ಟಾಟಮ್, ಎಡ್ವರ್ಡ್ ಲಾರಿ 1909-. ಅಮೆರಿಕ ಸಂಯುಕ್ತಸಂಸ್ಥಾನದ ಜೀವರಸಾಯನಶಾಸ್ತ್ರಜ್ಞ. ತಳೀಕರಣ ಸಂಬಂಧದ ಸಂಶೋಧನೆಗಳಿಗಾಗಿ ಜಾರ್ಜ್ ಡಬ್ಲ್ಯು. ಬೀಡಲ್ ಮತ್ತು ಜೋಶುವ ಲೆಡರ್ ಬರ್ಗ್‍ರೊಂದಿಗೆ 1958ರಲ್ಲಿ ನೊಬೆಲ್ ಬಹುಮಾನ ಹಂಚಿಕೊಂಡಿದ್ದಾನೆ.
ಟಾಟಮ್ 1909ನೆಯ ಇಸವಿ ಡಿಸೆಂಬರ್ 14ರಂದು ಅಮೆರಿಕದ ಕಾಲರಾಡೊ ರಾಜ್ಯದ ಬೌಲ್ಡರ್‍ನಲ್ಲಿ ಜನಿಸಿದನು. ಇವನ ವಿದ್ಯಾಭ್ಯಾಸ ಷಿಕಾಗೋ ಹಾಗೂ ವಿಸ್ಕಾನ್ಸಿನ್ ವಿಶ್ವವಿದ್ಯಾಲಯಗಳಲ್ಲಿ ನಡೆದು 1931ರಲ್ಲಿ ಎ.ಬಿ. ಪದವಿಯನ್ನೂ 1934ರಲ್ಲಿ ಪಿಎಚ್.ಡಿ. ಪದವಿಯನ್ನೂ ಪಡೆದನು. ಇವನ ಸಂಶೋಧನ ಪ್ರಬಂಧದ ವಿಷಯ ಬ್ಯಾಕ್ಟೀರಿಯಗಳಲ್ಲಿ ಪೋಷಣೆ ಮತ್ತು ಜೀವರಾಸಾಯನಿಕ ಸಂಶೋಧನೆಗಳು. ಅನಂತರ ಒಂದು ವರ್ಷ ನೆದರ್‍ಲಾಂಡ್ಸ್‍ನಲ್ಲಿ ಸಂಶೋಧನೆ ನಡೆಸಿ ಅಮೆರಿಕಕ್ಕೆ ಮರಳಿ ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಬೀಡಲ್‍ರ ಜತೆಗೂಡಿ ಅನುವಂಶೀಯತೆಯ ಬಗ್ಗೆ ಜೀವರಾಸಾಯನಿಕ ಸಂಶೋಧನೆಗಳನ್ನು ನಡೆಸಿದನು. ಈ ಸಂಶೋಧನೆಗಳಿಗೆ ಹಣ್ಣಿನ ನೊಣ ಡ್ರೋಸಾಫಿಲ ಮತ್ತು ಬ್ರೆಡ್ಡಿಗೆ ಬರುವ ಕೆಂಪು ಬೂಷ್ಟು (ನ್ಯೂರಾಸ್ಪೊರ)ಗಳನ್ನು ಬಳಸಿಕೊಂಡು ಜೀವವಿಜ್ಞಾನದಲ್ಲಿ ಒಂದು ಕ್ರಾಂತಿಕಾರಿಯಾದ ಮಹತ್ತ್ವದ ಫಲಿತಾಂಶಗಳನ್ನು ಪಡೆದರು.
ಅನಂತರ ಲೆಡ್‍ಬರ್ಗ್ ಜೊತೆಗೂಡಿ ಬ್ಯಾಕ್ಟೀರಿಯಗಳಲ್ಲಿ ಸಂಶೋಧನೆಗಳನ್ನು ನಡೆಸಿದನು. ಇವನು ಸಂಶೋಧನೆ ನಡೆಸುವ ಮುಂಚೆ ಬ್ಯಾಕ್ಟೀರಿಯಗಳಲ್ಲಿ ಸಲಿಂಗ ರೀತಿಯ ಸಂತಾನೋತ್ಪತ್ತಿ ಇಲ್ಲವೆಂದು ಭಾವಿಸಲಾಗಿತ್ತು. ಎಶ್ಚರೀಚಿಯ ಕೋಲೈ ಎಂಬ ಬ್ಯಾಕ್ಟೀರಿಯವನ್ನು ಉಪಯೋಗಿಸಿಕೊಂಡು ಪೋಷಣೆಯಲ್ಲಿ ಭಿನ್ನ ಆವಶ್ಯಕತೆಗಳನ್ನು ಹೊಂದಿದ್ದ ಎರಡು ತಳಿಗಳನ್ನು ಸೇರಿಸಿ ಒಂದು ಹೊಸ ತಳಿಯನ್ನು ಉತ್ಪಾದಿಸಿ ಬ್ಯಾಕ್ಟೀರಿಯಗಳಲ್ಲೂ ಸಲಿಂಗ ಸಂತಾನಾಭಿವೃದ್ಧಿ ಇದೆ ಎಂದು ನಿಶ್ಚಿತಪಡಿಸಿದನು. 1957ರಲ್ಲಿ ಟಾಟಮ್ ರಾಕ್‍ಫೆಲರ್ ವಿಸ್ವವಿದ್ಯಾಲಯಕ್ಕೆ ಸೂಕ್ಷ್ಮಜೀವಿ ವಿಜ್ಞಾನ ವಿಭಾಗದ ಪ್ರೊಫೆಸರ್ ಆಗಿ ಸೇರಿಕೊಂಡು ಸಂಶೋಧನೆ ನಡೆಸಿದ್ದಾನೆ. (ಎಸ್.ಎಸ್.ಯು.)