ನರಗುಂದ - ಕರ್ನಾಟಕ ರಾಜ್ಯದ ಗದಗ ಜಿಲ್ಲೆಯಲ್ಲಿರುವ ಒಂದು ತಾಲ್ಲೂಕು; ಈ ತಾಲ್ಲೂಕಿನ ಮುಖ್ಯಸ್ಥಳ. ತಾಲ್ಲೂಕಿನ ಉತ್ತರ ಪಶ್ಚಿಮಗಳಲ್ಲಿ ಅನುಕ್ರಮವಾಗಿ ಬಿಜಾಪುರ ಮತ್ತು ಬೆಳಗಾಂವಿ ಜಿಲ್ಲೆಗಳೂ ಪೂರ್ವದಲ್ಲಿ ರೋಣ ತಾಲ್ಲೂಕೂ ದಕ್ಷಿಣದಲ್ಲಿ ನವಲಗುಂದ ತಾಲ್ಲೂಕೂ ಇದೆ. ಈ ತಾಲ್ಲೂಕಿನ ಹೋಬಳಿಗಳು ಕೊಣ್ಣೂರು ಮತ್ತು ನರಗುಂದ. ಇಲ್ಲಿ 35 ಗ್ರಾಮಗಳೂ ನರಗುಂದ ಪಟ್ಟಣವೂ ಇದೆ. ವಿಸ್ತೀರ್ಣ 436 ಚ.ಕಿಮೀ. ಜನಸಂಖ್ಯೆ 92,644 (2001). ನರಗುಂದ ಮತ್ತು ಚಿಕ್ಕ ನರಗುಂದ ಬೆಟ್ಟಗಳನ್ನು ಬಿಟ್ಟರೆ ತಾಲ್ಲೂಕಿನ ಉಳಿದ ಭಾಗ ಸಾಮಾನ್ಯವಾಗಿ ಮೈದಾನ. ತಾಲ್ಲೂಕಿನ ಈಶಾನ್ಯದಲ್ಲಿ ಬಿಜಾಪುರ ಧಾರವಾಡ ಜಿಲ್ಲೆಗಳ ಗಡಿಯಾಗಿ ಮಲಪ್ರಭಾ ನದಿ ಹರಿಯುತ್ತದೆ. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 560 ಮಿಮೀ. ಜೋಳ, ಹತ್ತಿ, ಗೋದಿ, ಎಣ್ಣೆಬೀಜಗಳು ಮತ್ತು ಬೇಳೆಕಾಳುಗಳು ಬೆಳೆಯುತ್ತವೆ. ತರಕಾರಿ ಮತ್ತು ತೋಟದ ಬೆಳೆಗಳೂ ಉಂಟು.
ನರಗುಂದ ಪಟ್ಟಣದ ಜನಸಂಖ್ಯೆ 32,548 (2001). ಇದು ತಾಲ್ಲೂಕಿನ ಆಡಳಿತ ಕೇಂದ್ರ, ಧಾರವಾಡ ನಗರಕ್ಕೆ ಈಶಾನ್ಯದಲ್ಲಿ ಸುಮಾರು 50 ಕಿಮೀ. ಮತ್ತು ನವಲಗುಂದದಿಂದ ಉತ್ತರಕ್ಕೆ ಸುಮಾರು 19 ಕಿಮೀ. ದೂರದಲ್ಲಿ ಇದೆ. ಇದು ಹತ್ತಿ, ಸೇಂಗಾ, ಧಾನ್ಯ, ಕಾಳು ಮುಂತಾದವುಗಳ ವ್ಯಾಪಾರಕೇಂದ್ರ. ಶಿರಸಿ, ಹುಬ್ಬಳ್ಳಿ ಮುಂತಾದ ಸ್ಥಳಗಳಿಗೆ ಇಲ್ಲಿಂದ ರಸ್ತೆಗಳಿವೆ.
ನರಗುಂದದಲ್ಲಿ ಶಂಕರಲಿಂಗ, ಮಹಾಬಲೇಶ್ವರ ಮತ್ತು ಹನುಮಂತ ದೇವಾಲಯಗಳಿವೆ. ನರಗುಂದ ಬೆಟ್ಟ ಸುಮಾರು 215 ಮೀ. ಎತ್ತರವಾಗಿದೆ. ಸುಮಾರು 5 ಕಿಮೀ. ಉತ್ತರಕ್ಕಿರುವ ಚಿಕ್ಕನರಗುಂದ ಬೆಟ್ಟ ಸುಮಾರು 61 ಮೀ. ಎತ್ತರವಾಗಿದೆ. ನರಗುಂದ ಬೆಟ್ಟದ ಮೇಲೆ ಜೀರ್ಣವಾದ ಕೋಟೆಯೊಂದಿದೆ. ಇಲ್ಲಿರುವ ವೆಂಕಟೇಶ ದೇವಾಲಯ 1720ರಲ್ಲಿ ನಿರ್ಮಿತವಾದದ್ದು. ನರಗುಂದದಲ್ಲಿ ಚಾಳುಕ್ಯ 3ನೆಯ ಸೋಮೇಶ್ವರ, 2ನೆಯ ಜಗದೇಕಮಲ್ಲ ಮತ್ತು 3ನೆಯ ತೈಲರ ಶಾಸನಗಳಿವೆ. ಆಗ ನರಗುಂದ ಒಂದು ಅಗ್ರಹಾರವಾಗಿತ್ತು. ಇದು 220 ಮಹಾಜನರ ಆಡಳಿತಕ್ಕೆ ಒಳಪಟ್ಟಿತ್ತು. ಇಲ್ಲಿಯ ಕೋಟೆಯನ್ನು ಶಿವಾಜಿ 1674ರಲ್ಲಿ ಕಟ್ಟಿಸಿದ. 1778ರಲ್ಲಿ ಹೈದರನಿಗೆ ನರಗುಂದ ಕಪ್ಪ ನೀಡುತ್ತಿತ್ತು. 1785ರಲ್ಲಿ ನರಗುಂದದ ಕೋಟೆ ಟಿಪ್ಪುವಿಗೆ ವಶವಾಯಿತು. ಮರಾಠಾ ಪೇಶ್ವೆ 1818ರಲ್ಲಿ ದಾದಾಜಿರಾವ್ ಅಪ್ಪನಿಗೆ ನರಗುಂದವನ್ನು ಕೊಟ್ಟ. ದಾದಾಜಿರಾಯನ ವಂಶದ ಬಾಬಾಸಾಹೇಬನಿಗೆ ಮಕ್ಕಳಿರಲಿಲ್ಲವಾದ್ದರಿಂದ ದತ್ತು ಸ್ವೀಕರಿಸಲು ಇಚ್ಛಿಸಿದಾಗ ಬ್ರಿಟಿಷರು ಅದಕ್ಕೆ ಅವಕಾಶ ನೀಡಲಿಲ್ಲ. ಬಾಬಾಸಾಹೇಬ ಇದನ್ನು ಪ್ರತಿಭಟಿಸಿ ಬಂಡೆದ್ದ. ಭಾರತದ 1857ರ ಬಂಡಾಯದಲ್ಲಿ ನರಗುಂದ ಪ್ರಧಾನಪಾತ್ರ ವಹಿಸಿತ್ತು. ಆಗ ಬ್ರಿಟಿಷರು ನಡೆಸಿದ ಆಕ್ರಮಣವನ್ನು ಇಲ್ಲಿಯವರು ಕೆಚ್ಚಿನಿಂದ ಎದುರಿಸಿದರು. 1858ರಲ್ಲಿ ಬ್ರಿಟಿಷರು ಬಾಬಾಸಾಹೇಬನನ್ನು ಮಣಿಸಿ ಕೋಟೆಯನ್ನು ಕೆಡವಿದರು. (ಕೆ.ವಿ.ಆರ್.ಇ.)