ಡನ್, ಜಾನ್ 1573-1631. ಆಂಗ್ಲ ಆಧ್ಯಾತ್ಮಿಕ ಕವಿಗಳಲ್ಲಿ ಮೊದಲಿಗ. ಈತ ದೇವತಾಶಾಸ್ತ್ರಜ್ಞನೂ ಧರ್ಮೋಪದೇಶಕನೂ ಆಗಿದ್ದ. ಜನಿಸಿದ್ದು ಲಂಡನ್ನಿನಲ್ಲಿ. ಕಬ್ಬಿಣದ ಸಾಮಾನುಗಳ ವ್ಯಾಪಾರಿಯಾದ ತಂದೆ ಅನುಕೂಲ ಪರಿಸ್ಥಿತಿಯಲ್ಲಿದ್ದ. ತಾಯಿ ನಾಟಕಕಾರ ಜಾನ್ ಹೇವುಡ್ಡನ ಮಗಳು. ಮೂರು ವರ್ಷದವನಿರುವಾಗಲೇ ತಂದೆಯನ್ನು ಕಳೆದುಕೊಂಡ ಈತನನ್ನು ಕ್ಯಾತೊಲಿಕ್ ಧರ್ಮಾನುಸಾರ ಪೋಷಿಸಿ 1584ರಲ್ಲಿ ಆಕ್ಸ್ ಫರ್ಡಿಗೆ ಸೇರಿಸಲಾಯಿತು. ಅಲ್ಲಿಯ ಪದವಿಯನ್ನು ಪಡೆಯದೆಯೇ ಹೊರಬಿದ್ದ ಡನ್ ಮುಂದೆ ಕಾಯಿದೆಯ ಅಭ್ಯಾಸಕ್ಕಾಗಿ 1592ರಲ್ಲಿ ಲಿಂಕನ್ಸ್ ಇನ್ನನ್ನು ಪ್ರವೇಶಿಸಿದ. ಕಾಯಿದೆಯ ಅಭ್ಯಾಸವನ್ನೂ ಪೂರ್ಣಗೊಳಿಸಲಿಲ್ಲ. 1597ರಲ್ಲಿ ಮಹಾಮುದ್ರೆಯ ರಕ್ಷಕನಾಗಿದ್ದ. ತಾಮಸ್ ಎಜರ್ಟನ್ನನಿಗೆ ಕಾರ್ಯದರ್ಶಿಯಾದ. ಒಂದು ಅನೈತಿಕ ಪ್ರೇಮದ ವಿಷಯಕ್ಕೆ ಸಂಬಂಧಿಸಿದ ಅನೇಕ ವಿಡಂಬನೆಗಳನ್ನೂ ಭಾವಗೀತೆಗಳನ್ನೂ ಒಳಗೊಂಡ ಉತ್ತಮ ಮಟ್ಟದ ಕವಿತಾ ಸಾಹಿತ್ಯವನ್ನು 1592 ಮತ್ತು 1597ರ ನಡುವಿನ ಅವಧಿಯಲ್ಲಿ ರಚಿಸಿದ. ತನ್ನ ಪೋಷಕನಾದ ಇಗರ್ಟನ್ನನ ಸೋದರ ಮಗಳನ್ನು ಗೋಪ್ಯವಾಗಿ ವಿವಾಹವಾದುದರ ಮೂಲಕ ನೌಕರಿ ಹೋದದ್ದಲ್ಲದೆ ಕಾರಾಗೃಹವನ್ನೂ ಸೇರಬೇಕಾಗಿ ಬಂದಿತು. ಮದುವೆಯಾದ ಅನಂತರದ ಮೊದಲಿನ ಆರು ವರ್ಷಗಳನ್ನು ಈತ ಅತ್ಯಂತ ಹೀನಸ್ಥಿತಿಯಲ್ಲಿ ಕಳೆದದ್ದಲ್ಲದೆ ಅನೇಕ ಸಲ ಆತ್ಮಹತ್ಯೆಯ ವಿಚಾರವನ್ನೂ ಮನಸ್ಸಿನಲ್ಲಿ ತಂದುಕೊಂಡಂತಿದೆ. ಆ ಸಮಯದಲ್ಲಿ ಪ್ರತಿಭಾವಂತ ಗೆಳೆಯರು ಇವನಿಗೆ ನೆರವಾದರು. ಲಿಂಕನ್ಸ್ ಇನ್ನಿನಲ್ಲಿದ್ದಾಗ ಬರೆದ ಕ್ಯಾತೊಲಿಕ್ಕರು ಮತ್ತು ಆಂಗ್ಲಿಕನ್ನರ ನಡುವಿನ ವಾದ ವಿವಾದಗಳ ವ್ಯಾಸಂಗ ಕೃತಿಗಳು ಇವನಿಗೆ ಪ್ರಸಿದ್ಧಿಯನ್ನು ತಂದುವು. ಮೊದಲನೆಯ ಜೇಮ್ಸ್ ದೊರೆ ಇವನ ಕೃತಿಗಳನ್ನು ಅದರಲ್ಲೂ ಸ್ಯೂಡೋ-ಮಾರ್ಟಿರ್ ಎಂಬ ಕೃತಿಯನ್ನು ಗಮನಿಸಿ ಆಂಗ್ಲಿಕನ್ ಪುರೋಹಿತ ವರ್ಗಕ್ಕೆ ಸೇರುವಂತೆ ಇವನನ್ನು ಒತ್ತಾಯಪಡಿಸಿದ. ಕೆಲವು ವರ್ಷ ಧಾರ್ಮಿಕ ಅಧ್ಯಯನ ನಡೆಸಿ ಅನಂತರ 1615ರಲ್ಲಿ ಈತ ಆಂಗ್ಲಿಕನ್ ಚರ್ಚನ್ನು ಸೇರಿದ. 1608 ಮತ್ತು 1615ರ ನಡುವಿನ ಅವಧಿಯಲ್ಲಿ ಈತ ಅನೇಕ ಶೋಕಗೀತೆಗಳನ್ನು ರಚಿಸಿದ. 1611ರಲ್ಲಿ ಇವನ ದಿ ಅನಾಟಮಿ ಆಫ್ ದಿ ವಲ್ರ್ಡ್ ಎಂಬ ಕೃತಿ ಪ್ರಕಟವಾಯಿತು. ಇದು ಬೆಳಕಿಗೆ ಬಂದ ಈತನ ಮೊದಲ ಶೋಕಗೀತೆ. ಮುಂದೆ ಲಿಂಕನ್ಸ್ ಇನ್ನಿನಲ್ಲಿ ಡಿವಿನಿಟಿ ರೀಡರ್ ಎಂದು ನೇಮಕಗೊಂಡಾಗ ಈತ ಪ್ರತಿ ರವಿವಾರ ಎರಡು ಧರ್ಮೋಪನ್ಯಾಸಗಳನ್ನು ಕೊಡಬೇಕಾಗಿತ್ತು. ಈ ಕಾರ್ಯ ನಿರ್ವಹಣೆಯಿಂದಾಗಿ ಈತ ಇಂಗ್ಲೆಂಡಿನಲ್ಲಿಯೇ ಅತ್ಯಂತ ಪರಿಣಾಮಕಾರಿಯಾದ ಧರ್ಮಬೋಧಕನೆಂದು ಖ್ಯಾತಿಪಡೆದ. 1617ರಲ್ಲಿ ಇವನ ಪತ್ನಿ ತೀರಿಕೊಂಡಳು. 1621ರಲ್ಲಿ ಈತ ಸೇಂಟ್ ಪಾಲ್‍ನ ಡೀನ್ ಆದ. 1624ರಲ್ಲಿ ಈತ ಅಸದೃಶವಾದ ಡಿವೋಷನ್ಸ್ ಅಪಾನ್ ಎಮೆರ್ಜೆಂಟ್ ಅಕೇಷನ್ಸ್ ಎಂಬ ಗದ್ಯಕೃತಿಯನ್ನು ಪ್ರಕಟಿಸಿದ. 1631ರ ಮಾರ್ಚ್ 31ರಂದು ಈತ ಅಸು ನೀಗಿದ.

ಡನ್ನನ ಕಾವ್ಯಸಾಹಿತ್ಯ ವಿಡಂಬನೆ, ಚುಟುಕು ನುಡಿ, ಸ್ತೋತ್ರಗೀತೆ, ಸಮಾಧಿಲೇಖ, ಚತುರ್ದಶಪದಿ, ಶೋಕಗೀತೆ, ಹಾಡು ಮುಂತಾದ ರೂಪಗಳಲ್ಲಿದೆ. ಇವನ ಕಾವ್ಯಕೃತಿಗಳಲ್ಲಿ ಕೆಲಮಟ್ಟಿಗೆ ಅಹಂಕಾರ ತೋರಿಬರುತ್ತಿದ್ದರೂ ಅವು ಉದಾತ್ತವಾದುವೂ ಉತ್ತಮಮಟ್ಟದ ಕಲ್ಪನಾಶಕ್ತಿಯನ್ನು ತೋರಿಸುವಂಥವೂ ಆಗಿವೆ. ಸುಮಾರು ಅರ್ಧ ಶತಮಾನದ ಕಾಲ ಆಂಗ್ಲ ಸಾಹಿತ್ಯದ ಮೇಲೆ ಡನ್ನನ ಪ್ರಭಾವವಿದ್ದಿತೆನ್ನಬಹುದು. 17ನೆಯ ಶತಮಾನದ ಆಧ್ಯಾತ್ಮಿಕ ಕವಿಗಳಿಗೆ ಇವನ ಕಾವ್ಯವಿಧಾನ ಮೇಲುಪಂಕ್ತಿಯಾಗಿತ್ತು. ಡನ್ನನ ಕವನಗಳಲ್ಲಿ ಭಾವೋದ್ರೇಕ ಮತ್ತು ವಿವೇಕಗಳ ಮಿಲನ ಮತ್ತು ಬೌದ್ಧಿಕ ತೀವ್ರತೆಗಳನ್ನು ಕಾಣಬಹುದು. ಸಾಮಾನ್ಯ ಇಲ್ಲವೇ ಗ್ರಾಮ್ಯ ಶಬ್ದಗಳ ಅನಿರೀಕ್ಷಿತ ಬಳಕೆ ವಿರೋಧಭಾಸಾಲಂಕಾರ, ಭೂಗೋಳ, ರಸತಂತ್ರ ಪಾಂಡಿತ್ಯದ ತತ್ತ್ವಜಿಜ್ಞಾಸೆ ಮತ್ತು ಇತರ ಮೂಲಗಳಿಂದ ತೆಗೆದುಕೊಂಡ ವಿಚಿತ್ರ ಶಬ್ದಚಿತ್ರಗಳು-ಇವು ಡನ್ನನ ಕವಿತಾಸಾಹಿತ್ಯಕ್ಕೆ ವಿಶಿಷ್ಟತೆಯನ್ನು ತಂದಿವೆ. ದಿ ಅನಾಟಮಿ ಆಫ್ ದಿ ವಲ್ರ್ಡ್ ಮತ್ತು ಪ್ರೋಗ್ರೆಸ್ ಆಫ್ ದಿ ಸೋಲ್ ಇವು ಇವನ ಗಮನಾರ್ಹ ಶೋಕಗೀತೆಗಳು. ಪತ್ರಗಳು, ಡಿವೋಷನ್ಸ್ ಅಪಾನ್ ಎಮರ್ಜೆಂಟ್ ಅಕೇಷನ್ಸ್ ಮತ್ತು ಒಂದುನೂರ ಎಂಬತ್ತಕ್ಕಿಂತಲೂ ಹೆಚ್ಚು ಧರ್ಮೋಪನ್ಯಾಸಗಳು ಡನ್ನನ ಗದ್ಯಸಾಹಿತ್ಯದಲ್ಲಿ ಮುಖ್ಯವಾದುವು. ಇವನ ಹೆಚ್ಚು ಪತ್ರಗಳು ಚತುರೋಕ್ತಿಗಳಿಂದ ತುಂಬಿದ್ದು ಪ್ರತಿಭೆಯನ್ನು ಸಾರುತ್ತವೆ. ಅವುಗಳಲ್ಲಿ ಕೆಲವು ಗಂಭೀರ ವಿಷಯಗಳ ಮೇಲಿನ ಪ್ರಬಂಧಗಳೂ ಆಗಿವೆ. ಡಿವೋಷನ್ಸ್ ಎಂಬುದು ಈತ 1623ರಲ್ಲಿ ಭಯಂಕರ ಕಾಯಿಲೆಯೊಂದರಿಂದ ಬಳಲುತ್ತಿದ್ದಾಗ ತನ್ನಲ್ಲಿ ಏಳುತ್ತಿದ್ದ ಭಾವನೆಗಳ ಸಂಬಂಧವಾಗಿ ಮಾಡಿಟ್ಟುಕೊಂಡಿದ್ದ ಟಿಪ್ಪಣಿಗಳನ್ನು ಅವಲಂಬಿಸಿ ಬರೆದ ಗದ್ಯಕೃತಿಯಾಗಿದ್ದು ಇವನ ಕಾಯಿಲೆಯ 23 ಮಟ್ಟಗಳ ನಿರೂಪಣೆಯಾಗಿದೆ. ಡನ್ನನ ಧರ್ಮೋಪನ್ಯಾಸಗಳು ಉತ್ತಮ ಮಟ್ಟದವಾಗಿದ್ದು ಅತ್ಯಂತ ಪರಿಣಾಮಕಾರಿಯಾಗಿದ್ದುವು. 1622ರಲ್ಲಿ ವರ್ಜೀನಿಯಾ ಕಂಪನಿಯ ಸಮ್ಮುಖದಲ್ಲಿ ಇತ್ತ ಇವನ ಒಂದು ಉಪನ್ಯಾಸ ಆಂಗ್ಲಭಾಷೆಯಲ್ಲಿ ಮೊತ್ತಮೊದಲ ಧರ್ಮಪ್ರಚಾರಕ ಉಪನ್ಯಾಸವಾಗಿದ್ದು ಬಹಳ ಸೊಗಸಾದುದಾಗಿದೆ. ಡೆತ್ಸ ಡ್ಯೂಯೆಲ್ ಎಂಬುದು ಈತನ ಪ್ರಸಿದ್ಧ ಶವಸಂಸ್ಕಾರದ ಧರ್ಮೋಪನ್ಯಾಸವಾಗಿದೆ. (ಜಿ.ಕೆ.ಯು.)