ದ್ವಾದಶೀ - ಚಾಂದ್ರಮಾನದಲ್ಲಿ ಬರುವ ಮೂವತ್ತು ತಿಥಿಗಳಲ್ಲಿ ಹನ್ನೆರಡನೆಯ ಮತ್ತು ಇಪ್ಪತ್ತೇಳನೆಯ ತಿಥಿಗಳು. ಹನ್ನೆರಡು ತಿಂಗಳಿರುವ ಒಂದು ಸಂವತ್ಸರದಲ್ಲಿ ಇಪ್ಪತ್ತನಾಲ್ಕು ದ್ವಾದಶಿಗಳು ಬರುತ್ತವೆ. ಅಧಿಕಮಾಸ ಬರುವ ವರ್ಷದಲ್ಲಿ ಎರಡು ದ್ವಾದಶಿಗಳು ಅಧಿಕವಾಗಿ ಬಂದು ಒಟ್ಟು ಇಪ್ಪತ್ತಾರು ದ್ವಾದಶಿಗಳಾಗುತ್ತವೆ. ಈ ತಿಂಗಳ ಮೊದಲ ತಿಥಿ ಸೂರ್ಯಚಂದ್ರರ ಅಂತರ 132 ಅಂಶವಾದಾಗ ಪ್ರಾರಂಭವಾಗಿ 144 ಅಂಶಗಳಾದಾಗ ಮುಗಿಯುತ್ತದೆ. ಎರಡನೆಯ ತಿಥಿ ಅಂತರ 312 ಅಂಶಗಳಾದಾಗ ಪ್ರಾರಂಭವಾಗಿ 324 ಅಂಶಗಳಾದಾಗ ಮುಗಿಯುತ್ತದೆ.
ಈ ಎರಡು ದ್ವಾದಶಿಗಳಲ್ಲಿ, ತಿಂಗಳಿನ ಮೊದಲನೆಯ ಅರ್ಧದಲ್ಲಿ ಹುಣ್ಣಿಮೆಗೆ ಮೊದಲು ಬರುವುದು ಶುಕ್ಲ ದ್ವಾದಶಿ ; ಅಮಾವಸ್ಯೆಗೆ ಮೊದಲು ಬರುವ ಎರಡನೆಯದು ಕೃಷ್ಣ ದ್ವಾದಶಿ. ಇದನ್ನು ವಿಷ್ಣುತಿಥಿ ಎಂದು ಶಾಸ್ತ್ರಕಾರರು ಕರೆದಿದ್ದಾರೆ. ಭವಿಷ್ಯ ಪುರಾಣದಲ್ಲಿ ತಿಳಿಸಿರುವಂತೆ ಏಕಾದಶಿಯ ಉಪವಾಸಾ ನಂತರ ದ್ವಾದಶಿಯಲ್ಲಿ ವಿಷ್ಣುವನ್ನು ಉಪಾಸನೆ ಮಾಡಬೇಕೆಂದಿದೆ. ಸ್ಕಾಂದ ಪುರಾಣದಲ್ಲಿ ತಿಳಿಸಿರುವಂತೆ ದ್ವಾದಶಿಯ ದಿನ ತುಲಸೀ ಮಿಶ್ರವಾದ ನೈವೇದ್ಯವನ್ನು ಊಟ ಮಾಡುವುದರಿಂದ ಬ್ರಹ್ಮಹತ್ಯಾದೋಷವೂ ನಾಶವಾಗುತ್ತದೆ. ಪಾರಣೆಯಲ್ಲಿ ಅಗಸೆಯ ಸೊಪ್ಪು ನೆಲ್ಲಿಕಾಯಿಯನ್ನು ಉಪಯೋಗಿಸಬೇಕೆಂದು ವಿಷ್ಣುಧರ್ಮೋತ್ತರ ಪುರಾಣದಲ್ಲಿದೆ. ಆ ದಿನ ಹಗಲು ನಿದ್ರೆ, ಪರಾನ್ನ ಭೋಜನ, ಪುನರ್ಭೋಜನ, ಮೈಥುನ ಇವನ್ನು ಮಾಡಬಾರದು. ಕಾರಣಾಂತರದಿಂದ ಬೆಳಗ್ಗೆ ಪಾರಣೆ ಮಾಡಲು ಆಗದಿದ್ದಾಗ, ಪಾರಣೆಗೆ ಪ್ರತಿಯಾಗಿ ನೀರನ್ನಾದರೂ ಕುಡಿದು ಬಳಿಕ ನಿಧಾನವಾಗಿ ಊಟ ಮಾಡಬಹುದು. ಅಂದು ಮಾಧ್ಯಾಹ್ನಿಕವನ್ನು ಬೆಳಗ್ಗೆಯೇ ಮಾಡುವುದರಿಂದ ಕಾಲಾತೀತ ದೋಷವಿರುವುದಿಲ್ಲ.
ದ್ವಾದಶೀ ತಿಥಿ ಪ್ರಮಾಣದಲ್ಲಿ ಪ್ರಾರಂಭದ ನಾಲ್ಕನೆಯ ಒಂದು ಭಾಗಕ್ಕೆ ಹರಿವಾಸರ ಎಂದು ಸಂಜ್ಞೆ. ಈ ಕಾಲದಲ್ಲಿ ಪಾರಣೆ ಮಾಡಕೂಡದು. ದ್ವಾದಶಿಯಂದು ಶ್ರವಣ ನಕ್ಷತ್ರ ಸೇರಿದರೂ ಪಾರಣೆ ಕೂಡದು ; ಉಪವಾಸವಿದ್ದು ತ್ರಯೋದಶೀ ದಿವಸ ಪಾರಣೆ ಮಾಡಬೇಕು. ಸಾಮಾನ್ಯವಾಗಿ ಶುಕ್ಲ ದ್ವಾದಶೀ ಶ್ರವಣ ಯೋಗ ಭಾದ್ರಪದ ತಿಂಗಳಿನಲ್ಲೂ ಕೃಷ್ಣ ದ್ವಾದಶೀ ಶ್ರವಣಯೋಗ ಮಾಘಮಾಸದಲ್ಲೂ ಸಂಭವಿಸುತ್ತವೆ.
ಉನ್ಮೀಲನೀ ವಂಜುಲೀ ತ್ರಿಸ್ಪøಶಾ ಪಕ್ಷವರ್ಧಿನೀ ಜಯ ವಿಜಯಾ ಜಯಂತೀ ಪಾಪನಾಶಿನೀ ಎಂದು ಮಹಾ ದ್ವಾದಶಿಗಳು ಎಂಟು. ಶುದ್ಧೈ ಕಾದಶೀಯುಕ್ತವಾದ ದ್ವಾದಶಿ ಉನ್ಮೀಲನೀ, ಶುದ್ಧಾದಿಕ ದ್ವಾದಶೀ ವಂಜುಲೀ, ಉದಯ ಕಾಲದಲ್ಲಿ ಏಕಾದಶೀ ಅನಂತರ ದ್ವಾದಶೀ, ರಾತ್ರಿ ಶೇಷದಲ್ಲಿ ತ್ರಯೋದಶೀ - ಹೀಗೆ ಮೂರು ತಿಥಿಗಳಿಂದಲೂ ಕೂಡಿರುವುದು ತ್ರಿಸ್ಪøಶಾ. 16 ದಿನಗಳು ಬರುವ ಪಕ್ಷದಲ್ಲಿರುವ ದ್ವಾದಶೀ ಪಕ್ಷವರ್ಧಿನೀ, ಪುಷ್ಯನಕ್ಷತ್ರ ಸಹಿತವಾದ ದ್ವಾದಶೀ ಜಯಾ. ಶ್ರವಣ ನಕ್ಷತ್ರ ಸಹಿತವಾದ ದ್ವಾದಶೀ ವಿಜಯಾ. ಪುನರ್ವಸು ನಕ್ಷತ್ರಯುಕ್ತ ದ್ವಾದಶೀ ಜಯಂತೀ. ರೋಹಿಣೀ ನಕ್ಷತ್ರಯುಕ್ತ ದ್ವಾದಶೀ ಪಾಪನಾಶಿನೀ. ಮುಕ್ತಿಕಾಮನೆಯುಳ್ಳವರು ಈ ಎಂಟು ದ್ವಾದಶಿಗಳಲ್ಲೂ ಉಪವಾಸವಿರಬೇಕು.
ಪ್ರತಿ ತಿಂಗಳಿನ ಶುಕ್ಲ ದ್ವಾದಶಿಗೂ ಒಂದೊಂದು ಹೆಸರಿದೆ. ಮಾರ್ಗಶಿರ ಶುಕ್ಲ ದ್ವಾದಶೀ - ಮತ್ಸ್ಯ ದ್ವಾದಶೀ, ಪುಷ್ಯ ಶುಕ್ಲ ದ್ವಾದಶೀ - ಕೂರ್ಮ ದ್ವಾದಶೀ, ಮಾಘ ಶುಕ್ಲ ದ್ವಾದಶೀ - ವರಾಹ ದ್ವಾದಶೀ, ಫಾಲ್ಗುನ ಶುಕ್ಲ ದ್ವಾದಶೀ, - ನೃಸಿಂಹ ದ್ವಾದಶೀ, ಚೈತ್ರ ಶುಕ್ಲ ದ್ವಾದಶೀ - ವಾಮನ ದ್ವಾದಶೀ ವೈಶಾಖ ಶುಕ್ಲ ದ್ವಾದಶೀ - ಜಾಮದಗ್ನಿ ದ್ವಾದಶೀ (ಇದಕ್ಕೆ ಪಿಪೀತಕ ದ್ವಾದಶೀ ಎಂಬ ಹೆಸರೂ ಉಂಟು), ಜ್ಯೇಷ್ಠ ಶುಕ್ಲ ದ್ವಾದಶೀ - ರಾಮ ದ್ವಾದಶೀ, ಆಷಾಢ ಶುಕ್ಲ ದ್ವಾದಶೀ-ಕೃಷ್ಣ ದ್ವಾದಶೀ, ಶ್ರಾವಣ ಶುಕ್ಲ ದ್ವಾದಶಿ, - ಬುದ್ಧ ದ್ವಾದಶಿ, ಭಾದ್ರಪದಶುಕ್ಲ ದ್ವಾದಶೀ - ಕಲ್ಕಿದ್ವಾದಶೀ, ಆಶ್ವಯುಜ ಶುಕ್ಲ ದ್ವಾದಶೀ - ಪದ್ಮನಾಭ ದ್ವಾದಶೀ, ಕಾರ್ತಿಕ ಶುಕ್ಲ ದ್ವಾದಶೀ - ನಾರಾಯಣ ದ್ವಾದಶೀ, ಅಗ್ರಹಾಯಣ ಶುಕ್ಲ ದ್ವಾದಶಿಗೆ ಅಖಂಡ ದ್ವಾದಶಿ ಎಂಬ ಹೆಸರು ಉಂಟು. ವಿಷ್ಣುಪದ ಪ್ರಾಪ್ತಿ ಕಾಮನೆಯುಳ್ಳವರು ಈ ದ್ವಾದಶಿಯಲ್ಲಿ ಉಪವಾಸವಿದ್ದು ವಿಷ್ಣುಪೂಜೆಯನ್ನು ಮಾಡುತ್ತೇನೆಂದು ಸಂಕಲ್ಪ ಮಾಡಿ ವಿಷ್ಣುವನ್ನು ಪಂಚಗವ್ಯದಿಂದ ಸ್ನಾನ ಮಾಡಿಸಿ ಪೂಜಿಸಬೇಕು. ಮಾರ್ಗಶೀರ್ಷ ಶುಕ್ಲ ಏಕಾದಶಿಯಂದು ಉಪವಾಸವಿದ್ದು, ದ್ವಾದಶೀ ದಿವಸ ತಿಲಸ್ನಾನ, ತಿಲದಿಂದ ವಿಷ್ಣುಪೂಜೆ, ತಿಲನೈವೇದ್ಯ, ತಿಲತೈಲದೀಪದಾನ, ತಿಲಹೋಮ ತಿಲದಾನ, ತಿಲಭಕ್ಷಣವೆಂಬ ಪಟ್‍ತಿಲಾಚರಣೆಯಿಂದ ಸರ್ವಪಾಪ ವಿಮುಕ್ತಿಯಾಗುವುದಲ್ಲದೆ ಸರ್ವಲೋಕ ಪ್ರಾಪ್ತಿಯಾಗುತ್ತದೆ. ಮಾಘ ಶುಕ್ಲ ದ್ವಾದಶಿಯಂದು ತಿಲೋತ್ಪತ್ತಿ ದಿನವಾದುದರಿಂದ ಅಂದು ಈ ಪಟ್‍ತಿಲಾಚರಣೆಯನ್ನು ಆಚರಿಸುವುದೂ ಉಂಟು.
ಚೈತ್ರ ಶುಕ್ಲ ದ್ವಾದಶಿಯಂದು ವಿಷ್ಣುವಿಗೆ ದಮನಿಕಾ ಸಮರ್ಪಣೆ ವಿಶೇಷ ಫಲಪ್ರದ. ವೈಶಾಖ ಶುಕ್ಲ ದ್ವಾದಶಿಯಂದು ಮಧುಸೂದನನ್ನು ಪೂಜಿಸುವುದರಿಂದ ಅಗ್ನಿಷ್ಠೋಮ ಫಲಪ್ರಾಪ್ತಿಯಾಗುತ್ತದೆ. ಜ್ಯೇಷ್ಠ ಶುಕ್ಲ ದ್ವಾದಶಿ ದಿವಸ ತ್ರಿವಿಕ್ರಮನನ್ನು ಪೂಜಿಸುವುದರಿಂದ ಗವಾಮಯನ ಕ್ರತುಫಲ, ಆಷಾಢ ಶುಕ್ಲ ದ್ವಾದಶೀ ದಿವಸ ಚಾತುರ್ಮಾಸ್ಯ ವ್ರತಾರಂಭ. ವಿಷ್ಣುವಿಗೆ ಶಯನೋತ್ಸವ. ಶ್ರಾವಣ ಶುಕ್ಲ ದ್ವಾದಶಿಯಂದು ವಿಷ್ಣುವಿಗೆ ಪವಿತ್ರ ಧಾರಣೆ. ಈ ದಿವಸದಲ್ಲೆ ದಧಿ ವ್ರತಾರಂಭ. ಭಾದ್ರಪದ ಶುಕ್ಲ ದ್ವಾದಶೀ ದಿವಸ ವಾಮನನ ಉತ್ಪತ್ತಿ. ಈ ದಿವಸ ವಾಮನ ಜಯಂತಿ ಆಚರಣೆ. ಈ ದ್ವಾದಶಿ ದಿವಸ ಶ್ರವಣ ನಕ್ಷತ್ರ ಸೇರಿದರೆ ಇದನ್ನು ಪರಿವರ್ತನ ದ್ವಾದಶೀ ಎಂದು ಕರೆಯುತ್ತಾರೆ. ಈ ದಿವಸ ಕ್ಷಿರವ್ರತಾರಂಭ. ಭಾದ್ರಪದ ಕೃಷ್ಣದ್ವಾದಶೀ ತಿತಿ ದಿವಸ ಸಂನ್ಯಾಸಿಗಳಿಗೆ ಮಹಾಲಯ ಶ್ರದ್ಧಾಚರಣ. ಕಾರ್ತಿಕ ಶುಕ್ಲ ದ್ವಾದಶಿ ಉತ್ಥಾನ ದ್ವಾದಶೀ, ಆಷಾಢದಲ್ಲಿ ಶಯನಿಸಿರುವ ವಿಷ್ಣು ಈ ದಿವಸ ಏಳುವುದರಿಂದ ಇದನ್ನು ಉತ್ಥಾನ ದ್ವಾದಶೀ ಎಂದು ಕರೆಯುತ್ತಾರೆ. ಈ ದಿವಸ ಚತುರ್ಮಾಸ್ಯ ವ್ರತ ಸಮಾಪ್ತಿ. ತುಲಸೀ ಬೃಂದಾವನದಲ್ಲಿ ನೆಲ್ಲಿಯ ಗಿಡವನ್ನು ಇಟ್ಟು ಅಲ್ಲಿ ಕೃಷ್ಣನನ್ನು ಪೂಜಿಸುತ್ತಾರೆ. ವಿಷ್ಣು ದೇವಾಲಯಗಳಲ್ಲಿ ಪುಷ್ಪ ಬೃಂದಾವನೋತ್ಸವವನ್ನು ಮಾಡುತ್ತಾರೆ. ರೇವತೀ ನಕ್ಷತ್ರದೊಡನೆ ಕೂಡಿದ ಈ ದ್ವಾದಶಿಯಲ್ಲಿ ಪಾರಣೆ ಮಾಡಬೇಕು. ಈ ದಿವಸದಲ್ಲಿ ಉಡುಪಿ ಕ್ಷೇತ್ರದಲ್ಲಿ ಲಕ್ಷ ದೀಪೋತ್ಸವ ನಡೆಯುತ್ತದೆ. ಮಾಘ ಶುಕ್ಲ ದ್ವಾದಶೀ ಭೀಷ್ಮ ದ್ವಾದಶೀ. ಇದರಲ್ಲಿ ಆಬಾಲ ಬ್ರಹ್ಮಚಾರಿಯಾದ ಭೀಷ್ಮನನ್ನುದ್ದೇಶಿಸಿ ತರ್ಪಣ ಮಾಡಬೇಕು. ಫಾಲ್ಗುಣ ಶುಕ್ಲ ದ್ವಾದಶೀ ದಿವಸ ಪುಷ್ಯ ನಕ್ಷತ್ರ ಸೇರಿದರೆ ಅದನ್ನು ಗೋವಿಂದ ದ್ವಾದಶೀ ಎಂದು ಕರೆಯುತ್ತಾರೆ. ಈ ದಿವಸ ಗಂಗಸ್ನಾನದಿಂದ ಮಹಾಪಾತಕಗಳು ನಾಶವಾಗುತ್ತವೆ. ಧನುರ್ಮಾಸದ ಶುಕ್ಲ ದ್ವಾದಶೀ ಮುಕ್ಕೋಟಿ ದ್ವಾದಶೀ. ವೃಶ್ಚಿಕ ಮಾಸದ ಶುಕ್ಲ ದ್ವಾದಶೀ ಕೈಶಿಕ ದ್ವಾದಶೀ. ಮುಕ್ಕೋಟಿ ದ್ವಾದಶಿಯಂದು ವಿಷ್ಣು ಪೂಜೆಯಿಂದ ಸರ್ವಪಾಪಗಳೂ ನಶಿಸುತ್ತವೆ. ಮೂರುಕೋಟಿ ತೀರ್ಥಸ್ನಾನ ಫಲ ಲಭಿಸುತ್ತದೆ. ಕೈಶಿಕ ಮಹಾತ್ಮ್ಯನನ್ನು ಪಠಿಸಿ ವಿಷ್ಣು ಪೂಜೆ ಮಾಡುವುದರಿಂದ ಅನಂತ ಪುಣ್ಯ ಫಲ ಉಂಟಾಗುತ್ತದೆ.
ದ್ವಾದಶೀ ದಿವಸ ಹುಟ್ಟಿದವನಿಗೆ ಮಕ್ಕಳು ಅಧಿಕ. ಸರ್ವಜನಾನುರಾಗಿಯೂ ರಾಜಮಾನ್ಯನೂ ಅತಿಥಿಪ್ರಿಯನೂ ಪ್ರವಾಸವಿಲ್ಲದವನೂ ವ್ಯವಹಾರದಲ್ಲಿ ದಕ್ಷನೂ ಆಗುತ್ತಾನೆ. (ಎಸ್.ಎನ್.ಕೆ.)