ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದಕ್ಷಿಣಾಯನ

ದಕ್ಷಿಣಾಯನ - ಕ್ರಾಂತಿ ವೃತ್ತದ ಮೇಲೆ ಸೂರ್ಯನ ತೋರ್ಕೆ ಚಲನೆ ಉತ್ತರದಿಂದ ದಕ್ಷಿಣಕ್ಕೆ ಇರುವ ಅವಧಿ. ಮೇಷಬಿಂದುವನ್ನು ((( ಮಾರ್ಚ್ 21ರ ಸುಮಾರಿಗೆ ಅಡ್ಡ ಹಾಯ್ದ (ಅಂದು ಹಗಲುಗಳ ಉದ್ದ ಸಮ) ಸೂರ್ಯ ಜೂನ್ 22 ರ ಸುಮಾರಿಗೆ S1 ಬಿಂದುವಿಗೆ ಬರುತ್ತದೆ. ಇದಕ್ಕೆ ಉತ್ತರ ಅಯನಾಂತ ಬಿಂದುವೆಂದು ಹೆಸರು. ಸೂರ್ಯನ ಉತ್ತರಾಭಿಮುಖ ಚಲನೆ ಅಲ್ಲಿ ಮುಗಿದು ದಕ್ಷಿಣಾಭಿಮುಖ ಚಲನೆ ಆರಂಭವಾಗುತ್ತದೆ. ಇದು ಹೀಗೆಯೇ ಮುಂದುವರಿದು ಡಿಸೆಂಬರ್ 21 ರ ಸುಮಾರಿಗೆ ಸೂರ್ಯ S2 ಬಿಂದುವಿಗೆ ಬರುತ್ತದೆ. ಇದಕ್ಕೆ ದಕ್ಷಿಣ ಅಯನಾಂತ ಬಿಂದುವೆಂದು ಹೆಸರು. ಸೂರ್ಯನ ದಕ್ಷಿಣಾಭಿಮುಖ ಚಲನೆ ಅಲ್ಲಿ ಮುಗಿದು ಉತ್ತರಾಭಿಮುಖ ಚಲನೆ ಅರಂಭವಾಗುತ್ತದೆ. S1ರಿಂದ S2ರ ತನಕದ ಅವಧಿ ದಕ್ಷಿಣಾಯನ.

ಚಿತ್ರ-1

ಭಾರತೀಯ ಜ್ಯೋತಿಶ್ಯಾಸ್ತ್ರದ ಪ್ರಕಾರ ಕರ್ಕಟ ಸಿಂಹ ಕನ್ಯಾ ತುಲಾ ವೃಶ್ಚಿಕ ಧನುಸ್ಸು_ಈ ಆರು ರಾಶಿಗಳಲ್ಲಿ ಸೂರ್ಯ ದಕ್ಷಿಣದ ಕಡೆಗೆ ಸಂಚರಿಸುವ ವರ್ಷ ಶರತ್ ಹೇಮಂತ ಎಂಬ ಮೂರು ಋತುಗಳ ಕಾಲವೇ ದಕ್ಷಿಣಾಯನ. ಆಷಾಢ ಮಾಸದ ಕರ್ಕಟಕ ಸಂಕ್ರಮಣದ ದಿವಸ ದಕ್ಷಿಣಾಯನ ಪ್ರಾರಂಭವಾಗುತ್ತದೆ. ಸೂರ್ಯ ಕರ್ಕಟ ರಾಶಿಯನ್ನು ಪ್ರವೇಶಿಸುವುದಕ್ಕೆ ಹನ್ನೆರಡು ಗಂಟೆಗಳ ಕಾಲ ಮೊದಲಿನಿಂದ ಸಂಕ್ರಮಣ ಕಾಲದ ವರೆಗೆ ದಕ್ಷಿಣಾಯನ ಪುಣ್ಯಕಾಲವಿರುತ್ತದೆ. ಇದರಲ್ಲೂ ಸಂಕ್ರಮಣಕ್ಕೆ ಸನ್ನಿಹಿತವಾದ ಕಾಲ ಪುಣ್ಯತಮವಾದುದು. ಈ ಪುಣ್ಯ ಕಾಲದಲ್ಲಿ ಮಾಡುವ ಸ್ನಾನದಾನಗಳು ಅನಂತ ಪುಣ್ಯಫಲಗಳನ್ನು ಕೊಡುತ್ತದೆ. ಈ ದಿವಸದ ವಾರಾಧಿಪತಿಯಾದ ಗ್ರಹ ವರ್ಷದ ನವನಾಯಕರಲ್ಲಿ ಸಸ್ಯಾಧಿಪತ್ಯವನ್ನು ಪಡೆಯುತ್ತಾನೆ. ಮಹಾನದಿಗಳಿಗೆ ಅಂದಿನಿಂದ ಮೂರು ದಿವಸಗಳೂ ಉಳಿದ ನದಿಗಳಿಗೆ ಒಂದು ತಿಂಗಳ ಕಾಲವೂ ರಜೋದೋಷವಿರುವುದರಿಂದ ಅವುಗಳಲ್ಲಿ ಸ್ನಾನಮಾಡಕೂಡದು. ದಕ್ಷಿಣಾಯನ ಶುಭಕಾರ್ಯಗಳಿಗೆ ಪ್ರಶಸ್ತವಲ್ಲ. (ಎಸ್.ಎನ್.ಕೆ.)