ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಡಿ ಮಾಯ್ನ್‌

ಡಿ ಮಾಯ್ನ್

	ಅಮೆರಿಕ ಸಂಯುಕ್ತ ಸಂಸ್ಥಾನಗಳ ಐಯೊವ ರಾಜ್ಯದ ಮುಖ್ಯಪಟ್ಟಣ, ಪೋಕ್ ಕೌಂಟಿಯ ಆಡಳಿತ ಕೇಂದ್ರ.  ಉ.ಅ. 41ಲಿ 35' ಮತ್ತು ಪ.ರೇ. 93ಲಿ 31' ಮೇಲೆ ಡಿ ಮಾಯ್ನ್ ಮತ್ತು ರ್ಯಾಕೂನ್ ನದಿಗಳ ಸಂಗಮದ ಬಳಿ, ಮುಸುಕಿನಜೋಳ ಬೆಳೆಯುವ ಪರದೇಶದ ನಡುವೆ ಇದೆ.  ನಗರದ ಜನಸಂಖ್ಯೆ 2,01,404 (1970).  ಇದು ರಾಜ್ಯದ ಅತ್ಯಂತ ದೊಡ್ಡ ನಗರ.

ಈ ಪ್ರದೇಶದಲ್ಲಿ ಪ್ರಥಮವಾಗಿ ವಸತಿ ಏರ್ಪಟ್ಟಿದ್ದು 1843ರಲ್ಲಿ, ಈ ಸುತ್ತಿನ ಇಂಡಿಯನರ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಇಲ್ಲಿ ಒಂದು ಸೈನಿಕ ಠಾಣ್ಯ ಸ್ಥಾಪಿತವಾದಾಗ. ಆ ವರ್ಷ ಇಲ್ಲಿಗೆ ಬಿಳಿಯರ ವಲಸೆಗೂ ಅವಕಾಶ ನೀಡಲಾಯಿತು. 1851ರ ವೇಳೆಗೆ ಇದು ತಕ್ಕಮಟ್ಟಿಗೆ ಬೆಳೆದು ಪಟ್ಟಣದ ಸ್ಥಾನಮಾನ ಪಡೆಯಿತು. 1857ರಲ್ಲಿ ರಾಜ್ಯದ ರಾಜಧಾನಿಯನ್ನು ಐಯೊವ ಪಟ್ಟಣದಿಂದ ಇಲ್ಲಿಗೆ ವರ್ಗಮಾಡಲಾಯಿತು. ಆಗ ಇದಕ್ಕೆ ನಗರದ ಸನ್ನದನ್ನು ನೀಡಲಾಯಿತು. (ಆರ್.ಸಿ.ಎಚ್.)

ನಗರದ ಪೂರ್ವಭಾಗದಲ್ಲಿರುವ ರಾಜ್ಯವಿಧಾನ ಭವನ (ಕ್ಯಾಪಿಟಾಲ್) 1884ರಲ್ಲಿ ನಿರ್ಮಿತವಾಯಿತು. ಇದು 19ನೆಯ ಶತಮಾನದಲ್ಲಿ ಪುನರುತ್ಥಾನಗೊಂಡ ಅಭಿಜಾತ ರೋಮನ್ ಶೈಲಿಯಲ್ಲಿದೆ. ರಾಜ್ಯದ ಐತಿಹಾಸಿಕ ಸ್ಮಾರಕ ಕಲಾಭವನ ಹತ್ತಿರದಲ್ಲೇ ಇದೆ. ನೈಸರ್ಗಿಕ ಪರಿಸರದ ಪ್ರಯೋಜನ ಪಡೆದು ಯೋಜಿತವಾದ ಪ್ರಥಮ ಅಮೆರಿಕನ್ ನಗರಗಳಲ್ಲಿ ಇದೂ ಒಂದು. ನದಿಗೆ ಇದಿರಾಗಿರುವ ಗ್ರಾಂಡ್ ಅವೆನ್ಯೂದಲ್ಲಿ 1924ರಲ್ಲಿ ನಿರ್ಮಿತವಾದ ನಗರ ಭವನ, ಪೌರ ನ್ಯಾಯಾಲಯ ಮತ್ತು ದೊಡ್ಡ ಬಂಗಲೆಗಳು ಇವೆ. ಈ ರಸ್ತೆಯ ಇಬ್ಬದಿಯಲ್ಲಿ ಸಾಲುಮರಗಳೂ ಇದಕ್ಕೆ ಅಪೂರ್ವ ಶೋಭೆ ತಂದಿವೆ.

ಡಿ ಮಾಯ್ನ್‍ನ ಸನ್ನಿವೇಶವೂ ಸುತ್ತ ಇರುವ ಕಲ್ಲಿದ್ದಲೂ ಗಣಿಗಳೂ ಇದರ ಶೀಘ್ರ ಬೆಳೆವಣಿಗೆಗೆ ಕಾರಣ. ಇದು ಮುಖ್ಯ ಸಾರಿಗೆ ಕೇಂದ್ರ, ವಾಣಿಜ್ಯ ಸ್ಥಳ, ಮಾಂಸ, ಬಟ್ಟೆ, ಇಟ್ಟಿಗೆ ಮತ್ತು ಹೆಂಚು, ವಿಮಾನದ ಬಿಡಿಭಾಗಗಳು, ಕೃಷಿ ಯಂತ್ರ ಇವು ಇಲ್ಲಿ ವಯಾಪಾರವಾಗುವ ಮುಖ್ಯವಸ್ತುಗಳು. ಇಲ್ಲಿ ವಿಮಾ ಕಂಪನಿಗಳ ಕಚೇರಿಗಳಿವೆ. ಇದೊಂದು ಪ್ರಕಾಶನ ಕೇಂದ್ರ ಕೂಡ. ಇಲ್ಲಿ ಅನೇಕ ಪತ್ರಿಕೆಗಳೂ ನಿಯತಕಾಲಿಕಗಳೂ ಪ್ರಕಟವಾಗುತ್ತವೆ. ಗ್ರ್ಯಾಂಡ್ ವ್ಯೂ ಜ್ಯೂನಿಯರ್ ಕಾಲೇಜ್, ಡ್ರೇಕ್ ವಿಶ್ವವಿದ್ಯಾಲಯ, ಇವು ಪ್ರಮುಖ ಶಿಕ್ಷಣ ಸಂಸ್ಥೆಗಳು. ಡಿ ಮಾಯ್ನ್ ಕಲಾ ಕೇಂದ್ರದಲ್ಲಿ ಅನೇಕ ಉತ್ತಮ ಕಲಾಕೃತಿಗಳಿರುವುದಲ್ಲದೆ ಇಲ್ಲಿ ಒಂದು ಕಲಾ ತರಗತಿಯೂ ನಡೆಯುತ್ತದೆ. ಡಿ ಮಾಯ್ನ್ ಒಂದು ಕ್ರೀಡಾ ಕೇಂದ್ರ. ಇಲ್ಲಿ 1,400 ಎಕರೆಗಳ ಗಾಲ್ಫ್ ಮೈದಾನವಿದೆ. ಡಿ ಮಾಯ್ನ್ ಬಳಿ ಇರುವ ವಾಲ್‍ನಟ್ ವೂಡ್ಸ್ ರಾಜ್ಯ ಉದ್ಯಾನ ಪ್ರಸಿದ್ಧವಾದ್ದು.