ನಂದರು ಮಗಧ ಸಾಮ್ರಾಜ್ಯವನ್ನು ಆಳಿದ ರಾಜರು. ಇವರಿಗೆ ಹಿಂದೆ ಆಳಿದ ದೊರೆ ಮಹಾನಂದಿಗೆ ಶೂದ್ರ ಹೆಂಗಸಿನಲ್ಲಿ ಜನಿಸಿದ ಮಹಾಪದ್ಮಾನಂದ ಇವರಲ್ಲಿ ಮೊದಲಿಗನೆನ್ನಲಾಗಿದೆ. ಈ ವಿಷಯವಾಗಿ ಭಿನ್ನಾಭಿಪ್ರಾಯಗಳಿವೆಯಾದರೂ ಎಲ್ಲ ಗ್ರಂಥಗಳೂ ನಂದರು ಶುದ್ರಕುಲೋತ್ಪನ್ನರೆಂಬ ಬಗ್ಗೆ ಒಮ್ಮತ ಹೊಂದಿವೆ. ಇವರ ಬಗ್ಗೆ ಪುರಾಣಗಳು, ಜೈನ ಹಾಗೂ ಬೌದ್ಧ ಗ್ರಂಥಗಳು ಅನೇಕ ವಿವರಗಳನ್ನು ನೀಡುತ್ತವೆ.
ಮಹಾಪದ್ಮನಂದ ಕ್ರಿ.ಪೂ.ಸು. 362ರಲ್ಲಿ ಪಾಟಲೀಪುತ್ರದಲ್ಲಿ ಸಿಂಹಾಸನವೇರಿದ. ಇವನ ಅನಂತರ ಈತನ ಎಂಟು ಜನ ಮಕ್ಕಳು ಕ್ರಮವಾಗಿ ರಾಜ್ಯವಾಳಿದರು. ಇವರು ನವನಂದರೆಂದೇ ಪ್ರಸಿದ್ಧರಾಗಿದ್ದಾರೆ. ಮಹಾಪದ್ಮನಂದ ಸು.28 ವರ್ಷ ಆಳ್ವಿಕೆ ನಡೆಸಿದಂತೆ ತಿಳಿದುಬರುತ್ತದೆ. ನಂದರ ಆಳ್ವಿಕೆ ಒಟ್ಟು 155 ವರ್ಷಗಳೆಂದು ಜೈನ ಗ್ರಂಥಗಳೂ 100 ವರ್ಷಗಳೆಂದು ಪುರಾಣಗಳೂ ತಿಳಿಸುತ್ತವೆ. ಆದರೆ ತಂದೆಮಕ್ಕಳ ಎರಡು ತಲೆಮಾರುಗಳಿಗೆ ಈ ಅವಧಿ ತೀರ ಹೆಚ್ಚಾದಂತೆ ತೋರುತ್ತದೆ. ಸಿಂಹಳದ ಕೆಲವು ಗ್ರಂಥಗಳಲ್ಲಿ ನಂದರ ಆಳ್ವಿಕೆ ಒಟ್ಟು 40 ವರ್ಷಗಳೆಂದು ಸೂಚಿಸಲಾಗಿದೆ. ಇದೇ ಸತ್ಯಕ್ಕೆ ಸಮೀಪವಾದದ್ದೆಂದು ಇತಿಹಾಸಕಾರರ ಅಭಿಪ್ರಾಯ. ಕ್ರಿ.ಪೂ. 322ರಲ್ಲಿ ಚಂದ್ರಗುಪ್ತ ಮೌರ್ಯ ಚಾಣಕ್ಯನ ಸಹಾಯದಿಂದ ಕೊನೆಯ ನಂದ ದೊರೆ ಧನನಂದನನ್ನು ಸೋಲಿಸಿ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದ.
ನಂದರು ಶೂದ್ರಕುಲೋತ್ಪನ್ನರಾದ್ದರಿಂದ ಅಂದಿನ ಸಮಾಜದಲ್ಲಿ ಅವರಿಗೆ ಹೆಚ್ಚಿನ ಗೌರವ ದೊರೆಯಲಿಲ್ಲ. ಎಂತಲೇ ಅವರು ತಮ್ಮ ಸಾಮ್ರಾಜ್ಯವನ್ನು ಧನ ಮತ್ತು ಸೈನ್ಯಬಲದಿಂದ ಬೆಳೆಸಿದರು. ಸಾಮ್ರಾಜ್ಯದಾಹದ ಹುಚ್ಚಿನಲ್ಲಿ ಪ್ರಜೆಗಳ ಮೇಲೆ ವಿಪರೀತ ಕರಗಳನ್ನು ಹೇರಿದರು. ಅವರ ಸೈನ್ಯಬಲದ ಬಗ್ಗೆ ಅಲೆಗ್ಸಾಂಡರನ ಕಾಲದ ಬರಹಗಳಲ್ಲಿ ಉಲ್ಲೇಖ ಸಿಗುತ್ತದೆ. ಧನನಂದನಲ್ಲಿ 20,000 ಅಶ್ವಗಳು; 2,00,000 ಕಾಲಾಳುಗಳು 2,000 ರಥಗಳು ಮತ್ತು 3,000ಕ್ಕೂ ಹೆಚ್ಚು ಆನೆಗಳಿದ್ದುವೆನ್ನಲಾಗಿದೆ. ಈತನ ಬಲವನ್ನರಿತೇ ಅಲೆಗ್ಸಾಂಡರನ ಸೈನಿಕರು ಬೀಯಾಸ್ ನದಿಯಿಂದ ಮುಂದೆ ನುಗ್ಗಲು ಹೆದರಬೇಕಾಯಿತು. ಹಿಮಾಲಯದಿಂದ ನರ್ಮದೆಯವರೆಗೆ ಮತ್ತು ಬಿಯಾಸ್‍ನಿಂದ ಕಳಿಂಗದವರೆಗೆ ನಂದರ ಸಾಮ್ರಾಜ್ಯ ಹರಡಿತ್ತು. ವಿಶಾಲವಾದ ಸಾಮ್ರಾಜ್ಯದ ಏಕೀಕರಣ, ಆಡಳಿತ ಸುಧಾರಣೆ-ಇವು ನಂದರ ಕೊಡುಗೆಗಳು. ನಂದರ ಕ್ರೂರ ಆಡಳಿತಕ್ಕೆ ಒಳಗಾಗಿದ್ದ ಜನತೆಯ ಅತೃಪ್ತಿಯ ಉಪಯೋಗ ಪಡೆದುಕೊಂಡು ಚಂದ್ರಗುಪ್ತ ಮೌರ್ಯ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿದ. (ಸಿ.ಕೆ.ಎನ್.ಆರ್.)