ಝೇಲಮ್ ಭಾರತ ಪಾಕಿಸ್ತಾನಗಳಲ್ಲಿ ಹರಿಯುವ ಒಂದು ನದಿ; ಪಾಕಿಸ್ತಾನದ ರಾವಲ್ಪಿಂಡಿ ವಿಭಾಗದ ಒಂದು ಜಿಲ್ಲೆಯ ಆಡಳಿತ ಕೇಂದ್ರ. ಝೇಲಮ್ ನದಿ ಪಂಜಾಬಿನ ಐದು ನದಿಗಳಲ್ಲೊಂದು. ಭಾರತದ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಬನಿಹಾಲ್ ಕಣಿವೆಗೆ ಈಶಾನ್ಯದಲ್ಲಿ ಉಗಮಿಸುತ್ತದೆ. ಇದರ ಇನ್ನೊಂದು ಮೂಲ ಶೇಷನಾಗ್ ಸರೋವರ. ಝೇಲಮ್‍ನ ಬಲದಂಡೆಯ ಒಂದು ಉಪನದಿಯಾದ ಲಿಡ್ಡಾರ್‍ನ ತಲೆಯ ಬಿಳಿ ಈ ಸರೋವರವಿದೆ. ಅದ್‍ಪಾತ್, ಬ್ರಿಂಗ್ ಮತ್ತು ಸಂದ್ರನ್‍ಗಳು ಒಂದಾಗಿ ಒಂದು ತೊರೆಯಾಗಿ ಝೇಲಮ್ ನದಿಯ ಬಲದಂಡೆಯಲ್ಲಿ ಅನಂತನಾಗ್ ಬಳಿ ಅದನ್ನು ಸೇರುತ್ತದೆ. ಅಲ್ಲಿಂದ ನದಿ ವಾಯುವ್ಯ ದಿಕ್ಕಿನಲ್ಲಿ ಕಾಶ್ಮೀರ ಕಣಿವೆಯ ಮೂಲಕ ಹರಿದು, ಶ್ರೀನಗರವನ್ನು ದಾಟಿ, ವೂಲರ್ ಸರೋವರವನ್ನು ಸೇರುತ್ತದೆ. ಅಲ್ಲಿಂದ ಹೊರಬಂದು ಪೀರ್ ಪಂಜಲ್ ಶ್ರೇಣಿಗೆ ಅಡ್ಡಲಾಗಿ 20 ಮೈ. ದೂರ ಹರಿದು ಉರೀಗೆ ಬರುತ್ತದೆ. ಬಾರಮೂಲದ ಬಳಿ ಸು. 7,000 ಆಳದ ಕಂದರದಲ್ಲಿ ಹರಿದು, ಉರೀಯಿಂದ ವಾಯುವ್ಯಾಭಿಮುಖವಾಗಿ ಮುಜಫರಬಾದ್‍ಗೆ ಪ್ರವಹಿಸಿ ಕಿಷನ್‍ಗಂಗದೊಂದಿಗೆ ಕೂಡಿಕೊಂಡು ದಕ್ಷಿಣಕ್ಕೆ ತಿರುಗಿ ಮುಂದುವರಿಯುತ್ತದೆ. ಅನಂತರ ಬಂಡೆಯಿಂದ ಕೂಡಿದ ಪಾತ್ರದಲ್ಲಿ ನದಿ ಹರಿದು ಕಾಶ್ಮೀರ ಮತ್ತು ಪಾಕಿಸ್ತಾನಗಳ ನಡುವಣ ಗಡಿಯಾಗಿ ಪರಿಣಮಿಸುತ್ತದೆ. ಮಂಗ್ಲಾ ಬಳಿ ಮೇಲಣ ಝೇಲಮ್ ನಾಲೆಗೆ 2 ಮೈ. ಉತ್ತರಕ್ಕೆ ನದಿ ಸಿವಾಲಿಕ್ ಶ್ರೇಣಿಯನ್ನು ದಾಟಿ ಮೈದಾನವನ್ನು ಸೇರುತ್ತದೆ. ಅಲ್ಲಿ ನದಿಗೆ ಅಡ್ಡಲಾಗಿ ಕಟ್ಟೆಯೊಂದನ್ನು ಕಟ್ಟಲಾಗಿದೆ. ಮೇಲಣ ಝೇಲಮ್ ನಾಲೆ ಮಂಗ್ಲಾ ಬಳಿಯೂ ಕೆಳ ಝೇಲಮ್ ನಾಲೆ ರಾಸಲ್ ಬಳಿಯೂ ಆರಂಭವಾಗುತ್ತದೆ. ಝೇಲಮ್ ಪಟ್ಟಣದಿಂದ ಕೆಳಕ್ಕೆ ನದಿ ನೈಋತ್ಯ ದಿಕ್ಕಿಗೆ ಹರಿಯುತ್ತದೆ. ಸ್ವಲ್ಪ ದೂರ ಆದಮೇಲೆ ಬಹುತೇಕ ದಕ್ಷಿಣಾಭಿಮುಖವಾಗಿ ಹರಿದು ಟ್ರಿಮ್ಮು ಬಳಿ ಚೀನಾಬ್ ನದಿಯಲ್ಲಿ ಸಂಗಮಿಸುತ್ತದೆ. ನದಿಯ ಉದ್ದ ಸು. 450 ಮೈ. 1,000 ಮಟ್ಟದ ಮೇಲಕ್ಕೆ ಇರುವ ಜಲಾನಯನ ಪ್ರದೇಶದ ವಿಸ್ತೀರ್ಣ 13,030 ಚ.ಮೈ. ಹಿಮಪ್ರವಾಹದ ಪ್ರದೇಶ 142 ಚ.ಮೈ. ನದಿಯಲ್ಲಿ ವಾರ್ಷಿಕ ಸರಾಸರಿ ಹರಿವು 2,38,60,000 ಎಕರೆ ಅಡಿ. ಪಂಜಾಬಿನ ಇತರ ನದಿಗಳಿಗಿಂತ ಮುಂಚೆ, ಮಾರ್ಚ್‍ನಲ್ಲಿ, ಈ ನದಿಯಲ್ಲಿ ಪ್ರವಾಹ ಆರಂಭವಾಗುತ್ತದೆ. ಮಳೆಗಾಲದಲ್ಲಿ ನದಿ ದಡಮೀರಿ ಹರಿದು ನೆರೆಯ ಪ್ರದೇಶವನ್ನೆಲ್ಲ ತುಂಬುತ್ತದೆ. ಇದು ವ್ಯವಸಾಯಕ್ಕೆ ಅನುಕೂಲಕರ. ಸೆಪ್ಟೆಂಬರಿನಲ್ಲಿ ನೆರೆಯ ಪ್ರವಾಹ ಇಳಿದಾಗ ರಾಬಿ ಬೆಳೆಯ ಬಿತ್ತನೆ ಮಾಡಲಾಗುತ್ತದೆ. (ಎ.ಎನ್.ಆರ್.ಎ.)

ಝೇಲಮ್ ಜಿಲ್ಲೆಯ ವಿಸ್ತೀರ್ಣ 2,722 ಚ. ಮೈ. ಜನಸಂಖ್ಯೆ 7,49,229 (1961). ಝೇಲಮ್ ನದಿಯಿಂದ ಉತ್ತರಕ್ಕೆ ರಾವಲ್ಪಿಂಡಿ ಜಿಲ್ಲೆಯವರೆಗೆ ಹಬ್ಬಿದೆ. ಸಾಲ್ಟ್ ಶ್ರೇಣಿಯಲ್ಲಿ ಉಪ್ಪನ್ನು ತೆಗೆಯಲಾಗುತ್ತದೆ. ದಾಂಡೋಟ್‍ನಲ್ಲಿ ಕಲ್ಲಿದ್ದಲು, ಜಾಕ್‍ವಾಲ್ ಪ್ರದೇಶದಲ್ಲಿ ತೈಲ ದೊರಕುತ್ತದೆ. ಗೋದಿ, ಬಾಜ್ರ ಮುಖ್ಯ ಬೆಳೆಗಳು.

ಝೇಲಮ್ ಪಟ್ಟಣ ಲಾಹೋರಿಗೆ 103 ಮೈ. ಉತ್ತರಕ್ಕೆ, ಝೇಲಮ್ ನದಿಯ ಬಲದಂಡೆಯ ಮೇಲೆ ಇದೆ. ಅಲ್ಲಿ ಝೇಲಮ್ ನದಿಗೆ ಅಡ್ಡಲಾಗಿ ಕಟ್ಟಲಾದ ಸೇತುವೆಯ ಮೇಲೆ ಲಾಹೋರ್-ಪೆಷಾವರ್ ರೈಲುಮಾರ್ಗವೂ ಹೆದ್ದಾರಿಯೂ ಇವೆ. ಝೇಲಮ್ ನದಿಯಿಂದಾಗಿ ಈ ಪಟ್ಟಣಕ್ಕೆ ಈ ಹೆಸರು. ಹಳೆಯ ನಗರ ಇರುವುದು ನದಿಯ ಎಡಮಗ್ಗುಲಿಗೆ. ಅದು ಅಲೆಕ್ಸಾಂಡರನ ಬ್ಯುಕೆಫಾಲ ಆಗಿದ್ದಿರಬಹುದೆಂದು ಊಹೆ. ಉಪ್ಪಿನ ವ್ಯಾಪಾರದಿಂದ ಪಟ್ಟಣ ಪ್ರಸಿದ್ಧಿಗೆ ಬಂತು. ಈಗ ಇಲ್ಲಿ ಚೌಬೀನೆಯ ವ್ಯಾಪಾರ ನಡೆಯುತ್ತದೆ. 1947ರ ಅನಂತರ ಇಲ್ಲಿ ಒಂದು ಜವಳಿ ಗಿರಣಿಯೂ ಸಿಗರೇಟ್, ಗಾಜು ಮತ್ತು ಪ್ಲೈವುಡ್ ಕಾರ್ಖಾನೆಗಳೂ ಸ್ಥಾಪಿತವಾದುವು. ಇಲ್ಲಿ ಅನೇಕ ಮರಕೊಯ್ಯುವ ಕಾರ್ಖಾನೆಗಳಿವೆ. ಇಲ್ಲಿ ಸೇನಾ ಸರಬರಾಜು ಪಡೆ ತರಬೇತು ಸಂಸ್ಥೆಯೂ ಇದೆ. ಶಾಲಾ ಕಾಲೇಜುಗಳು ಮತ್ತು ಆಸ್ಪತ್ರೆಗಳಿರುವ ಈ ಪಟ್ಟಣದ ಜನಸಂಖ್ಯೆ 52,585 (1961).