ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದೌಲತ್ ಖಾನ್ ಲೂದಿ

ದೌಲತ್ ಖಾನ್ ಲೂದಿ ದೆಹಲಿಯ ಸುಲ್ತಾನನಾಗಿದ್ದ (1517-26) ಇಬ್ರಾಹಿಮ್ ಲೂದಿಯ ಆಳ್ವಿಕೆಯ ಕಾಲದಲ್ಲಿ ಪಂಜಾಬಿನ ಮಾಂಡಲಿಕನಾಗಿದ್ದವ. ತಾತರ್ ಖಾನ್ ಲೂದಿಯ ಮಗ. ಈತ ಮಹತ್ತ್ವಾಕಾಂಕ್ಷಿಯಾಗಿದ್ದ. ಮಾಂಡಲಿಕನಾಗಿದ್ದರೂ ಸ್ವತಂತ್ರ ರೀತಿಯಲ್ಲಿ ಆಳುತ್ತಿದ್ದ. ಪ್ರಬಲನಾಗಿದ್ದ ಈತನ ನಿಷ್ಠೆಯನ್ನು ಗಳಿಸಲು ಸುಲ್ತಾನ ಇಬ್ರಾಹಿಮ್ ಲೂದಿ ಇಚ್ಛಿಸಿ, ತನ್ನ ಆಸ್ಥಾನಕ್ಕೆ ಭೇಟಿ ನೀಡಬೇಕೆಂದು ಈತನಿಗೆ ಕರೆ ಕಳುಹಿಸಿದ. ದೌಲತ್ ಖಾನ್ ಲೂದಿ ಸ್ವತಃ ಅಲ್ಲಿಗೆ ಹೋಗದೆ ಅನಾರೋಗ್ಯದ ನೆವ ಒಡ್ಡಿ ತನ್ನ ಮಗ ದಿಲ್ವರ್ ಖಾನ್ ಲೂದಿಯನ್ನು ದೆಹಲಿಗೆ ಕಳಿಸಿದ. ಇದರಿಂದ ಕುಪಿತನಾದ ಇಬ್ರಾಹಿಮ್ ಲೂದಿ, ದೌಲತ್ ಖಾನನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗುವುದೆಂದು ಎಚ್ಚರಿಕೆ ನೀಡಿದ.

ಒಂದು ರೀತಿಯಲ್ಲಿ ಈ ಘಟನೆ ಮೊಗಲ್ ಸಾಮ್ರಾಜ್ಯಸ್ಥಾಪನೆಗೆ ನಾಂದಿಯಾಯಿತು. ಇಬ್ರಾಹಿಮ್ ಲೂದಿಯ ಕ್ರೂರ ಆಡಳಿತವನ್ನು ಕೊನೆಗೊಳಿಸಬೇಕೆಂಬ ದುರುದ್ದೇಶದಿಂದ ದೌಲತ್‍ಖಾನ್ ಲೂದಿ ಬಾಬರನಿಗೆ ಆಮಂತ್ರಣ ನೀಡಿದ. ಭಾರತದಲ್ಲಿ ತನ್ನ ಪ್ರಭುತ್ವವನ್ನು ಸ್ಥಾಪಿಸುವ ಆಕಾಂಕ್ಷೆ ಹೊಂದಿದ್ದ ಬಾಬರನಿಗೆ ಇದರಿಂದ ಒಳ್ಳೆಯ ಅವಕಾಶ ದೊರೆತು, ಅವನ ಕಾರ್ಯ ಸುಲಭವಾಯಿತು.

1522-23ರಲ್ಲಿ ಇಬ್ರಾಹಿಮ್ ಲೂದಿಯ ವಿರೋಧಿಯೂ ಬಹಲೂಲ್ ಖಾನ್ ಲೂದಿಯ ಮಗನೂ ಆದ ಆಲಮ್ ಖಾನ್ ಲೂದಿಯನ್ನು ಪಂಜಾಬಿನ ಸುಲ್ತಾನನೆಂದು ದೌಲತ್ ಖಾನ್ ಲೂದಿ ಘೋಷಿಸಿದ. ಈ ವಿಚಾರವನ್ನು ತಿಳಿದ ಇಬ್ರಾಹಿಮ್ ಲೂದಿ ದೌಲತ್ ಖಾನ್ ಲೂದಿಯದಿಂದ ಲಾಹೋರನ್ನು ವಶಪಡಿಸಿಕೊಂಡ. ಆದರೆ 1524ರಲ್ಲಿ ಬಾಬರನ ಸೈನ್ಯ ಲಾಹೋರ್ ಮತ್ತು ದೀಪಲ್‍ಪುರವನ್ನು ಇಬ್ರಾಹಿಮ್ ಲೂದಿಯಿಂದ ವಶಪಡಿಸಿಕೊಂಡಿತು. ಇದರಿಂದ ಸಂತೋಷಗೊಂಡ ದೌಲತ್ ಖಾನ್ ಲೂದಿ ಬಾಬರನಿಗೆ ತನ್ನ ಕೃತಜ್ಞತೆಯನ್ನು ಸಲ್ಲಿಸಲು ಭೇಟಿ ನೀಡಿದಾಗ ಬಾಬರ್ ಆತನಿಗೆ ಜಲಂಧರ್ ಮತ್ತು ಸುಲ್ತಾನ್‍ಪುರದ ಮಾಂಡಲಿಕನ ಅಧಿಕಾರವನ್ನು ಮಾತ್ರ ನೀಡಿದ. ಲಾಹೋರಿನಲ್ಲಿ ಪುನಃ ತನ್ನ ಅಧಿಕಾರವನ್ನು ಸ್ಥಾಪಿಸುವುದರಲ್ಲಿ ಉತ್ಸುಕ್ತನಾಗಿದ್ದ ದೌಲತ್ ಖಾನ್ ಲೂದಿಗೆ ನಿರಾಶೆಯಾಯಿತು. ತನ್ನ ಸ್ಥಾನಮಾನಗಳನ್ನು ಕಳೆದುಕೊಂಡು ಕ್ರೋಧಗೊಂಡ ದೌಲತ್ ಖಾನ್ ಲೂದಿ ಬಾಬರನನ್ನು ಕೊಲೆಮಾಡಲು ಪ್ರಯತ್ನಿಸಿ ವಿಫಲನಾದ.

ಪಂಜಾಬಿನಲ್ಲಿ ತನ್ನ ಪ್ರತಿನಿಧಿಯನ್ನು ಬಿಟ್ಟು ಬಾಬರ್ ಕಾಬೂಲಿಗೆ ಹಿಂದಿರುಗಿದ. ಅನಂತರ ಸಮಯ ಸಾಧಿಸಿ ಇಬ್ರಾಹಿಮ್ ಲೂದಿ ಲಾಹೋರನ್ನು ವಶಪಡಿಸಿಕೊಳ್ಳಲು ಸೈನ್ಯವನ್ನು ಕಳುಹಿಸಿದ. ಆಗ ಸೈನ್ಯಾಧಿಕಾರಿಗಳನ್ನು ವಶಪಡಿಸಿಕೊಂಡು ಪುನಃ ಪಂಜಾಬಿನಲ್ಲಿ ತನ್ನ ಅಧಿಕಾರವನ್ನು ಸ್ಥಾಪಿಸಲು ದೌಲತ್ ಖಾನ್ ಲೂದಿ ಪ್ರಯತ್ನಿಸಿದ. ಬಾಬರ್ 1825ರಲ್ಲಿ ಲಾಹೋರಿಗೆ ಹಿಂದಿರುಗಿ ದೌಲತ್ ಖಾನ್ ಲೂದಿಯನ್ನು ಸೋಲಿಸಿ ಸೆರೆಹಿಡಿದ. ಅವನನ್ನು ಜಲಂಧರ್‍ನ ಕೋಟೆಗೆ ಸಾಗಿಸುತ್ತಿದ್ದಾಗ ಸುಲ್ತಾನಪುರದಲ್ಲಿ ದೌಲತ್ ಖಾನ್ ಲೂದಿ ಮರಣಹೊಂದಿದ. (ಪಿ.ಕೆಯು.)