ಜೆಂಗಿಸ್ ಖಾನ್ 1165?-1227. ಒಬ್ಬ ಮಂಗೋಲ್ ದೊರೆ, ಸಮರ್ಥಯೋಧ. ಮಂಗೋಲ್ ಬಣಗಳನ್ನು ಒಟ್ಟುಗೂಡಿಸಿ ವಿಸ್ತಾರವಾದ ಸಾಮ್ರಾಜ್ಯವನ್ನು ಸ್ಥಾಪಿಸಿದ. ಟೆಮುಜಿಸ್ ಎಂಬುದು ಅವನ ಮೊದಲ ಹೆಸರು. ಹದಿಮೂರನೆಯ ವಯಸ್ಸಿನಲ್ಲೇ ತಂದೆಯ ಉತ್ತರಾಧಿಕಾರಿಯಾಗಿ ತನ್ನ ಬಣದ ನಾಯಕನಾದ. ಬಹುಬೇಗ ತನ್ನ ಶೌರ್ಯ, ನಿರ್ಭಯತೆ ಹಾಗೂ ಕ್ರೌರ್ಯದಿಂದಾಗಿ ಇತರ ಬಣಗಳ ಒಡೆತನ ಸಂಪಾದಿಸಿದ. ಅವುಗಳ ಸಮರ್ಥ ನಾಯಕನಾದ.
1206ರ ವೇಳೆಗೆ ಈತ ಮಂಗೋಲ್ ಸಾರ್ವಭೌಮನಾದ. ಅನಂತರ ಬೇರೆ ಬೇರೆ ಪ್ರದೇಶಗಳನ್ನು ಗೆಲ್ಲಲು ಅಪಾರವಾದ ಸೈನ್ಯವನ್ನು ಕಟ್ಟಿದ. ಈತನ ಸೈನ್ಯದಲ್ಲಿ ತಲಾ ಒಂದು ಸಾವಿರ ಯೋಧರಿಂದ ಕೂಡಿದ್ದ ತೊಂಬತ್ತೈದು ಪಡೆಗಳಿದ್ದುವೆಂದು ಹೇಳಲಾಗಿದೆ. ಆ ಕಾಲದಲ್ಲಿ ಅಷ್ಟು ಶಿಸ್ತು ಮತ್ತು ಶೌರ್ಯದಿಂದ ಕೂಡಿದ್ದ ಸೈನ್ಯವನ್ನು ಪ್ರಪಂಚದ ಯಾವೊಬ್ಬ ರಾಜನೂ ಹೊಂದಿರಲಿಲ್ಲವೆಂದು ಚರಿತ್ರಕಾರರು ಅಭಿಪ್ರಾಯಪಟ್ಟಿದ್ದಾರೆ.
ಸೈನ್ಯವನ್ನು ಸಜ್ಜುಗೊಳಿಸಿದ ಅನಂತರ ಜೆಂಗಿಸ್ ಖಾನ್ ಸಾಮ್ರಾಜ್ಯ ವಿಸ್ತರಣೆಗೆ ತೊಡಗಿದ. 1213ರಲ್ಲಿ ಚೀನದ ಉತ್ತರ ಭಾಗಗಳನ್ನು ಆಕ್ರಮಿಸಿ ಪೀಕಿಂಗ್‍ವರೆಗೂ ನುಗ್ಗಿ ವಿಶೇಷ ಐಶ್ವರ್ಯವನ್ನು ವಶಪಡಿಸಿಕೊಂಡ. 1218ರಲ್ಲಿ ಕೊರಿಯವನ್ನು ಆಕ್ರಮಿಸಿದ.
ಅನಂತರ ಜೆಂಗಿಸ್ ಖಾನನ ದೃಷ್ಟಿ ಮಧ್ಯ ಏಷ್ಯದತ್ತ ತಿರುಗಿತು. ತನ್ನ ದೂತರನ್ನು ತುರ್ಕ ರಾಜನೊಬ್ಬ ತಿರಸ್ಕಾರದಿಂದ ಕಂಡನೆಂಬ ನೆಪದಿಂದ ತುರ್ಕಿ ಮತ್ತು ಸುತ್ತುಮುತ್ತಿನ ಪ್ರದೇಶಗಳ ಮೇಲೆ ದಂಡೆತ್ತಿಹೋದ. ಮುಸ್ಲಿಂ ಸಾಮ್ರಾಜ್ಯಗಳು ಜೆಂಗಿಸ್ ಖಾನನ ದಾಳಿಗೆ ಸಿಕ್ಕು ಸೋತು ಉರುಳಿದುವು. ತುರ್ಕಿ, ಇರಾಕ್ ಮತ್ತು ಇರಾನ್ ಪ್ರದೇಶಗಳು ಖಾನನ ವಶವಾದವು. ಮುಸ್ಲಿಂ ಸಂಸ್ಕøತಿಯ ಕೇಂದ್ರಗಳಾಗಿದ್ದ ಅನೇಕ ಪ್ರಸಿದ್ಧ ಪಟ್ಟಣಗಳು ಪಾಳುಬಿದ್ದುವು. ಸಹಸ್ರಾರು ಸಂಖ್ಯೆಯಲ್ಲಿ ಜನರು ಕೊಲೆಯಾದರು. ಅನಂತರ ಪೂರ್ವ ಯೂರೋಪಿನ ಅನೇಕ ಭಾಗಗಳನ್ನು ಈತ ವಶಪಡಿಸಿಕೊಂಡ.
ಜೆಂಗಿಸ್ ಖಾನನಿಗೆ ನಾಲ್ಕು ಜನ ಗಂಡು ಮಕ್ಕಳಿದ್ದರು. ಮೊದಲನೆಯವನಾದ ಜೂಜಿ ಖಾನ್ ತಂದೆ ಬದುಕಿದ್ದಾಗಲೇ ಮರಣಹೊಂದಿದ. ಎರಡನೆಯವನಾದ ಜಗತೈಖಾನ್ ತುರ್ಕಿಯಲ್ಲಿ ತನ್ನ ಸಂತತಿಯ ಆಳ್ವಿಕೆಯನ್ನು ಸ್ಥಾಪಿಸಿದ. ಮೂರನೆಯವನಾದ ಬಗ್ಡೈಖಾನ್ ತಂದೆಯ ಉತ್ತರಾಧಿಕಾರಿಯಾದ. ಕೊನೆಯವನಾದ ಟುಲೈಖಾನನ ಮಕ್ಕಳಾದ ಮಂಗು ಖಾನ್, ಕುಬ್ಲೈಖಾನ್ ಮತ್ತು ಹಲಗು ಖಾನರು ಅನಂತರ ಮಂಗೋಲ್ ಸಾಮ್ರಾಜ್ಯವನ್ನು ಕ್ರಮವಾಗಿ ಆಳಿದರು. ಶತ್ರುಗಳನ್ನು ಧ್ವಂಸಗೊಳಿಸುವುದರಲ್ಲಿ ಜೆಂಗಿಸ್ ಖಾನ್ ನಿಷ್ಕರುಣಿಯಾಗಿದ್ದ. ಈತನ ದಾಳಿಗೆ ಒಳಗಾದ ಪಟ್ಟಣಿಗರು ಸಾಮಾನ್ಯವಾಗಿ ಕಗ್ಗೊಲೆಗೆ ಒಳಗಾಗುತ್ತಿದ್ದರು. ಸೈನಿಕ ಕಾರ್ಯಾಚರಣೆ ಹಾಗೂ ತರಬೇತಿಯಲ್ಲಿ ಜೆಂಗಿಸ್ ಖಾನ್ ಅದ್ವಿತೀಯನಾಗಿದ್ದ. ಮಂಗೋಲರು ಜೆಂಗಿಸ್ ಖಾನನ ಕಾಲದಲ್ಲಿ ಇಸ್ಲಾಂ ಧರ್ಮೀಯರಾಗಿರಲಿಲ್ಲ. ಆಕಾಶವನ್ನು ದೇವರೆಂದು ನಂಬಿದ್ದ ಅವರ ಧರ್ಮಕ್ಕೆ ಷಿಮಾ ಎಂಬ ಹೆಸರಿತ್ತು. ಜೆಂಗಿಸ್ ಖಾನ್ ಮತಾಂಧನಾಗಿರಲಿಲ್ಲ. ತನ್ನ ಹತ್ತಿರದ ಸಂಬಂಧಿಗಳು ಇಸ್ಲಾಂ ಅಥವಾ ಕ್ರೈಸ್ತಧರ್ಮವನ್ನು ಸ್ವೀಕರಿಸಲು ಆತ ಅಡ್ಡಿಪಡಿಸಲಿಲ್ಲ. (ಜಿ.ಆರ್.ಆರ್.)