ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜೀಗುಜ್ಜೆ ಮರ

ಜೀಗುಜ್ಜೆ ಮರ - ಉಷ್ಣವಲಯದ ಜನಪ್ರಿಯ ತರಕಾರಿ ಹಾಗೂ ಅಲಂಕಾರಸಸ್ಯ (ಬ್ರೆಡ್ ಪ್ರೂಟ್). ದೀವಿಹಲಸು ಪರ್ಯಾಯ ನಾಮ. ಹಲಸಿಗೆ ಹತ್ತಿರ ಸಂಬಂಧಿ. ಅದರಂತೆಯೇ ಇದೂ ಕೂಡ ಮೊರೇಸೀ ಕುಟುಂಬಕ್ಕೆ ಸೇರಿದೆ. ಇದರ ವೈಜ್ಞಾನಿಕ ಹೆಸರು ಆರ್ಟೋಕಾರ್ಪಸ್ ಇನ್‍ಸೈಸ (ಆ.ಕಮ್ಯುನಿಸ್ ಮತ್ತು ಆ.ಆಲ್ಟಿಲಿಸ್ ಎಂಬ ಹೆಸರುಗಳೂ ಉಂಟು). ಇದು ಉಷ್ಣವಲಯದ ಉಪಯುಕ್ತ ಉಪಬೆಳೆ. ದಕ್ಷಿಣ ಪೆಸಿಫಿಕ್ ನಿವಾಸಿಗಳಿಗೆ ಪ್ರಮುಖ ಆಹಾರವೆನಿಸಿದೆ. ಜೀಗುಜ್ಜೆಯ ತವರು ಮಲಯ. ಇದರ ರುಚಿಗೆ ಮಾರುಹೋದ ಪಾಶ್ಚಾತ್ಯರು ಅಲ್ಲಿಂದ ಇತರೆಡೆಗಳಿಗೆ ಇದನ್ನು ಒಯ್ದರೆಂದು ಹೇಳಲಾಗಿದೆ. ಈಗ ಉಷ್ಣವಲಯದಲ್ಲೆಲ್ಲ ಇದರ ವ್ಯವಸಾಯ ಉಂಟು. ಭಾರತದಲ್ಲಿ ಪಶ್ಚಿಮ ಕರಾವಳಿ ಅದರಲ್ಲೂ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ಈ ಬೆಳೆಗೆ ಹೆಸರುವಾಸಿ. ಇಲ್ಲಿನ ಕಡಲ ಬಳಿಯ ಹವಾಗುಣ ಭೂಗುಣಗಳು ಜೀಗುಜ್ಜೆಯ ಬೇಸಾಯಕ್ಕೆ ಅನುಕೂಲವಾಗಿವೆ.

ಜೀಗುಜ್ಜೆ ದೊಡ್ಡ ಗಾತ್ರದ ಮರ; 12 - 20 ಸೆಂ.ಮೀ. ಎತ್ತರಕ್ಕೆ ವಿಸ್ತಾರವಾಗಿ ಹರಡಿಕೊಂಡು ಬೆಳೆಯುತ್ತದೆ. ಕಾಂಡದಲ್ಲಿ ಬಿಳಿಯ ಬಣ್ಣದ ಹಾಲ್ನೊರೆಯುಂಟು. ಎಲೆಗಳು ದೊಡ್ಡ ಗಾತ್ರದವು; 30 - 90 ಸೆಂ.ಮೀ. ಉದ್ದವಾಗಿವೆ; ಇವುಗಳ ಜೋಡಣೆ ಪರ್ಯಾಯ ರೀತಿಯದು. ಎಲೆಯಲಗು ಹರಳು ಗಿಡದ ಎಲೆಯಂತೆ 3-9 ಹಾಲೆಗಳಾಗಿ ವಿಭಾಗಗೊಂಡಿದೆ. ಎಲೆ ಚಿಕ್ಕದಿದ್ದಾಗ ದೃಢವಾದ ವೃಂತಪರ್ಣದಿಂದ ಆವೃತವಾಗಿರುತ್ತದೆ. ಎಲೆ ದೊಡ್ಡದಾದಂತೆ ವೃಂತಪರ್ಣ ಉದುರಿ ಬಿಡುತ್ತದೆ. ಜೀಗುಜ್ಜೆ ಮರದಲ್ಲಿ ಗಂಡು ಹೂಗಳು ಗದೆಯಾಕಾರದ ಕ್ಯಾಟ್ಕಿನ್ ಗೊಂಚಲುಗಳಲ್ಲಿಯೂ ಹೆಣ್ಣುಹೂಗಳು ಹೆಚ್ಚು ಕಡಿಮೆ ಚಂಡಿನಾಕಾರದ ಗೊಂಚಲುಗಳಲ್ಲೂ ಸಮಾವೇಶಗೊಂಡಿವೆ. ಗಂಡು ಹೂವಿನಲ್ಲಿ ಪುಷ್ಪಪತ್ರ ಮತ್ತು 2 ಕೇಸರಗಳಿವೆ. ಹೆಣ್ಣಿನಲ್ಲಿ 2 ಕಾರ್ಪೆಲುಗಳ ಅಂಡಾಶಯ ಇವೆ. ಅಂಡಕೋಶ ಒಂದೇ ಕೋಣೆಯುಳ್ಳದ್ದು. ಒಳಗೆ ಒಂದೇ ಒಂದು ಅಂಡಕ ಉಂಟು. ಫಲ ಸಂಯುಕ್ತಮಾದರಿಯದು. ಹೆಣ್ಣು ಹೂಗೊಂಚಲಿನ ಎಲ್ಲ ಅಂಡಾಶಯಗಳೂ ಕೂಡಿಕೊಂಡು ಬೆಳೆದು ರಸಭರಿತ ಫಲ-ಸೋರೋಸಿನ್-ಆಗುತ್ತವೆ. ಪುಷ್ಪಮಂಜರಿಯ ಅಕ್ಷ ಮತ್ತು ಹೂಗಳ ಪೆರಿಯಾಂತ್ ಹಾಲೆಗಳು ಸೇರಿಕೊಂಡು ಫಲದ ತಿನ್ನಲು ಯೋಗ್ಯವಾದ ಭಾಗವಾಗುತ್ತವೆ. ಫಲದ ಹೊರಮೈ ಮುಳ್ಳು ಮುಳ್ಳಾಗಿದೆ. ಜೀಗುಜ್ಜೆಯಲ್ಲಿ ಬೀಜವಿಲ್ಲದ ಕೆಲವು ಬಗೆಗಳುಂಟು. ಇಂಥವನ್ನು ಬಲಿಯುವ ಮುನ್ನ ತರಕಾರಿಯಾಗಿ ಬಳಸುವರು.

ಜೀಗುಜ್ಜೆಯ ಬೇಸಾಯಕ್ಕೆ ಉಷ್ಣತೆ ಮತ್ತು ತೇವ ಹೆಚ್ಚಾಗಿರುವ ಹವೆ ಉತ್ತಮ. ಸಮುದ್ರಮಟ್ಟದಿಂದ 1000 ಮೀ. ಎತ್ತರದ ವರೆಗಿನ ಪ್ರದೇಶಗಳಲ್ಲಿ ಇದು ಬೆಳೆಯಬಲ್ಲುದಾದರೂ ಕರಾವಳಿ ಪ್ರದೇಶ ಇದಕ್ಕೆ ಅತ್ಯುತ್ತಮ. ಅಂತೆಯೇ ಜಂಬಿಟ್ಟಿಗೆ ಮತ್ತು ಮರಳುಮಣ್ಣು ಇದಕ್ಕೆ ಚೆನ್ನು. ಬೀಜಸಹಿತ ಬಗೆಗಳಲ್ಲಿ ಬೀಜಗಳ ಮೂಲಕ, ಬಗೆಗಳಲ್ಲಿ ಕಣ್ಣುಕಸಿ ಇಲ್ಲವೆ ಕಾಂಡ ತುಂಡುಗಳ ಮೂಲಕ ಜೀಗುಜ್ಜೆಯನ್ನು ಬೆಳೆಸಬಹುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇರುಸಸಿಗಳ ಮೂಲಕ ಬೆಳೆಸುವುದೂ ಇದೆ. ಎಳೆ ಸಸಿಗಳಿಗೆ ಸಾಕಷ್ಟು ಗೊಬ್ಬರವಿರಬೇಕಲ್ಲದೆ ನೆರಳು ಒದಗಿಸಬೇಕು. ಬಲಿತ ಜೀಗುಜ್ಜೆ ಕಾಯಿಯಿಂದ ಉಪ್ಪೇರಿ ಉಪ್ಪಿನಕಾಯಿಗಳನ್ನು ತಯಾರಿಸುತ್ತಾರೆ. ಹಣ್ಣಿನ ಹೊರಸಿಪ್ಪೆಯನ್ನು ತೆಗೆದು, ತಿರುಳನ್ನು ತುಂಡರಿಸಿ ಒಣಗಿಸಿ ಅಥವಾ ಹಿಟ್ಟು ತಯಾರಿಸಿ ಶೇಖರಿಸಿಡುವುದು ವಾಡಿಕೆ. ಇದರಿಂದ ಫಲ ದೊರೆಯದ ಕಾಲದಲ್ಲಿ ಈ ಹಿಟ್ಟನ್ನು ಉಪಯೋಗಿಸಬಹುದು. ಬೇಯಿಸಿದಾಗ ರುಚಿ ರಹಿತವಾಗಿದೆಯಾದರೂ ಮಿತ ಪ್ರಮಾಣದ ಸಂಬಾರ ದಿನಸುಗಳನ್ನು ಸೇರಿಸಿ ರುಚಿಗೊಳಿಸಿ ತಿನ್ನಬಹುದು. ಜೀಗುಜ್ಜೆ ಮರದ ಎಲೆ ದನಕರುಗಳಿಗೆ ಉತ್ತಮ ಮೇವು. ಹಾಲ್ನೊರೆಯಿಂದ ಉತ್ತಮ ಬಗೆಯ ಅಂಟನ್ನು ತಯಾರಿಸಬಹುದು. ಇದನ್ನು ದೋಣಿ ಹಲಗೆಗಳ ಸಂದುಗಳನ್ನು ಭದ್ರವಾಗಿ ಮುಚ್ಚಲು ಬಳಸುತ್ತಾರೆ. ಇದರ ಚೌಬೀನೆಯಿಂದ ಚಿಕ್ಕ ದೋಣಿಗಳನ್ನು, ಹಲಗೆ, ಪೀಠೋಪಕರಣ, ತೊಲೆ ಮುಂತಾದುವನ್ನು ತಯಾರಿಸುತ್ತಾರೆ. ತೊಗಟೆಯಿಂದ ತೆಗೆದ ನಾರಿನಿಂದ ಹಗ್ಗ ತಯಾರಿಸಬಹುದು. (ಎ.ಕೆ.ಕೆ.) ಪರಿಷ್ಕರಣೆ : ಹರೀಶ್ ಭಟ್