ಜಿರಲೆ

 	ಬಹಳ ಸಾಮಾನ್ಯವಾದ ಮತ್ತು ಪರಿಚಿತವಾದ ಕೀಟ (ಕಾಕ್‍ರೋಚ್). ಜೊಂಡಿಗ, ತೊಂಡಿಂಗಿ, ಹಾತೆಹುಳು ಪರ್ಯಾಯ ನಾಮಗಳು. ದೀರ್ಘವೃತ್ತಾಕಾರದ ಹಾಗೂ ಕುಗ್ಗಿದ ದೇಹ ಮತ್ತು ಕಂದು ಮಿಶ್ರಿತ ಕಪ್ಪು ಬಣ್ಣಗಳಿಂದ ಇದನ್ನು ಗುರುತಿಸಬಹುದು. ಹಸಿರು ಬಣ್ಣದ ಜಿರಲೆಗಳು ಕೂಡ ಇವೆಯೆಂದು ತಿಳಿದುಬಂದಿದೆ.  ಒಂದು ಪ್ರಭೇದದ ಜಿರಲೆಯಲ್ಲಿ ಕಪ್ಪುರೆಕ್ಕೆಯ ಮೇಲೆ ಸಮಾನಾಂತರವಾಗಿ ಹರಡಿದ ಬಿಳಿಮಿಶ್ರಿತ ಹಳದಿ ಚಿಕ್ಕೆಗಳು ಉಂಟು. ಶಿರವು ಕೆಳಮುಖವಾಗಿ ಬಾಗಿದ್ದು ಸಂಪೂರ್ಣವಾಗಿ ಪ್ರೋನೋಟಮಿನಿಂದ ಆವೃತವಾಗಿದೆ.  ಬಾಯಿಯ ಭಾಗಗಳು ಹಿಮ್ಮುಖವಾಗಿ ಮುಂದಿನ ಕಾಲುಗಳ ನಡುವೆ ಚಾಚಿವೆ.  ಆಂಟೆನಗಳು ನೀಳವಾಗಿದ್ದು ಸಮರ್ಥ ಸ್ಪರ್ಶೇಂದ್ರಿಯಗಳಾಗಿ ಕಾರ್ಯ ನಿರ್ವಹಿಸುತ್ತವೆ.  ಸಾಮಾನ್ಯವಾಗಿ ಚೆನ್ನಾಗಿ ಬೆಳೆದ ಒಂದು ಜೊತೆ ರೆಕ್ಕೆಗಳು ಉಂಟು. ಕೆಲವು ಸಂದರ್ಭಗಳಲ್ಲಿ ರೆಕ್ಕೆಗಳು ಚಿಕ್ಕದಾಗಿರಬಹುದು ಅಥವಾ ಇರುವುದೇ ಇಲ್ಲ. ಕೆಲವು ಪ್ರಭೇದಗಳಲ್ಲಿ ಹೆಣ್ಣು ಜಿರಲೆಗಳಿಗೆ ರೆಕ್ಕೆ ಇರುವುದಿಲ್ಲ ಅಥವಾ ಇದ್ದರೂ ರೆಕ್ಕೆಗಳು ಬಲು ಕ್ಷೀಣವಾಗಿರುತ್ತವೆ. ಗಂಡು ಜಿರಲೆಗಳಲ್ಲಿ ಪೂರ್ಣ ಪ್ರಮಾಣದ ರೆಕ್ಕೆಗಳಿರುತ್ತವೆ. 

ಜಿರೆಲೆಗಳು ಡಿಕ್ಟಿಯಾಪ್ಟಿರ ಗಣದ ಬ್ಲಾಟಿಡೀ ಕುಟುಂಬಕ್ಕೆ ಸೇರಿವೆ. ಇವುಗಳ ನಡಿಗೆಯ ರೀತಿಯಿಂದ ಡಿಕ್ಟಿಯಾಪ್ಟಿರದ ಇತರ ಕೀಟಗಳಿಂದ ಇವನ್ನು ಪ್ರತ್ಯೇಕಿಸಬಹುದು. ಹಿಂಗಾಲಿನ ಫೀಮರ್ ದಪ್ಪವಾಗಿರದೆ ಇತರ ಫಿಮೊರಾ ಮತ್ತು ಟಾರ್ಸಿಗಳಿಗಿಂತ ನೀಳವಾಗಿದೆಯಲ್ಲದೆ ಯಾವಾಗಲೂ ಐದು ಖಂಡಗಳಿಂದ ಕೂಡಿರುತ್ತದೆ. ಜಿರೆಲೆಗಳು ಉಷ್ಣ ಹಾಗೂ ಸಮಶೀತೋಷ್ಣ ಪ್ರದೇಶಗಳಲ್ಲಿ ಹೇರಳವಾಗಿವೆ. ಇದುವರೆವಿಗೂ ಪಟ್ಟಿಮಾಡಿರುವ 2,000 ಪ್ರಭೇದಗಳಲ್ಲಿ ಹಚ್ಚಿನವು ಉಷ್ಣವಲಯದವು. ಕೀಟಗಳಲ್ಲೆಲ್ಲ ಜಿರಲೆಗಳ ಗುಂಪೇ ಅತ್ಯಂತ ಪುರಾತನವಾದ್ದು. ಕಾರ್ಬಾನಿಫೆರಸ್ ಯುಗದಲ್ಲಿ ಜಿರೆಲೆಗಳು ಅಧಿಕ ಪ್ರಮಾಣದಲ್ಲಿ ಇದ್ದವು ಎಂಬುದನ್ನು ಪಳಿಯುಳಿಕೆಗಳು ಸೂಚಿಸುತ್ತವೆ. ಈಗ ನಶಿಸಿ ಹೋಗಿರುವ ಪೇಲಿಯೊಡಿಕ್ಟಯಾಪ್ಟಿರ ಗಣದಿಂದ 250,000,000 ವರ್ಷಗಳಿಗೂ ಹಿಂದೆ ಇವು ಉಗಮಿಸಿದುವು. ರೆಕ್ಕೆ ಪಡೆದಿರುವ ಇತರ ಎಲ್ಲ ಕೀಟಗಳು ಜಿರೆಲೆಗಳಿಂದಲೇ ವಿಕಾಸ ಹೊಂದಿವೆ. ಕಾರ್ಬಾನಿಫೆರಸ್ ಜಿರಲೆಗಳ ಸರಾಸರಿ ಗಾತ್ರ ಇಂದು ಅಸ್ತಿತ್ವದಲ್ಲಿರುವ ಪ್ರಭೇದಗಳ ಗಾತ್ರಕ್ಕಿಂತ ಸಾಕಷ್ಟು ಹೆಚ್ಚಾಗಿತ್ತೆಂದು ಹೇಳಲಾಗಿದ್ದರೂ ಉಷ್ಣ ವಲಯಗಳಲ್ಲಿ ಇಂದು ಕಾಣಬರುವ ಕೆಲವು ಜಿರಲೆಗಳ ಗಾತ್ರವನ್ನು ಗತಿಸಿದ ಈ ಜಿರಲೆಗಳು ಮೀರಿಸಿರಲಿಲ್ಲ. ಪುರಾತನ ಜಿರಲೆಗಳ ಹಾಗೂ ಇಂದಿನ ಜಿರಲೆಗಳ ನಡುವೆ ವ್ಯತ್ಯಾಸ ಅತ್ಯಂತ ಸ್ವಲ್ಪವಾಗಿದ್ದು ಮುಖ್ಯವಾಗಿ ರೆಕ್ಕೆಯ ರಕ್ತನಾಳಗಳ ಸ್ಥಾನಕ್ಕೆ ಮಾತ್ರ ಸೀಮಿತವಾಗಿದೆ. ಜಿರಲೆಗಳು ಯಾವ ರೀತಿಯ ರೂಪ ಬದಲಾವಣೆಯನ್ನೂ ತೋರಿಸದೆ ಕಾಲಾನುಕಾಲದಿಂದ ಉಳಿದುಬಂದಿವೆ.

ಕಾರ್ಬಾನಿಫೆರಸ್ ಯುಗದ ಜಿರಲೆಗಳು ಜೌಗು ಪ್ರದೇಶಗಳ ಬಳಿಯೇ ಇದ್ದಿರಬೇಕು. ಇಂದಿನ ನಿಶಾಚರಿ ಜಿರಲೆಗಳನ್ನು ತೇವಪೂರಿತ ಹಾಗೂ ಬೆಚ್ಚನೆಯ ಕತ್ತಲು ನೆಲೆಗಳಲ್ಲಿ ಕಾಣಬಹುದು. ಇವು ಗೋಪ್ಯ ಪ್ರವೃತ್ತಿಯ ಜೀವಿಗಳು ಮತ್ತು ರಾತ್ರಿ ವೇಳೆಯಲ್ಲಿ ಮಾತ್ರ ಆಹಾರ ಸೇವನೆ ಮಾಡುತ್ತವೆ. ಕೆಲವೇ ಕೆಲವು ಪ್ರಭೇದದ ಜಿರಲೆಗಳು ಮಾನವನ ನೆಲೆಗಳಲ್ಲಿ ವಾಸಿಸುತ್ತಿದ್ದು ಕೀಟ ಪಿಡುಗುಗಳಾಗಿ ಪರಿಣಮಿಸಿವೆ. ಜಿರಲೆಗಳು ಮಿಶ್ರಾಹಾರಿಗಳು. ತಮ್ಮ ಕೊಳಕು ಸ್ವಭಾವ, ವಿಕರ್ಷಕ ರೂಪ, ಅಸಹ್ಯಕರವಾದ ವಾಸನೆಯಿಂದಲೂ, ಕ್ಷಯ, ಕಾಲರ, ಕುಷ್ಠ, ಆಮಶಂಕೆ ಮತ್ತು ವಿಷಮಶೀತ ಜ್ವರ-ಮುಂತಾದ ರೋಗಗಳನ್ನು ತರುವ ಮಾಧ್ಯಮಗಳಾಗಿ ಇವು ವರ್ತಿಸುವ ಸಾಧ್ಯತೆ ಇರುವುದರಿಂದಲೂ ಇವು ದೂಷ್ಯ ಪ್ರಾಣಿಗಳಾಗಿವೆ. ಬೇಕರಿ, ಉಗ್ರಾಣ, ಅಡುಗೆಮನೆ, ಉಪಾಹಾರ ಮಂದಿರ, ಗ್ರಂಥಾಲಯ - ಹೀಗೆ ಎಲ್ಲೆಡೆ ದೊರೆಯುವ ವೈವಿಧ್ಯ ಆಹಾರ ಪದಾರ್ಥಗಳನ್ನೂ ತಿಂದು ಹಾಳು ಮಾಡುವುವಲ್ಲದೆ ತಾವು ಹಾದುಹೋದ ವಸ್ತುಗಳ ಮೇಲೆ ಮಲ ವಿಸರ್ಜನೆ ಮಾಡಿ ಅಸಹ್ಯಕರವನ್ನಾಗಿಸುತ್ತವೆ.

ಜರ್ಮನಿಯ ಕಂದುಬಣ್ಣದ ಜಿರಲೆಯಾದ ಬ್ಲಾಟೆಲ ಜಮ್ರ್ಯಾನಿಕ ಸುಮಾರು 0.5" ಉದ್ದ ಇದೆ. ಪ್ರೋತೊರ್ಯಾಕ್ಸಿನ ಮೇಲೆ ಎರಡು ಕಪ್ಪು ಗೆರೆಗಳುಂಟು. ಈ ಪ್ರಭೇದ ಮನೆಗಳಲ್ಲಿ ಕಾಣಬರುವ ಬಗೆಗಳಲ್ಲಿ ಅತ್ಯಂತ ನಿಕೃಷ್ಟವಾದ್ದು. ಹೆಣ್ಣು ಜಿರಲೆಗಳು ತತ್ತಿಕೋಶವನ್ನು ಉದರದಿಂದ ಮುಂದೆ ಚಾಚಿರುವಂತೆ ಹಿಡಿದುಕೊಂಡು ಸುಮಾರು ಎರಡು ವಾರಗಳ ತನಕ ಹೊತ್ತು ತಿರುಗುತ್ತವೆ. ತತ್ತಿಕೋಶದಲ್ಲಿ 25ರಿಂದ 30 ಮೊಟ್ಟೆಗಳು ಇರುತ್ತವೆ. ಹೆಣ್ಣು ಜಿರಲೆ ತನ್ನ ಜೀವಿತ ಕಾಲದಲ್ಲಿ ಸುಮಾರು ಏಳು ಬಾರಿ ಇಂಥ ತತ್ತಿಕೋಶವನ್ನು ಇಡುತ್ತದೆ. ಮರಿ ಜಿರಲೆ ಏಳು ಸಲ ಪೊರೆ ಕಳಚುತ್ತದೆ. ಜಿರಲೆಯ ಆಯಸ್ಸು ಸುಮಾರು 2-5 ತಿಂಗಳು. ವರ್ಷಕ್ಕೆ 3 ಪೀಳಿಗೆಗಳು ಉತ್ಪತ್ತಿಯಾಗುತ್ತವೆ. ಅಡುಗೆಮನೆ ಮತ್ತು ಬಚ್ಚಲುಗಳಲ್ಲಿ ಇವು ಬಲುಸಾಮಾನ್ಯ. ಬಹಳ ಚಟುವಟಿಕೆಯಿಂದ ಓಡಾಡುತ್ತವೆ. ಇದು ಹಾರುವುದು ವಿರಳ.

ಪೆರಿಪ್ಲನೇಟ ಅಮೆರಿಕಾನ : ಇದು ದೊಡ್ಡ ಗಾತ್ರದ ಮತ್ತು ಕಂದುಬಣ್ಣದ ಜಿರಲೆ. ಇದರ ಉದ್ದ 1 1/2 " . ಪ್ರೊನೋಟಮಿನ ಹಿಂಭಾಗದ ಅಂಚು ಹಳದಿ ಬಣ್ಣದ್ದು. ಹೆಣ್ಣು ತತ್ತಿಕೋಶವನ್ನು ಗೋಪ್ಯ ಸ್ಥಳದಲ್ಲಿ ಇಟ್ಟು ತನ್ನ ಬಾಯಿಯ ದ್ರವದಿಂದ ಕೋಶ ಅಂಟಿಕೊಳ್ಳುವಂತೆ ಮಾಡುತ್ತದೆ. ವಾರಕ್ಕೆ ಒಂದರಂತೆ 15-90 ತತ್ತಿ ಕೋಶಗಳನ್ನು ಇಡುತ್ತದೆ. ಪ್ರತಿಯೊಂದು ತತ್ತಿಕೋಶದಲ್ಲಿ 14-16 ಮೊಟ್ಟೆಗಳಿವೆ. ಮರಿಗಳು 25ರಿಂದ 100 ದಿವಸಗಳ ಅನಂತರ ತತ್ತಿಕೋಶದಿಂದ ಹೊರಬರುತ್ತವೆ. ಇವು 13 ಸಲ ಪೊರೆ ಕಳಚಿ 10 ತಿಂಗಳಿನಲ್ಲಿ ವಯಸ್ಕ ಜಿರಲೆಗಳಾಗಿ ರೂಪುಗೊಳ್ಳುತ್ತವೆ. ಇದು ಸಾಮಾನ್ಯವಾಗಿ ಉಪಾಹಾರಮಂದಿರಗಳು, ಬೇಕರಿಗಳು, ದಿನಸಿ ಅಂಗಡಿಗಳು ಮುಂತಾದೆಡೆ ವಾಸಿಸುತ್ತದೆ.

ಬ್ಲಾಟ ಓರಿಯಂಟ್ಯಾಲಿಸ್ : ಪೌರ್ವಾತ್ಯ ದೇಶಗಳಲ್ಲಿ ಕಾಣಬರುವ ದೊಡ್ಡ ಗಾತ್ರದ ಜಿರಲೆ. ದೇಹದ ಬಣ್ಣ ಕಪ್ಪು. ಉದ್ದ ಸುಮಾರು 1". ಹೆಣ್ಣು ಜಿರಲೆಗಳಲ್ಲಿ ರೆಕ್ಕೆಗಳಿಲ್ಲ. ಗಂಡು ಜಿರಲೆಗಳ ರೆಕ್ಕೆ ಉದರಕ್ಕಿಂತ ಹೃಸ್ವ. ಇದರ ಜೀವನ ಚಕ್ರ ಸುಮಾರು ಒಂದು ವರ್ಷ ಅವಧಿಯದು. ಹೆಣ್ಣು ಜಿರಲೆ 14ರಿಂದ 15 ತತ್ತಿಕೋಶಗಳನ್ನು ಉತ್ಪಾದಿಸುತ್ತದೆ. ಪ್ರತಿಯೊಂದರಲ್ಲೂ 16 ಮೊಟ್ಟೆಗಳು ಇರುವುದುಂಟು. ಸುಮಾರು 44 ದಿವಸಗಳಲ್ಲಿ ಮರಿಜಿರಲೆ ಹೊರಬರುತ್ತದೆ. ಈ ಪ್ರಭೇದದ ಜಿರಲೆ ಚರಂಡಿಗಳಲ್ಲಿ ವಾಸ ಮಾಡುತ್ತದೆ. ಇದು ಎಲ್ಲ ಜಿರಲೆಗಳಿಗಿಂತ ಅತ್ಯಂತ ಹೊಲಸಾದುದು.

ಪೆರಿಪ್ಲನೇಟ ಆಸ್ಟ್ರಲೇಸಿಯೀ : ಆಸ್ಟ್ರೇಲಿಯದ ಅತಿ ದೊಡ್ಡ ಜಿರಲೆ. ಅಮೆರಿಕದ ಜಿರಲೆಗಳನ್ನು ಹೋಲುತ್ತದೆ. ಇದರ ಉದ್ದ ಸುಮಾರು 1.25" ಮತ್ತು ಮುಂದು ರೆಕ್ಕೆಯ ಅಂಚಿನ 0.33 ಭಾಗದಲ್ಲಿ ಸ್ಪಷ್ಟವಾದ ಹಳದಿಬಣ್ಣದ ರೇಖೆಯುಂಟು. ಪ್ರೋನೋಟಮಿನ ಮಧ್ಯದಲ್ಲಿ ಸ್ಪಷ್ಟವಾದ ಕಪ್ಪುಚುಕ್ಕೆಯಿದೆ. ತತ್ತಿಕೋಶದಲ್ಲಿ ಸರಾಸರಿ 24 ಮೊಟ್ಟೆಗಳಿವೆ. ಸುಮಾರು 40 ದಿವಸಗಳ ಅನಂತರ ಮರಿಜಿರಲೆ ಹೊರಬರುತ್ತದೆ. ಇದರ ಆಯಸ್ಸು ಸುಮಾರು 9 ತಿಂಗಳು.

ಸುರಿನಾಮ್ ಜಿರಲೆ (ಪಿಕ್ನಾಸೆಲಸ್ ಸುರಿನಾಮೆನ್ಸಿಸ್) : ಇದು ದೊಡ್ಡ ಗಾತ್ರದ ಹೊಳೆಯುವ ಕಗ್ಗಂದು ಬಣ್ಣದ ಕೀಟ. ಗ್ರಾತದಲ್ಲಿ ಅಮೆರಿಕದ ಜಿರಲೆಯಷ್ಟಿದೆ. ಆದರೆ ರೆಕ್ಕೆಗಳು ದೇಹದ 0.33 ಭಾಗದಷ್ಟು ಮಾತ್ರ ಇವೆ. ದೇಹದ ಆಕಾರ ಅಂಡದಂತೆ. ಈ ಜಿರಲೆ ಬೆಳೆಯುತ್ತಿರುವ ಸಸ್ಯಗಳನ್ನು ತಿಂದು ಬದುಕುತ್ತದೆ.

ಕ್ರಿಪ್ಟೊಸರ್ಕಸ್ ಪಂಕ್ಟುಲೇಟಸ್ : ಅಮೆರಿಕ ಸಂಯುಕ್ತಸಂಸ್ಥಾನದ ಈ ಕಾಷ್ಠ ಜಿರಲೆ ಸಾಕಷ್ಟು ಕುತೂಹಲಕಾರಿಯಾಗಿದೆ. ಇದರ ಜೀರ್ಣಾಂಗದಲ್ಲಿ ಸಹಜೀವನ ನಡೆಸುವ ಪ್ರೋಟೊeóÉೂೀವ ಗುಂಪಿನ ಜೀವಿಗಳಿರುವುದರಿಂದ ಈ ಜಿರಲೆಗೆ ಸೆಲ್ಯುಲೋಸನ್ನು ಅರಗಿಸಿಕೊಳ್ಳುವ ಸಾಮರ್ಥ್ಯವುಂಟು. ಇದು ಕೊಳೆಯುತ್ತಿರುವ ದಿಮ್ಮಿಗಳಲ್ಲಿ ವಾಸ ಮಾಡುತ್ತದೆ. ಒಂದೊಂದು ಗುಂಪಿನಲ್ಲೂ ಅನೇಕ ಪೀಳಿಗೆಯ ಜಿರಲೆಗಳಿರುತ್ತವೆ. ಇವುಗಳು ಸಂಘ ಜೀವಿಗಳು.

ಕೊರೀಡಿಯ ಪೆಟಿವೆರಿಯಾನ : ಮುಂದಿನ ರೆಕ್ಕೆಯ ಮೇಲೆ ಬಿಳಿಮಿಶ್ರಿತ ಹಳದಿ ಬಣ್ಣದ 7 ದೊಡ್ಡ ಮಚ್ಚೆಗಳುಳ್ಳ ಸುಂದರವಾದ ಕಪ್ಪು ಜಿರಲೆ. ಇದು ಕೊಳೆಯುತ್ತಿರುವ ಎಲೆಗಳ ಮಧ್ಯೆ ವಾಸಿಸುತ್ತದೆ. ಸುಮಾರು 2.25" ವರೆಗೆ ಬೆಳೆದ ಬ್ಲಾಬೆರಸ್ ಕ್ಯ್ರಾನಿಫರ್ ಎಂಬುದು ಅತಿ ದೊಡ್ಡ ಗಾತ್ರದ ಜಿರಲೆ.

ಮೂರು ಬಗೆಯ ಜಿರಲೆಗಳು ಕರುಳಿನ ಬೇನೆ ಮತ್ತು ಕ್ಷಯ ರೋಗವನ್ನು ಹರಡುತ್ತವೆ ಎಂದು ಹೇಳಲಾಗಿದೆ. ಈ ರೋಗಕ್ಕೆ ಕಾರಣವಾದ ಸಾಲ್ಮನೆಲ ಎಂಬ ಜೀವಿ ಜಿರಲೆಯ ಮಲದಲ್ಲಿ ಇರುತ್ತದೆ. ಇದು ಮಲವಿಸರ್ಜನೆಯಾದ 199 ದಿವಸಗಳ ಅನಂತರವೂ ರೋಗ ಹರಡಲು ಸಾಮಥ್ರ್ಯವುಳ್ಳದ್ದಾಗಿದೆ. ಸುರಿನಾಮ್ ಜಿರಲೆ ಕೋಳಿಗಳ ಕಣ್ಣಿನ ಬೇನೆ ಮತ್ತು ಕುರುಡುಗಳಿಗೆ ಕಾರಣವಾದ ಆಕ್ಸಿಸ್ವೈರೂರ ಎಂಬ ನೆಮಟೋಡ್ ಜೀವಿಗೆ ಮಧ್ಯವರ್ತಿ ಆತಿಥೇಯವಾಗಿದೆ. ಶೇಖಡಾ 3ರಷ್ಟು ಕ್ಲೋರ್‍ಡೇನ್ ದ್ರಾವಣವನ್ನು ಸಿಂಪಡಿಸುವುದರಿಂದ ಜಿರಲೆಗಳನ್ನು ಯಶಸ್ವಿಯಾಗಿ ನಾಶ ಮಾಡಬಹುದು. ವಿಷಮಿಶ್ರಿತ ಆಹಾರಗಳ ಆಮಿಷವನ್ನು ಒಡ್ಡಿ ನಿಯಂತ್ರಿಸುವುದು ಕೂಡ ಒಂದು ಸಮರ್ಥ ವಿಧಾನ. ಆದರೆ ಜಿರಲೆಗಳ ಸಂತಾನವೃದ್ಧಿ ಶೀಘ್ರಗತಿಯಲ್ಲಿ ನಡೆಯುವುದರಿಂದ ಅವುಗಳ ಮರುಪೀಡೆ ಇದ್ದೇ ಇದೆ. ಮನೆಯ ಸುತ್ತಣ ನೆಲೆಗಳಲ್ಲಿ ಜಿರಲೆ ಇರದಂತೆ ನೋಡಿಕೋಳ್ಳುವುದೇ ಇವುಗಳ ಹತೋಟಿಯ ಅತ್ಯುತ್ತಮ ಮಾರ್ಗ. ಕೆಲವು ಪರಾವಲಂಬಿ ಕಣಜಗಳು ಜಿರಲೆಗಳನ್ನು ತಿನ್ನುವುದರಿಂದ ಇಂಥ ಕಣಜಗಳನ್ನೂ ಜಿರಲೆಗಳ ನಾಶಕ್ಕೆ ಬಳಸಬಹುದು. (ಕೆ.ಜಿ.ಎನ್.)