ಧಾರವಾಡ ಭಾರತದ ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಉ.ಅ. 140 17'-150 50' ಮತ್ತು ಪೂ.ರೇ. 740 48' - 760 ನಡುವೆ ಇದೆ. ಇದರ ಉತ್ತರದಲ್ಲಿ ಬೆಳಗಾಂವಿ ಮತ್ತು ಗದಗ ಜಿಲ್ಲೆಗಳೂ, ದಕ್ಷಿಣದಲ್ಲಿ ಹಾವೇರಿ ಪಶ್ಚಿಮಕ್ಕೆ ಉತ್ತರ ಕನ್ನಡ ಜಿಲ್ಲೆ ಮತ್ತು ಬೆಳಗಾಂವಿಯೂ ಈಶಾನ್ಯ ಮತ್ತು ಪೂರ್ವಕ್ಕೆ ಗದಗ ಜಿಲ್ಲೆಯೂ ಸುತ್ತುವರಿದಿವೆ. ಧಾರವಾಡ, ನವಲಗುಂದ, ಹುಬ್ಬಳ್ಳಿ, ಕಲಘಟಗಿ ಮತ್ತು ಕುಂದಗೋಳ ತಾಲ್ಲೂಕುಗಳನ್ನೊಳಗೊಂಡ ಈ ಜಿಲ್ಲಾ ವಿಸ್ತೀರ್ಣ 4,230 ಚ.ಕಿ.ಮೀ. ಜನಸಂಖ್ಯೆ 16,03,794 (2001). ಜಿಲ್ಲೆಯ ಆಡಳಿತ ಕೇಂದ್ರ ಹುಬ್ಬಳ್ಳಿ - ಧಾರವಾಡ.
ಈಸ್ಟ್ ಇಂಡಿಯ ಕಂಪನಿ 1818 ರಲ್ಲಿ ದಕ್ಷಿಣ ಮರಾಠಾ ರಾಜ್ಯಗಳನ್ನು ಗೆದ್ದ ತರುವಾಯ ಈ ಜಿಲ್ಲೆಯ ಸ್ಥಾಪನೆಯಾಯಿತು. ಆಗ ಇದು ಸುಮಾರು 16 ರಿಂದ 32 ಕಿಮೀ. ಅಗಲವಾದ ಅನಿಯತ ಪಟ್ಟೆಯಾಗಿತ್ತು. 1949 ರ ಆಗಸ್ಟ್ 1ರಂದು ಮೊದಲಿನ ಜಮಖಂಡಿ ಸಂಸ್ಥಾನದ 17 ಗ್ರಾಮಗಳು ಮತ್ತು 3 ಪಟ್ಟಣಗಳು, ಮೊದಲಿನ ಮಿರಜ್ ಹಿರಿಯ ಸಂಸ್ಥಾನದ 15 ಗ್ರಾಮಗಳು ಮತ್ತು 2 ಪಟ್ಟಣಗಳು, ಮೊದಲಿನ ಮಿರಜ್ ಕಿರಿಯ ಸಂಸ್ಥಾನದ 72 ಗ್ರಾಮಗಳು ಮತ್ತು 1 ಪಟ್ಟಣ ಹಾಗೂ ರಾಮದುರ್ಗ ಸಂಸ್ಥಾನದ 7 ಗ್ರಾಮಗಳು ಧಾರವಾಡ ಜಿಲ್ಲೆಯಲ್ಲಿ ಸಮಾವೇಶಗೊಂಡುವು. ಅದೇ ಕಾಲಕ್ಕೆ ಧಾರವಾಡ ಜಿಲ್ಲೆಯ 3 ಗ್ರಾಮಗಳು ಬೆಳಗಾಂವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿಗೂ ಹೈದರಾಬಾದ್ ಸಂಸ್ಥಾನದ 10 ಗ್ರಾಮಗಳು ಧಾರವಾಡ ಜಿಲ್ಲೆಗೂ ಧಾರವಾಡ ಜಿಲ್ಲೆಯ 4 ಗ್ರಾಮಗಳು ಹೈದರಾಬಾದಿಗೂ ವರ್ಗಾಯಿಸಲ್ಪಟ್ಟವು. ಈ ಹೊಂದಾಣಿಕೆಯಿಂದ ಧಾರವಾಡ ಜಿಲ್ಲೆಯ ಆಕಾರ ಅಚ್ಚುಕಟ್ಟಾಯಿತು.
1961 ರಲ್ಲಿ ಧಾರವಾಡ ಜಿಲ್ಲೆಯಲ್ಲಿ 16 ತಾಲ್ಲೂಕುಗಳು 1,408 ಗ್ರಾಮಗಳು ಮತ್ತು 17 ಪಟ್ಟಣಗಳಿದ್ದವು. ಆದರೆ 1971 ರಲ್ಲಿ 17 ತಾಲ್ಲೂಕುಗಳು 1,359 ಗ್ರಾಮಗಳು ಮತ್ತು 18 ಪಟ್ಟಣಗಳಿದ್ದವು. 1969 ರಲ್ಲಿ ಹಾವೇರಿ ತಾಲ್ಲೂಕಿನ 21 ಗ್ರಾಮಗಳನ್ನು ಮತ್ತು ಶಿಗ್ಗಾಂವಿ ತಾಲ್ಲೂಕಿನ 37 ಗ್ರಾಮಗಳನ್ನು ಸೇರಿಸಿ ಸವಣೂರು ತಾಲ್ಲೂಕನ್ನು ರಚಿಸಲಾಯಿತು. 1971ರಲ್ಲಿ ಅಳ್ನಾವರ ಮತ್ತು ಶಿಗ್ಗಾಂವಿಗಳನ್ನು ಪಟ್ಟಣಗಳೆಂದು ಪರಿಗಣಿಸಲಾಯಿತು. 1962 ರಲ್ಲಿ ಧಾರವಾಡ-ಹುಬ್ಬಳ್ಳಿ ಪಟ್ಟಣಗಳನ್ನು ಕೂಡಿಸಿ ನಗರಗಳನ್ನು ರಚಿಸಲಾಯಿತು. ಒಟ್ಟಿನಲ್ಲಿ 1961-1971 ರಲ್ಲಿ ಪಟ್ಟಣಗಳ ಸಂಖ್ಯೆ 17 ರಿಂದ 18 ಕ್ಕೆ ಏರಿತು. ಕೆಲವು ಗ್ರಾಮಗಳನ್ನು ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಮತ್ತು ಪಟ್ಟಣಗಳಲ್ಲಿ ಸೇರಿಸಲಾಯಿತು. ಧಾರವಾಡ ಜಿಲ್ಲೆಯ ಈಗಿನ ತಾಲ್ಲೂಕುಗಳು, ಅವುಗಳ ವಿಸ್ತೀರ್ಣ ಜನಸಂಖ್ಯೆಗಳು (1971), ಗ್ರಾಮಗಳ ಹಾಗೂ ಪಟ್ಟಣಗಳ ಸಂಖ್ಯೆ ಇವನ್ನು ಮುಂದೆ ಕೊಟ್ಟಿದೆ :
ತಾಲ್ಲೂಕು
ವಿಸ್ತೀರ್ಣ (ಚ.ಕಿಮೀ)
ಗ್ರಾಮಗಳು
ಪಟ್ಟಣಗಳು
ಜನಸಂಖ್ಯೆ
(2001)
1 ಧಾರವಾಡ 1,008.1 110 1 2,18,803
7 ಹುಬ್ಬಳ್ಳಿ 826.6 57 1 1,28,315
8 ಕಲಘಟಗಿ 684.7 85 - 1,36,978
9 ಕುಂದಗೋಳ 648.6 56 1 1,57,039
12 ನವಲಗುಂದ 1,081.6 58 2 1,76,641.
ಮೇಲ್ಮೈ ಲಕ್ಷಣಗಳು : ಧಾರವಾಡ ಜಿಲ್ಲೆ ಪಶ್ಚಿಮದಿಂದ ಪೂರ್ವಕ್ಕೆ ಇಳಿಜಾರಾಗಿದೆ. ಇದನ್ನು ಸ್ಥೂಲವಾಗಿ ಪಶ್ಚಿಮದ ಮಲೆನಾಡು ಮತ್ತು ಪೂರ್ವದ ಬಯಲುನಾಡು ಎಂದು ಎರಡು ಬಗೆಗಳಾಗಿ ವಿಂಗಡಿಸಬಹುದು. ಇವೆರಡರ ನಡುವೆ ಇರುವ ಕಿರಿ ಅಗಲದ ಪ್ರದೇಶ ಗಡಿನಾಡು. ಮಲೆನಾಡು ಅತ್ಯಂತ ವಿಚ್ಛಿನ್ನವಾದ ಪಶ್ಚಿಮ ಘಟ್ಟಗಳ ಪ್ರದೇಶ. ಇವುಗಳಲ್ಲಿ ಅಳ್ನಾವರದ ಪೂರ್ವಕ್ಕೆ ಇರುವ ತೇಗೂರು ಗುಡ್ಡ, ಧಾರವಾಡ ಕಲಘಟಗಿಗಳ ನಡುವೆ ಇರುವ ಬೂದನ ಗುಡ್ಡ, ಅದರ ಪಶ್ಚಿಮದ ಗಣೀಗುಡ್ಡ, ದಕ್ಷಿಣದಲ್ಲಿಯ ಕಡೂರ ಗುಡ್ಡ ಮುಖ್ಯವಾದವು. ಬೂದನಗುಡ್ಡ ಸುಮಾರು 13 ಕಿಮೀ ಉದ್ದ ಮತ್ತು 1.6 ಕಿಮೀ ಅಗಲ ಇದೆ. ಇದು ದಕ್ಷಿಣೋತ್ತರವಾಗಿ ಹಬ್ಬಿದೆ. ಇದು ಸುತ್ತಲಿನ ಪ್ರದೇಶಕ್ಕಿಂತ ಸುಮಾರು 152 ಮೀ ಎತ್ತರವಾಗಿದೆ. ಇಲ್ಲಿ ಅನುಕ್ರಮವಾಗಿ 745 ಮೀ ಮತ್ತು 719 ಮೀ ಎತ್ತರದ ಎರಡು ಶಿಖರಗಳುಂಟು. ಧುಂಡಸಿ ಮತ್ತು ಹಾನಗಲ್ಲ ಗುಡ್ಡಗಳು ಚಿಕ್ಕವು. ಆಕಾರದಲ್ಲಿ ಅವು ದುಂಡಗಿವೆ. ದಕ್ಷಿಣದಲ್ಲಿ ಕಡೂರು ಗುಡ್ಡವಲ್ಲದೆ ಮಾಸೂರು ಮತ್ತು ಮಾರವಳ್ಳಿ ಗುಡ್ಡಗಳೂ ಇವೆ. ಇವು ಕಡಿದಾಗಿವೆ ; ಪೂರ್ವ-ಪಶ್ಚಿಮವಾಗಿ ಹಬ್ಬಿವೆ. ಇವುಗಳ ಸರಾಸರಿ ಎತ್ತರ 732 ಮೀ. ಅತ್ಯುನ್ನತ ಶಿಖರ 825 ಮೀ ಎತ್ತರವಾಗಿದೆ.
ಮಲೆನಾಡಿಗೂ (ಸಹ್ಯಾದ್ರಿ) ಬಯಲುನಾಡಿಗೂ ನಡುವೆ ಇರುವ ಗಡಿನಾಡಿನ ಅಗಲ ಸುಮಾರು 32 ಕಿಮೀ. ಇದರ ಪಶ್ಚಿಮ ಮೇರೆ ತೇಗೂರು, ತಡಸ, ಶಿಗ್ಗಾಂವಿ ಮತ್ತು ಕೋಡ ; ಪೂರ್ವ ಮೇರೆ ಧಾರವಾಡ, ಹುಬ್ಬಳ್ಳಿ, ಕರಜಗಿ ಮತ್ತು ರಾಣಿಬೆನ್ನೂರು. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಇದರ ಮಧ್ಯದಲ್ಲಿ ಹಾಯ್ದಿದೆ. ಈ ಪ್ರದೇಶದಲ್ಲಿ ರಾಣಿಬೆನ್ನೂರಿನ ಹತ್ತಿರ ಐರಣಿ ಗುಡ್ಡವೂ ಬ್ಯಾಡಗಿಯ ಪೂರ್ವಕ್ಕೆ ದೇವರಗುಡ್ಡವೂ ಇವೆ.
ಗಡಿನಾಡಿನ ಪೂರ್ವಕ್ಕಿರುವ ಬಯಲುನಾಡು ಅಥವಾ ಬೆಳವಲನಾಡು ತಗ್ಗು ದಿನ್ನೆಗಳಿಂದ ಕೂಡಿದ ಬಯಲು ಪ್ರದೇಶ. ಇಲ್ಲಿ ಗಜೇಂದ್ರಗಡ ಗುಡ್ಡ, ನರಗುಂದ ಗುಡ್ಡ, ನವಲಗುಂದ ಗುಡ್ಡ ಮತ್ತು ಕಪ್ಪತ ಗುಡ್ಡಗಳು ಮುಖ್ಯವಾದವು. ಕಪ್ಪತ ಗುಡ್ಡ ಗದಗದ ಆಗ್ನೇಯದಲ್ಲಿ 48 ಕಿಮೀ ಉದ್ದವಾಗಿ ಹಬ್ಬಿದೆ. ಅದು ಎರಡೂ ತುದಿಗಳಲ್ಲಿ ಸುಮಾರು 6 ಕಿಮೀ ಮತ್ತು ಮಧ್ಯದಲ್ಲಿ ಸುಮಾರು 16ಕಿಮೀ ಅಗಲವಾಗಿದೆ. ಅದರಲ್ಲಿ ಅನೇಕ ಅಡ್ಡ ಶ್ರೇಣಿಗಳೂ ಸಮಾಂತರ ಕಣಿವೆಯೂ ಇವೆ. ಕಪ್ಪತ ಗುಡ್ಡ ಸುತ್ತಲಿನ ಪ್ರದೇಶಕ್ಕಿಂತ ಸರಾಸರಿಯಾಗಿ 122 ಮೀ ಎತ್ತರವಾಗಿದೆ. ಅದರಲ್ಲಿ ಅತ್ಯುನ್ನತ ಶಿಖರ ಸಮುದ್ರಮಟ್ಟದಿಂದ 937 ಮೀ ಎತ್ತರವಾಗಿದೆ. ಈ ಗುಡ್ಡ ಒಂದೇ ಶ್ರೇಣಿಯಾಗಿ ಆರಂಭವಾಗಿ, ಮಧ್ಯದಲ್ಲಿ ಡಂಬಳದ ಹತ್ತಿರ 3-4 ಸಮಾಂತರ ಶ್ರೇಣಿಗಳಾಗಿ ಕವಲೊಡೆದು ಮುಂದೆ ತುಂಗಭದ್ರಾ ನದಿಯ ಕಡೆಗೆ ಮತ್ತೆ ಒಂದೇ ಶ್ರೇಣಿಯಾಗಿ ಹಬ್ಬಿದೆ.
ನದಿಗಳು : ಧಾರವಾಡ ಜಿಲ್ಲೆ ತುಂಗಭದ್ರಾ ಮತ್ತು ಮಲಪ್ರಭಾ ನದಿಗಳ ಜಲಾನಯನ ಪ್ರದೇಶದಲ್ಲಿದೆ. ಮಲಪ್ರಭಾ ನದಿ ಜಿಲ್ಲೆಯ ಉತ್ತರ ಗಡಿಗುಂಟು. ಸುಮಾರು 32 ಕಿಮೀ ದೂರ ಹರಿಯುತ್ತದೆ. ಅದರ ಮುಖ್ಯ ಶಾಖೆಯಾದ ಬೆಣ್ಣಿಹಳ್ಳದ ಜಲಾಯನ ಪ್ರದೇಶ 5,000 ಚ,ಕಿಮೀ. ಇದು ಶಿಗ್ಗಾಂವಿ ತಾಲ್ಲೂಕಿನ ಧುಂಡಸಿ ಗ್ರಾಮದ ಹತ್ತಿರ ಹುಟ್ಟಿ ಹುಬ್ಬಳ್ಳಿ, ನವಲಗುಂದ ಮತ್ತು ರೋಣ ತಾಲ್ಲೂಕುಗಳಲ್ಲಿ ಉತ್ತರಕ್ಕೆ 192 ಕಿಮೀ ಹರಿದು ಮೆಣಸಿಗೆ ಹತ್ತಿರ ಮಲಪ್ರಭಾ ನದಿಯನ್ನು ಸೇರುತ್ತದೆ. ಗೂಗಿಹಳ್ಳ, ತುಪ್ಪರಿಹಳ್ಳ, ಹಂದಿಗನಹಳ್ಳ ಮೊದಲಾದವು ಬೆಣ್ಣಿಹಳ್ಳದ ಶಾಖೆಗಳು. ಹಿರೇಹಳ್ಳ, ಗದಗ ಮತ್ತು ರೋಣ ತಾಲ್ಲೂಕುಗಳಲ್ಲಿ ಹರಿದು ಬೆಲೇರಿಯ ಹತ್ತಿರ ಮಲಪ್ರಭಾ ನದಿಯನ್ನು ಸೇರುತ್ತದೆ. ಮಲಪ್ರಭಾ ನದಿಯ ಮೇಲೆ ಕೊಣ್ಣೂರ ಗ್ರಾಮದ ಹತ್ತಿರ ಹುಬ್ಬಳ್ಳಿ-ಸೊಲ್ಲಾಪುರ ರಸ್ತೆಗೆ ಸೇತುವೆಯನ್ನು ಕಟ್ಟಿದ್ದಾರೆ. ಅದೇ ನದಿಯ ಮೇಲೆ ಹೊಳೆ ಆಲೂರು ಹತ್ತಿರ ರೈಲು ಮಾರ್ಗ ಮತ್ತು ರಸ್ತೆಮಾರ್ಗಗಳ ಸೇತುವೆಗಳನ್ನು ಕಟ್ಟಲಾಗಿದೆ.
ಶಾಲ್ಮಲಾ ನದಿ ಧಾರವಾಡದ ಸಮೀಪದ ಸೋಮೇಶ್ವರದಲ್ಲಿ ಹುಟ್ಟಿ ಬೇಡತಿ ಹಳ್ಳವನ್ನು ಕೂಡುತ್ತದೆ. ಬೇಡತಿ ಹಳ್ಳಕ್ಕೆ ದುಮ್ಮವಾಡದ ಹತ್ತಿರ ಒಡ್ಡುಹಾಕಿ ದೊಡ್ಡ ಕೆರೆಯನ್ನು ಕಟ್ಟಿದ್ದಾರೆ. ಅದಕ್ಕೆ ನೀರಸಾಗರವೆಂದು ಹೆಸರು. ಈ ಕೆರೆಯಿಂದ ಕುಂದಗೋಳ ಮತ್ತು ಹುಬ್ಬಳ್ಳಿ-ಧಾರವಾಡ ನಗರಕ್ಕೆ ನೀರನ್ನು ಪೂರೈಸಲಾಗುತ್ತಿದೆ.
ವರದಾ ನದಿಯ ಉಪನದಿ ಧರ್ಮಾ. ಅದು ಕೂಡಲ ಗ್ರಾಮದ ಹತ್ತಿರ ವರದಾ ನದಿಯನ್ನು ಸೇರುತ್ತದೆ. ಈ ನದಿಗೆ ಒಡ್ಡು ಹಾಕಿ ಶೃಂಗೇರಿ, ಕಂಚಿನೆಗಳೂರ ಹತ್ತಿರ ಕಾಲುವೆಗಳನ್ನು ತೋಡಿದ್ದಾರೆ. ಕುಮದ್ವತಿ ನದಿ ಹಿರೇಕೆರೂರು ಮತ್ತು ರಾಣಿಬೆನ್ನೂರು ತಾಲ್ಲೂಕುಗಳಲ್ಲಿ ಸುಮಾರು 32 ಕಿಮೀ. ಪೂರ್ವಕ್ಕೆ ಹರಿದು ಹೊಳೆಅನವೇರಿ ಹತ್ತಿರ ತುಂಗಭದ್ರಾ ನದಿಯನ್ನು ಕೂಡುತ್ತದೆ. ಇದರ ಜಲಾಯನ ಪ್ರದೇಶ ಸುಮಾರು 512 ಚ.ಕಿಮೀ. ಈ ನದಿಗೆ ಮಾಸೂರಿನ ಹತ್ತಿರ ದೊಡ್ಡ ಕೆರೆ ಕಟ್ಟಲಾಗಿದೆ. ಇದು ಹಿರೇಕೆರೂರು ತಾಲ್ಲೂಕಿನ ದಕ್ಷಿಣ ಮೇರೆಯಲ್ಲಿದೆ. ಇದನ್ನು ಮಗದ-ಮಾಸೂರು ಸರೋವರವೆಂದು ಕರೆಯುತ್ತಾರೆ. ಹಿರೇಹಳ್ಳ ಮುಂಡಗರಿ ತಾಲ್ಲೂಕಿನಲ್ಲಿ ಹರಿದು ತುಂಗಭದ್ರಾ ನದಿಯನ್ನು ಕೂಡುತ್ತದೆ. ಶಿರಹಟ್ಟಿಹಳ್ಳ ಕಪ್ಪತಗುಡ್ಡದ ನೈಋತ್ಯ ಅಂಚಿನಲ್ಲಿ ಹರಿದು ತುಂಗಭದ್ರಾ ನದಿಯನ್ನು ಸೇರುತ್ತದೆ.
ಈ ಜಿಲ್ಲೆಯಲ್ಲಿ ಬೇಡತಿ ಹಳ್ಳ ಮಾತ್ರ ಅರಬ್ಬೀ ಸಮುದ್ರದ ಕಡೆಗೆ, ಪಶ್ಚಿಮಕ್ಕೆ, ಹರಿಯುತ್ತದೆ. ಉಳಿದ ಮುಖ್ಯ ಹೊಳೆಹಳ್ಳಗಳು ಪೂರ್ವಾಭಿಮುಖ. ಈ ಜಿಲ್ಲೆಯಲ್ಲಿರುವ ಸಾವಿರಾರು ಕೆರೆಗಳ ಪೈಕಿ ನೀರಸಾಗರ, ಉಣಕಲ್ಲ, ಮದಗ-ಮಾಸೂರು, ಹಿರೇಕೆರೂರು, ಹಾವೇರಿ, ಅಸುಂಡಿ, ಮೆಡ್ಲೇರಿ, ಡಂಬಳ, ಹತ್ತಿಮತ್ತೂರ, ಸವಣೂರು, ಮಾಗಡಿ ಮತ್ತು ಕೆಲಗೇರಿ ಕೆರೆಗಳು ಮುಖ್ಯವಾದವು.
ಭೂರಚನೆ : ಜಿಲ್ಲೆಯ ಈಶಾನ್ಯ ಭಾಗದಲ್ಲಿ ಕಲಾದಗಿ ಶಿಲಾಶ್ರೇಣಿಗೆ ಸೇರಿದ ಮರಳುಗಲ್ಲು ಹರಡಿದೆ. ಅದು ನರಗುಂದ ಮತ್ತು ನವಲಗುಂದ ಗುಡ್ಡಗಳ ನೆತ್ತಿಯ ಮೇಲೂ ಕಂಡುಬರುತ್ತವೆ. ಲ್ಯಾಟರೈಟ್ ಶಿಲೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹರಡಿದೆ. ಆದರೆ ಅದು ಜಿಲ್ಲೆಯ ಪಶ್ಚಿಮ ಭಾಗದಲ್ಲಿ ವಿಶೇಷ. ಧಾರವಾಡ ಶಿಲಾಶ್ರೇಣಿಗೆ ಸೇರಿದ ಶಿಲೆಗಳು ಮುಖ್ಯವಾಗಿ ಜಿಲ್ಲೆಯ ಮಧ್ಯ, ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲಿವೆ. ಡೋಣ ಗ್ರಾಮದ ಹತ್ತಿರ ವಿಸ್ತಾರವಾದ ಸುಣ್ಣಕಲ್ಲಿನ ಪ್ರದೇಶವಿದೆ. ಗ್ರಾನೈಟ್ ಮತ್ತು ನೈಸ್ ಶಿಲೆಗಳು ಸಾಮಾನ್ಯವಾಗಿ ಬಯಲು ಪ್ರದೇಶಗಳಲ್ಲಿ ಹರಡಿವೆ.
ಮಣ್ಣುಗಳು: ಧಾರವಾಡ ಜಿಲ್ಲೆಯ ಮಣ್ಣುಗಳು ಎಲ್ಲ ಪ್ರಕಾರದ ವಿಭಜಿತ ಶಿಲೆಗಳ ಮಿಶ್ರಣದಿಂದ ಆದ್ದು. ಅವು ಜಿಲ್ಲೆಯ ಎಲ್ಲ ಭಾಗಗಳಲ್ಲಿ ಹರಡಿವೆ. ಎರೆ, ಹುಳಕೆರೆ, ಕೆಂಪು ಮಸಾರಿ ಮಣ್ಣು, ಮಡಿಕಟ್ಟು ಮಣ್ಣು, ಮತ್ತು ರೇವೆ ಮಣ್ಣುಗಳು ಮುಖ್ಯವಾದವು. ಎರೆಮಣ್ಣು ನವಲಗುಂದ, ರೋಣ, ಗದಗ, ಹುಬ್ಬಳ್ಳಿಯ ಪೂರ್ವಭಾಗ, ಶಿರಹಟ್ಟೆಯ ಪಶ್ಚಿಮಭಾಗ, ಕುಂದ ಗೋಳದ ಪೂರ್ವಭಾಗದಲ್ಲಿದೆ, ಹುಳಕೆರೆ ಮಣ್ಣು ಮುಖ್ಯವಾಗಿ ಗಡಿನಾಡಿನಲ್ಲಿ ಧಾರವಾಡದ ಪೂರ್ವಭಾಗ, ಹುಬ್ಬಳ್ಳಿಯ ಪಶ್ಚಿಮಭಾಗ, ಕೆಂಪು ಮಣ್ಣು ಉತ್ತರಭಾಗದ ಹೊರತಾಗಿ ಜಿಲ್ಲೆಯ ಎಲ್ಲ ಭಾಗಗಳ ಗುಡ್ಡಗಳ ಇಳಿಜಾರು ಪ್ರದೇಶಗಳಲ್ಲಿದೆ ಅದರ ವಿಸ್ತೀರ್ಣ ಸುಮಾರು 1,36,000 ಹೆಕ್ಟೇರ್ (3,40,000 ಎಕರೆ). ಈ ಮಣ್ಣು ಮುಖ್ಯವಾಗಿ ಲ್ಯಾಟರೈಟ್ ಶಿಲೆಗಳಿಂದುಂಟಾದ್ದು ಇದು ಕಿರಿ ಆಳವಾಗಿದ್ದು ಬಹಳ ಕಡೆಗಳಲ್ಲಿ ಗರಸಿನಿಂದ ಕೂಡಿದೆ. ಗಡಿನಾಡಿನಲ್ಲಿ ಕೆಂಪು ಮತ್ತು ಕಪ್ಪುಕೂಡಿದ ಮಡಿಕಟ್ಟಿನ ಮಣ್ಣುಂಟು. ಇದು ಧಾರವಾಡ, ಕಲಘಟಗಿ, ಹಾನಗಲ್ಲ ತಾಲ್ಲೂಕುಗಳಲ್ಲಿವೆ.
ಕಾಡುಗಳು: ಧಾರವಾಡ ಜಿಲ್ಲೆಯಲ್ಲಿ ಮಾನ್ಸೂನ್ ಕಾಡು, ಮುಳ್ಳು ಕಾಡು ಮತ್ತು ಕುರುಚಲು ಕಾಡುಗಳು ಮುಖ್ಯವಾಗಿವೆ. ಮಾನ್ಸೂನ್ ಕಾಡುಗಳು ಮಲೆನಾಡಿಗೆ ಸೀಮಿತ. ಈ ಕಾಡುಗಳಲ್ಲಿ ಮುಖ್ಯವಾದ ಮರ ತೇಗ. ಇಲ್ಲಿ ಮರಗಳು ಸಾಮಾನ್ಯವಾಗಿ 9 ರಿಂದ 12 ಮೀ. ಎತ್ತರವಾಗಿ ಬೆಳೆಯುತ್ತವೆ. ಕಾಡುಗಳ ವಿತರಣೆಯಲ್ಲಿ ಪ್ರಾದೇಶಿಕ ವ್ಯತ್ಯಾಸ ಕಂಡುಬರುತ್ತದೆ. ಕಲಘಟಗಿ, ತಡಸ, ಇವುಗಳ ಸುತ್ತಲೂ ಅವು ಸಾಂದ್ರವಾಗಿವೆ. ಆದರೆ ಪೂರ್ವಕ್ಕೆ ಹೋದಂತೆ, ಅವು ಕಡಿಮೆ ಎತ್ತರದವುಗಳಾಗಿ ಹೆಚ್ಚು ಹೆಚ್ಚು ವಿರಳವಾಗುತ್ತವೆ. ನದಿಗಳ ದಂಡೆಗಳ ಉದ್ದಕ್ಕೂ ಬಿದಿರು ಮೆಳೆಗಳು ಕಂಡುಬರುತ್ತವೆ. ಮಾನ್ಸೂನ್ ಕಾಡುಗಳಲ್ಲಿ ಹುಲ್ಲು ಹೆಚ್ಚಾಗಿ ಬೆಳೆಯುವುದರಿಂದ ದನಕರುಗಳನ್ನು ವಿಶೇಷವಾಗಿ ಸಾಕುವರು. ಗಡಿನಾಡಿನಲ್ಲಿ ಮಾವು, ಹಲಸು, ಹುಣಸೆ, ಅರಳಿ, ಆಲ ಮತ್ತು ಸಿರಸಲ ಮರ ಹೆಚ್ಚಾಗಿ ಬೆಳೆಯುತ್ತವೆ. ಈ ಕಾಡುಗಳಲ್ಲಿ ಹುಲ್ಲೂ ಹುಲುಸು. ಬೆಳವಲನಾಡಿನಲ್ಲಿ ಅಲ್ಲಲ್ಲಿ ಮುಳ್ಳುಗಾಡುಗಳು ಮತ್ತು ಕುರುಚಲು ಕಾಡುಗಳಿವೆ. ಮುಳ್ಳುಗಾಡುಗಳಲ್ಲಿ ಜಾಲಿ ಮರ ಮುಖ್ಯವಾದ್ದು. ಕಪ್ಪತ ಗುಡ್ಡ, ಗಜೇಂದ್ರಗಡ ಗುಡ್ಡ ಮೊದಲಾದವುಗಳಲ್ಲಿ ಕುರುಚಲು ಕಾಡುಗಳುಂಟು. ಈ ಪ್ರದೇಶಗಳ ಶುಷ್ಕ ವಾಯುಗುಣ ಮತ್ತು ಕೆಳದರ್ಜೆಯ ಮಣ್ಣುಗಳಿಂದಾಗಿ ಮರ ಸಸ್ಯಗಳು ವಿರಳವಾಗಿ ಬೆಳೆಯುತ್ತವೆ. ರಸ್ತೆಗಳಗುಂಟ ಸಾಮಾನ್ಯವಾಗಿ ಬೇವಿನ ಮರಗಳುಂಟು. ಜವುಳು ಭೂಮಿಯಲ್ಲಿ ಈಚಲ ಮರಗಳು ಮತ್ತು ತೋಟಗಳಲ್ಲಿ ಬಾಳೆ ಪೇರಲ ಚಿಕ್ಕು (ಸಪೋಟ) ಮಾವು ಹಲಸು ಸೀತಾಫಲ ನಿಂಬೆ ತೆಂಗು ಅಡಿಕೆ ಮರಗಳು ಬೆಳೆಯುತ್ತವೆ.
ಪ್ರಾಣಿಗಳು : ಧಾರವಾಡ, ಕಲಘಟಗಿ, ಶಿಗ್ಗಾಂವಿ ಮತ್ತು ಹಾನಗಲ್ಲು ಕಾಡುಗಳಲ್ಲಿ ಹುಲಿಗಳು ಕಂಡುಬರುತ್ತವೆ. ಮಲೆನಾಡಿನ ಉಳಿದ ಕಾಡುಗಳಲ್ಲಿ ಚಿರತೆ, ಕರಡಿ, ಕಾಡುಹಂದಿ, ಕಾಡುಕೋಣ, ತೋಳ ಮತ್ತು ನರಿಗಳು ಬಹಳ. ಕಪ್ಪತಗುಡ್ಡ ಮತ್ತು ಕಡೂರಗುಡ್ಡಗಳಲ್ಲಿ ತೋಳ, ನರಿ, ಕಾಡುಬೆಕ್ಕು, ಮೊಲ ಚಿಗರೆ ವಿಶೇಷವಾಗಿವೆ. ಜಿಲ್ಲೆಯ ಎಲ್ಲ ಭಾಗಗಳಲ್ಲಿ ಸಾಮಾನ್ಯವಾಗಿ ಎತ್ತು ಎಮ್ಮೆ ಆಕಳುಗಳನ್ನೂ ಗುಡ್ಡಗಾಡು ಪ್ರದೇಶಗಳಲ್ಲಿ ಆಡು ಕುರಿಗಳನ್ನೂ ಸಾಕುತ್ತಾರೆ. ಜಿಲ್ಲೆಯಲ್ಲಿ ಅನೇಕ ಬಗೆಯ ಕಾಡುಹಕ್ಕಿಗಳಿವೆ. ನವಿಲು ಪಾರಿವಾಳ ಗೂಬೆ ಗಿಳಿ ಮಂಗಟ್ಟೆ ಹಕ್ಕಿ ಮರಕುಟಿಗ ಮುಖ್ಯವಾದವು. ಎಲ್ಲ ನದಿ ಕೆರೆಗಳಲ್ಲಿ ಸಾಮಾನ್ಯವಾಗಿ ಬಾತುಕೋಳಿ ಹಾಗೂ ಮೀನುಗಳುಂಟು.
ವಾಯುಗುಣ : ಧಾರವಾಡ ಜಿಲ್ಲೆಯ ವಾಯುಗುಣ ಒಟ್ಟಿನಲ್ಲಿ ತಕ್ಕಮಟ್ಟಿಗೆ ಹಿತಕರ. ಆರೋಗ್ಯಕರ. ಸಹ್ಯಾದ್ರಿಯ ಪೂರ್ವದ ಅಂಚಿನಲ್ಲಿ ಧಾರವಾಡ-ಹುಬ್ಬಳ್ಳಿ, ಕೋಡ -ಬಂಕಾಪುರಗಳ ನಡುವಣ ಪಟ್ಟೆಯಲ್ಲಿ ವಾಯುಗುಣ ಅತ್ಯಂತ ಹಿತಕರವಾಗಿರುತ್ತದೆ. ವರ್ಷದಲ್ಲಿ ಸ್ಥೂಲವಾಗಿ ನಾಲ್ಕು ಋತುಗಳನ್ನು ಕಾಣಬಹುದು. ಫೆಬ್ರುವರಿ ಕೊನೆಯಿಂದ ಮೇ ಕೊನೆಯ ವರೆಗೆ ಬಿಸಿಲುಕಾಲ, ಜೂನ್-ಸೆಪ್ಟೆಂಬರ್ ಮುಂಗಾರು ಮಳೆಗಾಲ. ಆಗ ಹವಾ ತಂಪಾಗಿರುತ್ತದೆ. ಅಕ್ಟೋಬರ್-ನವೆಂಬರ್‍ನಲ್ಲಿ ಮುಂಗಾರು ಹಿಂದೆ ಸರಿದಂತೆ ಈಶಾನ್ಯ ಮಾರುತಗಳಿಂದ ಮಳೆ ಬರುತ್ತದೆ. ಡಿಸೆಂಬರ್‍ನಿಂದ ಫೆಬ್ರುವರಿ ಮಧ್ಯದವರೆಗೆ ಚಳಿಗಾಲ. ಏಪ್ರಿಲ್ ಮೇ ತಿಂಗಳುಗಳಲ್ಲಿ ಗರಿಷ್ಠ ಉಷ್ಣತೆ ಇರುತ್ತದೆ. ಆಗ ಉಷ್ಣತೆ 420ಅ ವರೆಗೂ ಏರುವುದುಂಟು. ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಸರಾಸರಿ ಕನಿಷ್ಠ ಉಷ್ಣತೆ ಪೂರ್ವದಲ್ಲಿ 160ಅ ಪಶ್ಚಿಮದಲ್ಲಿ 130ಅ .
ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ 692 ಮಿಮೀ. ಪೂರ್ವದಲ್ಲಿ ಮುಂಡಗಿರಿ ಹತ್ತಿರ 458 ಮಿಮೀ.; ಪಶ್ಚಿಮದ ಕಡೆಗೆ ಕಲಘಟಗಿ ಮತ್ತು ಹಾನಗಲ್ಲುಗಳಾಚೆಗೆ 915 ಮಿಮೀ. ಗಿಂತ ಹೆಚ್ಚು. ಉತ್ತರದಲ್ಲಿ ನರಗುಂದದ ಹತ್ತಿರ 508-560 ಮಿಮೀ. ಮಳೆಯಾಗುತ್ತದೆ. ಪಶ್ಚಿಮ ಮೇರೆಯ ಹತ್ತಿರ ಕೆಲವು ಪ್ರದೇಶಗಳಲ್ಲಿ 965 ಮಿಮೀ. ಗಿಂತ ಹೆಚ್ಚು ಮಳೆಯಾಗುತ್ತದೆ. ಮೇ-ಅಕ್ಟೋಬರ್ ಮುಖ್ಯ ಮಳೆ ತಿಂಗಳುಗಳು. ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗುತ್ತದೆ. ಜಿಲ್ಲೆಯಲ್ಲಿ ಮುಂಗಾರು ಮಳೆ ಜೂನ್-ಸೆಪ್ಟೆಂಬರ್ ಮತ್ತು ಹಿಂಗಾರು ಮಳೆ ಅಕ್ಟೋಬರ್-ನವೆಂಬರ್‍ಗಳಲ್ಲಿ ಬೀಳುತ್ತದೆ. ಮುಂಗಾರಿನಲ್ಲಿ ಮಲೆನಾಡಿನಲ್ಲಿ ಹೆಚ್ಚು ಮಳೆ, ಗಡಿನಾಡಿನಲ್ಲಿ ಸಾಧಾರಣವಾಗಿ ಮಳೆ ಮತ್ತು ಬೆಳವಲ ನಾಡಿನಲ್ಲಿ ಕಡಿಮೆ ಮಳೆ. ಆದರೆ ಹಿಂಗಾರಿನಿಂದ ಬೆಳವಲ ನಾಡಿನಲ್ಲಿ ಪಶ್ಚಿಮಕ್ಕಿಂತ ಸ್ವಲ್ಪ ಹೆಚ್ಚು ಮಳೆ ಬೀಳುತ್ತದೆ. ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ವರ್ಷದ ಅರ್ಧಕ್ಕಿಂತ ಹೆಚ್ಚು ಮಳೆಯಾಗುತ್ತದೆ. ಡಿಸೆಂಬರ್-ಏಪ್ರಿಲ್‍ನಲ್ಲಿ ವರ್ಷದ ಅರ್ಧಕ್ಕಿಂತ ಹೆಚ್ಚು ಮಳೆಯಾಗುತ್ತದೆ. ಡಿಸೆಂಬರ್-ಏಪ್ರಿಲ್‍ನಲ್ಲಿ ಅತ್ಯಂತ ಕಡಿಮೆ ಮಳೆಯಾಗುತ್ತದೆ. ವರ್ಷದಲ್ಲಿ ಫೆಬ್ರುವರಿ ಅತ್ಯಂತ ಶುಷ್ಕ ಮಾಸ. ಜಿಲ್ಲೆಯ ಪಶ್ಚಿಮಭಾಗದಲ್ಲಿ ಜುಲೈ ಮತ್ತು ಪೂರ್ವಭಾಗದಲ್ಲಿ ಸೆಪ್ಟೆಂಬರ್ ಅತ್ಯಧಿಕ ಮಳೆ ತಿಂಗಳುಗಳು. ಜನ, ಭಾಷೆ : ಈ ಜಿಲ್ಲೆಯ ಜನಸಂಖ್ಯೆ ರಾಜ್ಯದ ಒಟ್ಟು ಜನಸಂಖ್ಯೆಯ ಸೇಕಡ 7.99ರಷ್ಟಿದೆ. ಜನಸಂಖ್ಯೆಯ ದೃಷ್ಟಿಯಿಂದ ಇದು 3ನೆಯ ಜಿಲ್ಲೆ. ಜಿಲ್ಲೆಯ ಸರಾಸರಿ ಜನಸಾಂದ್ರತೆ ಚ.ಕಿಮೀ.ಗೆ 180. ರಾಜ್ಯದ ಜನಸಾಂದ್ರತೆ, ಚ.ಕಿಮೀ.ಗೆ 153. ಜಿಲ್ಲೆಯಲ್ಲಿ ಪ್ರತಿ ಸಾವಿರ ಗಂಡಸರಿಗೆ 946 ಹೆಂಗಸರಿದ್ದಾರೆ. ಸಾಕ್ಷರರು ಸೇಕಡ 38.51. ಒಟ್ಟು ಜನಸಂಖ್ಯೆಯಲ್ಲಿ ಪಟ್ಟಣಿಗರು 31.51% ಕೆಲಸಗಾರರು 35.50%. ಜಿಲ್ಲೆಯಲ್ಲಿ ಹಿಂದುಗಳು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಮುಸಲ್ಮಾನರು, ಕ್ರೈಸ್ತರು, ಜೈನರು, ಅನುಸೂಚಿತ ವರ್ಗಗಳವರು-ಇವರು ಇತರರು. ಹರಿಜನರು, ತಳವಾರರು, ಮೇದಾರರು, ಬೆಸ್ತರು ಮೊದಲಾದವರು ಅನುಸೂಚಿತ ಜಾತಿಯವರು; ಬೇಡರು, ಲಂಬಾಣಿ, ಗೊಲ್ಲರು, ಚಿಕ್ಕಲಿಗರು ಮೊದಲಾದವರು ಅನುಸೂಚಿತ ಪಂಗಡಗಳವರು. ಕ್ರೈಸ್ತರು ಮುಖ್ಯವಾಗಿ ಧಾರವಾಡ-ಹುಬ್ಬಳ್ಳಿ ಮತ್ತು ಗದಗ-ಬೆಟಗೇರಿ ನಗರಗಳಲ್ಲಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಕನ್ನಡ ಮುಖ್ಯ ಭಾಷೆ. ಸೇ. 80ಕ್ಕಿಂತ ಹೆಚ್ಚು ಜನರ ಮಾತೃಭಾಷೆ ಕನ್ನಡ. ಉರ್ದು ಮರಾಠಿ ಕೊಂಕಣಿ ಹಿಂದಿ ತುಳು ಮಲಯಾಳಂ ತೆಲುಗು ತಮಿಳು ಇತರ ಮುಖ್ಯಭಾಷೆಗಳು.
ಕೃಷಿ : ಜಿಲ್ಲೆಯ ಸೇ. 70 ಜನರ ಕಸುಬು ಬೇಸಾಯ, ಸೇ. 80ರಷ್ಟು ಸಾಗುವಳಿ ಭೂಮಿ ಇದೆ. ಧಾರವಾಡ ಜಿಲ್ಲೆಯಲ್ಲಿ 2,414 ನೀರಾವರಿ ಕೆರೆಗಳು ಮತ್ತು 9,793 ನೀರಾವರಿ ಬಾವಿಗಳು ಇವೆ. ಕೆರೆ ನೀರಾವರಿ ರಾಣಿಬೆನ್ನೂರು, ಮುಂಡರಗಿ ಮತ್ತು ಹಿರೇಕೆರೂರ ತಾಲ್ಲೂಕುಗಳಲ್ಲಿ ಮುಖ್ಯ. ನದಿ ಮತ್ತು ಬಾವಿಗಳಿಗೆ ಸುಮಾರು 5,171 ಪಂಪ್‍ಸೆಟ್ಟುಗಳನ್ನು ಕೂಡಿಸಲಾಗಿದೆ. ವಿಶೇಷವಾಗಿ ಮಲೆನಾಡಿನಲ್ಲಿ ಕೆರೆಗಳಿಂದ ಮತ್ತು ಗಡಿನಾಡಿನಲ್ಲಿ ಬಾವಿಗಳಿಂದ ನೀರಾವರಿ ಸೌಲಭ್ಯ ಒದಗಿದೆ. ಮಲಪ್ರಭಾ ನದಿಯಿಂದ ನರಗುಂದ, ನವಲಗುಂದ, ರೋಣ ತಾಲ್ಲೂಕುಗಳಲ್ಲಿ ಮತ್ತು ಧರ್ಮಾ ನದಿಯಿಂದ ಹಾನಗಲ್ ತಾಲ್ಲೂಕಿನಲ್ಲಿ ನೀರಾವರಿ ಏರ್ಪಟ್ಟಿದೆ. ಒಟ್ಟು ಸಾಗುವಳಿ ನೆಲದ ಸೇ. 6 ರಷ್ಟಕ್ಕೆ ನೀರಾವರಿ ಸೌಲಭ್ಯವುಂಟು.
ಜೋಳ, ಅಕ್ಕಿ ಮತ್ತು ಗೋದಿ ಮುಖ್ಯ ಆಹಾರ ಬೆಳೆಗಳು, ಹತ್ತಿ, ಸೇಂಗಾ, ಮೆಣಸಿನಕಾಯಿ, ಕಬ್ಬು ಮತ್ತು ಕುಸುಬೆ ಮುಖ್ಯ ಆಹಾರೇತರ ಬೆಳೆಗಳು. ಬತ್ತ ಮಲೆನಾಡಿನ ಮುಖ್ಯ ಬೆಳೆ. ಗಡಿನಾಡಿನ ಪಶ್ವಿಮ ಭಾಗದಲ್ಲೂ ಬತ್ತ ಬೆಳೆಯುತ್ತದೆ. ಧಾರವಾಡ, ಕಲಘಟಗಿ, ಹಾನಗಲ್ಲ, ಶಿಗ್ಗಾಂವಿ ಮತ್ತು ಹಿರೇಕೆರೂರ ತಾಲ್ಲೂಕುಗಳು ಬತ್ತದ ಬೆಳೆಗೆ ಹೆಸರಾಗಿವೆ. ಜೋಳ ಈ ಜಿಲ್ಲೆಯಲ್ಲಿ ಅತ್ಯಂತ ವ್ಯಾಪಕವಾಗಿ ಬೆಳೆಯುತ್ತದೆ. ಇದನ್ನು ಮುಖ್ಯವಾಗಿ ಆಹಾರ ಮತ್ತು ದನಗಳ ಮೇವಿಗಾಗಿ ಬೆಳೆಯಲಾಗುತ್ತದೆ. ಇದನ್ನು ಮುಖ್ಯವಾಗಿ ಆಹಾರ ಮತ್ತು ದನಗಳ ಮೇವಿಗಾಗಿ ಬೆಳೆಯಲಾಗುತ್ತದೆ. ಇದು ವಿಶೇಷವಾಗಿ ಗದಗ, ರೋಣ, ಹಾವೇರಿ, ನವಲಗುಂದ, ನರಗುಂದ, ಹುಬ್ಬಳ್ಳಿ, ಕುಂದಗೋಳ, ಧಾರವಾಡ ಮತ್ತು ಶಿಗ್ಗಾಂವಿ ತಾಲ್ಲೂಕುಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇದರಲ್ಲಿ ಮುಂಗಾರಿ ಮತ್ತು ಹಿಂಗಾರಿ ಜೋಳಗಳೆಂದು ಎರಡು ಪ್ರಕಾರಗಳುಂಟು. ಮುಂಗಾರಿ ಜೋಳ ಗಡಿನಾಡಿನಲ್ಲಿ ಮತ್ತು ಹಿಂಗಾರಿ ಜೋಳ ಬೆಳವಲನಾಡಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಬೆಳವಲನಾಡು ಗೋದಿಯ ಬೆಳೆಗೆ ಪ್ರಸಿದ್ಧವಾದ್ದು. ನವಲಗುಂದ, ರೋಣ, ಗದಗ, ನರಗುಂದ, ಹುಬ್ಬಳ್ಳಿ, ಕುಂದಗೋಳ ಮತ್ತು ಧಾರವಾಡ ತಾಲ್ಲೂಕುಗಳಲ್ಲಿ ಗೋದಿ ಹೆಚ್ಚಾಗಿ ಬೆಳೆಯುತ್ತದೆ. ಗದಗ ತಾಲ್ಲೂಕು ಗೋದಿಯ ಕಣಜವೆಂದು ಹೆಸರಾಗಿದೆ. ಈ ಎಲ್ಲ ತಾಲ್ಲೂಕುಗಳಲ್ಲಿ ಗೋದಿಯ ಜೊತೆಗೆ ಕುಸುಬೆಯನ್ನು ಬೆಳೆಯಲಾಗುತ್ತದೆ. ನವಣೆ ಹಾವೇರಿ, ರಾಣಿಬೆನ್ನೂರು ಮತ್ತು ಶಿರಹಟ್ಟಿ ತಾಲ್ಲೂಕುಗಳಲ್ಲಿ; ರಾಗಿ ಹಿರೇಕೆರೂರು, ಹಾನಗಲ್ಲ ಮತ್ತು ಶಿಗ್ಗಾಂವಿ ತಾಲ್ಲೂಕುಗಳಲ್ಲಿ; ಸಜ್ಜೆ ರೋಣ, ಮುಂಡರಗಿ ಮತ್ತು ಗದಗ ತಾಲ್ಲೂಕುಗಳಲ್ಲಿ ಹಾಗೂ ಸಾವೆ ಹಾವೇರಿ, ಶಿಗ್ಗಾಂವಿ, ಹಾನಗಲ್ಲ, ಧಾರವಾಡ ಮತ್ತು ಹುಬ್ಬಳ್ಳಿ ತಾಲ್ಲೂಕುಗಳಲ್ಲಿ ಚೆನ್ನಾಗಿ ಬೆಳೆಯುತ್ತವೆ. ಹೆಸರು, ಹುರುಳಿ, ಕಡಲೆ, ತೊಗರಿ ಮೊದಲಾದ ಬೇಳೆಯ ಕಾಳುಗಳು ಜಿಲ್ಲೆಯ ಎಲ್ಲ ಭಾಗಗಳಲ್ಲೂ ಬೆಳೆಯುತ್ತವೆ. ಹುಬ್ಬಳ್ಳಿ-ಧಾರವಾಡ ಬೇಳೆಯ ಕಾಳುಗಳ ವ್ಯಾಪಾರಕ್ಕೆ ಪ್ರಸಿದ್ಧ.
ಎಣ್ಣೆಯ ಕಾಳುಗಳು ಮುಖ್ಯವಾಗಿ ನವಲಗುಂದ, ಗದಗ, ರೋಣ, ಶಿರಹಟ್ಟಿ, ಹಾವೇರಿ, ರಾಣಿಬೆನ್ನೂರು ಮತ್ತು ಮುಂಡರಗಿ ತಾಲ್ಲೂಕುಗಳಲ್ಲಿ ಚೆನ್ನಾಗಿ ಬೆಳೆಯುತ್ತವೆ. ಶಿರಹಟ್ಟಿ, ರಾಣಿಬೆನ್ನೂರು, ಮುಂಡರಗಿ, ರೋಣ ಮತ್ತು ಹಾವೇರಿ ತಾಲ್ಲೂಕುಗಳಲ್ಲಿ ಸೇಂಗಾ ಹೆಚ್ಚಾಗಿ ಬೆಳೆಯುವುದು ಕುಸುಬೆ, ಎಳ್ಳು, ಔಡಲ-ಇವು ವಿಶೇಷವಾಗಿ ಬೆಳವಲ ನಾಡಿನಲ್ಲಿ ಬೆಳೆಯುತ್ತವೆ.
ಕಬ್ಬು ಗಡಿನಾಡಿನ ಮುಖ್ಯ ಬೆಳೆ. ಇದು ಮಲೆನಾಡಿನ ಪೂರ್ವಭಾಗದಲ್ಲೂ ಬೆಳೆಯುವುದು. ಹಿರೇಕೆರೂರು, ಹಾನಗಲ್ಲ, ಕಲಘಟಗಿ, ಸವಣೂರು, ಶಿಗ್ಗಾಂವಿ, ಬ್ಯಾಡಗಿ, ಧಾರವಾಡ ಮತ್ತು ಹಾವೇರಿ ತಾಲ್ಲೂಕುಗಳಲ್ಲಿ ಕಬ್ಬು ಹೆಚ್ಚಾಗಿ ಬೆಳೆಯುತ್ತದೆ. ಬ್ಯಾಡಗಿ, ಹಾವೇರಿ, ರಾಣಿಬೆನ್ನೂರು ಮತ್ತು ಹಿರೇಕೆರೂರು ತಾಲ್ಲೂಕುಗಳು ಮೆಣಸಿನಕಾಯಿ ಬೆಳೆಗೆ ಪ್ರಸಿದ್ಧ. ತಂಬಾಕನ್ನು ಗಡಿನಾಡಿನಲ್ಲಿ ವಿಶೇಷವಾಗಿ ಬೆಳೆಯುವರು, ಶಿರಹಟ್ಟಿ, ರಾಣಿಬೆನ್ನೂರು, ಕುಂದಗೋಳ ಮತ್ತು ಹಾನಗಲ್ ತಾಲ್ಲೂಕುಗಳು ತಂಬಾಕು ಬೆಳೆಯ ಮುಖ್ಯ ಕೇಂದ್ರಗಳು.
ಧಾರವಾಡ ಜಿಲ್ಲೆ ಕರ್ನಾಟಕ ರಾಜ್ಯದಲ್ಲಿ ಹತ್ತಿಯ ಬೆಳೆಗಾಗಿ ಮೊದಲಿನಿಂದಲೂ ಪ್ರಸಿದ್ಧವಾದ್ದು. ಹತ್ತಿ ಗಡಿನಾಡಿನ ಪೂರ್ವಭಾಗದಲ್ಲಿ ಮತ್ತು ಬೆಳವಲನಾಡಿನಲ್ಲಿ ಚೆನ್ನಾಗಿ ಬೆಳೆಯುವುದು. ನವಲಗುಂದ, ಗದಗ, ರೋಣ ಮತ್ತು ಕುಂದಗೋಳ ತಾಲ್ಲೂಕುಗಳು ಹತ್ತಿಯ ಬೆಳೆಯ ಕೇಂದ್ರಗಳು. ಹತ್ತಿ ಶಿರಹಟ್ಟಿ, ಹಾವೇರಿ, ಹುಬ್ಬಳ್ಳಿ, ನರಗುಂದ, ಮುಂಡರಗಿ ಮತ್ತು ರಾಣಿಬೆನ್ನೂರು ತಾಲ್ಲೂಕುಗಳಲ್ಲೂ ಬೆಳೆಯುತ್ತದೆ.
ಗಡಿನಾಡು ತೋಟಪಟ್ಟಿ ಬೆಳೆಗಳಿಗೆ ಪ್ರಸಿದ್ಧವಾದ್ದು. ಸವಣೂರ, ಹಾವೇರಿ, ರಾಣಿಬೆನ್ನೂರು ಮತ್ತು ಶಿಗ್ಗಾಂವಿ ತಾಲ್ಲೂಕುಗಳು ಈ ಬೆಳೆಗಳ ಕೇಂದ್ರ ಸ್ಥಳಗಳು. ಗೋವನಕೊಪ್ಪ, ಉಣಕಲ್ಲು, ದೇವಿಹೊಸೂರು ಮತ್ತು ಮೋಟೆಬೆನ್ನೂರುಗಳಲ್ಲಿ ದ್ರಾಕ್ಷಿ ಚೆನ್ನಾಗಿ ಬೆಳೆಯುತ್ತದೆ. ಧಾರವಾಡದ ದ್ರಾಕ್ಷಿ, ನವಿಲೂರಿನ ಪೇರಲ, ವಾಸನದ ಬೋರೆಹಣ್ಣು, ಮಲೆನಾಡಿನ ಗೋಡಂಬಿ ಮತ್ತು ಮಾವಿನಹಣ್ಣುಗಳು ಪ್ರಸಿದ್ಧ. ಬಾಳೆ ಹಾನಗಲ್ಲ ಮತ್ತು ಬಂಕಾಪೂರ; ಗೇರುಬೀಜ ಹುಬ್ಬಳ್ಳಿ; ನಿಂಬೆ ಹಾವೇರಿ; ಮಾವು ಧಾರವಾಡ, ಹಾನಗಲ್ಲ ಮತ್ತು ಮುಂಡರಗಿ; ಪೇರಲ ಧಾರವಾಡ, ಹುಬ್ಬಳ್ಳಿ; ದ್ರಾಕ್ಷಿ ಹುಬ್ಬಳ್ಳಿ, ಧಾರವಾಡ ತಾಲ್ಲೂಕುಗಳಲ್ಲಿ ಹೆಚ್ಚು ಬೆಳೆಯುತ್ತವೆ. ಬದನೆಕಾಯಿ, ಬೆಂಡೆ, ಚಪ್ಪರಬದನೆ ಮೊದಲಾದ ತರಕಾರಿಗಳು ಜಿಲ್ಲೆಯ ಎಲ್ಲ ಭಾಗಗಳಲ್ಲಿ ಬೆಳೆಯುತ್ತವೆ. ಬಟಾಟೆ ಧಾರವಾಡ, ಹುಬ್ಬಳ್ಳಿ; ಗೆಣಸು ರಾಣಿಬೆನ್ನೂರು, ರೋಣ ಮತ್ತು ಶಿರಹಟ್ಟಿ; ಗಜ್ಜರಿ ಧಾರವಾಡ, ರಾಣಿಬೆನ್ನೂರು, ಶಿರಹಟ್ಟಿ ಮತ್ತು ರೋಣ; ಮೂಲಂಗಿ ಹುಬ್ಬಳ್ಳಿ; ಆಲೂಗಡ್ಡೆ ಧಾರವಾಡ, ಹುಬ್ಬಳ್ಳಿ ತಾಲ್ಲೂಕುಗಳಲ್ಲಿ ಹೆಚ್ಚಾಗಿ ಬೆಳೆಯುತ್ತವೆ. ಕೈಗಾರಿಕೆ : ಧಾರವಾಡ ಜಿಲ್ಲೆ ಹತ್ತಿಯ ಕೈಗಾರಿಕೆಗೆ ಪ್ರಸಿದ್ಧವಾಗಿದೆ. ಹುಬ್ಬಳ್ಳಿ, ಗದಗ, ನರಗುಂದ ಇವು ಈ ಕೈಗಾರಿಕೆಯ ಕೇಂದ್ರ ಸ್ಥಳಗಳು. ಹುಬ್ಬಳ್ಳಿ ಗದಗಗಳಲ್ಲಿ ಬಟ್ಟೆಯ ಗಿರಣಿಗಳೂ ನರಗುಂದ ಹುಲಕೋಟೆಗಳಲ್ಲಿ ನೂಲಿನ ಗಿರಣಿಗಳೂ ಇವೆ. ಈ ಎಲ್ಲ ಸ್ಥಳಗಳಲ್ಲಿ ಹತ್ತಿ ಹಿಂಜುವ ಕಾರ್ಖಾನೆಗಳು ಮತ್ತು ಅರಳೆಯ ಚಪ್ಪಟೆಮಾಡುವ ಉದ್ಯಮಗಳು ಇವೆ. ಧಾರವಾಡ ಜಿಲ್ಲೆ ಕೈಮಗ್ಗದ ಕೈಗಾರಿಕೆಗೆ ಪ್ರಸಿದ್ಧ. ಉಪ್ಪಿನಬೆಟಗೇರಿ, ಹೊಸರಿತ್ತಿ, ಹೆಬಸೂರು, ಮೊದಲಾದ ಸ್ಥಳಗಳಲ್ಲಿ ಖಾದಿಬಟ್ಟೆ ತಯಾರಾಗುತ್ತದೆ. ಗದಗ-ಬೆಟಗೇರಿ, ಗಜೇಂದ್ರಗಡ, ತುಮ್ಮಿನಕಟ್ಟಿ, ಹಲಗೇರಿ, ಶಿರೋಳ, ಇವು-ಸೀರೆ, ಕುಪ್ಪುಸ, ಧೋತರ, ಹಚ್ಚಡ ಮೊದಲಾದ ಕೈಮಗ್ಗ ಬಟ್ಟೆಗಳಿಗೆ ಪ್ರಸಿದ್ಧವಾದವು. ಖಣಗಳಿಗೆ ಗಜೇಂದ್ರಗಡ, ಶಿರೋಳ; ಧೋತರಗಳಿಗೆ ತುಮ್ಮಿನಕಟ್ಟಿ, ಹಲಗೇರಿ; ಗುಡಾರಗಳಿಗೆ ಧಾರವಾಡ, ಹೆಬಸೂರು, ನವಲಗುಂದ, -ಇವು ಹೆಸರಾಗಿವೆ.
ಕಂಬಳಿ ನೇಯುವುದಕ್ಕಾಗಿ ಮಡ್ಲೇರಿ, ಐರಣಿ, ಲಕ್ಕುಂಡಿ, ಡಂಬಳ, ಗುತ್ತಲ, ಕೊಣ್ಣೂರು, ಕೊಟಬಾಗಿ, ಮೋಟೆಬೆನ್ನೂರು, ನೆಗಳೂರು ಮತ್ತು ಹೆಸರಾಗಿವೆ. ಜಮಖಾನೆಗಳು ನವಲಗುಂದದಲ್ಲಿ ಮತ್ತು ಗುಡಾರ, ಚವ್ವಾಳಿಗಳು ಹೆಬಸೂರು, ಕಿರೇಸೂರುಗಳಲ್ಲಿ ತಯಾರಾಗುತ್ತವೆ.
ಅಣ್ಣಿಗೇರಿ, ಹುಬ್ಬಳ್ಳಿ, ಲಕ್ಷ್ಮೇಶ್ವರ, ಬ್ಯಾಹಟ್ಟಿ, ಮತ್ತು ಗಜೇಂದ್ರಗಡಗಳು ಗಾಣದ ಎಣ್ಣೆಯ ಮುಖ್ಯ ಕೇಂದ್ರಗಳು. ಧಾರವಾಡ, ಬ್ಯಾಹಟ್ಟಿ, ಅರಳಿಕಟ್ಟಿ ಮತ್ತು ಬೆಂಗೇರಿಗಳಲ್ಲಿ ಗ್ರಾಮೋದ್ಯೋಗ ಮಂಡಳದಿಂದ ನಡೆಯುವ ಎಣ್ಣೆಯ ಗಾಣಗಳಿವೆ.
ಧಾರವಾಡ, ಕಲಘಟಗಿ, ಆಳ್ನಾವರ, ತಡಸ, ಅಕ್ಕಿಆಲೂರು, ಮತ್ತು ಹಾನಗಲ್ಲುಗಳಲ್ಲಿ ಬತ್ತದ ಗಿರಣಿಗಳಿವೆ. ಮಲೆನಾಡಿನ ದೊಡ್ಡ ಗ್ರಾಮಗಳಲ್ಲಿ ಕುಟ್ಟಿದ ಅಕ್ಕಿ ತಯಾರಿಕೆ ನಡೆಯುತ್ತದೆ. ಅಲ್ಲಿ ಅವಲಕ್ಕಿ, ಚುರಮುರಿ ಭಟ್ಟಿಗಳು ವಿಶೇಷವಾಗಿವೆ. ಮಿಶ್ರಿಕೋಟಿ ಸಂಗಮೇಶ್ವರಗಳ ಅವಲಕ್ಕಿ ಪ್ರಸಿದ್ಧ. ಲಕ್ಷ್ಮೇಶ್ವರ, ಕೂಡಲ-ಇವು ಚುರಮುರಿಗೆ ಹೆಸರಾಗಿವೆ.
ಮರಗೆಲಸಕ್ಕೆ ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಪ್ರಸಿದ್ಧ. ಬಿದಿರಿನಿಂದ ಬುಟ್ಟಿ, ಮೊರ, ಚಾಪೆ, ಬೀಸಣಿಗೆ ಮೊದಲಾದವನ್ನು ತಯಾರಿಸುವ ಉದ್ಯೋಗಕ್ಕೆ ಹುಬ್ಬಳ್ಳಿ, ಧಾರವಾಡ, ಕಲಘಟಗಿ, ಆಳ್ನಾವರ ಹೆಸರಾಗಿವೆ. ಆಳ್ನಾವರ ಬಿದಿರನ್ನು ರಫ್ತು ಮಾಡುವ ಮುಖ್ಯ ಸ್ಥಳ. ಹುಬ್ಬಳ್ಳಿ, ಗದಗ ಮತ್ತು ಕಲಘಟಗಿಗಳಲ್ಲಿ ಕಟ್ಟಿಗೆಯ ಆಟಿಕೆಯ ಸಾಮಾನುಗಳು, ತೊಟ್ಟಿಲು, ಮಂಚ ಮೊದಲಾದವನ್ನು ತಯಾರಿಸುತ್ತಾರೆ. ಧಾರವಾಡದಲ್ಲಿ ಪ್ಲೈವುಡ್ ಕಾರ್ಖಾನೆ ಇದೆ. ಹುಬ್ಬಳ್ಳಿ, ಧಾರವಾಡ, ಅಳ್ನಾವರ ಮತ್ತು ಕಲಘಟಗಿಯಲ್ಲಿ ಮರಕೊಯ್ಯುವ ಕಾರ್ಖಾನೆಗಳಿವೆ.
ಸಾಮಾನ್ಯ ಯಂತ್ರೋಪಕರಣ ತಯಾರಿಸುವ ಮತ್ತು ದುರಸ್ತಿ ಮಾಡುವ ಘಟಕಗಳು ವಿಶೇಷವಾಗಿ ಹುಬ್ಬಳ್ಳಿ, ಧಾರವಾಡ, ಮೊದಲಾದ ಸ್ಥಳಗಳಲ್ಲಿ ಕೇಂದ್ರೀಕೃತವಾಗಿವೆ. ಹುಬ್ಬಳ್ಳಿಯಲ್ಲಿ ಕಾಲುಚೀಲವೇ ಮುಂತಾದವನ್ನು ತಯಾರಿಸುವ ಕಾರ್ಖಾನೆ ಇದೆ. ಧಾರವಾಡ-ಹುಬ್ಬಳ್ಳಿ, ಗದಗ-ಇವು ಮುದ್ರಣಾಲಯ ಕೇಂದ್ರಗಳು. ಹುಬ್ಬಳ್ಳಿಯ ರೈಲ್ವೆವರ್ಕ್‍ಷಾಪ್ ಪ್ರಸಿದ್ಧವಾದ್ದು. ಧಾರವಾಡ-ಹುಬ್ಬಳ್ಳಿ, ಕರ್ನಾಟಕ ರಾಜ್ಯದಲ್ಲಿ ತಾಮ್ರ ಮತ್ತು ಹಿತ್ತಾಳೆ ಪಾತ್ರೆಗಳನ್ನು ತಯಾರಿಸುವ ಒಂದು ಮುಖ್ಯ ಕೇಂದ್ರ ಹುಬ್ಬಳ್ಳಿ, ಇಂಥ ಇನ್ನೊಂದು ಮಹತ್ತ್ವದ ಕೇಂದ್ರ. ಹುಬ್ಬಳ್ಳಿ-ಧಾರವಾಡ, ಧಾರವಾಡ, ಹುಬ್ಬಳ್ಳಿ, ಬ್ಯಾಡಗಿ, ಮೊದಲಾದ ಸ್ಥಳಗಳಲ್ಲಿ ಗಂಧದಕಡ್ಡಿ ತಯಾರಿಸುತ್ತಾರೆ. ಹುಬ್ಬಳ್ಳಿ-ಧಾರವಾಡ, ಲಕ್ಷ್ಮೇಶ್ವರ, ಶಿಗ್ಲಿ, ಕಲಘಟಗಿ, ಬೆಳಗಾಲಪೇಟ, ಮುಗದಗಳಲ್ಲಿ ಮಣ್ಣಿನ ಪಾತ್ರೆಗಳು ತಯಾರಾಗುತ್ತವೆ. ಡಂಬಳ, ಧಾರವಾಡ, ಗರಗ, ಹುಬ್ಬಳ್ಳಿ, ಕೊಣ್ಣೂರು, ಲಕ್ಕುಂಡಿ, ಮೆಡ್ಲೇರಿ, ನೆಗಳೂರು, ಗುತ್ತಲ-ಇವು ಚರ್ಮ ಹದ ಮಾಡುವ ಕೇಂದ್ರಗಳು. ಹಾನಗಲ್ಲ, ಹುಬ್ಬಳ್ಳಿ, ಕಲಘಟಗಿ, ಮುಂಡರಗಿ, ನವಲಗುಂದ, ಇವು ಚರ್ಮದ ಉದ್ಯೋಗದ ಮಹತ್ತ್ವದ ಕೇಂದ್ರಗಳು. ಹುಬ್ಬಳ್ಳಿ-ಧಾರವಾಡಗಳಲ್ಲಿ ತಿಜೋರಿ, ಕಪಾಟು, ಕುರ್ಚಿ ಮೊದಲಾದ ಸಾಮಾನುಗಳನ್ನು ತಯಾರಿಸುವ ಕಾರ್ಖಾನೆಗಳಿವೆ. ಹುಬ್ಬಳ್ಳಿಯಲ್ಲಿ ಸುಂದತ್ತಾ ಆಹಾರ ಮತ್ತು ನೂಲಿನ ವಸ್ತುಗಳ ಕಾರ್ಖಾನೆ, ಕಿರ್ಲೋಸ್ಕರ್ ವಿದ್ಯುತ್ ಕಾರ್ಖಾನೆ, ಮೈಸೂರ್ ಕಿರ್ಲೋಸ್ಕರ್. ಎ.ಕೆ.ಇಂಡಸ್ಟ್ರೀಸ್, ಸಿಮೆಂಟ್ ಕೊಳವೆ ಕಾರ್ಖಾನೆ; ಧಾರವಾಡದಲ್ಲಿ ಟೈವಾಕ್ ಗಡಿಯಾರದ ಕಾರ್ಖಾನೆ, ರಟ್ಟು ತಯಾರಿಸುವ ಹಾಗೂ ಕ್ಯಾಲಿಕಾರ್ಬ್ ಕಾರ್ಖಾನೆಗಳಿವೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು ಸುಮಾರು 800 ಸಣ್ಣ ಕೈಗಾರಿಕಾ ಘಟಕಗಳಿವೆ.
ವಾಣಿಜ್ಯ : ಈ ಜಿಲ್ಲೆಯಲ್ಲಿ ಬೇಸಾಯದ ಅನಂತರ ಜನರ ಮುಖ್ಯ ಜೀವನೋಪಾಯ ವ್ಯಾಪಾರ. ಬಹಳ ಜನರು ಚಿಲ್ಲರೆ ಮತ್ತು ಸಗಟು ವ್ಯಾಪಾರಗಳಲ್ಲಿ ತೊಡಗಿರುತ್ತಾರೆ. ಧಾರವಾಡ ಹುಬ್ಬಳ್ಳಿ ಪ್ರಮುಖ ವಾಣಿಜ್ಯ ಕೇಂದ್ರ.
ಕಟ್ಟಡದ ಸಾಮಾನು, ಲೋಹ, ಔಷಧ, ಶೃಂಗಾರ ಸಾಮಗ್ರಿ, ಆಹಾರ ಸಾಮಗ್ರಿ, ಸಕ್ಕರೆ, ಅಡಿಕೆ, ಯಾಲಕ್ಕಿ, ಮಸಾಲೆ ಸಾಮಾನು, ಚಿಮಣಿ ಎಣ್ಣೆ, ಕೊಬ್ಬರಿ ಎಣ್ಣೆ, ಉಪ್ಪು, ತಂಬಾಕು, ಸಿದ್ಧ ಉಡುಪು, ಸೀರೆ, ಧೋತರ, ರೇಷ್ಮೆ ಬಟ್ಟೆ, ಆಟದ ಸಾಮಾನು ಮೊದಲಾದವು ಈ ಜಿಲ್ಲೆ ಆಮದು ಮಾಡಿಕೊಳ್ಳುವ ಮುಖ್ಯ ವಸ್ತುಗಳು.
ಹತ್ತಿ ಈ ಜಿಲ್ಲೆಯಿಂದ ರಫ್ತಾಗುವ ಅತ್ಯಂತ ಮುಖ್ಯ ಸರಕು. ಹುಬ್ಬಳ್ಳಿ, ಧಾರವಾಡ, ಅಣ್ಣಿಗೇರಿ,-ಇವು ಈ ಜಿಲ್ಲೆಯ ಮುಖ್ಯ ಸಗಟು ಹತ್ತಿ ಮಾರುಕಟ್ಟೆಗಳು. ಮೆಣಸಿನಕಾಯಿ, ಸೇಂಗಾ, ಕುಸುಬೆ, ಗೋದಿ, ಜೋಳ, ರಾಗಿ, ಸಾವೆ, ನವಣೆ, ತಾಮ್ರ ಮತ್ತು ಹಿತ್ತಾಳೆಯ ಪಾತ್ರೆಗಳು, ಬೆಣ್ಣೆ, ಚರ್ಮ, ಯಂತ್ರೋಪಕರಣಗಳು, ಇಮಾರತು ಮತ್ತು ಉರುವಲು ಕಟ್ಟಿಗೆಗಳು ಈ ಜಿಲ್ಲೆಯಿಂದ ರಫ್ತಾಗುವ ಇತರ ಮುಖ್ಯ ವಸ್ತುಗಳು. ಹುಬ್ಬಳ್ಳಿ, ಧಾರವಾಡ, ಗದಗ, ಬ್ಯಾಡಗಿ, ಅಣ್ಣಿಗೇರಿ, ಎಲವಿಗೆ, ಕುಂದಗೋಳ, ಸವಣೂರ; ಹೊಳೆಆಲೂರ-ಇವು ಈ ಜಿಲ್ಲೆಯ ವ್ಯಾಪಾರದ ಪಡಮೂಲೆಯ ಸ್ಥಳಗಳು : ಎಲ್ಲ ಬಗೆಯ ವಸ್ತುಗಳ ಚಿಲ್ಲರೆ ವ್ಯಾಪಾರ ಜಿಲ್ಲೆಯ ಪಟ್ಟಣಗಳು ಮತ್ತು ಗ್ರಾಮಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ.
ಸಾರಿಗೆ ಸಂಪರ್ಕ : ಧಾರವಾಡ ಜಿಲ್ಲೆಯಲ್ಲಿ ಮಿರಜ್-ಬೆಂಗಳೂರು ರೈಲುಮಾರ್ಗ ಮುಖ್ಯವಾದ್ದು. ಅಳ್ನಾವರ, ಧಾರವಾಡ, ಹುಬ್ಬಳ್ಳಿ, ಕುಂದಗೋಳ, ಗುಡಿಗೇರಿ, ಸವಣೂರು-ಇವು ಮುಖ್ಯ ರೈಲು ನಿಲ್ದಾಣಗಳು. ಹುಬ್ಬಳ್ಳಿಯಿಂದ ಗದಗದ ಕಡೆಗೆ ಹೋಗಲು ಇನ್ನೊಂದು ರೈಲುಮಾರ್ಗವಿದೆ. ಗದಗ ರೈಲು ನಿಲ್ದಾಣದಲ್ಲಿ ಹುಬ್ಬಳ್ಳಿ-ಸೊಲ್ಲಾಪುರ ಮತ್ತು ಹುಬ್ಬಳ್ಳಿ-ಗುಂತಕಲ್ ರೈಲುಮಾರ್ಗಗಳು ಕೂಡುತ್ತವೆ. ಈ ಜಿಲ್ಲೆಯಲ್ಲಿ ಹುಬ್ಬಳ್ಳಿ, ಗದಗ, ಅಳ್ನಾವರ-ಇವು ಮುಖ್ಯ ರೈಲ್ವೆ ಜಂಕ್ಷನ್‍ಗಳು.
ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಮುಖ್ಯ ಜಿಲ್ಲಾ ರಸ್ತೆಗಳು ಮತ್ತು ಇತರ ಜಿಲ್ಲಾ ರಸ್ತೆಗಳು ಇವೆ. ಪುಣೆ, ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತೇಗೂರು, ಧಾರವಾಡ, ಹುಬ್ಬಳ್ಳಿ, ಶಿಗ್ಗಾಂವಿ, ಬಂಕಾಪುರ, ರಾಣಿಬೆನ್ನೂರು ಮತ್ತು ಚಳಿಗೇರಿಗಳ ಮೇಲೆ ಹಾಯ್ದು ಹೋಗುತ್ತದೆ. ಕಾರವಾರ-ಬಳ್ಳಾರಿ, ಕುಮಟಾ-ಹುಬ್ಬಳ್ಳಿ, ಸೊಲ್ಲಾಪುರ-ಹುಬ್ಬಳ್ಳಿ-ಇವು ರಾಜ್ಯದ ಹೆದ್ದಾರಿಗಳು. ಗದಗ-ಫಾಲಾ, ಗದಗ-ಬಾದಾಮಿ, ಹಾವನೂರ-ಯಕ್ಕುಂಬಿ, ಶಿರಹಟ್ಟಿ-ಮುಂಡರಗಿ, ಧಾರವಾಡ-ಹಲ್ಯಾಳ, ಧಾರವಾಡ-ಗೋವಾ, ಧಾರವಾಡ-ಸವದತ್ತಿ. ಮಾಸೂರು-ಗುತ್ತಲ, ಹರಿಹರ-ಸಮ್ಮಸಗಿ, ತಡಸ-ಗೊಂದಿ-ಇವು ಜಿಲ್ಲೆಯ ಮುಖ್ಯ ರಸ್ತೆಗಳು. ಜಿಲ್ಲೆಯ ಎಲ್ಲ ಭಾಗಗಳಲ್ಲಿ ಅನೇಕ ಜಿಲ್ಲಾ ರಸ್ತೆಗಳಿವೆ.
ಮಳೆಗಾಲದಲ್ಲಿ ವಿಶೇಷವಾಗಿ ತುಂಗಭದ್ರಾ, ವರದಾ, ಕುಮುದ್ವತಿ ಮತ್ತು ಮಲಪ್ರಭಾ ನದಿಗಳನ್ನು ದಾಟಲು ಅನೇಕ ಸ್ಥಳಗಳಲ್ಲಿ ದೋಣಿಗಳು ಸಂಚರಿಸುತ್ತವೆ. ಧಾರವಾಡದಲ್ಲಿ ಆಕಾಶವಾಣಿ ಕೇಂದ್ರವುಂಟು.
(ಎಸ್.ಎಸ್.ಎನ್.; ಎಸ್.ಎಸ್.ಬಿಎಚ್‍ಯು.)
ಪ್ರಾಗೈತಿಹಾಸಿಕ ನೆಲೆಗಳು : ಇತ್ತೀಚಿನ ವರೆಗೂ ಈ ಜಿಲ್ಲೆಯಲ್ಲಿ ಪುರಾತತ್ವ ಅನ್ವೇಷಣಕಾರ್ಯ ನಡೆದಿರಲಿಲ್ಲವಾಗಿ ಈ ಪ್ರದೇಶದ ಪ್ರಾಗೈತಿಹಾಸಿಕ ಸಂಸ್ಕøತಿಗಳ ಬಗ್ಗೆ ಏನೇನೂ ತಿಳಿದಿರಲಿಲ್ಲ. ಆದರೆ ಈ ಜಿಲ್ಲೆಯ ಆಗ್ನೇಯದ ಬಳ್ಳಾರಿ, ಪೂರ್ವದ ರಾಯಚೂರು ಮತ್ತು ಉತ್ತರದ ಬಿಜಾಪುರ ಜಿಲ್ಲೆಗಳಲ್ಲಿ ಹಲವಾರು ಪ್ರಾಕ್ತನ ನೆಲೆಗಳು ಕಂಡುಬಂದಿರುವುದರಿಂದ ಈ ಪ್ರದೇಶದಲ್ಲೂ ಪ್ರಾಕ್ತನ ಅವಶೇಷಗಳು ದೊರಕಬಹುದೆಂಬ ನಿರೀಕ್ಷೆಯಿಂದ ನಡೆಸಿದ ಸರ್ವೇಕ್ಷಣದ ಫಲವಾಗಿ ಅನೇಕ ನೆಲೆಗಳು ಬೆಳಕಿಗೆ ಬಂದಿವೆ. ಕೆಲವು ಪ್ರದೇಶಗಳಲ್ಲಿ ಈವರೆಗಿನ ಸಂಶೋಧನ ಕಾರ್ಯ ಬಹುಮಟ್ಟಿಗೆ ಭೂಮಿಯ ಮೇಲೆ ಕಾಣುವ ಅವಶೇಷಗಳ ಅನ್ವೇಷಣೆಗೆ ಸೀಮಿತವಾದ್ದು. ಜಿಲ್ಲೆಯ ದಕ್ಷಿಣದ ಅಂಚಿನಲ್ಲಿರುವ, ನವಶಿಲಾಯುಗ ಸಂಸ್ಕøತಿಯ ಕಾಲಕ್ಕೆ ಸೇರಿದ ಹಳ್ಳೂರು ನೆಲೆಯ ಸೀಮಿತ ಉತ್ಖನನದಿಂದ ಆ ಸಂಸ್ಕøತಿಯ ಅಲ್ಪ ಪರಿಚಯವಾಗಿದೆ. ಈ ವರೆಗೆ ದೊರಕಿರುವ ಮಾಹಿತಿಗಳಿಂದ ತಿಳಿದುಬರುವ ಪ್ರಾಗಿತಿಹಾಸಕಾಲದ ಸಂಸ್ಕøತಿಗಳನ್ನು ಮುಂದೆ ಸ್ಥೂಲವಾಗಿ ವಿವರಿಸಲಾಗಿದೆ.
ಆದಿಶಿಲಾಯುಗದ ಅವಶೇಷಗಳು ಈ ವರೆಗೆ ಕೊಂಚಿಗೇರಿ, ನಲವಾಗಲ್, ನದಿಹರಳಹಳ್ಳಿ, ಜುಮದಾಪುರ, ನಿಟ್ಟೂರು, ಬೆಣಚಿಮಟ್ಟಿ, ಜೀರಿಗೆ ವರ್ದಿ, ಮೆಣಸ್ಗಿ, ವರಗುಂದ ಮತ್ತು ಗುಡಿಸಾಗರ ನೆಲೆಗಳಲ್ಲಿ ದೊರಕಿವೆ. ಈ ಅವಶೇಷಗಳಲ್ಲಿ ಅಷ್ಯೂಲಿಯನ್ ಹಂತಕ್ಕೆ ಸೇರಿದ ಕೈಗೊಡಲಿಗಳು ಪ್ರಧಾನವಾಗಿವೆ. ಒಂದೆರಡು ಕ್ಲೀವರ್ ಅಥವಾ ಕಲ್ಮಚ್ಚುಗಳೂ ಕೆಲವು ಚಕ್ಕೆ ಕಲ್ಲಿನ ಆಯುಧಗಳೂ ಇವೆ. ಈ ಅವಶೇಷಗಳ ಸಾಂಸ್ಕøತಿಕ ಹಿನ್ನೆಲೆ ಮತ್ತು ಕಾಲಾನುಕ್ರಮಗಳ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯಬೇಕಾಗಿದೆ. ಆದರೂ ಆ ಮಾನವನ ಪುರಾತನ ಕಾಲದ ವಾಸ್ತವ್ಯ ಈ ಪ್ರದೇಶದಲ್ಲಿದ್ದ ಸಂಗತಿ ದೃಢಪಟ್ಟಿದೆ. ನಲವಾಗಲ್ ಮತ್ತು ನದಿ ಮರಳಹಳ್ಳಿ ನೆಲೆಗಳಲ್ಲಿ ಮಧ್ಯಶಿಲಾಯುಗ ಸಂಸ್ಕøತಿಗೆ ಸೇರಿದ ಕೆಲವು ಚಕ್ಕೆ ಕಲ್ಲಿನ ಆಯುಧಗಳು ದೊರಕಿರುವುದರಿಂದ ಪ್ಲೀಸ್ಟೊಸೀನ್ ಯುಗದ ಕೊನೆಗಾಲದಲ್ಲೂ ಈ ಪ್ರದೇಶದಲ್ಲಿ ಮಾನವ ವಾಸಿಸುತ್ತಿದ್ದ ವಿಷಯ ತಿಳಿದುಬಂದಿದೆ. ಹಾಲೊಸೀನ್ ಯುಗದ ಪ್ರಾರಂಭ ಕಾಲದಲ್ಲೂ-ಎಂದರೆ ಕ್ರಿ.ಪೂ. 10,000 ಕ್ರಿ.ಪೂ. 3,000ದ ಅವಧಿಗೆ ಸೇರುವ ಅಂತ್ಯ ಅಥವಾ ಸೂಕ್ಷ್ಮ ಶಿಲಾಯುಗದ ಕಾಲದಲ್ಲೂ-ಈ ಪ್ರದೇಶದಲ್ಲಿ ಮಾನವ ವಾಸಿಸುತ್ತಿದ್ದ ಸಂಗತಿ ಹಾನಗಲ್ ತಾಲ್ಲೂಕು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿರುವ ಗಿರ್ಸಿಕೊಪ್ಪ, ದೋಲೇಶ್ವರ, ಬಾಲಂಬೀಡು, ವೀರಾಪುರ, ಹಾನಗಲ್, ನಲವಾಗಲ್ ಮತ್ತು ನದಿಹರಳ ಹಳ್ಳಿಗಳ ಬಳಿ ದೊರೆತ ಸೂಕ್ಷ್ಮ ಶಿಲಾಯುಧಗಳಿಂದ ಖಚಿತವಾಗುತ್ತದೆ. ಈ ಆಯುಧಗಳಲ್ಲಿ ಹಲವು ಬಗೆಯ ಮೊನೆಗಳು. ಹೆರೆಯುವ ಮತ್ತು ಕೊರೆಯುವ ಆಯುಧಗಳು ಪ್ರಧಾನವಾಗಿವೆ. ಸಮಾನಾಂತರ ಕೂರಲಗು ಫಲಕಗಳು ಇಲ್ಲದಿರುವುದು ಗಮನಾರ್ಹ. ಈ ನೆಲೆಗಳು ಸೂಕ್ಷ್ಮಶಿಲಾಯುಧ ಸಂಸ್ಕøತಿಯ ಮೊದಲ ಹಂತಕ್ಕೆ ಸೇರುವಂಥವಾಗಿರಬಹುದು.
ಆಹಾರ ಸಂಗ್ರಹಣೆಯ ಹಂತದಿಂದ ಆಹಾರೋತ್ಪಾದನೆಯ ಹಂತಕ್ಕೆ ಮಾನವ ವಿಕಾಸ ಹೊಂದಿದುದಕ್ಕೆ ಈ ಜಿಲ್ಲೆಯಲ್ಲಿ ಹರಡಿರುವ ಅನೇಕ ನೆಲೆಗಳಿಂದ ಮಾಹಿತಿಗಳು ದೊರಕಿವೆ. ನವಶಿಲಾಯುಗ ಮತ್ತು ತಾಮ್ರ ಶಿಲಾಯುಗ ಸಂಸ್ಕøತಿಗಳ ಅವಶೇಷಗಳು ಒಟ್ಟೊಟ್ಟಿಗೆ ದೊರಕಿರುವುದರಿಂದ ಪೂರ್ವ-ಆಗ್ನೇಯ ದಿಕ್ಕುಗಳಿಂದ ನವಶಿಲಾಯುಗ ಸಂಸ್ಕøತಿಯ ಪ್ರಭಾವಗಳೂ ಉತ್ತರದಿಂದ ತಾಮ್ರಶಿಲಾಯುಗ ಸಂಸ್ಕøತಿಯ ಪ್ರಭಾವಗಳೂ ಈ ಪ್ರದೇಶಕ್ಕೆ ಬಂದುವೆಂದು ಊಹಿಸಬಹುದು. ಕೌಲೆಟ್, ನಲವಾಗಲ ನದಿಹರಳಹಳ್ಳಿ, ಬಟ್ಟೂರು, ಹಾದರಗೇರಿ, ಕುನಬವ, ಹೀರೆಹಾಳ, ಪುರದಕೇರಿ, ಮಣ್ಣೂರು, ಮೆಣಸ್ಗಿ, ನಿಡಗುಂದಿ, ನಿಡಗುಂದಿಕೊಪ್ಪ, ಸವಡಿ, ವರಗುಂದ, ಗುಡಿಸಾಗರ, ಅರಸಂಗೋಡಿ, ಬೈರನಹಟ್ಟಿ, ಹಲಗೊಪ್ಪ, ಕುರಗೋವಿನ ಕೊಪ್ಪ, ಲಿಂಗದಹಾಳ, ಸಿರೋಳ, ಬೆನಕನ ಕೊಪ್ಪ, ಸುರಕೋದ ಮತ್ತು ಹಳ್ಳೂರುಗಳಲ್ಲಿ ಈ ಸಂಸ್ಕøತಿಯ ಅವಶೇಷಗಳು ಸಿಕ್ಕಿವೆ. ಈ ನೆಲೆಗಳಲ್ಲಿ ನಯಗೊಳಿಸಿದ ಕಲ್ಲಿನ ಕೊಡಲಿಗಳೂ ಕೆಲವು ನೆಲೆಗಳಲ್ಲಿ ಅವುಗಳ ಜೊತೆಗೆ ಸೂಕ್ಷ್ಮ ಶಿಲಾಯುಧಗಳೂ ಬೂದುಬಣ್ಣದ ಹೊಳಪಾದ ಹೊರಮೈಗಳುಳ್ಳ ಮಣ್ಣಿನ ಪಾತ್ರೆಗಳೂ ದೊರಕಿವೆ. ಆದ್ದರಿಂದ ಇಲ್ಲಿ ನವಶಿಲಾಯುಗ ಸಂಸ್ಕøತಿ ಇತ್ತೆನ್ನಬಹುದಾಗಿದೆ. ಮತ್ತೆ ಕೆಲವು ನೆಲೆಗಳಲ್ಲಿ ಇವುಗಳ ಜೊತೆಗೆ ವರ್ಣರಂಜಿತ ಮಣ್ಣಿನ ಪಾತ್ರೆಗಳೂ ಕೂರಲಗು ಫಲಕಗಳೂ ದೊರಕಿವೆ. ಇವು ತಾಮ್ರಶಿಲಾಯುಗ ಸಂಸ್ಕøತಿಯ ಪ್ರವೇಶವನ್ನು ಸೂಚಿಸುತ್ತವೆ.
ಅನಂತರದ ಕಾಲದ ಕಬ್ಬಿಣಯುಗದ ಬೃಹತ್ ಶಿಲಾ ಸಂಸ್ಕøತಿಗೆ ಸೇರಿದ ನೆಲೆಗಳು ಮಲಕನಹಳ್ಳಿ, ಕಮದೋಡ್, ಹೊಸೂರು, ಜೆಂಗಡ, ಬೆಳಗಟ್ಟಿ, ಆದ್ರಹಳ್ಳಿ, ದೇವಿಹಾಳ, ಸೋವಿಗಲ್, ಹಳ್ಳೂರು, ಉಣಚಗೇರಿ, ಹಿರೇಹಾಳ, ಗಜೇಂದ್ರಗಡ, ಗಂಡಗೇರಿ, ರಾಜೂರು, ಕಲಕ್ಕಾಳೇಶ್ವರ, ನಾಗರಹಳ್ಳಿ ಮುಂತಾದೆಡೆಗಳಲ್ಲಿ ಕಂಡುಬಂದಿವೆ. ಹೆಚ್ಚಾಗಿ ಶಿಲಾವರ್ತುಲಗಳು, ಕೆಲವೆಡೆ ಶವಜಾಡಿಗಳನ್ನೊಳಗೊಂಡ ಹಳ್ಳಗಳು ಮತ್ತು ಒಂದು ನೆಲೆಯಲ್ಲಿ ಶಿಲಾತೊಟ್ಟಿಯ ಬಳಕೆ ಈ ಸಮಾಧಿಗಳ ವಿಧಾನಗಳನ್ನು ಸೂಚಿಸುತ್ತವೆ. ಉಣಚಗೇರಿ ಮತ್ತು ಕಮಲಾಪುರಗಳ ಬಳಿ ಆ ಕಾಲದ ವಸತಿ ನೆಲೆಗಳು ಕಂಡುಬಂದಿರುವುದು ಗಮನಾರ್ಹ.
ಚಾರಿತ್ರಿಕ ಯುಗದ ಆರಂಭ ಕಾಲಕ್ಕೆ ಸೇರುವ ಕೆಲವು ವಸತಿನೆಲೆಗಳು ಈ ಪ್ರದೇಶದಲ್ಲಿ ಕಂಡುಬಂದಿವೆ.
ಶಾಸನಗಳು : ಈ ಜಿಲ್ಲೆಯಲ್ಲಿ 5-6ನೆಯ ಶತಮಾನಗಳಿಂದ ಇತ್ತೀಚಿನ ಬ್ರಿಟಿಷರ ಆಳ್ವಿಕೆಯ ವರೆಗಿನ ಅವಧಿಗೆ ಸೇರುವ ಸು. 2,200ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ದೊರಕಿರುವ ಶಾಸನಗಳಲ್ಲಿ ಹೆಚ್ಚಿನವು ಕಲ್ಯಾಣ ಚಾಳುಕ್ಯರ ಕಾಲಕ್ಕೆ ಸೇರಿದವು. 1,200ರಷ್ಟು ಶಾಸನಗಳನ್ನು ಈಗಾಗಲೇ ಹಲವಾರು ವಿದ್ವಾಂಸರು ಪರಿಶೀಲಿಸಿದ್ದಾರೆ. ಅವು ವಿವಿಧ ಸಂಪುಟಗಳಲ್ಲಿ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಉಳಿದ ಸುಮಾರು 1,000 ಶಾಸನಗಳು ಇನ್ನೂ ವಿದ್ವಾಂಸರ ಸಂಶೋಧನೆಗೆ ಈಡಾಗಿ ಐತಿಹಾಸಿಕ ಮಾಹಿತಿಗಳನ್ನು ಹೊರಗೆಡಹಬೇಕಾಗಿದೆ. ಗದಗ, ಮುಳುಗುಂದ, ಲಕ್ಕುಂಡಿ, ಸೂಡಿ, ಅಣ್ಣಿಗೇರಿ, ತಂಬೂರ, ಬಂಕಾಪುರ, ದೇವಗೇರಿ, ಹಾವೇರಿ, ಲಕ್ಷ್ಮೇಶ್ವರ, ಕಲ್ಕೇರಿ ಮುಂತಾದ ಪ್ರಸಿದ್ಧ ಐತಿಹಾಸಿಕ ಕ್ಷೇತ್ರಗಳಲ್ಲಿ ಅಧಿಕಸಂಖ್ಯೆಯ ಶಾಸನಗಳು ದೊರಕಿವೆ. ಇವು ಆಯಾ ಪ್ರದೇಶಗಳ ಐತಿಹಾಸಿಕ ಮಹತ್ತ್ವವನ್ನು ಪ್ರತಿಬಿಂಬಿಸುತ್ತವೆ. ಇವುಗಳಲ್ಲಿ ಹೆಚ್ಚಿನವು ದಾನಶಾಸನಗಳು. ವೀರಗಲ್ಲು, ಮಾಸತಿ ಕಲ್ಲು, ಸಲ್ಲೇಖನ ಶಿಲೆಗಳ ಮೇಲಿನ ಸ್ಮಾರಕ ಶಾಸನಗಳು ಸಾಕಷ್ಟಿವೆ. ಈ ಶಾಸನಗಳಿಂದ ಅನೇಕ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳು ತಿಳಿಯುತ್ತವೆ; ಅತ್ತಿಮಬ್ಬೆ, ಶಂಕರಗಂಡ, ಬಸವೇಶ್ವರ, ಸಿದ್ಧರಾಮ, ಏಕಾಂತದ ರಾಮಯ್ಯ, ಕುಮಾರರಾಮ, ಕುಮಾರವ್ಯಾಸ ಮುಂತಾದ ಐತಿಹಾಸಿಕ ವ್ಯಕ್ತಿಗಳ ಜೀವನದ ಬಗ್ಗೆ ಅನೇಕ ಅಮೂಲ್ಯ ಸಂಗತಿಗಳು ಬೆಳಕಿಗೆ ಬಂದಿವೆ.
ಕಾಲಾನುಕ್ರಮವಾಗಿ ಅತ್ಯಂತ ಪ್ರಾಚೀನವಾದ ಶಾಸನ ಅಕ್ಕಿಆಲೂರದ ಬಳಿ ಸಿಕ್ಕಿರುವ 6ನೆಯ ಶತಮಾನದ ಕದಂಬ 2ನೆಯ ಕೃಷ್ಣವರ್ಮನ ಶಾಸನ. ಅವನು ಸ್ವಾಮಿ ಶರ್ಮನಿಗೆ ಕಿರುಕುಪ್ಪಟೂರ ಗ್ರಾಮವನ್ನು ದತ್ತಿ ನೀಡಿದ ಪ್ರಸ್ತಾಪ ಈ ಶಾಸನದಲ್ಲಿದೆ. ಈ ಪ್ರದೇಶದಲ್ಲಿ ದೊರಕುವ ಶಾಸನಗಳಲ್ಲಿ ಬಾದಾಮಿ ಚಾಳುಕ್ಯರ ಶಾಸನಗಳು ಗಮನಾರ್ಹ. ಆ ವಂಶದ ಅನೇಕ ರಾಜರ ಶಾಸನಗಳು ಇಲ್ಲಿ ದೊರಕಿವೆ. ಇವು ಅವರ ದಾನದತ್ತಿಗಳ ಬಗ್ಗೆ ವಿವರ ನೀಡುವುವಲ್ಲದೆ ಅವರ ವಂಶಾವಳಿ ಹಾಗೂ ಇತಿಹಾಸಗಳ ಮೇಲೆ ಬೆಳಕು ಚೆಲ್ಲುತ್ತವೆ. ಚಾಳುಕ್ಯರ ಸಾಮಂತರಾದ ಸೇಂದ್ರಕರು ಇಲ್ಲಿ ಆಳುತ್ತಿದ್ದರೆಂಬುದು 5-6ನೆಯ ಶತಮಾನದ ಸಿರಗುಪ್ಪಿಯ ಶಾಸನದಿಂದ ತಿಳಿದುಬರುತ್ತದೆ. ಪುರಿಗೆರೆಯ ಜೈನಬಸದಿಗೆ ಚಾಳುಕ್ಯ ಸಾಮಂತ ಆಳುವ ಚಿತ್ರವಾಹನ ಮಾಡಿದ ದಾನವನ್ನು ವಿಜಯಾದಿತ್ಯನ ಕಾಲಕ್ಕೆ ಸೇರಿದ ಸಿಗ್ಗಾವಿಯ ತಾಮ್ರಪಟ (707) ತಿಳಿಸುತ್ತದೆ. ಪುರಿಗೆರೆಯ ಜನರಿಗೆ ಯುವರಾಜ ವಿಕ್ರಮಾದಿತ್ಯ ನಿರ್ದೇಶಿಸಿದ ವ್ಯವಹಾರ ನಿಯಮಗಳು 2ನೆಯ ವಿಕ್ರಮಾದಿತ್ಯನ ಲಕ್ಷ್ಮೇಶ್ವರದ 725ರ ಶಾಸನದಿಂದ ತಿಳಿದುಬಂದಿವೆ. ಇದರಿಂದ ಆಗಿನ ಸಾಮಾಜಿಕ-ಆಡಳಿತ ಪದ್ಧತಿಗಳ ಮೇಲೆ ಹೊಸ ಬೆಳಕು ಬಿದ್ದಿದೆ.
ನವಲಗುಂದ ತಾಲ್ಲೂಕಿನ ಬೋಗಾನೂರಿನಲ್ಲಿ 12ನೆಯ ಶತಮಾನದ ಒಂದು ಶಾಸನ ಸಿಕ್ಕಿದೆ. 10ನೆಯ ಶತಮಾನದ ರಾಷ್ಟ್ರಕೂಟ 4ನೆಯ ಇಂದ್ರನ ಬಗ್ಗೆ ಕುತೂಹಲಕಾರಿಯಾದ ವಿಷಯ ಇದರಿಂದ ಗೊತ್ತಾಗುತ್ತದೆ. ರಾಷ್ಟ್ರಕೂಟರು 973ರಲ್ಲಿ ತಮ್ಮ ಸಾಮ್ರಾಜ್ಯವನ್ನು ಚಾಳುಕ್ಯರಿಗೆ ಕಳೆದುಕೊಂಡಿದ್ದರೂ ಇವನು ತನ್ನ ಮಾವ ಗಂಗ ಮುಮ್ಮಡಿ ಮಾರಸಿಂಹನ ಸಹಾಯದಿಂದ ಕಿರೀಟಧಾರಣೆ ಮಾಡಿಕೊಂಡು ಬಂಕಾಪುರದಲ್ಲಿ ಸಮ್ರಾಟನೆಂದು ನಟಿಸುತ್ತ ಆಳುತ್ತಿದ್ದುದಾಗಿಯೂ ಸ್ವತಃ ಜೈನಪಂಥೀಯನಾಗಿದ್ದುದರಿಂದ ಅಲ್ಲಿಯ ಪ್ರಸಿದ್ಧ ಜೈನಾಚಾರ್ಯರಿಗೆ ದಾನಗಳನ್ನು ಮಾಡಿದುದಾಗಿಯೂ ಈ ಶಾಸನ ತಿಳಿಸುತ್ತದೆ. ಬನವಾಸಿಯಲ್ಲಿ ರಾಷ್ಟ್ರಕೂಟರ ಮಾಂಡಳಿಕರಾಗಿ ಆಳುತ್ತಿದ್ದ ಚೆಲ್ಲಕೇತನ ವಂಶದ ಬಂಕೆಯರಸ, ಲೋಕಾದಿತ್ಯ ಮತ್ತು ರಾಜಾದಿತ್ಯರ ಬಗ್ಗೆ ಈ ಪ್ರದೇಶದ ಹಲವು ಶಾಸನಗಳು ವಿವರಗಳನ್ನು ನೀಡುತ್ತವೆ. ಬನವಾಸಿಯ ಸಾಮಂತ ಮಾತುರವಂಶದ ಗೋವಿಂದರ ಗಂಗಬೂತುಗನ ಅಧೀನನಾಗಿ ಆಳುತ್ತಿದ್ದನೆಂದು ದೇವಿ ಹೊಸೂರಿನ ಶಾಸನದಿಂದ ತಿಳಿಯುತ್ತದೆ.
ಕಲ್ಯಾಣ ಚಾಳುಕ್ಯರ ಕಾಲದ ನೂರಾರು ಶಾಸನಗಳು ಈ ಪ್ರದೇಶದಲ್ಲಿ ಸಿಕ್ಕಿವೆ. ಕೋಟು ಮಚಗಿಯ ಕಮಲೇಶ್ವರ ದೇವಾಲಯದಲ್ಲಿರುವ 1012ರ ಶಾಸನದಿಂದ ಅಲ್ಲಿಯ ದೊಡ್ಡ ಅಗ್ರಹಾರ ಮತ್ತು ಉಚಿತ ವಿದ್ಯಾರ್ಥಿನಿಲಯ ಮತ್ತು ಅದರಲ್ಲಿ ಬೋಧಿಸುತ್ತಿದ್ದ ಅನೇಕ ವಿದ್ಯೆಗಳ ಬಗ್ಗೆಯೇ ಅಲ್ಲದೆ ಆಗಿನ ಕಾಲದ ಗ್ರಾಮಾಡಳಿತ ಪದ್ಧತಿ, ವಿವಿಧ ರೀತಿಯ ಅಪರಾಧಗಳು, ಆಯಾ ಅಪರಾಧಗಳಿಗೆ ವಿಧಿಸಬೇಕಾದ ಶಿಕ್ಷೆಗಳು-ಇವುಗಳ ಬಗ್ಗೆ ವಿವರಗಳು ದೊರಕುತ್ತವೆ. 1ನೆಯ ಸೋಮೇಶ್ವರನ ಕಾಲದಲ್ಲಿ ಚೋಳರು ಬೆಳ್ವೊಲ, ಪುಲಿಗೆರೆ ಮತ್ತು ಲಕ್ಷ್ಮೇಶ್ವರ ಪ್ರಾಂತ್ಯಗಳ ಮೇಲೆ ದಾಳಿ ಮಾಡಿ ಅನೇಕ ದೇವಾಲಯಗಳನ್ನು ನಾಶ ಮಾಡಿದ ಸಂಗತಿ 1071ರ ಒಂದು ಶಾಸನದಿಂದ ತಿಳಿದುಬರುತ್ತದೆ. ಬನವಾಸಿಯ ಮಹಾ ಮಂಡಲೇಶ್ವರ ಕೀರ್ತಿವರ್ಮ 6ನೆಯ ವಿಕ್ರಮಾದಿತ್ಯನ ಪರವಾಗಿ ದಂಗೆಯೆದ್ದಾಗ, ಅರಸನಾಗಿದ್ದ 2ನೆಯ ಸೋಮೇಶ್ವರ ಅವನನ್ನು ಶಿಕ್ಷಿಸಿದನೆಂದು ನೀರಲಗಿಯ 1074ರ ಶಾಸನ ತಿಳಿಸುತ್ತದೆ. ವಿಕ್ರಮಾದಿತ್ಯ ಸಿಂಹಾಸನವನ್ನು 1076ರಲ್ಲಿ ಆಕ್ರಮಿಸಿದ ಅನಂತರ ತನ್ನ ಸಹಾಯಕನಾದ ತಮ್ಮ ಜಯಸಿಂಹನನ್ನು ಬನವಾಸಿ ಮತ್ತು ಇತರ ಪ್ರದೇಶಗಳ ಅಧಿಕಾರಿಯಾಗಿ ನೇಮಿಸಿದ ವಿಷಯ 1078ರ ನರಗುಂದ ಶಾಸನದಿಂದ ತಿಳಿಯುತ್ತದೆ. ಸೋಮೇಶ್ವರ ಮತ್ತು ರಾಜೇಂದ್ರ ಚೋಳರ ಮೇಲೆ ಜಯಸಿಂಹ ಜಯ ಗಳಿಸಿ ಅಣ್ಣ ವಿಕ್ರಮಾದಿತ್ಯನಿಗೆ ರಾಜ್ಯ ಸಂಪಾದನೆಯಲ್ಲಿ ನೆರವು ನೀಡಿದ ವಿಚಾರ ನರಗುಂದದ 1080ರ ಶಾಸನದಿಂದ ತಿಳಿಯುತ್ತದೆ. 1117ರ ಧಾರವಾಡದ ದುರ್ಗಾಗುಡಿಯ ವಿಕ್ರಮಾದಿತ್ಯನ ಶಾಸನದಲ್ಲಿ ಧಾರವಾಡವನ್ನು ಹೆಸರಿಸಲಾಗಿದೆ. ಅಲ್ಲದೆ ಪಟ್ಟದರಸಿ ಮೈಲಾಳ ದೇವಿ ಎಂಬುದನ್ನೂ ಅದು ತಿಳಿಸುತ್ತದೆ. ಆಗ ಧಾರವಾಡದ ಅಧಿಕಾರಿಯಾಗಿದ್ದವನು ಭಾನುದೇವ ಅಥವಾ ಭಾಸ್ಕರಯ್ಯ. 2ನೆಯ ಜಗದೇಕಮಲ್ಲ ಗೋದಾವರಿ (ನರ್ಮದೆ ಎಂದಿರಬೇಕು) ತೀರದ ಕೋಟಿತೀರ್ಥದಲ್ಲಿ ತುಲಾಪುರುಷಯಜ್ಞ ಮಾಡಿದನೆಂದು ಅಮ್ಮಿನಭಾವಿಯ 1146ರ ಶಾಸನ ತಿಳಿಸುತ್ತದೆ. 3ನೆಯ ಸೋಮೇಶ್ವರನ ನರಗುಂದ ಶಾಸನ ಅವನನ್ನು ಸರ್ವಜ್ಞ ನೃಪನೆಂದು ಪ್ರಶಂಸಿಸಿ, ಅವನು ವೇದಪುರಾಣವೇತ್ತರಾದ ಬ್ರಾಹ್ಮಣರಿಗೆ ನೀಡಿದ ದಾನಗಳನ್ನು ವಿವರಿಸುತ್ತದೆ. ಧಾರವಾಡ ಪ್ರದೇಶದ ವಿಭಾಗಗಳು, ಅಲ್ಲಿಯ ಮಹಾಜನರು, ನರಗುಂದ ಅಗ್ರಹಾರ-ಇವುಗಳ ಬಗ್ಗೆ ಮಾಹಿತಿಗಳನ್ನೂ ಒದಗಿಸುತ್ತದೆ. ಸ್ವತಃ ಪಂಡಿತನೂ ಅಭಿಲಷಿತಾರ್ಥ ಚಿಂತಾಮಣಿ ಅಥವಾ ಮಾನಸೋಲ್ಲಾಸ ಗ್ರಂಥದ ಕರ್ತೃವೂ ಆದ ದೊರೆಯ ಬಗ್ಗೆ ಈ ವಿವರಗಳು ದೊರಕಿರುವುದು ಗಮನಾರ್ಹ. 4ನೆಯ ಸೋಮೇಶ್ವರನ ಕಾಲದ 4 ಶಾಸನಗಳ ಒಂದು ಸಮೂಹ ಧಾರವಾಡದಲ್ಲಿ ದೊರಕಿದೆ; ಅವು ಗೋವ ಕದಂಬ ಮನೆತನದ 3ನೆಯ ಜಯಕೇಶಿಯ ವಂಶಾವಳಿಯನ್ನೂ ದೇವಾಲಯಗಳಿಗೆ ಬ್ರಾಹ್ಮಣರಿಗೆ ನೀಡಿದ ದತ್ತಿಗಳನ್ನೂ ಜಮೀನಿನ ಕ್ರಯದ ಬಗ್ಗೆ ವಿವರಗಳನ್ನೂ ಆಗಿನ ಕೆಲವು ಸಾಮಾಜಿಕ ಪದ್ಧತಿಗಳನ್ನು ಕುರಿತ ಮಾಹಿತಿಗಳನ್ನೂ ಒದಗಿಸುತ್ತವೆ. 1121ರ ಗೋವೆ ಕದಂಬ ವಜ್ರದೇವನ ಧಾರವಾಡ ಶಾಸನದಲ್ಲಿ ಅಲ್ಲಿಯ ನಾಲ್ಕು ದೇವಾಲಯಗಳ ಬ್ರಾಹ್ಮಣರು ತಮ್ಮ ಹಕ್ಕುಗಳನ್ನು ಬಿಟ್ಟುಕೊಟ್ಟ ಮತ್ತು ನಗರ ಜಿನಾಲಯಕ್ಕೆ ಪ್ರಾಂತ್ಯಾಧಿಕಾರಿ ಬಿಟ್ಟದತ್ತಿಗಳ ವಿವರಗಳಿವೆ.
ಹಾನಗಲ್ ಕದಂಬ ವಂಶದ ಮಹಾಮಂಡಲೇಶ್ವರ ತೈಲಪದೇವ ಬನವಾಸಿಯನ್ನು ಆಳುತ್ತಿದ್ದುದ್ದಾಗಿ ಅಲ್ಲಿ ದೊರಕಿರುವ ಹಲವಾರು ಶಾಸನಗಳಿಂದ ತಿಳಿದು ಬರುತ್ತದೆ. ಕಳಚುರಿ ವಂಶದ ರಾಯಮುರಾರಿ ಸೋವಿದೇವನ ಕಾಲದಲ್ಲಿ ಬೆಳ್ವೊಲನಾಡನ್ನು ಮಹಾದಂಡನಾಯಕ ಧನ್ನುಗಿ ಆಳುತ್ತಿದ್ದಾಗ ಅಯ್ಯಾವೊಳೆಯ ಐನೂರ್ವರು, ಸೆಟ್ಟಿಗುತ್ತರು ಮೊದಲಾದವರು ಅಲ್ಲಿಯ ದೇವಾಲಯಕ್ಕೆ ನೀಡಿದ ದಾನದತ್ತಿಗಳ ವಿಷಯವನ್ನು ಗದಗ ತಾಲ್ಲೂಕಿನ ಬೆಲಹೊಡದ 1174 ರ ಶಾಸನ ತಿಳಿಸುತ್ತದೆ. 12 ನೆಯ ಶತಮಾನದ ಹಿರೇಕೆರೂರ ತಾಲ್ಲೂಕಿನ ಅಬ್ಬಲೂರಿ 5-6 ಶಾಸನಗಳು ಜೇಡರ ದಾಸಿಮಯ್ಯನ ಬಗ್ಗೆ ಹಾಗೂ ಏಕಾಂತದ ರಾಮಯ್ಯ ವೀರಶೈವ ಮತದ ಪ್ರಚಾರ ಮತ್ತು ಜೈನಮತದ ಖಂಡನೆಗಳನ್ನು ಮಾಡಿದ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಯಲಬುರ್ಗಿಯ ಸಿಂಧಮನೆತನದ ಪೆರ್ಮಾಡಿ ಗೋವೆಯ ಕದಂಬ ಜಯಕೇಶಿ ಮತ್ತು ಹೊಯ್ಸಳ 1ನೆಯ ಬಲ್ಲಾಳ ವಿಷ್ಣುವರ್ಧನರನ್ನು ಯುದ್ದದಲ್ಲಿ ಜಯಿಸಿ ಹೊಯ್ಸಳ ರಾಜಧಾನಿ ಬೇಲೂರನ್ನು ಆಕ್ರಮಿಸಿಕೊಂಡ ವಿವರಗಳು ಕುಂದಗೋಳ ತಾಲ್ಲೂಕಿನ ಹಂಚಿನಾಳದ 12ನೆಯ ಶತಮಾನದ ಶಾಸನದಲ್ಲಿವೆ.
ಸೇವುಣ 2ನೆಯ ಸಿಂಘಣನ ಕಾಲದಲ್ಲಿ ಅಧಿಕಾರಿ ಸೋವೆಯ ನಾಯಕ ಕಬ್ಬೂರ ಕಾಳಗದಲ್ಲಿ ಮರಣ ಹೊಂದಿದಾಗ ಹಾವೇರಿಯ ಮಹಾಜನರು ನೆತ್ತರುಗೆಯ್ ಕೊಡುಗೆಯನ್ನು ನೀಡಿದ ವಿಷಯವನ್ನು 1230ರ ಕಬ್ಬೂರ ಶಾಸನ ತಿಳಿಸಿದರೆ, ಸಿಂಘಣನು ಚೇದಿ, ಮಾಳವ, ಭೋಜ, ಹೊಯ್ಸಳ, ಸಿಲಾಹಾರ ಮತ್ತು ಇತರರನ್ನು ಗೆದ್ದುದ್ದಾಗಿಯೂ ಈ ಕದನಗಳಲ್ಲೊಂದರಲ್ಲಿ ಅವನ ಸೇನಾನಿ ಸತ್ತದ್ದರಿಂದ ಅವನ ಸ್ಮಾರಕಾರ್ಥವಾಗಿ ಒಂದು ದೇವಾಲಯವನ್ನು ಕಟ್ಟಿಸಲು ತಿಳಿವಳ್ಳಿಯ 1,000 ಮಹಾಜನರು ಆ ದೇವಾಲಯಕ್ಕೆ ದತ್ತಿಗಳನ್ನು ಬಿಟ್ಟಿದ್ದಾಗಿಯೂ 1239ರ ತಿಳಿವಳ್ಳಿಯ ಮತ್ತೊಂದು ಶಾಸನ ತಿಳಿಸುತ್ತದೆ. ಹೆಬ್ಬಳ್ಳಿಯ ಶಂಭುಲಿಂಗ ದೇವಾಲಯದ ಹತ್ತಿರ ಸಿಕ್ಕಿದ 13ನೆಯ ಶತಮಾನದ ಶಾಸನದಲ್ಲಿ ಯಾಪನೀಯ ಸಂಘ ಮತ್ತು ಪುನ್ನಾಗವೃಕ್ಷಮೂಲ ಸಂಘಗಳ ಉಲ್ಲೇಖವಿದೆ.
ವಿಜಯನಗರ ಕಾಲದ ಅನೇಕ ಶಾಸನಗಳು ಈ ಜಿಲ್ಲೆಯಲ್ಲಿ ದೊರಕಿವೆ. ಅವುಗಳಲ್ಲಿ ನೂರಾರು ದಾನದತ್ತಿಗಳ ವಿವರಗಳಿವೆ. ಗದಗದ 1539ರ ಶಾಸನದಲ್ಲಿ ಅಚ್ಯುತ್ತರಾಯ ಅಲ್ಲಿಗೆ ಬ್ರಾಹ್ಮಣರಿಗೆ ಆನಂದನಿಧಿ ದಾನ ಮಾಡಿದುದಾಗಿ ತಿಳಿಸುತ್ತದೆ. ಅದೇ ಶಾಸನದಲ್ಲಿ ಕುಮಾರವ್ಯಾಸನ ಬಗ್ಗೆ ಉಲ್ಲೇಖವಿದೆ. ಅಮ್ಮಿನ ಭಾವಿ, ಹೊಂಬಳ ಮುಂತಾದೆಡೆಗಳಲ್ಲಿ ಸಿಕ್ಕಿರುವ ಸದಾಶಿವರಾಯನ ಕೆಲವು ಶಾಸನಗಳು ಅವನು ಆಯಾ ಪ್ರದೇಶಗಳ ನಾಯಿಂದರ ಪ್ರಾರ್ಥನೆಯ ಮೇರೆಗೆ, ಅವರ ಮೇಲೆ ವಿಧಿಸಿದ್ದ ಸುಂಕದಿಂದ ಅವರಿಗೆ ವಿನಾಯತಿ ನೀಡಿದ ವಿಷಯವನ್ನು ಪ್ರಸ್ತಾಪಿಸುತ್ತವೆ.
ವಾಸ್ತು ಮತ್ತು ಮೂರ್ತಿ ಶಿಲ್ಪ : ಧಾರವಾಡ ಜಿಲ್ಲೆ ಪ್ರಾಚೀನ ಕಾಲದಿಂದಲೂ ಕರ್ನಾಟಕದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಅನೇಕ ರಾಜಮನೆತನಗಳು ಈ ಪ್ರದೇಶದಲ್ಲಿ ತಮ್ಮ ಕೇಂದ್ರವನ್ನು ಸ್ಥಾಪಿಸಿದ್ದವು. ರಾಜಕೀಯ, ಧಾರ್ಮಿಕ, ಮತ್ತು ಶೈಕ್ಷಣಿಕ ಕೇಂದ್ರಗಳು ಇಲ್ಲಿ ಅಭಿವೃದ್ಧಿ ಹೊಂದಿದ್ದುವು. ಈ ಕಾರಣಗಳಿಂದ ಈ ಜಿಲ್ಲೆಯಲ್ಲಿ ಅನೇಕ ಗಮನಾರ್ಹವಾದ ದೇವಾಲಯಗಳು ನಿರ್ಮಿತವಾದವು. ಕರ್ನಾಟಕದ ಮಧ್ಯಕಾಲೀನ ವಾಸ್ತು ಶಿಲ್ಪಗಳ ಇತಿಹಾಸವನ್ನು ತಿಳಿಯಲು ಇಲ್ಲಿಯ ಕಟ್ಟಡಗಳು ಬಹಳ ಸಹಾಯಕವಾಗಿವೆ. ಈಗ ಉಳಿದು ಬಂದಿರುವ ವಾಸ್ತು ನಿರ್ಮಾಣದಲ್ಲಿ ಹೆಚ್ಚಿನವು ಕಲ್ಯಾಣ ಚಾಳುಕ್ಯರ ಕಾಲಕ್ಕೆ ಸೇರುತ್ತವೆ.
ಇಲ್ಲಿರುವ ನೂರಾರು ದೇವಾಲಯಗಳ ಪೈಕಿ ಅತ್ಯಂತ ಪ್ರಾಚೀನವಾದ್ದು ಲಕ್ಕುಂಡಿಯ ಬ್ರಹ್ಮ ಜಿನಾಲಯ. ಬಾದಾಮಿ ಚಾಳುಕ್ಯ ಶೈಲಿಯ ಕುಕ್ಕನೂರಿನ ಕಲ್ಲೇಶ್ವರ ಗುಡಿಯ ವಾಸ್ತು ಲಕ್ಷಣಗಳಿಗೂ ಈ ಕಟ್ಟಡದ ಲಕ್ಷಣಗಳಿಗೂ ಇರುವ ವ್ಯತ್ಯಾಸಗಳು ಗಮನಾರ್ಹ. ಕಟ್ಟಡದ ತಳವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲದಿದ್ದರೂ ಕಟ್ಟಡಕ್ಕೆ ಮೊದಲು ಬಳಸುತ್ತಿದ್ದ ಒರಟಾದ ಮರಳ್ಗಲ್ಲಿನ ಬದಲು ಹೆಚ್ಚು ಸಾಂದ್ರವಾದ (ಕ್ಲೋರೈಟ್ ಸಂಬಂಧವಾದ) ಪದರಗಲ್ಲನ್ನು ಬಳಸಿರುವುದರಿಂದ ಕೆತ್ತನೆಗಳು ಹೆಚ್ಚು ನಾಜೂಕಾಗಿವೆ. ಗರ್ಭಗುಡಿಯ ಸುತ್ತ ಹೊರಗೋಡೆಯನ್ನು ಕಟ್ಟಲಾಗಿದೆ. ಮೇಲಂತಸ್ತು ಎತ್ತರವಾಗಿದ್ದು ಇದರಿಂದ ಶಿಖರದ ಪ್ರಾಧಾನ್ಯ ಹೆಚ್ಚಿದೆ. ಹೊರಗೋಡೆಗಳ ಮೇಲೆ ಅರೆಗಂಬಗಳನ್ನು ಬಿಡಿಸಿ, ಅವುಗಳ ಮಧ್ಯೆ ಗೂಡುಗಳನ್ನು ನಿರ್ಮಿಸಲಾಗಿದೆ. ಗೂಡುಗಳ ಮೇಲೆ ಮಕರಗಳ ಮುಖದಿಂದ ಹೊರಟ ಲತೆಗಳಿಂದಾಗಿ ಕಮಾನಿನ ಆಕಾರದ ತೋರಣಗಳ ಮಧ್ಯೆ ಕೀರ್ತಿಮುಖಗಳು, ಗೂಡುಗಳಲ್ಲಿ ಕುಳಿತ ಜೀವಮೂರ್ತಿಗಳು, ಗೂಡುಗಳ ನಡುವಣ ಅರೆಗಂಬಗಳ ಮೇಲಿನ ಗೋಪುರಗಳು-ಇವು ದೇವಾಲಯದ ಸೌಂದರ್ಯವನ್ನು ಹೆಚ್ಚಿಸಿವೆ. ಗರ್ಭಗುಡಿಯಲ್ಲಿ ಸಿಂಹ ಲಾಂಛನವಿರುವ ಆಸನದ ಮೇಲೆ ಮಹಾವೀರನ ಸುಂದರ ಮೂರ್ತಿ ಕುಳಿತಿದೆ. 4 ಅಡಿ 4 ಅಂಗುಲ ಎತ್ತರ ಇರುವ ಈ ಮೂರ್ತಿಯ ಗುಂಗುರು ಕೂದಲು ಭುಜಗಳ ಮೇಲೆ ಇಳಿಬಿದ್ದಿವೆ. ಇಬ್ಬದಿಗಳಲ್ಲಿ ಚಾಮರಧಾರಿಗಳ ಶಿಲ್ಪಗಳಿವೆ. ಒಳಗಿನ ಹಜಾರದಲ್ಲಿ ಒಂದುಪಕ್ಕಕ್ಕೆ ಸುಂದರವಾದ ಬ್ರಹ್ಮನ ಮತ್ತೊಂದು ಬದಿಗೆ ಸರಸ್ವತಿಯ ವಿಗ್ರಹಗಳಿವೆ. ಈ ಮಂದಿರ 11ನೆಯ ಶತಮಾನದ್ದಿದಿರಬಹುದು.
ಇಡೀ ಜಿಲ್ಲೆಯಲ್ಲಿ ಅತ್ಯಂತ ಸುಂದರವಾದ ಕಾಶಿ ವಿಶ್ವೇಶ್ವರಗುಡಿಯೂ ಇಲ್ಲಿದೆ. ಬಹುಶಃ 6 ನೆಯ ವಿಕ್ರಮಾದಿತ್ಯ ಕಾಲದಲ್ಲಿ, 1087ಕ್ಕೂ ಮೊದಲು, ಈ ಮಂದಿರ ನಿರ್ಮಾಣವಾಯಿತು. ಚೋಳರ ಆಕ್ರಮಣದಿಂದ ಇದು ಪಾಳುಬಿದ್ದ ಮೇಲೆ ಹೊಯ್ಸಳ 2ನೆಯ ಬಲ್ಲಾಳ ಇಲ್ಲಿ ತನ್ನ ರಾಜಧಾನಿಯನ್ನು ಸ್ಥಾಪಿಸಿ ಈ ನಗರದ ಪುನರ್ನಿಮಾಣ ಮಾಡಿದಾಗ ಈ ದೇವಾಲಯವನ್ನು ಈಗಿನ ಸುಂದರ ಕಲಾಕೃತಿಯನ್ನಾಗಿ ನಿರ್ಮಿಸಿದಂತೆ ಕಾಣುತ್ತದೆ. ಅವನ ಕಾಲದ ಅನೇಕ ಶಾಸನಗಳು ಇಲ್ಲಿವೆ. ಹೊರಗೋಡೆಯ ಕೆಳಭಾಗದಲ್ಲಿ ಎದ್ದು ಕಾಣುವ ಉಬ್ಬುಗಳು, ಅವುಗಳ ನಡುವೆ ಆಳವಾದ ತಗ್ಗುಗಳು, ಉಬ್ಬುಗಳ ಮೇಲಿನ ಕೆತ್ತನೆಗಳು, ಬಾಗಿಲುವಾಡಗಳ ಸುತ್ತಲಿನ ಸುಂದರ ಕೆತ್ತನೆಗಳು, ಲತಾಗುಚ್ಛಗಳು, ಅಲಂಕರಣ ಪಟ್ಟಿಕೆಗಳು ಇವು ದೇವಾಲಯದ ಸೌಂದರ್ಯವನ್ನು ಹೆಚ್ಚಿಸಿವೆ. ಎರಡು ಗರ್ಭಗೃಹಗಳುಳ್ಳ ಈ ಕಟ್ಟಡದ ಪೂರ್ವದ ಗುಡಿಗಳಲ್ಲಿ 3 ಅಡಿಗಳ ಎತ್ತರ ಶಿವಲಿಂಗವೂ ಪಶ್ಚಿಮದ ಗುಡಿಯಲ್ಲಿ ಸೂರ್ಯ ನಾರಾಯಣಮೂರ್ತಿಯೂ ಇವೆ. ಇವೆರಡರ ನಡುವೆ ತೆರೆದ ಹಜಾರವಿದೆ. ಪೂರ್ವದ ಗುಡಿಯ ಮುಂದಿನ ನವರಂಗಕ್ಕೆ ದಕ್ಷಿಣ ಕಡೆಯಿಂದ ಪ್ರವೇಶ ದ್ವಾರವಿದೆ. ಇದರ ಇಕ್ಕೆಲಗಳಲ್ಲಿ ಮತ್ತು ದಾಲವಂದದಲ್ಲಿ ಇರುವ ಕೆತ್ತನೆಗಳು ಅದ್ಬುತವಾದವು. ಎರಡು ಕಡೆಗಳ ಕಂಬಗಳ ಒಂದೊಂದು ಬದಿಯಲ್ಲಿರುವ ನಾಲ್ಕು ಉದ್ದ ಪಟ್ಟಿಕೆಗಳ ಮೇಲೆ ಹೂಬಳ್ಳಿಗಳ ಮತ್ತು ಅವುಗಳ ನಡುವಣ ವರ್ತುಲಗಳಲ್ಲಿ ಮಾನವ ಪ್ರಾಣಿ ಪಕ್ಷಿಗಳ ಸೂಕ್ಷ್ಮ ಶಿಲ್ಪಗಳು, ಕೆಳಭಾಗದಲ್ಲಿ ಎತ್ತರವಾದ ದೇವದೇವಿಯರ ವಿವಿಧ ಭಂಗಿಗಳ ವಿಗ್ರಹಗಳು, ದಾಲವಂದದ ಮಧ್ಯೆ ಗಜಲಕ್ಷ್ಮಿಯ ಲಲಾಟಬಿಂಬ-ಇವು ಒಂದೊಂದು ಬೆಳ್ಳಿಯ ಕುಸುರಿ ಕೆತ್ತನೆಗಳನ್ನು ಹೋಲುತ್ತವೆ. ಅದೇ ಸುಮಾರಿನಲ್ಲಿ ಬೇಲೂರು ಹಳೇಬೀಡುಗಳಲ್ಲೂ ನಿರ್ಮಾಣವಾಗುತ್ತಿದ್ದ ಶಿಲ್ಪರಾಶಿಯ ಛಾಯೆ ಇಲ್ಲಿ ಕಾಣುತ್ತದೆ. ಗರ್ಭಗುಡಿಗಳ ಬಾಗಿಲುವಾಡಗಳ ಕೆತ್ತನೆಗಳಲ್ಲಿ ಇಷ್ಟು ವೈವಿಧ್ಯವಿಲ್ಲದಿದ್ದರೂ ಅವೂ ಸಾಕಷ್ಟು ಸುಂದರವಾಗಿವೆ. ಹೊರ ಗೋಡೆಗಳ ಮೇಲೆ ಮತ್ತು ಚಾವಣಿಯಲ್ಲಿ ಇರುವ ಶಿಲ್ಪಗಳು ಸಜೀವವೆನಿಸುವಷ್ಟು ಸುಂದರವಾದ ಕೃತಿಗಳಾಗಿವೆ. ಭಗದತ್ತನ ಆನೆಯೊಂದಿಗೆ ಭೀಮ ಹೋರಾಡುತ್ತಿರುವುದು, ಗಜಾರಿಶಿವ , ರಾವಣ ಕೈಲಾಸವನ್ನೆತ್ತುತ್ತಿರುವುದು- ಇವು ಗಮನಾರ್ಹ ಶಿಲ್ಪಗಳು. ಇಲ್ಲಿಯ ಕಂಬಗಳು ಮತ್ತು ಅರಗಂಬಗಳು ಸಹ ಉತ್ತಮ ಕೃತಿಗಳಾಗಿವೆ. ಗರ್ಭಗುಡಿಯ ಮೇಲಿನ ಶಿಖರ ಅಂತಸ್ತುಗಳಿಂದ ಕೂಡಿದ್ದರೂ, ಅದರ ಮೇಲಿನ ಅನೇಕ ಕೆತ್ತನೆ ಶಿಲ್ಪಗಳೂ ಪ್ರಧಾನವಾಗಿವೆ; ಬುಡದಿಂದ ತುದಿಯ ವರೆಗೂ ಶಿಲ್ಪ ಸೌಂದರ್ಯ ಎದ್ದು ಕಾಣುತ್ತದೆ. ಕರಿಕಲ್ಲಿನಲ್ಲಿ ಕಟ್ಟಿದ ಈ ದೇವಾಲಯದಲ್ಲಿ ಎರಡು ಮಂಟಪಗಳಿವೆ. ಅವುಗಳ ಕೆಳಗಿನ ಅರ್ಧಕ್ಕೆ ಗೋಡೆಗಳಿವೆ ; ಮೇಲ್ಭಾಗ ತೆರಪಾಗಿದೆ. ಒಳಭಾಗದಲ್ಲಿ ಗೋಡೆಗಳಿಗೆ ಹೊಂದಿಕೊಂಡಂತೆ ಎತ್ತರವಾದ ಆಸನಗಳಿವೆ. ಹೊರಗೋಡೆಗಳ ಮೇಲೆ ಸುಂದರ ಅಲಂಕರಣ ಕೆತ್ತನೆಗಳಿವೆ.
ಚೌಡದಾನಪುರದ ಮುಕ್ತೇಶ್ವರ ದೇವಾಲಯ ಮತ್ತೊಂದು ಸುಂದರ ನಿರ್ಮಾಣ. ಈ ಕಟ್ಟಡದ ಚಾವಣಿಯಲ್ಲಿ ಸೂರುಗಳು ಎರಡು ಕಮಾನುಗಳಿಂದ ಕೂಡಿರುವುದು ಹೊಸ ಅಂಶ. ಶಿಖರದ ರೂಪರೇಷೆಗಳಲ್ಲಿ ಔತ್ತರೇಯ ಶಿಖರಗಳ ಕೆಲವು ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ. ಆದರೂ ಅದು ತನ್ನ ವೈಶಿಷ್ಯವನ್ನುಳಿಸಿಕೊಂಡು ಚಾಳುಕ್ಯ ಶಿಖರದ ಉತ್ತಮ ನಿದರ್ಶನವೆನಿಸಿಕೊಂಡಿದೆ. ಹೊರಗೋಡೆಗಳ ಗೂಡುಗಳಲ್ಲಿ ದೇವತಾ ಶಿಲ್ಪಗಳೂ ಕೆಳಗೋಡೆಯ ಉಬ್ಬುಗಳ ಮೇಲಿನ ಕೆತ್ತನೆಗಳೂ ಗಮನಾರ್ಹ, ಗರ್ಭಗುಡಿಯಲ್ಲಿ ಶಿವಲಿಂಗ, ಅದರ ಬಾಗಿಲ ಮೇಲೆ ಗಜಲಕ್ಷ್ಮಿ ಲಲಾಟ ಬಿಂಬ, ಮತ್ತೊಂದು ಬಾಗಿಲ ದಾಲವಂದದಲ್ಲಿ ಶಿವನ ಶಿಲ್ಪ ಇವೆ.
ನೀರಲಗಿರಿಯ ಸಿದ್ಧರಾಮೇಶ್ವರ ದೇವಾಲಯ ಚೌಡದಾನಪುರ ಮತ್ತು ಹಾವೇರಿಯ ಗುಡಿಗಳನ್ನು ಹೋಲುತ್ತದೆ. ಇದು ಉತ್ತರಾಭಿಮುಖವಾಗಿದೆ. ಮೊದಲು ಇದು ವೈಷ್ಣವ ಮಂದಿರವಾಗಿತ್ತು. ಬಾಗಿಲ ಮೇಲಿನ ಲಲಾಟಬಿಂಬದಲ್ಲಿ ಗರುಡನ ಮತ್ತು ಗೋಪಿಯರೊಡಗೂಡಿದ ಕೃಷ್ಣನ ವಿಗ್ರಹಗಳಿವೆ. ಹರಳಹಳ್ಳಿಯ ಸೋಮೇಶ್ವರ ದೇವಾಲಯ ಮೇಲಿನ ದೇವಾಲಯಗಳಂತೆ ಇದ್ದರೂ ಅಲ್ಲಿ ನವರಂಗದ ಮೂರು ಪಾಶ್ರ್ವಗಳಲ್ಲಿ ಮೂರು ಗರ್ಭಗುಡಿಗಳಿವೆ.
ಗಳಗನಾಥದ ಗಳಗೇಶ್ವರ ದೇವಾಲಯದ ತಳಪಾಯ ಗಮನಾರ್ಹವಾದ್ದು. ಇದು ಮರಳು ಪ್ರದೇಶದಲ್ಲಿರುವುದರಿಂದ ಎತ್ತರವಾದ ವಿಮಾನದ ಭಾರವನ್ನು ಧರಿಸಲು ಸಾಧ್ಯವಾಗುವಂತೆ ಗುಮ್ಮಟಾಕಾರದ ಇಳಿಜಾರಾದ ಪಾಶ್ರ್ವಗಳುಳ್ಳ ಭದ್ರವಾದ ಜಗತಿಯನ್ನು ಕಟ್ಟಿ, ಅದರ ಮೇಲಿಂದ ಗೋಡೆಗಳನ್ನು ಮೇಲೆಬ್ಬಿಸಲಾಗಿದೆ. ದೇವಾಲಯದ ಗೋಡೆಗಳ ಮೇಲೆ ಪೌರಾಣಿಕ ದೃಶ್ಯಗಳನ್ನು ಕೆತ್ತಲಾಗಿದೆ.
ತಿಳಿವಳ್ಳಿಯ ಶಾಂತೇಶ್ವರ ದೇವಸ್ಥಾನ ಈ ಪ್ರದೇಶದ ಇತರ ದೇವಾಲಯಗಳಂತೆಯೇ ಇದ್ದರೂ ಚಾಳುಕ್ಯ ವಾಸ್ತುಶೈಲಿಯ ಉತ್ಕರ್ಷಸ್ಥಿತಿಯನ್ನರಿಯಲು ಹೆಚ್ಚು ಸಹಾಯಕಾರಿಯಾಗಿದೆ. ಇಲ್ಲಿ ಮೂರ್ತಿಶಿಲ್ಪ ಬಹಳ ಕಡಿಮೆಯಾಗಿದ್ದರು ಇತರ ಅಲಂಕರಣ ಅದ್ಬುತವಾಗಿವೆ. 75 ಅಡಿ ಉದ್ದ 57 ಅಡಿ ಅಗಲ ಇರುವ ಈ ಮಂದಿರದ ಹೊರಗೋಡೆಗಳ ಮೇಲಿರುವ ಸಣ್ಣ ಸುಂದರ ಗೋಪುರಗಳು, ಚಾವಣಿಯಲ್ಲಿರುವ ಪದ್ಮಾಕಾರದ ಫಲಕಗಳು ಗಮನಾರ್ಹ.
ಡಂಬಳದ ದೊಡ್ಡಬಸಪ್ಪನಗುಡಿ ಚಾಳುಕ್ಯ ವಾಸ್ತುನಿರ್ಮಾಣಗಳಲ್ಲಿ ವಿಶಿಷ್ಟವಾದ್ದು. ಕಟ್ಟಡದ ತಳವಿನ್ಯಾಸದಲ್ಲಿ ಈ ವರೆಗೂ ರೂಢಿಯಲ್ಲಿದ್ದ ಆಯಾಕಾರದ ವಿನ್ಯಾಸಕ್ಕೆ ಬದಲಾಗಿ ವೃತ್ತಾಕಾರದ ವಿನ್ಯಾಸವನ್ನು ಬಳಸಲಾಗಿದೆ. ಸಣ್ಣದಾದ ಗರ್ಭಗುಡಿ ಮತ್ತು ವಿಶಾಲವಾದ ಸಭಾಮಂಟಪಗಳೆರಡರ ತಳವಿನ್ಯಾಸವೂ ನಕ್ಷತ್ರಾಕಾರವಾಗಿರುವುದಲ್ಲದೆ, ಆ ವಿನ್ಯಾಸವನ್ನು ಶಿಖರದ ವರೆಗೂ ಕೊಂಡೊಯ್ಯಲಾಗಿದೆ. ಇದರಿಂದ ಗೋಡೆ ಮತ್ತು ಶಿಖರಗಳ ಮೇಲೆ ಅನೇಕ ಕೋನಗಳೇರ್ಪಟ್ಟು ಅದರ ಮೇಲಿನ ಕೆತ್ತನೆಗಳ ಮೇಲೆ ನೆರಳು-ಬೆಳಕಿನಾಟಕ್ಕೆ ದಾರಿಮಾಡಲಾಗಿದೆ. ಬಹುಶಃ ಈ ವಿನ್ಯಾಸಕ್ಕೆ ಹೊಯ್ಸಳ ಶೈಲಿಯ ಪ್ರಭಾವ ಸ್ಫೂರ್ತಿ ನೀಡಿರಬೇಕು. ಶಿಖರದ ಅಂತಸ್ತುಗಳು ಈ ವಿನ್ಯಾಸದಿಂದ ತಮ್ಮ ವೈಯಕ್ತಿಕತೆಯನ್ನು ಕಳೆದುಕೊಂಡು, ಇಳಿಜಾರಾದ ಪಾಶ್ರ್ವಗಳುಳ್ಳ ಗುಮ್ಮಟದಂತೆ ಕಾಣುತ್ತವೆ. ಮಹಾದ್ವಾರದ ಮೇಲಿನ ದಾಲವಂದ ಸುಂದರ ಶಿಲ್ಪಗಳಿಂದ ಕೂಡಿದೆ. ಬ್ರಹ್ಮ, ವಿಷ್ಣು, ಶಿವರ ವಿಗ್ರಹಗಳು ಮಧ್ಯದಲ್ಲಿವೆ. ಮಕರಗಳ ಬಾಲದಿಂದ ಹೊರಟ ಲತಾಗುಚ್ಛಗಳು ಬಹಳ ಅಂದವಾಗಿವೆ. ಅದರ ಮೇಲ್ಭಾಗದಲ್ಲಿ ಕೀರ್ತಿ ಮುಖದ ಇಕ್ಕೆಲಗಳಲ್ಲೂ ತಮ್ಮ ವಾಹನಗಳ ಮೇಲೆ ಕುಳಿತ ಅಷ್ಟದಿಕ್ಪಾಲಕರ ಮೂರ್ತಿಗಳಿವೆ. ಈ ದೇವಾಲಯದಲ್ಲಿರುವ ಹಂಸದ ಮೇಲೆ ಕುಳಿತ ಬ್ರಹ್ಮ ಮತ್ತು ಸೂರ್ಯನ ಶಿಲ್ಪಗಳು ಬಹಳ ಉತ್ತಮವಾದವು. ಹೊರಗೋಡೆಗಳ ಮೇಲ್ಭಾಗದಲ್ಲಿ ಶಿಖರಗಳಿಂದ ಕೂಡಿದ ಅರೆಗಂಬಗಳ ಅಲಂಕರಣ ಮನೋಹರವಾಗಿದೆ.
ಉಣಕಲ್ಲಿನ ಚಂದ್ರಮೌಳೇಶ್ವರ ದೇವಾಲಯದ ತಳವಿನ್ಯಾಸ ಮತ್ತೊಂದು ದೃಷ್ಟಿಯಿಂದ ಗಮನಾರ್ಹ, ಮಧ್ಯದ ಗರ್ಭಗುಡಿಯ ಸುತ್ತಲೂ ವಿಶಾಲವಾದ ಸಭಾಮಂಟಪವಿದೆ. ಅದರ ನಾಲ್ಕು ದಿಕ್ಕುಗಳಲ್ಲೂ ಸಣ್ಣ ಪ್ರವೇಶ ಮಂಟಪಗಳೂ ಅವುಗಳ ಮುಂದೆ ಮಹಾದ್ವಾರಗಳೂ ಇವೆ. ಎರಡು ಬಾಗಿಲುಗಳ ಮೇಲೆ ಗಜಲಕ್ಷ್ಮಿಯ ಮತ್ತೆರಡರ ಮೇಲೆ ಸರಸ್ವತಿಯ ಶಿಲ್ಪಗಳ ಲಲಾಟಬಿಂಬಗಳಿವೆ. ಇವು ಮೊದಲು ಬಹುಶಃ ಚತುರ್ಮುಖ ಬ್ರಹ್ಮನಿಗೆ ನಿವೇದಿತವಾದ ಅಪೂರ್ವದೇವಾಲಯ ಆಗಿದ್ದಿರಬಹುದಾದರೂ ಈಗ ವೀರಶೈವರು ಇಲ್ಲಿ ನಾಲ್ಕು ಮುಖಗಳ ಶಿವಲಿಂಗವನ್ನು ಸ್ಥಾಪಿಸಿದ್ದಾರೆ. ದೇವಾಲಯದ ಒಂದು ಮೂಲೆಯಲ್ಲಿ ನಾಲ್ಕು ಮುಖಗಳುಳ್ಳ ಆದರೆ ಸರಿಯಾಗಿ ಗುರುತಿಸಲಾಗದ, ತಲೆಭಾಗ ಮಾತ್ರ ಉಳಿದಿರುವ, ಒಂದು ಶಿಲ್ಪವಿದೆ. ಹೊರಗೋಡೆಗಳ ಮೇಲೆ ಬ್ರಹ್ಮ ವಿಷ್ಣು ಶಿವರ ಅನೇಕ ರೂಪಗಳನ್ನು ತೋರಿಸಿರುವ ಶಿಲ್ಪಗಳಿವೆ. ಪ್ರವೇಶ ಮಂಟಪಗಳ ಗೋಡೆಗಳಲ್ಲಿ ಸುಂದರವಾದ ಕಲ್ಲಿನ ಜಾಲಂಧ್ರಗಳಿವೆ.
(ಬಿ.ಕೆ.ಜಿ.)
ಇತಿಹಾಸ : ಕರ್ನಾಟಕದ ಇತಿಹಾಸದಲ್ಲಿ ಧಾರವಾಡದ ಈಗಿನ ಜಿಲ್ಲೆಯ ಹಾಗೂ ಹಿಂದೆ ಈ ಜಿಲ್ಲೆಗೆ ಸೇರಿದ್ದ ಸ್ಮತ್ತಲ ಪ್ರದೇಶದ ಇತಿಹಾಸ ವಿಶಿಷ್ಟವಾದುದಾರೂ ಇಲ್ಲಿ ಆಳಿದ ಅರಸು ಮನೆತನಗಳಲ್ಲಿ ಪ್ರಮುಖವಾದ ಯಾವ ಒಂದರ ರಾಜಧಾನಿಯೂ ಈ ಜಿಲ್ಲೆಯಲ್ಲಿರಲಿಲ್ಲ. ಕೊಂಕಣ ಪ್ರದೇಶದಲ್ಲಿ 4-5ನೆಯ ಶತಮಾನಗಳಲ್ಲಿ ಆಳಿದ ಮೌರ್ಯರ ರಾಜ್ಯ ಧಾರವಾಡವನ್ನೂ ಒಳಗೊಂಡಿದ್ದಿರಬೇಕು.
ಅದಕ್ಕೂ ಹಿಂದೆ, ಕರ್ನಾಟಕ ಪ್ರದೇಶ ಮೌರ್ಯ ಸಾಮ್ರಾಜ್ಯದ ಒಂದು ಭಾಗವಾಗಿದ್ದಾಗ, ಧಾರವಾಡವೂ ಮೌರ್ಯ ಸಾಮ್ರಾಜ್ಯದ ಒಂದು ಭಾಗವಾಗಿದ್ದಿರಬಹುದು. ಇದಕ್ಕೆ ನೇರವಾದ ಆಧಾರಗಳಿಲ್ಲದಿದ್ದರೂ ಜಿಲ್ಲೆಯ ಮೋಟೆ ಬೆನ್ನೂರು, ಅಗಡಿ, ಸಿಡೇನೂರು ಮುಂತಾದ ಕಡೆಗಳಲ್ಲಿ ದೊರಕುವ ಮಾರೇ ರಂಗಡಿಗಳೆಂಬ ಡಾಲ್ಮೆನ್‍ಗಳಿಂದ (ಪಾಂಡುಕುಳಿ) ಹೀಗೆಂದು ಊಹಿಸಬಹುದು. ಕೆಲವು ಕಡೆ ಇವನ್ನು ಪಾಂಡವರ ಮನೆಗಳೆಂದೂ ಕರೆಯಲಾಗಿದೆ. ರಾಮಾಯಣ ಮಹಾಭಾರತಗಳಿಗೆ ಸಂಬಂಧಿಸಿದ ಹಲವಾರು ಪ್ರದೇಶಗಳು ಇಲ್ಲಿವೆ ಎಂಬುದು ಇಲ್ಲಿಯವರ ನಂಬಿಕೆ. ಲೊಕ್ಕಿಗುಂಡಿಯ ಕೆಲವು ಗ್ರಾಮಗಳಲ್ಲಿ ಪಾಂಡವರ ಕಟ್ಟೆಗಳನ್ನು ಈಗಲೂ ಜನ ತೋರಿಸುತ್ತಾರೆ. ಹಾನಗಲ್ ವಿರಾಟನಕೋಟೆ, ವಿರಾಟನಗರಿ ಎಂದು ಪ್ರಸಿದ್ಧವಾಗಿದೆ.
ಸಾತವಾಹನರು ಕರ್ನಾಟದಲ್ಲಿ ಆಳಿದಾಗ ಧಾರವಾಡ ಪ್ರದೇಶ ಅವರ ಅಧೀನಕ್ಕೊಳಪಟ್ಟಿತ್ತು. ಸಮೀಪದ ಕಾರವಾರ ಜಿಲ್ಲೆಯ ಬನವಾಸಿ ಬೆಳಗಾಂವಿ ಜಿಲ್ಲೆಯ ವಡಗಾವ ಮಾಧವಪುರಗಳಲ್ಲಿ ಇತ್ತೀಚೆಗೆ ನಡೆದ ಉತ್ಖನನಗಳಿಂದ ಈ ಪ್ರದೇಶಗಳು ಸಾತವಾಹನರೊಡನೆ ಹೊಂದಿದ್ದ ಸಂಬಂಧಗಳ ಸೂಚನೆಗಳು ದೊರಕಿವೆ. ಪ್ರತ್ಯಕ್ಷವಾದ ಆಧಾರಗಳಿಲ್ಲದಿದ್ದರೂ ಇವುಗಳ ನಡುವಣ ಧಾರವಾಡ ಜಿಲ್ಲೆಯ ಪ್ರದೇಶ ಸಾತವಾಹನರ ರಾಜ್ಯದ ಭಾಗವಾಗಿತ್ತೆಂದೇ ಹೇಳಬಹುದು.
ಕದಂಬರ ಕಾಲಕ್ಕೆ ಇದು ಕದಂದ ರಾಜ್ಯದ ಒಂದು ಭಾಗವಾಗಿತ್ತೆಂದು ಖಚಿತವಾಗಿ ತಿಳಿದುಬಂದಿದೆ. ಕದಂಬರ ಕೆಲವು ಶಾಸನಗಳು ಸುದ್ದಿಕುನ್ದೂರು ವಿಷಯ, ಸಿನ್ದುಥಯರಾಷ್ಟ್ರ, ಪಾಂಥಿಪುರ ವಿಷಯಗಳನ್ನು ಉಲ್ಲೇಖಿಸಿವೆ. ಸುದ್ದಿಕುನ್ದೂರು ಅನಂತರದ ಶಾಸನಗಳಲ್ಲಿ ಪ್ರಸ್ತಾಪವಾಗಿರುವ ಕುನ್ದೂರುನಾಡು (ಕುಂದರು-500) ಎಂದು ಸಿಂಧುಥಯರಾಷ್ಟ್ರ ಸಿಂದಗಿ ತಾಲ್ಲೂಕಿನ ಭಾಗವೆಂದೂ ಊಹಿಸಲಾಗಿದೆ. ಪಾಂಥಿಪುರವಿಷಯವೆಂಬುದು ಅನಂತರದ ಪಾನಂಗಲ್ಲು ವಿಭಾಗ. ಕದಂಬರ ರಾಜಧಾನಿಗಳಲ್ಲೊಂದಾದ ತ್ರಿಪರ್ವತವನ್ನು ಧಾರವಾಡ ಜಿಲ್ಲೆಯ ತೇಗೂರು, ದೇವಗಿರಿಗಳೊಂದಿಗೂ ಬೆಳಗಾಂವಿ ಜಿಲ್ಲೆಯ ಮುರುಗೋಡು ಎಂದೂ ಸಮೀಕರಿಸಲಾಗಿದೆ. ಬನವಾಸಿ ಕದಂಬರ ಅನಂತರ 10-11ನೆಯ ಶತಮಾನಗಳಲ್ಲಿ ಸಾಮಂತಾಧಿಪತಿಗಳಾಗಿ ಆಳಿದ ಹಾನಗಲ್ಲಿನ ಕದಂಬರು ಧಾರವಾಡದವರೇ.
ಬಾದಾಮಿಯಲ್ಲಿ ಚಾಳುಕ್ಯ ಅರಸರು ಕದಂಬರ ಅನಂತರ ಆಳತೊಡಗಿದಾಗ ಧಾರವಾಡ ಜಿಲ್ಲೆ ಅವರ ಅಧೀನವಾಯಿತು. ಮೊದಲ ಅರಸನಾದ ಪುಲಕೇಶಿಯ ಒಂದು ಶಾಸನ ಅಮ್ಮಿನಭಾವಿಯಲ್ಲಿ ದೊರೆತಿರುವುದಾಗಿ ಹೇಳಲಾಗಿದೆ. ಆದರೆ ಆ ಶಾಸನದ ಪ್ರತಿಯಾಗಿ ಶಾಸನವನ್ನು ಕೆತ್ತಿದ ಕಲ್ಲಾಗಲಿ ಶಾಸನದ ಸರಿಯಾದ ಪಾಠವಾಗಲಿ ಇದುವರೆಗೆ ಲಭಿಸಿಲ್ಲ. ಅದರ ಕಾಲ 564 ಎನ್ನಲಾಗಿದೆ. ಆದರೆ ಇಮ್ಮಡಿ ಪುಲಕೇಶಿಯವು ಎನ್ನಲಾದ ಕೆಲವು ಶಾಸನಗಳು ಇಲ್ಲಿ ಲಭಿಸಿವೆ. ರಾಣಿಬೆನ್ನೂರು ತಾಲ್ಲೂಕಿನ ಹಿರೇಬದರಿ ಶಾಸನ ಸತ್ಯಾಶ್ರಯನ ಆಳ್ವಿಕೆಗೆ ಸೇರಿದ್ದು. ಇದರಲ್ಲಿ ಗುಪ್ತರ ವಂಶದ ಮಾರಕೋನನೆಂಬಾತ ಮಾಡಿದ ದಾನದ ಪ್ರಸ್ತಾಪವಿದೆ. ಶಾಸನಗಳಲ್ಲಿ ಕಾಲ ಸೂಚಿತವಾಗಿಲ್ಲ. ಆದರೆ ಸುಮಾರು 7ನೆಯ ಶತಮಾನಕ್ಕೆ ಸೇರಿದ ಈ ಶಾಸನದ ಸತ್ಯಾಶ್ರಯನನ್ನು ಇಮ್ಮಡಿ ಪುಲಕೇಶಿಯೆಂದು ಗುರುತಿಸಲಾಗಿದೆ. ಲಕ್ಮೇಶ್ವರದಲ್ಲಿ ದೊರೆತ ಸುಮಾರು 10-11ನೆಯ ಶತಮಾನದಲ್ಲಿ ಬರೆಯಲಾದ ಹಲವು ಶಿಲಾಶಾಸನಗಳಲ್ಲಿ ಬಾದಾಮಿಯ ಚಾಳುಕ್ಯರ ಆಳ್ವಿಕೆಯ ಪ್ರಸ್ತಾಪವಿವೆ. ಇವು ಹಿಂದೆ ನೀಡಿದ ತಾಮ್ರಶಾಸನಗಳ ಪ್ರತಿಗಳೆಂದು ಊಹಿಸಲಾಗಿದೆ. ಇಂಥ ಶಾಸನಗಳಲ್ಲಿ ಒಂದು ರಣಪರಾಕ್ರಮ ಮಹಾರಾಜನ ಮಗನಾದ ಎ¾õÉಯಮ್ಮ ಸತ್ಯಾಶ್ರಯನದು. ಈತ ಇಮ್ಮಡಿ ಪುಲಕೇಶಿಯಾಗಿರಬಹುದು. ಲಕ್ಮೇಶ್ವರ, ಅಣ್ಣಿಗೇರಿ, ಕುರ್ತಕೋಟಿ, ದೇವಗೇರಿ, ಗಣಜೂರು, ಸಿಡೇನೂರು, ಸಿರಗುಪ್ಪೆ, ಅಡೂರುಗಳಲ್ಲೂ ಈ ಮನೆತನದ ಅರಸರ ಶಾಸನಗಳು ಲಭಿಸಿವೆ. ಬೆನಕನಕೊಂಡ ಗ್ರಾಮದಲ್ಲಿಯ ವಿಜಯಾದಿತ್ಯನ ಶಾಸನದಲ್ಲಿ ಆತನ ಸಾಮಂತನಾದ ಸಿರಿಸಾಗರನ ಪ್ರಸ್ತಾಪವಿದೆ. ಈತ ಆಳುವ ಮನೆತನಕ್ಕೆ ಸೇರಿದವನೆಂದು ಊಹಿಸಲಾಗಿದೆ. ಈ ಎರಡು ಮನೆತನಗಳ ನಡುವೆ ಮಧುರ ಬಾಂಧವ್ಯವಿತ್ತು.
ಈ ಶಾಸನಗಳಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ಸಾಮಂತ ಮನೆತನ ಸೇಂದ್ರಕರದು. ಬನವಾಸಿ ಪ್ರಾಂತ್ಯದ ನಾಗರಖಂಡ ಪ್ರದೇಶದಲ್ಲಿ ಮೊದಮೊದಲು ಆಳತೊಡಗಿದ ಸೇಂದ್ರಕ ಕುಲದ ಹಲವರು ಬಾದಾಮಿಯ ಚಾಳುಕ್ಯರ ಸಾಮಂತರಾಗಿ ಧಾರವಾಡ ಜಿಲ್ಲೆಯ ಶಾಸನಗಳಲ್ಲಿ ಕಾಣಿಸಿಕೊಂಡಿದ್ದಾರೆ. ಲಕ್ಮೇಶ್ವರದ ಶಾಸನಗಳಲ್ಲಿ ಉಲ್ಲೇಖಿತನಾದ ಎ¾õÉಯಮ್ಮ ಸತ್ಯಾಶ್ರಯನ ಸಾಮಂತ ದುರ್ಗಶಕ್ತಿ. ಇವನು ಸೇಂದ್ರಕ ವಿಜಯಶಕ್ತಿಯ ಮೊಮ್ಮಗ, ಕುಂದಶಕ್ತಿಯ ಮಗ. ಇಮ್ಮಡಿ ಪುಲಕೇಶಿಯ ಸೋದರಮಾವ ಸೇನಾನಂದ ಮಹಾರಾಜ. ಸೇಂದ್ರಕಮನೆತನದ ಈತನ ಸೋದರಿ 1ನೆಯ ಕೀರ್ತಿವರ್ಮನ ಪತ್ನಿ, ವಾಣಸತ್ತಿ (ಶಕ್ತಿ), ಕನ್ನಸಕ್ತಿ, ಭಾನುಶಕ್ತಿ, ಭೀಮಶಕ್ತಿ, ಮಾಧವಸತ್ತಿ ಮುಂತಾದ ಇತರರೂ ಇಲ್ಲಿಯ ಶಾಸನಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ನಡುವಣ ಸಂಬಂಧಗಳು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ.
ಗದಗ ತಾಲ್ಲೂಕಿನ ಬೆಲ್ಹೋಡ್ ಗ್ರಾಮದಲ್ಲಿ ದೊರೆತ ಪ್ರಭೂತವರ್ಷ ಜಗತ್ತುಂಗ (ಇಮ್ಮಡಿ ಅಥವಾ ಮುಮ್ಮಡಿ ಗೋವಿಂದ), ಸಿಡೇನೂರಿನ ದೊರಪ್ಪರಸ ಅಥವಾ ಧ್ರುವ, ಮುಮ್ಮಡಿ ಗೋವಿಂದ, ಅಮೋಘವರ್ಷ ನೃಪತುಂಗ ಮುಂತಾದವರ ಶಾಸನಗಳಿಂದ ರಾಷ್ಟ್ರಕೂಟರ ಆಳ್ವಿಕೆ ಧಾರವಾಡದಲ್ಲಿ ಹಬ್ಬಿತ್ತು ಎಂಬುಂದು ತಿಳಿದುಬರುತ್ತದೆ. ಇವರ ಸಾಮಂತರಾಗಿದ್ದ ಚೆಲ್ಲಕೇತನ ಮನೆತನದ ಹಲವರು ಈ ಜಿಲ್ಲೆಯ ಪ್ರಭುತ್ವವನ್ನು ಪಡೆದಿದ್ದರು. ಇವರಲ್ಲಿ ಎ¾ಕೋರಿ ಮೊದಲಿಗ ; ಅಮೋಘವರ್ಷನ ಸಾಮಂತ. ಈತನ ಮಗ ಕೊಳನೂರಿಧಿಪತಿಯೆನಿಸಿದ ಧೋರ. ಧೋರನಿಗೆ ವಿಜಯಾಂಕಾ ಎಂಬ ಪತ್ನಿಯಲ್ಲಿ ಜನಿಸಿದಾತ ಬಂಕೆಯ ಅಥವಾ ಬಂಕೆಯರಸ. ಬನವಾಸಿ ಪ್ರಾಂತ್ಯಧಿಕಾರಿಯಾದ ಈತ ಅಮೋಘವರ್ಷನ ಬೆನ್ನೆಲುಬಿನಂತಿದ್ದು ರಾಜ್ಯದ ಶತ್ರುಗಳನ್ನು ಸೋಲಿಸುವುದರಲ್ಲಿ ವಿಶಿಷ್ಟ ಪಾತ್ರ ವಹಿಸಿದ. ಈತನಿಗೆ ಕುಂದಟ್ಟೆ ಮತ್ತು ಲೋಕಟೆ ಎಂಬಿಬ್ಬರು ಮಕ್ಕಳು. ಕುಂದಟ್ಟೆ ನಿಡುಗುಂದೆಗೆ 12 ಎಂಬ ಸಣ್ಣ ಭಾಗದ ಅಧಿಕಾರಿಯಾಗಿದ್ದ. ಈತನ ಸೋದರ ಲೋಕಟೆ ಲೋಕಾದಿತ್ಯ-ಇಮ್ಮಡಿ ಕೃಷ್ಣನ ಸಾಮಂತನಾಗಿ ಬನವಾಸಿ ಪನ್ನಿಚ್ರ್ಛಾಸಿರವನ್ನಾಳುತ್ತಿದ್ದು ಹೆಚ್ಚು ಖ್ಯಾತಿ ಪಡೆದ. ಸಿಡೇನುರು, ಬ್ಯಾಡಗಿ ಮುಂತಾದ ಕಡೆಗಳಲ್ಲಿ ಈತನ ಶಾಸನಗಳಿವೆ. 896 ರಿಂದ 904-5ರ ವರೆಗೆ ಈತ ಅಧಿಕಾರದಲ್ಲಿದ್ದ. ಈತನ ಮಕ್ಕಳು ಕಲಿವಿಟ್ಟ, ಧೋರ ಮತ್ತು 2ನೆಯ ಬಂಕೆಯ. ಕಲಿವಿಟ್ಟ ಪುನ್ನವಂತಿ-12ನ್ನು, ಈಗಿನ ಹೊನ್ನತ್ತಿಯ ಸುತ್ತಲ ಗ್ರಾಮಗಳನ್ನು, ಆಳುತ್ತಿದ್ದು ಕೆಲಕಾಲದ ಬಳಿಕ, 912-14ರಲ್ಲಿ, ಬನವಾಸಿ ಪ್ರಾಂತಾಧಿಪತಿಯಾದ. ಈತನ ಕಿರಿಯ ಸೋದರನಿಗೆ ಇಮ್ಮಡಿ ಕಲಿವಿಟ್ಟನೆಂಬೊಬ್ಬ ಮಗನಿದ್ದ. ಆತ 10ನೆಯ ಶತಮಾನದ ಮಧ್ಯಭಾಗದ ವರೆಗೂ ಅಧಿಕಾರದಲ್ಲಿದ್ದ.
ರಾಷ್ಟ್ರಕೂಟರ ಆಳ್ವಿಕೆಯ ವೇಳೆಗೆ ಆಡಳಿತಕ್ಕೆ ಸಂಬಂಧಿಸಿದ ವಿಭಾಗಗಳು ರೂಪುಗೊಂಡು ಹಲವಾರು ಬಾಡಗಳನ್ನು (ಗ್ರಾಮ) ಒಳಗೊಂಡ ಪ್ರಾಂತ್ಯಗಳು ಕಾಣಿಸಿಕೊಳ್ಳತೊಡಗಿದುವು. ಒಂದೊಂದು ವಿಭಾಗದ ಜೊತೆಗೆ ಒಂದೊಂದು ಸಂಖ್ಯೆ ಸೂಚಿತವಾಗಿತ್ತು. ಸಾಮಾನ್ಯವಾಗಿ ಅತಿ ಹಿರಿದಾದ ಪ್ರಾಂತ್ಯಗಳನ್ನು ಹೊರತುಪಡಿಸಿ, ಉಳಿದವುಗಳ ಸಂಖ್ಯೆಗಳು ಆ ವಿಭಾಗಗಳಿಗೆ ಸೇರಿದ ಗ್ರಾಮಗಳ ಸಂಖ್ಯೆಗಳಾಗಿದ್ದುವು ಎಂಬುದನ್ನು ಈಗ ಬಹುಮಟ್ಟಿಗೆ ಒಪ್ಪಲಾಗಿದೆ. ಧಾರವಾಡ ಜಿಲ್ಲೆಯ ಭಾಗಗಳು ಸೇರಿದ್ದ ದೊಡ್ಡ ಪ್ರಾಂತ್ಯ ಬನವಾಸಿ ಪನ್ನಿಚ್ರ್ಛಾಸಿರ. ವರದಾ ಮತ್ತು ತುಂಗಭದ್ರಾ ನದಿಗಳ ನಡುವಣ ಪ್ರದೇಶ- ಈ ಪ್ರಾಂತ್ಯ ಶಿವಮೊಗ್ಗ. ಉತ್ತರ ಕನ್ನಡ ಹಾಗೂ ಧಾರವಾಡ ಜಿಲ್ಲೆಯ ಹಲವಾರು ಭಾಗಗಳನ್ನೊಳಗೊಂಡಿತ್ತು. ಬಾಸವೂರ-140, ಹಾವೇರಿ ತಾಲ್ಲೂಕಿನ ಭಾಗಗಳನ್ನೊಳಗೊಂಡ ಪ್ರದೇಶ. ಬೆಳುಹುಗೆ-70 ಗುತ್ತವೋಳಲು, ನೀರಲಗಿ ಮುಂತಾದ ಗ್ರಾಮಗಳನ್ನುಳ್ಳ ಅದೇ ತಾಲ್ಲೂಕಿನ ಭಾಗ. ಬೆಣ್ಣಿವುರ-12 ರಾಣಿಬೆನ್ನುರು ತಾಲ್ಲುಕಿನ ಮೋಟೆ ಬೆನ್ನೂರು ಗ್ರಾಮದ ಸುತ್ತಲ ಪ್ರದೇಶ. ಚಿಂಚಿಲ-50 ಮುಖ್ಯ ಗ್ರಾಮ ಗದಗ ತಾಲ್ಲೂಕಿನ ಚಿಂಚಲಿ, ಹಿಚಗೆನಾಡು ಹಾವೇರಿ ತಾಲ್ಲೂಕಿನ ಹಿರಿಯ ಕಿತ್ತೂರು ಮತ್ತು ಇಚ್ಚಂಗಿಗಳನ್ನೊಳಗೊಂಡ ಭಾಗ. ರಾಣಿ ಬೆನ್ನೂರಿನ ಇಟ್ಟಗೆ, ಹಿರೆಕೆರೂರಿನ ರಟ್ಟಹಳ್ಳಿ ಗ್ರಾಮಗಳು ಕ್ರಮವಾಗಿ ಇಟ್ಟಗೆ -30 ಮತ್ತು ರಟ್ಟಪಳ್ಳಿ-70 ಭಾಗಗಳನ್ನೊಳಗೊಂಡು ಒಟ್ಟಾಗಿ ನೂ¾ುಂಬಾಡದೆನಿಸಿಕೊಂಡಿತ್ತು. ಕಾಗಿನೆಲೆ-12 ಹಿರಿಕೆರೂರು ತಾಲ್ಲೂಕಿನ ಕಾಗಿನೆಲ್ಲಿ ಗ್ರಾಮದ ಸುತ್ತಲಿನ ಪ್ರಾಂತ್ಯ. ಕೊಳನೂರು-30 ಮುಖ್ಯ ಗ್ರಾಮ ನವಲಗುಂದ ತಾಲ್ಲೂಕಿನ ಕೊಣ್ಣೂರು, ಪಾನುಂಗಲ್ಲು-500, ಬೆಳ್ವೊಲ-300, ಪುಲಿಗೆರೆ-300 (ಇವೆರಡೂ ಸೇರಿದಂತೆ ಎರಡ¾ನೂ¾) ಇವು ಜಿಲ್ಲೆಯ ಬಹುಭಾಗದಲ್ಲಿ ಹಬ್ಬಿದ ಪ್ರಾಂತ್ಯಗಳು, ಹಾನಗಲ್ಲು, ಲೊಕ್ಕಿಗುಂಡಿ, ಲಕ್ಮೇಶ್ವರಗಳು ಇವುಗಳ ಪ್ರಮುಖ ಕೇಂದ್ರಗಳು. ಹಿರೇಕೆರೂರು ತಾಲ್ಲೂಕಿನ ಸಾತೇನಹಳ್ಳಿ ಹಿಂದೆ ಸತ್ತಳಿಗೆಯಾಗಿದ್ದಂತೆ ತೋರುತ್ತದೆ. ಮೊದಲು ಸತ್ತಳಿಗೆ-70 ಎನಿಸಿದ್ದ ಈ ಪ್ರದೇಶ ಕ್ರಮೇಣ ಸತ್ತಳಿಗೆ ಸಾಯಿರವೆನಿಸಿಕೊಂಡು ವಿಸ್ತಾರವಾದ ಪ್ರಾಂತ್ಯವಾಯಿತು. ಧಾರವಾಡದ ಸಮೀಪದ ಗ್ರಾಮವಾದ ನರೇಂದ್ರ ಕುಂದೂರು-500ರ ಒಂದು ಕೇಂದ್ರ. ನರಯಂಗಲ್ಲು-12 ಈಗಿನ ರೋಣ ತಾಲ್ಲೂಕಿನ ಭಾಗ. ಈ ಪ್ರಾಂತ್ಯಗಳಲ್ಲಿ ಸಣ್ಣ ದೊಡ್ಡ ಸಾಮಂತರು ಮಂಡಲೇಶ್ವರರು ಕ್ರಮೇಣ ವಂಶಪಾರಂಪರ್ಯವಾಗಿ ಹಲವಾರು ಭಾಗಗಳನ್ನು ಆಳತೊಡಗಿದರು.
ಇಮ್ಮಡಿ ತೈಲಪ ಚಾಳುಕ್ಯ ರಾಜ್ಯವನ್ನು ಪುನಃ ಪ್ರತಿಷ್ಠಾಪಿಸಿದಾಗ ಇಲ್ಲಿಯ ಹಲವಾರು ಮಾಂಡಲಿಕರು ಆತನ ಅಧೀನತೆಯನ್ನು ಒಪ್ಪಿಕೊಂಡು ತಮ್ಮ ತಮ್ಮ ಪ್ರಾಂತ್ಯಗಳಲ್ಲಿ ಅಧಿಕಾರದಲ್ಲಿ ಮುಂದುವರಿದರು. 10,12 ನೆಯ ಶತಮಾನಗಳಲ್ಲಿಯ ಇಂತಹ ಸಾಮಂತರಲ್ಲಿ ಹಲವರನ್ನು ಇಲ್ಲಿ ಉಲ್ಲೇಖಿಸಬಹುದು. ಸಗರಮಾರ್ತಂಡ, ಸಿಂಹಲಾಂಚ್ಛನ ಇತ್ಯಾದಿ ಬಿರುದಾಂಕಿತರಾದ ಮಣಲೆರ ವಂಶದವರು ಪುಲಿಗೆರೆ 500 ರ ಪ್ರದೇಶದಲ್ಲಿ ಮಹಾಸಾಮಂತರಾಗಿ ಮಹಾಮಂಡಲೇಶ್ವರರಾಗಿ ಮೆರೆದರು. ಇವರಲ್ಲಿ 1 ನೆಯ ಜಯಕೇಶಿ ಮೊದಲು ಕಾಣಿಸಿಕೊಳ್ಳುವ ಸಾಮಂತ. ಈತ ಚಾಳುಕ್ಯ ಇಮ್ಮಡಿ ಜಯಸಿಂಹನ ರಾಷ್ಟ್ರಕೂಟಕನಾಗಿದ್ದ. ಈತನ ಮಗ ಇಂದ್ರಕೇಶಿಯರಸನಿಗೆ ಇಮ್ಮಡಿ ಜಯಕೇಶಿ ಹಾಗೂ ಮಾರಸಿಂಹ ಎಂಬಿಬ್ಬರು ಮಕ್ಕಳು. ಇಮ್ಮಡಿ ಜಯಕೇಶಿಯ ಮಗನಾದ ವಜ್ರದಂತ ಕದಂಬ ಕುಲದ ಮಾದಲದೇವಿಯನ್ನು ಮದುವೆಯಾಗಿದ್ದ. ಈತನ ಮಗ ಮುಮ್ಮಡಿ ಜಯಕೇಶಿ ಸುಮಾರು 1155ರ ವರೆಗೂ ಆಳುತ್ತಿದ್ದ. ಈತ ಚಾಳುಕ್ಯ ಭೂಲೋಕಮಲ್ಲ, ಇಮ್ಮಡಿ ಜಗದೇಕಮಲ್ಲ ಹಾಗೂ ಮುಮ್ಮಡಿ ತೈಲಪರ ಸಾಮಂತನಾಗಿದ್ದ.
ಇಂತಹುದೇ ಇನ್ನೊಂದು ಸಾಮಂತ ಮನೆತನ ಗುತ್ತವೊಳಲಿನ ಗುತ್ತರದು. ಗುತ್ತವೊಳಲು ಹಾವೇರಿ ತಾಲ್ಲೂಕಿನ ಗುತ್ತಲ. ಈ ಮನೆತನದ ಮೊದಲ ಮಾಂಡಲಿಕ ಮಲ್ಲಿದೇವ. ಈತ ಗುಪ್ತನ ಮಗ ಮಾಗುತ್ತನ ಮೊಮ್ಮಗ. ಈತನ ಹಿರಿಯ ಸೋದರ ಜೋಯಿದೇವ (ಜೋಮ) 1124 ರಲ್ಲಿ ಪೊನ್ನವತ್ತಿ 12 ಬೆಳುಹುಗೆ 70 ಬೆಣ್ಣಿವೂರು 12 ಪ್ರದೇಶಗಳನ್ನು ಗುಪ್ತವೊಳಲ ರಾಜಧಾನಿಯಿಂದ ಆಳುತ್ತಿದ್ದ. ಮಲ್ಲಿದೇವನ ಮಗ ವಿಕ್ರಮಾಧಿತ್ಯ ಇದೇ ವಿಭಾಗಗಳನ್ನು 1162-63 ರಲ್ಲಿ ಆಳುತ್ತಿದ್ದ. ಈತನ ಮೊಮ್ಮಗ. ಇಮ್ಮಡಿ ಗುತ್ತನ ಮಗನಾದ ಇಮ್ಮಡಿ ವಿಕ್ರಮಾದಿತ್ಯ, ಪಾಂಡ್ಯಕುಲದ ಸೋವಲದೇವಿಯನ್ನು ಮದುವೆಯಾಗಿದ್ದ. ಈತನ ಸೋದರಿಯಾದ ವಿಜಯಮಹಾದೇವಿ ಸಾಂತಳಿಮಂಡಲದ ಅಧಿಪತಿಯಾಗಿದ್ದ ಸಿಂಗಿದೇವನ ಪತ್ನಿ. ಇವರಿಗೆ ಜನಿಸಿದ ಬಲ್ಲಾಳ ಇಮ್ಮಡಿ ವಿಕ್ರಮಾದಿತ್ಯನ ಮಗಳಾದ ತುಳುವಲದೇವಿಯನ್ನು ಲಗ್ನವಾಗಿದ್ದ. ಇಮ್ಮಡಿ ವಿಕ್ರಮಾದಿತ್ಯ 1283 ರ ವರೆಗೆ ಅಧಿಕಾರದಲ್ಲಿದ್ದ. ಅನಂತರ ಅಧಿಕಾರಕ್ಕೆ ಬಂದಾತ ಈತನ ಕೊನೆಯ ಪುತ್ರನಾದ ಮುಮ್ಮಡಿ ವಿಕ್ರಮಾದಿತ್ಯ ಈ ಮನೆತನದ ಕೊನೆಯ ಮಾಂಡಲಿಕ ಐವಡಿ ವಿಕ್ರಮಾದಿತ್ಯ. ಈತ 1283 ರ ವರೆಗೂ ಇದ್ದಂತೆ ತೋರುತ್ತದೆ.
ರಟ್ಟವಳ್ಳಿ -70 ಮತ್ತು ಇಟ್ಟಗೆ -50 ಕೂಡಿದ ನೂ¾ುಂಬಾಡವೆಂಬ ವಿಭಾಗದಲ್ಲಿ 12ನೆಯ ಶತಮಾನದಲ್ಲಿ ಪಾಂಡ್ಯಮನೆತನಕ್ಕೆ ಸೇರಿದ ಹಲವು ಮಾಂಡಲಿಕರಿದ್ದರು. ಇವರಲ್ಲಿ ವಿಜಯ ಪಾಂಡ್ಯ (1168) ಕಳಚುರಿ ಸೋವಿದೇವನ ಸಾಮಂತ, ಅನಂತರ ಆಳಿದವನು ಗರುಡ ಪಾಂಡ್ಯ. ಇವರೀರ್ವರ ನಡುವಣ ಸಂಬಂಧ ಸ್ವಷ್ಟವಿಲ್ಲ. ಹೊಯ್ಸಳ ಇಮ್ಮಡಿ ಬಲ್ಲಾಳನ ಸಾಮಂತನಾಗಿದ್ದ ಭುಜಬಳಪಾಂಡ್ಯನನ್ನು ಸುಮಾರು 1185--86ರಲ್ಲಿ ವಿಜಯಪಾಂಡ್ಯನೆಂಬಾತ ಕದನದಲ್ಲಿ ಎದುರಿಸಿದ ವಿಷಯ ತಿಳಿದಿದೆ. ಈ ವಿಜಯಪಾಂಡ್ಯ ಬಹುಶಃ ಗುತ್ತವಂಶದ ಇಮ್ಮಡಿ ವಿಕ್ರಮಾದಿತ್ಯನ ಪತ್ನಿಯಾದ ಸೋವಲದೇವಿಯ ತಂದೆ (?) ಯಾಗಿರಬಹುದು. ಇದೇ ಮನೆತನದ ವೀರಪಾಂಡ್ಯ. ಜಗದೇವಪಾಂಡ್ಯ ಮತ್ತು ಒಡೆಯರಸನ ಮಗನಾದ ವಿಜಯಪಾಂಡ್ಯರು ಶಾಸನದಲ್ಲಿ ಕಾಣಿಸಿಕೊಂಡಿದ್ದಾರೆ.
ಬಾಸವೂರು—140 ವಿಭಾಗದಲ್ಲಿ ಸುಮಾರು 1030ರಿಂದ 1130ರ ವರೆಗೆ ಖಚರ ಕುಲಕ್ಕೆ ಸೇರಿದ ಜೀಮೂತವಾಹನಾನ್ವಯಪ್ರಸೂತರೆನಿಸಿಕೊಂಡ ಕೆಲವರು ಅಧಿಕಾರದಲ್ಲಿದ್ದರು. ಸುಮಾರು 13 ಜನ ಮಾಂಡಲಿಕರ ಹೆಸರುಗಳು ದೊರಕಿದ್ದರೂ ಅವರ ಪರಸ್ಪರ ಸಂಬಂಧಗಳು ತಿಳಿದುಬಂದಿಲ್ಲವಾಗಿ ಅವರ ವಂಶಾವಳಿಯ ಸ್ಪಷ್ಟ ಚಿತ್ರ ಮೂಡಿಲ್ಲ. ಅವರಲ್ಲಿ ಮೊದಲಿಗ ಕಲಿಯಮ್ಮರಸ. ಈತನ 1034 ಹಾಗೂ 1045ರ ಶಾಸನಗಳು ದೊರಕಿವೆ. ನೆಲ್ಲಿಯಮ್ಮರಸ, ರಾಜಾದಿತ್ಯ, ಹೆಮ್ಮಾಡಿ, ತೈಲ, ಮಾಚಿದೇವರಸ, ಮಲ್ಲಿದೇವರಸ— ಇವರು ಈ ಕುಲದ ಇನ್ನು ಕೆಲವರು,
ಬನವಾಸಿಯಲ್ಲಿ ಆಳಿದ ಕದಂಬ ಕುಲಕ್ಕೆ ಸೇರಿದ ಹಲವಾರು ಅನಂತರ ಸಾಮಂತ ಪದವಿಯಲ್ಲಿ ಅಲ್ಲಲ್ಲಿ ಆಳುತ್ತಿದ್ದರು. ಅವರಲ್ಲಿ ಹಾನಗಲ್ಲಿನ, ಗೋವೆಯ, ನೂ¿ುಬಾಡದ ಕದಂಬರು ಧಾರವಾಡ ಜಿಲ್ಲೆಯಲ್ಲಿ ಅಧಿಕಾರದಲ್ಲಿದ್ದರು. ನೂ¿ುಂಬಾಡದಲ್ಲಿ ಪಾಂಡ್ಯರಿಗೆ ಮೊದಲು ಕದಂಬರು ಆಳಿದರು. ಶಾಸನಗಳಲ್ಲಿ ಇವರನ್ನು ಕಡಂಬರೆಂದು ಕರೆಯಲಾಗಿದೆ. ಇವರಲ್ಲಿ ಈ ವರೆಗೆ ತಿಳಿದಂತೆ ಮೊದಲ ಮಾಂಡಲಿಕ ಬೀರದೇವ, ಚಾಳುಕ್ಯ ಇಮ್ಮಡಿ ಜಯಸಿಂಹ ಇವನನ್ನು ಈ ಸ್ಥಾನದಲ್ಲಿ ಸ್ಥಾಪಿಸಿದ, ಬೀರದೇವನ ಅನಂತರ ಆತನ ತಮ್ಮ ಕೇತರಸನೂ ಅನಂತರ ಆತನ ವಂಶಜರೂ ಅಧಿಕಾರದಲ್ಲಿ ಮುಂದುವರಿದರು. ಇವರಲ್ಲಿ ಇಮ್ಮಡಿ ಕೇತರಸನ ಮಗನಾದ ಇಮ್ಮಡಿ ಬೀರದೇವ ಗುತ್ತವಂಶದ ಬಾಚಲದೇವಿಯನ್ನು ಲಗ್ನವಾದ. ಇವರ ಮಗ ಮುಮ್ಮಡಿ ಕೇತರಸನೂ ಅದೇ ಗುತ್ತವಂಶದ ಲಳಿಯಾದೇವಿಯನ್ನು ಮದುವೆಯಾದ. ಅಲ್ಲದೆ ಸಿಂದ ಕುಲದ ಕಂಚಲದೇವಿ ಈತನ ಇನ್ನೊಬ್ಬಳು ಪತ್ನಿ. ಮುಮ್ಮಡಿ ಕೇತರಸನಿಗೆ ಗರುಡಪಾಂಡ್ಯ ಮತ್ತು ವೀರಪಾಂಡ್ಯರೆಂಬ ಇಬ್ಬರು ಮಕ್ಕಳು. ಇದೇ ನೂ¿ುಂಬಾಡದಲ್ಲಿ 12ನೆಯ ಶತಮಾನದ ಅಂತ್ಯ ಭಾಗದಲ್ಲಿ ಗರುಡಪಾಂಡ್ಯನೊಬ್ಬ ಆಳಿದನೆಂದು ಮೇಲೆ ಹೇಳಿದೆ. ಇವರಿಬ್ಬರೂ ಭಿನ್ನವ್ಯಕ್ತಿಗಳೇ, ಅಲ್ಲವೇ ಎಂಬುದನ್ನು ಸ್ಪಷ್ಟವಾಗಿ ಹೇಳಲಾಗದು.
ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬೆಳಗವತ್ರ್ತಿಯಲ್ಲಿ ಸಿಂದವಂಶದ ಮಾಂಡಲಿಕರು ಆಳುತ್ತಿದ್ದರು. ಅವರ ಆಳ್ವಿಕೆ ಧಾರವಾಡ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಭಾಗಗಳಿಗೂ ಹಬ್ಬಿತ್ತು. ಕರಹಾಟಪುರವರಾಧೀಶ್ವರ, ಮಾಳತೀದೇವೀ ಲಬ್ಧವರಪ್ರಸಾದ ಎಂದೆನಿಸಿಕೊಂಡ ಇವರು ನಾಗರಖಂಡ—70, ಮಾಸೂರು—12, ಕುಂದೂರು—12, ಕೊಳಗನೂರು-70 ಮುಂತಾದ ಭಾಗಗಳ ಮಾಂಡಲಿಕರಾಗಿದ್ದರು. ಪಿರಿಯ ಚಟ್ಟರಸ ಇವರಲ್ಲಿ ಮೊದಲಿಗ, ಈತನೂ ಅನಂತರ ಬಂದ ಅಯ್ಯಣ ಜೋಗರಸರೂ ಚಾಳುಕ್ಯ ಸೋಮೇಶ್ವರನ ಮಾಂಡಲಿಕರಾಗಿದ್ದರು. ಅನಂತರ ಚಟ್ಟರಸ, ಈಶ್ವರದೇವ, ಮಾಚರಸ ಮುಂತಾದವರು ಆಳಿದರು. ಇವರಲ್ಲಿ ಇಮ್ಮಡಿ ಈಶ್ವರದೇವ (1155—85) ಪ್ರಮುಖ. ಈತನ ಅಧೀನಕ್ಕೆ ಹಲವಾರು ಪ್ರಾಂತ್ಯಗಳು ಸೇರಿದ್ದುವು. ಇವುಗಳಲ್ಲಿ ಬನವಸೆನಾಡೊಳಗಣ ಮಾಸವೂರು—12, ಎಡೆವಟ್ಟೆ—70, ಬಳ್ಳವೆ—70, ನರಿಯಳಿಗೆ—40 ಸಾನ್ತಳಿಗೆ ಸಾಯಿರದೊಳಗ ಮಲೆ—10, ಮುದುವರೆ—30 ಧಾರವಾಡ ಜಿಲ್ಲೆಗೆ ಸೇರಿದವು. ಈತನ ರಾಜಧಾನಿ ಹಳ್ಳವುರ (ಹಿರೇಕೆರೂರು ತಾಲ್ಲೂಕಿನ ಹಳ್ಳೂರು). ಚಾಳುಕ್ಯರ ಸಾಮಂತರಾಗಿದ್ದ ಇವರು ಅನಂತರ ಕಳಚುರಿಗಳ ಸಾರ್ವಭೌಮತ್ವವನ್ನು ಒಪ್ಪಬೇಕಾಯಿತು. ಹೊಯ್ಸಳ, ಕಳಚುರಿ, ಸೇವುಣರ ನಡುವೆ ನಡೆದ ಅಂತಃಕಲಹಗಳಲ್ಲಿ ಇವರು ನರಳಿದರು.
ಧಾರವಾಡ ಜಿಲ್ಲೆಯ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದವರು ಹಾನಗಲ್ಲಿನ ಕದಂಬರು. ಚಟ್ಟಯ್ಯ ಈ ಮನೆತನದ ಮೊದಲ ಮಾಂಡಲಿಕ. ರಾಷ್ಟ್ರಕೂಟ ಕಕ್ಕನ ಸಾಮಂತನಾಗಿದ್ದ ಈತ ಅನಂತರ ಚಾಳುಕ್ಯರ ಅಧೀನತೆಯನ್ನೊಪ್ಪಿದ. 1015ರ ವರೆಗೆ ಈತ ಅಧಿಕಾರದಲ್ಲಿದ್ದ. ಬನವಾಸಿ ಪನ್ನಿಚ್ರ್ಛಾಸಿರದ ಅಧಿಪತಿಯಾಗಿದ್ದ ಈತನ ಮಗನಾದ ಜಯಸಿಂಹನ ಮಗ ಶಾಂತಿವರ್ಮ 1075 ಮತ್ತು 1089ರ ಶಾಸನಗಳಲ್ಲಿ ಕಾಣಿಸಿಕೊಂಡಿದ್ದಾನೆ. ಆದರೆ ಈ ಅಂತರದಲ್ಲಿ ಬಂಕಾಪುರದ ಶಾಖೆಗೆ ಸೇರಿದ ಮಯೂರವರ್ಮ ಅಧಿಕಾರ ವಹಿಸಿದ್ದ. ಈತ ಚಾಳುಕ್ಯ ಐವಡಿ ವಿಕ್ರಮಾದಿತ್ಯನ ಸೋದರಿಯಾದ ಅಕ್ಕಾದೇವಿಯನ್ನು ಲಗ್ನವಾಗಿದ್ದ. 1034—35ರಲ್ಲಿ ಮೊದಲ ಬಾರಿಗೆ ಪಾನುಂಗಲ್ಲು—500 ಎಂಬ ವಿಭಾಗದ ಅಧಿಪತಿಯಾಗಿ ಕಾಣಿಸಿಕೊಂಡ ಈತ 1047ರ ವರೆಗೂ ಬದುಕಿದ್ದ. ಅನಂತರ ಈತನ ಮಗ ತೋಯಿಮದೇವ ಅಧಿಕಾರಕ್ಕೆ ಬಂದ. ಮಯೂರವರ್ಮನ ತಂದೆ ಅರಿಕೇಸರಿ. ತೋಯಿಮನ ಇನ್ನೊಬ್ಬ ಸೋದರ ಹರಿಕನ್ತ (ಅರಿಕೇಸರಿ). ಈ ಮೂರು ತಲೆಮಾರಿನವರನ್ನು ಬಂಕಾಪುರದ ಕದಂಬರೆಂದು ಕರೆಯಬಹುದು. ಹಾನಗಲ್ಲಿನ ಕದಂಬರು ಈ ಅವಧಿಯಲ್ಲಿ ತೆರೆಯ ಮರೆಯಲ್ಲಿದ್ದರು.
ಹಾನಗಲ್ಲಿನ ಜಯಸಿಂಹನ ಇನ್ನೊಬ್ಬ ಮಗ ತೈಲ. ಆತನ ಮಗ ಕೀರ್ತಿವರ್ಮ ಚಾಳುಕ್ಯ ಸೋದರರಾದ ಇಮ್ಮಡಿ ಸೋಮೇಶ್ವರ ಮತ್ತು ಆರ್ವಡಿ ವಿಕ್ರಮಾದಿತ್ಯರ ನಡುವಣ ವಿರಸದಲ್ಲಿ ಕಿರಿಯನ ಪಕ್ಷ ವಹಿಸಿ ಹಿರಿಯನ ಕೋಪಕ್ಕೆ ತುತ್ತಾದ. ಅದರ ಪರಿಣಾಮವಾಗಿ ಅಧಿಕಾರ ಕಳೆದುಕೊಂಡ. ಅನಂತರ ಹಾನುಂಗಲ್ಲು ರಾಜ್ಯದ ಆಡಳಿತ ಅವರ ವಂಶಸ್ಥರಲ್ಲಿ ಮುಂದುವರಿಯಿತು. ಶಾಂತಿವರ್ಮನ ಮೊಮ್ಮಕ್ಕಳಾದ ಮಲ್ಲಿಕಾರ್ಜುನ ಮತ್ತು ತೈಲರು ಅರಸರ ಅಂತಃಕಲಹಗಳಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಬೇಕಾಯಿತು. ಕ್ಷೀಣಿಸುತ್ತಿದ್ದ ಚಾಳುಕ್ಯ ಬಲವನ್ನು ವರ್ಧಿಸಲು ಇವರು ಶ್ರಮಿಸಿದರು. ನಿಷ್ಠೆಯಿಂದ ಚಾಳುಕ್ಯರ ಮಾಂಡಲಿಕರಾಗಿ ಹೊಯ್ಸಳರ, ಕಳಚುರಿಗಳ ಸಾರ್ವಭೌಮತ್ವವನ್ನು ನಿರಾಕರಿಸಿದುದರ ಫಲವಾಗಿ ಅವರೊಡನೆ ಕಾದಾಡಬೇಕಾಯಿತು. ಇವರು 13ನೆಯ ಶತಮಾನದ ಮೊದಲ ಎರಡು ದಶಕಗಳ ವರೆಗೂ ಹಾಗೂ ಹೀಗೂ ಅಧಿಕಾರದಲ್ಲಿ ಮುಂದುವರಿದರು.
ಧಾರವಾಡ ಜಿಲ್ಲೆ 10—12ನೆಯ ಶತಮಾನಗಳಲ್ಲಿ ರಾಷ್ಟ್ರಕೂಟರ, ಕಲ್ಯಾಣದ ಚಾಳುಕ್ಯರ ರಾಜ್ಯಗಳ ಭಾಗವಾಗಿತ್ತು. ಅವರ ಸಾಮಂತರು ಈ ಪ್ರದೇಶದಲ್ಲಿ ಮಾಂಡಲಿಕರಾಗಿ ಆಳಿದರೂ ಅವರ ಚಟುವಟಿಕೆಗಳೆಲ್ಲ ಸಾರ್ವಭೌಮರಿಂದ ನಿರ್ದೇಶಿಸಲ್ಪಟ್ಟಿದ್ದುವು. ಆದರೆ ಕೆಲವು ಭಾಗಗಳು ಮಾತ್ರ ಈ ಅರಸರ ನೇರವಾದ ಆಳ್ವಿಕೆಗೆ ಒಳಪಟ್ಟಿದ್ದುವು. ರಾಷ್ಟ್ರಕೂಟ ಮುಮ್ಮಡಿ ಕೃಷ್ಣನ ಮೊಮ್ಮಗನಾದ ನಾಲ್ವಡಿ ಇಂದ್ರನನ್ನು ರಾಜ್ಯದಲ್ಲಿ ಪ್ರತಿಷ್ಠಾಪಿಸಲು ಗಂಗವಂಶದ ಇಮ್ಮಡಿ ಮಾರಸಿಂಹ ಯತ್ನಿಸಿದ. ಬಂಕಾಪುರದಲ್ಲಿ ಸಾಂಪ್ರದಾಯಿಕವಾಗಿ ಇಂದ್ರನ ಪಟ್ಟಾಭಿಷೇಕವನ್ನು ನೆರವೇರಿಸಿದನಾದರೂ ಆತನ ಉದ್ದೇಶ ಫಲಿಸಲಿಲ್ಲ. ಇಮ್ಮಡಿ ತೈಲ ಚಾಳುಕ್ಯ ರಾಜ್ಯವನ್ನು ಮತ್ತೊಮ್ಮೆ ಸ್ಥಾಪಿಸಿದ. ಆ ಬಳಿಕ ಧಾರವಾಡ ಜಿಲ್ಲೆಯ ಬೆಳ್ವೊಲ—ಪುಲಗೆರೆ ಪ್ರಾಂತ್ಯಗಳು ಪ್ರಾಮುಖ್ಯ ಪಡೆದುವು. ತನಗೆ ನಿಷ್ಠಾವಂತರಾಗಿದ್ದ ಶೋಭನರಸ ಮುಂತಾದ ಅಧಿಕಾರಿಗಳನ್ನು ಅವನು ಈ ಪ್ರಾಂತ್ಯಗಳ ಅಧಿಕಾರಿಗಳಾಗಿ ನೇಮಿಸಿದ. ಕ್ರಮೇಣ ಈ ಪ್ರಾಂತ್ಯ ಯುವ ರಾಜನ ಅಧಿಕಾರಕ್ಕೊಳಪಟ್ಟ ಪ್ರದೇಶವಾಯಿತು. ಆಡಳಿತ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ ಚಾಳುಕ್ಯರು, ಸಾಮಂತರು ಆಳುತ್ತಿದ್ದ ಪ್ರಾಂತ್ಯಗಳಲ್ಲೂ ತಮ್ಮ ಅಧಿಕಾರಿಗಳನ್ನು ನೇಮಿಸಿದರು. ಇದು ಬಹುಶಃ ಆ ಪ್ರದೇಶದ ಶಾಂತಿ ರಕ್ಷಣೆಗಾಗಿ ಮತ್ತು ರಾಜ್ಯಘಾತಕ ಚಟುವಟಿಕೆಗಳನ್ನು ತಡೆಯಲು ಅವರು ಮಾಡಿದ ಏರ್ಪಾಡು. ಧಾರವಾಡ ಜಿಲ್ಲೆ ಒಂದು ದೃಷ್ಟಿಯಲ್ಲಿ ಇವರ ರಾಜ್ಯದ ಪಶ್ಚಿಮ ತುದಿಯಾಯಿತು. ಎಂತಲೇ ಇವರ ಶತ್ರುಗಳಾಗಿದ್ದ ಚೋಳರು ಈ ಭಾಗವನ್ನು ಮುತ್ತುತ್ತಿದ್ದರು. ಚೋಳರು ಒಂದೆರಡು ಬಾರಿ ಹೀಗೆ ದಾಳಿ ಮಾಡಿದ ಸಂದರ್ಭಗಳಲ್ಲಿ ಇಲ್ಲಿಯ ದೇವಾಲಯಗಳನ್ನು ಹಾಳುಗೆಡವಿ, ಪ್ರಜೆಗಳಲ್ಲಿ ಭೀತಿಯನ್ನು ಮೂಡಿಸಿ, ಈ ಪ್ರದೇಶದ ಶಾಂತಿಗೆ ಭಂಗ ತಂದಿದ್ದರು. ಆದರೆ ಇಲ್ಲಿಯ ಸಾಮಂತರೂ ಅಧಿಕಾರವರ್ಗದವರೂ ಪ್ರಜೆಗಳೂ ತ್ವರಿತವಾಗಿಯೇ ಚೇತರಿಸಿಕೊಂಡರು. ಲೊಕ್ಕಿಗುಂಡಿಯಲ್ಲಿ (ಈಗಿನ ಲಕ್ಕುಂಡಿ ) ಒಂದು ಟಂಕಶಾಲೆ ಇತ್ತು. ಇಲ್ಲಿ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನು ಅಚ್ಚುಹಾಕಲಾಗುತ್ತಿತ್ತು.
ಆರ್ವಡಿ ವಿಕ್ರಮಾದಿತ್ಯ ತನ್ನ ಅಣ್ಣ ಸೋಮೇಶ್ವರನನ್ನು ಹೊರದೂಡಲು ಯತ್ನಿಸಿದ ಸಂದರ್ಭದಲ್ಲಿ ಅವನು ಬನವಾಸಿ ಪ್ರಾಂತ್ಯದಲ್ಲಿ ಆಶ್ರಯ ಪಡೆದ. ಧಾರವಾಡ ಜಿಲ್ಲೆಯ ಹಲವಾರು ಸಾಮಂತರು ಅವನನ್ನು ಬೆಂಬಲಿಸಿದರು. ಅವನು ಸ್ವತಃ ಅರಸನಾದ ಮೇಲೆ ತನ್ನ ಕಿರಿಯ ಸೋದರನಾದ ಜಯಸಿಂಹನನ್ನು ಈ ಪ್ರಾಂತ್ಯಗಳಿಗೆ ಅಧಿಪತಿಯಾಗಿ ನೇಮಿಸಿದ. ಆದರೆ ಆತ ಅಣ್ಣನ ಮಾರ್ಗವನ್ನನುಸರಿಸಿ ದಂಗೆ ಎದ್ದಾಗ ಅವನನ್ನು ಹತ್ತಿಕ್ಕಿದ. ಧಾರವಾಡ ಜಿಲ್ಲೆಯ ಸಾಮಂತರು ಚಾಳುಕ್ಯರಿಗೆ ನಿಷ್ಠೆ ತೋರಿಸಿದರು. ಚಾಳುಕ್ಯರಾಜ್ಯ ಅವನತಿ ಹೊಂದಿದಾಗ ತಲೆ ಎತ್ತಿದ ಕಳಚುರಿ, ಸೇಉಣ ಹಾಗೂ ಹೊಯ್ಸಳ ಅರಸರು ಈ ಪ್ರದೇಶ ಬೆಂಬಲ ಪಡೆಯಲು ಹಾತೊರೆದರು. ಒಂದು ವಿಧದಲ್ಲಿ ಕಳಚುರಿ ಬಿಜ್ಜಳ ಈ ಭಾಗದಲ್ಲಿದ್ದು ತನ್ನ ಬಲವನ್ನು ವೃದ್ಧಿಪಡಿಸಿಕೊಂಡು ಚಾಳುಕ್ಯ ಮುಮ್ಮಡಿ ತೈಲನನ್ನು ಕೊಂದು ಕಲ್ಯಾಣವನ್ನು ಆಕ್ರಮಿಸಿದ. ಆ ಸಂದರ್ಭದಲ್ಲಿ ಚಾಳುಕ್ಯ ರಾಜಕುಮಾರ ಮುಮ್ಮಡಿ ಜಗದೇಕಮಲ್ಲ. ಇಮ್ಮಡಿ ಭೂಲೋಕಮಲ್ಲ, ನಾಲ್ವಡಿ ಸೋಮೇಶ್ವರ--ಇವರಿಗೆ ಈ ಜಿಲ್ಲೆಯ ಸಾಮಂತರು ಆಶ್ರಯ ನೀಡಿದರು. ಲಕ್ಕುಂಡಿ, ಅಣ್ಣಿಗೆರೆಗಳು ಈ ಅರಸರ ಉಪರಾಜಧಾನಿಗಳಾಗಿದ್ದುವು.
ಕಲ್ಯಾಣದ ಚಾಳುಕ್ಯರ ಅನಂತರ ಈ ಪ್ರದೇಶದ ಸಾರ್ವಭೌಮತ್ವಕಾಗಿ ಅದುವರೆಗೂ ಸಾಮಂತರಾಗಿದ್ದ ಕಳಚುರಿ, ಹೊಯ್ಸಳ ಮತ್ತು ಸೇಉಣರ ನಡುವೆ ಜಗಳಗಳಾದುವು. ಆರಂಭದಲ್ಲಿ ಕಳಚುರಿ ಬಿಜ್ಜಳನಿಗೆ ಇಲ್ಲಿಯ ಕೆಲವರು ಮಾಂಡಲಿಕರು ಬೆಂಬಲ ನೀಡಿದರು. ಆದರೆ ಕಳಚುರಿಗಳು ಎರಡು ದಶಕಗಳ ಕಾಲವಷ್ಟೆ ಆಳಿದರು, ಆ ಬಳಿಕ ಹೊಯ್ಸಳರೂ ಸೇಉಣರೂ ಪ್ರತಿಸ್ಪರ್ಧಿಗಳಾದರು. ಹೊಯ್ಸಳ ಇಮ್ಮಡಿ ಬಲ್ಲಾಳ ಉತ್ತರದ ಮಲಪ್ರಭೆಯಿಂದ ತುಂಗಭದ್ರೆಯ ವರೆಗೂ ಆಕ್ರಮಿಸಿದ್ದ ಸೇಉಣ ಭಿಲ್ಲಮನನ್ನು ಬೆನ್ನಟ್ಟಿ ಹೊರದೂಡಿದ. ಈ ಪ್ರದೇಶದಲ್ಲಿ ಕೆಲವು ವರ್ಷಗಳ ಕಾಲ ಲಕ್ಕುಂಡಿ ಇವನ ರಾಜಧಾನಿಯಾಯಿತು. ಆದರೆ ಸೇಉಣ ಇಮ್ಮಡಿ ಸಿಂಘನ ಆಳತೊಡಗಿದಾಗ ಈ ಭಾಗದ ಮೇಲೆ ದಂಡೆತ್ತಿ ಹೊಯ್ಸಳರನ್ನು ಹಿಂದಕ್ಕೆ ದೂಡಿದ. ಧಾರವಾಡ ಜಿಲ್ಲೆ ಅವನ ಅಧೀನಕ್ಕೂ ಸ್ವಲ್ಪ ಕಾಲ ಒಳಪಟ್ಟಿತ್ತು.
14ನೆಯ ಶತಮಾನದ ಮಧ್ಯಭಾಗದಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದಾಗ ಮತ್ತೊಮ್ಮೆ ಧಾರವಾಡ ಜಿಲ್ಲೆಗಾಗಿ ಸ್ಪರ್ಧೆಗಳೇರ್ಪಟ್ಟುವು. ಪಶ್ಚಿಮತೀರಕ್ಕೆ ಹೋಗಲು ಈ ಜಿಲ್ಲೆ ಒಂದು ದ್ವಾರದಂತಿದ್ದ ಕಾರಣ ಅದೇ ಸಮಯಕ್ಕೆ ತಲೆ ಎತ್ತಿದ ಬಹುಮನಿಯ ಸುಲ್ತಾನರು ತೀರಪ್ರದೇಶದಲ್ಲಿ ತಮ್ಮ ಸಾರ್ವಭೌಮತ್ವನ್ನು ಸ್ಥಾಪಿಸಿ, ಅರಬ್ ವರ್ತಕರ ಮೂಲಕ ವ್ಯಾಪಾರ ಸಂಬಂಧಗಳನ್ನು ಬಲಪಡಿಸಿಕೊಳ್ಳಬಯಸಿದ್ದು ಇದಕ್ಕೊಂದು ಕಾರಣ. ವಿಜಯನಗರದ ಅರಸರ ಸುಮಾರು 60—70 ಶಾಸನಗಳು ಈ ಜಿಲ್ಲೆಯಲ್ಲಿ ದೊರೆತಿವೆ. ಇಮ್ಮಡಿ ಹರಿಹರನ, ದೇವರಾಯನ ಶಾಸನಗಳು ಇಲ್ಲಿವೆ. ದೇವರಾಯನ 1412ನೆಯ ವರ್ಷದ ಲಕ್ಮೇಶ್ವರದ ಶಾಸನದಲ್ಲಿ ಅಲ್ಲಿಯ ಜೈನಬಸ್ತಿ ಹಾಗೂ ಸೋಮೇಶ್ವರ ದೇವಾಲಯಗಳ ಆಚಾರ್ಯರ ನಡುವೆ ದೇವಾಲಯಗಳ ಆಸ್ತಿಗೆ ಸಂಬಂಧಿಸಿದಂತೆ ಇದ್ದ ವಿವಾದವನ್ನು ಪರಿಹರಿಸಲು ಮಹಾಪ್ರಧಾನ ನಾಗಣ್ಣದಣ್ಣಾಯಕ ಕೈಗೊಂಡ ಏರ್ಪಾಡನ್ನು ವಿವರಿಸಿದೆ. ವಿಜಯನಗರ ಹಾಗೂ ಬಹಮನಿ ಅರಸರ ನಡುವೆ ಕದನಗಳು ಆರಂಭವಾದಾಗ ಧಾರವಾಡ ಜಿಲ್ಲೆಗೆ ಅದರ ಬೇಗೆ ತಟ್ಟಿತು. ಬಂಕಾಪುರದ ಕೋಟೆಯನ್ನು ಫಿರೋಜ್ ಶಾಹ ಎಂಬ ಬಹಮನಿಯ ಸೇನಾನಿ ಮುತ್ತಿದ್ದ. ದೇವರಾಯನನ್ನು ಬಹಮನಿಯ ಸುಲ್ತಾನ ಸೋಲಿಸಿ ಸುತ್ತಲಿನ ಪ್ರದೇಶವನ್ನು ಕೊಳ್ಳೆಹೊಡೆದನೆಂದೆಲ್ಲ ಫರಿಷ್ತಾ (1550? —?1626) ಹೇಳಿದ್ದಾನಾದರೂ ಅವೆಲ್ಲ ಉತ್ಪ್ರೇಕ್ಷೆಗಳು. ದೇವರಾಯನ ಕಾಲದಲ್ಲಿ ರಾಜಧಾನಿಯಲ್ಲಿ ನಡೆಸಲಾದ ವಸಂತೋತ್ಸವಕ್ಕೆ ಭುಜಂಗನಗರ, ಲಕ್ಷ್ಮಣೇಶ್ವರ, ಡಂಬಳ ಪ್ರದೇಶಗಳ ಸಾಮಂತರು ಬಂದಿದ್ದರೆಂದು ಹೇಳಿದೆ. ಈ ಸ್ಥಳಗಳು ಕ್ರಮವಾಗಿ ಹಾವನೂರು ಲಕ್ಮೇಶ್ವರ ಮತ್ತು ಡಂಬಳಗಳೆಂದು ಗುರುತಿಸಲಾಗಿದೆ.
ಇಮ್ಮಡಿ ಅಲಾ—ಉದ್—ದೀನ್ ಬಹಮನಿ ಸುಲ್ತಾನನಾಗಿದ್ದಾಗ ನವಲಗುಂದ ಅವನ ರಾಜ್ಯದ ಒಂದು ಸರ್ಕಾರ್ ಎನಿಸಿತ್ತು. ಅಲ್ಲಿ ಪ್ರಾಂತ್ಯಾಧಿಪತಿಯಾಗಿದ್ದ ಆತನ ಭಾವಮೈದ ಜಿಲಾಲ್‍ಖಾನ್ ಅಲಾ--ಉದ್--ದೀನನ ವಿರುದ್ಧ ದಂಗೆ ಎದ್ದ. ಆದರೆ ಮಹಮದ್ ಗವಾನ. ಚಾಣಾಕ್ಷತೆಯಿಂದ ಆ ದಂಗೆಯನ್ನು ಅಡಗಿಸಿದ. ಆಗ ಬಂಕಾಪುರವನ್ನು ಗವಾನ ವಶಪಡಿಸಿಕೊಂಡಿದ್ದನಾದರೂ ಅನಂತರ ಅದು ಮತ್ತೊಮ್ಮೆ ವಿಜಯನಗರದ ಪಾಲಾಯಿತು.
ಬಿಜಾಪುರದಲ್ಲಿ ಯೂಸುಫ್ ಅದಿಲ್ ಷಹ (1479—1510) ಸ್ವತಂತ್ರವಾಗಿ ಆಳತೊಡಗಿದಾಗ ಧಾರವಾಡದ ಬಹಳ ಭಾಗಗಳು ಆತನ ವಶವಾದುವು. ಆದರೂ ಕೃಷ್ಣದೇವರಾಯ ಹಾಗೂ ಅವನ ಅನಂತರದ ಅರಸರ ಕಾಲದಲ್ಲಿ ಜಿಲ್ಲೆಯ ದಕ್ಷಿಣದ ಭಾಗಗಳು ಅವರ ಅಧೀನದಲ್ಲಿದ್ದುದೆನ್ನಬಹುದು. ಅಳಿಯ ರಾಮರಾಯ ಪೋರ್ಚುಗೀಸರೊಂದಿಗೆ ಮಾಡಿಕೊಂಡ ಒಪ್ಪಂದವೊಂದರಲ್ಲಿ ಒಬೆಲಿ--ಹುಬ್ಬಳ್ಳಿಯ ಪ್ರಸ್ತಾಪವಿದೆ.
ಅಹಮದ್‍ನಗರ ಹಾಗೂ ಬಿಜಾಪುರದ ಸುಲ್ತಾನರ ನಡುವಣ ವಿರಸದ ಪರಿಣಾಮವಾಗಿ ಮುರ್ತುಜಾ ನಿಜಾಮ್ ಷಹ ಧಾರವಾಡದ ಕೋಟೆಯನ್ನು ಆದಿಲ್ ಷಹನಿಂದ ಕಸಿದ (1569). ಆದರೆ ಬಳಿಕ ಅವರಲ್ಲಿ ಉಂಟಾದ ಒಪ್ಪಂದದಂತೆ ಆದಿಲ್ ಷಹ ಕರ್ನಾಟಕದಲ್ಲಿ ರಾಜ್ಯ ವಿಸ್ತರಿಸಲು ಸ್ವತಂತ್ರನಾಗಿದ್ದ. 1573ರಲ್ಲಿ ಅದಿಲ್ ಷಹ ಆ ವೇಳೆಗೆ ಸ್ವತಂತ್ರವಾಗಿದ್ದ ಧಾರವಾಡವನ್ನು ಮುತ್ತಿದ. ಆರು ತಿಂಗಳುಗಳ ಹೋರಾಟದ ಅನಂತರ ಕೋಟೆ ಅವನ ವಶವಾಯಿತು. ಅನಂತರದ ಗುರಿ ಬಂಕಾಪುರ. ಅಲ್ಲಿ ವಿಜಯನಗರದ ಅರಸನಾಗಿದ್ದ ವೆಂಕಟಾದ್ರಿಯ ಸಾಮಂತರಲ್ಲೊಬ್ಬನಾಗಿದ್ದ ವೇಳಪರಾಯ ಅಧಿಕಾರದಲ್ಲಿದ್ದ. ಆತ ಅರಸನ ಸಹಾಯ ಯಾಚಿಸಿದ. ಅದು ದೊರಕಲಿಲ್ಲ. ಆದರೂ ಧೈರ್ಯದಿಂದ ಕಾದಿದ. ಆದಿಲ್ ಷಹನ ಸೇನಾನಿಯಾದ ಮುಸ್ತಫಾ ಖಾನ ಮುತ್ತಿಗೆಯನ್ನು ಬಿಗಿಗೊಳಿಸಿದ. ಸುಮಾರು 1,1/2 ವರ್ಷಗಳ ಅನಂತರ ಕೋಟೆ ಅವನ ವಶವಾಯಿತು. (1575) ಆದಿಲ್ ಷಹ ಅಲ್ಲಿಯ ದೇವಾಲಯವನ್ನು ಹಾಳುಗೆಡವಿ ಆ ಸ್ಥಳದಲ್ಲಿ ಮಸೀದಿಯನ್ನು ಕಟ್ಟಿಸತೊಡಗಿದ.
ಅನಂತರದ ಒಂದು ಶತಮಾನಕಾಲ ಧಾರವಾಡ ಜಿಲ್ಲೆ ಬಿಜಾಪುರ ಸುಲ್ತಾನನ ಅಧೀನದಲ್ಲಿತ್ತು. 17ನೆಯ ಶತಮಾನದ ಕೊನೆಯ ಭಾಗದಲ್ಲಿ ಶಿವಾಜಿ ಬಿಜಾಪುರದ ವಿರುದ್ಧ ಸೈನ್ಯಾಚರಣೆ ನಡೆಸಿದಾಗ ಹುಬ್ಬಳ್ಳಿಯಲ್ಲಿ ಅನೇಕ ನೇಕಾರರು ನೆಲೆಸಿದ್ದರು. ಅಲ್ಲಿ ಅನೇಕ ಮಗ್ಗಗಳಲ್ಲಿ ಬಟ್ಟೆಯನ್ನು ನೇಯಲಾಗುತ್ತಿತ್ತು. ಅದೊಂದು ಖ್ಯಾತ ಪಟ್ಟಣವಾಗಿತ್ತು. 1673ರಲ್ಲಿ ಮರಾಠರ ಅಣ್ಣಾಜಿದತ್ತು ಈ ನಗರವನ್ನು ಮುತ್ತಿ ಇಲ್ಲಿಯ ವರ್ತಕರನ್ನು ಸುಲಿಗೆಮಾಡಿದ. ಇಂಗ್ಲಿಷರಿಗೆ ಸೇರಿದ ಕೋಠಿಯೊಂದು ಹುಬ್ಬಳ್ಳಿಯಲ್ಲಿತ್ತು. ಅಲ್ಲಿಯ ಸುಮಾರು 2,773 ಪೌಂಡುಗಳಷ್ಟು ವಸ್ತುಗಳು ನಾಶಮಾಡಲ್ಪಟ್ಟುವೆಂದು ಇಂಗ್ಲಿಷ್ ವರ್ತಕರು ದೂರಿದರು. 1673ರಲ್ಲಿ ಅದಿಲ್ ಷಹನ ಪ್ರತಿನಿಧಿಯಾಗಿ ಬಂಕಾಪುರ ಸರ್ಕಾರದ ರಕ್ಷಣೆಗಾಗಿ ಅಬ್ದುಲ್ ಕರೀಂ ಖಾನ ಸವಣೂರಿನಲ್ಲಿ ಪ್ರತಿಷ್ಠಿಸಲ್ಪಟ್ಟ. ಬಂಕಾಪುರಕ್ಕೆ ಸೇರಿದ 16 ಪರಗಣಗಳಲ್ಲಿ ನಸರಾಬಾದ ಅಥವಾ ಧಾರವಾಡ ಮತ್ತು ಗದಗುಗಳು ಪ್ರಮುಖವಾಗಿದ್ದುವು. 1686ರಲ್ಲಿ ಬಿಜಾಪುರ ಮೊಗಲ್ ಸಾಮ್ರಾಜ್ಯಕ್ಕೆ ಸೇರಿದಾಗ ಈತ ಸವಣೂರನ್ನು ತನ್ನ ಕೇಂದ್ರವನ್ನಾಗಿ ಮಾಡಿಕೊಂಡು ಮೊಗಲರ ಅಧೀನತೆಯನ್ನು ಒಪ್ಪಿ ತನ್ನ ಪ್ರಾಂತ್ಯದ ಕಂದಾಯದ ವಸೂಲಿಗೆಂದು ನವಲಗುಂದ, ಶಿರಹಟ್ಟಿ ಹಾವನೂರು, ಡಂಬಳಗಳಲ್ಲಿ ಹಿಂದೂ ದೇಸಾಹಿಗಳನ್ನು ನೇಮಿಸಿದ.
1719ರಲ್ಲಿ ಮೊಗಲ್ ಚಕ್ರವರ್ತಿಯಿಂದ ಮರಾಠರ ಸಾಹು ಧಾರವಾಡದ ಸರ್ದೇಶಮುಖಿಯನ್ನು ವಸೂಲುಮಾಡುವ ಅಧಿಕಾರವನ್ನೂ ಹಲವಾರು ಪ್ರದೇಶಗಳ ಸ್ವರಾಜ್ಯವನ್ನೂ ಪಡೆದ. ಗದಗು ಈ ಪ್ರದೇಶಗಳಲ್ಲೊಂದಾಗಿತ್ತು. ಆದರೆ ಸವಣೂರು ನವಾಬ ಕ್ರಮೇಣ ಪ್ರಬಲನಾದ. ಮೊಗಲರಿಂದ ಸ್ವತಂತ್ರಗೊಂಡು ನಿಜಾಮನ ಅಧಿಕಾರವನ್ನೊಪ್ಪಿಕೊಂಡಿದ್ದ ಈತ ಕೊನೆಗೆ ನಿಜಾಮನ ಅಧಿಕಾರವನ್ನೂ ಧಿಕ್ಕರಿಸಿದ. ಮರಾಠರು ಇವನ ಮೇಲೆ ದಂಡೆತ್ತಿ ಬಂದರು. ಮರಾಠಾ ಪೇಷ್ವೆಯ ಸೈನ್ಯದ ಎದುರು ಸವಣೂರಿನ ನವಾಬ ಸೋತು ಅಪಾರವಾದ ಹಣವನ್ನು ಮರಾಠರಿಗೆ ತೆರಬೇಕಾಯಿತಲ್ಲದೆ ಅದಕ್ಕೆಂದು ಬಂಕಾಪುರದ ಕೋಟೆಯನ್ನು ಹೋಳ್ಕರನಿಗೆ ಒತ್ತೆಯಾಗಿಟ್ಟ. ಹುಬ್ಬಳ್ಳಿ, ಮಿಶ್ರಿ ಕೋಟೆಗಳನ್ನು ಇವನು ಮೊದಲೇ ಒಪ್ಪಿಸಿದ್ದ. ಧಾರವಾಡ, ನವಲಗುಂದ ಗದಗುಗಳನ್ನು ಮರಾಠರಿಗೆ ಒಪ್ಪಿಸಬೇಕಾಯಿತು. ಇನ್ನೆಲ್ಲ ಮರಾಠರು ದೇಸಾಯಿಗಳನ್ನು ನೇಮಿಸಿ ಅವರ ಮೂಲಕ ಇಲ್ಲಿಯ ಕಂದಾಯವನ್ನು ವಸೂಲು ಮಾಡತೊಡಗಿದರು.
ಮೈಸೂರಿನ ಹೈದರ್ 1763ರಲ್ಲಿ ಸವಣೂರಿನ ನವಾಬನನ್ನು ಸೋಲಿಸಿ ಮುಂದುವರಿದು ಧಾರವಾಡವನ್ನು ಆಕ್ರಮಿಸಿದಾಗ ಮಾಧವ ರಾವ್ ಪೇಷ್ವೆ ಹೈದರನ ವಿರುದ್ಧ ಹೋರಾಡಿದ. ರಟ್ಟೇಹಳ್ಳಿಯಲ್ಲಿ ಹೈದರನ ಸೈನ್ಯ ಸೇರಿತು. ಆದರೆ ಇಬ್ಬರು ಸ್ಪರ್ಧಿಗಳೂ ಚಾಕಚಕ್ಯದಿಂದ ಮುಂದುವರಿದರು. ಅಂತಿಮವಾಗಿ 1765ರಲ್ಲಿ ಹೈದರ್ ಸೋತಾಗ 32 ಲಕ್ಷ ರೂಪಾಯಿಗಳನ್ನು ಪೇಶ್ವೆಗೆ ಕೊಟ್ಟು ಧಾರವಾಡದ ಕೋಟೆಯನ್ನು ಹಿಂದಿರುಗಿಸಬೇಕಾಯಿತು.
ಪೇಶ್ವೆ ಮಾಧರಾಯ ಮರಣ ಹೊಂದಿದ ಬಳಿಕ ಹೈದರ್ ಉತ್ತರ ಕರ್ನಾಟಕದ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಮತ್ತೆ ಯತ್ನಿಸಿದ. ಅವನು 1778 ರಲ್ಲಿ ಮರಾಠರನ್ನು ಸೋಲಿಸಿ ಧಾರವಾಡ, ಬಾದಾಮಿ, ಜಾಲಿಹಾಳಗಳನ್ನು ಆಕ್ರಮಿಸಿ, ನರಗುಂದ, ನವಲಗುಂದ, ಡಂಬಳ, ಶಿರಹಟ್ಟಿಗಳ ದೇಸಾಯರನ್ನು ಅವರವರ ಸ್ಥಾನದಲ್ಲಿ ಮುಂದುವರಿಸಿ ಅವರು ಕಂದಾಯ ಕೊಡುವ ಏರ್ಪಾಡನ್ನು ಮಾಡಿಕೊಂಡ. ಸವಣೂರಿನ ನವಾಬ ಹಕಿಮ್ ಖಾನನ ಮಗಳನ್ನು ತನ್ನ ಎರಡನೆಯ ಮಗನಿಗೆ ತಂದುಕೊಂಡು ತನ್ನ ಮಗಳನ್ನು ಅವರ ಹಿರಿಯ ಮಗನಿಗೆ ಮದುವೆ ಮಾಡಿಕೊಟ್ಟ. ಬಾಂಧವ್ಯವನ್ನು ಬಿಗಿಗೊಳಿಸಲು ಯತ್ನಿಸಿದ. ಟೀಪು ಸುಲ್ತಾನ ಆಡಳಿತ ಸೂತ್ರವನ್ನು ವಹಿಸಿದಾಗ ಇಲ್ಲಿಯ ದೇಸಾಯರು ಹೆಚ್ಚಿನ ಕಪ್ಪಕಾಣಿಕೆಗಳನ್ನೂ ತೆರಿಗೆಗಳನ್ನೂ ಕೊಡಬೇಕೆಂದು ಅವನು ಆಗ್ರಹಮಾಡಿದ. ನರಗುಂದದ ವೆಂಕಟರಾಯ ಈತನ ವಿರುದ್ಧ ದಂಗೆ ಎದ್ದು ಮರಾಠರನ್ನು ಸೇರಿದ. ಟೀಪುವಿನ ವಿರುದ್ಧ ಮರಾಠರೂ ನಿಜಾಮರೂ ಒಂದಾದರು. ಇವರ ನಡುವೆ ಹಲವಾರು ಬಾರಿ ಘರ್ಷಣೆಗಳುಂಟಾಗಿ 1790 ರ ವರೆಗೂ ಯಾವ ನಿಶ್ಚಿತವಾದ ಫಲಿತಾಂಶವೂ ದೊರಕಲಿಲ್ಲ. ಇಂಗ್ಲೀಷ್ ಸೈನ್ಯ ಮರಾಠರ ನೆರವಿಗೆ ಬಂತು. 1790ರಲ್ಲಿ ಟೀಪು ಸೋತು ತುಂಗಭದ್ರೆಯ ದಕ್ಷಿಣಕ್ಕೆ ಸರಿದ. ಮುಂಬಯಿ ಕರ್ನಾಟಕ ಪ್ರದೇಶ ಮರಾಠರಿಗೆ ಸೇರಿತು.
ಇಷ್ಟೆಲ್ಲ ಆದರೂ ಧಾರವಾಡ ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದು ಎಲ್ಲೆಲ್ಲೂ ಸಂಪತ್ತು ಸುಭಿಕ್ಷಗಳಿದ್ದುವೆಂದು ಮೂರ್ ಎಂಬಾತನ ಬರೆಹದಿಂದ ತಿಳಿದುಬರುತ್ತದೆ.
ಧಾರವಾಡದ ಇತಿಹಾಸದಲ್ಲಿ ಮುಂದಿನ ಪ್ರಮುಖ ಘಟನೆ ಧೋಂಡಿಯವಾಘನಿಗೆ ಸಂಬಂಧಿಸಿದ್ದು. ಟೀಪುವಿನ ಸೈನ್ಯದಲ್ಲಿದ್ದ ಈ ಮರಾಠಾ ಯೋಧ ಸಾತಾರಾ ಮತ್ತು ಕೊಲ್ಹಾಪುರದ ಮರಾಠರ ಮನೆತನಗಳ ನಡುವಣ ಅಹಿತಕರ ಸಂಬಂಧವನ್ನು ಉಪಯೋಗಿಸಿಕೊಂಡು ಧಾರವಾಡದಲ್ಲಿ ದಂಗೆ ಎದ್ದ. ಕರ್ನಲ್ ವೆಲ್‍ಸ್ಲಿಯ ಇಂಗ್ಲಿಷ್ ಸೈನ್ಯದ ಮುಂದೆ ಧೋಂಡಿಯ ವಾಘನ ಪ್ರತಿಭಟನೆ ಕುಸಿದುಬಿತ್ತು.
ಇಂಗ್ಲೀಷರಿಗೂ ಮರಾಠರಿಗೂ ಬೇಸಿನ್ ಒಪ್ಪಂದದ ಪ್ರಕಾರ ಸವಣೂರು. ಬಂಕಾಪುರಗಳು ಇಂಗ್ಲೀಷರ ಕೈಸೇರಿದುವು (1802). 1817 ರ ಪುಣೆ ಒಪ್ಪಂದದಂತೆ ಧಾರವಾಡ, ಕುಸುಗಲ್ಲುಗಳೂ ಇವರಿಗೆ ಸೇರಿದುವು. ಈ ಪ್ರದೇಶಕ್ಕೆ ಕರ್ನಲ್ (ಅನಂತರ ಸರ್ ಥಾಮಸ್) ಮನ್ರೋ ಕಮಿಷನರನಾಗಿ ನೇಮಕಗೊಂಡ. ಈತ ಆಂತರಿಕ ಪ್ರತಿಭಟನೆಗಳನ್ನೆಲ್ಲ ಅಡಗಿಸಿ ಇಂಗ್ಲೀಷರ ಆಡಳಿತವನ್ನು ನೆಲೆಗೊಳಿಸಿದ. 1830ರಲ್ಲಿ ಧಾರವಾಡ ಜಿಲ್ಲೆ ರೂಪುಗೊಂಡಿತು. 1857 - 58 ರಲ್ಲಿ ನರಗುಂದದ ಬಾಬಾಸಾಹೇಬನೂ ಮುಂಡರಗಿಯ ಭೀಮರಾಯನೂ ಕೂಡಿ ಬಂಡೆದ್ದರು. ಇವರನ್ನು ಅಡಗಿಸಲು ಹೋದ ವೇಸನನನ್ನು ಸುರೇಬಾನದಲ್ಲಿ ನರಗುಂದದ ಬಾಬಾಸಾಹೇಬ ಕೊಂದ. ಆದರೆ ಇವನನ್ನು ಬೆನ್ನಟ್ಟಿದ ಕರ್ನಲ್ ಮಾಲ್ಕೋಮ್ ಈತನನ್ನು ಸೆರೆಹಿಡಿದು ಬೆಳಗಾಮಿನಲ್ಲಿ ಮರಣದಂಡನೆಗೆ ಗುರಿಪಡಿಸಿದ. ಈ ಮೊದಲೇ ಕೊಪ್ಪಳದಲ್ಲಿ ಮುಂಡರಗಿ ಭೀಮರಾಯ ಹತನಾಗಿದ್ದ. ಇದರೊಂದಿಗೆ ಬಂಡಾಯ ಅಡಗಿತು.
ಅನಂತರ ಭಾರತ ಸ್ವತಂತ್ರವಾಗುವವರೆಗೂ ಧಾರವಾಡ ಜಿಲ್ಲೆ ಮುಂಬಯಿ ಪ್ರಾಂತ್ಯದ ಭಾಗವಾಗಿದ್ದು. ಅನಂತರ ಮುಂಬಯಿ ರಾಜ್ಯದಲ್ಲಿ ಮುಂದುವರಿಯಿತು. 1956 ರಲ್ಲಿ ರಾಜ್ಯಗಳ ಪುನರ್ವಿಂಗಡಣೆಯಾದಾಗ ಇದು ಮೈಸೂರು ರಾಜ್ಯಕ್ಕೆ (ಈಗಿನ ಕರ್ನಾಟಕ) ಸೇರಿತು. (ಜಿ.ಬಿ.ಆರ್.)