ಟಿಳಕ್, ಬಾಳ ಗಂಗಾಧರ 1856-1920. ಸ್ವರಾಜ್ಯ ತಮ್ಮ ಜನ್ಮಸಿದ್ದ ಹಕ್ಕು ಎಂದು 1916ರಷ್ಟು ಹಿಂದೆಯೇ ಸಾರಿದ ಭಾರತೀಯ ಜನನಾಯಕ. ಬದುಕಿದ್ದಾಗಲೇ ಲೋಕಮಾನ್ಯರೆಂದು ಜನತೆಯಿಂದ ಕರೆಸಿಕೊಂಡ ಉಜ್ವಲ ರಾಷ್ಟ್ರಪ್ರೇಮಿ, ತತ್ತ್ವಜ್ಞಾನಿ, ಪತ್ರಕರ್ತ, ಸಮಾಜಸುಧಾರಕ. ಅವರು ತಮ್ಮ ಜೀವನದಲ್ಲಿ ತಮ್ಮ ಮತ್ತು ತಮ್ಮನ್ನು ಅನುಸರಿಸುವವರ ಎದುರಿಗೆ ಇರಿಸಿದ್ದು ಒಂದೇ ನುಡಿ-ಯುಧ್ಯಸ್ವ. ಶ್ರೀಕೃಷ್ಣ ಅರ್ಜುನನಿಗಿತ್ತ ಉಪದೇಶ, ಅವರ ಪಾತ್ರ ಕರ್ಮಯೋಗಿಯದು. 1856ರ ಜುಲೈ 23ರಂದು ರತ್ನಾಗಿರಿಯಲ್ಲಿ ಜನಿಸಿದ ಬಾಳ ಗಂಗಾಧರ ಟಿಳಕರ ಮನೆತನದಲ್ಲಿ ಖ್ಯಾತನಾದವನು ಕೇಶವರಾವ್. ಪೇಷ್ಪೆ ದರಬಾರಿನಲ್ಲಿ ಮಾಮಲೇದಾರನಾಗಿದ್ದ ಈತ ಪ್ರಸಿದ್ಧ ವಿದ್ವಾಂಸ, ಪರಿಣಿತ ಕುದುರೆಸವಾರ, ಖಚಿತವಾದ ಗುರಿ ಹೊಡೆಯುವ ಶೂರ ಸಿಪಾಯಿ ಹಾಗು ಉತ್ತಮ ಈಜುಗಾರ. ಈತನೇ ಬಾಳ ಗಂಗಾಧರ ಟಿಳಕರ ಮುತ್ತಾತ. ಇವರು ಚಿತ್ಪಾವನ ಬ್ರಾಹ್ಮಣರು. ಚಿತ್ಪಾವನ ಸರಕಾರವೆಂದೇ ಖ್ಯಾತವಾದ ಪೇಷ್ವೇಗಳ ಪ್ರಭಾವ ಕುಗ್ಗಿದಮೇಲೆ ಈ ಮನೆತನವೂ ಸಾಮಾನ್ಯ ಸ್ಥಿತಿಗೆ ಬಂತು.
ಬಾಳ ಗಂಗಾಧರ ಟಿಳಕರ ತಂದೆ ಗಂಗಾಧರ ಪಂತ ; ತಾಯಿ ಪಾರ್ವತಿ. ಮೂರು ಹೆಣ್ಣು ಮಕ್ಕಳನ್ನು ಸತತವಾಗಿ ಹಡೆದ ಆ ತಾಯಿ ಗಂಡು ಮಗುವಿಗಾಗಿ ಸೂರ್ಯೊಪಾಸನೆ ಮಾಡಿದರು. ಗಂಡು ಮಗು ಜನಿಸಿದಾಗ ಸೂರ್ಯದೇವನ ಅನುಗ್ರಹವೆಂದೇ ಅವರು ಭಾವಿಸಿದರು. ಮನೆತನದಲ್ಲಿ ಪ್ರಬಲನಾಗಿದ್ದ ಕೇಶವರಾಯನ ಹೆಸರನ್ನೇ ಇಟ್ಟರಾದರೂ ಅದರ ಅಕ್ಕರೆಯ ಹೆಸರು ಬಲವಂತ. ಇದು ಬಾಳ ಎಂದಾಯಿತು.
ಗಂಗಾಧರ ಪಂತರು ನುರಿತ ಶಿಕ್ಷಕರೂ ವಿದ್ವಾಂಸರೂ ಆಗಿದ್ದರು. ಅವರ ಮಗನಿಗೆ ಸಂಸ್ಕøತ, ಮರಾಠಿ ಹಾಗೂ ಗಣಿತದಲ್ಲಿ ಒಳ್ಳೆಯ ಬುನಾದಿ ಹಾಕಿದರು. ಮೊದಲಿಂದಲೂ ಸೂಕ್ಷ್ಮ ಪ್ರಕೃತಿಯವರಾಗಿದ್ದ ತಾಯಿ, ಬಾಳ ಗಂಗಾಧರರು ಇನ್ನೂ ಹತ್ತು ವರ್ಷದವರಿದ್ದಾಗಲೇ ತೀರಿಕೊಂಡರು.
1866ರಲ್ಲಿ ಟಿಳಕರು ಪುಣೆಯ ನಗರಶಾಲೆ ಸೇರಿದರು. ಟಿಳಕರ ಅಸಾಧಾರಣ ಮೇಧಾಶಕ್ತಿ ಸಂಪ್ರದಾಯಪ್ರಿಯ ಶಿಕ್ಷಕರ ಅತೃಪ್ತಿಗೆ ಕಾರಣವಾಯಿತು. ಸಂಸ್ಕøತ ಹಾಗೂ ಗಣಿತದಲ್ಲಿ ಅಭಿರುಚಿಯನ್ನು ಅವರು ತಂದೆಯಿಂದಲೇ ಪಡೆದಿದ್ದರು. ಗಣಿತದ ಲೆಕ್ಕವನ್ನು ಬಾಯಲ್ಲೇ ಮಾಡಿ ಮುಗಿಸಿ ಲೇಖನ ಪುಸ್ತಕದಲ್ಲಿ ಅದರ ಉತ್ತರವನ್ನು ಮಾತ್ರ ಬರೆದಿಡುತ್ತಿದ್ದ ಟಿಳಕರನ್ನು ಶಿಕ್ಷಕರು, ಇದರ ಸಾಧನೆ ಎಲ್ಲಿ ?- ಎಂದು ಕೇಳಿದಾಗ, ಟಿಳಕರು ಇಲ್ಲಿ, ಎಂದು ತಮ್ಮ ತಲೆಯತ್ತ ಬೆರಳು ತೋರಿಸಿದರೆಂದು ಹೇಳಲಾಗಿದೆ. ಸ್ವಭಾವತಃ ಧೀರಸ್ವವೃತ್ತಿಯ ಟಿಳಕರು ಇಂಥ ಪ್ರಸಂಗಗಳಿಂದ ಶಿಕ್ಷಕರ ವಿರೋಧವನ್ನು ಕಟ್ಟಿಕೊಂಡರು. ತಾವು ಸರಿಯಾದ ಮಾರ್ಗದಲ್ಲಿದ್ದುದನ್ನು ಮನಗಂಡಾಗ ಮುಖ್ಯಾಧ್ಯಾಪಕರ ತೀರ್ಮಾನವನ್ನೂ ಪ್ರತಿಭಟಿಸಿ ಶಾಲೆ ತೊರೆಯುವವರೆಗೂ ಹೋಗಿದ್ದರು. ಟಿಳಕರು ಇನ್ನೂ ಶಾಲೆಯಲ್ಲಿದ್ದಾಗಲೇ, ಅವರ 15ನೆಯ ವಯಸ್ಸಿನಲ್ಲಿ, ಅವರ ಜಿಲ್ಲೆಯಲ್ಲೇ ಇರುವ ಲಾಡ ಗ್ರಾಮದ ಬಲ್ಲಾಳ ಬಾಳರ ಮಗಳು ತಾಪೀಬಾಯಿಯೊಂದಿಗೆ ಮದುವೆಯಾಯಿತು. ಆಕೆಗೂ ತಾಯಿಯಿರಲಿಲ್ಲ. ಮಾವನಿಂದ ಟಿಳಕರು ಬಯಸಿದ್ದು ಬೆಲೆಬಾಳುವ ಉಡುಗೊರೆಯನ್ನಲ್ಲ, ಓದಲು ಪುಸ್ತಕಗಳನ್ನು. ಮರುವರ್ಷ ಟಿಳಕರ ತಂದೆ ಅಕಾಲಮರಣಕ್ಕೆ ತುತ್ತಾದರು. ಆದರೆ ಮಗ ವಿಧ್ಯಾಭ್ಯಾಸ ಮುಂದುವರೆಸಲು ಸಾಕಷ್ಟು ಹಣವನ್ನು ತಮ್ಮ ತಮ್ಮ ಗೋವಿಂದರಾಯರಿಗೆ ಮೃತ್ಯುಪತ್ರದ ಮೂಲಕ ಒಪ್ಪಿಸಿದರು.
ಟಿಳಕರು ಅಧ್ಯಯನವನ್ನು ಮುಂದುವರಿಸಿ ಪುಣೆಯ ಡೆಕ್ಕನ್ ಕಾಲೇಜು ಸೇರಿದರು. ಅಲ್ಲಿ ಪಠ್ಯಪುಸ್ತಕಗಳಿಗಿಂತ ಹೆಚ್ಚಾಗಿ ಅಂಗಸಾಧನೆ ಮತ್ತು ವ್ಯಾಯಾಮಗಳಲ್ಲಿ ಅವರು ಹೆಚ್ಚು ಆಸಕ್ತಿ ವಹಿಸಿದ್ದರು. ಪ್ರವಚನದಲ್ಲಿ ತಥ್ಯವಿರದಿದ್ದರೆ ಕೂಡಲೇ ಟಿಳಕರು ತರಗತಿಯ ಕೋಣೆಯಿಂದ ಹೊರಬರುತ್ತದ್ದರು. ಇದನ್ನು ಗಮನಿಸಿದ ಪ್ರಿನ್ಸಿಪಾಲರು ಕೇಳಿದಾಗ ತಾವು ಆ ವರ್ಷ ಪರೀಕ್ಷೆಗೆ ಕೂಡುವುದಿಲ್ಲವೆಂದು ನೇರ ಉತ್ತರ ನೀಡುತ್ತಿದ್ದರು. ಇಂಥ ಉತ್ತರಗಳಿಗಾಗಿ ಕಾಲೇಜಿನಲ್ಲಿ ಅವರನ್ನು ಶ್ರೀಮಾನ್ ಖಂಡಿತವಾದಿ (ಮಿಸ್ಟರ್ ಬ್ಲಂಟ್) ಎಂದು ಕರೆಯುತ್ತಿದ್ದರು. ತೀಕ್ಷ್ಣಮತಿಯ ಟಿಳಕರು ದೀರ್ಘಕಾಲ ಓದುತ್ತಿರಲಿಲ್ಲ. ಸ್ವಲ್ಪಕಾಲ ಓದಿದರೂ ವಿಷಯವನ್ನು ಸಮಗ್ರವಾಗಿ ಗ್ರಹಿಸುತ್ತಿದ್ದರು. ಪಠ್ಯೇತರ ವಿಷಯಗಳ ಅಧ್ಯಯನದಲ್ಲಿ ಟಿಳಕರಿಗೆ ಬಹಳ ಉತ್ಸಾಹವಿತ್ತು. ಒಮ್ಮೆ ನಡೆದ ಸಂಸ್ಕøತ ಕವಿತಾ ಸ್ಪರ್ಧೆಯಲ್ಲಿ ಟಿಳಕರ ಕವಿತೆಗಳು ಉತ್ತಮವೆಂದು ಪ್ರಶಂಸೆ ಗಳಿಸಿದುವು. ಎಲ್ಲ ಹಿಂದೂ ಧರ್ಮಶಾಸ್ತ್ರಗ್ರಂಥಗಳನ್ನೂ ಸರ್ಕಾರ ಆ ವರೆಗೆ ಜಾರಿಗೆ ತಂದಿದ್ದ ಕಾನೂನುಗಳನ್ನೂ ಭಾರತೀಯ ಸಮಾಜ ಸಂಸ್ಕøತಿಗಳನ್ನು ತಿಳಿಸುವ ಗ್ರಂಥರಾಶಿಯನ್ನೂ ಆ ದಿನಗಳಲ್ಲಿ ಟಿಳಕರು ತಿರುವಿ ಹಾಕಿದರು. ಈ ಓದೇ ಅವರ ಮುಂದಿನ ಸಾರ್ವಜನಿಕ ಜೀವನಕ್ಕೆ ಅಸ್ತಿಭಾರವಾಯಿತು. 1876ರಲ್ಲಿ ಗಣಿತದಲ್ಲಿ ಪದವಿ ಪಡೆದ ಟಿಳಕರು ಎಂ.ಎ.ಗೆ ಸೇರಿ, ನ್ಯಾಯಶಾಸ್ತ್ರದಲ್ಲಿ ತೊಡಕು ಅದನ್ನು ಬಿಟ್ಟು 1879ರಲ್ಲಿ ಎಲ್‍ಎಲ್.ಬಿ ಪಡೆದರು. ಐದಾರು ವರ್ಷಗಳಲ್ಲಿ ಅನಂತರ ಮತ್ತೆ ಎಂ.ಎ.ಗೆ ಪ್ರಯತ್ನಿಸಿದರಾದರೂ ಅದರಲ್ಲಿ ಜಯ ಗಳಿಸಲಿಲ್ಲ.
ತಾಯಿತಂದೆಯರನ್ನು ಕಳೆದುಕೊಂಡಿದ್ದ ಟಿಳಕರಿಗೆ ಮನೆಯಲ್ಲಿ ಪ್ರಾಯಶಃ ಸಾಮರಸ್ಯದ ವಾತಾವರಣ ಇರಲಿಲ್ಲ. ಆದ್ದರಿಂದ ಪುಣೆ ನಗರ ಅವರ ಕಾರ್ಯ ಕ್ಷೇತ್ರವಾಯಿತು. ಪಿತ್ರಾರ್ಜಿತ ಆಸ್ತಿಯ ವಿಚಾರವಾಗಿ ವಿವಾದ ಪ್ರಾರಂಭವಾಗಿ ಅನೇಕ ವರ್ಷಗಳವರೆಗೆ ನಡೆದು 1894ರಲ್ಲಿ ಮಧ್ಯಸ್ತಿಕೆಯಿಂದ ವಿಭಾಗವಾಯಿತು. ಅವರು ಮೊದಲೇ ತೀರ್ಮಾನಿಸಿಕೊಂಡಿದ್ದಂತೆ ತಮ್ಮ ಪಾಲಿನ ಎಲ್ಲ ಆಸ್ತಿಯನ್ನೂ ತಮ್ಮ ಮನೆದೇವರಾದ ಲಕ್ಷ್ಮೀಕೇಶವ ದೇವರಿಗೆ ದತ್ತಿಯಾಗಿ ಬಿಟ್ಟರು. ಟಿಳಕರನ್ನು ಚೆನ್ನಾಗಿ ನೋಡಿಕೊಂಡಿದ್ದ ಚಿಕ್ಕಪ್ಪ ಗೋವಿಂದರಾಯರ ಸಂಸಾರಕ್ಕೂ ಅವರು ತಮ್ಮ ಆದಾಯದಿಂದ ನೆರವು ನೀಡುತ್ತಿದ್ದರು. ತಮ್ಮ ರಾಜಕೀಯ ಚಟುವಟಿಕೆಗಳಿಂದಾಗಿ 1897ರಲ್ಲಿ ಟಿಳಕರಿಗೆ 18 ತಿಂಗಳುಗಳ ಕಾರಾಗೃಹ ಶಿಕ್ಷೆಯಾದಾಗ ಗೋವಿಂದರಾಯರು ಇನ್ನೂ ಬದುಕಿದ್ದರು. ತಮ್ಮ ಮಗನ ಬಗ್ಗೆ ದೇಶವೇ ಮೆಚ್ಚಿಕೆಯನ್ನೂ ಕಾಳಜಿಯನ್ನೂ ವ್ಯಕ್ತಪಡಿಸಿದ್ದನ್ನು ನೋಡಿ ಅವರ ಹೃದಯ ತುಂಬಿಬಂದಿತ್ತು.
ಟಿಳಕರು ಸಾರ್ವಜನಿಕ ಜೀವನವನ್ನು ಪ್ರವೇಶೀಸಿದ್ದು (1880) ಶಿಕ್ಷಣ ಕ್ಷೇತ್ರದ ಮೂಲಕ. ಮಿಷನರಿ ಶಾಲೆಗಳ ಮಾದರಿಯಲ್ಲಿ ರಾಷ್ಟ್ರೀಯ ಶಾಲೆಗಳನ್ನು ನಡೆಸಬೇಕೆಂಬ ವಿಚಾರ ಅವರಿಗೆ ಕಾಲೇಜಿನಲ್ಲಿರುವಾಗಲೇ ಬಂದಿತ್ತು. ಅವರು ತಮ್ಮ ಕೆಲವರು ಗೆಳೆಯರೊಂದಿಗೆ ಇದನ್ನು ಕುರಿತು ಸಮಾಲೋಚನೆ ನಡೆಸಿದರು. ತ್ಯಾಗವೇ ಇದಕ್ಕೆ ಮುಖ್ಯವಾದ ಬಂಡವಾಳವಾಗಿರತಕ್ಕದೆಂಬುದು ಮನವರಿಕೆಯಾಗಿತ್ತು. ಟಿಳಕರೂ ಅಗರ್‍ಕರ್ ಎಂಬುವರು ನ್ಯೂ ಇಂಗ್ಲೀಷ್ ಸ್ಕೂಲ್ ಎಂಬ ಹೆಸರಿನಲ್ಲಿ ಇದನ್ನು ಪ್ರಾರಂಭಿಸಿ, ಯಾವ ವೇತನವೂ ಇಲ್ಲದೆ ದುಡಿಯ ತೊಡಗಿದರು. ಅನಂತರ ಅಷ್ಟೆ ಮೊದಲಾದ ಕೆಲವು ತರುಣರು ಇವರೊಂದಿಗೆ ಸೇರಿದರು. ಈ ಶಾಲೆಯ ಶಿಕ್ಷಣಕ್ರಮ ಮತ್ತು ಶಿಸ್ತು ಮನೆಮಾತಾದವು. ಸರ್ಕಾರವೂ ಇದಕ್ಕೆ ಮನ್ನಣೆಯಿತ್ತು ಇವರ ಪ್ರಯತ್ನವನ್ನು ಮೆಚ್ಚಿತು. ಇದರ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವಿಶಿಷ್ಟ ವೇತನಗಳನ್ನು ಗಳಿಸತೊಡಗಿದರು. ಶೈಕ್ಷಣಿಕ ಕ್ಷೇತ್ರವನ್ನು ವ್ಯಾಪಿಸಿದ್ದ ಕ್ರೈಸ್ತಪಾದ್ರಿಗಳಿಗೆ ಇದರಿಂದ ಕಳವಳವಾಯಿತು. ಕೆಲವೇ ವರ್ಷಗಳಲ್ಲಿ ಈ ಸಂಸ್ಥೆ ಬೆಳೆದು ಡೆಕ್ಕನ್ ಎಜುಕೇಷನ್ ಸೊಸೈಟಿ ಎಂಬ ಸಂಸ್ಥೆಯ ರೂಪ ತಾಳಿತು. ಇದರ ಆಶ್ರಯದಲ್ಲಿ ಫಗ್ರ್ಯುಸನ್ ಕಾಲೇಜು ಸ್ಥಾಪಿತವಾಯಿತು.
ಟಿಳಕರು ಪತ್ರಿಕೋದ್ಯಮದಲ್ಲೂ ತೊಡಗಿದರು. ಆಗ ಸಮರ್ಥ ಸಂಪಾದಕರೆಂದು ಹೆಸರಾಗಿದ್ದ ನಾಮಜೋಷಿ ಹಾಗೂ ಚಿಪಳೂಣಕರರ ಸೂಚನೆಯ ಪ್ರಕಾರ ನಾಮಜೋಷಿಯವರ ಮುದ್ರಣಾಲಯವನ್ನು ಖರೀದಿ ಮಾಡಿ, ಮರಾಠಿಯಲ್ಲಿ ಕೇಸರೀ ಎಂಬ ಪತ್ರಿಕೆಯನ್ನೂ ಇಂಗ್ಲಿಷಿನಲ್ಲಿ ಮರಾಠಾ ಎಂಬ ಪತ್ರಿಕೆಯನ್ನೂ ಹೊರಡಿಸಬೇಕೆಂದು ತಿರ್ಮಾನಿಸಲಾಯಿತು. ಟಿಳಕರು ಸ್ವತಃ ಅಚ್ಚಿನ ಮೊಳೆಗಳ ಡಬ್ಬಿಗಳನ್ನು ಹೊತ್ತು ತಂದು ಶಾಲೆಯಲ್ಲೇ ಕೆಲಸ ಪ್ರಾರಂಭಿಸಿದರು. ಅಗರ್‍ಕರ್ ಹಾಗೂ ಟಿಳಕರು ಈ ಎರಡು ಹೊಸ ಪತ್ರಿಕೆಗಳ ಪ್ರಕಟಣೆಯನ್ನು ನೋಡಿಕೊಳ್ಳತೊಡಗಿದರು. ಈ ಪತ್ರಿಕೆಗಳಲ್ಲಿ ಅಚ್ಚಾಗುತ್ತಿದ್ದ ವಿಚಾರಗಳು ರಾಜಕೀಯ ಆಸಕ್ತಿ ಕೆರಳಿಸತೊಡಗಿದವು. ಗಾಯಕ್‍ವಾಡ್ ರಾಜರಿಗೆ ಸಂಬಂಧಿಸಿದ 400 ಹಳೆಯ ಬಂದೂಕುಗಳನ್ನು ಬ್ರಟಿಷ್ ಸರ್ಕಾರದವರು ನಾಶಪಡಿಸಿದ ಸುದ್ದಿಯ ಬಗ್ಗೆ ಕಟುವಾದ ಟೀಕೆ ಬಂದಿತ್ತು. ಆಫ್‍ಘನ್ ಯುದ್ದದ ಖರ್ಚನ್ನು ಬ್ರಿಟಿಷ್ ಸರ್ಕಾರ ಭಾರತದ ಮೇಲೆ ಹೇರಿದ್ದನ್ನು ಮರಾಠಾ ಪತ್ರಿಕೆಯಲ್ಲಿ ಟೀಕಿಸಲಾಗಿತ್ತು. ಆದರೆ ಬರಬರುತ್ತ ಅಗರ್‍ಕರರಿಗೂ ಟಿಳಕರಿಗೂ ಸಮಾಜ ಸುಧಾರಣೆಯ ಬಗ್ಗೆ ಭಿನ್ನಾಭಿಪ್ರಾಯಗಳು ಬೆಳೆದವು. ಟಿಳಕರೇ ಕೇಸರಿಯನ್ನು ಸಾಲಸಹಿತ ವಹಿಸಿಕೊಂಡು ನಡೆಸಬೇಕೆಂದೂ ಅಗರ್‍ಕರರು ಶಿಕ್ಷಣ ಸಂಸ್ಥೆಗಳನ್ನು ನೋಡಿಕೊಳ್ಳಬೇಕೆಂದು ವ್ಯವಸ್ಥೆಯಾಯಿತು.
ಟಿಳಕರು ಕೇಸರೀ ಪತ್ರಿಕೆಯನ್ನು ಮೂವತ್ತು ವರ್ಷ ನಡೆಸಿದ ನಿರ್ಭೀತ ಸಂಪಾದಕರೆಂದು ಹೆಸರು ಗಳಿಸಿದರು. ಪತ್ರಿಕೋದ್ಯಮದಲ್ಲಿ ಕೇಸರೀ ಒಂದು ಮೈಲಿಗಲ್ಲೆಂದು ಪ್ರಸಿದ್ಧವಾಯಿತು. ತಾವು ಪತ್ರಿಕೆಗಳನ್ನು ಪ್ರಕಟಿಸುವುದು ಸರ್ಕಾರದ ಸಂತೋಷಕ್ಕಲ್ಲವೆಂದು 1904ರಲ್ಲಿ ಕೇಸರಿಯಲ್ಲಿ ತಮ್ಮ ಧೋರಣೆಯನ್ನು ಸ್ಪಷ್ಟಪಡಿಸಿದರು. ಈ ಪತ್ರಿಕೆ ಟಿಳಕರ ವಿಚಾರಗಳ ಮುಖಪಾತ್ರವಾಯಿತು. ಅವರು ಪೂರ್ಣಾವಧಿಯ ಪತ್ರಕರ್ತರಾಗಿ, ಪತ್ರಿಕೆಯೇ ಸರ್ವಸ್ವವೆಂದು ದುಡಿದರು. ಪ್ಲೇಗಿನಿಂದ ನರಳಿ ತೀರಿಕೊಂಡ ಮಗನನ್ನು ಎತ್ತಿಕೊಂಡು ಹೋದದು ಕೂಡ, ಸಮಯಕ್ಕೆ ಸರಿಯಾಗಿ ಸಂಪಾದಕೀಯವನ್ನು ಬರೆದು ಮುಗಿಸಲು ಕುಳಿತಿದ್ದ ಟಿಳಕರಿಗೆ ಗೊತ್ತಾಗಿರಲಿಲ್ಲ. ಟಿಳಕರ ಟೀಕೆಗಳು ಬಹಳ ತೀಕ್ಷ್ಣವಾಗಿರುತ್ತಿದ್ದುವು. ಅಧಿಕಾರಿಗಳು ಬೆಚ್ಚಿಬೀಳುತ್ತಿದ್ದರು. ಸರ್ಕಾರ ರೊಚ್ಚಿಗೇಳುತ್ತಿತ್ತು. ಅನೇಕ ಸಲ ಅಚ್ಚು ಕೂಟದವರು ಹೆದರಿ ಅಚ್ಚು ಮಾಡಲು ಹಿಂಜರಿಯುತ್ತಿದ್ದರು. ಆದರೂ ಟಿಳಕರು ಎದೆಗುಂದುತ್ತಿರಲಿಲ್ಲ. ಅವರ ಬರಹಗಳಿಗಾಗಿ 1897ರಲ್ಲಿ ರಾಜದ್ರೋಹದ ಆಪಾದನೆಯ ಮೇಲೆ ಟಿಳಕರಿಗೆ ಒಂದೂವರೆ ವರ್ಷಗಳ ಕಾರಾಗೃಹ ಶಿಕ್ಷೆ ಆಯಿತು. ಕೇಸರೀ ಮತ್ತು ಮರಾಠಾ ಪತ್ರಿಕೆಗಳು ನಿಲ್ಲುವುದೆಂದು ಜನ ಭಾವಿಸಿದರು. ನಿಯಮಿತ ಸಮಯಕ್ಕೆ ಸರಿಯಾಗಿ ಕೇಸರಿ ಪ್ರಕಟವಾಯಿತು. ಮರಾಠಾ ಕೇವಲ ಒಂದು ದಿನ ತಡವಾಗಿ ಪ್ರಕಟವಾಯಿತು. ಟಿಳಕರ ಸುತ್ತಮುತ್ತ ಇದ್ದವರೂ ಕರ್ತವ್ಯದಲ್ಲಿ ಪಳಗಿದ್ದರು.
ಮರಾಠೀ ಭಾಷೆಗೆ ಕೇಸರೀ ಪತ್ರಿಕೆಯ ಕೊಡುಗೆ ಅಪಾರವಾದುದು. ಟಿಳಕರು ಜನಸಾಮಾನ್ಯರಿಗೆ ತಿಳಿಯುವಂಥ ಸರಳ ಭಾಷೆಯನ್ನೇ ಈ ಪತ್ರಿಕೆಯ ಮೂಲಕ ರೂಪಿಸಿದರು. ಆ ಕಾಲದಲ್ಲಿ ಮರಾಠಿಯಲ್ಲಿ ಕೇಸರಿಯೇ ಅತ್ಯಧಿಕ ಪ್ರಸಾರವುಳ್ಳ ಪತ್ರಿಕೆಯಾಗಿತ್ತು. ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ, ಸ್ವಾಭಿಮಾನ, ಸ್ವದೇಶಾಭಿಮಾನಗಳನ್ನು ಪ್ರಚೋದಿಸಿದ ಪತ್ರಿಕೆಯೆಂದರೆ ಕೇಸರಿಯೇ.
ಟಿಳಕರು ಅಕ್ಷರಶಃ ಕರ್ಮಯೋಗಿ. ಅವರಿಗೆ ಯಾವ ಕೆಲಸವೂ ಕೀಳಾಗಿರಲಿಲ್ಲ. ಸಂಪಾದಕೀಯ ಬರೆಯುವುದರಿಂದಾರಂಭಿಸಿ ಮೊಳೆ ಜೋಡಿಸುವವರೆಗೆ ಎಲ್ಲ ಕೆಲಸವನ್ನೂ ಕರಗತ ಮಾಡಿಕೊಂಡಿದ್ದರು. ವೈಚಾರಿಕ ರಾಜಕೀಯ ಆಂದೋಲನಕ್ಕಾಗಿಯೇ ಜನ್ಮತಾಳಿದ ಕೇಸರೀ ಪತ್ರಿಕೆ ಟಿಳಕರ ನೇತೃತ್ವದಲ್ಲಿ ಆ ಆಂದೋಲನವನ್ನು ನಡೆಸಿತು. ಇಂದಿಗೂ ಈ ಪತ್ರಿಕೆಯ ಜನಪ್ರಿಯತೆ ಕಡಿಮೆಯಾಗಿಲ್ಲ.
ಟಿಳಕರ ಚಟುವಟಿಕೆ ಕೇವಲ ಲೇಖನ ಬರೆಯುವುದಕ್ಕೆ ಸೀಮಿತವಾಗಿರಲಿಲ್ಲ. ಜನಜಾಗೃತಿ ಅವರ ಮುಖ್ಯಧ್ಯೇಯವಾಗಿತ್ತು. ಹಿಂದೂಜನರಲ್ಲಿಯ ವರ್ಣಭೇದ, ವರ್ಗಭೇದಗಳು ಅವರ ಅನೈಕ್ಯಕ್ಕೆ ಮೂಲವೆಂದು ತಿಳಿದಿದ್ದ ಟಿಳಕರು ಅವರನ್ನೆಲ್ಲ ಒಂದುಗೂಡಿಸಲು ಸಾರ್ವಜನಿಕ ಗಣಪತಿ ಉತ್ಸವದ ಯೋಜನೆ ರೂಪಿಸಿದರು. ಇದರಿಂದ ಈ ಉತ್ಸವದ ಸ್ವರೂಪವೇ ಬದಲಾಗಿ ಇದಕ್ಕೆ ರಾಷ್ಟ್ರೀಯ ಸ್ವರೂಪ ಬಂತು. ಶಿವಾಜಿಯ ಜನ್ಮದಿನೋತ್ಸವವೂ ಸಾರ್ವಜನಿಕ ಉತ್ಸವವಾಗಿ ಮಹಾರಾಷ್ಟ್ರದಾದ್ಯಂತ ಸಂಘಟಿತವಾಯಿತು. ಗಣಪತಿ ಉತ್ಸವ ಮಹಾರಾಷ್ಟ್ರದ ಎಲ್ಲೆಯನ್ನು ದಾಟಿ ಇತರ ಪ್ರಾಂತ್ಯಗಳಲ್ಲೂ ರಾಷ್ಟ್ರೀಯ ಹಬ್ಬವಾಗಿ ಪರಿಣಮಿಸಿ ಜನಜಾಗೃತಿಯ ಸಾಧನವಾಯಿತು; ರಾಜಕೀಯ, ಸಾಮಾಜಿಕ, ತಾತ್ತ್ವಿಕ ವಿಚಾರಗಳ ಪ್ರಚಾರದ ವೇದಿಕೆಯಾಯಿತು. ಅದರೊಂದಿಗೇ ಟಿಳಕರು ಪ್ರಭಾವಶಾಲಿ ಮುಂದಾಳಾಗಿ ಬೆಳೆಯತೊಡಗಿದರು.
1896ರಲ್ಲಿ ಮಹಾರಾಷ್ಟ್ರದಲ್ಲೆಲ್ಲ ಬರ ಬಂದಾಗಲೂ ಮರುವರ್ಷ ಗಂಟುಬೇನೆ ವ್ಯಾಪಿಸಿದಾಗಲೂ ಟಿಳಕರು ಹಳ್ಳಿಗಳಲ್ಲಿ ರೈತರೊಂದಿಗೆ ಕೆಲಸ ಮಾಡಿ, ಆಸ್ಪತ್ರೆಗಳನ್ನು ತೆರೆಯಿಸಿ ಕ್ರಿಯಾಶೀಲತೆಯನ್ನು ತೋರಿಸಿದರು. ಇಂಥ ಸಂಕಟ ಸಮಯದಲ್ಲಿ ಸಹ ಸರ್ಕಾರೀ ಅಧಿಕಾರಿಗಳು ತೋರಿದ ಅಶ್ರದ್ಧೆಯನ್ನು ಕೇಸರೀ ಬಯಲಿಗೆಳೆಯಿತು. ಜನ ಪಿಡುಗಿನಿಂದ ಸಾಯುತ್ತಿದ್ದಾಗ ವಿಕ್ಟೋರಿಯ ರಾಣಿಯ ವಜ್ರಮಹೋತ್ಸವವನ್ನು ಸರ್ಕಾರ ಏರ್ಪಡಿಸಿದ್ದನ್ನು ಪತ್ರಿಕೆ ಟೀಕಿಸಿತು. ರೊಚ್ಚಿಗೆದ್ದ ತರುಣನೊಬ್ಬ ಪ್ಲೇಗಿನ ವಿಶೇಷಾಧಿಕಾರಿ ರೈಂಡನಿಗೆ ಗುಂಡಿಕ್ಕಿದ. ಈ ಘಟನೆಯಿಂದ ಪುಣೆಯಲ್ಲಿ ಪೋಲಿಸ್ ಅತ್ಯಾಚಾರ ಇನ್ನಷ್ಟು ಹೆಚ್ಚಾಯಿತು. ಕೇಸರಿ ಇದನ್ನೆಲ್ಲ ಕಟುವಾಗಿ ಖಂಡಿಸಿತು. ಆಗ ಅಧಿಕಾರಿಗಳು ರಾಜದ್ರೋಹದ ಆರೋಪದ ಮೇಲೆ ಟಿಳಕರನ್ನು ಬಂಧಿಸಿ ಸೆಷನ್ಸ್ ಜಡ್ಜರಾದ ಬದರುದ್ದೀನ್ ತಯ್ಯಬ್ಜಿಯವರ ನ್ಯಾಯಾಲಯಕ್ಕೆ ಒಯ್ದರು. ಐವತ್ತು ಸಾವಿರ ರೂಪಾಯಿಗಳ ಜಾಮೀನು ಕೇಳಿದಾಗ ದ್ವಾರಕಾದಾಸ್ ಧರ್ಮಸಿ ಮುಂದೆ ಬಂದು ಟಿಳಕರನ್ನು ಬಿಡಿಸಿದರು. ಟಿಳಕರ ಈ ಮೊಕದ್ದಮೆಗೆ ಆಗಲೇ ಸಾರ್ವಜನಿಕ ಸ್ವರೂಪ ಬಂದಿತ್ತು. ವಿಚಾರಣೆಯ ಆನಂತರ ಟಿಳಕರಿಗೆ ಒಂದೂವರೆ ವರ್ಷ ಶಿಕ್ಷೆಯಾಗಿ ಸೆರೆಮನೆ ಸೇರಿದರು. ಆಗಿನ ಟಿಲಕರು ಲೋಕಮಾನ್ಯರಾದರು. ಭಾರತದಲ್ಲೆಲ್ಲಾ ಅವರ ಕೀರ್ತಿ ಹಬ್ಬಿತು. ಆಗಿನ ಜೈಲುಗಳು ತುಂಬ ಅಸಮರ್ಪಕವಾಗಿದ್ದುವು. ಆದರೆ ಟಿಳಕರು ಜೈಲುವಾಸಕಾಲದಲ್ಲಿ ಬರೆದ ವೇದಕಾಲ ನಿರ್ಣಯ ಮುಂತಾದ ವಿದ್ವತ್ಪೂರ್ಣ ಲೇಖನಗಳಿಂದ ಅವರ ವ್ಯಕ್ತಿತ್ವ ಯುರೋಪಿನ ಅನೇಕ ವಿದ್ವಾಂಸರ ಮೇಲೆ ಪ್ರಭಾವ ಬೀರಿತು. ಪ್ರೊಫೆಸರ್ ಮ್ಯಾಕ್ಸ್‍ಮ್ಯುಲರ್ ಮೊದಲಾದವರು ಬ್ರಿಟಿಷ್ ಸರ್ಕಾರದ ಮೇಲೆ ಒತ್ತಾಯ ತಂದು ಟಿಳಕರನ್ನು ಸೌಜನ್ಯದಿಂದ ನಡೆಸಿಕೊಳ್ಳುವಂತೆ ಮಾಡಿದರು. ರಾಜದ್ರೋಹ ಮಾಡುವುದಿಲ್ಲವೆಂಬ ಕರಾರಿನ ಮೇಲೆ ಟಿಳಕರನ್ನು ಬಿಡಲೂ ಸರ್ಕಾರ ಆಲೋಚಿಸಿತು. ಆದರೆ ಟಿಳಕರು ಇಂಥ ಕರಾರಿಗೆ ಒಪ್ಪಲಿಲ್ಲ. ಟಿಳಕರು ಒಂದು ವರ್ಷ ಶಿಕ್ಷೆ ಅನುಭವಿಸಿದ ಅನಂತರ ಅವರ ಬಿಡುಗಡೆಯಾಯಿತು. ಟಿಳಕರ ಬಿಡುಗಡೆ ಎಲ್ಲರಿಗೂ ಸಂತೋಷ ತಂದಿತು. ಕಾರಾಗೃಹವಾಸದಿಂದ ಅವರ ಆರೋಗ್ಯ ಕೆಟ್ಟಿತ್ತು. ಆರೋಗ್ಯ ಸುಧಾರಣೆಗಾಗಿ ಸಿಂಹಗಢದಲ್ಲಿ ವಿಶ್ರಾಂತಿ ಪಡೆದರು.
ಆ ವರ್ಷದ ಡಿಸೆಂಬರ್‍ನಲ್ಲಿ ನಡೆದ ಮದ್ರಾಸ್ ಕಾಂಗ್ರೆಸ್ ಅಧಿವೇಶನದಲ್ಲಿ ಸಾಮಾನ್ಯ ಸದಸ್ಯರಾಗಿ ಟಿಳಕರು ಭಾಗವಹಿಸಿದರು. ಡಾಕ್ಟರ ಸಲಹೆಯಂತೆ ಭಾಷಣ ಮಾಡಲಿಲ್ಲ. ರಾಮೇಶ್ವರ, ಸಿಂಹಳಗಳ ಸಂಚಾರ ಮಾಡಿ ಬಂದರು. ಲಖನೌ ಕಾಂಗ್ರೆಸಿಗೆ ಹೋದಾಗ ಬರ್ಮದಲ್ಲಿ ಸಂಚರಿಸಿ ಬಂದರು. ರೈಂಡನ ಕೊಲೆ ಮಾಡಿದವನ ಸುಳಿವೇ ಸಿಗಲಿಲ್ಲ. ಆ ಸಂದರ್ಭದಲ್ಲಿ ಟೈಮ್ಸ್ ಪತ್ರಿಕೆ ಟಿಳಕರ ಮೇಲೆ ಸಂಚಿನ ಆರೋಪ ಹೊರಿಸಿ ಬರೆದ ಲೇಖನಕ್ಕಾಗಿ ಟಿಳಕರು ಮಾನಹಾನಿ ಖಟ್ಲೆ ಹಾಕುವುದಾಗಿ ಬೆದರಿಸಿದಾಗ ಟೈಮ್ಸ್ ಕ್ಷಮಾಪಣೆ ಬೇಡಿತು. ಹೀಗೆಯೇ ಬರೆದ ಗ್ಲೋಬ್ ಪತ್ರಿಕೆಯ ವಿರುದ್ಧ ಖಟ್ಲೆ ಹಾಕಿ ಅದು ದಂಡ ತೆರುವಂತೆ ಮಾಡಿದರು.
ಟಿಳಕರಿಗೆ ಕಾಂಗ್ರೆಸ್ ಸಂಸ್ಥೆಯ ಬಗ್ಗೆ ತುಂಬ ಪ್ರೀತಿಯಿತ್ತು. ಅದು ಬೇಗ ಬೆಳೆದು ದೇಶದ ಆಡಳಿತಸೂತ್ರ ವಹಿಸಲಿದೆಯೆಂಬುದು ಅವರ ಭಾವನೆಯಾಗಿತ್ತು. ಅದು ನಿಜವೂ ಆಯಿತು. ಟಿಳಕರ ಉಗ್ರವಿಚಾರಗಳಿಂದ ಕಾಂಗ್ರೆಸಿನ ಮಂದಗಾಮಿ ಮುಖಂಡರಾದ ರಾನಡೆ, ಮೆಹೆತ, ಗೋಖಲೆ, ಬ್ಯಾನರ್ಜಿ ಮುಂತಾದವರಿಗೆ ರಾಜದ್ರೋಹದ ಭಯವಾಗುತ್ತಿತ್ತು. ಆದ್ದರಿಂದ ಕಾಂಗ್ರೆಸ್ ಅಧ್ಯಕ್ಷಪದಕ್ಕೆ ಟಿಳಕರನ್ನು ಸೂಚಿಸಿದಾಗ ಅವರು ವಿರೋಧಿಸಿದರು: ಕಲ್ಕತ್ತ ಕಾಂಗ್ರೆಸ್ ಅಧಿವೇಶನಕ್ಕೆ (1906) ಅವರ ಬದಲಾಗಿ ವೃದ್ಧರಾದ ದಾದಾಭಾಯಿ ನವರೋಜಿಯವರನ್ನು ಆರಿಸಿದರು. ಈ ನಡುವೆ ಸ್ವರಾಜ್ಯದ ಬೇಡಿಕೆಯ ಘೋಷಣೆಯಾಗಲೇಬೇಕೆಂಬ ಪ್ರಚಾರವನ್ನಂತೂ ಟಿಳಕರು ನಡೆಸಿಯೇ ಇದ್ದರು. ಇವರ ಕಾರ್ಯವನ್ನು ಬಲ್ಲ ದಾದಾಭಾಯಿ ನವರೋಜಿಯವರು ಅಧ್ಯಕ್ಷಸ್ಥಾನದಿಂದ ಸ್ವರಾಜ್ಯದ ಬೇಡಿಕೆಯನ್ನು ನುಡಿದೇಬಿಟ್ಟರು. ಉಗ್ರಗಾಮಿಗಳ ಮಾತಿಗೆ ಕಿವಿಗೊಟ್ಟರೆಂದು ಅವರನ್ನು ಇಂಗ್ಲಿಷ್ ಪತ್ರಿಕೆಗಳು ಟೀಕಿಸಿದವು. 1907ರ ನಾಗಪುರ ಕಾಂಗ್ರೆಸ್ ಅಧಿವೇಶನದಲ್ಲಿ ಮಂದ ಮತ್ತು ಉಗ್ರಗಾಮಿ ಪಂಗಡಗಳಲ್ಲಿ ತಿಕ್ಕಾಟ ಪ್ರಾರಂಭವಾಯಿತು. ಅದರ ಮುಂದಿನ ಅಧಿವೇಶನ ಸೂರತ್‍ನಲ್ಲಿ ನಡೆಯಿತು. ಅಲ್ಲೂ ಘರ್ಷಣೆ ಪ್ರಾರಂಭವಾಗಿ ಕೊನೆಗೆ ಟಿಳಕರ ಉಗ್ರವಾದಿ ಪಕ್ಷದ ಕೈ ಮೇಲಾಯಿತು. ಅಧ್ಯಕ್ಷರಾಗಿದ್ದ ಲಾಲಾ ಲಜಪತ್‍ರಾಯ್ ಹಾಗೂ ಬಿಪಿನ್ ಚಂದ್ರಪಾಲ್ ಅವರು ಟಿಳಕರ ಜೊತೆಗೆ ನಿಂತರು. ಲಾಲ್, ಬಾಲ್, ಪಾಲ್ ಈ ಮೂವರು ಮೂರು ರತ್ನಗಳು ಎಂದು ಜನ ಅಕ್ಕರೆಯಿಂದ ಕರೆದರು.
ಟಿಳಕರು ರೂಪಿಸಿದ ಸ್ವದೇಶೀ, ಪರದೇಶೀ ಅರಿವೆಯ ಬಹಿಷ್ಕಾರ, ರಾಷ್ಟ್ರೀಯ ಶಿಕ್ಷಣ, ಸ್ವರಾಜ್ಯ-ಈ ನಾಲ್ಕು ಮಹಾಮಂತ್ರಗಳಿಂದ ದೇಶದಲ್ಲಿ ನವಚೈತನ್ಯ ಮೂಡಿತು. ಜನಜಾಗೃತಿ ಹೆಚ್ಚಿದಂತೆಲ್ಲ ದಬ್ಬಾಳಿಕೆಯೂ ಹೆಚ್ಚಿತು. ಬಂಗಾಳದ ವಿಭಜನೆಯಿಂದ ಕ್ರಾಂತಿಯ ಕಿಡಿ ಹೊತ್ತಿತು. ಯುವಕರು ಮಾಣಿಕತೊಲಾಬಾಗ್‍ನಲ್ಲಿ ಬಾಂಬಿನ ಕಾರ್ಖಾನೆಯನ್ನು ಸ್ಥಾಪಿಸಿದರು. ಅಧಿಕಾರಿಗಳ ಮೇಲೆ ಬಾಂಬ್ ಎಸೆಯಲಾಯಿತು. ಆಂಗ್ಲ ಮಹಿಳೆಯರು ಅದರಲ್ಲಿ ಹತರಾದರು. ನಿಜವಾದ ಅಪರಾಧಿಗಳು ಸಿಗದಂತಾಗಲು ಕಾಂಗ್ರೆಸ್ ಉಗ್ರವಾದಿ ಮುಖಂಡರನ್ನೆಲ್ಲ ಸರ್ಕಾರ ಬಂಧಿಸತೊಡಗಿತು. ಕೇಸರೀ ಪತ್ರಿಕೆ 1908ರಲ್ಲಿ ಇದನ್ನು ಖಂಡಿಸಿ ಬರೆಯುತ್ತ, ಇಂಥ ಪರಿಸ್ಥಿತಿಯನ್ನು ತಂದುಕೊಳ್ಳಲು ಸರ್ಕಾರದ ಅನ್ಯಾಯದ ಆಡಳಿತವೇ ಕಾರಣವೆಂದು ಸಾರಿತು. ವೈಸ್‍ರಾಯಿಯಿಂದ ಆರಂಭಿಸಿ ಎಲ್ಲ ಅಧಿಕಾರಿಗಳೂ ಕೋಪಗೊಂಡರು. ಟಿಳಕರ ಬಂಧನದ ಸಂಚು ಹೂಡಿದರು. ಇದರ ಸುಳಿವು ಟಿಳಕರಿಗೆ ಹತ್ತಿತ್ತು. ಮಿತ್ರರೂ ಎಚ್ಚರಿಸಿದರು. ದೇಶವೇ ದೊಡ್ಡ ಸೆರೆಮನೆಯಂತಿದ್ದಾಗ ಸಣ್ಣ ಸೆರೆಮನೆಯದೇನು ಹೆದರಿಕೆ ?- ಎಂದು ಟಿಳಕರು ಮುಂಬಯಿಗೆ ಇನ್ನೊಂದು ರಾಜದ್ರೋಹದ ಖಟ್ಲೆಯಲ್ಲಿ ವಕಾಲತ್ತು ವಹಿಸಲು ಹೊರಟೇ ಬಿಟ್ಟರು. ಮುಂಬಯಿಯಲ್ಲಿ ಟಿಳಕರನ್ನು ಬಂಧಿಸಲಾಯಿತು. ಟಿಳಕರ ಪರವಾಗಿ ವಕಾಲತ್ತು ವಹಿಸಿದ್ದ ವ್ಯಕ್ತಿ ಮಹಮದ್ ಅಲಿ ಜಿನ್ನಾ. ಜಾಮೀನಿನ ಮೇಲೆ ಅವರ ಬಿಡುಗಡೆ ಆಗಲಿಲ್ಲ. ಮೊಕದ್ದಮೆ ನಡೆಯಿತು. ಟಿಳಕರು ಇಪ್ಪತ್ತೊಂದು ಗಂಟೆಗಳ ಭಾಷಣ ಮಾಡಿ ದೀರ್ಘವಾದ ಹೇಳಿಕೆ ಕೊಟ್ಟರು. ನ್ಯಾಯದರ್ಶಿಗಳಲ್ಲಿ ಆರು ಜನ ಯುರೋಪಿಯನರೂ ಇಬ್ಬರು ಪಾರ್ಸಿಗಳೂ ಇದ್ದರು. ಟಿಳಕರು ತಪ್ಪಿತಸ್ಥರೆಂದು ಏಳು ಮಂದಿ ನ್ಯಾಯದರ್ಶಿಗಳು ಅಭಿಪ್ರಾಯಪಟ್ಟರು. ನ್ಯಾಯಾಧೀಶರು 52 ವರ್ಷ ವಯಸ್ಸಿನ ಟಿಳಕರಿಗೆ ಆರು ವರ್ಷಗಳ ಕರೀನೀರಿನ-ಗಡಿಪಾರಿನ-ಶಿಕ್ಷೆ ವಿಧಿಸಿದರು. ಇದು ಮರಣದಂಡನೆಯಷ್ಟೇ ಭಯಂಕರವಾಗಿತ್ತು. ಟಿಳಕರಿಗೆ ಮಧುಮೇಹದ ಬೇನೆ ಬೇರೆ ಕಾಡುತ್ತಿತ್ತು. ಆದರೂ ಟಿಳಕರು ಧೃತಿಗೆಡಲಿಲ್ಲ. ನ್ಯಾಯಾಧೀಶರು ಎಂಥ ತೀರ್ಪು ಕೊಟ್ಟರೂ ನಾನು ನಿರಾಪರಾಧಿ, ಎಂದು ನ್ಯಾಯಾಲಯದಲ್ಲೇ ಟಿಳಕರು ಘೋಷಿಸಿದರು. ತೀರ್ಪು ಕೊಟ್ಟ ಬಳಿಕ ಅವರನ್ನು ಕರೆದೊಯ್ಯುವಾಗ ಅಲ್ಲಿ ಸೇರಿದ ಜನತೆಗೆ ಅವರ ದರ್ಶನ ಕೂಡ ಆಗದಂತೆ ಸರ್ಕಾರ ಜಾಗೃತೆ ವಹಿಸಿತು. ನೇರವಾಗಿ ಅವರನ್ನು ದಾಟಿಸಿ ಸಾಬರಮತಿ ಜೈಲಿಗೆ, ಆಮೇಲೆ ಬರ್ಮದ ಮಾಂಡಲೆಯ ಕಾರಾಗೃಹಕ್ಕೆ ಕಳಿಸಲಾಯಿತು. ಮರುದಿವಸ ಈ ಸುದ್ದಿ ತಿಳಿದ ಕೂಡಲೇ ಮುಂಬಯಿಯಲ್ಲಿ ಹರತಾಳಗಳಾದವು. ದೇಶಾದ್ಯಂತ ಪ್ರತಿಭಟನಾ ಸಭೆಗಳು ಏರ್ಪಟ್ಟುವು. ಮುಂಬಯಿಯ ಗವರ್ನರ್ ಜಾರ್ಜ್ ಕ್ಲಾರ್ಕ್ ದಬ್ಬಾಳಿಕೆಯ ಸತ್ತೆಯನ್ನೇ ಪ್ರಾರಂಭಿಸಿದ.
ಮಾಂಡಲೆಯ ಸೆರೆಮನೆಯ ಏಕಾಂತವೂ ಟಿಳಕರಿಗೆ ವರದಾನವಾಗಿ ಪರಿಣಮಿಸಿತು. ಚಿಕ್ಕ ಕೋಣೆ; ಪಕ್ಕದಲ್ಲಿ ಕಿರಿಯಾದ ಅಂಗಳ. ಕೋಣೆಯ ಒಂದು ಕಪಾಟಿನ ಪುಸ್ತಕಗಳು. ಟಿಳಕರ ಸಂಗಾತಿಗಳೆಂದರೆ ಪುಸ್ತಕಗಳು. ಆಧ್ಯಯನ, ಚಿಂತನ, ಲೇಖನಗಳ ತಪಸ್ಸು ನಡೆಯಿತು. ಜರ್ಮನ್, ಪಾಳೀ ಭಾಷೆಗಳ ಅಧ್ಯಯನವನ್ನು ಸೆರೆಮನೆಯಲ್ಲೇ ಮಾಡಿದರು. ಇವರ ಶಿಸ್ತು, ಸೌಜನ್ಯಯುತ ನಡತೆಗಾಗಿ ಬರ್ಮದ ಸರ್ಕಾರ ಕೆಲವು ಸೌಲಭ್ಯಗಳನ್ನು ಒದಗಿಸಿತು. ಸೆರೆಮನೆಯಿಂದ ರಾಷ್ಟ್ರಕ್ಕೆ ಟಿಳಕರು ಕೊಟ್ಟ ಕಾಣಿಕೆಯೇ ಗೀತಾರಹಸ್ಯ ಎಂಬ ದೊಡ್ಡ ಆಕಾರದ ಸಾವಿರ ಪುಟಗಳ ವಿವೇಚನಾತ್ಮಕ ಗ್ರಂಥ. ಇದು 1911ರಲ್ಲಿ ರಚಿತವಾದರೂ 1915ಕ್ಕೆ ಮುಂಚೆ ಇದನ್ನು ಪ್ರಕಟಿಸಲಾಗಲಿಲ್ಲ. ವೇದಾಂತ ವಿಷಯದ ಇನ್ನೂ ಅನೇಕ ಗ್ರಂಥಗಳನ್ನು ಇವರು ಬರೆದಿದ್ದಾರೆ. ಒರೈಯನ್ (1893) ಮತ್ತು ಆರ್ಕ್‍ಟಿಕ್ ಹೋಮ್ ಇನ್ ದಿ ವೇದಾಸ್ (1903) ಗ್ರಂಥಗಳು ಇವರ ಸಂಶೋಧನ ಪ್ರವೃತ್ತಿಗೆ ಸಾಕ್ಷಿಗಳಾಗಿವೆ. ಮಾಸಾನಾಂ ಮಾರ್ಗಶೀರ್ಷೋಸ್ಮಿ, ಎಂಬ ಗೀತಾವಾಕ್ಯ ಅವರಿಗೆ ಒರೈಯನ್ ಗ್ರಂಥರಚನೆಗೆ ಸ್ಫೂರ್ತಿಯಿತ್ತಿತ್ತು.
ಟಿಳಕರಿಗೂ ಭಗವದ್ಗೀತೆಗೂ ಸಂಪರ್ಕ ಏರ್ಪಟ್ಟುದು ಅವರ ಹದಿನಾರನೆಯ ವಯಸ್ಸಿನಲ್ಲಿ. ಅಲ್ಲಿಂದ ಸತತವಾಗಿ ಅವರು ಗೀತೆಯ ಶ್ರವಣ, ವಾಚನ, ಚಿಂತನಗಳಲ್ಲಿ ಇದ್ದರು. ಧಾರ್ಮಿಕ ಜೀವನ ಬೇರೆ, ಲೌಕಿಕ ಜೀವನ ಬೇರೆ ಎಂಬವರಿಗೆ ಟಿಳಕರು ಗೀತಾರಹಸ್ಯದಲ್ಲಿ ಉತ್ತರ ಕೊಟ್ಟಿದ್ದಾರೆ. ಇವರ ವಿಮರ್ಶೆ ವಿವೇಚನೆಗಳನ್ನು ನೋಡಿದಾಗ ಇವರು ರಾಜಕಾರಣಿಯೋ, ತತ್ತ್ವಜ್ಞಾನಿಯೋ ಎಂಬ ಅಚ್ಚರಿಯುಂಟಾಗುತ್ತದೆ. ಟಿಳಕರು ಭಗವದ್ಗೀತೆಯಲ್ಲಿ ಕಂಡದ್ದು ಜ್ಞಾನಯುಕ್ತವಾದ ಭಕ್ತಿಪ್ರಧಾನವಾದ ಕರ್ಮಯೋಗ: ಲೋಕಮಾನ್ಯ ಟಿಳಕರು ಕರ್ಮಯೋಗದ ಆರಾಧಕರು. ಯುಧ್ಯಸ್ವ ಎಂಬುದು ಅವರು ಗೀತೆಯಿಂದ ಪಡೆದು ಜನತೆಗೆ ನೀಡಿದ ಸಂದೇಶ. ಗೀತೆಯಲ್ಲಿ ಹೇಳಿದ ನಿಷ್ಕಾಮಕರ್ಮ ಸಮತ್ವ ಸ್ಥಿತಿಪ್ರಜ್ಞೆಗಳನ್ನು ಇವರು ಸ್ವತಃ ಆಚರಿಸಿ ಬಾಳಿದವರು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ತಾವು ಯಾವ ಅಧಿಕಾರವನ್ನೂ ಸ್ವೀಕರಿಸದೆ, ರಾಜಕೀಯವನ್ನು ತ್ಯಜಿಸಿ ಗಣಿತ ಪ್ರಾಧ್ಯಾಪಕರಾಗಿ ಜೀವನವನ್ನು ಸಾಗಿಸುವುದಾಗಿ ಅವರು ಒಮ್ಮೆ ಹೇಳಿದ್ದರು. ಗಣಿತದ ಬಗ್ಗೆ ಅವರಿಗೆ ಇನ್ನೊಂದು ಪುಸ್ತಕ ಬರೆಯುವ ಮನಸ್ಸಿತ್ತು. ರಾಧಾಕೃಷ್ಣನ್ ಅವರು ಹೇಳಿದಂತೆ ಟಿಳಕರು ಸ್ವಭಾವತಃ ವಿದ್ವಾಂಸರು, ಆದರೆ ದೇಶದ ಆವಶ್ಯಕತೆಗಾಗಿ ರಾಜಕಾರಣಿಯಾದವರು.
ಆರು ವರ್ಷಗಳು ಪೂರ್ತಿ ಶಿಕ್ಷೆ ಅನುಭವಿಸಿದ ಅನಂತರ ಟಿಳಕರನ್ನು ಮಾಂಡಲೆ ಸೆರೆಮನೆಯಿಂದ ಬಿಡುಗಡೆ ಮಾಡಲಾಯಿತು (1914). ನಾನು ಸ್ವತಂತ್ರನಾಗಿರುವುದಕ್ಕಿಂತ ಸಂಕಷ್ಟಗಳಿಗೊಳಗಾಗುವುದರಿಂದಲೇ ನಾನೆಣಿಸಿದ ಕಾರ್ಯ ಸಾಧಿಸಬಹುದೇನೋ ಎನಿಸುತ್ತದೆಯೆಂದು, ನ್ಯಾಯಾಲಯದಲ್ಲಿ ತೀರ್ಪನ್ನು ಕೇಳಿದಾಗ, ಟಿಳಕರು ಹೇಳಿದ್ದರು. ಈಗ ಅದೇ ನ್ಯಾಯಾಲಯದಲ್ಲಿ ಈ ಮಾತುಗಳನ್ನು ಕೆತ್ತಿಸಿಡಲಾಗಿದೆ. ಈ ಮಾತು ಸತ್ಯವೆಂಬಂತೆ ಗೀತಾರಹಸ್ಯದಂಥ ಕೃತಿರತ್ನ ಸೆರೆಮನೆಯಲ್ಲಿ ತಯಾರಾಯಿತು. ಹಸ್ತಪ್ರತಿಯನ್ನು ಒಯ್ಯಲು ಟಿಳಕರಿಗೆ ಅನುಮತಿ ಸಿಗಲಿಲ್ಲ. ಅದರಲ್ಲಿ ಆಕ್ಷೇಪಾರ್ಹವಾದುದೇನೂ ಇಲ್ಲವೆಂದು ಪರಿಶೀಲಿಸಿದ ಮೇಲೆ ಅದು ಟಿಳಕರ ಕೈಸೇರಿತು. ಮೊದಲು ಮರಾಠಿಯಲ್ಲಿ ಬರೆಯಲಾದ ಈ ಗ್ರಂಥವನ್ನು ಆಮೇಲೆ ಇಂಗ್ಲಿಷಿಗೆ ಅನುವಾದಿಸಿದರು. ಈ ನಡುವೆ, 1912ರಲ್ಲಿ ಲೋಕಮಾನ್ಯರ ಪತ್ನಿ ಸ್ವರ್ಗಸ್ಥರಾಗಿದ್ದರು. ಆಗ ಟಿಳಕರು ಅವರ ಬಳಿ ಇರಲಿಲ್ಲ. ಜೈಲುವಾಸದಿಂದ ಟಿಳಕರ ಆರೋಗ್ಯ ತುಂಬ ಕೆಟ್ಟಿತ್ತು. ಟಿಳಕರು ಸರ್ಕಾರದ ಶತ್ರುವಾಗಿದ್ದಾರೆಂದೂ ಅವರೊಡನೆ ಸರ್ಕಾರಿ ನೌಕರರೂ ಸರ್ಕಾರದ ಹಿತೈಷಿಗಳೂ ಸಂಬಂಧ ಬೆಳೆಸಬಾರದೆಂದೂ ಸರ್ಕಾರ ಪ್ರಕಟಿಸಿತು. ಅವರ ಸುತ್ತ ಗುಪ್ತ ಪೋಲಿಸರ ಕಾವಲು ಏರ್ಪಟ್ಟಿತು. ಆ ಹೊತ್ತಿಗೆ ಪ್ರಾರಂಭವಾದ ಒಂದನೆಯ ಮಹಾಯುದ್ಧದ ನಿಮಿತ್ತ ಬ್ರಿಟಿಷ್ ಸರ್ಕಾರ ಪ್ರಾರಂಭಿಸಿದ ಸೈನ್ಯಭರ್ತಿಯಲ್ಲಿ ಸುಶಿಕ್ಷಿತ ತರುಣರು ಸೇರಿಕೊಳ್ಳಬೇಕೆಂದೂ ದೇಶರಕ್ಷಣೆಗೆ ಸೈನಿಕ ಶಿಕ್ಷಣ ಅಗತ್ಯವೆಂದೂ ಟಿಳಕರು ಕೇಸರಿಯಲ್ಲಿ ಬರೆದರು. ಆದರೆ ಸರ್ಕಾರಕ್ಕೆ ಇವರ ಮಾತಿನಲ್ಲಿ ವಿಶ್ವಾಸವಿರಲಿಲ್ಲ. ಯುದ್ಧಪ್ರಯತ್ನಕ್ಕೆ ಸರ್ಕಾರ ಕೈಗೊಂಡ ಕ್ರಮಗಳಿಗೆ ನೆರವಾಗಲು ಭಾರತೀಯ ಮುಂದಾಳುಗಳ ಸಭೆಯನ್ನು ಕರೆದರೂ ಮೊದಲು ಟಿಳಕರಿಗೆ ಆಮಂತ್ರಣ ಕೊಡಲಿಲ್ಲ. ಎರಡನೆಯ ಸಭೆ ಮುಂಬಯಿಯಲ್ಲಿ ಸೇರಿದಾಗ ಟಿಳಕರನ್ನು ಕರೆಸಿಕೊಳ್ಳಲಾಯಿತಾದರೂ ಭಾರತಕ್ಕೆ ಸ್ವರಾಜ್ಯ ಕೊಡುವ ಭರವಸೆ ಕೊಟ್ಟಲ್ಲಿ ದೇಶವೇ ಸರ್ಕಾರವನ್ನು ಬೆಂಬಲಿಸುವುದೆಂದು ಟಿಳಕರು ಹೇಳಿದಾಗ ಸಭೆಯಲ್ಲಿದ್ದ ಲಾರ್ಡ್ ವಿಲಿಂಗ್‍ಡನ್ ಗಾಬರಿಯಾಗಿ ಟಿಳಕರಿಗೆ ಮಾತು ನಿಲ್ಲಿಸಲು ಹೇಳಿದ. ಆ ಕೂಡಲೇ ಅಲ್ಲಿಗೆ ಬಂದಿದ್ದ ಗಾಂಧೀಜಿ, ಹಾರ್ನಿಮನ್, ಜಮನಾದಾಸ ಮೊದಲಾದವರೆಲ್ಲ ಟಿಳಕರ ಹಿಂದೆಯೇ ಸಭಾತ್ಯಾಗ ಮಾಡಿ ಹೊರಬಂದರು. ಟಿಳಕರಿಗೆ ಆದ ಅಪಮಾನವನ್ನು ಪ್ರತಿಭಟಿಸಿ ಗಾಂಧೀಜಿಯ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಭೆ ಸೇರಿತು. ವಿಲಿಂಗ್ಡನನ ವರ್ತನೆಯನ್ನು ಖಂಡಿಸಿ ಗಾಂಧಿ ಹಾಗೂ ಜಿನ್ನಾ ಮಾತಾಡಿದರು. ಯುದ್ಧಸಹಾಯದ ವಿಚಾರದಲ್ಲಿ ತಮ್ಮ ಪ್ರಾಮಾಣಿಕತೆಯನ್ನು ಸ್ಥಾಪಿಸಲು 50,000ರೂಪಾಯಿಗಳನ್ನು ಟಿಲಕರು ಕಳಿಸಿದರೂ ಸರ್ಕಾರ ಅವರನ್ನು ನಂಬಲಿಲ್ಲ.
ಕಾಂಗ್ರೆಸಿನಲ್ಲಿ ಮಂದ ಮತ್ತು ತೀವ್ರಗಾಮಿಗಳಲ್ಲಿ ಬಹಳ ಬಿರುಕು ಉಂಟಾಗಿತ್ತು. ಆನಿಬಸೆಂಟರ ಮಧ್ಯಸ್ಥಿಕೆಯಿಂದಲೂ ಇದು ಬಗೆಹರಿಯದಿದ್ದಾಗ ಟಿಳಕರು ಹೋಮ್ ರೂಲ್ ಲೀಗ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಆಂದೋಲನವನ್ನು ಸಂಘಟಿಸತೊಡಗಿದರು. ಸರ್ಕಾರಕ್ಕೆ ಮತ್ತೆ ಚಿಂತೆ ಹತ್ತಿತ್ತು. ಅಹಮದಾಬಾದಿನಲ್ಲಿ ಟಿಳಕರು ಮಾಡಿದ ಭಾಷಣ ರಾಜದ್ರೋಹಾತ್ಮಕವೆಂದು ಅವರನ್ನು ಬಂಧಿಸಿತು. ಆದರೆ ಉಚ್ಚನ್ಯಾಯಾಲಯದವರೆಗೆ ಹೋದ ಈ ಪ್ರಕರಣದಲ್ಲಿ ನ್ಯಾಯಾಮೂರ್ತಿಗಳಾದ ಬೈಚಲ್ ಮತ್ತು ಲಲ್ಲೂಭಾಯಿಯವರು ಹೋಮ್ ರೂಲ್ ಕೇಳುವುದು ರಾಜದ್ರೋಹವಲ್ಲ ಎಂದು ತೀರ್ಪಿತ್ತರು. ಈ ನಿರ್ಣಯದಿಂದ ಸ್ವರಾಜ್ಯ ಚಳವಳಿಗೆ ಇನ್ನಷ್ಟು ಪುಷ್ಟಿ ಸಿಕ್ಕಿತು. ಟಿಳಕರು ದೇಶಾದ್ಯಂತ ತಿರುಗಿ ಸ್ವರಾಜ್ಯದ ಸಂದೇಶ ಸಾರಿದರು. ಒಂದೇ ವರ್ಷದಲ್ಲಿ 14,218 ಜನರು ಹೋಮ್ ರೂಲ್ ಲೀಗಿನ ಸದಸ್ಯರಾದರು. ನಿಧಿಯೂ ಸೇರತೊಡಗಿತು. ಮುಂದೆ ಸ್ವಲ್ಪ ದಿನಗಳಲ್ಲಿ ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಭಾರತೀಯರ ಸಹಾನುಭೂತಿಪರವಾದ ಗಾಳಿ ಬೀಸತೊಡಗಿತು. ಮಾಂಟೆಗ್ಯೊ-ಚೆಮ್ಸ್‍ಫರ್ಡ್ ಸುಧಾರಣೆಗಳ ಯೋಜನೆ ಬಂತು. ಭಾರತದಿಂದ ಅನೇಕ ಶಿಷ್ಟಮಂಡಳಿಗಳು ತಮ್ಮ ಅಭಿಪ್ರಾಯವನ್ನು ತಿಳಿಸಲು ಇಂಗ್ಲೆಂಡಿಗೆ ಹೋದವು. ಹೋಮ್ ರೂಲ್ ಲೀಗಿನ ಪರವಾಗಿ ಟಿಳಕ್ ಮತ್ತು ಆನಿಬೆಸೆಂಟರ ನಾಯಕತ್ವದಲ್ಲಿ ಒಂದು ಶಿಷ್ಟಮಂಡಳಿ ಇಂಗ್ಲೆಂಡಿಗೆ ಹೋಯಿತು. ಭಾರತದ ಸ್ವಾತಂತ್ರ್ಯ ಕೇಳಿಕೆಯನ್ನು ಟಿಳಕರು ಸಮರ್ಥವಾಗಿ ಪಾರ್ಲಿಮೆಂಟಿನ ಮುಂದೆ ಪ್ರತಿಪಾದಿಸಿದರು. ಇಂಗ್ಲೆಂಡಿನಲ್ಲಿ ಈ ವಿಚಾರವನ್ನು ಪ್ರಚಾರ ಮಾಡುವುದೇ ಅವರ ಮುಖ್ಯ ಗುರಿಯಾಗಿತ್ತು. ಅವರು ಇಂಗ್ಲೆಂಡನ್ನು ಪ್ರವೇಶಿಸದಂತೆ ತಡೆಯುವ ಪ್ರಯತ್ನಗಳೆಲ್ಲ ವಿಫಲವಾಗಿದ್ದವು. ಟಿಳಕರು ಪಾರ್ಲಿಮೆಂಟಿನ ಕೆಲವು ಸದಸ್ಯರ ಸಹಾನುಭೂತಿ ಗಳಿಸುವಲ್ಲಿ ಯಶಸ್ವಿಯಾದರು. ಇಂಗ್ಲೆಂಡಿನಲ್ಲಿ ಒಂದು ವರ್ಷ ಕಳೆದಮೇಲೆ ಟಿಳಕರು 1919ರ ನವೆಂಬರಿನಲ್ಲಿ ಭಾರತಕ್ಕೆ ಮರಳಿದರು.
ಟಿಳಕರ ಶಾರೀರಿಕ ದೌರ್ಬಲ್ಯವನ್ನು ದೇಶದಲ್ಲಿ ಬೆಳೆಯುತ್ತಿದ್ದ ಜನಜಾಗೃತಿ ಮರೆಸಿತ್ತು. ಕಷ್ಟಗಳನ್ನು ವಹಿಸಿಕೊಳ್ಳುವ ತಪಸ್ಸು ಇವರಿಗೆ ಸಾಧಿಸಿತ್ತು. ಟಿಳಕರು 61ನೆಯ ವರ್ಷದಲ್ಲಿ ಪಾದಾರ್ಪಣೆ ಮಾಡಿದ ಸುಸಂದರ್ಭದಲ್ಲಿ ಅವರ ಷಷ್ಟಿಪೂರ್ತಿ ಸಮಾರಂಭವನ್ನು ವೈಭವದಿಂದ ಜರುಗಿಸಿ ಒಂದು ಲಕ್ಷ ರೂಪಾಯಿಗಳ ಹಮ್ಮಿಣಿಯನ್ನು ಜನತೆ ಒಪ್ಪಿಸಿತು. ಟಿಳಕರು ಆ ಹಣವನ್ನೆಲ್ಲ ರಾಷ್ಟ್ರೀಯ ಕಾರ್ಯಗಳಿಗೆ ವಿನಿಯೋಗಿಸಿದರು.
ಸಪ್ಪೆಯಾದ ರಾಜಕಾರಣ ಟಿಳಕರಿಗೆ ಒಪ್ಪಿಗೆಯಾಗುತ್ತಿರಲಿಲ್ಲ. ರಾಜಕಾರಣದಲ್ಲಿ ಹಿಂದಡಿಯಿಡುವ ಸ್ವಭಾವ ಅವರದಲ್ಲ. ಆದ್ದರಿಂದಲೇ ಮಂದಗಾಮಿಗಳೊಡನೆ ಅವರ ಮತಬೇಧವಿತ್ತು. ಆದರೆ ತಮ್ಮ 61ನೆಯ ವಯಸ್ಸಿನಲ್ಲಿ ಟಿಳಕರು ರಾಷ್ಟ್ರೋದ್ದೇಶ ಸಾಧನೆಗಾಗಿ ತಮ್ಮ ಟೀಕೆಗಳಲ್ಲಿ ಕಟುತ್ವವನ್ನು ಕಡಿಮೆ ಮಾಡುವ ಮತ್ತು ಸಂಧಾನದಲ್ಲಿ ಸೌಮ್ಯತೆ ತಳೆಯುವ ಅಗತ್ಯವನ್ನು ಕಂಡುಕೊಂಡರು. ಆಗ ಅವರು ಕಾಂಗ್ರೆಸ್ ಸೇರುವ ನಿರ್ಧಾರ ಮಾಡಿದರು. ತಮ್ಮ ಅನುಯಾಯಿ ಉಗ್ರವಾದಿಗಳನ್ನು ಸಹ ಕಾಂಗ್ರೆಸ್ ಜೊತೆಗೆ ಸಂಧಾನಕ್ಕೆ ಒಪ್ಪಿಕೊಳ್ಳಲು ಹೇಳಿದರು. ಕೆಲವರು ಈ ಕ್ರಮವನ್ನು ಮೆಚ್ಚಿಕೊಳ್ಳದಿದ್ದರೂ ಬಹುಜನರು ಇದಕ್ಕೆ ಸಮ್ಮತಿಸಿದರು. ಟಿಳಕರ ಕಾಂಗ್ರೆಸ್ ಪ್ರವೇಶವನ್ನು ವಿರೋಧಿಸಿದವರಲ್ಲಿ ಇವರ ಪ್ರತಿಸ್ಪರ್ಧಿಯಂತಿದ್ದ ಗೋಪಾಲ ಕೃಷ್ಣ ಗೋಖಲೆಯೊಬ್ಬರೇ ಪ್ರಮುಖರು. ಅನಂತರ ಕಾಂಗ್ರೆಸಿನ ಲಖನೌ ಅಧಿವೇಶನದಲ್ಲಿ ಟಿಳಕರ ಸಂಕಲ್ಪ ಫಲಿಸಿ ಮಂದಗಾಮಿ ಮತ್ತು ತೀವ್ರಗಾಮಿಗಳಲ್ಲಿ ಐಕ್ಯ ಸಾಧಿಸಿತು. ಹಿಂದೂ ಮುಸಲ್ಮಾನರೆಂಬ ಬೇಧಭಾವವಿಲ್ಲದೆ ಎಲ್ಲರೂ ಸ್ವರಾಜ್ಯದ ಬೇಡಿಕೆಯನ್ನು ಘೋಷಿಸಿದರು. ಲೋಕಮಾನ್ಯರು 300 ಪ್ರತಿನಿಧಿಗಳೊಂದಿಗೆ ವಿಶೇಷ ರೈಲಿನಲ್ಲಿ ಈ ಐತಿಹಾಸಿಕ ಅಧಿವೇಶನಕ್ಕೆ ಹೋಗಿದ್ದರು. ಲಖನೌ ಅಧಿವೇಶನದ ಅನಂತರ ಸ್ವಲ್ಪ ದಿನಗಳಲ್ಲೇ ಗೋಖಲೆ ಮೃತರಾದರು. ಗೋಖಲೆ ಟಿಳಕರ ರಾಜಕೀಯ ಪ್ರತಿಸ್ಪರ್ಧಿಯಾಗಿ ಕೆಲಸ ಮಾಡಿದ್ದರೂ ಅವರ ಮರಣದ ವಾರ್ತೆ ಕೇಳಿದ ಟಿಳಕರು ಹೃದಯ ತುಂಬಿ ಗೋಖಲೆಯವರ ದೇಶಪ್ರೇಮವನ್ನು ಹೊಗಳಿದರು.
ಕಾಂಗ್ರೆಸ್ ನಾಯಕರಲ್ಲಿ ಆಗ ಟಿಳಕರೇ ವಯೋವೃದ್ಧರೂ ಅನುಭವಶಾಲಿಗಳೂ ಆಗಿ ಅನಭಿಷಿಕ್ತ ರಾಜರಂತಿದ್ದರು. ದಿಲ್ಲಿಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿ ಅವರನ್ನು ಆರಿಸಬೇಕೆಂಬುದು ಅನೇಕರ ಅಪೇಕ್ಷೆಯಾಗಿತ್ತು. ಆದರೆ ವ್ಯಾಲೆಂಟೈನ್ ಚಿರೋಲ್ ಎಂಬವನು ತನ್ನ 'ಇಂಡಿಯನ್ ಅನ್‍ರೆಸ್ಟ್ ಎಂಬ ಪುಸ್ತಕದಲ್ಲಿ ತಮ್ಮನ್ನು ಮಾನನಷ್ಟಕ್ಕೆ ಗುರಿಪಡಿಸಿದ್ದಾನೆಂದು ಆಪಾದಿಸಿ ಅವರು 1918ರಲ್ಲಿ ಮೊಕದ್ದಮೆ ಹೂಡಿದರು. ಇಂಗ್ಲೆಂಡಿನಲ್ಲಿ 13 ತಿಂಗಳುಗಳ ಕಾಲ ಇರಬೇಕಾಗಿ ಬಂತು. ಅಲ್ಲಿ ಅವರು ಜಾರಿಬಿದ್ದರು. ಅವರ ಕಾಲಿಗೆ ಪೆಟ್ಟಾಯಿತು. ಆದರೂ ಅವರು ಸ್ವರಾಜ್ಯದ ಪ್ರಚಾರ ಭಾಷಣ ಮಾಡುವುದನ್ನು ಬಿಡಲಿಲ್ಲ.
ಟಿಳಕರು ಇಂಗ್ಲೆಂಡಿನಲ್ಲಿದ್ದಾಗ ಬ್ರಿಟಿಷ್ ಸರ್ಕಾರ ದೇಶದಲ್ಲಿ ರೌಲೆಟ್ ಅಧಿನಿಯಮವನ್ನು ಜಾರಿಗೆ ತಂದು ವ್ಯಕ್ತಿಸ್ವಾತಂತ್ರ್ಯವನ್ನು ಹರಣಮಾಡಿತ್ತು. ಇದನ್ನು ವಿರೋಧಿಸುವುದಕ್ಕಾಗಿ ಗಾಂಧೀಜಿ ಪ್ರಚಂಡ ಚಳುವಳಿಯನ್ನು ಸಂಘಟಿಸಿದರು. ನಿಶ್ಯಸ್ತ್ರ ಜನರ ಮೇಲೆ ಪೋಲಿಸರು ಕಾರ್ಯಾಚರಣೆ ನಡೆಸಿದರು. ಜಲಿಯನ್ ವಾಲಾಬಾಗಿನಲ್ಲಿ ನೆರೆದ ಸಭೆಯ ಮೇಲೆ ಗೋಲಿಬಾರ್ ಆಯಿತು. ಸ್ತ್ರೀಯರನ್ನು ಬೆತ್ತಲೆ ಮಾಡಿ ಅವಮಾನಗೊಳಿಸಲಾಯಿತು. ಗಾಂಧೀಜಿ ಸತ್ಯಾಗ್ರಹ ಹೂಡಿದರು.
ಈ ಸಮಾಚಾರ ತಿಳಿದು ಟಿಳಕರು ಭಾರತಕ್ಕೆ ವಾಪಸ್ಸಾದರು. ಈ ನಡುವೆ ಹೋಮ್ ರೂಲ್ ಲೀಗಿನ ಚಳವಳಿ, ಮಾನನಷ್ಟ ಮೊಕದ್ದಮೆ ಇಂಗ್ಲೆಂಡ್ ವಾಸ ಇವುಗಳಿಂದ ಟಿಳಕರು ಸಾಲದಲ್ಲಿ ಮುಳುಗಿದರು. ರವೀಂದ್ರನಾಥ ಠಾಕೂರ್, ಅರವಿಂದ ಘೋಷ್ ಮೊದಲಾದವರೆಲ್ಲ ಬಂಗಾಲದಲ್ಲಿ ಹಣ ಕೂಡಿಸಿ ಟಿಳಕರಿಗೆ ಸಹಾಯ ಮಾಡಿದರು. ಅಲ್ಪಾವಧಿಯಲ್ಲಯೇ ಮೂರು ಲಕ್ಷ ರೂಪಾಯಿಗಳು ಸಂಗ್ರಹವಾದವು ಟಿಳಕರು ಋಣದಿಂದ ಪಾರಾದರು. ಮಾನನಷ್ಟ ಮೊಕದ್ದಮೆಯಲ್ಲಿ ಟಿಳಕರಿಗೆ ಸೋಲಾದರೂ ಅವರು ಆತ್ಮಗೌರವಕ್ಕಾಗಿ, ಭಾರತೀಯರ ಸ್ವಾಭಿಮಾನಕ್ಕಾಗಿ ಹೂಡಿದ ಮೊಕದ್ದಮೆ ಅದಾಗಿತ್ತು. ಈ ಮಾತನ್ನು ಗಾಂಧೀಜಿಯವರೇ ಮುಂಬಯಿಯಲ್ಲಿ ನಡೆದ ಪ್ರಚಂಡ ಸಭೆಯಲ್ಲಿ ಹೇಳಿದರು. ಸ್ವಾತಂತ್ರ್ಯ ಪ್ರಾಪ್ತಿಯ ವಿಚಾರದಲ್ಲಿ ಗಾಂಧೀಜಿ ಮತ್ತು ಟಿಳಕರ ದಾರಿಗಳು ಬೇರೆಬೇರೆಯಾಗಿದ್ದರೂ ಟಿಳಕರ ಸ್ವಾರ್ಥತ್ಯಾಗ ಮತ್ತು ವಿದ್ವತ್ತುಗಳನ್ನು ಗಾಂಧೀಜಿ ಮೆಚ್ಚಿದರು.
ಭಾರತಕ್ಕೆ ಹಿಂದಿರುಗಿದ ಮೇಲೆ ಟಿಳಕರು ಅಮೃತಸರ ಕಾಂಗ್ರೆಸ್ ಅಧಿವೇಶನಕ್ಕೆ ಹೋದರು. ಅಲ್ಲಿ ಮ್ಯಾಂಟೆಗ್ಯೂ-ಚೆಮ್ಸ್‍ಫರ್ಡ್ ಸುಧಾರಣೆಯ ಬಗ್ಗೆ ಗಾಂಧಿ ಹಾಗೂ ಟಿಳಕರಲ್ಲಿ ಮತಭೇದವುಂಟಾಯಿತು. ಸುಧಾರಣೆಗಳನ್ನು ಕೊಡುವುದಾದಲ್ಲಿ ಸರ್ಕಾರದೊಡನೆ ಸಹಕರಿಸುವುದಾಗಿ ಟಿಳಕರು ಇಂಗ್ಲೆಂಡಿನಲ್ಲಿ ಕೂಲಿಕಾರ ಪಕ್ಷದ ಮುಖಂಡರಿಗೆ ಮಾತುಕೊಟ್ಟು ಬಂದಿದ್ದರು. ಆಗ ಭಾರತದಲ್ಲಿ ಸರ್ಕಾರ ನಡೆಸಿದ ಅತ್ಯಾಚಾರದ ತೀವ್ರತೆ ಅವರಿಗೆ ತಿಳಿದಿರಲಿಲ್ಲ. ದೇಶದ ತುಂಬ ಹಬ್ಬಿದ ಅಸಹಕಾರ ಸತ್ಯಾಗ್ರಹ, ಕಾನೂನುಭಂಗ ಮೊದಲಾದ ಆಂದೋಲನದ ಬಿರುಗಾಳಿಗೆ ಗಾಂಧೀಜಿಯವರು ಸೂತ್ರಧಾರರಾಗಿದ್ದರು. ಅತ್ಯಾಚಾರದಿಂದ ರೊಚ್ಚಿಗೆದ್ದ ಜನರು ಸರ್ಕಾರದೊಂದಿಗೆ ಸಹಕರಿಸಲು ಸಿದ್ಧರಿರಲಿಲ್ಲ. ಅದಕ್ಕಾಗಿ ಗಾಂಧೀಜಿಯವರು ಸೂಚಿಸಿದ ಅಸಹಕಾರ ಕಾರ್ಯಕ್ರಮಕ್ಕೆ ಬೆಂಬಲ ದೊರೆಯಿತು. ಗಾಂಧಿ, ಟಿಳಕ್-ಇಬ್ಬರೂ ಮಹಾಪುರುಷರು. ಮತಭೇದ ಕೊನೆಯವರೆಗೆ ಉಳಿದರೂ ಒಬ್ಬರನ್ನೊಬ್ಬರು ಮನಃಪೂರ್ವಕವಾಗಿ ಗೌರವಿಸುತ್ತಿದ್ದರು.
ಟಿಳಕರು ಭಾರತೀಯ ಧರ್ಮಸಂಸ್ಕøತಿಗಳಲ್ಲಿ ಅಚಲಶ್ರದ್ಧೆಯುಳ್ಳವರಾಗಿದ್ದರೂ ಅವರದು ಕುರುಡುನಂಬಿಕೆಯಾಗಿರಲಿಲ್ಲ. ಹೆಣ್ಣುಮಕ್ಕಳ ಮದುವೆ 16 ವರ್ಷಗಳಿಗೆ ಮುಂಚೆ ಆಗಬಾರದು. 40 ವರ್ಷಗಳ ನಂತರ ಗಂಡಸು ಮದುವೆಯಾಗುವುದಾದರೆ ವಿಧವೆಯನ್ನೇ ಮದುವೆಯಾಗಬೇಕು. ಕಲಿತವರು ಕುಡಿಯುವುದಿಲ್ಲವೆಂಬ ಪ್ರತಿಜ್ಞೆ ಮಾಡಬೇಕು. ವರದಕ್ಷಿಣೆ ನಿಷೇಧಿಸಬೇಕು. ವಿಧವೆಯರ ಮುಂಡನ ಅನಗತ್ಯ. ಸಮಾಜ ಸುಧಾರಣೆಗಾಗಿ ಆದಾಯದ ಒಂದಂಶ ವ್ಯಯವಾಗಬೇಕು. ಇಂಥ ಕ್ರಾಂತಿಕಾರಕ ಸುಧಾರಣೆಗಳಿಗಾಗಿ ಅವರು ಹೆಣಗಾಡಿದರು. ಸುಧಾರಣೆಯೆಂದರೆ ಪಾಶ್ಚಾತ್ಯರ ನಕಲು ಅಲ್ಲ ಎಂಬುದಾಗಿ ಟಿಳಕರು ಪದೇಪದೇ ಹೇಳುತ್ತಿದ್ದರು. ಟಿಳಕರು ಸತ್ಯವಾದಿಗಳು, ಸತ್‍ಚಾರಿತ್ರ್ಯವುಳ್ಳವರು. ಅವರು ಭಾರತೀಯ ಸಮಾಜದೊಳಗಿನ ಮೂಲ ತಪ್ಪುಗಳನ್ನು ಶೋಧಿಸಿದರು. ಮಡಿವಂತಿಕೆಯ ಕುರುಡುಪರಂಪರೆಯಲ್ಲಿ ಅವರಿಗೆ ನಂಬಿಕೆ ಇರಲಿಲ್ಲ.
ಅಮೃತಸರ ಕಾಂಗ್ರೆಸ್ ಆಧಿವೇಶನದ ಅನಂತರ ಟಿಳಕರು ಮತ್ತು ಅವರ ಅನುಯಾಯಿಗಳು ಕಾಂಗ್ರೆಸ್ ಡೆಮೊಕ್ರಾಟಿಕ್ ಪಾರ್ಟಿ ಎಂಬ ಹೊಸ ಪಕ್ಷವನ್ನು ಸ್ಥಾಪಿಸಿ ಶಾಸನಸಭೆಗಳನ್ನು ಪ್ರವೇಶಿಸಲು ಚುನಾವಣಾ ಪ್ರಣಾಳಿಕೆಯನ್ನು ಸಿದ್ಧಪಡಿಸಿ ಪ್ರಚಾರ ನಡೆಸಿದರು. ಆದರೆ ರಾಷ್ಟ್ರಕ್ಕೆ ಬೇಕಾದುದನ್ನು ತೀರ್ಮಾನಿಸುವ ಏಕೈಕ ಸಂಸ್ಥೆ ರಾಷ್ಟ್ರೀಯ ಕಾಂಗ್ರೆಸ್; ಅದು ಅಮೃತಸರದಲ್ಲಿ ತೀರ್ಮಾನಿಸಿದ ಮಾರ್ಗವೇ ಸರಿ-ಎಂದು ಟಿಳಕರು ತಮ್ಮ ಭಾಷಣಗಳಲ್ಲಿ ಪ್ರಚಾರ ಮಾಡಿದರು. ಶಾಸನಸಭಾ ಪ್ರವೇಶವನ್ನು ಕಾಂಗ್ರೆಸ್ ಒಪ್ಪಿಕೊಂಡಿತ್ತು. ಆದರೆ ಮುಂದಿನ ಚುನಾವಣೆಯ ಸಂಘಟನೆಯ ಕ್ರಮ ಕೈಗೊಂಡಿರಲಿಲ್ಲ. ಟಿಳಕರು ಆ ಕೆಲಸ ಮಾಡಿದರು.
ಆ ವೇಳೆಗೆ ಟಿಳಕರ ಆರೋಗ್ಯ ಕ್ಷೀಣಿಸತೊಡಗಿತ್ತು. ವಾರಣಾಸಿಯ ಕಾಂಗ್ರೆಸ್ ಅಧಿವೇಶನಕ್ಕೆ ಟಿಳಕರು ಹೋಗಲಾಗಲಿಲ್ಲ. ಎಲ್ಲರೂ ಗಾಧೀಜಿಯವರ ಅಸಹಕಾರ ಯೋಜನೆಯ ಬಗ್ಗೆ ಟಿಳಕರ ಅಭಿಪ್ರಾಯವೇನೆಂದು ಕೇಳುವವರೇ. ಆದರೆ ಟಿಳಕರು ಗಾಂಧೀಜಿಗೆ ತಿಳಿಸಿದ್ದರು. ಕಾರ್ಯಕ್ರಮ ನನಗೆ ಒಪ್ಪಿಗೆಯಾದರೂ ದೇಶ ಈ ವಿಚಾರದಲ್ಲಿ ನಮ್ಮೊಂದಿಗಿರುವ ಬಗ್ಗೆ ನನ್ನ ಸಂದೇಹವಿದೆ. ಇದಕ್ಕೆ ನಾನು ಅಡ್ಡಬರುವುದಿಲ್ಲ. ನಿಮಗೆ ಯಶಸಿಗಲಿ. ಜನತೆ ನಿಮ್ಮ ಮಾತಿಗೆ ಕಿವಿಗೊಟ್ಟರೆ ನನ್ನ ಉತ್ಸಾಹದ ಬೆಂಬಲವೂ ನಿಮಗಿದೆಯೆಂದು ಭಾವಿಸಿರಿ-ಎಂದು ಅವರು ಹೇಳಿದ್ದರು.
ಗಾಂಧೀಜಿ, ಷೌಕತ್ ಅಲಿ ಇಬ್ಬರೂ ಮುಂಬಯಿಯಲ್ಲಿ ಟಿಳಕರನ್ನು ಕಂಡು ಮಾತನಾಡಿದರು. 1920ರ ದಿನಗಳವು. ಬಾಳ ಗಂಗಾಧರ ಟಿಳಕರು ಆಗ ಹಿರಿಯರ ಪ್ರತಿನಿಧಿಯಾಗಿ ಮಾತನಾಡಬಲ್ಲ ನಾಯಕರಾಗಿದ್ದರು. ಟಿಳಕರು ಆ ವರ್ಷದ ಕಾಂಗ್ರೆಸ್ ಅಧಿವೇಶನಕ್ಕೆ ಅಧ್ಯಕ್ಷರೆಂದು ಆಯ್ಕೆಯಾಗಲಿದ್ದರು. ಗಾಂಧೀಜಿ ಆಗಸ್ಟ್ 1ರಂದು ಅಸಹಕಾರ ಚಳವಳಿ ಪ್ರಾರಂಭವಾಗುವುದೆಂದು ಘೋಷಿಸಿದ್ದರು. ಅದೇ ದಿನ ಟಿಳಕರು ಈ ಲೋಕ ತ್ಯಜಿಸಿದರು. ದೈವವೇ ರಾಷ್ಟ್ರದ ನಾಯಕ ಪಟ್ಟವನ್ನು ಲೋಕಮಾನ್ಯ ಟಿಳಕರ ತಲೆಯಿಂದ ಮಹಾತ್ಮ ಗಾಂಧಿಯವರ ತಲೆಗೆ ವರ್ಗಾಯಿಸಿತ್ತು.
ವೇದಗಳ ಕಾಲದ ಲೆಕ್ಕವನ್ನು ಹಾಕಿದ ಈ ಮಾಹಾಪುರುಷ ತಮ್ಮ ಆಯುಷ್ಯದ ಗಣನೆಯನ್ನು ಸುಮಾರು ಸರಿಯಾಗಿಯೇ ಮಾಡಿಕೊಂಡಿರಬೇಕು. ಅನೇಕ ಮಿತ್ರರಿಗೆ ಬರೆದ ಪತ್ರಗಳನ್ನು ಟಿಳಕರು ತಮ್ಮ ಹದಗೆಡುತ್ತಿದ್ದ ಆರೋಗ್ಯದ ಬಗ್ಗೆ ಬರೆಯುತ್ತಲೇ ಇದ್ದರು. 1920ತ ಜುಲೈ ತಿಂಗಳಲ್ಲಿ ಅವರಿಗೆ ತೀವ್ರವಾದ ಮಲೇರಿಯ ಆಯಿತು. ಜ್ವರದಲ್ಲೇ ಅವರು ತಾಯಿಮಹಾರಾಜರ ದತ್ತಕ ಪ್ರಕರಣದಲ್ಲಿ ವಾದಿಸುವ ಸಿದ್ಧತೆ ಮಾಡಿಕೊಂಡರು. ಜುಲೈ 26ರಂದು ಜ್ವರಬಾಧೆ ವಿಕೋಪಕ್ಕೇರಿತು. ನ್ಯೂಮೋನಿಯ ಕಾಣಿಸಿಕೊಂಡಿತು. ಆದರೂ ಟಿಳಕರು ಮಾನಸಿಕವಾಗಿ ಹರ್ಷವಾಗಿಯೇ ಇದ್ದರು. ಎರಡು ದಿನಗಳಲ್ಲಿ ಜ್ವರ ಇಳಿಯಿತು. ಮತ್ತೆ ಏರಿತು. ಜ್ವರದ ತಾಪದಲ್ಲೂ ಅವರು, ಸ್ವರಾಜ್ಯ ಬೇಕು, 1818-1918 ಒಂದು ನೂರು ವರ್ಷಗಳ ಗುಲಾಮಗಿರಿ ಎಂದು ಹೇಳುತ್ತಿದ್ದರು, ನಮ್ಮ ಉಳಿವಿಗಾಗೆ ಸ್ವರಾಜ್ಯ ಸಾಧಿಸಬೇಕು - ಎಂಬುದು ಟಿಳಕರ ಕೊನೆಯ ಮಾತು. ಜುಲೈ 31ರ ಶನಿವಾರ ರಾತ್ರಿ 12-50ಕ್ಕೆ ಅವರು ತೀರಿಕೊಂಡರು.
ಮರುದಿನ ನಡೆದ ಅಂತಿಮಯಾತ್ರೆಗೆ ಎರಡು ಲಕ್ಷ ಜನ ಸೇರಿದ್ದರು. ಟಿಳಕರು ಬ್ರಾಹ್ಮಣರಾದ್ದರಿಂದ ಬ್ರಾಹ್ಮಣರೇ ಅವರ ಕಳೇಬರವನ್ನು ಹೊರಬೇಕೆಂದು ಕೆಲವರು ಸೂಚಿಸಿದರು. ಶವವನ್ನೆತ್ತಲು ಬಾಗಿದ್ದ ಗಾಂಧೀಜಿ ಸೆಟೆದು ನಿಂತರು. ಜನನಾಯಕರಿಗೆ ಜಾತಿಯಿಲ್ಲ ಎಂದು ಘೋಷಿಸಿ ಬಾಗಿ ಟಿಳಕರ ಕಳೇಬರದ ಸಿದಿಗೆಯ ಒಂದು ಭಾಗವನ್ನು ಎತ್ತಿದರು. ಷೌಕತ್ ಅಲಿ, ಡಾ.ಕಿಚಲು ಮುಂತಾದ ಮುಖಂಡರೆಲ್ಲ ಹೆಗಲು ಕೊಟ್ಟರು. ಅಂತಿಮಯಾತ್ರೆ ಚೌಪಾಟಿಯತ್ತ ಸಾಗಿತು.
ಟಿಳಕರು ರಾಜಕಾರಣವನ್ನು ಪ್ರವೇಶಿಸಿ ಭಾರತೀಯರ ದೃಷ್ಟಿಕೋನದಲ್ಲಿ ಒಂದು ಮಹತ್ತರ ಬದಲಾವಣೆಯನ್ನು ಉಂಟುಮಾಡಿದರು. ಆದರ್ಶವಾದಿ ರಾಷ್ಟ್ರಾಭಿಮಾನಿ ಬುದ್ದಿಜೀವಿಗಳನ್ನು ರಾಜಕೀಯದ ಕಣಕ್ಕೆ ತರಲು ನಿಮಿತ್ತರಾದ್ದು ಅವರ ದೊಡ್ಡ ಸಾಧನೆ. ಈ ನಾಯಕತ್ವಕ್ಕೆ ಜನಸಾಮಾನ್ಯರ ವಿಶಾಲವಾದ ಸುದೃಢವಾದ ಅಸ್ತಿಭಾರ ನಿರ್ಮಿತವಾಯಿತು. ಪಾಶ್ಚಾತ್ಯ ದೃಷ್ಟಿಯ ವಿದ್ಯಾವಂತರಾದ ಕೆಲವರ ವೇದಿಕೆಯಾಗಿದ್ದ ಕಾಂಗ್ರೆಸ್ಸನ್ನು ಜನತಾ ಚಳವಳಿಯ ರಂಗಸ್ಥಳವನ್ನಾಗಿ ಪರಿವರ್ತಿಸಿದವರು ಟಿಳಕರು. ಭಾರತದ ಸ್ವಾತಂತ್ರ್ಯ ಚಳವಳಿಗೆ ನೈತಿಕ ಬುನಾದಿಯನ್ನೂ ಹೊಸದೊಂದು ರಾಜಕೀಯ ವಿಧಾನವನ್ನೂ ದೊರಕಿಸಿಕೊಟ್ಟ ಟಿಳಕರು ಹೊಸದೊಂದು ಯುಗದ ಪ್ರವರ್ತಕರೆಂದು ಇತಿಹಾಸದಲ್ಲಿ ಚಿರಸ್ಥಾಯಿಯಾಗಿದ್ದಾರೆ. (ಜೆ.ಆರ್.ಪಿ.)