ತಲಕಾಡು
ಮೈಸೂರು ಜಿಲ್ಲೆಯ (ಕರ್ನಾಟಕ ರಾಜ್ಯ) ತಿರುಮಕೂಡ್ಲು ನರಸೀಪುರದಲ್ಲಿರುವ ಒಂದು ಪ್ರಾಚೀನ ಪಟ್ಟಣ, ಹಿಂದೂಗಳ ಪುಣ್ಯಕ್ಷೇತ್ರ, ಹೋಬಳಿಯ ಕೇಂದ್ರ. ಕಾವೇರಿ ನದಿಯ ಎಡದಂಡೆಯ ಮೇಲೆ, ಉ. ಅ. 12o 11' ಮತ್ತು ಪೂ. ರೇ, 77o 2' ನಲ್ಲಿ, ಮೈಸೂರಿನ ಆಗ್ನೇಯಕ್ಕೆ 45 ಕಿಮೀ. ದೂರದಲ್ಲಿದೆ. 1868ರ ವರೆಗೂ ಇದು ತಲಕಾಡು ತಾಲ್ಲೂಕಿನ ಆಡಳಿತ ಕೇಂದ್ರವಾಗಿತ್ತು. ಆ ವರ್ಷ ತಿರುಮಕೂಡ್ಲು ನರಸೀಪುರ ಆಡಳಿತ ಕೇಂದ್ರವಾಯಿತು. ಅನಂತರ ತಾಲ್ಲೂಕಿನ ಹೆಸರನ್ನೂ ತಿರುಮಕೂಡ್ಲು ನರಸೀಪುರವೆಂದು ಬದಲಾಯಿಸಲಾಯಿತು (ಎಂ.ವಿ.)
ಪುರಾಣ, ಇತಿಹಾಸ : ತಲಾ ಮತ್ತು ಕಾಡ ಎಂಬ ಕಿರಾತಸೋದರರಿಂದ ಇದಕ್ಕೆ ತಲಕಾಡು ಎಂಬ ಹೆಸರು ಬಂತೆಂದೂ ಆನೆಯ ಜನ್ಮ ಪಡೆದಿದ್ದ ಸೋಮದತ್ತನೆಂಬ ಋಷಿಯೂ ಅವನ ಶಿಷ್ಯರೂ ಇಲ್ಲಿ ಮೋಕ್ಷ ಪಡೆದುದರಿಂದ ಇದು ಗಜಾರಣ್ಯಕ್ಷೇತ್ರವಾಯಿತೆಂದೂ ಪೌರಾಣಿಕ ಕಥೆಯಿದೆ. ತಲವನಪುರವೆಂಬುದು ಇದರ ಇನ್ನೊಂದು ಹೆಸರು. ಹಿಂದಿನ ಕಾಲದಲ್ಲಿ ಸೋಮದತ್ತನೆಂಬ ಒಬ್ಬ ಬ್ರಾಹ್ಮಣ, ಸಂಸಾರದಲ್ಲಿ ವಿರಕ್ತಿ ತಳೆದು ತನ್ನ ಶಿಷ್ಯರೊಡನೆ ಕಾಶೀಕ್ಷೇತ್ರಕ್ಕೆ ಹೋಗಿ ಮೋಕ್ಷ ಪಡೆಯಲು ಕೈಲಾಸನಾಥನಾದ ಶಿವನನ್ನು ಕುರಿತು ಉಗ್ರ ತಪ್ಪಸ್ಸನ್ನು ಆಚರಿಸಿದ, ಶಿವ ಪ್ರತ್ಯಕ್ಷನಾಗಿ, ಒಂದು ವರವನ್ನು ಬೇಡಲು ಸೋಮದತ್ತನಿಗೆ ಹೇಳಿದ. ಮನುಷ್ಯ ಯಾವ ಸ್ಥಳಕ್ಕೆ ಹೋದರೆ ಜನನ ಮರಣಾದಿ ದುಃಖಗಳಿಗೆ ಆಸ್ಪದವಿಲ್ಲದೆ, ಸದಾ ಆನಂದದಿಂದಿರಲು ಸಾಧ್ಯವೋ ಅಂಥ ಸ್ಥಳವನ್ನು ತಿಳಿಸಬೇಕೆಂದು ಸೋಮದತ್ತ ಕೋರಿದ. ಆಗ ಶಂಭು ಅವನಿಗೆ ಋಚೀಕ ಮಹರ್ಷಿಯ ಆಶ್ರಮವಿರುವ ಸಿದ್ಧಾರಣ್ಯ ಕ್ಷೇತ್ರಕ್ಕೆ ಹೋಗಬೇಕೆಂದೂ ಆ ಸ್ಥಳದಲ್ಲಿ ತಾನು ವೈದ್ಯನಾಥನೆಂಬ ಹೆಸರಿನಿಂದ ನೆಲೆಸುವುದಾಗಿಯೂ ಹೇಳಿ ಅಂತರ್ಧಾನನಾದ. ಕಾವೇರಿ-ಕಪಿಲಾ ನದಿಗಳ ಸಂಗಮಸ್ಥಾನದ ಹತ್ತಿರವಿದ್ದ ಈ ಸ್ಥಳಕ್ಕೆ ಸೋಮದತ್ತ ತನ್ನ ಶಿಷ್ಯರೊಂದಿಗೆ ಪ್ರಯಾಣ ಬೆಳೆಸಿದ. ವಿಂಧ್ಯ ಪರ್ವತಗಳ ಹತ್ತಿರ ಬಂದಾಗ ಆನೆಗಳು ಅವರನ್ನು ಕೊಂದವು. ಅವರು ಆನೆಗಳಾಗಿ ಹುಟ್ಟಿ ಈ ಸ್ಥಳವನ್ನು ಸೇರಿದರು. ಇಲ್ಲಿ ಈಶ್ವರ ಒಂದು ಶಾಲ್ಮಲೀವೃಕ್ಷದ ಪೊದರಿನ ಕೆಳಗೆ ಲಿಂಗರೂಪಿಯಾಗಿರುವುದನ್ನು ಅರಿತು ಆ ಆನೆಗಳು ಪ್ರತಿನಿತ್ಯವೂ ಸಮೀಪದಲ್ಲಿದ್ದ ಗೋಕರ್ಣತೀರ್ಥವೆಂಬ ಸರೋವರದಲ್ಲಿ ಮಿಂದು ಅಲ್ಲಿಯ ನೀರನ್ನು ಮತ್ತು ಕೆಂದಾವರೆಗಳನ್ನು ಸೊಂಡಿಲುಗಳಲ್ಲಿ ತಂದು ಲಿಂಗದ ಮೇಲೆ ಹಾಕಿ ಪೂಜೆಮಾಡಿ ಹೋಗುತ್ತಿದ್ದುವು. ಆ ಕಾಡಿನಲ್ಲಿ ವಾಸಿಸುತ್ತಿದ್ದ ತಲಾ ಮತ್ತು ಕಾಡರು ಇದನ್ನು ನೋಡಿ, ಮರದ ಬುಡದಲ್ಲಿ ಏನಿದೆಯೆಂಬ ಕುತೂಹಲದಿಂದ ತಮ್ಮ ಹರಿತವಾದ ಕೊಡಲಿಗಳಿಂದ ಅದಕ್ಕೆ ಬಲವಾದ ಏಟು ಹಾಕಿದರು. ಮರದ ಅಡಿಯಲ್ಲಿದ್ದ ಲಿಂಗ ಭಿನ್ನವಾಗಿ ಅದರಿಂದ ರಕ್ತ ಹರಿಯತೊಡಗಿತು. ಬೇಡರು ಭೀತರಾದರು. ಶಾಲ್ಮಲೀ ವೃಕ್ಷದ ಎಲೆಗಳನ್ನೂ ಫಲವನ್ನೂ ಅರೆದು ಅದರ ರಸವನ್ನು ಗಾಯಕ್ಕೆ ಹಚ್ಚಬೇಕೆಂದು ಅಶರೀರವಾಣಿಯೊಂದು ತಿಳಿಸಿತು. ಬೇಡರು ಹಾಗೆ ಮಾಡಿದ ಕೂಡಲೇ ರಕ್ತ ನಿಂತಿತು. ಆ ವಾಣಿಯ ಆದೇಶದ ಮೇರೆಗೆ ಬೇಡರು ಹಾಲನ್ನು ಕುಡಿಯಲು ಅವರು ತಮ್ಮ ಸ್ವರೂಪವನ್ನು ಬಿಟ್ಟು ಗಣೇಶ್ವರಾದರು. ಮರುದಿನ ಬಂದ ಆನೆಗಳು ತಮ್ಮ ನಿತ್ಯಕರ್ಮವನ್ನಾಚರಿಸಿ ಬಾಯಾರಿಕೆಯಿಂದ ಹಾಲನ್ನು ಕುಡಿಯಲು ಅವಕ್ಕೂ ಮುಕ್ತಿ ದೊರಕಿತು. ಆದ್ದರಿಂದ ಆ ಸ್ಥಳಕ್ಕೆ ತಲಕಾಡು ಮತ್ತು ಗಜಾರಣ್ಯಕ್ಷೇತ್ರ ಎಂಬ ಹೆಸರುಗಳು ಬಂದುವು. ಅಲ್ಲದೆ ತನ್ನ ತಲೆಯ ಗಾಯಕ್ಕೆ ತಾನೆ ಔಷಧವನ್ನು ಹೇಳಿದ್ದನಾದ್ದರಿಂದ ಈಶ್ವರನಿಗೆ ವೈದ್ಯನಾಥನೆಂಬ ಹೆಸರು ಅನ್ವರ್ಥವಾಯಿತೆಂದು ಹೇಳಲಾಗಿದೆ. ತಲಕಾಡನ್ನು ಕುರಿತ ಪ್ರಥಮ ಉಲ್ಲೇಖ ಗಂಗರ ಆಳ್ವಿಕೆಯ ಕಾಲಕ್ಕೆ ಸಂಬಂಧಿಸಿದ್ದಾಗಿದೆ. ಮೊದಲು ಕೋಳಾಲದಲ್ಲಿ ಆಳುತ್ತಿದ್ದ ಗಂಗರು 500ರ ಸುಮಾರಿಗೆ ರಾಜಧಾನಿಯನ್ನು ತಲಕಾಡಿಗೆ ಬದಲಾಯಿಸಿರಬಹುದು. ಗಂಗರಾಜನಾದ ಹರಿವರ್ಮ ಇಲ್ಲಿ ನೆಲೆಸಿದ್ದನೆಂದು ಒಂದು ಶಾಸನದಲ್ಲಿದೆ. ಗಂಗರಾಜ ಶ್ರೀಪುರುಷನ ಕಾಲದ ಶಾಸನಗಳು ಇಲ್ಲಿ ದೊರೆತಿವೆ. ತಲಕಾಡು ಚೋಳರ ಆಳ್ವಿಕೆಗೆ ಸೇರಿದಾಗ ಅವರು ಇದನ್ನು ರಾಜರಾಜಪುರವೆಂದು ಕರೆದರು. ಚೋಳರ ಆಳ್ವಿಕೆಯ ಒಂದು ನೂರು ವರ್ಷಗಳಲ್ಲಿ ತಲಕಾಡು ಏಳಿಗೆ ಹೊಂದಿತು. ಆಗ ಇಲ್ಲಿ ಅನೇಕ ಶಿವ ಮತ್ತು ವಿಷ್ಣು ದೇವಾಲಯಗಳು ನಿರ್ಮಿತವಾದುವೆಂದು ಹೇಳಲಾಗಿದೆ.
1116 ರಲ್ಲಿ ಹೊಯ್ಸಳ ವಿಷ್ಣುವರ್ಧನನ ದಂಡನಾಯಕ ಗಂಗರಾಜ, ಚೋಳರ ಮೇಲೆ ಯುದ್ಧ ಮಾಡಿ ಅವರನ್ನು ಸೋಲಿಸಿ ತಲಕಾಡನ್ನು ವಶಪಡಿಸಿಕೊಂಡ. ತಲಕಾಡುಗೊಂಡನೆಂಬ ಬಿರುದನ್ನು ವಿಷ್ಣುವರ್ಧನ ಧರಿಸಿದ. ಅವನೂ ಅವನ ತರುವಾಯ ಬಂದ ರಾಜರೂ ತಲಕಾಡನ್ನು 14ನೆಯ ಶತಮಾನದ ಮಧ್ಯಭಾಗದವರೆಗೆ ತಮ್ಮ ವಶದಲ್ಲಿಟ್ಟುಕೊಂಡಿದ್ದರು, ತಲಕಾಡು ಈ ಸಮಯದಲ್ಲಿ ಅತ್ಯಂತ ಉನ್ನತಿ ಹೊಂದಿ ಏಳು ಪುರಗಳನ್ನೂ ಐದು ಮಠಗಳನ್ನೂ ಒಳಗೊಂಡು ಹೊಯ್ಸಳರ ಉಪರಾಜಧಾನಿಯಾಗಿ ಮೆರೆಯಿತÀು. 3 ನೆಯ ಬಲ್ಲಾಳನ ಕಾಲದಲ್ಲಿ (1291-1342) ಅವನ ಮುಖ್ಯಮಂತ್ರಿಯಾದ ಪೆರುಮಾಳ್ ಡಣಾಯಕ ತಲಕಾಡಿನ ಆಚೆಯ ದಡದ ಮೇಲಿರುವ ಒಂದು ಪಾಠಶಾಲೆಯನ್ನು ಕಟ್ಟಿಸಿ ಅದಕ್ಕೆ ಜಹಗೀರುಗಳನ್ನು ಹಾಕಿಕೊಟ್ಟ. ಹೊಯ್ಸಳ ಚಕ್ರವರ್ತಿಗಳು ಶಿವ ಮತ್ತು ವಿಷ್ಣು ದೇವಾಲಯಗಳೆರಡಕ್ಕೂ ಸಹಾಯ ಸಲ್ಲಿಸುತ್ತಿದ್ದರು. 1117ರಲ್ಲಿ ವಿಷ್ಣುವರ್ಧನ ತಲಕಾಡಿನಲ್ಲಿ ಕೀರ್ತಿನಾರಾಯಣ ದೇವಾಲಯವನ್ನು ಕಟ್ಟಿಸಿದ. ಅನಂತರ ಬಂದ ರಾಜರು ಅದಕ್ಕೆ ಅನೇಕ ಕಾಣಿಕೆಗಳನ್ನು ನೀಡಿದರು.
14ನೆಯ ಶತಮಾನದ ಉತ್ತರಾರ್ಧದಲ್ಲಿ ತಲಕಾಡು ವಿಜಯನಗರದ ಅರಸರಿಗೆ ಸೇರಿತು. 1384ರಲ್ಲಿ ಸಾಳ್ವ ಮನೆತನಕ್ಕೆ ಸೇರಿದ ರಾಮದೇವ ತಲಕಾಡಿನಲ್ಲಿ ಅಧಿಕಾರಿಯಾಗಿ ರಾಜ್ಯಭಾರ ಮಾಡುತ್ತಿದ್ದನೆಂದೂ ಅವನು ಮುಸ್ಲಿಮರೊಂದಿಗೆ ಯುದ್ಧಮಾಡಿ ತೋತಕೊಂಡ ಎಂಬಲ್ಲಿ ಸತ್ತನೆಂದೂ ತಿಳಿಯುತ್ತದೆ. ಅಲ್ಲದೆ 2ನೆಯ ದೇವರಾಯನ ಆಳ್ವಿಕೆಯಲ್ಲಿ ಇಲ್ಲಿಯ ಅಧಿಕಾರಿಯಾಗಿದ್ದ ಪೆರುಮಾಳ ದೇವರಸ ಕೀರ್ತಿನಾರಾಯಣ ದೇವಾಲಯಕ್ಕೆ ಧನಸಹಾಯ ಮಾಡಿದಂತೆ ತಿಳಿದುಬಂದಿದೆ. ವಿಜಯನಗರದ ಅಧಿಕಾರಿಗಳು 17ನೆಯ ಶತಮಾನದ ಆರಂಭದ ವರೆಗೆ ತಲಕಾಡಿನಲ್ಲಿ ಆಳಿದರು. ಅವರು ಇಲ್ಲಿಯ ದೇವಾಲಯಗಳಿಗೆ ಕಾಣಿಕೆ ಮತ್ತು ಜಹಗೀರುಗಳನ್ನು ಕೊಡುವ ಸಂಪ್ರದಾಯವನ್ನಿಟ್ಟುಕೊಂಡಿದ್ದದು ಆ ಕಾಲದ ಶಾಸನಗಳಿಂದ ತಿಳಿಯುತ್ತದೆ. ವಿಜಯನಗರದ ಮಂತ್ರಿಗಳಲ್ಲೊಬ್ಬನಾದ ಮಾಧವಮಂತ್ರಿ ತಲಕಾಡಿನವನಾಗಿದ್ದ. ಆತ ತಲಕಾಡಿನ ಬಳಿಯಲ್ಲಿ ತನ್ನ ಹೆಸರಿನಲ್ಲಿ ಒಂದು ಅಣೆಕಟ್ಟೆಯನ್ನು ನಿರ್ಮಿಸಿದನಲ್ಲದೆ, ಪೂರ್ವದ ಚೋಳಲಿಂಗದ ಮೇಲೆ ಬಹುಶಃ ಈಗಿನ ವೈದ್ಯೇಶ್ವರ ದೇವಾಲಯವನ್ನು ಕಟ್ಟಿಸಿದ.
1610ರಲ್ಲಿ ತಿರುಮಲರಾಜ (ಇವನಿಗೆ ಶ್ರೀರಂಗರಾಯನೆಂದೂ ಹೆಸರಿತ್ತು) ಶ್ರೀರಂಗಪಟ್ಟಣದಲ್ಲಿ ವಿಜಯನಗರದ ಪ್ರತಿನಿಧಿಯಾಗಿದ್ದ. ಆಗ ಮೈಸೂರಿನಲ್ಲಿದ ಬೆಟ್ಟದ ಚಾಮರಾಜ ಒಡೆಯನ ತಮ್ಮ ರಾಜ ಒಡೆಯನಿಗೂ ತಿರುಮಲ ರಾಜನಿಗೂ ವೈರವಿತ್ತೆಂದು ಚಿಕ್ಕದೇವರಾಜ ವಂಶಾವಳಿಯಿಂದ ತಿಳಿದು ಬರುತ್ತದೆ. ಆದರೆ ಪೆನುಕೊಂಡೆಯಲ್ಲಿ ಆಳುತ್ತಿದ್ದ ವಿಜಯನಗರ ದೊರೆ ವೆಂಕಟಪತಿರಾಯನ ಬೆಂಬಲ ರಾಜಒಡೆಯನಿಗಿತ್ತು. ರಾಜಒಡೆಯನ ಪ್ರಭಾವದಿಂದ ತಿರುಮಲರಾಜ ಭೀತನಾದ. ಗುಣಪಡಿಸಲಸಾಧ್ಯವಾದ ರೋಗದಿಂದ ಬಳಲುತ್ತಿದ್ದ ತಿರುಮಲರಾಜ ತಾನು ಜೀವಿಸುವುದು ಕಷ್ಟವೆಂದು ತಿಳಿದು ಸ್ವಪ್ರೀತಿಯಿಂದ ರಾಜ ಒಡೆಯನನ್ನು ಕರೆಸಿ ಶ್ರೀರಂಗಪಟ್ಟಣವನ್ನೂ ಸಿಂಹಾಸನವನ್ನೂ ವಹಿಸಿಕೊಟ್ಟು ಅಲಮೇಲಮ್ಮ, ರಂಗಮ್ಮ ಎಂಬ ಪತ್ನಿಯರ ಸಹಿತ ತಲಕಾಡಿನ ಬಳಿಯಿದ್ದ ಮಾಲಿಂಗಿಗೆ ಹೋಗಿ ಅಲ್ಲಿ ಕೆಲವು ದಿನಗಳಿದ್ದು ಮರಣ ಹೊಂದಿದನೆಂದು ಮೈಸೂರು ರಾಜವಂಶದ ಚರಿತ್ರೆ ತಿಳಿಸುತ್ತದೆ. ಆದರೆ ಅವರಿಬ್ಬರ ನಡುವೆ ಇದ್ದ ಸಂಬಂಧವನ್ನು ಲಕ್ಷ್ಯಕ್ಕೆ ತೆಗೆದುಕೊಂಡರೆ ಇದು ಅಸಂಭವವೆಂದೂ ತಿರುಮಲರಾಯ ರಾಜ ಒಡೆಯನಿಗೆ ಹೆದರಿ ಅಥವಾ ಅವನ ಒತ್ತಾಯದಿಂದ ಹಾಗೆ ಓಡಿಹೋಗಿರಬಹುದೆಂದೂ ತೋರುತ್ತದೆ.
ರಾಜ್ಯದಲ್ಲಿ ದೊರೆತ ಶಾಸನವೊಂದರ ಪ್ರಕಾರ 1612ರಲ್ಲಿ ರಾಜ ಒಡೆಯ ಶ್ರೀರಂಗಪಟ್ಟಣವನ್ನು ವೆಂಕಟಪತಿರಾಯನಿಂದ ಕೊಡುಗೆಯಾಗಿ ಸ್ವೀಕರಿಸಿದನೆಂದು ತಿಳಿದು ಬಂದರೂ ನಿಜವಾಗಿ ಮೈಸೂರು ಅರಸ ಅದನ್ನು ಆಗಲೇ ತನ್ನದನ್ನಾಗಿ ಮಾಡಿಕೊಂಡಿದ್ದಕ್ಕೆ ವೆಂಕಟಪತಿರಾಯನ ಔಪಚಾರಿಕ ಒಪ್ಪಿಗೆ ದೊರೆತ ಹಾಗೆ ಕಾಣುತ್ತದೆ. ಶ್ರೀರಂಗಪಟ್ಟಣದ ಶ್ರೀರಂಗನಾಯಕಿ ದೇವಿಗೆ ಅಲಂಕಾರ ಮಾಡಲು ವಾರಕ್ಕೆರಡು ಸಲ ತಾನು ಕೊಡುತ್ತಿದ್ದ ಕೆಲವು ರತ್ಮಾಭರಣಗಳನ್ನು ಅಲಮೇಲಮ್ಮ ಮಾಲಿಂಗಿಗಿ ತೆಗೆದುಕೊಂಡು ಹೋಗಿದ್ದಳು. ಕೆಲವು ದಿನಗಳ ಅನಂತರ ರಾಜ ಒಡೆಯ ಆ ಆಭರಣಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನ ಮಾಡಿದ. ಆದರೆ ಅಲಮೇಲಮ್ಮ ಅವನ್ನು ಒಪ್ಪಿಸಲಿಲ್ಲ. ಸಿಟ್ಟಿನಿಂದ ಅವಳು ತಲಕಾಡು ಮರಳಾಗಲಿ, ಮಾಲಿಂಗಿ ಮಾಡುವಾಗಲಿ, ಮೈಸೂರು ದೊರೆಗಳಿಗೆ ಮಕ್ಕಳು ಇಲ್ಲದೆ ಹೋಗಲಿ, ಎಂದು ಶಪಿಸಿ, ಆಭರಣಗಳನ್ನು ಸೆರಗಿನಲ್ಲಿ ಕಟ್ಟಿಕೊಂಡು ಮಾಲಿಂಗಿಯ ಮಡುವಿನಲ್ಲಿ ದುಮುಕಿ ಪ್ರಾಣ ನೀಗಿದಳು. ತಮ್ಮ ಅಚಾತುರ್ಯದಿಂದ ಸಂಭವಿಸಿದ ಈ ದುರಂತದಿಂದ ರಾಜ ಒಡೆಯ ಪಶ್ಚಾತ್ತಾಪಪಟ್ಟು ಅಲಮೇಲಮ್ಮನ ರೂಪದ ಚಿನ್ನದ ಪ್ರತಿಮೆಯೊಂದನ್ನು ಮಾಡಿಸಿ ನಿತ್ಯವೂ ಅದಕ್ಕೆ ಪೂಜೆ ನಡೆಸುವಂತೆ ಏರ್ಪಡಿಸಿದನಲ್ಲದೆ ಆ ಪ್ರತಿಮೆಗೆ ಮಹಾನವಮಿಯ ದಿನ ಅರಮನೆಯಲ್ಲಿ ವಿಶೇಷ ಪೂಜೆ ನಡೆಸುವಂತೆ ಏರ್ಪಡಿಸಿದ. ಈ ಪದ್ದತಿಯನ್ನು ಅನಂತರ ಮೈಸೂರಿನ ಅರಸರು ಅನುಸರಿಕೊಂಡು ಬಂದರು. ಅಂದಿನಿಂದ ತಲಕಾಡು ಮೈಸೂರು ರಾಜರ ವಶದಲ್ಲಿತ್ತು. ಪ್ರಚಲಿತವಿರುವ ಇನ್ನೊಂದು ಕಥೆಯ ಪ್ರಕಾರ, ಶ್ರೀರಂಗರಾಯನಿಗೆ ತೀವ್ರವಾದ ಬೇನೆಯಾಗಲು ಅವನು ಶ್ರೀರಂಗಪಟ್ಟಣದ ರಾಜ್ಯಭಾರವನ್ನು ಹೆಂಡತಿ ರಂಗಮ್ಮನಿಗೆ ವಹಿಸಿ, ತಲಕಾಡಿನ ವೈದ್ಯೇಶ್ವರನಿಗೆ ಪೂಜೆ ಸಲ್ಲಿಸುವ ಉದ್ದೇಶದಿಂದ ಅಲ್ಲಿಗೆ ಹೋದ. ಗಂಡನಿಗೆ ಮರಣ ಸನ್ನಿಹಿತವಾಗಿದೆಯೆಂಬುದನ್ನು ತಿಳಿದ ರಂಗಮ್ಮ, ಶ್ರೀರಂಗಪಟ್ಟಣದ ಮತ್ತು ಅದರ ಆಧೀನ ಪ್ರದೇಶಗಳ ರಾಜ್ಯಭಾರವನ್ನು ರಾಜ ಒಡೆಯನಿಗೆ ವಹಿಸಿ ತಾನೂ ತಲಕಾಡಿಗೆ ಹೋದಳು. ಅವಳು ಧರಿಸಿದ್ದ ಮೂಗುತಿಯನ್ನು ಪಡೆದುಕೊಳ್ಳಬೇಕೆಂಬ ಆಸೆಯಿಂದ ರಾಜ ಒಡೆಯ ಸೈನ್ಯದೊಂದಿಗೆ ತಲಕಾಡಿಗೆ ಹೋಗಿ ತಲಕಾಡನ್ನು ಗೆದ್ದುಕೊಂಡ, ರಂಗಮ್ಮ ಕಾವೇರಿಯ ದಡಕ್ಕೆ ಹೋಗಿ, ಮೂಗುತಿಯನ್ನು ನೀರಿನಲ್ಲಿ ಎಸೆದು ಮೇಲೆ ಹೇಳಿದಂತೆ ಶಾಪಕೊಟ್ಟು ತಾನೂ ಹೊಳೆಗೆ ಹಾರಿಕೊಂಡಳು. ತಲಕಾಡಿನ ಹಳೆಯ ಊರಿನ ಬಹುಭಾಗ ಮರಳಿನಲ್ಲಿ ಹೂತುಹೋಗಿದೆ. ಹೊಳೆಯ ಮೇಲಿನಿಂದ ಬೀಸುವ ಗಾಳಿಯಲ್ಲಿ ತೂರಿಬರುವ ಮರಳಿನಿಂದ ಊರಿಗೆ ಆ ಪರಿಸ್ಥಿತಿ ಬಂದಿದೆ. ಮಾಧವಮಂತ್ರಿ ಆಣೆಕಟ್ಟನ್ನು ನಿರ್ಮಿಸಿದ ಅನಂತರ ಅಲ್ಲಿ ಶೇಖರವಾದ ಮರಳಿನಿಂದ ಈ ಅನಾಹುತವಾಗಿದೆಯೆಂದು ಭಾವಿಸಲಾಗಿದೆ. ಏರಿಬರುತ್ತಿರುವ ಮರಳಿನ ಆಕ್ರಮಣವನ್ನು ತಡೆಗಟ್ಟಲು ಸರ್ಕಾರದವರು ಗೇರುಮರಗಳನ್ನು ನೆಡುವುದೇ ಮುಂತಾದ ಅನೇಕ ಕಾರ್ಯಗಳನ್ನು ಕೈಗೊಂಡಿದ್ದಾರೆ.
ಪಂಚಲಿಂಗ ದರ್ಶನ : ಒಂದು ದಿನ ವಾಸಮಾಡಿದ್ದರೂ ನಿಸ್ಸಂಶಯವಾಗಿ ಮುಕ್ತಿ ದೊರಕಿಸಿ ಕೊಡುವಷ್ಟು ಪಾವನನಾದ, ದಕ್ಷಿಣ ಕಾಶಿ ಎಂದು ಪ್ರಸಿದ್ಧವಾದ ಈ ಕ್ಷೇತ್ರದಲ್ಲಿ ಶ್ರೀ ಮನೋನ್ಮನೀ ಎಂಬ ಹೆಸರಿನ ಪತ್ನಿಯೊಡನೆ ವೈದ್ಯನಾಥನೆಂಬ ನಾಮದಿಂದ ಆಚಾರ್ಯ ರೂಪದಲ್ಲಿ ಸದಾಶಿವ ಕಂಗೊಳಿಸುತ್ತಿರುವನೆಂದು ಹಿಂದುಗಳ ನಂಬಿಕೆ. ಪಂಚಬ್ರಹ್ಮಮಯನಾದ ಪರಶಿವ, ಪುರಾಣಗಳ ಆಧಾರದಂತೆ ಪ್ರದಕ್ಷಿಣ ಕ್ರಮವಾಗಿ ತನ್ನ ತತ್ಪುರುಷ ಮುಖದಿಂದ ಕಾವೇರಿಯ ಉತ್ತರವಾಹಿನಿಯ ಹತ್ತಿರ ಸೂರ್ಯನಿಂದ ಪೂಜಿತನಾಗಿ ಅರ್ಕೇಶ್ವರನೆಂಬ ಹೆಸರಿನಿಂದಲೂ ಪೂರ್ವವಾಹಿನಿಯ ಹತ್ತಿರ ವಾಸುಕಿಯಿಂದ ಪೂಜಿತನಾಗಿ ಅಘೋರ ಮುಖದಿಂದ ವಾಸುಕೀಶ್ವರ ಅಥವಾ ಪಾತಾಳೇಶ್ವರನೆಂಬ ಹೆಸರಿನಿಂದಲೂ ದಕ್ಷಿಣವಾಹಿನಿಯ ಹತ್ತಿರ ಬ್ರಹ್ಮದೇವನಿಂದ ಪೂಜಿತನಾಗಿ ಸದ್ಯೋಜಾತ ಮುಖದಿಂದ ಸೈಕತೇಶ್ವರ ಅಥವಾ ಮರಳೇಶ್ವರನೆಂಬ ಹೆಸರಿನಿಂದಲೂ ಪಶ್ಚಿಮವಾಹಿನಿಯ ಹತ್ತಿರ ಕಾಮಧೇನುವಿನಿಂದ ಪೂಜಿತನಾಗಿ ವಾಮದೇವ ಮುಖದಿಂದ ಮಲ್ಲಿಕಾರ್ಜುನೇಶ್ವರನೆಂಬ ಹೆಸರಿನಿಂದಲೂ ಮಧ್ಯದಲ್ಲಿ ಪಂಚಮುಖಪ್ರಧಾನವಾದ ಈಶಾನ್ಯ ಮುಖದಿಂದ ವೈದ್ಯನಾಥೇಶ್ವರನೆಂಬ ಹೆಸರಿನಿಂದಲೂ ಅವಿರ್ಭವಿಸಿ ಭಕ್ತಾನುಗ್ರಹ ಮಾಡುತ್ತಿರುವನೆಂದು ಜನರು ನಂಬಿದ್ದಾರೆ. ಹಿಂದೆ ತ್ರೇತಾಯುಗದಲ್ಲಿ ಲಂಕೆಗೆ ಹೋಗುವ ಮುನ್ನ ಶ್ರೀರಾಮನೂ ಸ್ವಲ್ಪ ಕಾಲ ಇಲ್ಲಿ ತಂಗಿದ್ದನೆಂದು ಹೇಳಲಾಗಿದೆ. ಕಾರ್ತಿಕ ಬಹುಳ ಅಮಾವಾಸ್ಯೆ ಸೋಮವಾರವಾಗಿದ್ದು, ಸೂರ್ಯಚಂದ್ರರಿಬ್ಬರೂ ವೃಶ್ಚಿಕ ರಾಶಿಯಲ್ಲಿ ಸೇರಿದಾಗ, ಅಂದಿನ ಉಷಃಕಾಲದಲ್ಲಿ ಬರುವ ಕುಹೂಯೋಗ ಇಲ್ಲಿಯ ಪಂಚಲಿಂಗ ದರ್ಶನಕ್ಕೆ ಪ್ರಶಸ್ತವಾದ್ದು. ಇಂಥ ದಿನ ಸುಮಾರು 4 ರಿಂದ 14 ವರ್ಷಗಳ ಅವಧಿಯಲ್ಲಿ ಒಂದು ಸಾರಿ ಮಾತ್ರ ಬರುವುದರಿಂದ ಅಂದು ಭಾರತದ ನಾನಾ ಕಡೆಗಳಿಂದ ಜನರು ಇಲ್ಲಿಗೆ ಯಾತ್ರೆ ಬರುತ್ತಾರೆ. ಸ್ಥಳ ಪುರಾಣದ ಪ್ರಕಾರ ಯಾತ್ರಾಕ್ರಮ ಮುಂದೆ ವಿವರಿಸಿದ ಹಾಗೆ ಇದೆ: ಯಾತ್ರಿಕ ಆ ದಿನ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಗೋಕರ್ಣ ತೀರ್ಥದಲ್ಲಿ ಸ್ನಾನಮಾಡಿ ಒದ್ದೆ ಬಟ್ಟೆಗಳಲ್ಲಿಯೇ ಗೋಕರ್ಣೇಶ್ವರನ ಮತ್ತು ಸನಿಹದಲ್ಲೇ ಇರುವ ಚಂಡಿಕಾ ದೇವಿಯ ವಿಗ್ರಹಗಳ ದರ್ಶನ ಮಾಡಿ ವೈದ್ಯನಾಥೇಶ್ವರ ದೇವಾಲಯಕ್ಕೆ ಹೋಗಿ ವೈದ್ಯನಾಥನನ್ನು ಪ್ರಾರ್ಥಿಸಿ, ಉಳಿದ ನಾಲ್ಕು ಲಿಂಗಗಳ ದರ್ಶನಕ್ಕೆ ಅಪ್ಪಣೆ ಪಡೆದುಕೊಳ್ಳಬೇಕು. ಅನಂತರ ಅವನು ಅನುಕ್ರಮವಾಗಿ ಕಾವೇರಿಯ ಉತ್ತರ ವಾಹಿನಿಯಲ್ಲಿ ಮಿಂದು ಅರ್ಕೆಶ್ವರನ ದರ್ಶನವನ್ನೂ ಪೂರ್ವವಾಹಿನಿಯಲ್ಲಿ ಮಿಂದು ಪಾತಾಳೇಶ್ವರನ ದರ್ಶನವನ್ನೂ ದಕ್ಷಿಣವಾಹಿನಿಯಲ್ಲಿ ಮಿಂದು ಮರಳೇಶ್ವರನ ದರ್ಶನವನ್ನೂ ಪಶ್ಚಿಮವಾಹಿನಿಯಲ್ಲಿ ಮಿಂದು ಮಲ್ಲಿಕಾರ್ಜುನೇಶ್ವರನ ದರ್ಶನವನ್ನೂ ಮಾಡಬೇಕು. ಹೀಗೆ ಮಾಡುವಾಗ ಅವನು ಪ್ರತಿಯೊಂದು ಸಲವೂ ವ್ವೆದ್ಯನಾಥನಲ್ಲಿಗೆ ಬಂದು ವರದಿ ಒಪ್ಪಿಸಿ ಮಿಕ್ಕ ಲಿಂಗಗಳ ದರ್ಶನಕ್ಕೆ ಅಪ್ಪಣೆ ಪಡೆದುಕೊಂಡು ಹೋಗಬೇಕು. ಈ ಪ್ರಕಾರ ಉಳಿದೆಲ್ಲ ಲಿಂಗಗಳ ದರ್ಶನ ಮಾಡಿಕೊಂಡು ಪುನಃ ವೈದ್ಯನಾಥೇಶ್ವರ ದೇವಾಲಯಕ್ಕೆ ಬಂದು ತಾನು ಮಾಡಿದ ಈ ಆದ್ಯಂತವಾದ ಪಂಚಲಿಂಗದರ್ಶನ ಯಾತ್ರೆ ಸಂಪೂರ್ಣ ಫಲದಾಯಕವಾಗುವಂತೆ ಅನುಗ್ರಹಿಸಬೇಕೆಂದು ಪ್ರಾರ್ಥನೆ ಮಾಡಬೇಕು. ಕೊನೆಗೆ ಅವನು ಕೀರ್ತಿನಾರಾಯಣ ಸ್ವಾಮಿಯ ಮತ್ತು ತಲಕಾಡಿನ ಹೊಸಬೀದಿಯಲ್ಲಿರುವ ವೈಕುಂಠನಾರಾಯಣ ಸ್ವಾಮಿಯ ಗುಡಿಗಳನ್ನು ಸಂದರ್ಶಿಸಿ ಪೂಜೆ ಸಲ್ಲಿಸಬೇಕು. ಇದೆಲ್ಲವೂ ಮುಗಿಯುವ ವೇಳೆಗೆ ಅವನು ಸುಮಾರು 18ಮೈ ನಡೆದ ಹಾಗಾಗುವುದು. ಈ ರೀತಿ ಕ್ರಮಬದ್ಧವಾಗಿ ಆದಿನ ಪಂಚಲಿಂಗದರ್ಶನ ಮಾಡಿದವನಿಗೆ ಇಹದಲ್ಲಿ ಸುಖವೂ ಪರದಲ್ಲಿ ಮುಕ್ತಿಯೂ ದೊರೆಯುವುದರಲ್ಲಿ ಸಂದೇಹವಿಲ್ಲವೆಂದು ಹಿಂದಿನಿಂದ ನಂಬಲಾಗಿದೆ. ( ಪಿ. ಎಂ. ಯು, ಎಸ್.) ವಾಸ್ತು, ಶಿಲ್ಪ : ತಲಕಾಡಿನಲ್ಲಿ ಮೂವತ್ತಕ್ಕಿಂತಲೂ ಹೆಚ್ಚು ದೇವಾಲಯಗಳು ಇದ್ದವೆಂದು ತಿಳಿದುಬರುತ್ತದೆ. ಆದರೆ ಹೆಚ್ಚಿನ ದೇವಾಲಯಗಳು ಈಗ ಉಳಿದಿಲ್ಲ. ಗಂಗರ ಮತ್ತು ಚೋಳರ ಕಾಲದ ಬಸದಿಗಳು ದೇವಾಲಯಗಳೂ ಮರಳಿನಲ್ಲಿ ಹೊತುಹೋಗಿರಬಹುದೆಂದು, ಇಲ್ಲವೇ ನಾಶವಾಗಿರಬಹುದೆಂದು ಊಹಿಸಲಾಗಿದೆ. ಗೋಕರ್ಣೇಶ್ವರ, ಕೀರ್ತಿನಾರಾಯಣ, ಮರಳೇಶ್ವರ, ಪಾತಾಳೇಶ್ವರ, ವೈದ್ಯನಾಥೇಶ್ವರ, ಚೌಡೇಶ್ವರಿ, ಆನಂದೇಶ್ವರ ಮತ್ತು ಗೌರೀಶಂಕರ ದೇವಾಲಯಗಳು ಈಗ ಕಾಣಿಸುತ್ತವೆ. ಗಂಗರ ಕಾಲದ ವಾಸ್ತು ಅವಶೇಷಗಳನ್ನು ಮರಳೇಶ್ವರ, ಪಾತಾಳೇಶ್ವರ ಮತ್ತು ಅರ್ಕೇಶ್ವರ ದೇವಾಲಯಗಳಲ್ಲಿ ಗುರುತಿಸಬಹುದು. ಚೋಳರ ರಾಜರಾಜೇಶ್ವರ ಮತ್ತು ವೈಕುಂಟನಾರಾಯಣ ದೇವಾಲಯಗಳು ಈಗ ಇಲ್ಲ. ಪಂಚಲಿಂಗೇಶ್ವರ, ಗೋಕರ್ಣೇಶ್ವರ, ವೀರಭದ್ರ, ಆನಂದೇಶ್ವರ ಮುಂತಾದ ದೇವಾಲಯಗಳು ಈಚೆಗೆ ಕಟ್ಟಿಸಿದವು. ಇವು ಸಾಮಾನ್ಯವಾದ ಕಟ್ಟಡಗಳು. ಗೌರಿಶಂಕರ ದೇವಾಲಯವನ್ನು ಚಿಕ್ಕ ದೇವರಾಜ ಒಡೆಯರ ಕಾಲದಲ್ಲಿ ಕಟ್ಟಿದಂತೆಯೂ ಆನಂದೇಶ್ವರ ದೇವಾಲಯವನ್ನು ಅದಕ್ಕೂ ಮುಂಚೆ ಹೈದರನ ಸಮಕಾಲೀನನಾಗಿದ್ದ ಚಿದಾನಂದಸ್ವಾಮಿ ಕಟ್ಟಿಸಿದಂತೆಯೂ ತಿಳಿಯುತ್ತದೆ. ಹಿಂದಿನ ಊರಿನ ಉತ್ತರ ಬಾಗಿಲಿನಲ್ಲಿ ಗಣೇಶ ದೇವಾಲಯ ಮತ್ತು ಹಳೆಯ ಬೀದಿಯ ನಡುವೆ ಆಂಜನೇಯ ದೇವಾಲಯಗಳಿವೆ. ಹಳೆಯ ಊರಿನಲ್ಲಿ ವೈದ್ಯನಾಥ ದೇವಾಲಯ ಹತ್ತಿರ ಶ್ರೀರಾಮ ಮಂದಿರ ಇದೆ. ಅಲ್ಲದೆ ಹಿಂದಿನ ಆನಂದೇಶ್ವರ ದೇವಾಲಯ ಶಿಥಿಲವಾದ ಕಾರಣ 1952ರಲ್ಲಿ ಅಲ್ಲಿಯ ಲಿಂಗವನ್ನು ವೈದ್ಯನಾಥ ದೇವಾಲಯದ ಹತ್ತಿರ ಪ್ರತಿಷ್ಠೆ ಮಾಡಲಾಗಿದೆ. ಹೊಸಬೀದಿಯಲ್ಲಿ ಈ ಊರಿನ ಗ್ರಾಮದೇವತೆಯಾದ ಬಂಡರಸಮ್ಮನ ದೇವಾಲಯವಿದೆ. ಈ ದೇವರ ಜಾತ್ರೆ ಪ್ರತಿವರ್ಷವೂ ಮೂರÀು ದಿನಗಳ ಕಾಲ ನಡೆದು ಸುತ್ತಣ ಜನರನ್ನು ಆಕರ್ಷಿಸುತ್ತದೆ. ಕೀರ್ತಿನಾರಾಯಣನದು ಇಲ್ಲಿರುವ ಏಕಮಾತ್ರ ಹೊಯ್ಸಳ ದೇವಾಲಯ. ಚೋಳರ ಮೇಲೆ ಸಾಧಿಸಿದ ವಿಜಯದ ಕುರುಹಾಗಿ 1117ರಲ್ಲಿ ವಿಷ್ಣುವರ್ಧನ ಇದನ್ನು ಕಟ್ಟಿಸಿದ. ಇದು ಹೊಯ್ಸಳ ಕಾಲದ್ದಾದರೂ ಕಗ್ಗಲ್ಲು ಮತ್ತು ಇಟ್ಟಿಗೆಗಳಿಂದ ನಿರ್ಮಿತವಾಗಿದೆ. ಎತ್ತರವಾದ ಜಗತಿಯ ಮೇಲೆ ಗರ್ಭಗುಡಿ, ಸುಕನಾಸಿ ಮತ್ತು ನವರಂಗ ಇವೆ. ನವರಂಗ ವಿಶಾಲವಾಗಿದೆ. ಅದರ ಮೂರು ಕಡೆಯೂ ದ್ವಾರಗಳುಂಟು. ಹೊರಗೋಡೆಗಳ ಮೇಲೆ ಅರೆಗಂಬಗಳು, ಅವುಗಳ ನಡುವೆ ಅರೆಗೋಪುರಗಳು, ನಡು ನಡುವೆ ಅರೆಮಂಟಪಗಳು ಇವೆ. ವರಂಗದ ನಡುವಣ ಬಳಪದ ಕಲ್ಲಿನ ನಾಲ್ಕು ದಪ್ಪ ಕಂಬಗಳು ಹೊಯ್ಸಳ ರೀತಿಯಲ್ಲಿ ತಿರುಗಣಿಯಲ್ಲಿ ಕಡೆದವು. ಉಳಿದ ಕಂಬಗಳು ಎಂಟು ಅಥವಾ ಹದಿನಾರು ಮೂಲೆಯ ನಕ್ಷತ್ರಾಕಾರದಲ್ಲಿಯೋ ಅಷ್ಟ ಮುಖವುಳ್ಳವಾಗಿಯೋ ಇವೆ. ಚಾವಣಿಗಳು ಸಾಮಾನ್ಯವಾಗಿ ಚಪ್ಪಟೆ. ಕೆಲವು ಅಂಕಣಗಳಲ್ಲಿ ಮಾತ್ರ ಭುವನೇಶ್ವರಿಯ ಆಕಾರಗಳಿವೆ. ಇವು ಅಂದವಾಗಿ ಕಡೆದ ಬಳ್ಳಿಸಾಲು, ತಾವರೆಗಳು, ಆನೆಗಳು, ಸಿಂಹಗಳು, ನರ್ತಕಿಯರು ಮುಂತಾದ ಶಿಲ್ಪಗಳಿಂದ ಅಲಂಕೃತವಾಗಿವೆ. ಕೀರ್ತಿನಾರಾಯಣನ ಮೂಲವಿಗ್ರಹ 10 ಅಡಿ ಎತ್ತರವಾಗಿದೆ. ಇದು ಸಮಭಂಗದಲ್ಲಿ ನಿಂತ ಚತುರ್ಭುಜ ಮೂರ್ತಿ. ಇದರ ಪ್ರಭಾವಳಿಯ ಮೇಲೆ ವಿಷ್ಣುವಿನ ದಶಾವತಾರಗಳಿವೆ. ಗಂಭೀರ ಮುಖ ಮುದ್ರೆಯಿಂದ ಕೂಡಿದ ಈ ಮೂರ್ತಿ ಸುಂದರವಾದ್ದು. ನವರಂಗದಲ್ಲಿರುವ ನಮ್ಮಾಳ್ವಾರ್, ವೇದಾಂತ ದೇಶಿಕರ್ ಮೊದಲಾದವರ ಮೂರ್ತಿಗಳೂ ಲಕ್ಷ್ಮಿಯ ವಿಗ್ರಹವೂ ವಿಜಯನಗರ ಕಾಲದವು. ದೇವಾಲಯದ ಮೇಲೆ ಇರುವ ಚಪ್ಪಟೆಯಾದ ಇಟ್ಟಿಗೆ ಗೋಪುರವನ್ನು ಬಹುಶಃ ವಿಜಯನಗರದ ಕಾಲದಲ್ಲಿ ಮೂಲ ಹೊಯ್ಸಳ ಗೋಪುರವನ್ನನುಸರಿಸಿ ಮಾಡಿರಬೇಕು. ಸುಮಾರು ಅರವತ್ತು ವರ್ಷಗಳ ಹಿಂದೆ ಮರಳಿನ ರಾಶಿಯನ್ನು ತೆಗೆದುಹಾಕಿ ಈ ದೇವಸ್ಥಾನವನ್ನು ಬಿಡಿಸಲಾಯಿತು. (ಎಂ. ಎಚ್.)
ಊರಿನ ಪ್ರಮುಖ ದೇವಾಲಯ ವೈದ್ಯೇಶ್ವರನದು. ಇದು ಬಹುಶಃ ಚೋಳ ಪ್ರತಿಷ್ಠೆ. ಆದರೆ ಇಂದು ಇರುವ ಕಟ್ಟಡ ಪೂರ್ಣವಾಗಿ ವಿಜಯನಗರ ಅರಸರ ಕಾಲದಲ್ಲಿ ಪ್ರಾಯಶಃ ಈ ಊರಿನವನೇ ಆದ ಮಾಧವಮಂತ್ರಿಯಿಂದ ನಿರ್ಮಿತವಾದ್ದು. ಗ್ರನೈಟ್ ಶಿಲೆಯಲ್ಲಿ ಕಟ್ಟಿರುವ ಈ ಕಟ್ಟಡದಲ್ಲಿ ಉತ್ತಮ ಶಿಲ್ಪಾಲಂಕರಣಗಳಿವೆ. ದ್ರಾವಿಡ ಹಾಗೂ ಹೊಯ್ಸಳ ಶೈಲಿಗಳ ಮಿಶ್ರಣವಿರುವುದು ಈ ಗುಡಿಯ ವೈಶಿಷ್ಟ್ಯ. ಮೂಲಗುಡಿಯ ಸುತ್ತ ದೊಡ್ಡ ಪ್ರಾಕಾರವಿದೆ. ಅದಕ್ಕೆ ಸೇರಿದಂತೆ ಅನೇಕ ಸಣ್ಣ ಗುಡಿಗಳಿವೆ. ಇವು ಈಚಿನವು, ಹೊಯ್ಸಳ ವಾಸ್ತುಶೈಲಿಯ ರೀತಿಯಲ್ಲಿ ದೇವಾಲಯವನ್ನು ದೊಡ್ಡ ಜಗತಿಯ ಮೇಲೆ ಎತ್ತಲಾಗಿದೆ. ಇದರಲ್ಲಿ ಗರ್ಭಗೃಹ, ಮುಂದೆ ಒಂದಂಕಣದ ಅಂತರಾಳ, ಮಧ್ಯದಲ್ಲಿ ನವರಂಗ, ಅದರ ನಾಲ್ಕು ಕಡೆಗಳಲ್ಲೂ ಮೂರು ಅಂಕಣಗಳ ಸಾಲುಗಳು ಇವೆ. ಪೂರ್ವ ಮತ್ತು ದಕ್ಷಿಣದಲ್ಲಿ ಪ್ರವೇಶದ್ವಾರಗಳುಂಟು. ಮೂರಂಕಣದ ಪೂರ್ವದ ಮಂಟಪ ಸು, 1633ರ ರಚನೆ. ಇದರಲ್ಲಿರುವ 10 ಅಡಿಗಳ ಎತ್ತರದ ದ್ವಾರಪಾಲಕ ವಿಗ್ರಹಗಳು ಬಹುಶಃ ಕರ್ನಾಟಕದಲ್ಲೇ ದೊಡ್ಡವು. ದಕ್ಷಿಣ ದ್ವಾರ ಮತ್ತು ಮುಖಮಂಟಪ ಹಳೆಯವು. ಈ ಭಾಗದಲ್ಲಿ ವಿಜಯನಗರದ ರೀತಿಯ ಕಂಬಗಳಿವೆ. ಇವು ಉತ್ತಮ ಶಿಲ್ಪಗಳಿಂದ ಕೂಡಿ ಸುಂದರವಾಗಿವೆ. ಹೊರಗೋಡೆಯ ಮೇಲೆ, ತಳದಲ್ಲಿ ಅಡ್ಡಪಟ್ಟಿಕೆಗಳು, ಮೇಲೆ ನಾನಾ ದೇವರುಗಳ ಶಿಲ್ಪಗಳ ಅಲಂಕರಣ ಇವೆ. ಮೂರ್ತಿಶಿಲ್ಪಶಾಸ್ತ್ರ ಅಭ್ಯಾಸ ದೃಷ್ಟಿಯಿಂದ ಇಲ್ಲಿಯ ಶಿಲ್ಪವೈವಿಧ್ಯ ಕುತೂಹಲಕರವಾಗಿದೆ. ಮೇಲಂಚಿನಲ್ಲಿ ಬಾಗುಕಪೋತ, ಅದರ ಮೇಲೆ ಸಿಂಹ ಮುಖಗಳಿರುವ ಕೈಪಿಡಿ ಗೋಡೆ ಇವೆ. ಶಿಖರ ಇಟ್ಟಿಗೆಯದು. ಇದು ದ್ರಾವಿಡ ಶೈಲಿಯಲ್ಲಿದೆ. ಇದು ಬಹುಶಃ 17ನೆಯ ಶತಮಾನದ್ದು. ದೇವಾಲಯದ ಒಳಗೆ ಇರುವ ನವರಂಗದ ಬಾಗಿಲುಗಳು, ಕಂಬಗಳು ಮತ್ತು ಚಾವಣಿಗಳನ್ನು ಬಹು ಸುಂದರವಾಗಿ ಬಿಡಿಸಲಾಗಿದೆ. ದೇವಾಲಯದ ಒಳಗೆ ಅನೇಕ ಬಿಡಿ ಶಿಲ್ಪಗಳುಂಟು. ಇಲ್ಲಿಯ ನಟರಾಜನ ಕಂಚಿನ ವಿಗ್ರಹ (18ನೆಯ ಶ.) ಕಳಲೆ ನಂಜರಾಜಯ್ಯನ ಸೇವೆ. ಈ ಊರಿನಲ್ಲಿ ಜೈನ ದೇವಾಲಯಗಳೂ ಇದ್ದುವೆಂಬುದರ ಸೂಚನೆಯಾಗಿ ಸಮೀಪದ ಹೊಲವೊಂದರಲ್ಲಿ 10ನೆಯ ಶತಮಾನದ ಶಾಸನವುಳ್ಳ ಜಿನವಿಗ್ರಹವೊಂದು ನಿಂತಿದೆ. ಕೃಷ್ಣಾನಂದ ಮಠ, ಕೊಪ್ಪಳ ಮಠ ಎಂದು ಕರೆಯುವ, ಭಾಗವತ ಸಂಪ್ರದಾಯದ ಸ್ಮಾರ್ತ ಮಠವೊಂದು ಈ ಊರಿನಲ್ಲಿದೆ. ಇಲ್ಲಿಯ ಗುರುಪರಂಪರೆ ಶಂಕರಾಚಾರ್ಯರ ಶಿಷ್ಯರಾದ ಪದ್ಮಪಾದರಿಂದ ವಿಷ್ಣುಸ್ವಾಮಿ, ಕ್ಷೀರಸ್ವಾಮಿ, ಕೃಷ್ಣಾನಂದಸ್ವಾಮಿ ಇವರ ಮೂಲಕ ಬಂದದ್ದೆಂದು ಸ್ಥಳೀಯ ದಾಖಲೆಗಳು ತಿಳಿಸುತ್ತವೆ. ಮಾಧವ ಮಂತ್ರಿಯೂ ತಲಕಾಡಿನ ಕೆಲವು ಪ್ರಭುಗಳೂ ಈ ಮಠಕ್ಕೆ ದಾನಗಳನ್ನಿತ್ತಿದ್ದಕ್ಕೆ ದಾಖಲೆಗಳು ಮಠದಲ್ಲಿವೆ. ವೀರಶೈವ ಸಂಪ್ರದಾಯಕ್ಕೆ ಸೇರಿದ ಅತ್ತಿಕೇರಿ ಶಿವಸ್ವಾಮಿ ಮಠ, ಕೆಂಡಗಣ್ಣ ಸ್ವಾಮಿಗಳ ಮಠ ಮತ್ತು ತೋಪಿನ ಮಠ ಇವೆ. ಮಾಧವಮಂತ್ರಿ ಅಣೆಕಟ್ಟಿನ ಒಂದು ನಾಲೆ ತಲಕಾಡಿನ ಮೂಲಕವೇ ಹರಿದು ಹೋಗುತ್ತದೆ. ಈಗ ತಲಕಾಡು ಒಂದು ಹೋಬಳಿ ಕೇಂದ್ರ, ಇಲ್ಲಿ ಒಂದು ಪ್ರೌಢಶಾಲೆ, ಇತರ ಶಾಲೆಗಳು, ಆಸ್ಪತ್ರೆ ಇವೆ. ಇಲ್ಲಿಯ ಗ್ರಾಮದೇವತೆ ಬಂಡರಸಮ್ಮನ ಜಾತ್ರೆ ಪ್ರತಿವರ್ಷವೂ ಮೂರು ದಿನಗಳ ಕಾಲ ನಡೆಯುತ್ತದೆ. ತಲಕಾಡಿನ ಮರಳು. ತಲಕಾಡಿಗೆ ಐದು ದೇವಾಲಯಗಳು ತಂದಿರುವ ಪ್ರಸಿದ್ಧಿಯಂತೆಯೇ ಅಲ್ಲಿನ ಮರಳು ಕೂಡ ಕುತೂಹಲ, ಆಕರ್ಷಣೆಯ ಕೇಂದ್ರವಾಗಿ ತಲಕಾಡಿನ ವೈಶಿಷ್ಟ್ಯವೆನ್ನಿಸಿದೆ. ತಲಕಾಡೂ ಸೇರಿದಂತೆ ಸುಮಾರು ಎರಡೂವರೆ ಚದರ ಕಿ.ಮೀ ವಿಸ್ತರಿಸಿರುವ ಮರಳಿನ ಗುಡ್ಡೆಗಳು ಕೆಲವೆಡೆ 20 ಮೀಟರು ಎತ್ತರವಾಗಿವೆ. ಈ ಗುಡ್ಡಗಳ ಪೂರ್ವದ ಇಳಿಜಾರು ಬಹುತೇಕ ಕಡಿದಾಗಿದೆ. ಇವು ಒತ್ತಿಬರುವುದರಿಂದ ಆಗಾಗ ಇಲ್ಲಿನ ದೇವಾಲಯಗಳು ಮರಳಿನಿಂದ ಹೂತುಹೋಗುತ್ತವೆ. ಮರಳು ದಿಬ್ಬಗಳು ಚಲಿಸುವುದಕ್ಕೆ ಇದು ಜೀವಂತ ನಿದರ್ಶನ. ಕಾವೇರಿ ನದಿ ತನ್ನ ಪಾತ್ರದಲ್ಲಿ ಬೇರೆಲ್ಲಿಯೂ ಈ ಪ್ರಮಾಣದ ಮರಳು ದಿಬ್ಬಗಳನ್ನು ಸೃಷ್ಟಿಸದೆ ತಲಕಾಡಿನ ಬಳಿಯೇ ಸೃಷ್ಟಿಸಿರುವುದು ವೈಜ್ಞಾನಿಕವಾಗಿಯೂ ಕುತೂಹಲಕಾರಿ. ಇದನ್ನು ಅರಿಯಲು ತಲಕಾಡಿನ ಸುತ್ತಣ ಭಾಗದ ಭೂಮೇಲ್ಮೈ ಲಕ್ಷಣಗಳು, ನದಿಪಾತ್ರ,ಇಲ್ಲಿನ ನೆಲದಲ್ಲಿರುವ ಶಿಲೆಗಳು ಮುಂತಾದ ಅಂಶಗಳನ್ನು ಪರಿಶೀಲಿಸಬೇಕು. ತಲಕಾಡು ಪ್ರದೇಶ ದಕ್ಷಿಣ ಕರ್ನಾಟಕದ ಮೈಸೂರು ಪ್ರಸ್ಥಭೂಮಿಯ ಒಂದು ಭಾಗ. ಇದು ಮೈದಾನವೆಂದು ಸಾಮಾನ್ಯವಾಗಿ ಹೇಳಲಾದರೂ ಅಲ್ಲಲ್ಲೇ ಸಾಕಷ್ಟು ಛಿದ್ರವಾಗಿದೆ, ಮೇಲೆತ್ತಲ್ಪಟ್ಟಿದೆ. ಜೊತೆಗೆ ಬಿಡಿಬಿಡಿಯಾದ ಕೆಲವು ಗುಡ್ಡಗಳೂ ಸುತ್ತಮುತ್ತ ಮೈದಳೆದಿವೆ. ಉತ್ತರದಲ್ಲಿ ಬೆಟ್ಟದಳ್ಳಿ (737 ಮೀ) ದಕ್ಷಿಣದಲ್ಲಿ ಕುಂತೂರುಬೆಟ್ಟ (746 ಮೀ) ಇವುಗಳಲ್ಲಿ ಕೆಲವು. ಆಗ್ನೇಯ, ಪೂರ್ವ ಹಾಗೂ ಈಶಾನ್ಯಕ್ಕೆ ತಲಕಾಡು ಪ್ರಸ್ಥಭೂಮಿ ಬಿಳಿಗಿರಿರಂಗನ ಬೆಟ್ಟದಿಂದ ಆವೃತವಾಗಿದೆ. ತಲಕಾಡಿನ ಸುತ್ತಮುತ್ತ ಮೈದಳೆದಿರುವ ಶಿಲೆಗಳು ಸರಗೂರು ಗುಂಪಿಗೆ ಸೇರಿದ ಬಹು ಪುರಾತನ ಶಿಲೆಗಳು. ನೈಸ್ ಬಂದು ಕರೆಯುವ, ದಕ್ಷಿಣ ಭಾರತದಾದ್ಯಂತ ಬಹು ದೊಡ್ಡ ಪ್ರಮಾಣದಲ್ಲಿ ರೂಪುಗೊಂಡಿರುವ ರೂಪಾಂತರಿಕ ಶಿಲೆಗಳೂಡನೆ ಗಾರ್ನೆಟ್‍ಯುಕ್ತ ಆಂಫಿಬೊಲೈಟ ಎಂಬ ಶಿಲೆಗಳು ಬಹುತೇಕ ಇಲ್ಲಿ ಸಣ್ಣ ಸಣ್ಣ ಗುಡ್ಡ - ಬೆಟ್ಟಗಳಾಗಿ ಕಂಡುಬರುತ್ತವೆ; ಸಿಲಿಕಾ ಪ್ರಧಾನವಾಗಿರುವ ಶಿಲೆಗಳಿವು. ಹಾಗೆಯೇ ಸುಲಭವಾಗಿ ಶಿಥಿಲೀಕರಣಕ್ಕೆ ತುತ್ತಾಗಿ ಸವೆಯುತ್ತಿವೆ. ಕಾವೇರಿನದಿ ಬ್ರಹ್ಮಗಿರಿಯಲ್ಲಿ ಹುಟ್ಟಿ ಪೂರ್ವದ ಇಳಿಜಾರಿನಲ್ಲಿ ರಭಸದಿಂದ ಹರಿದು ಮುಂದೆ ಹೇಮಾವತಿ, ಲಕ್ಷ್ಮಣ ತೀರ್ಥ ನದಿಗಳಿದ್ದು ಇದನ್ನು ಕೂಡಿಕೊಳ್ಳುತ್ತವೆ. ತಿರುಮಕೂಡಲು ನರಸೀಪುರ ಬಳಿ ಕಪಿಲಾ ನದಿ - ಕಾವೇರಿಯಸಂಗಮವಿದೆ. ಇಲ್ಲಿ ಅದರ ಹರಿವು ಮೊದಲಗಿಂತ ಹೆಚ್ಚಾಗುತ್ತದೆ. ಇಲ್ಲಿಂದ ಬಹುತೇಕ ಪೂರ್ವ ದಿಕ್ಕಿನಲ್ಲೇ ರಭಸವಾಗಿ ಹರಿದು ತಿರುಮಕೂಡಲು ನರಸೀಪುರ ಮತ್ತು ತಲಕಾಡಿನ ನಡುವೆ ಅದು ಬಳಸುವ ಮಾರ್ಗ ಅನುಸರಿಸುತ್ತದೆ. ಈ ದಿಕ್ಕಿನಲ್ಲಿ ಈ ಚ್ಯುತಿ ಮೊದಲು ಕಂಡುಬರುವುದು ಬೆಟ್ಟಹಳ್ಳಿಯ ಪಶ್ಚಿಮ ಭಾಗದಲ್ಲಿ. ಇಲ್ಲಿ ಕಾವೇರಿನದಿಗೆ ಬೆಟ್ಟದ ಹಳ್ಳಿಯ ಗುಡ್ಡ ಎದುರಾಗಿದೆ. ಈ ಗುಡ್ಡವನ್ನು ಕೊರೆದು ಪಾತ್ರ ನಿರ್ಮಿಸುವಷ್ಟು ಕಾವೇರಿ ಶಕ್ತವಲ್ಲ. ಎಂದೆ Z ಆಕಾರದ ಬಾಗನ್ನು ತಳೆದು ಪೂರ್ವವಾಹಿ ಕಾವೇರಿ ದಕ್ಷಿಣಕ್ಕೆ ತಿರುಗಿದೆ. ನದಿ ತಿರುಚಿಕೊಳ್ಳಲು ಇನ್ನೂ ಕೆಲವು ಆಂಶಗಳು ಪೂರಕವಾಗಿದೆ. ಕಪಿಲಾನದಿ ಕೂಡಿಕೊಂಡಿದುದರಿಂದ ನೀರಿನ ಗಾತ್ರ ಹೆಚ್ಚಾಗಿದೆ. ಜೊತೆಗೆ ಇಲ್ಲಿನ ನೆಲದ ಇಳುಕಲು ಅನುಕ್ರಮವಾಗಿದೆ. ಅಲ್ಲದೆ ನದಿ ನೀರು ಸಾಗಿಸುವ ಹೊರೆಯು ತುಂಬ ಲಘುವಾದದ್ದು. ದೊಡ್ಡ ದೊಡ್ಡ ಬಂಡೆ — ಗುಂಡುಗಳು ನದಿ ಪಾತ್ರದಲ್ಲಿ ಕಂಡುಬರುವುದಿಲ್ಲ. ಬದಲು ಸಣ್ಣಸಣ್ಣ ಮರಳನ್ನು ನಾಡಶಿಲೆಯಿಂದ ಕೊಚ್ಚಿ ಸಾವಧಾನವಾಗಿ - ಆದರೆ ನಿರಂತರವಾಗಿ ಸಾಗಿಸುತ್ತದೆ. ಇಂಥ ಪರಿಸ್ಥಿತಿಯಲ್ಲಿ ನದಿ ಸುತ್ತು ಬಳಸಿ ಹರಿಯುವುದು ಸರ್ವಸಾಮಾನ್ಯ. ಬೆಟ್ಟರ ಹಳ್ಳಿಯ ನಿಮ್ನ ನದಿ ದಡದಲ್ಲಿ ನದಿ ತಳ ಆಳವಾಗಿದ್ದು ಮುಂದೆ ಕೆಳಪಾತ್ರದಲ್ಲಿ ಕಟ್ಟೇಪುರ. ಹೊಸ ಹೆಮ್ಮಿಗೆ ಭಾಗದಲ್ಲಿ ಪೀನ ಮರಳು ಗುಡ್ಡೆ ಉಂಟಾಗಿದೆ. ಹೆಮ್ಮಿಗೆ ಮತ್ತು ಮಾಲಂಗಿ ನಡುವೆ ನದಿ ಪಾತ್ರದಲ್ಲಿ ಹೆಚ್ಚು ಕೊರೆತವಾಗಿದೆ. ಇಲ್ಲಿ ನೀರಿನ ವೇಗವೂ ಹೆಚ್ಚು, ಎಂದೇ ಸವೆತದ ಪ್ರಮಾಣವೂ ಹೆಚ್ಚು. ತಲಕಾಡಿನ ಕಡೆಗಿರುವ ಪೀನ ದಡದ ಭಾಗದಲ್ಲಿ ನೀರಿನ ಹರಿವಿನ ವೇಗ ಕಡಿಮೆ. ಹೀಗಾಗಿ ಆ ಭಾಗದಲ್ಲಿ ಮರಳು ದಂಡೆಗಳು ಸಂಚಯನವಾಗಲು ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಿದೆ ; ಮೊದಲು ನದಿಯ ದಡದಲ್ಲೇ ನಿರ್ಮಿಸಲಾಗಿದ್ದ ದೇವಾಲಯಗಳು ನದಿ ಪಾತ್ರದ ಸ್ಥಳಾಂತರದಿಂದಾಗಿ ಈಗ ದಡದಿಂದ ದೂರ ಉಳಿದಿವೆ. ಗಂಗರ ಕಾಲದಲ್ಲಿ ತಲಕಾಡು ಊರಿಗೆ ಸಮೀಪದಲ್ಲೇ ನದಿ ಹರಿಯುತ್ತಿತ್ತೆಂಬುದಕ್ಕೆ ಸಾಕ್ಷಿಗಳಾಗಿ ಹಳೆಯ ತಲಕಾಡಿನ ಉತ್ಖನನ ಮಾಡಿದಾಗ ಅಲ್ಲಿ ತಳಗಲ್ಲು ಸಿಕ್ಕದೆ, ನದಿಯುವ ಸಂಚಯಿತವಾದ ಹೂಳು-ಮರಳು ಕಂಡುಬಂದಿದೆ. ಪದೇ ಪದೇ ನದಿ ಪಾತ್ರದಲ್ಲಾಗುತ್ತಿದ್ದ ಪ್ರವಾಹ ನುರುಜು ಮತ್ತು ಮರಳನ್ನು ಸಾಕಷ್ಟು ಪ್ರಮಾಣದಲ್ಲಿ ಒಯ್ದು, ಸಂಚಯಿಸಿ ತನ್ನ ಪಾತ್ರಕ್ಕೆ ಅಡ್ಡಿಪಡಿಸಿಕೊಂಡಿದ್ದರಿಂದ ಪಶ್ಚಿಮದತ್ತ ನದಿಪಾತ್ರ ಸರಿಯುವಂತಾಯಿತು. ವಾಸ್ತವವಾಗಿ ತಲಕಾಡು ಪ್ರದೇಶವನ್ನು ಪ್ರವಾಹದ ಬಯಲು ಎನ್ನಬಹುದು. ಮರಳುದಿಬ್ಬಗಳು ಬಹುತೇಕ ಹಳೆಯ ತಲಕಾಡಿನ ಪಶ್ಚಿಮದಲ್ಲಿ ಹೆಚ್ಚು ಕಂಡುಬರುತ್ತವೆ. ವಕ್ರರೇಖಾತ್ಮಕವಾಗಿ ವಾಯುವ್ಯ — ಆಗ್ನೇಯ ದಿಕ್ಕಿಗೆ ಓರಣಗೊಂಡಿವೆ. ಕಾವೇರಿ ನದಿಯ ಈ ಭಾಗದ ಎಡ ದಂಡೆಯಲ್ಲಿ ಮೈದಳೆದಿರುವ ಉದ್ದುದ್ದನೆಯ ಮರಳ ದಂಡೆಗಳೇ ತಲಕಾಡಿನ ಮರಳ ದಿಬ್ಬಗಳ ಮೂಲ ಆಕರ. ಚಕ್ರಕಾರವಾಗಿ ಸಂಚಯಿಸಿರುವ ಮರಳು ದಿಬ್ಬಗಳು ಬಹುತೇಕ ದಪ್ಪಕಣಗಳಿಂದಾಗಿವೆ. ಸಣ್ಣಮರಳಿನ ಕಣಗಳು ಗಾಳಿಯಿಂದಾಗಿ ತೂರಿಹೋಗಿವೆ. ಮರಳು ದಂಡೆಗಳ ಮೇಲೆ ಬೀಸಿದ ಬಲವಾದ ಗಾಳಿ ಮತ್ತೆಮತ್ತೆ ಮರಳನ್ನು ಕೇರುವುದು — ತೂರುವುದು. ಅತಿ ಸಣ್ಣ ಕಣಗಳನ್ನು ತಲಕಾಡಿನೆಡೆ ಸಾಗಿಸಿ ಸಂಚಯಿಸುವುದು ನಿರಂತರವಾಗಿ ನಡೆಯುತ್ತಲೇ ಇದೆ. ತಲಕಾಡಿನ ಬಳಿಯ ಮರಳ ದಿಬ್ಬಗಳನ್ನು ಸೂಕ್ಷ್ಮವಾಗಿ ಗಮನಿಸದರೆ ಅದರಲ್ಲಿ ಬಹುತೇಕ ಸಣ್ಣ ಮರಳಿನ ಕಣಗಳಿರುವುದು ಕಂಡುಬರುತ್ತದೆ. ಗಾಳಿಬೀಸುವ ಕಡೆಗಿನ ದಿಬ್ಬಗಳಲ್ಲಿ, - ವೈದ್ಯನಾಥೇಶ್ವರ ದೇವಾಲಯದ ಮುಂಭಾಗದಿಂದ ಸ್ನಾನದ ಘಟ್ಟಕ್ಕೋಗುವ ಭಾಗದಲ್ಲಿ ವಿಶೇಷವಾಗಿ ಕಾವೇರಿ ನದಿಯ ಎಡದಡದಲ್ಲಿ - ಮರಳಿನಲ್ಲಿ ಅಡ್ಡ ಸ್ತರದ ಗುರುತುಗಳು ಸ್ಪಷ್ಟವಾಗಿ ಮೂಡಿವೆ. ಈ ಒಂದೊಂದು ಸ್ತರದ ನಡುವಿನ ಕೋನ 30º ಗಳು. ಬೇರೆ ಬೇರೆ ದಿಕ್ಕಿನಿಂದ ಗಾಳಿ ಬೀಸಿದಾಗ ಈ ಬಗೆಯ ಸ್ತರ ವಿನ್ಯಾಸ ರೂಪುಗೊಳ್ಳುತ್ತದೆ. ಹಿಂದೊಮ್ಮೆ ಇಲ್ಲಿ ಮೂವತ್ತು ದೇವಾಲಯಗಳಿದ್ದುವೆಂದು ತಿಳಿದುಬಂದಿದೆ. ಒತ್ತಿ ಬಂದ ಮರಳು ಅನೇಕ ದೇವಾಲಯಗಳನ್ನು ಮುಚ್ಚಿತ್ತು. ಈ ಪೈಕಿ ವೈಕುಂಠನಾರಾಯಣ ಮತ್ತು ರಾಜರಾಜೇಶ್ವರ ದೇವಾಲಯಗಳು ಸಂಪೂರ್ಣವಾಗಿ ಹೂತು ಹೋಗಿವೆಯೆಂದು ನರಸಿಂಹಾಚಾರ್ 1950ರಲ್ಲೇ ವರದಿಮಾಡಿದ್ದಾರೆ. ಈಗ್ಗೆ ಸುಮಾರು ನಾಲ್ಕು ದಶಕಗಳ ಹಿಂದೆ ಆನಂದೇಶ್ವರ ಮತ್ತು ಗೌರಿಶಂಕರ ದೇವಾಲಯಗಳನ್ನು ಮರಳಿನಿಂದ ತೆರವುಗೊಳಿಸಲಾಯಿತು. ಆನಂದೇಶ್ವರ ದೇವಾಲಯ ಹೈದರಾಲಿ ಕಾಲದ್ದು (1761) ಮತ್ತು ಗೌರಿಶಂಕರ ದೇವಾಲಯ ಚಿಕ್ಕದೇವರಾಯ ಒಡೆಯರ ಕಾಲದ್ದು (1673 — 1704). ಹೊಯ್ಸಳ ದೊರೆ ವಿಷ್ಣುವರ್ಧನ 1117ರಲ್ಲಿ ಕಲ್ಪಿಸಿದ ಕೀರ್ತಿನಾರಾಯಣ ದೇವಾಲಯ ಕೂಡ ಮರಳಿನಲ್ಲಿ ಮುಚ್ಚಿಹೋಗಿತ್ತು; 1925ರಲ್ಲಿ ಮರಳನ್ನು ಬಗೆದು ದೇವಾಲಯವನ್ನು ಅನಾವರಣಗೊಳಿಸಲಾಯಿತು. ಮರಳು ಒತ್ತಿ ಬಂದು ದೇವಾಲಯವನ್ನು ಮುಚ್ಚದಂತೆ ರಕ್ಷಣೆ ಮಾಡಲು ಮೈಸೂರಿನ ಹಿಂದಿನ ರಾಜಾಡಳಿತದಲ್ಲಿ ಗೋಡೆಯನ್ನು ನಿರ್ಮಿಸಲಾಯಿತು. ಕೀರ್ತಿನಾರಾಯಣ ದೇವಾಲಯಕ್ಕೆ 230 ಮೀಟರ್ ಪೂರ್ವಕ್ಕಿರುವ ವೈದ್ಯೇಶ್ವರ ದೇವಾಲಯ ಹಳೆಯ ತಲಕಾಡಿನ ಆಗ್ನೇಯ ದಿಕ್ಕಿನಲ್ಲಿದ್ದು ಈ ಭಾಗದ ಮರಳು ದಿಬ್ಬದ ಅಂಚು ಇಲ್ಲಿ ಕೊನೆಗೊಳ್ಳುತ್ತದೆ. ಈ ದೇವಾಲಯದ ವಿಶೇಷÀವೆಂದರೆ ಇದರ ನಿರ್ಮಾಣ ಹತ್ತನೇ ಶತಮಾನದ ಚೋಳರ ಕಾಲದಿಂದ ಪ್ರಾರಂಭವಾಗಿ, ಹದಿಮೂರನೇ ಶತಮಾನದ ಹೊಯ್ಸಳರ ಕಾಲದಲ್ಲೂ ಮುಂದುವರಿದು ಹದಿನಾಲ್ಕನೇ ಶತಮಾನದ ವಿಜಯನಗರದ ಆಡಳಿತದವರೆಗೂ ವಿಸ್ತರಿಸಿತ್ತು. ಈ ದೇವಾಲಯ ಕೂಡ ಹಿಂದೊಮ್ಮೆ ಮರಳಿನಿಂದ ಮುಚ್ಚಿಹೋಗಿತ್ತು. ಅದರ ಪ್ರಾಮುಖ್ಯದಿಂದಾಗಿ ಆಗಾಗ ಮರಳನ್ನು ತೆಗೆದು, ದೇವಾಲಯ ಮುಚ್ಚಿಹೋಗದಂತೆ ನೋಡಿಕೊಳ್ಳಲಾಯಿತು. ಹತ್ತನೇ ಶತಮಾನದಲ್ಲಿ ನಿರ್ಮಾಣಮಾಡಿದ ಪಾತಾಳೇಶ್ವರ. ಹದಿನಾಲ್ಕನೇ ಶತಮಾನದಲ್ಲಿ ನಿರ್ಮಾಣ ಮಾಡಿದ ಮರಳೇಶ್ವರ ದೇವಾಲಯಗಳು ಆಗಾಗ ಮರಳಿನಲ್ಲಿ ಹೂತುಹೋಗುತ್ತವೆ. 20ನೇ ಶತಮಾನದಲ್ಲಿ ಅನೇಕ ಬಾರಿ ಮರಳನ್ನು ತೆಗೆದು ಈ ದೇವಾಲಯಗಳಲ್ಲಿ ಪುನರುಜ್ಜೀವನ ಮಾಡಲಾಗಿದೆ. 1986ರಲ್ಲಿ ಕೊನೆಯ ಬಾರಿಗೆ ಹೀಗೆ ಮರಳಿನಿಂದ ಅನಾವೃತಗೊಳಿಸಲಾಗಿತ್ತು. ಮರಳು ದಿಬ್ಬಗಳ ಜಾರುವ ಮುಖ ಪೂರ್ವಕ್ಕಿರುವುದರಿಂದ ಈ ಬಗೆಯ ಮರಳಿನ ಅತಿಕ್ರಮ ಆಗಾಗ ಆಗುತ್ತಿರುತ್ತದೆ. ಈ ದೇವಾಲಯಗಳು ಇದಕ್ಕೆ ಮೂಕ ಸಾಕ್ಷಿಗಳಾಗಿವೆ. ಮರಳಿನ ದಿಬ್ಬಗಳಾಗಲು ಮೂರು ಬಗೆಯ ಸ್ಥಿತಿಗಳು ನಿರ್ಮಾಣವಾಗಬೇಕು. 1. ಬೀಸುವ ಗಾಳಿ ಮರಳಿನ ಕಣಗಳನ್ನು ಒಯ್ಯುವ ಸಾಮಥ್ರ್ಯ ಪಡೆದಿರಬೇಕು 2. ಮೂಲದಲ್ಲಿ ಮರಳಿನ ಸಾಕಷ್ಟು ಕಣಗಳಿರಬೇಕು. 3. 4. ಸಾಗುತ್ತಿರುವ ಮರಳಿಗೆ ಅಡೆ ತಡೆಯಿಂದಾಗಿ ಅದು ಸಂಚಯನವಾಗುವಂತಿರಬೇಕು. ತಲಕಾಡಿನಲ್ಲಿ ಕಾವೇರಿನದಿಗೆ ಈ ಬಗೆಯ ವಾತಾವರಣ ನಿರ್ಮಾಣವಾಗಿದೆ. ತಲಕಾಡಿನ ಇತಿಹಾಸದ ಅಧ್ಯಯನ : ತಲಕಾಡಿನ ಭೂವಿಜ್ಞಾನ ಮತ್ತು ಇತಿಹಾಸ ಎರಡನ್ನೂ ಅಧ್ಯಯನಮಾಡಿದಾಗ ಇಲ್ಲಿ ಮರಳ ದಿಬ್ಬಗಳ ಉಗಮದ ಬಗ್ಗೆ ವೈಜ್ಞಾನಿಕವಾದ ವಿವರಣೆ ಕೊಡಬಹುದು. ಕ್ರಿ.ಶ. 500ರಲ್ಲಿ ಗಂಗರು ತಲಕಾಡನ್ನು ತಮ್ಮ ರಾಜಧಾನಿಯಾಗಿ ಆಯ್ಕೆಮಾಡಿಕೊಂಡಾಗ ಇಲ್ಲಿ ಮರಳಿನ ದಿಬ್ಬಗಳಿರಲಿಲ್ಲವೆಂಬ ಅಂಶ ಅದÀರ ಚರಿತ್ರೆಯಿಂದ ತಿಳಿದುಬರುತ್ತದೆ. ವಿಜಯನಗರ ಸಾಮ್ರಾಜ್ಯದ ಆಡಳಿತದ ಸಮಯದಲ್ಲೂ ಇಲ್ಲಿ ದೇವಾಲಯಗಳ ನಿರ್ಮಾಣ ನಡೆದೇಯಿತ್ತು ಎಂಬುದನ್ನು ಪರಿಗಣಿಸಿದಾಗ 14ನೇ ಶತಮಾನದ ಉತ್ತರಾರ್ಧದಲ್ಲೂ ಇಲ್ಲಿ ಮರಳಿನ ದಿಬ್ಬಗಳು ಮೈದಳೆದಿರಲಿಲ್ಲ. ವಿಜಯನಗರ ಪ್ರತಿನಿಧಿ ತಿರುಮಲರಾಯ 1610ರಲ್ಲಿ ಶ್ರೀರಂಗಪಟ್ಟಣವನ್ನು ತೊರೆದು ತಲಕಾಡಿಗೆ ಬಂದ. ಆತನ ಮಡದಿ ಅಲುಮೇಲಮ್ಮ ಮೈಸೂರರಸರಿಗೆ ಶಾಪರೂಪದಲ್ಲಿ ತಲಕಾಡ ಮರಳಾಗಿ - ಮಾಲಿಂಗಿ ಮಡುವಾಗಿ ಮೈಸೂರರಸರಿಗೆ ಮಕ್ಕಳಾಗದಿರಲಿ ಎಂಬ ಶಾಪಕೊಟ್ಟು ಮಾಲಿಂಗಿ ಮಡುವಿಗೆ ಆಭರಣಗಳ ಸಮೇತ ಬಿದ್ದಳೆಂದು ನಂಬಿಕೆ ಪ್ರಚಲಿತವಿದೆ. ಈ ನಂಬಿಕೆಯ ಸತ್ಯಾಸತ್ಯತೆ ಏನೇ ಇರಲಿ ತಲಕಾಡಿನಲ್ಲಿ ಮರಳು ದಿಬ್ಬಗಳು ಆಗ ಮೈದಳೆದಿದ್ದವು ಎನ್ನುವುದಕ್ಕೆ ಇದೊಂದು ಪ್ರಾಥಮಿಕ ವರದಿಯಾಗುತ್ತದೆ. 1610ರ ಮರಳುಗುಡ್ಡೆ ಗಳಾಗುವ ಪ್ರಕ್ರಿಯೆ ಪ್ರಾರಂಭವಾದವು. ಅಂದರೆ ತಲಕಾಡಿನ ಮರಳು ಈಗ್ಗೆ 400 ವರ್ಷಗಳ ಹಿಂದೆ ಉಂಟಾದವು — ಅದಕ್ಕೆ ಮೊದಲಲ್ಲ. ನರಸಿಂಹಾಚಾರ್ ಅವರ ವರದಿಯಂತೆ (1950) ಹಳೆಯ ತಲಕಾಡಿನ ವ್ಯಾಪ್ತಿ ಬಹುದೊಡ್ಡದು. 400 ವರ್ಷ ಹಿಂದೆಯೇ ಮರಳು ದೊಡ್ಡ ಪ್ರಮಾಣದಲ್ಲಿ ಹಬ್ಬಿ ಕೆಲವೆಡೆ 10 ಮೀಟರ್‍ಗಳಷ್ಟು ಗುಡ್ಡಗಳು ಬೆಳೆದಿದ್ದವು. ಮರಳಿನ ಗುಡ್ಡಗಳಿಗೆ ಮೂಲ ಇಲ್ಲಿನ ದಟ್ಟ ಅರಣ್ಯವನ್ನು ನಾಶಪಡಿಸಿದ್ದು. ವಿಜಯನಗರ ಮಂತ್ರಿ ಮಾಧವಮಂತ್ರಿ 1346ರಲ್ಲಿ ತಲಕಾಡಿನ ಬಳಿ ಕಾವೇರಿಗೆ ಅಡ್ಡವಾಗಿ ಕಟ್ಟಿ ಕಲ್ಪಿಸಿದುದೇ ಮರಳು ಮತ್ತಷ್ಟು ಹೆಚ್ಚು ಉತ್ಪಾದನೆಯಾಗುವುದಕ್ಕಾಗಿ ಕಾರಣವಾಯಿತೆಂದು ಊಹಿಸಿದ್ದಾರೆ. ಕಾವೇರಿ ನದಿಪಾತ್ರದಲ್ಲಿ ಹೂಳುತುಂಬುವುದು ಸಾಮಾನ್ಯವಾಗಿ ಪ್ರವಾಹ ಉನ್ನತ ಮಟ್ಟದಲ್ಲಿದ್ದಾಗ ನದಿ ಹೊತ್ತು ತದ ಈ ಸಂಚಯನಗಳು ನೀರಿನ ಹರಿವು ಕಡಿಮೆ ಇದ್ದಾಗ ವಾತಾವರಣಕ್ಕೆ ತೆರೆದುಕೊಳ್ಳುತ್ತವೆ. ಗಾಳಿ ಬೀಸಲು ತೊಡಗಿದಾಗ ಕಣಗಳು ಸಾಗಲು ಪ್ರಾರಂಭಿಸುತ್ತವೆ. ಈ ದೃಷ್ಟಿಯಿಂದ ಹೆಮ್ಮಿಗೆ ಬಳಿ ಮಾಧವ ಮಂತ್ರಿ ನಿರ್ಮಿಸಿದ ಕಟ್ಟೆ ನದಿಯ ಕೆಳ ಹರಿವನ್ನು ಸಾಕಷ್ಟು ಹಾನಿ ಮಾಡಿದೆ. ಹೆಚ್ಚು ಪ್ರದೇಶ ತೆರೆದುಕೊಂಡು ಶೇಖರಣೆಯಾದ ಮರಳು ಗಾಳಿಯ ಹೊಡೆತದಲ್ಲಿ ಸಾಗನೆಯಾಗಿ ಮರಳಿನ ದಿಬ್ಬಗಳು ಹುಟ್ಟಲು ಅನುಮಾಡಿಕೊಟ್ಟಿದೆ. ತಲಕಾಡಿನಲ್ಲಿ ಗಾಳಿಬೀಸುವ ದಿಕ್ಕನ್ನು ಅಧ್ಯಯನ ಮಾಡಿದರೆ ಮತ್ತೊಂದು ಅಂಶವೂ ಸ್ಪಷ್ಟವಾಗುತ್ತದೆ. ಇಲ್ಲಿ ಮಾನ್‍ಸೂನ್ ಗಾಳಿ ಈಶಾನ್ಯ - ನೈರುತ್ಯ ದಿಕ್ಕಿನಲ್ಲಿ ಬೀಸುತ್ತದೆ. ಇದರ ಲಂಬಕೋನದಲ್ಲಿ ಅಂದರೆ ವಾಯುವ್ಯ-ಆಗ್ನೇಯ ದಿಕ್ಕಿನಲ್ಲೂ ಗಾಳಿಬೀಸುವುದುಂಟು ಆಗ್ನೇಯ ದಿಕ್ಕಿನಲ್ಲಿ ಕೊಳ್ಳೆಗಾಲದ ಬೆಟ್ಟ ಸಾಲಿನಲ್ಲಿ ತೆರಪಿರುವುದರಿಂದ ಈ ಭಾಗದ ಗಾಳಿ ಜೋರಾಗಿ ಬೀಸುತ್ತದೆ. ಇನ್ನೊಂದು ಭೌಗೋಳಿಕ ಅಂಶ ಇಲ್ಲಿ ಗಮನಾರ್ಹವಾದುದ್ದು. ತಲಕಾಡಿಗೆ ಈಶಾನ್ಯಭಾಗದಲ್ಲಿ ಯಾವುದೇ ದೊಡ್ಡದಾದ ಬೆಟ್ಟಗಳಾಗಲಿ, ಮೇಲ್ಮೈ ಏರಿಳಿತವಾಗಲಿ ಕಂಡುಬರುವುದಿಲ್ಲ. ಅಂದರೆ ಈಶಾನ್ಯ — ಅಥವಾ ಆಗ್ನೇಯ ದಿಕ್ಕಿನ ಗಾಳಿಗೆ ಅಡೆತಡೆಗಳಿಲ್ಲ. ಇಲ್ಲಿರುವ ದೇವಾಲಯಗಳು ಅಲ್ಲಲ್ಲೇ ಹಂಚಿಹೋಗಿದುದರಿಂದ ಗಾಳಿಗೆ ಅಲ್ಪಸ್ವಲ್ಪ ತಡೆಯಾಗಬಹುದೇ ವಿನಾ ಸ್ವತಃ ಅವೇ ದೊಡ್ಡ ತಡೆಗೋಡೆಗಳಾಗಿ ವರ್ತಿಸುವುದಿಲ್ಲ. ತಲಕಾಡಿನ ಭಾರಿ ಮರಳುಗುಡ್ಡೆಗಳನ್ನು ಸೃಷ್ಟಿಸಿರುವುದು. ನೈರುತ್ಯ — ಈಶಾನ್ಯ ದಿಕ್ಕಿನಲ್ಲಿ ಬೀಸುವ ಮಾನ್‍ಸೂನ್ ಗಾಳಿ. ಈ ಗಾಳಿ ಕಾವೇರಿ ನದಿಯ ಎಡದಂಡೆಯಲ್ಲಿರುವ ಮರಳುದಂಡೆಯನ್ನೂ ಕೇರಿ-ತೂರಿ ಸಾಗಿದೆ. ಅಡೆತಡೆ ಇರುವೆಡೆ ಸಂಚಯಿಸುತ್ತ ಬಂದಿದೆ. ಇದರ ಜೊತೆಗೆ ವಾಯುವ್ಯ ಈಶಾನ್ಯದ ಗಾಳಿ ಅಡ್ಡಬೀಸಿ ಮರಳಿನ ಸಂಚಯನಕ್ಕೆ ನೆರವಾಗಿದೆ. ಮರಳುರಾಶಿ ಮತ್ತಷ್ಟು ಮುನ್ನುಗ್ಗುವುದನ್ನು ತಡೆಯಲು ಅರಣ್ಯ ಇಲಾಖೆ ಗೇರುವಿಕೆ ಹಾಗೂ ನೀಲಗಿರಿ ಸಸ್ಯಗಳನ್ನು ಬೆಳೆಸಿದೆ. ತಲಕಾಡಿನ ನೈಸರ್ಗಿಕ ಮರಳರಾಶಿಯನ್ನು ಕಟ್ಟಡ ನಿರ್ಮಾಣಗಳಿಗೆ ಬಳಸುವ ಉದ್ದೇಶದಿಂದ ಹಿಂದೆ ಅದನ್ನು ಖಾಸಗಿ ಗುತ್ತಿಗೆದಾರರು ಸಾಗಿಸಲು ಪ್ರಯತ್ನಿಸಿದಾಗ ಸ್ಥಳೀಯರು - ಪರಿಸರ ಪ್ರೇಮಿಗಳು ಅದನ್ನು ವಿರೋಧಿಸಿದರು. ನಿಸರ್ಗದ ಈ ಅನುಪಮ ಸೃಷ್ಟಿ ಕಣ್ಮರೆಯಾಗುವುದು ತಪ್ಪಿತು. ತಲಕಾಡಿನ ಮರಳರಾಶಿ ಒಂದು ಅಪೂರ್ವ ರಚನೆ. ಇದನ್ನು ರಾಷ್ಟ್ರೀಯ ಸ್ಮಾರಕವೆಂದು ಪರಿಗಣಿಸಿ ಸಂರಕ್ಷಣೆ ಮಾಡುವ ಅಗತ್ಯವಿದೆ. (ಟಿ.ಆರ್.ಎ.) ಪರಿಷ್ಕರಣೆ: ಟಿ. ಆರ್. ಅನಂತರಾಮು