ್ಯಗಳಲ್ಲಿವೆ. ತನ್ನ ಕಾವ್ಯಗಳಲ್ಲಿ ಹರಿಜನರ ಸ್ಥಿತಿಗತಿಗಳನ್ನು ಅತ್ಯಂತ ಹೃದಯಂಗಮವಾಗಿ ಚಿತ್ರಿಸಿದ ಈತ 20ನೆಯ ಶತಮಾನದ ತೆಲುಗು ದಲಿತಕವಿ ; ಸಂಪ್ರದಾಯಬದ್ಧವಾದ ಛಂಧಸ್ಸಿನಲ್ಲಿ ಸಮಕಾಲೀನ ಮೂಢ ಸಂಪ್ರದಾಯಗಳನ್ನು ಕಟುವಾಗಿ ಟೀಕಿಸಿದ್ದಾನೆ. ದೇಶಭಕ್ತಿ, ಮಾನವ ಜೀವನದ ಚಿತ್ರಣ, ಮಾನವತೆ ಇವನ ಕವಿತಾವಸ್ತುಗಳು. (ಆರ್.ವಿ.ಎಸ್.ಎಸ್.)