ಟಾಲ್ಸ್ಟಾಯ್, ಕೌಂಟ್ ಲಿಯೊ 1828-1910. ರಷ್ಯದ ಕಾದಂಬರಿಕಾರ. ನೀತಿಬೋಧಕ. ಪ್ರಪಂಚದ ಪ್ರಸಿದ್ಧ ಸಾಹಿತಿಗಳ ಗುಂಪಿಗೆ ಸೇರಿದವ. ಶ್ರೀಮಂತವರ್ಗಕ್ಕೆ ಸೇರಿದ ಈತನದು ಮೊದಲಿನಿಂದ ಸಮಾಧಾನವರಿಯದ ಚೇತನ. ಪದವೀಧರನಾಗದೆ ಕಾeóÁನ್ ವಿಶ್ವವಿದ್ಯಾಲಯವನ್ನು ಬಿಟ್ಟ. ಯೌವನದಿಂದಲೇ ಬಾಳಿನ ಸಾರ್ಥಕ್ಯವನ್ನು ಕಂಡುಕೊಳ್ಳುವ ಬಯಕೆ ಇದ್ದಿತಾದರೂ ಯಾವ ನಿರ್ದಿಷ್ಟ ಗುರಿಯೂ ಸಾಧನೆಯೂ ಇಲ್ಲದೆ ಕೆಲವು ವರ್ಷಗಳನ್ನು ಕಳೆದ. 1851ರಲ್ಲಿ ಸೈನ್ಯಕ್ಕೆ ಸೇರಿ ಕ್ರಿಮಿಯ ಯುದ್ಧದಲ್ಲಿ ತುರ್ಕರ ವಿರುದ್ಧ ಹೋರಾಡಿದ. 1855ರಲ್ಲಿ ಸೈನ್ಯವನ್ನು ಬಿಟ್ಟು ಮಾಸ್ಕೊಗೆ ಹಿಂದಿರುಗಿದ. ಕೆಲವು ವರ್ಷ ವಿದೇಶ ಪ್ರವಾಸ ಮಾಡಿ, ಅನಂತರ ರೈತರ ಮಕ್ಕಳಿಗಾಗಿ ಒಂದು ಶಾಲೆಯನ್ನು ಪ್ರಾರಂಭಿಸಿದ. 1862ರಲ್ಲಿ ಮದುವೆಯಾಯಿತು. ಹದಿನೈದು ವರ್ಷಗಳ ಕಾಲ ಪತಿಪತ್ನಿಯರ ಜೀವನ ಸುಗಮವಾಗಿ ಕಳೆಯಿತು. ಆದರೆ 1879ರಲ್ಲಿ ಈತನಲ್ಲಾದ ಮಾರ್ಪಾಡು ಗೃಹಜೀವನಕ್ಕೆ ಧಕ್ಕೆ ತಂದಿತು. ಸುಮಾರು 1875ರಿಂದ 1879ರವರೆಗಿನದು ಈತನ ಜೀವನದಲ್ಲಿ ಪರ್ವಕಾಲ, ವಿಚಾರರಹಿತವಾದ, ತರುಲತೆಗಳ ಬಾಳಿನಂಥ ಸಹಜಜೀವನದಿಂದ ವಿಮುಖನಾಗಿ, ನೀತಿ ಪರಿಶುದ್ಧವೂ ಅರ್ಥಪೂರ್ಣವೂ ಆದ ಬಾಳನ್ನು ನಡೆಸುವ ಬಯಕೆ ಗರಿಗೂಡಿ ಇವನ ವಿಚಾರಲಹರಿಯನ್ನೂ ಜೀವನ ವಿಧಾನವನ್ನೂ ಸಂಪೂರ್ಣವಾಗಿ ಮಾರ್ಪಡಿಸಿತು. ತನ್ನ ಆವರೆಗಿನ ಸಾಹಿತ್ಯ ಸೃಷ್ಟಿ ಮತ್ತು ಪದ್ಧತಿಗಳನ್ನು ಪಾಪಕರವೆಂದು ತಿರಸ್ಕರಿಸಿ, ಎಲ್ಲರಿಗೂ ಸುಲಭವಾಗಿ ಅರ್ಥವಾಗುವ, ಎಲ್ಲರ ಮೇಲೆ ಪರಿಣಾಮವನ್ನುಂಟುಮಾಡುವ ಸಾಹಿತ್ಯ ರಚನೆ ಮಾಡಲು ನಿರ್ಧರಿಸಿದ. ಇವನದೇ ಒಂದು ಪಂಥವಾಯಿತು. ಆಸ್ತಿಪಾಸ್ತಿಗಳನ್ನೆಲ್ಲ ತ್ಯಜಿಸಿ, ಏಸುಕ್ರಿಸ್ತನ ಉಪದೇಶದಂತೆ ಸರ್ವತ್ಯಾಗ ಮಾಡಿ ಬದುಕುವ ಆದರ್ಶವನ್ನು ಇವನ ಹೆಂಡತಿ ಒಪ್ಪಲಿಲ್ಲ. ಈ ಆದರ್ಶಕ್ಕೆ ಕ್ರಿಯಾತ್ಮಕ ರೂಪ ಕೊಡಲು ಈತ ಮಾಡಿದ ಪ್ರಯತ್ನಗಳೆಲ್ಲ ನಿರರ್ಥಕವಾದುವು. ತನ್ನ ಮಗಳೊಂದಿಗೆ ಮನೆ ಬಿಟ್ಟ ಹೊರಟು ಸ್ವಲ್ಪ ದಿನ ಗೊತ್ತು ಗುರಿಯಿಲ್ಲದೆ ಅಲೆದು 1910ರಲ್ಲಿ ಈತ ಮರಣಹೊಂದಿದ.
ಟಾಲ್ಸ್‍ಟಾಯಿಯಲ್ಲಿ ಪರಸ್ಪರ ವಿರುದ್ಧವಾಗಿದ್ದ ಎರಡು ಪ್ರವೃತ್ತಿಗಳು ಪ್ರಬಲವಾಗಿದ್ದು, ಜೀವನದಲ್ಲಿಯೂ ಸಾಹಿತ್ಯದಲ್ಲಿಯೂ ಎರಡೂ ವ್ಯಕ್ತವಾಗಿವೆ. ಒಂದು ಕಡೆ ಸಹಜ ಪ್ರವೃತ್ತಿಗಳನ್ನನುಸರಿಸಿ ಉತ್ಸಾಹದಿಂದ ಮನಸಾರೆ ಜೀವನವನ್ನು ಸವಿಯುವ ಬಯಕೆ, ಮತ್ತೊಂದು ಕಡೆ ಜೀವನದ ಪರಮಾರ್ಥವನ್ನು ಕಂಡುಕೊಂಡು ಸಾವನ್ನು ಮೆಟ್ಟಿ ನಿಲ್ಲುವ ಬಯಕೆ. ಸಾವು ಬಾಳನ್ನು ನಿರರ್ಥಕಗೊಳಿಸುವುದೆಂಬ ಭಾವನೆ ಈತನನ್ನು ಯಾತನೆಗೊಳಿಸುತ್ತಿತ್ತು. ಈತನ ಎಲ್ಲ ಕೃತಿಗಳಲ್ಲಿ ಬಾಳಿನ ಅರ್ಥವನ್ನು ಕಂಡುಕೊಳ್ಳುವ ತೀವ್ರ ಬಯಕೆ ಇದೆ. ಜೀವನದಲ್ಲಿ ಹೇಗೋ ಹಾಗೆ ಸಾಹಿತ್ಯಸೃಷ್ಟಿಯಲ್ಲಿಯೂ 1879 ಒಂದು ಸೀಮಾರೇಖೆ. ಇವನ ಮೊದಲನೆಯ ಕೃತಿ ಚೈಲ್ಡ್‍ಹುಡ್ (ಬಾಲ್ಯ) (1852) ಮೊದಲಾದ ಪ್ರಾರಂಭಿಕ ಬರೆಹಗಳಲ್ಲಿ ನೆನಪುಗಳನ್ನು ವಿಶ್ಲೇಷಣೆ ಮಾಡಿ, ಸಣ್ಣಪುಟ್ಟ ಘಟನೆಗಳ ಅರ್ಥದ ಮೂಲಕ್ಕೆ ಕೃತಿಕಾರ ಸಾಗಿರುವುದನ್ನು ಕಾಣಬಹುದು. ಕ್ರಮೇಣ ಇವನ ಆಸಕ್ತಿ ವಿಶ್ಲೇಷಣೆಯಿಂದ ನೀತಿಯ ಕಡೆಗೆ ತಿರುಗಿತು. ಇದನ್ನು ಮುಂದಿನ ಹತ್ತು ವರ್ಷಗಳ ಕಥೆಗಳಲ್ಲಿ ಕಾಣಬಹುದು. 1863ರಲ್ಲಿ ಪ್ರಕಟವಾದ ಕಾಸ್ಯಾಕ್ಸ್ ಎಂಬುದು ಉತ್ತಮ ವಂಶಕ್ಕೆ ಸೇರಿದ, ವಿಶ್ವವಿದ್ಯಾಲಯದ ವಿದ್ಯಾಭ್ಯಾಸ ಪಡೆದ ಒಬ್ಬ ಯುವಕ ಒಂದು ಹಳ್ಳಿಯಲ್ಲಿ ನಡೆಸುವ ಜೀವನದ ಚಿತ್ರ. ನಾಯಕನ ಕೃತಕತೆಯನ್ನು ಕಾಸ್ಯಾಕ್ ರೈತರ ಸಹಜತೆಯೊಂದಿಗೆ ಹೋಲಿಸಲಾಗಿದೆ. ಈ ರೈತರು ಅವಿಚಾರವಂತರಾದರೂ ಪಾಪ ಮತ್ತು ದೋಷಗಳಿಂದ ಕೂಡಿದ್ದರೂ ತಮ್ಮ ಸಹಜತೆಯಿಂದ ನಾಗರಿಕತೆ ಮತ್ತು ಕೃತಕತೆಯ ಸೋಂಕು ತಗಲಿದ ನಾಯಕನಿಗಿಂತ ಉತ್ತಮರಾಗಿ ಚಿತ್ರಿತರಾಗಿದ್ದಾರೆ. ವಾರ್ ಅಂಡ್ ಪೀಸ್ (ಸಮರ ಮತ್ತು ಶಾಂತಿ 1865) ಟಾಲ್ಸಾಟಾಯಿಯ ಪರಿವರ್ತನೆಯ ಮುನ್ನಿನ ಸಾಹಿತ್ಯದಲ್ಲಿ ಮಹಾಕೃತಿ. ಇದರ ಅನಂತರ ಪ್ರಕಟವಾದ ಅನ ಕರನಿನ(1877) ಸಮರ ಮತ್ತು ಶಾಂತಿಯ ಮುಂದಿನ ಭಾಗ ಎನ್ನಬಹುದು. ಈ ಕೃತಿಯಲ್ಲಿಯೂ ಪಾತ್ರವೈವಿಧ್ಯ ಆಶ್ಚರ್ಯಕರವಾದುದು. ಕಾದಂಬರಿಯ ಕಡೆಯ ಭಾಗದಲ್ಲಿ ದುರಂತ ವಾತಾವರಣ ಕವಿಯುತ್ತದೆ. ಇದ್ದಕ್ಕಿದ್ದಂತೆ ದಾರಿ ಕೊನೆಗೊಂಡು ದಿಗ್ಭ್ರಮೆಯನ್ನುಂಟುಮಾಡುತ್ತದೆ. ಸಂತೃಪ್ತ ಜೀವನದ ಚಿತ್ರಗಳಿದ್ದರೂ ದುರಂತದ ಛಾಯೆ ಈ ಕೃತಿಯ ಜಗತ್ತನ್ನು ಮುತ್ತಿದೆ. ಸಮರ ಮತ್ತು ಶಾಂತಿ, ಅನ ಕರನಿನ-ಇವೆರಡರಲ್ಲಿಯೂ ಜೀವನಕ್ಕೆ ಬೇರೆ ಅರ್ಥವಿಲ್ಲ, ಬಾಳಿನ ಅರ್ಥ ಬಾಳೇ, ಅನಗತ್ಯ ವಿಚಾರ, ಕೃತಕತೆಗಳನ್ನು ಬಿಟ್ಟು ತನ್ನ ಸಹಜವಾದ ಸ್ಥಾನವನ್ನು ಸ್ವೀಕರಿಸುವುದೇ ವಿವೇಕ ಎನ್ನುವ ದೃಷ್ಟಿ ಕಾಣುತ್ತದೆ. ಆದರೆ ಈ ಕಾಲದಲ್ಲಿ ಕೃತಿಕಾರನ ಮನಸ್ಸಿನಲ್ಲಿ ನಡೆಯುತ್ತಿದ್ದ ಘರ್ಷಣೆಯ ಛಾಯೆ ಅನ ಕರನಿನದ ಮೇಲೆ ಬಿದ್ದಿದೆ. ಆಗಲೇ ಟಾಲ್ಸ್‍ಟಾಯ್ ಜಟಿಲ ಮನಸ್ಸುಗಳ ವಿಶ್ಲೇಷಣದಿಂದ ಎಲ್ಲ ಸ್ವಭಾವಗಳ ಚಿತ್ರಣದ ತಂತ್ರದತ್ತ ದೃಷ್ಟಿ ಹೊರಳಿಸಿದ್ದಾನೆ. ಅನ ಕರನಿನ ಬರೆದು ಮುಗಿಸುವ ಹೊತ್ತಿಗೆ ಕನ್‍ಫೆಷನ್ (1879 ಸತ್ಯನಿವೇದನೆ) ಎಂಬ ಕೃತಿಯಲ್ಲಿ ಚಿತ್ರಿತವಾಗಿರುವ ಪರಿವರ್ತನೆಯೂ ಮುಗಿಯುತ್ತ ಬಂದಿತು. 1879ರಲ್ಲಿ ಟಾಲ್ಸ್‍ಟಾಯ್ ಮತಸಂಸ್ಥೆ, ರಾಷ್ಟ್ರ ಭಾವನೆಗಳನ್ನು ತಿರಸ್ಕರಿಸಿ, ನಾಗರಿಕತೆಯನ್ನೂ ತಿರಸ್ಕರಿಸಿ, ಕೆಟ್ಟುದನ್ನು ವಿರೋಧಿಸಬೇಡ ಎನ್ನುವ ಏಸುಕ್ರಿಸ್ತನ ಸಂದೇಶವೇ ಜೀವನದ ತಿರುಳೆಂಬ ನಂಬಿಕೆಯನ್ನು ಘೋಷಿಸಿದ, ಅಹಿಂಸೆಯನ್ನು ಎತ್ತಿ ಹಿಡಿದ, ಪರಮಧರ್ಮ, ಪರಮಜ್ಞಾನ ಎರಡೂ ಒಂದೇ ಎಂಬುದು ಇವನ ನಂಬಿಕೆ. ಆತ್ಮಸಾಕ್ಷಿಯೇ ಜೀವನದ ಪರಮಮಾರ್ಗದರ್ಶಿ ಎಂದು ಸಾರಿದ. 1879ರ ಅನಂತರ ಸಾಹಿತ್ಯ ಮತ್ತು ಕಲೆಗಳ ವಿಷಯದಲ್ಲಿ ಇವನ ಭಾವನೆ ಸಂಪೂರ್ಣವಾಗಿ ಬದಲಾವಣೆ ಹೊಂದಿತು. 1896ರಲ್ಲಿ ಪ್ರಕಟವಾದ ವಾಟ್ ಈಸ್ ಆರ್ಟ್ ಎನ್ನುವ ಕೃತಿ ಬಹಳ ಮುಖ್ಯವಾದುದು. ಇದರಲ್ಲಿ ಷೇಕ್ಸ್‍ಪಿಯರ್, ವ್ಯಾಗ್ನರ್ ಇವರ ಕೃತಿಗಳನ್ನು ಕಲೆ ಎಂದು ಕರೆಯಲು ಸಾಧ್ಯವಿಲ್ಲವೆಂದು ವಾದಿಸಿ ಕೃತಿಕರ್ತನ ಆತ್ಮದ ಸ್ಥಿತಿಯಿಂದ ಓದುಗನ ಮೇಲೆ ಪರಿಣಾಮವನ್ನುಂಟುಮಾಡಿ, ಓದುಗ-ಕೃತಿಕರ್ತರ ಐಕ್ಯವನ್ನು ಸಾಧಿಸುವ ಕೃತಿ ಮಾತ್ರ ಕಲೆ ಎಂದೂ ಕಲೆಯಲ್ಲಿ ಉದ್ದೇಶಪೂರ್ವಕವಾಗಿ ಕೌಶಲ್ಯ ತಂತ್ರಗಳನ್ನು ತರವುದು ಅನಗತ್ಯ ಎಂದೂ ಸಾರಲಾಗಿದೆ. ಒಂದು ಗುಂಪು ಅಥವಾ ವೃತ್ತಕ್ಕೆ ಮಾತ್ರ ರುಚಿಸುವ ಕಲೆ ಕಲೆಯೇ ಅಲ್ಲ, ಕೃತಿ ಎಷ್ಟು ಸರಳವಾಗಿ, ನಿರಾಂಡಂಬರವಾಗಿ ಇದ್ದು, ವಿಸ್ತಾರವಾದ ವೃತ್ತದ ಮೇಲೆ ಪರಿಣಾಮವನ್ನುಂಟುಮಾಡುವಂತಿದ್ದರೆ ಅಷ್ಟೂ ಅಷ್ಟು ಉತ್ತಮ ಎಂಬುದು ಇಲ್ಲಿನ ನಿಲುವು. 1879ರ ಅನಂತರ ರಚಿತವಾದ ಕೃತಿಗಳು ಈ ಸಿದ್ಧಾಂತದಿಂದ ಪ್ರಭಾವಿತವಾದುವು. ನೈತಿಕವಾಗಿಯೂ ಕಲಾತ್ಮಕವಾಗಿಯೂ ತನ್ನ ಹಿಂದಿನ ಕೃತಿಗಳೆಲ್ಲ ಅತೃಪ್ತಿಕರವೆಂದು ಟಾಲ್ಸ್‍ಟಾಯ್ ತಿರಸ್ಕರಿಸಿದ. ಇದಾದ ಅನಂತರ ನೀತಿಬೋಧಕವಾದ ಹಲವಾರು ಸಣ್ಣ ಕಥೆಗಳನ್ನು ಬರೆದ. ಇಬ್ಬರು ಮುದುಕರಂಥ ಕಥೆಯಲ್ಲಿ ಉದ್ದೇಶಿತ ಕಲೆಗಾರಿಕೆಯನ್ನು ತಿರಸ್ಕರಿಸಿದ್ದರೂ ಟಾಲ್ಸ್‍ಟಾಯ್ ಪರಿಪೂರ್ಣ ಕಲೆಗಾರಿಕೆಯನ್ನು ಸಾಧಿಸಿದ. ಹಲವು ಕಥೆಗಳಲ್ಲಿ ನೈಜ್ಯತೆಯನ್ನು ಕಳೆದುಕೊಂಡ ನಾಗರಿಕ ಮನುಷ್ಯ ಸಾವಿನ ಅಥವಾ ಹುಟ್ಟಿನ ನೆರಳಿನಲ್ಲಿ ಸತ್ಯವನ್ನು ಅರಿಯುವ ಚಿತ್ರವಿದೆ. ಲೈಂಗಿಕ ಪ್ರವೃತ್ತಿಗಳನ್ನು ಕುರುತು ಬರೆದ ಕಥೆಗಳಲ್ಲಿ `ಪಿಶಾಚಿ'ಯ ಶಕ್ತಿ, ರಚನಾಕೌಶಲ್ಯಗಳು ಅಸಾಧಾರಣವಾದುವು. ರೆಸûರಕ್ಷನ್-ಪುನರುತ್ಥಾನ (1880) ದೀರ್ಘವಾದ, ಬೋಧನೆಯನ್ನೇ ಪ್ರಧಾನ ಉದ್ದೇಶವಾಗುಳ್ಳ ಕಾದಂಬರಿ. ಹಾಜಿ ಮುರಾದ್ ಎನ್ನುವ ಕಾದಂಬರಿ (1896-1904) ಟಾಲ್ಸ್‍ಟಾಯಿಯ ಸಾಹಿತ್ಯ ರಚನೆಯ ಎರಡನೆಯ ವಿಭಾಗದ ಅತ್ಯುತ್ತಮ ಕೃತಿಗಳಲ್ಲೊಂದು. ಕಾಕಸಸ್ ಬೆಟ್ಟಗಾಡಿನ ಪ್ರದೇಶದ ಜನರಿಗೆ ಸಂಬಂಧಿಸಿದ ಈ ಕಾದಂಬರಿಯಲ್ಲಿ ಹೊಸದೊಂದು ತಂತ್ರವನ್ನು-ದೃಶ್ಯಗಳನ್ನು ವೇಗವಾಗಿ ಬದಲಾಯಿಸುವ ವಿಧಾನವನ್ನು-ಯಶಸ್ವಿಯಾಗಿ ಬಳಸುತ್ತಾನೆ. ಈವ್ಯನ್ ಇಲ್ಯಿಚ್‍ನ ಮರಣ ಎನ್ನುವ ಕಥೆಯಲ್ಲಿ ಮತ್ತೊಂದು ಶಿಖರವನ್ನು ಮುಟ್ಟುತ್ತಾನೆ. ತನ್ನ ಇರವೆಲ್ಲ ನಿರರ್ಥಕ, ಸಾವಿನ ಸೀಮೆಯೊಳಕ್ಕೆ ತಾನು ಏನನ್ನೂ ಕೊಂಡೊಯ್ಯಲಾರೆ ಎಂಬ ಅರಿವಿನೊಡನೆ ಸಾಯುವ ಜೀವಿಯ ಈ ಚಿತ್ರದಲ್ಲಿ ಟಾಲ್ಸ್‍ಟಾಯ್ ಭಗವದ್ಗೀತೆ ಮತ್ತು ಧರ್ಮಗ್ರಂಥಗಳ ಕ್ಷೇತ್ರವನ್ನು ಪ್ರವೇಶಿಸುತ್ತಾನೆ ಎಂದು ವಿಮರ್ಶಕರು ನುಡಿದಿದ್ದಾರೆ.
ಟಾಲ್ಸ್‍ಟಾಯ್ ಹಲವು ನಾಟಕಗಳನ್ನು ಬರೆದಿದ್ದಾನೆ. ದಿ ಪವರ್ ಆಫ್ ಡಾರ್ಕ್‍ನೆಸ್ (1889) ಎಂಬುದು ರೈತಜೀವನಕ್ಕೆ ಸಂಬಂಧಪಟ್ಟ ಶಕ್ತಿಯುತ ನಾಟಕ. ದಿ ಫ್ರುಟ್ಸ್ ಆಫ್ ಎನ್‍ಲೈಟನ್‍ಮೆಂಟ್ (1891) ಎಂಬುದು ಸಮಾಜದ ರೀತಿನೀತಿಗಳ ಲಘುವಿಮರ್ಶೆ. ದಿ ಲಿವಿಂಗ್ ಕಾಪ್ರ್ಸ್ (1911) ಎಂಬುದು ಈತನ ಪರಿಣತ ವಯಸ್ಸಿನ ಪರಿಣತಕೃತಿ.
ಟಾಲ್ಸಾಟಾಯ್ ಉದ್ದೇಶಿತ ಕಲೆಗಾರಿಕೆಯನ್ನು ಒಪ್ಪದಿದ್ದರೂ ಈತನ ಕನೆಫೆಷನ್ಸ್ ಕೃತಿ ಅಸಾಮಾನ್ಯವಾದ, ಅದ್ಬುತವಾದ ಕಲೆಯನ್ನು ತೋರುತ್ತದೆ. ವಿಮರ್ಶಕರು ಇದನ್ನು ಬುಕ್ ಆಫ್ ಜೋಬ್‍ನ ಪಂಕ್ತಿಗೆ ಸೇರಿಸುತ್ತಾರೆ. ಜೀವಂತ, ತೇಜೋಮಯ ಕೃತಿ ಇದು. ಬಾಳು, ಸತ್ಯಗಳನ್ನು ಕುರಿತು ಮನುಷ್ಯನ ಚೇತನ ಸೃಷ್ಟಿಸಿರುವ ಅತ್ಯದ್ಭುತ ಕೃತಿಗಳಲ್ಲಿ ಇದೊಂದು. ಇದೂ ಕಲೆ ಎಂದರೇನು ಎನ್ನುವ ಲೇಖನವೂ ಟಾಲ್ಸ್‍ಟಾಯಿಯ ಅಸ್ಖಲಿತ ವಿಚಾರಸರಣಿ, ತೇಜೋಮಯವಾದ ಶೈಲಿ, ನಿರ್ಭಯ ನಿರರ್ಗಳ ವಾದವೈಖರಿಗಳಿಗೆ ನಿದರ್ಶನಗಳಾಗಿವೆ.
ವೃತ್ತಾಂತ ಹಾಗೂ ಘಟನೆಗಳಿಗೆ ಪ್ರಾಮುಖ್ಯ ನೀಡದ ಕಾದಂಬರಿ ವಿಧಾನವನ್ನು ಟಾಲ್ಸ್‍ಟಾಯ್ ಪರಿಪೂರ್ಣತೆಗೆ ಕೊಂಡೊಯ್ದ. ಇತರ ವಾಸ್ತವಿಕ ಕಾದಂಬರಿಕಾರರಂತೆ ಕಥೆಗೆ ಪ್ರಕೃತವಲ್ಲದ, ಆದರೆ ವ್ಯಕ್ತಿಗಳಿಗೆ ವೈಶಿಷ್ಟ್ಯವನ್ನು ನೀಡುವ ಅರ್ಥವತ್ತಾದ ವಿವರಗಳನ್ನು ಈತ ಬಳಸಿಕೊಳ್ಳುತ್ತಾನೆ. ಆದರೆ 1879ರ ಹಿಂದಿನ ಕೃತಿಗಳಲ್ಲಿ ಜಟಿಲತೆಯನ್ನು ಹಾದು ಮೂಲ ಸರಳ ಸಂಗತಿಯನ್ನು ಬೆಳಕಿಗೆ ತರುವ ಕ್ಷ-ಕಿರಣದಂಥ ವಿಶ್ಲೇಷಣದಿಂದ ಪಾತ್ರಗಳು ವಿಲಕ್ಷಣವಾಗದಂತೆ ಮಾಡುತ್ತಾನೆ. ತನ್ನ ಶೈಲಿ ನಿರಾಡಂಬರವಾಗಿಯೂ ಸ್ಪಷ್ಟವಾಗಿಯೂ ಇರುವಂತೆ ಎಚ್ಚರಿಕೆ ವಹಿಸುತ್ತಾನೆ. ಬರುಬರುತ್ತ ಶೈಲಿಯ ಸರಳತೆ, ಸಹಜತೆ, ಲಲಿತ ಗಮನಗಳು ಬೆಳೆದುವು. ಇವನ ಕೃತಿಗಳು ಒಂದು ಕಾಲದ ಸಮಾಜದ ಅಥವಾ ಪ್ರಾತಿನಿಧಿಕ ಪಾತ್ರಗಳ ವಿಭಜನೆಯನ್ನು ಮಾತ್ರ ನೀಡದೆ, ಕಾಲದೇಶಗಳ ಎಲ್ಲೆಯನ್ನು ಮೆಟ್ಟಿ ನಿಲ್ಲುವುದಕ್ಕೆ ಅಂತರಾತ್ಮದ ಅನುಭವಗಳಿಗೆ ಈತ ಕೊಟ್ಟ ಪ್ರಾಮುಖ್ಯ, ಅದರಲ್ಲಿಯೂ ಸೂಕ್ಷ್ಮವಾದ ಅನುಭವಗಳಲ್ಲಿ ತೋರುವ ಗಾಢವಾದ ಆಸಕ್ತಿಗಳೇ ಕಾರಣ. ಟಾಲ್ಸ್‍ಟಾಯ್ ಸಾಹಿತಿ ಮಾತ್ರವಲ್ಲ, ಮಾನವ ಕುಲದ ಆಧ್ಯಾತ್ಮಿಕ ದ್ರಷ್ಟಾರ. ಇವನ ಚಿತ್ರಪಟದ ವೈಶಾಲ್ಯ ಅತ್ಯದ್ಭುತ, ಕಲೆಗಾರಿಕೆ ಇವನ ಪ್ರತಿಭೆಯ ಒಂದು ಭಾಗ ಮಾತ್ರ. ಇತರ ವಾಸ್ತವಿಕ ಕಾದಂಬರಿಕಾರರಂತೆ ಕಥೆಗೆ ಪ್ರಕೃತವಲ್ಲದ ಆದರೆ ವ್ಯಕ್ತಿಗಳಿಗೆ ವೈಶಿಷ್ಟ್ಯವನ್ನು ನೀಡುವ ವಿವರಗಳನ್ನು ಬಳಸಿಕೊಳ್ಳುತ್ತಾನೆ. ಆದರೆ 1879ರ ಹಿಂದಿನ ಕೃತಿಗಳಲ್ಲಿ, ಜಟಿಲತೆಯನ್ನು ಹಾದು ಮೂಲ ಸರಳ ಸಂಗತಿಯನ್ನು ಬೆಳಕಿಗೆ ತರುವ ಕ್ಷ-ಕಿರಣದಂಥ ವಿಶ್ಲೇಷಣದಿಂದ, ಪಾತ್ರಗಳು ವಿಲಕ್ಷಣವಾಗದಂತೆ ಮಾಡಿದ್ದಾನೆ. ಮನಸ್ಸಿನ ಪದರಪದರಗಳನ್ನು ಬಿಡಿಸುತ್ತ ಹೋಗುವುದು ಇವನ ಅದ್ಭುತ ಸಾಧನೆ.
ಮಹಾತ್ಮ ಗಾಂಧೀಜೀ ಟಾಲ್ಸ್‍ಟಾಯ್‍ನ ಕೃತಿಗಳನ್ನೋದಿದ್ದರು. ಇಬ್ಬರಿಗೂ ಪತ್ರಮುಖೇನ ಸಂಬಂಧವಿತ್ತು. ವೈಯಕ್ತಿಕ ಜೀವನ ನಿರ್ವಹಣೆಯಲ್ಲಿ, ರಾಜಕೀಯ ವಿಚಾರಗಳಲ್ಲಿ ಧರ್ಮದ ಸ್ಥಾನವೇನೆಂಬುದನ್ನು ನಿರ್ಧರಿಸುವರಲ್ಲಿ ಗಾಂಧೀಜಿ ಟಾಲ್ಸ್‍ಟಾಯ್ ಮಹಾಶಯನ ಜೀವನ ಹಾಗೂ ನೈತಿಕ ಕೃತಿಗಳನ್ನು ಆದರ್ಶವಾಗಿಟ್ಟುಕೊಂಡಿದ್ದರು.
(ನೋಡಿ- ಗಾಂಧೀ,-ಮೋಹನ್‍ದಾಸ್-ಕರಮ್‍ಚಂದ್) ಇದರಲ್ಲಿನ ಗಾಂಧೀ ಆಶ್ರಮಗಳು ಎಂಬ ಲೇಖನ. (ಎಲ್.ಎಸ್.; ಕೆ.ಬಿ.ಆರ್.)