ಟೆಂಪರ ಜಲವರ್ಣ ಚಿತ್ರರಚನಾತಂತ್ರ. ಇದರಲ್ಲಿ ನೀರು ಮತ್ತು ಮೊಟ್ಟೆಯ ಹಳದಿ ಲೋಳೆ ಅಥವಾ ಮೊಟ್ಟೆ ಮತ್ತು ತೈಲ-ಇವನ್ನು ಬಂಧಕ ವಸ್ತುವನ್ನಾಗಿ ಇಲ್ಲವೆ ಮಾಧ್ಯಮವನ್ನಾಗಿ ಸೇರಿಸಿರುವಂಥ ಒಂದು ಎಮಲ್ಷನ್ನನ್ನು ಬಳಸಲಾಗುತ್ತದೆ. ಇದಕ್ಕೆ ತೆಳು ಪೊರೆಯನ್ನು ಉಂಟುಮಾಡುವ ಹಾಗೂ ಬಲು ಬೇಗನೆ ಒಣಗುವ ಗುಣವಿರುವುದು. ಇದು ನೀರಿನಲ್ಲಿ ಬೇಗ ಕರಗುವುದೂ ಉಂಟು. ಮೂಲ ಇಟಾಲಿಯನ್ ಶಬ್ದದಿಂದ ಹುಟ್ಟಿದ ಟಿಂಪರ ಪದಕ್ಕೆ ಇಂಥ ಎಮಲ್ಷನ್ನನ್ನು ಬಣ್ಣದ ವಸ್ತುವಿನೊಡನೆ ಸೇರಿಸಿ ಹದಮಾಡುವುದು ಎಂಬ ಅರ್ಥ ಇದೆ. ಟೆಂಪರ ತಂತ್ರವನ್ನು ಉಪಯೋಗಿಸಿ ರಚಿಸಿದ ಚಿತ್ರದಲ್ಲಿ ಶಾಶ್ವತವಾದ ಪಾರದರ್ಶಕತ್ವವೂ ಹೊಳೆಯುವ ಗುಣವೂ ಇರುವುದು.
ಬೇಕಾದ ಬಣ್ಣದ ಪುಡಿಗೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ತೀಡಿ ಸರಿ ಮಾಡಿ ಕೊಳ್ಳಬೇಕು. ಅನಂತರ ಅದಕ್ಕೆ ಎಷ್ಟು ಬೇಕೋ ಅಷ್ಟು ಮೊಟ್ಟೆಹಳದಿಯನ್ನು ಮಿಶ್ರಮಾಡಿ ಮೃದುಕುಂಚದಿಂದ ಲೇಪಿಸಬೇಕು. ಮಿಶ್ರ ಮಾಡುವ ಈ ದ್ರವದ ಪ್ರಮಾಣ, ಕುಂಚದಿಂದ ಬಣ್ಣ ತೆಗೆದುಕೊಳ್ಳುವ ಪ್ರಮಾಣ ಹಾಗೂ ಅದರಿಂದ ಬಣ್ಣ ಬಳಿಯುವ ರೀತಿ-ಇವುಗಳ ಮೇಲೂ ಟೆಂಪರ ವರ್ಣವಿಧಾನದ ಯಶಸ್ಸು ನಿಂತಿದೆ. ಇತ್ತೀಚೆಗೆ ಶುದ್ಧ ತತ್ತಿಯ ಹಳದಿ ದ್ರವದ ಹಾಗಿರುವ ವಿವಿಧ ಮಿಶ್ರಕ-ಮಾಧ್ಯಮಗಳನ್ನು ಕೃತಕವಾಗಿ ತಯಾರಿಸುತ್ತಾರೆ. ಲಿನ್ಸೀಡ್, ಕೇಸೀನ್, ಅರಬಿಕ್ ಹಾಗೂ ಚೆರೀ ಅಂಟು ಮುಂತಾದವನ್ನು ಇಲ್ಲಿ ಹೆಸರಿಸಬಹುದು. ಇವುಗಳಿಂದ ವರ್ಣವೈಖರಿ ಇನ್ನೂ ದಟ್ಟವಾಗಿ ಹಾಗೂ ನುಣುಪಾಗಿ ಶೋಭಿಸುವುದು.
ಟೆಂಪರ ವರ್ಣವಿಧಾನದ ಪ್ರಾಚೀನತೆಯನ್ನು ಸ್ಪಷ್ಟವಾಗಿ ನಿಗದಿ ಮಾಡುವುದು ಕಷ್ಟಸಾಧ್ಯ; ಅತ್ಯಂತ ಪ್ರಾಚೀನ ಕಾಲದಿಂದಲೂ ಈ ಪದ್ಧತಿ ಬಳಕೆಯಲ್ಲಿದ್ದಿರಬೇಕು. ಬಿeóÁಂಟೀಸ್ ಕಾಲದ ಚಿತ್ರಗಳಲ್ಲಿ ಕೆಲವನ್ನು ಈ ವಿಧಾನದಿಂದ ರಚಿಸಿದ್ದನ್ನು ಇಲ್ಲಿ ಉದಾಹರಿಸಬಹುದು. ಭಾರತದ ಅಜಂತಾ ಭಿತ್ತಿಚಿತ್ರಗಳನ್ನು ಈ ಪದ್ಧತಿಯಲ್ಲಿ ರೂಪಿಸಲಾಗಿದೆಯೆಂಬುದನ್ನು ಇತ್ತೀಚಿಗೆ ವಿದ್ವಾಂಸರು ವಿಶದ ಪಡಿಸಿದ್ದಾರೆ. ಚೀನದ ಚಾವೂ, ತಾಂಗ್, ಸುಂಗ್, ಮಿಂಗ್ ಮುಂತಾದ ರಾಜವಂಶಗಳ ಕಾಲದಲ್ಲಿ ಇದು ಬಳಕೆಯಲ್ಲಿತ್ತು. ಜಪಾನಿನ ಹೊರಿಯುಜಿ ಮಂದಿರದಲ್ಲಿರುವ ಅವಲೋಕಿತೇಶ್ವರನ ವರ್ಣಚಿತ್ರವನ್ನು ಈ ವಿಧಾನದಲ್ಲಿ ರಚಿಸಲಾಗಿದೆ. ಯೂರೋಪಿನಲ್ಲಿರುವ ಇಟ್ರುಸ್ಕನ್ ಚಿತ್ರ, ಗ್ರೀಸಿನ ಮಾಯಿಕೀನೀ ಚಿತ್ರ, ಈಜಿಪ್ಟಿನ ಪಿರಮಿಡ್ಡುಗಳಲ್ಲಿ ಚಿತ್ರಿಸಿರುವ ವರ್ಣಚಿತ್ರಗಳಲ್ಲೂ ಈ ವಿಧಾನವನ್ನನುಸರಿಸಿರುವುದು ಗಮನಾರ್ಹ. ಯೂರೋಪಿನ ಧಾರ್ಮಿಕ ಪುನರುಜ್ಜೀವನದ ಕಾಲದಲ್ಲಿ ಚೋಟೋ, ಮಸಾಚೀಯೊ, ಪಿಅರೊ ದೆಲಾ, ಫ್ರಾಂಚೆಸ್ಕ, ಮೈಕಲೇಂಜಲೋ ಮುಂತಾದ ಕಲಾವಿದರೂ ಈ ವಿಧಾನವನ್ನು ಅನುಸರಿಸಿದ್ದುಂಟು. 15ನೆಯ ಶತಮಾನದ ಇಟಾಲಿಯನ್ ಕಲಾವಿದರು ಟೆಂಪರ ವಿಧಾನವನ್ನು ಪರಿ ಪೂರ್ಣಗೊಳಿಸಿದರು. ಕಾರ್ಲೊ ಕ್ರೆವೆಲ್ಲಿ (ಸು. 1430-ಸು. 1493) ಸಾಂಡ್ರೊ ಬೊಟ್ಟಿಚೆಲಿ (1444-1510) ಮುಂತಾದ ಇಟಾಲಿಯನ್ ಕಲಾವಿದರನ್ನು ಇಲ್ಲಿ ಹೆಸರಿಸಬಹುದು. 15ನೆಯ ಶತಮಾನದ ಅನಂತರ ಟೆಂಪರ ವಿಧಾನ ವಿರಳವಾದರೂ ಸಂಪೂರ್ಣವಾಗಿ ಅಳಿದುಹೋಗಿಲ್ಲ. 19ನೆಯ ಶತಮಾನದಲ್ಲಿ ಟೆಂಪರ ಚಿತ್ರ ವಿಧಾನದ ಬಗೆಗೆ ಸಾಕಷ್ಟು ಅಧ್ಯಯನವನ್ನು ಪುನಃ ನಡೆಸಲಾಯಿತು. ಅದಕ್ಕೂ ತೈಲವರ್ಣವಿಧಾನಕ್ಕೂ ಇರುವ ವ್ಯತ್ಯಾಸವನ್ನು ಪರಿಗಣಿಸಲಾಯಿತು. 19-20ನೆಯ ಶತಮಾನಗಳಲ್ಲಿ ಅಮೆರಿಕ ಮತ್ತು ಯೂರೋಪಿನ ಕಲಾವಿದರು ಶುದ್ಧ ಟೆಂಪರ ಹಾಗೂ ತೈಲದೊಡನೆ ಮಿಶ್ರ ಮಾಡಿದ ಟೆಂಪರ ಎಂಬ ವಿಧಾನಗಳೆರಡನ್ನು ಬಳಸಲಾರಂಭಿಸಿದರು. ಬೆನ್ ಶಾನ್ ಹಾಗೂ ಆ್ಯಂಡ್ರು ವಿಥ್ ಮುಂತಾದ ಆಧುನಿಕ ಕಲಾವಿದರು ಈ ವರ್ಣಚಿತ್ರ ವಿಧಾನವನ್ನು ಪುನರುಜ್ಜೀವನಗೊಳಿಸಿದರು. ಶಾಶ್ವತವಾದ ಹಾಗೂ ವೈಶಿಷ್ಟ್ಯ ಪೂರ್ಣವಾದ ವರ್ಣವೈಖರಿ ಹಾಗೂ ಸೂಕ್ಷ್ಮ ರೇಖಾವಿನ್ಯಾಸ ಹಾಗೂ ಅದ್ಭುತವಾದ ಹೊಳಪು-ಇವು ಈ ವರ್ಣಚಿತ್ರವಿಧಾನದಲ್ಲಿ ರಚಿಸಿದ ಕೃತಿಗಳ ವೈಶಿಷ್ಟ್ಯಗಳಾಗಿವೆ. ಈ ದಿಸೆಯಲ್ಲಿ ಇದು ಫ್ರೆಸ್ಕೋ ಚಿತ್ರವಿಧಾನಕ್ಕಿಂತ ಹೆಚ್ಚು ಪರಿಣಾಮಕಾರಿ. (ಎಚ್.ಆರ್.ಆರ್.ಬಿ.)