ದ್ರಾಕ್ಷಿ ವೈಟೇಸೀ ಕುಟುಂಬಕ್ಕೆ ಸೇರಿದ ಒಂದು ಜನಪ್ರಿಯ ಹಣ್ಣಿನ ಸಸ್ಯ (ಗ್ರೇಪ್). ಇದನ್ನು ಮುಖ್ಯವಾಗಿ ಉಷ್ಣ ಮತ್ತು ಸಮಶೀತೋಷ್ಣ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ. ದ್ರಾಕ್ಷಿ ಹಣ್ಣಿನ ತವರು ಏಷ್ಯ ಮೈನರ್ ಎಂದು ಹೇಳಲಾಗಿದೆ. ಇಲ್ಲಿಂದ ಪೂರ್ವ ಮತ್ತು ಪಶ್ಚಿಮ ಗೋಳಾರ್ಧಗಳಿಗೆ ಇದು ಹರಡಿದೆ. ವಲಸೆಗಾರರು ಈ ಹಣ್ಣಿನ ಬೆಳೆಯನ್ನು ಕ್ರಿ.ಪೂ. 600ರಲ್ಲಿ ಫ್ರಾನ್ಸ್, ಇಟಲಿ, ಗ್ರೀಸ್ ಮತ್ತು ಜರ್ಮನಿಗಳಿಗೆ ಕೊಂಡೊಯ್ದರು ಎಂದು ನಂಬಲಾಗಿದೆ. ಅಲ್ಲಿಂದ ಯೂರೋಪಿಯನ್ ವಲಸೆಗಾರರ ಮುಖಾಂತರ ಇದು ಇತರ ದೇಶಗಳಿಗೆ ಹರಡಿತು. ಇದನ್ನು 17 ಮತ್ತು 18ನೆಯ ಶತಮಾನದಲ್ಲಿ ಉತ್ತರ ಅಮೆರಿಕದ ಪಶ್ಚಿಮ ಭಾಗದಲ್ಲಿ ಬೆಳೆಯಲು ಪ್ರಾರಂಭಿಸಿದರು. ಪ್ರಪಂಚದಲ್ಲಿ ಈಗ ಸುಮಾರು 25 ದಶಲಕ್ಷ ಎಕರೆ ಪ್ರದೇಶಗಳಲ್ಲಿ ಇದರ ಬೆಳೆಯುಂಟು. ದ್ರಾಕ್ಷಿಯನ್ನು ಹೆಚ್ಚಾಗಿ ಫ್ರಾನ್ಸ್, ಇಟಲಿ, ಸ್ಪೇನ್, ಅಮೆರಿಕ ಸಂಯುಕ್ತಸಂಸ್ಥಾನ, ಆಸ್ಟ್ರೇಲಿಯಗಳಲ್ಲಿ ಬೆಳೆಯಾಗುತ್ತಿದೆ. ಈ ಬೆಳೆಯ 82% ರಷ್ಟು ಮದ್ಯ ತಯಾರಿಕೆಯಲ್ಲಿ ಬಳಕೆಯಾಗುತ್ತಿದೆ. ಇದರಿಂದಾಗಿ ಇದು ಮುಖ್ಯ ವಾಣಿಜ್ಯ ಬೆಳೆಗಳಲ್ಲಿ ಒಂದು ಎನಿಸಿಕೊಂಡಿದೆ.

ದ್ರಾಕ್ಷಿಯ ವೈe್ಞÁನಿಕ ಹೆಸರು ವೈಟಿಸ್. ಇದರಲ್ಲಿ ಎರಡು ಪಂಗಡಗಳುಂಟು: ಯುವೈಟಿಸ್ (ತಿನ್ನಲು ಯೋಗ್ಯವಾದದ್ದು) ಮತ್ತು ಮಸ್‍ಕಾಡಿನಿಯ, ಇವೆರಡೂ ಸೇರಿ ಒಟ್ಟು 60 ಪ್ರಭೇದಗಳನ್ನು ಒಳಗೊಂಡಿವೆ. ಇವುಗಳಲ್ಲಿ ವೈಟಿಸ್ ವೈನಿಫರ ಬಹುಮುಖ್ಯವಾದದ್ದು. ಭಾರತ ಮತ್ತು ಬರ್ಮಾಗಳಲ್ಲಿ 3000"-6000 ಪ್ರದೇಶದಲ್ಲಿ ಇಪ್ಪತ್ತೈದು ಪ್ರಭೇದಗಳನ್ನು ಬೆಳೆಸಲಾಗುತ್ತದೆ. ಇವುಗಳಲ್ಲಿ ವೈಟಿಸ್ ಬರ್‍ಬರೇಟ, ವೈಟಿಸ್ ಪಾರ್ವಿಫ್ಲೋರ, ವೈಟಿಸ್ ರೂಗೋಸ. ವೈಟಿಸ್ ರಮ್ಸಿಸ್ವರ್‍ಮ ಮುಖ್ಯವಾದವು. ಉತ್ತರ ಅಮೆರಿಕದ ಪ್ರಭೇದಗಳಲ್ಲಿ ವೈ. ಲ್ಯಾಬ್ರಸ್ಕ, ವೈ, ರೊಟಂಡಿಫೋಲಿಯ, ಎಂಬವು ಮುಖ್ಯವಾದವು. ಇವುಗಳಲ್ಲಿ ಹಣ್ಣಿನ ಸಿಪ್ಪೆ ತಿರುಳಿಗೆ ಅಂಟಿಕೊಂಡಂತಿದೆ.

ವೈನಿಫರ ಪ್ರಭೇದದಲ್ಲಿ ಉಪಯೋಗಕ್ಕನುಗುಣವಾಗಿ ವೈನ್ ಬಗೆ, ಒಣದ್ರಾಕ್ಷಿ, ತಿನ್ನುವ ಬಗೆ, ಎಂಬ ಮೂರು ಮುಖ್ಯ ಬಗೆಗಳುಂಟು. ಒಣದ್ರಾಕ್ಷಿಯನ್ನು ಬೀಜರಹಿತ ದ್ರಾಕ್ಷಿಯಿಂದ ತಯಾರು ಮಾಡಲಾಗುತ್ತದೆ. ಇದಕ್ಕೆ ಕರಂಟ್ ಎಂದು ಹೆಸರು. ತಿನ್ನುವ ಬಗೆಗಳನ್ನು ಅವುಗಳ ಸಿಪ್ಪೆಯ ಬಣ್ಣಕ್ಕನುಗುಣವಾಗಿ ಬಿಳಿ, ಕಂದು ಮತ್ತು ಕರಿ ಅಥವಾ ಬೂದು ಬಗೆಗಳೆಂದು ವಿಂಗಡಿಸಲಾಗುತ್ತದೆ.

ದ್ರಾಕ್ಷಿ ಬೆಳೆಯ ವಿಸ್ತೀರ್ಣ: ಭಾರತದಲ್ಲಿ ಬೆಳೆಯುವ ಫಲಸಸ್ಯಗಳ ವಿಸ್ತೀರ್ಣದಲ್ಲಿ ದ್ರಾಕ್ಷಿ ಬೆಳೆಗೆ ನಾಲ್ಕನೆಯ ಸ್ಥಾನ. ಪ್ರತಿವರ್ಷ ಈ ಬೆಳೆಯ ಪ್ರದೇಶ ಹೆಚ್ಚುತ್ತಿದೆ. ಪ್ರಾಯಶಃ ಭಾರತದಲ್ಲಿ 10-12 ಸಾವಿರ ಎಕರೆ ಪ್ರದೇಶಗಳಲ್ಲಿ ಮುಖ್ಯವಾಗಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಹಿಮಾಚಲ ಪ್ರದೇಶ ಮತ್ತು ಪಂಜಾಬಿನಲ್ಲಿ ಬೆಳೆಸಲಾಗುತ್ತಿದೆ. ಕರ್ನಾಟಕದಲ್ಲಿ ಬೆಂಗಳೂರು, ಕೋಲಾರ, ಬಳ್ಳಾರಿ ಧಾರವಾಡ, ಬೆಳಗಾಂವಿ, ಗುಲ್ಬರ್ಗಾ ಮತ್ತು ಬೀಜಾಪುರ ಜಿಲ್ಲೆಗಳು ದ್ರಾಕ್ಷಿ ಬೆಳೆಗೆ ಪ್ರಸಿದ್ಧವಾಗಿದೆ. ಬೆಂಗಳೂರು ನೀಲ ಎಂಬ ಜಾತಿಯನ್ನು 3-4 ಸಾವಿರ ಎಕರೆ ಪ್ರದೇಶಗಳಲ್ಲಿ ಬೆಂಗಳೂರು, ಕೋಲಾರ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ಬೆಳೆಸಲಾಗುತ್ತಿದೆ. ಬಿಳಿಯ ಬಗೆಗಳನ್ನು ಒಣಹವೆ ಇರುವ ಧಾರವಾಡ, ಬೆಳಗಾಂವಿ, ಬಿಜಾಪುರ, ಗುಲ್ಬರ್ಗ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಬೆಳೆಯುವುದಿದೆ. ಇತರ ಜಿಲ್ಲೆಗಳಲ್ಲೂ ಆಯಾ ಪ್ರದೇಶದ ಭೂ, ವಾಯುಗುಣಕ್ಕೆ ಅನುಗುಣವಾಗಿ ವಿವಿಧ ದ್ರಾಕ್ಷಿ ಬಗೆಗಳನ್ನು ಬೆಳೆಸುವ ಪ್ರಯತ್ನ ಮಾಡಲಾಗಿದೆ.

ಹವಾಗುಣ: ದ್ರಾಕ್ಷಿ ಗಿಡದಲ್ಲಿ ಹಣ್ಣು ಮೂಡುವ ಕಾಲದಲ್ಲಿ ಒಣಹವೆ ಇರುವುದು ಇದರ ಬೇಸಾಯಕ್ಕೆ ಬಹುಮುಖ್ಯ. ಹಣ್ಣಿನ ಕಾಲದಲ್ಲಿ ಮಳೆ ಬಿದ್ದರೆ ಹಣ್ಣುಗಳು ಬಿರಿದು ಕೊಳೆತುಹೋಗುತ್ತವಲ್ಲದೆ ಹಣ್ಣುಗಳು ಸ್ವಾದಿಷ್ಟವಾಗಿರುವುದಿಲ್ಲ. ದ್ರಾಕ್ಷಿಬಳ್ಳಿ ರೋಗಕ್ಕೆ ತುತ್ತಾಗುತ್ತದೆ. ಹೆಚ್ಚಿನ ಚಳಿಯ ಪ್ರದೇಶದಲ್ಲಿ ದ್ರಾಕ್ಷಿ ಚೆನ್ನಾಗಿ ಬೆಳೆಯುವುದಿಲ್ಲ. ಇಂಥ ಪ್ರದೇಶಗಳಲ್ಲಿ ಬೆಳೆಯುವ ದ್ರಾಕ್ಷಿಯ ಇಳವರಿ ಒಣಹವೆ ಇರುವ ಪ್ರದೇಶಕ್ಕಿಂತ ಕಡಿಮೆ. ದ್ರಾಕ್ಷಿ ಬೆಳೆಯಲು ಪ್ರಕೃತಿದತ್ತವಾದ ಅನುಕೂಲ ಹವಾಗುಣ ಭಾರತದಲ್ಲಿ ಉಂಟು. ಬೇಸಿಗೆಯಲ್ಲಿ ಸರಾಸರಿ 900 ಈ ನಿಂದ 1100 ಈ. ಉಷ್ಣತೆಯಿರುವ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ ಉತ್ತಮವಾಗಿರುವುದು.

ಭೂಗುಣ: ಆಳವಾದ ಮರಳು ಮಿಶ್ರಿತ ಗೋಡು ಅಥವಾ ಕೆಂಪು ಭೂಮಿಯಲ್ಲಿ ದ್ರಾಕ್ಷಿ ಚೆನ್ನಾಗಿ ಬೆಳೆಯುವುದು. ಕಪ್ಪು ಭೂಮಿ ಅಥವಾ ಜೌಗು ಭೂಮಿ ಅನುಕೂಲವಲ್ಲ. ಕರ್ನಾಟಕದಲ್ಲಿ ಕೆಂಪು ಮತ್ತು ಮರಳು ಮಿಶ್ರಿತ ಕಪ್ಪು ಮಣ್ಣು, ನೀರಿನ ಅನುಕೂಲತೆಗಳು ಇರುವುದರಿಂದ ದ್ರಾಕ್ಷಿ ಬೆಳೆಗೆ ಅನುಕೂಲವಾಗಿದೆ.

ಅಭಿವೃದ್ಧಿ ಮಾಡುವ ವಿಧಾನ: ದ್ರಾಕ್ಷಿಯನ್ನು ಲಿಂಗರೀತಿ ಅಂದರೆ ಬೀಜದಿಂದಲೂ ನಿರ್ಲಿಂಗ ರೀತಿಯಿಂದ ಅಂದರೆ ಕಾಂಡತುಂಡುಗಳಿಂದಲೂ ವೃದ್ಧಿಸಬಹುದು. ಬಲಿತ ಕಡ್ಡಿಗಳಿಂದ ಅಭಿವೃದ್ಧಿ ಮಾಡುವುದೇ ವಾಡಿಕೆಯಲ್ಲಿರುವ ಕ್ರಮ. ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಬಳ್ಳಿಗಳನ್ನು ಸವರುವಾಗ 2-3 ಗೆಣ್ಣುಗಳಿರುವ ಕಡ್ಡಿಗಳನ್ನು ಆರಿಸಿಕೊಂಡು, ಚೆನ್ನಾಗಿ ಹದಗೊಳಿಸಿ ತಯಾರಿಸಿದ ಪಾತಿಗಳಲ್ಲಿ ಕಡ್ಡಿಗಳ ತಳಭಾಗ 4``-5`` ಮಣ್ಣಿನಲ್ಲಿ ಹುದುಗುವಂತೆ ನೆಡಲಾಗುತ್ತದೆ. ಪಾತಿಗಳಿಗೆ ಕ್ರಮವರಿತು ನೀರನ್ನು ಹಾಯಿಸಲಾಗುತ್ತದೆ. ನೆಟ್ಟ 1.5-2 ತಿಂಗಳಲ್ಲಿ ಕಡ್ಡಿಗಳು ಬೇರೊಡೆಯುವುವು. ಜನವರಿ ತಿಂಗಳಲ್ಲಿ ಇಂಥ ಕಡ್ಡಿಗಳನ್ನು ಬೇರೆಡೆಗೆ ನಾಟಿ ಮಾಡಬಹುದು.

ದ್ರಾಕ್ಷಿ ಕಡ್ಡಿಗಳನ್ನು ನಾಟಿ ಮಾಡುವುದಕ್ಕೆ, ಆರು ತಿಂಗಳು ಮುಂಚೆ ಆಯ್ದ ಭೂಮಿಯನ್ನು ಚೆನ್ನಾಗಿ ಉತ್ತು, ಕಳೆಗಿಡಗಳನ್ನು ಬೇರುಸಹಿತ ತೆಗೆದುಹಾಕಿ, ಮಣ್ಣಿನ ಹೆಂಟೆಗಳು ಬಿಸಿಲಿನಲ್ಲಿ ಚೆನ್ನಾಗಿ ಒಣಗಲು ಬಿಡಲಾಗುತ್ತದೆ. ಈ ಕ್ರಮದಿಂದ ಕೀಟಗಳು ಮತ್ತು ರೋಗಕಾರಕ ಶಿಲೀಂದ್ರಗಳು ನಾಶವಾಗುತ್ತವೆ. ಮಣ್ಣು ಪಕ್ವವಾಗುತ್ತವೆ. ಅನಂತರ ಹೆಂಟೆಗಳನ್ನು ಪುಡಿಮಾಡಿ ನೆಲವನ್ನು ಮಟ್ಟಸಮಾಡಿ 3`(`3(`3` ಅಳತೆಯ ಗುಂಡಿಗಳನ್ನು (ಬಳ್ಳಿಗಳನ್ನು ಹಬ್ಬಿಸುವ ವಿಧಾನಕ್ಕೆ ಅನುಗುಣವಾಗಿ ಗುಂಡಿಯಿಂದ ಗುಂಡಿಗೆ 8`,20` ಇಲ್ಲವೆ 22`ಅಂತರವಿರುವಂತೆ ಹಾಗೂ ಸಾಲಿನಿಂದ ಸಾಲಿಗೆ 10`, 20` ಇಲ್ಲವೆ 11`ಅಂತರವಿರುವಂತೆ) ತೋಡಲಾಗುವುದು. ಕಡ್ಡಿಗಳನ್ನು ನೆಡುವುದಕ್ಕೆ ಮುಂಚೆ 100 ಪೌಂಡ್ ದನದ ಗೊಬ್ಬರವನ್ನು ಮಣ್ಣಿನೊಂದಿಗೆ ಬೆರೆಸಿ ತುಂಬಲಾಗುತ್ತದೆ. ಹಸಿರೆಲೆ ಗೊಬ್ಬರವನ್ನು ಗುಂಡಿಗೆ ಹಾಕುವುದೂ ಉಂಟು. ಕಡ್ಡಿಗಳನ್ನು ನೆಡುವ ಕಾಲ ಡಿಸೆಂಬರ್ ಅಥವಾ ಜನವರಿ ತಿಂಗಳು.

ಬೇರೊಡೆದ ಕಡ್ಡಿಗಳನ್ನು ನಾಟಿ ಮಾಡುವಾಗ ಗುಂಡಿಯ ಮಧ್ಯಭಾಗದ ಸ್ವಲ್ಪ ಮಣ್ಣನ್ನು ತೆಗೆದು ಮರಗಳನ್ನು ಸುತ್ತಲೂ ಹಾಕಲಾಗುತ್ತದೆ. ಇದರಿಂದ ಹೊಸಬೇರುಗಳು ಶೀಘ್ರವಾಗಿ ಭೂಮಿಯಲ್ಲಿ ಪ್ರಸರಿಸಲು ಅನುಕೂಲವಾಗುತ್ತದೆ. ಆಗಾಗ್ಗೆ ಭೂಮಿಯ ತೇವ ಆರದಂತೆ ನೀರನ್ನು ಹಾಕಲಾಗುತ್ತದೆ. ಬಳ್ಳಿ ನೇರವಾಗಿ ಬೆಳೆಯುವಂತೆ ಮಾಡಲು ಬಿದಿರಿನ ಊರುಗೋಲನ್ನು ಕಡ್ಡಿಯ ಪಕ್ಕದಲ್ಲಿ ನೆಡುವುದುಂಟು. ಹೊಸದಾಗಿ ಬೆಳೆದ ಹಂಬನ್ನು ಊರುಗೋಲಿಗೆ ಕಟ್ಟಿ, ಒಂದು ಕಡ್ಡಿಗೆ ಒಂದೇ ಹಂಬು ಬೆಳೆಯುವಂತೆ ನೋಡಿಕೊಳ್ಳಲಾಗುತ್ತದೆ. ಇದಕ್ಕಾಗಿ ಹಂಬಿನ ಪಕ್ಕದಲ್ಲಿ ಹುಟ್ಟುವ ಚಿಗುರನ್ನು ಆಗಾಗ್ಗೆ ತೆಗೆದುಹಾಕಲಾಗುತ್ತದೆ.

ದ್ರಾಕ್ಷಿ ಬಳ್ಳಿಯನ್ನು ಹಬ್ಬಿಸಲು ಅನೇಕ ವಿಧಾನಗಳುಂಟು. ಇವುಗಳಲ್ಲಿ ಕೆಳಗೆ ವಿವರಿಸಲಾಗಿರುವ ವಿಧಾನಗಳು ಹೆಚ್ಚು ಬಳಕೆಯಲ್ಲಿವೆ.

1 ಪಂಗಾರ ವಿಧಾನ. ಈ ವಿಧಾನದಲ್ಲಿ ಹಾಲುವಾಣ ಗಿಡದ 6` ಉದ್ದದ ಕೊಂಬೆಯನ್ನು ಬಳ್ಳಿಯಿಂದ 9``ದೂರದಲ್ಲಿ ನೆಡಲಾಗುತ್ತದೆ. ನೆಟ್ಟ ಕಡ್ಡಿಗಳಿಂದ ಹೊರಟ ಮುಖ್ಯ ಹಂಬು 4 ಎತ್ತರ ಬೆಳೆದ ಮೇಲೆ ಅದರ ತುದಿಯನ್ನು ಚಿವುಟಿ ಹಾಕಲಾಗುತ್ತದೆ. ಅನಂತರ ಹಂಬಿನಿಂದ ಹೊರಬರುವ ನಾಲ್ಕು ಚಿಗುರುಗಳನ್ನು ಬಿಟ್ಟು ಉಳಿದ ಚಿಗುರುಗಳನ್ನು ತೆಗೆದುಹಾಕಲಾಗುತ್ತದೆ. ಉಳಿಸಿದ ಚಿಗುರುಗಳು 6 ತಿಂಗಳ ವರೆಗೆ ಬೆಳೆಯಲು ಬಿಟ್ಟು ಬುಡದಿಂದ 3-4 ಗೆಣ್ಣುಗಳಿರುವಂತೆ ಕತ್ತರಿಸಲಾಗುತ್ತದೆ. ಇದರಿಂದ ಹೊಸ ಹಂಬುಗಳು ಹುಟ್ಟುವುವು. ಪುನಃ 6 ತಿಂಗಳ ತರುವಾಯ ಒಂದು ಗೆಣ್ಣಿನ ಉದ್ದಕ್ಕೆ ಕತ್ತರಿಸಲಾಗುತ್ತದೆ. ಪ್ರತಿ ವರ್ಷವೂ ಅಕ್ಟೋಬರ್‍ನಲ್ಲಿ 3-4 ಗೆಣ್ಣುಗಳಿರುವಂತೆ ಹಂಬುಗಳನ್ನು ಕತ್ತರಿಸುವ ಕ್ರಮ ಉಂಟು. ಕತ್ತರಿಸಿದ ಭಾಗಕ್ಕೆ ಸಮೀಪವಾಗಿರುವ ಗೆಣ್ಣಿನಿಂದ ಚಿಗುರು ಹೊರಟು ದ್ರಾಕ್ಷಿಗೊಂಚಲನ್ನು ಬಿಡುತ್ತದೆ. ಗಿಡ ನೆಟ್ಟ ಮೂರು ವರ್ಷಗಳಲ್ಲಿ ತಾಯಿಕಾಂಡ ಸಾಕಷ್ಟು ದಪ್ಪವಾಗುತ್ತದೆ. ಇದರ ತುದಿಯಿಂದ ಹೊರಟ ಹಂಬನ್ನು ಹಾಲುವಾಣ ಗಿಡಗಳಿಗೆ ಅಡ್ಡಲಾಗಿ ಕಟ್ಟಿದ ಬಿದಿರಿನ ಕಡ್ಡಿಯ ಮೇಲೆ ಹಬ್ಬುವಂತೆ ಮಾಡಲಾಗುತ್ತದೆ.

2 ಛತ್ರಿ ಅಥವಾ ತಲೆಯಾಕೃತಿ ವಿಧಾನ: ಈ ವಿಧಾನ ಪಂಜಾಬಿನಲ್ಲಿ ಬಳಕೆಯಲ್ಲಿದೆ. ಬೇಸಿಗೆಯಲ್ಲಿ ಕಡ್ಡಿಯಿಂದ ಹುಟ್ಟುವ ಹಂಬು ನೇರವಾಗಿ ಬೆಳೆಯುವಂತೆ ಒಂದು ಊರುಗೋಲಿಗೆ ಕಟ್ಟಿ ಹಂಬಿನ ಪಕ್ಕದಿಂದ ಹೊರಡುವ ಚಿಗುರನ್ನು ಆಗಾಗ್ಗೆ ಕತ್ತರಿಸಲಾಗುವುದು. ಮುಖ್ಯ ಹಂಬಿನ ತುದಿಯನ್ನು ಜುಲೈ ತಿಂಗಳಲ್ಲಿ ನೆಲದಿಂದ 3`-3.5` ಎತ್ತರದಲ್ಲಿ ಚಿವುಟಿ ಹಾಕಲಾಗುತ್ತದೆ. ಇದರಿಂದಾಗಿ ಕೆಳಭಾಗದಿಂದ 3 ಅಥವಾ 4 ಹಂಬುಗಳು ಬಳ್ಳಿಯ ಪಕ್ಕದಿಂದ ಡಿಸೆಂಬರ್ ತಿಂಗಳಲ್ಲಿ ಹಂಬುಗಳನ್ನು ಒಂದು ಅಥವಾ ಎರಡು ಗೆಣ್ಣುಗಳ ಉದ್ದಕ್ಕೆ ಕತ್ತರಿಸಲಾಗುವುದು. ಈ ಕ್ರಮದಿಂದ ಅನೇಕ ಹಂಬುಗಳು ಹೊರಡುತ್ತವೆ. ಇವುಗಳಲ್ಲಿ ಚೆನ್ನಾಗಿ ಬೆಳೆದ 8-10 ಹಂಬುಗಳನ್ನು ಆರಿಸಿಕೊಂಡು ಮಿಕ್ಕವನ್ನು ಕತ್ತರಿಸಲಾಗುತ್ತದೆ. ಹೀಗೆ ಆರಿಸಿದ ಹಂಬುಗಳ ಒಂದೊಂದು ರೆಂಬೆಗಳ ಮೇಲೆ ಒಂದು ಅಥವಾ ಎರಡು ಉಪಹಂಬುಗಳು ಬೆಳೆಯುವಂತೆ ಮಾಡಿ, ಮೂರನೆಯ ವರ್ಷದಿಂದ ಫಸಲನ್ನು ಪಡೆಯಲಾಗುತ್ತದೆ. ಈ ವಿಧಾನದಲ್ಲಿ ಫಸಲು ಕಮ್ಮಿ.

3 ಕೇನ್ ವಿಧಾನ: ತಾಯಿಕಾಂಡವನ್ನು ತಲೆ ಅಥವಾ ಛತ್ರಿಯಾಕೃತಿಯಲ್ಲಿ ಬೆಳೆಸಲಾಗುತ್ತದೆ. ಕಾಂಡದ ಎರಡು ಪಕ್ಕದಿಂದ ಎರಡು ಅಥವಾ ಮೂರು ದಪ್ಪ ಕಡ್ಡಿಗಳು ಬೆಳೆಯುವಂತೆ ಮಾಡುವುದಲ್ಲದೆ ಬಳ್ಳಿಯನ್ನು ಸವರುವಾಗ ಹಳೆಯ ಕಡ್ಡಿಗಳನ್ನು ಕತ್ತರಿಸಿ ತೆಗೆಯಲಾಗುತ್ತದೆ. ಕಾಂಡಕ್ಕೆ ಹತ್ತಿರವಿರುವ ಕಡ್ಡಿಗಳನ್ನು 8-10 ಕಣ್ಣುಗಳಿರುವಂತೆ ಕತ್ತರಿಸಲಾಗುವುದು. ಇವುಗಳಲ್ಲಿ ಗೊಂಚಲು ಉತ್ಪತ್ತಿಯಾಗುತ್ತದೆ. ಈ ವಿಧಾನದಿಂದ ಮಸಕಟ್ ಆಫ್ ಅಲೆಗ್ಸಾಂಡ್ರಿಯ, ಬೆಡನಾ, ಬ್ಲ್ಯಾಕ್‍ಪ್ರಿನ್ಸ್, ಕಾಂದಹಾರಿ ಜಾತಿಗಳನ್ನು ಪಂಜಾಬಿನಲ್ಲಿ ಜಯಪ್ರದವಾಗಿ ಬೆಳೆಸಲಾಗಿದೆ.

4 ನಿಫನ್ ಅಥವಾ ಕಾರ್ಡನ್ ವಿಧಾನ: ಈ ವಿಧಾನ ಕರ್ನಾಟಕದ ಧಾರವಾಡ, ಬೆಳಗಾಂವಿ, ಬಿಜಾಪುರ, ರಾಯಚೂರು, ಗುಲ್ಬರ್ಗ ಮತ್ತು ಬೀದರ್ ಜಿಲ್ಲೆಗಳಲ್ಲಿ ಬಳಕೆಯಲ್ಲಿದೆ. 10` ಉದ್ದದ ಕಲ್ಲಿನ ಕಂಬಗಳನ್ನು 22` ಗೊಂದರಂತೆ ಭೂಮಿಯಲ್ಲಿ 2 ಆಳದಲ್ಲಿ ನೆಟ್ಟು ಭೂಮಿಯಿಂದ 4` ಮತ್ತು 6` ಎತ್ತರದಲ್ಲಿ 10 ಗೇಜು ಕಂಬಿಯನ್ನು ಅಡ್ಡಲಾಗಿ ಎಳೆದು ಕಟ್ಟಲಾಗುತ್ತದೆ. ಈ ವಿಧಾನದಲ್ಲಿ ಗಿಡದಿಂದ ಗಿಡಕ್ಕೆ 11` ಅಂತರವೂ ಸಾಲಿನಿಂದ ಸಾಲಿಗೆ 5.1/2 ಅಂತರವೂ ಇರುತ್ತದೆ. ಏಪ್ರಿಲ್ ತಿಂಗಳಿನಲ್ಲಿ ಮುಖ್ಯ ಹಂಬಿನ ಕುಡಿಯನ್ನು 5` ಎತ್ತರದಲ್ಲಿ ಕತ್ತರಿಸಲಾಗುವುದು. ಕೆಳಭಾಗದಿಂದ ಬೆಳೆಯುವ ಕುಡಿಗಳಲ್ಲಿ ನಾಲ್ಕನ್ನು ಆರಿಸಿಕೊಂಡು ಅಡ್ಡವಾಗಿ ಕಟ್ಟಿದ ಕಂಬಿಗಳ ಮೇಲೆ ಎರಡು ಪಕ್ಕದಲ್ಲೂ ಹಬ್ಬುವಂತೆ ಮಾಡಲಾಗುವುದು. ಇವು 4` ಉದ್ದವಾಗಿ ಬೆಳೆದ ಅನಂತರ ತುದಿಯನ್ನು ಕತ್ತರಿಸಿ ಅಲ್ಲಲ್ಲಿ ಉಪಕುಡಿಗಳು ಹುಟ್ಟುವಂತೆ ಮಾಡಲಾಗುತ್ತದೆ. ಇವುಗಳಲ್ಲಿ 2 ಅಥವಾ 3 ಕುಡಿಗಳನ್ನು ಬಿಟ್ಟು ಮಿಕ್ಕವನ್ನು ತೆಗೆದುಹಾಕಲಾಗುತ್ತದೆ. ಅಡ್ಡ ಕಡ್ಡಿಯನ್ನು ಕತ್ತರಿಸಿದ ಭಾಗದ ಸಮೀಪದಿಂದ ಹೊಸ ಉಪಕುಡಿಗಳು ಬೆಳೆಯುತ್ತವೆ. ಇವನ್ನು ಕಂಬಿಯ ಮೇಲೆ 8` ಬೆಳೆಸಿ ತುದಿಯನ್ನು ಕತ್ತರಿಸಲಾಗುತ್ತದೆ. ನವೆಂಬರಿನಲ್ಲಿ ಉಪಕುಡಿಗಳನ್ನು 3ರಿಂದ 4 ಕಣ್ಣುಗಳಿರುವಂತೆ ಕತ್ತರಿಸುವುದಿದೆ. ಆಗ ಕೆಳಭಾಗದಿಂದ ಹೊಸ ಕುಡಿ ಹೊರಟು ಹೂಗೊಂಚಲು ಮೂಡುತ್ತದೆ. ಏಪ್ರಿಲ್ ತಿಂಗಳಲ್ಲಿ ಒಂದು ಕಣ್ಣಿರುವಂತೆ ಅಡ್ಡ ಕಡ್ಡಿಯ ಬುಡದವರೆಗೂ ಕತ್ತರಿಸುವುದುಂಟು. ಸುಪ್ತವಾಗಿರುವ ಕಣ್ಣುಗಳು ಆಗ ಚೇತರಿಸಿಕೊಂಡು ಹೊಸ ಕುಡಿಗಳು ಹೊರಡುತ್ತವೆ. ನವೆಂಬರ್ ತಿಂಗಳಲ್ಲಿ ಕತ್ತರಿಸಿದಾಗ ಈ ಕುಡಿಗಳೇ ಹೂ ಹಣ್ಣಿನ ಗೊಂಚಲನ್ನು ಬಿಡುತ್ತವೆ. ಬೋಕರಿ, ಫಕಡಿ, ಗುಲಾಬಿ ಜಾತಿಗಳನ್ನು ಬೆಳೆಯಲು ಈ ವಿಧಾನವನ್ನು ಉಪಯೋಗಿಸಲಾಗುತ್ತದೆ.

5 ಚಪ್ಪರದ ವಿಧಾನ: ಇದು ಬೆಂಗಳೂರು, ಕೋಲಾರ, ತುಮಕೂರು, ಮಂಡ್ಯ ಜಿಲ್ಲೆಗಳಲ್ಲಿ ಬಳಕೆಯಲ್ಲಿದೆ. ಇತ್ತೀಚಿನವರೆಗೂ ಚಪ್ಪರವನ್ನು ತಯಾರಿಸುವಾಗ ನಾಲ್ಕು ಕಂಬಗಳನ್ನು ಪ್ರತಿಯೊಂದು ಗಿಡಕ್ಕೆ 8`-9` ಗಳ ಅಂತರದಲ್ಲಿ ನೆಡಲಾಗುತ್ತಿತ್ತು. ಚಪ್ಪರದ ಎತ್ತರ 5`-6' ಇರುತ್ತಿತ್ತು. ಈ ರೀತಿಯ ಚಪ್ಪರದಲ್ಲಿ ಕೆಲವು ನ್ಯೂನತೆಗಳಿವೆ; ರೋಗನಿರೋಧಕಗಳನ್ನು ಸಿಂಪಡಿಸುವುದಕ್ಕೆ, ಗೊಬ್ಬರವನ್ನು ಗಿಡಗಳಿಗೆ ಹಾಕುವುದಕ್ಕೆ, ಗಿಡಗಳನ್ನು ಕತ್ತರಿಸುವುದಕ್ಕೆ ತೊಂದರೆಯಾಗುತ್ತಿತ್ತು ಮತ್ತು ಹೆಚ್ಚಿನ ವೆಚ್ಚ ತಗಲುತ್ತಿತ್ತು. ಆದ್ದರಿಂದ ಈಗ ಕೆಲವು ಮಾರ್ಪಾಟುಗಳನ್ನು ಅಳವಡಿಸಿಕೊಂಡು ಚಪ್ಪರವನ್ನು ತಯಾರಿಸುವ ಹೊಸ ವಿಧಾನವನ್ನು ರೂಪಿಸಲಾಗಿದೆ.

ಹೊಸ ವಿಧಾನದ ಪ್ರಕಾರ ಗಿಡದಿಂದ ಗಿಡಕ್ಕೆ 37` ಮತ್ತು ಸಾಲಿನಿಂದ ಸಾಲಿಗೆ 11` ಅಂತರದಲ್ಲಿ ಗಿಡಗಳನ್ನು ನೆಡಲಾಗುವುದು. ಈ ವಿಧಾನದಲ್ಲಿ ಎಕರೆಗೆ 152 ಗಿಡಗಳನ್ನು ನೆಡಬಹುದು. ಚಪ್ಪರದ ಅಂಚಿನ ಸುತ್ತಲೂ ಬಳ್ಳಿಯನ್ನು ಹಬ್ಬಿಸಲು ಸಾಕಷ್ಟು ಸ್ಥಳವಿರುತ್ತವೆ. 4` ಆಳ ಮತ್ತು 4` ವ್ಯಾಸದ ಗೋಳಾಕಾರದ ಗುಂಡಿಗಳನ್ನು ತೋಡಿ, 10` ಉದ್ದ, 6`` ಅಗಲ, 9`` ದಪ್ಪದ ಕಲ್ಲು ಕಂಬಗಳನ್ನು ಗಿಡಗಳ ಪಕ್ಕದಲ್ಲಿ ನೆಡಲಾಗುತ್ತದೆ. ಕಂಬಗಳು ಗುಂಡಿಯ ಹೊರ ಅಂಚಿನಿಂದ 12'-15' ದೂರದಲ್ಲಿರುತ್ತವೆ. 6:8:12 ಗೇಜಿನ ತಂತಿ ಕಂಬಗಳಿಂದ ಚಪ್ಪರದ ಮೇಲ್ಛಾವಣಿಯನ್ನು, ತಂತಿಗಳು ಒಂದಕ್ಕೊಂದು 18``ದೂರವಿರುಂತೆ ಅಡ್ಡಗಲವಾಗಿ ಹೆಣೆಯಲಾಗುತ್ತದೆ. ತಾಯಿಕಾಂಡ ಚಾವಣಿವರೆಗೆ ಬೆಳೆದ ತರುವಾಯ ಕುಡಿಯನ್ನು ಬಗ್ಗಿಸಿ ತಂತಿಯ ಮೇಲೆ ಹಬ್ಬುವಂತೆ ಮಾಡಲಾಗುತ್ತದೆ. ಕುಡಿಯನ್ನು ಬಗ್ಗಿಸುವುದರಿಂದ, ಹೊಸಕುಡಿಗಳು ಹುಟ್ಟುವುವು. ಇವುಗಳಲ್ಲಿ ಮೂರು ಕುಡಿಗಳನ್ನು (ತಾಯಿಕುಡಿಸೇರಿ) ನಾಲ್ಕುದಿಕ್ಕಿನಲ್ಲಿ ಹಬ್ಬುವಂತೆ ಮಾಡುವುದಿದೆ. ಇವೇ ಮುಖ್ಯಕಡ್ಡಿಗಳಾಗುತ್ತವೆ. ಮುಖ್ಯಕಡ್ಡಿಗಳು 8' ಎತ್ತರಕ್ಕೆ ಬೆಳೆದಾಗ ತುದಿಯನ್ನು ಕತ್ತರಿಸಿ ಬಳ್ಳಿಗಳು ಚಪ್ಪರವನ್ನು ಪೂರ್ಣವಾಗಿ ಆವರಿಸಿಕೊಳ್ಳುವಂತೆ ಮಾಡಲಾಗುತ್ತದೆ. ಹೊಸ ಚಿಗುರುಗಳನ್ನು ಉಪಕಡ್ಡಿಗಳನ್ನು ಕತ್ತರಿಸುವುದರಿಂದ ತುದಿಯ ಭಾಗದ ಕಣ್ಣಿನಿಂದ ಹೊಸಹಂಬು ಹುಟ್ಟಿ ಹೂ ಗೊಂಚಲನ್ನು ಬಿಡುತ್ತವೆ.


ದ್ರಾಕ್ಷಿಯ ಬಗೆಗಳು : ಮಹಾರಾಷ್ಟ್ರದಲ್ಲಿ ಮುಖ್ಯವಾಗಿ ಬೋಕರಿ, ಫಕಡಿ, ಪಂಡರಿಷಾಹೇಬಿ, ಕಾಲಿಷಾಹೇಬಿ, ಗುಲಾಬಿ ಮತ್ತು ಕಾಂದಹಾರಿ ಜಾತಿಗಳನ್ನು ಬೆಳೆಸಲಾಗುತ್ತದೆ. ಕರ್ನಾಟಕದಲ್ಲಿ ಬೆಂಗಳೂರು ನೀಲ ಮತ್ತು ಆಂಧ್ರದಲ್ಲಿ ಅನಾಬ್-ಎ-ಷಾಹಿ ಜಾತಿಗಳು ಪ್ರಮುಖವಾದವು. ಪಂಜಾಬಿನಲ್ಲಿ ಬೆಡನಾ, ಕಂತಲಿ, ಪಾಸ್ಟರ್‍ಸೀಡಲಿಂಗ್, ಬ್ಯ್ಲಾಕ್‍ಪ್ರಿನ್ಸ್ ಮತ್ತು ಕಾಂದಹಾರಿ ಜಾತಿಗಳನ್ನು ಬೆಳೆಸಲಾಗುತ್ತಿದೆ.

1 ಬೋಕರಿ : ಈ ಬಗೆಯನ್ನು ಮಹಾರಾಷ್ಟ್ರದ ಒಟ್ಟು ವಿಸ್ತೀರ್ಣದ ಸುಮಾರು 99%ರಷ್ಟು ಭಾಗದಲ್ಲಿ ಬೆಳೆಯುತ್ತಿದ್ದಾರೆ. ಇದರ ಹಣ್ಣಿನ ಬಣ್ಣ ಹಸಿರು, ಆಕಾರ ಗುಂಡಗೆ. ಸಿಪ್ಪೆ ದಪ್ಪವಾಗಿದೆ. ತಿರುಳು ಹುಳಿಮಿಶ್ರಿತ ಸಿಹಿಯಾಗಿದೆ. ಇದರ ಗೊಂಚಲಿನಲ್ಲಿ ಹಣ್ಣುಗಳು ಒತ್ತಾಗಿವೆ.

2 ಬೆಂಗಳೂರು ನೀಲ : ಇದು ಕರ್ನಾಟಕದಲ್ಲಿ ಬೆಳೆಯುವ ಬಗೆಗಳಲ್ಲಿ ಮುಖ್ಯವಾದ್ದು. ಇದು ಲ್ಯಾಬ್ರಸ್ಕ ಪ್ರಭೇದಕ್ಕೆ ಸೇರಿದೆ. ಹಣ್ಣು ಊದಾ ಬಣ್ಣದ್ದು; ಗುಂಡಗಿದೆ. ಸಿಪ್ಪೆ ದಪ್ಪ. ತಿರುಳಿನಿಂದ ಸುಲಭವಾಗಿ ಬೇರ್ಪಡುತ್ತದೆ. ತಿರುಳಿನ ಬಣ್ಣ ತಿಳಿಹಸಿರು. ತಿನ್ನಲು ಮಧುರವಾಗಿದ್ದು ಆಮ್ಲತೆಯಿಂದ ಕೂಡಿದೆ. ಗೊಂಚಲು ಒತ್ತಾಗಿ ಸಾಧಾರಣ ಗಾತ್ರದ್ದಾಗಿದೆ. ದ್ರಾಕ್ಷಿರಸದ ತಯಾರಿಕೆಗೆ ಈ ಬಗೆ ಉತ್ತಮವಾದುದು.

3 ಪಕಡಿ : ಹಣ್ಣಿನ ಆಕಾರ ಅಂಡದಂತೆ; ಬಣ್ಣ ಬಿಳಿಹಸಿರು, ಸಿಪ್ಪೆ ಅತಿತೆಳುವಾಗಿದೆ. ತಿರುಳಿಗೆ ಮಧುರವಾದ ರುಚಿಯುಂಟು. ಆದರೆ ಹಣ್ಣು ಬಹುಬೇಗನೆ ಕೆಟ್ಟು ಹೋಗುವುದರಿಂದ ದೂರದ ಮಾರುಕಟ್ಟೆಗೆ ಕಳುಹಿಸಲು ಯೋಗ್ಯವಲ್ಲ. ಗೊಂಚಲಿನಲ್ಲಿ ಹಣ್ಣುಗಳು ಬಿಡಿಬಿಡಿಯಾಗಿವೆ. ಹಣ್ಣುಗಳ ಗಾತ್ರವೂ ದೊಡ್ಡದು.

4 ಪಂಡರಿಷಾಹೇಬಿ : ಇದು ಶ್ರೇಷ್ಠ ಜಾತಿಯ ದೊಡ್ಡಹಣ್ಣಿನ ದ್ರಾಕ್ಷಿ. ಆದರೆ ಇಳುವರಿ ತುಂಬ ಕಡಿಮೆ. ಇದರ ತಿರುಳು ಗಟ್ಟಿಯಾಗಿದ್ದು ಸಿಹಿಯಾಗಿದೆ. ಗೊಂಚಲು ಒತ್ತಾಗಿದ್ದು ಮಧ್ಯಮ ಗಾತ್ರದ್ದಾಗಿದೆ.

5 ಕಾಲಿಷಾಹೇಬಿ : ಇದು ಕೂಡ ಒಂದು ಉತ್ತಮ ಬಗೆಯ ದ್ರಾಕ್ಷಿ. ಇದರ ಹಣ್ಣುಗಳು ಉದ್ದವಾಗಿದ್ದು, ಬೂದುಬಣ್ಣದವಾಗಿವೆ. ಸಿಪ್ಪೆ ಅತಿತೆಳುವಾಗಿದೆ. ತಿರುಳು ಸಿಹಿರುಚಿಯುಳ್ಳದ್ದು. ಬೀಜಗಳು ಮೃದುವಾಗಿವೆ. ಗೊಂಚಲು ದೊಡ್ಡಗಾತ್ರದ್ದು. ಹಣ್ಣುಗಳು ಬಿಡಿಯಾಗಿವೆ. ಇಳುವರಿ ಕನಿಷ್ಠ, ಹಣ್ಣುಗಳನ್ನು ಸ್ವಲ್ಪ ಕಾಲ ಸಂಗ್ರಹಿಸಿಡಬಹುದು.

6 ಕಾಂದಹಾರಿ : ಇದರ ಗೊಂಚಲು ಮಧ್ಯಮಗಾತ್ರದು. ಹಣ್ಣುಗಳು ಒತ್ತಾಗಿವೆ. ಬಣ್ಣ ಊದಾ; ಆಕಾರ ಅಂಡದಂತೆ. ಸಿಪ್ಪೆ ದಪ್ಪವಾಗಿದೆ. ತಿರುಳುಗಟ್ಟಿ ಹಾಗೂ ಸಿಹಿ. ಬೇಗನೆ ಕೆಡುವುದಿಲ್ಲವಾದ್ದರಿಂದ ದೂರದ ಮಾರುಕಟ್ಟೆಗೆ ಕಳುಹಿಸಬಹುದು. ಆದರೆ ಇಳುವರಿ ಬಲು ಕಡಿಮೆ.

7 ಗುಲಾಬಿ ಅಥವಾ ಬ್ಯ್ಲಾಕ್‍ಪ್ರಿನ್ಸ್ : ಇದು ಆಸ್ಟ್ರೇಲಿಯದ ಮಸಕಟ್ ಆಫ್ ಅಲೆಗ್ಸಾಂಡ್ರಿಯ ದ್ರಾಕ್ಷಿಯನ್ನು ಹೋಲುತ್ತದೆ. ಇದರ ಬಣ್ಣ ಊದಾ ಸಿಪ್ಪೆ ದಪ್ಪವಾಗಿದೆ. ತಿರುಳು ಮೃದುವಾಗಿದ್ದು ಗುಲಾಬಿ ಹೂವಿನ ವಾಸನೆಯಿಂದ ಕೂಡಿದೆ. ಗೊಂಚಲು ಮಧ್ಯಮಗಾತ್ರದ್ದು ಹಣ್ಣುಗಳು ಬಹಳ ಬಿಡಿಯಾಗಿವೆ. ಗೊಂಚಲಿನ ಆಕಾರ ಪಿರಮಿಡ್ಡಿನಂತೆ. ಇದು ಉತ್ತಮ ಇಳುವರಿ ಕೊಡುವುದಲ್ಲದೆ ಬೇಗನೆ ಕುಯ್ಲಿಗೆ ಬರುತ್ತದೆ.

8 ಅನಾಬ್-ಎ-ಷಾಹಿ : ಸಿಪ್ಪೆ ತೆಳುವಾಗಿದ್ದು, ತಿರುಳು ಸಿಹಿಯಾಗಿದೆ. ಇದು ದ್ರಾಕ್ಷಿಗಳಲ್ಲೆಲ್ಲ ಉತ್ತಮವಾದ್ದು. ಇಳುವರಿ ಕೂಡ ಹೆಚ್ಚು, ಗೊಂಚಲು ದೊಡ್ಡ ಗಾತ್ರದ್ದು.

9 ಬರ್ಕ್‍ಲ್ಯಾಂಡ್ ಸ್ವೀಟ್‍ವಾಟರ್ : ಇದು ನಸು ಹಳದಿ ಬಿಳಿಬಣ್ಣದ ಹಣ್ಣುಬಿಡುವ ಬಗೆ. ಹಣ್ಣುಗಳು ಒತ್ತಾಗಿರುತ್ತವೆ. ಸಿಪ್ಪೆ ಅತಿ ತೆಳುವಾಗಿದ್ದು ಬೇಗನೆ ಕೆಡುವುದು. ತಿರುಳು ಮೆದುವಾಗಿದ್ದು ಹೆಚ್ಚಿನ ರಸದಿಂದ ಕೂಡಿದೆ. ಗೊಂಚಲಿನ ಗಾತ್ರ ಮತ್ತು ಹಣ್ಣಿನ ಇಳುವರಿ ಮಧ್ಯಮ.

10 ಫ್ಲೇಮ್‍ಟೋಕೆ : ಇದರ ಹಣ್ಣುಗಳು ಗುಂಡನೆಯ ಆಕಾರದವು; ಇವುಗಳ ಬಣ್ಣ ಹಸಿರು ಮತ್ತು ಊದಾ; ಗಾತ್ರ ಸಣ್ಣದು. ಒತ್ತಾಗಿವೆ. ಸಿಪ್ಪೆ ದಪ್ಪವಾಗಿದೆ. ಗೊಂಚಲು ದೊಡ್ಡಗಾತ್ರದ್ದು. ಇಳುವರಿ ಉತ್ತಮ.

11 ತಾಮಸನ್ ಸೀಡ್‍ಲೆಸ್ : ಇದು ಬೀಜರಹಿತ ದ್ರಾಕ್ಷಿ. ಹಣ್ಣು ಸಣ್ಣವು; ಆಕಾರ ಅಂಡದಂತೆ ಇದು ಉತ್ತಮ ಜಾತಿಯ ಬಿಳಿದ್ರಾಕ್ಷಿ. ಗೊಂಚಲು ದೊಡ್ಡದಾಗಿದ್ದು ಒತ್ತಾಗಿದೆ. ಸಿಪ್ಪೆ ದಪ್ಪ. ತಿರುಳು ಸಿಹಿಯಾಗಿದೆ. ಇದು ಜಾಗ್ರತೆ ಕೆಡುವುದಿಲ್ಲವಾದುದರಿಂದ ದೂರದ ಮಾರುಕಟ್ಟೆಗೆ ಕಳುಹಿಸಲು ಯೋಗ್ಯ.

S-94 ಮತ್ತು S-7 ಎಂಬ ಉತ್ತಮ ತಳಿಗಳನ್ನು ಇತ್ತೀಚೆಗೆ ಅಭಿವೃದ್ಧಿ ಪಡಿಸಲಾಗಿದೆ. ಅಲ್ಲದೆ ಕರ್ನಾಟಕದ ತೋಟಗಾರಿಕೆ ಇಲಾಖೆಯವರಿಂದ ಅನೇಕ ವಿದೇಶೀಯ ಬಗೆಗಳೂ ಸೇರಿದಂತೆ ಸುಮಾರು 60 ಬಗೆಯ ದ್ರಾಕ್ಷಿಗಳನ್ನು ಬೆಳೆಸುವ ಪ್ರಯತ್ನ ನಡೆದಿದೆ.

ಬೇಸಾಯಕ್ರಮ : ದ್ರಾಕ್ಷಿಗಿಡವನ್ನು ಕತ್ತರಿಸಿದಾಗ, ಕೋಲುಗುದ್ದಲಿಯಿಂದ ಭೂಮಿಯನ್ನು ಅಗೆದು, ಕಳೆ ತೆಗೆದುಹಾಕಲಾಗುತ್ತದೆ. ನೀರು ಇಂಗುವಂತೆ ಮಾಡಲು ನೆಲ ಹುಡಿಯಾಗಿರುವಂತೆ ಕೆದಕಲಾಗುವುದು. ಸಾಲಿನ ಮಧ್ಯದಲ್ಲಿ ಹಸಿರೆಲೆಗೊಬ್ಬರದ ಗಿಡಗಳನ್ನು (ಅಪ್ಸಣಬು ಮುಂತಾದವು) ಬೆಳಸಿ, ಭೂಮಿಯಲ್ಲಿ ಉತ್ತು ಸೇರಿಸಿ ಒಳ್ಳೆಯ ಗೊಬ್ಬರ ದೊರಕುವಂತೆ ಮಾಡಲಾಗುತ್ತದೆ. ಮಹಾರಾಷ್ಟ್ರ ಪ್ರದೇಶದಲ್ಲಿ ಒಂದು ಗಿಡಕ್ಕೆ 75 ಪೌಂಡ್ ಕೊಟ್ಟಿಗೆ ಗೊಬ್ಬರ, 3 ಪೌಂಡ್ ಹರಳುಹಿಂಡಿಯನ್ನು ಹಾಕುವ ಕ್ರಮ ಉಂಟು. ದ್ರಾಕ್ಷಿ ಬೆಳೆಗೆ ವರ್ಷಕ್ಕೆ ಎರಡು ಸಲ ಗೊಬ್ಬರ ಒದಗಿಸಲಾಗುತ್ತದೆ. ಮಧುರೈ ಪ್ರಾಂತ್ಯದಲ್ಲಿ ಒಂದು ಎಕರೆಗೆ 100 ಗಾಡಿ ಕೊಟ್ಟಿಗೆ ಗೊಬ್ಬರವನ್ನು ಹಾಕುವುದುಂಟು. ಸೇಲಂ ಮತ್ತು ಅನಂತಪುರ ಜಿಲ್ಲೆಗಳಲ್ಲಿ ಎಕರೆಯೊಂದಕ್ಕೆ 70 ಗಾಡಿ ದನದಗೊಬ್ಬರ ಮತ್ತು ಆರು ಚೀಲ ಮೀನಿನ ಗೊಬ್ಬರವನ್ನು ಒದಗಿಸುವುದಿದೆ. ಕರ್ನಾಟಕದಲ್ಲಿ ಬೇಸಿಗೆ ಬೆಳೆಗೆ 170 ಪೌಂಡ್ ಕೊಟ್ಟಿಗೆ ಗೊಬ್ಬರ 0.5 ಅಮೋನಿಯಮ್ ಸಲ್ಫೇಟ್ ಹಾಗೂ 0.1 ಪೌಂಡ್ ಸೂಪರ್ ಫಾಸ್ಫೇಟನ್ನೂ ಚಳಿಗಾಲದಲ್ಲಿ 200 ಪೌಂಡ್ ದನದ ಗೊಬ್ಬರ, 3.7 ಪೌಂಡ್ ಹಿಂಡಿ, 1 ಪೌಂಡ್ ಅಮೋನಿಯಮ್ ಸಲ್ಫೇಟ್, 0.5 ಪೌಂಡ್ ಸೂಪರ್ ಫಾಸ್ಫೇಟ್ ಗೊಬ್ಬರವನ್ನೂ ಹಾಕಲಾಗುತ್ತದೆ. 5 ಟನ್ ದ್ರಾಕ್ಷಿಯನ್ನು ಬೆಳೆಯಲು ಸುಮಾರು 33 ಪೌಂಡ್ ನೈಟ್ರೊಜನ್, 9 ಪೌಂಡ್ ಫಾಸ್ಫರಸ್, 27 ಪೌಂಡ್ ಪೊಟ್ಯಾಷ್, 71 ಪೌಂಡ್ ಕ್ಯಾಲ್ಸಿಯಮ್ ಮತ್ತು 300 ಪೌಂಡ್ ಮೆಗ್ನೀಸಿಯಮ್ ಬೇಕಾಗುತ್ತದೆಂದು ಅಂದಾಜು ಮಾಡಲಾಗಿದೆ. ಗೊಬ್ಬರವನ್ನು ಹಾಕಿದೊಡನೆಯೇ ಗಿಡಗಳಿಗೆ ನೀರನ್ನು ಹಾಯಿಸಲಾಗುತ್ತದೆ. ದ್ರಾಕ್ಷಿಗೆ ಹಾಯಿಸುವ ನೀರಿನ ಪರಿಮಾಣ, ಮುಖ್ಯವಾಗಿ ಕಾಲ ಮತ್ತು ನೆಲದ ಗುಣವನ್ನು ಅವಲಂಬಿಸಿದೆ. ಮರಳಿನಿಂದ ಕೂಡಿದ ನೆಲದಲ್ಲಿ ನೀರು ಬೇಗನೆ ಆರುವುದರಿಂದ ನೀರನ್ನು ಆಗಿಂದಾಗ್ಗೆ ಒದಗಿಸಲಾಗುತ್ತದೆ. ಅಕ್ಟೋಬರ್ ತಿಂಗಳಿನಲ್ಲಿ ಗಿಡಗಳನ್ನು ಕತ್ತರಿಸಿದ ಅನಂತರ ನೆಲದ ತೇವವನ್ನು ನೋಡಿಕೊಂಡು ನೀರನ್ನು ಒದಗಿಸಲಾಗುತ್ತದೆ. ಹೆಚ್ಚು ನೀರು ಹಾಯಿಸಿದರೆ ಬರಿಯ ಹಸಿರೆಲೆಗಳೇ ಹೆಚ್ಚುತ್ತವೆ. ಸಾಮಾನ್ಯವಾಗಿ 12-15 ದಿವಸಗಳಿಗೊಮ್ಮೆ, ಬೇಸಿಗೆಯಲ್ಲಿ 10 ದಿವಸಗಳಿಗೊಮ್ಮೆ ನೀರು ಒದಗಿಸಲಾಗುತ್ತದೆ.

ಗಿಡವನ್ನು ಕತ್ತರಿಸುವುದು : ಭಾರತದಲ್ಲಿ ದ್ರಾಕ್ಷಿ ವರ್ಷದ ಎಲ್ಲ ಋತುಗಳಲ್ಲೂ ಚಿಗುರಿನಿಂದ ಕೂಡಿರುವುದರಿಂದ ಗಿಡವನ್ನು ಕತ್ತರಿಸುವುದು ರೂಢಿಯಲ್ಲಿದೆ. ಹೀಗೆ ಗಿಡವನ್ನು ಕತ್ತರಿಸುವುದರಿಂದ ಶರ್ಕರಪಿಷ್ಟ ವಸ್ತುಗಳು ರೆಂಬೆಗಳಲ್ಲಿ ಸಂಗ್ರಹಗೊಳ್ಳಲು ಸಹಾಯಕವಾಗುತ್ತದೆ. ಇದರಿಂದ ಹೂವಿನ ಗೊಂಚಲು ರೂಪುಗೊಳ್ಳಲು ಅನುಕೂಲವಾಗುತ್ತದೆ. ದ್ರಾಕ್ಷಿಯ ಇಳುವರಿ ಸಹ ಮುಖ್ಯವಾಗಿ ಗಿಡವನ್ನು ಕತ್ತರಿಸುವ ವಿಧಾನ ಮತ್ತು ಗಿಡವನ್ನು ಹಬ್ಬಿಸುವ ವಿಧಾನವನ್ನು ಅವಲಂಬಿಸಿದೆ. ಗಿಡವನ್ನು ವರ್ಷದಲ್ಲಿ ಎರಡು ಬಾರಿ, ಏಪ್ರಿಲ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ, ಕತ್ತರಿಸಲಾಗುತ್ತದೆ. ಕತ್ತರಿಸುವ ವೇಳೆಯಲ್ಲಿ ಕಡ್ಡಿಗಳಲ್ಲಿ ಬಿಡುವ ಕಣ್ಣಿನ ಸಂಖ್ಯೆಯನ್ನು ಜಾತಿಗಳ ವೈವಿಧ್ಯಕ್ಕೆ ಅನುಗುಣವಾಗಿ ಬಿಡುತ್ತಾರೆ. ಸಾಮಾನ್ಯವಾಗಿ 3-4 ಕಣ್ಣು ಬಿಡುವುದು ವಾಡಿಕೆ.

ಫಸಲು ಕೊಯಿಲು ಮತ್ತು ಮಾರುಕಟ್ಟೆಗೆ ಸಿದ್ಧಪಡಿಸುವುದು : ದ್ರಾಕ್ಷಿಯ ಗೊಂಚಲು ಪೂರ್ಣವಾಗಿ ಮಾಗಿದ ಅನಂತರವೇ ಅದನ್ನು ಕೊಯ್ಯಲಾಗುತ್ತದೆ. ಮಾಗುವಾಗ ಹಣ್ಣು ಮೃದುವಾಗುತ್ತದೆ. ಬಳ್ಳಿಯಲ್ಲಿರುವ ಎಲ್ಲ ಗೊಂಚಲುಗಳೂ ಏಕಕಾಲದಲ್ಲಿ ಮಾಗುವುದಿಲ್ಲವಾದ್ದರಿಂದ ಕೊಯ್ಲಿನ ಕಾಲ ಒಂದು ವಾರದಿಂದ ಮೂರು ವಾರದವರೆಗೂ ವ್ಯಾಪಿಸಿರುವುದು. ಹೀಗೆ ಕತ್ತರಿಸಿದ ಅನಂತರ ಗೊಂಚಲಿನಲ್ಲಿರಬಹುದಾದ ರೋಗಪೀಡಿತ ಮತ್ತು ಕೊಳೆತ ಹಣ್ಣುಗಳನ್ನು ಬೇರ್ಪಡಿಸಿ, ಗೊಂಚಲಿನ ಗಾತ್ರ ಹಾಗೂ ಹಣ್ಣಿನ ಗುಣಗಳಿಗನುಸಾರವಾಗಿ ಗೊಂಚಲನ್ನು ವಿಂಗಡಿಸಿ, ಬುಟ್ಟಿಗಳಲ್ಲಿ ತುಂಬಲಾಗುತ್ತದೆ. ಮಡಕೆ, ಬಿದಿರಿನ ಬುಟ್ಟಿ ಮತ್ತು ಮರದ ಪೆಟ್ಟಿಗೆಗಳನ್ನು ದ್ರಾಕ್ಷಿ ತುಂಬಲು ಉಪಯೋಗಿಸುವರು. ದ್ರಾಕ್ಷಿಯನ್ನು ತುಂಬುವ ಮೊದಲು ಬುಟ್ಟಿಯ ತಳಭಾಗದಲ್ಲಿ ಸಣ್ಣದಾಗಿ ಕತ್ತರಿಸಿದ ಕಾಗದ ಚೂರುಗಳನ್ನು ಹಾಕಲಾಗುತ್ತದೆ. ಅನಂತರ ದ್ರಾಕ್ಷಿಗೊಂಚಲುಗಳನ್ನು ಹರಡಿ ಮತ್ತೆ ಅವುಗಳ ಮೇಲೆ ಕಾಗದದ ಚೂರುಗಳನ್ನು ಹಾಕಲಾಗುವುದು. ಹೀಗೆ ಬುಟ್ಟಿ ತುಂಬುವವರೆಗೂ ಹಾಕಿ ಅನಂತರ ಗೋಣಿಬಟ್ಟೆಯಿಂದ ಬುಟ್ಟಿಯ ಬಾಯಿಯನ್ನು ಹೊಲಿದು ಮುಚ್ಚಲಾಗುತ್ತದೆ. ಮರದ ಪೆಟ್ಟಿಗೆ ತುಂಬುವಾಗಲೂ ಇದೇ ಕ್ರಮವನ್ನು ಅನುಸರಿಸಲಾಗುತ್ತದೆ. ಮರದ ಪೆಟ್ಟಿಗೆಯಲ್ಲಿ ಗಾಳಿಯಾಡಲು ಅನುಕೂಲವಾಗುವಂತೆ ರಂಧ್ರಗಳನ್ನು ಮಾಡಲಾಗುತ್ತದೆ. ಒಣಗಿದ ಬಾಳೆ ಎಲೆ, ಬತ್ತದ ಹುಲ್ಲು, ಮರದ ಹೊಟ್ಟು ಮತ್ತು ಪೈನ್-ವೂಲ್‍ಗಳನ್ನು ಮೆತ್ತೆನೆಯ ವಸ್ತುಗಳನ್ನಾಗಿ ಉಪಯೋಗಿಸುವುದುಂಟು.

ಇಳುವರಿ : ಇಳುವರಿ ಮುಖ್ಯವಾಗಿ ಜಾತಿ, ಕೃಷಿ ವಿಧಾನ ಮತ್ತು ಗಿಡ ಕತ್ತರಿಸುವ ವಿಧಾನವನ್ನು ಅವಲಂಬಿಸಿದೆ. ಬೋಕರಿ ಜಾತಿಯ ದ್ರಾಕ್ಷಿ ಎಕರೆಯೊಂದಕ್ಕೆ ಸುಮಾರು 1,000-3,000 ಪೌಂಡ್ ಫಸಲನ್ನು ಕೊಡುತ್ತದೆ. ಬೆಂಗಳೂರು ನೀಲ ಜಾತಿಯಲ್ಲಿ ಸರಾಸರಿ 1200 ಪೌಂಡ್ ಇಳುವರಿ ಪಡೆಯಬಹುದು. ಸಾಧಾರಣವಾಗಿ ದ್ರಾಕ್ಷಿ 30 ವರ್ಷದ ವರೆಗೂ, ಚೆನ್ನಾಗಿ ಕೃಷಿ ಮಾಡಿದರೆ ನೂರು ವರ್ಷದವರೆಗೂ, ಒಳ್ಳೆಯ ಫಸಲನ್ನು ಬಿಡುತ್ತದೆ.

ಬೆಳೆಗೆ ಬೀಳುವ ಕೀಟ ಮತ್ತು ರೋಗಗಳು : ಸೀಲೋಡಾನ್ಟ ಸ್ಟ್ರಿಜಕೋಲಿಸ್ ಎಂಬ ಕೀಟ ದ್ರಾಕ್ಷಿಗೆ ಬೀಳುವ ಏಕೈಕ ಕೀಟವಾಗಿದೆ. ಇದು ಅತಿ ಸಣ್ಣ ಕೀಟ. ಈ ಕೀಟದ ಮೊದಲ ಎರಡು ರೆಕ್ಕೆಗಳ ಮೇಲ್ಭಾಗ ಕಂಚಿನ ಬಣ್ಣದ್ದು. ಮೇಲೆ ಮೂರು ಕರಿ ಚುಕ್ಕೆಗಳಿವೆ. ನಿಶಾಚರಿಯಾದ ಇದು ಗಿಡಗಳ ಕುಡಿಯನ್ನು ತಿಂದು ನಷ್ಟವುಂಟುಮಾಡುತ್ತದೆ. ಬೆಳಗಿನ ಹೊತ್ತಿನಲ್ಲಿ ತೊಗಟೆಯ ಸಂದಿನಲ್ಲಿ ಮತ್ತು ನೆಲದ ಬಿರುಕಿನಲ್ಲಿ ಅಡಗಿರುವುದು. ಗಿಡವನ್ನು ಕತ್ತರಿಸಿದ ಅನಂತರ ಬೆಳೆದು ಬರುವ ಚಿಗುರುಗಳನ್ನು ಈ ಕೀಟ ತಿಂದು ಹಾಳುಮಾಡುತ್ತದೆ. ಈ ಕೀಟ ಏಪ್ರಿಲ್‍ನಿಂದ ಅಕ್ಟೋಬರ್ ತಿಂಗಳ ಅವಧಿಯಲ್ಲಿ ಅತಿ ಚಟುವಟಿಕೆಯಿಂದ ಇದ್ದು, ಚಳಿಗಾಲದಲ್ಲಿ ಸುಪ್ತವಾಗಿರುತ್ತವೆ. ಅರ್ಧ ಅಡಿ ಉದ್ದದ ಸೀಳಿನ ಬಾಳೆಪಟ್ಟೆಯ ಪಿಂಡಿಗಳನ್ನು ಗಿಡದ ಕಾಂಡದ ಮೇಲ್ಭಾಗದಲ್ಲಿ ಇಡುವುದರಿಂದ ಕೀಟಗಳು ಬಿಸಿಲಿನ ತಾಪ ತಾಳಲಾರದೆ ಪಿಂಡಿಗಳಲ್ಲಿ ಸೇರುತ್ತವೆ. ಪಿಂಡಿಗಳನ್ನು ಜಾಗರೂಕತೆಯಿಂದ ತೆಗೆದು ಒಂದು ಬಟ್ಟೆಯ ಚೀಲದಲ್ಲಿ ಕೀಟಗಳು ಬೀಳುವಂತೆ ಒದರಿಕೊಂಡು ತರುವಾಯ ಸೀಮೆಎಣ್ಣೆ ಹಾಕಿದ ನೀರಿನ ತಟ್ಟೆಯಲ್ಲಿ ಹಾಕಿ ಅವನ್ನು ನಾಶಪಡಿಸಲಾಗುತ್ತದೆ. 4 ಪೌಂಡ್ ವೆಟಬಲ್ ಡಿ.ಡಿ.ಟಿ.ಯನ್ನು 100 ಗ್ಯಾಲನ್ ಬೋರ್ಡೊದ್ರಾವಣ (3 : 3 : 50)ದಲ್ಲಿ ಬೆರೆಸಿ ಸಿಂಪಡಿಸುವುದರಿಂದ ಕೀಟವನ್ನು ಹತೋಟಿಯಲ್ಲಿ ಇಡಬಹುದು. ಗಿಡ ಕತ್ತರಿಸಿದ ಅನಂತರ ಮೂರು ಸಲ ಹೀಗೆ ಸಿಂಪಡಿಸಲಾಗುತ್ತದೆ.

ದ್ರಾಕ್ಷಿಬಳ್ಳಿಗೆ ಬರುವ ಶಿಲೀಂಧ್ರ ರೋಗಗಳಲ್ಲಿ ಬೂದಿರೋಗ, ಡೌನಿಮಿಲ್ ಡ್ಯೂ ಮತ್ತು ಆಂತ್ರಕ್ನೋಸ್ ಮುಖ್ಯವಾದವು.

ಡೌನಿಮಿಲ್‍ಡ್ಯೂ : ಇದು ಪ್ಲಾಸ್‍ಮೋಪಾರ ವೈಟಿಕೋಲ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಎಲೆಗಳ ಮೇಲ್ಮೈಯಲ್ಲಿ ಹಳದಿ ಮಿಶ್ರಿತ ಹಸಿರು ಕಲೆಗಳು ಉಂಟಾಗಿ ಅನಂತರ ಕಂದುಬಣ್ಣಕ್ಕೆ ತಿರುಗಿ ಎಲೆಗಳು ಒಣಗಿ ಹೋಗುತ್ತವೆ. ರೋಗದ ಪ್ರಾರಂಭದಲ್ಲಿ ಎಲೆಗಳು ಪಾರದರ್ಶಕವಾಗುವುವು. ಬರಿಯ ಎಲೆಗಳಲ್ಲದೆ ಎಳೆಕಡ್ಡಿ, ಚಿಗುರುಗಳು ಸಹ ರೋಗಕ್ಕೆ ಸುಲಭವಾಗಿ ತುತ್ತಾಗುತ್ತವೆ. ಆದರೆ ಬಲಿತಮೇಲೆ ಅವುಗಳಲ್ಲಿ ರೋಗನಿರೋಧ ಸಾಮಥ್ರ್ಯ ಬೆಳೆಯುತ್ತದೆ. ದ್ರಾಕ್ಷಿ ಗೊಂಚಲು ಈ ರೋಗಕ್ಕೆ ಬಲಿಯಾದರೆ ಹಣ್ಣು ಒಣಗಿ ಉದುರಿ ಹೋಗುತ್ತವೆ. ರೋಗ 770-820 ಈ. ಉಷ್ಣತೆಯಲ್ಲಿ ಬಹಳ ಬೇಗನೆ ಹರಡುವುದು. ಆದರೆ ಬೇಸಿಗೆಯಲ್ಲಿ ಬಹುಮಟ್ಟಿಗೆ ಕಡಿಮೆ.

ಬೂದಿರೋಗ (ಪೌಡರಿ ಮಿಲ್‍ಡ್ಯೂ) : ಈ ರೋಗ ಉನ್‍ಸಿನ್ಯೂಲಾ ನಿಕೆಟರ್ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಇದು ಚಿಗುರು, ಎಲೆ, ಹೂವಿನ ಗೊಂಚಲು ಮತ್ತು ಹಣ್ಣುಗಳ ಮೇಲೆ ಕಾಣಿಸಿಕೊಂಡು ನಷ್ಟವುಂಟು ಮಾಡುತ್ತದೆ. ಎಲೆಯ ಎರಡು ಭಾಗದಲ್ಲೂ ಬಿಳಿಯ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ರೋಗ ಮುಂದುವರಿದಂತೆ ಮಚ್ಚೆಗಳು ಬೂದಿಬಣ್ಣಕ್ಕೆ ತಿರುಗುತ್ತವೆ. ಅನಂತರ ಇವು ಒಂದಕ್ಕೊಂದು ಸೇರಿ ದೊಡ್ಡದಾಗಿ ಎಲೆಗಳು ವಿರೂಪಗೊಳ್ಳುವುವು. ರೋಗ ತೀವ್ರಗೊಂಡಾಗ ಬಳ್ಳಿಯ ಎಲ್ಲ ಭಾಗಗಳ ಮೇಲೂ ಈ ಮಚ್ಚೆಗಳನ್ನು ಕಾಣಬಹುದು. ರೋಗದ ಕೊನೆಯ ಹಂತದಲ್ಲಿ ಕಪ್ಪುಬಣ್ಣಕ್ಕೆ ತಿರುಗುವುವು. ಹೂಗೊಂಚಲಿಗೆ ರೋಗ ತಗುಲಿದಾಗ ಹೂಗಳು ಉದುರಿ ಹೋಗುವುದರಿಂದ ಕಾಯಿ ಕಚ್ಚುವುದಿಲ್ಲ. ಸಣ್ಣಕಾಯಿಗಳಿಗೆ ರೋಗ ತಗುಲಿದರೆ ಅವು ಉದುರಿಹೋಗುತ್ತವೆ. ಬಲಿತಕಾಯಿಗಳ ಮೇಲೆ ರೋಗ ತೀವ್ರಕರವಾಗಿ ಹರಡಿದರೆ ಕಾಯಿಗಳು ಸೀಳಿ ಬಿಡುವುವು. ಹಣ್ಣುಗಳು ಮಾಗಿದಮೇಲೆ ರೋಗ ತಗಲುವುದಿಲ್ಲ.

ಒಣಹವೆಯಿಂದ ಕೂಡಿದ ಮೋಡದ ವಾತಾವರಣ, 750 ಯಿಂದ 950 ಈ. ಉಷ್ಣತೆ ರೋಗ ಪ್ರಸಾರಕ್ಕೆ ಅನುಕೂಲ. 500 ಈ.ಗಿಂತ ಕೆಳಗಿನ ಮತ್ತು 1000 ಈ. ಮೇಲಿನ ಉಷ್ಣತೆಯಲ್ಲಿ ರೋಗ ಉಂಟಾಗುವುದಿಲ್ಲ.

ಆಂತ್ರಕ್ನೋಸ್ : ಈ ರೋಗ ಗ್ಲಿಯೋಸ್ಟೋರಿಯಮ್ ಆಂಪಿಲೋಫಾಗಮ್ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಶಿಲೀಂಧ್ರನಾಶಕಗಳಿಂದ ಈ ರೋಗವನ್ನು ನಿಯಂತ್ರಿಸುವುದು ಕಷ್ಟ. ಬಳ್ಳಿಯ ಎಲ್ಲ ಭಾಗದಲ್ಲೂ ರೋಗ ಕಾಣಿಸಿಕೊಳ್ಳುತ್ತದೆ. ಎಲೆಗಳ ಮೇಲೆ ಕಂದು ಬಣ್ಣದ, ಅಂಡಾಕಾರದ, ಚುಕ್ಕೆಗಳು ಮೂಡವುವು; ಎಲೆಗಳು ಸುರುಳಿ ಸುತ್ತಿಕೊಂಡು ವಿರೂಪಗೊಳ್ಳುತ್ತವೆ. ಚುಕ್ಕೆಗಳ ಮಧ್ಯಭಾಗ ಸ್ವಲ್ಪ ತಗ್ಗಾಗಿರುತ್ತದೆ. ಬಳ್ಳಿಯ ಬುಡದಲ್ಲಿ ರೋಗ ಕಾಣಿಸಿಕೊಂಡರೆ, ಟೊಂಗೆ ನಿರ್ಬಲಗೊಂಡು ಮುರಿದುಹೋಗುತ್ತದೆ.

ರೋಗ ತಗುಲಿದ ಹೂಗೊಂಚಲಿನಲ್ಲಿ ಕಾಯಿ ಕಚ್ಚುವುದಿಲ್ಲ. ಪ್ರಾರಂಭದಲ್ಲೇ ರೋಗ ತಗುಲಿದರೆ ಹೂ ಗೊಂಚಲು ಸುಟ್ಟಂತೆ ಕಾಣಿಸುತ್ತದೆ. ತೀವ್ರರೀತಿಯ ರೋಗದಲ್ಲಿ ಕಾಯಿಗಳು ಒಡೆದು ಒಳಗಿನ ಬೀಜ ಕಾಣಿಸುತ್ತದೆ. ಮಳೆ ಅಥವಾ ಇಬ್ಬನಿಯಿಂದ ತೇವಗೊಂಡ ವಾತಾವರಣದಲ್ಲಿ ಶಿಲೀಂಧ್ರದ ಬೀಜಗಳು ಮೊಳೆಯುವುದರಿಂದ ರೋಗಪ್ರಸಾರ ಇಂಥ ಪರಿಸ್ಥಿತಿಯಲ್ಲೇ ಹೆಚ್ಚು. ಬಳ್ಳಿಯ ಎಳೆಯ ಭಾಗ ಮಾತ್ರ ರೋಗಕ್ಕೆ ತುತ್ತಾಗುತ್ತದೆ. ಬಲಿತಕಡ್ಡಿ, ಹಳೆಯ ಎಲೆ, ಮಾಗುತ್ತಿರುವ ಕಾಯಿಗಳು ರೋಗಕ್ಕೆ ತುತ್ತಾಗುವ ಸಂಭವವಿಲ್ಲ. ಆದುದರಿಂದ ಗಿಡ ಕತ್ತರಿಸಿದ ಅನಂತರ ಬೆಳೆಯುವ ಚಿಗುರು, ಎಲೆ, ಗೊಂಚಲುಗಳಿಗೆ ರೋಗ ತಗಲುವುದಕ್ಕೆ ಮುಂಚಿತವಾಗಿ ಶಿಲೀಂಧ್ರನಾಶಕ ವಸ್ತುಗಳನ್ನು ಸಿಂಪಡಿಸುವುದರಿಂದ ಇದನ್ನು ಹತೋಟಿಯಲ್ಲಿಡಬಹುದು. (ಡಿ.ಎಸ್.ಎಲ್.)