ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನರಸಿಂಹಾಚಾರ್ಯ, ಆರ್

ಆರ್.ನರಸಿಂಹಾಚಾರ್ಯ:- 1860-1936, ಕನ್ನಡಕ್ಕೆ ಪುರಸ್ಕಾರವೇ ಇಲ್ಲದಿದ್ದ ಕಾಲದಲ್ಲಿ ಕನ್ನಡ ಭಾಷೆ ಸಾಹಿತ್ಯಗಳ ಅಭಿವೃದ್ಧಿಗಾಗಿ ದುಡಿದ ಮಹನೀಯರಲ್ಲೊಬಪಿರು. ಕರ್ನಾಟಕ ಕವಿಚರಿತ್ರೆಕಾರರು, ಸಂಶೋಧನೆ, ಗ್ರಂಥಸಂಪಾದನೆ ಮುಂತಾದ ಹಲವು ಕ್ಷೇತ್ರಗಳಲ್ಲಿ ಮೌಲಿಕ ಕೆಲಸ ಮಾಡಿದವರು. ಇವರದು ಪಾಂಡಿತ್ಯ ಮನೆತನ. ಶ್ರೀರಂಗಪಟ್ಟಣದ ಮಂಡ್ಯದ ಕೊಪ್ಪಲಿನಲ್ಲಿ 941860ರಲ್ಲಿ ಹುಟ್ಟಿದರು. ತಂದೆ ತಿರುನಾರಾಯಣ ಪೆರುಮಾಳ್, ತಾಯಿ ಶಿಂಗಮ್ಮಾಳ್, ತಂದೆಯಿಂದಲೇ ಇವರಿಗೆ ಸಂಸ್ಕøತದ ಅಭ್ಯಾಸವಾಯಿತು. ತಮಿಳು, ಸಂಸ್ಕøತ, ಕನ್ನಡ ಭಾಷೆಗಳ ಜೊತೆಗೆ ಶಾಲೆಯಲ್ಲಿ ಇಂಗ್ಲಿಷ್ ಭಾಷೆಯ ಪರಿಚಯವೂ ಆಯಿತು. ಅನಂತರ ಇವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. ಪರೀಕ್ಷೆಯಲ್ಲಿ (1882) ಮೊದಲನೆಯ ದರ್ಜೆಯಲ್ಲಿ ಉತ್ತೀರ್ಣರಾಗಿ ಅನೇಕ ಪಾರಿತೋಷಕಗಳನ್ನು ಪಡೆದರು. ಪದವಿ ಪಡೆದ ತರುಣದಲ್ಲಿ ಚಿಕ್ಕಮಗಳೂರು, ಹಾಸನ, ಶಿವಮೊಗ್ಗಗಳಲ್ಲಿ ಪ್ರೌಢಶಾಲೆಯ ಅಧ್ಯಾಪಕರಾಗಿ ಕೆಲಸ ಮಾಡಿದ ಇವರು ಅನಂತರ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾದರು. ಇಲ್ಲಿ ಇವರ ಬಹುಮುಖ ಪ್ರತಿಭೆಯ ವಿಕಾಸಕ್ಕೆ ಹೆಚ್ಚು ಅವಕಾಶ ದೊರೆಯಿತು. ಇವರು ಕನ್ನಡ ಮತ್ತು ತಮಿಳು ಭಾಷೆಗಳನ್ನು ಓದಿ 1893ರಲ್ಲಿ ಮದರಾಸು ವಿಶ್ವವಿದ್ಯಾಲಯದ ಕನ್ನಡ ಎಂ.ಎ. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಮೊಟ್ಟಮೊದಲನೆಯ ಕನ್ನಡ ಎಂ.ಎ. ಪದವೀಧರರಾದರು. ಕನ್ನಡ ಸಾಹಿತ್ಯ ಸಂಶೋಧನೆಗಳ ಕಡೆಗೆ ಮನಸ್ಸು ಒಲಿದುದರಿಂದ ಇವರ ಕಾರ್ಯಕ್ಷೇತ್ರ ವಿಸ್ತಾರವಾಯಿತು. ವಿದ್ಯಾ ಇಲಾಖೆಯಲ್ಲಿ ಐದು ವರ್ಷಗಳ ಕಾಲ ಕನ್ನಡ ಭಾಷಾಂತರಕಾರರಾಗಿದ್ದು, 1899ರಲ್ಲಿ ಮೈಸೂರಿನ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯಲ್ಲಿ ಲೂಯಿರೈಸ್‍ರವರಿಗೆ ಸಹಾಯಕರಾಗಿ ನೇಮಕಗೊಂಡರು. ಲೂಯಿರೈಸರ ಅನಂತರ 1906ರಲ್ಲಿ ಇವರೇ ನಿರ್ದೇಶಕರಾಗಿ ನೇಮಕವಾಗಿ 1922ರ ವರೆಗೆ ದುಡಿದು ಈ ಹುದ್ದೆಯಿಂದ ನಿವೃತ್ತರಾದರು.

ಇವರು ಸು. 16 ವರ್ಷಗಳ ಕಾಲ ಪುರಾತತ್ತ್ವ ಇಲಾಖೆಯ ನಿರ್ದೇಶಕರಾಗಿ ಮಾಡಿದ ಕೆಲಸ ದೊಡ್ಡ ಮಟ್ಟದ್ದು. ಆಗಿನ ಮೈಸೂರು ಸಂಸ್ಥಾನದ ನಾನಾ ಭಾಗಗಳಲ್ಲಿ ಸಂಚರಿಸಿ ಸು. 5,000 ಹೊಸ ಶಾಸನಗಳನ್ನು ಸಂಗ್ರಹಿಸಿದರು. ಹಿಂದು, ಜೈನ ಮತ್ತು ಮಹಮ್ಮದೀಯರಿಗೆ ಸಂಬಂಧಪಟ್ಟ 1,000 ಕಟ್ಟಡಗಳನ್ನು ಪರೀಕ್ಷಿಸಿದರು. 4,100 ನಾಣ್ಯಗಳ ಸಂಶೋಧನೆ, 1,250 ಛಾಯಾಚಿತ್ರಗಳು ಮತ್ತು 120 ನಕ್ಷೆಗಳ ರಚನೆಗಳೂ ಆದುವು. ಅಪರೂಪವಾದ ಸು. 125 ಪ್ರಾಚೀನ ಕನ್ನಡ ಸಂಸ್ಕøತ ಗ್ರಂಥಗಳನ್ನು ಅವಲೋಕಿಸಿ ಅವುಗಳನ್ನು 100 ಸಂಪುಟಗಳಲ್ಲಿ ಪ್ರಿತಿ ಮಾಡಿಸಿ ಪ್ರಾಚ್ಯ ಕೋಶಾಗಾರದಲ್ಲಿಸಿರಿಸದರು. ಎಪಿಗ್ರಾಫಿಯ ಕರ್ನಾಟಿಕದ ವಿಸ್ತಾರವಾದ ಅಕಾರಾದಿ, ಇಲಾಖಾ ವರದಿಗಳ ಅಕಾರಾದಿಗಳನ್ನು ಐತಿಹಾಸಿಕ ಮತ್ತು ಸಾಮಾಜಿಕ ಪ್ರಾಮುಖ್ಯವುಳ್ಳ ಶಾಸನ ಸಂಗ್ರಹಗಳನ್ನೂ ಸಿದ್ಧಪಡಿಸಿದರು. ರೈಸರು ಪ್ರಕಟಿಸಿದ್ದ ಶ್ರವಣಬೆಳಗೊಳದ ಶಾಸನಗಳನ್ನೊಳಗೊಂಡ ಎಪಿಗ್ರಾಫಿಯ ಕರ್ನಾಟಿಕದ ಎರಡನೆಯ ಸಂಪುಟವನ್ನು ಇವರು ಸಂಪೂರ್ಣವಾಗಿ ಪರಿಷ್ಕರಿಸಿದರು. ಮೊದಲು 144 ಇದ್ದ ಶಾಸನಗಳ ಸಂಖ್ಯೆ ಪರಿಷ್ಕøತ ಆವೃತ್ತಿಯಲ್ಲಿ 500 ಆಯಿತು. ಶ್ರವಣಬೆಳಗೊಳದ ಬಸದಿಗಳ ವಿವರಗಳನ್ನು ಒಳಗೊಂಡ ವಿಸ್ತಾರವಾದ ಮುನ್ನುಡಿಯನ್ನು ಈ ಸಂಪುಟಕ್ಕೆ ಬರೆದರು. ಸೋಮನಾಥಪುರದ ಕೇಶವ, ಬೇಲೂರಿನ ಚೆನ್ನಕೇಶವ, ದೊಡ್ಡಗದ್ದವಳ್ಳಿಯ ಮಹಾಲಕ್ಷ್ಮೀ ದೇವಾಲಯಗಳ ಶಿಲ್ಪಗಳನ್ನು ಪರಿಚಯಿಸುವ ಕೈಪಿಡಿಗಳನ್ನು ಪ್ರಕಟಿಸಿದರು. ಚಂದ್ರವಳ್ಳಿ, ತಲಕಾಡು ಮತ್ತು ಹಳೆಬೀಡುಗಳಲ್ಲಿ ಭೂಶೋಧನೆಗಳನ್ನು ನಡೆಸಿ ರೋಮನ್ನರ ಮತ್ತು ಚೀನಿಯರ ಅನೇಕ ಬಗೆಯ ನಾಣ್ಯಗಳನ್ನು ಸಂಗ್ರಹಿಸಿದರು. ಇವುಗಳ ಜೊತೆಗೆ ಮೈಸೂರು ಸಂಸ್ಥಾನದ ಅನೇಕ ದೇವಾಲಯಗಳು ಮತ್ತು ಪ್ರಾಚೀನ ಶಿಲ್ಪಗಳ ಬಗ್ಗೆ ಸಂಶೋಧನಾತ್ಮಕ ಟಿಪ್ಪಣಿಗಳನ್ನು ಬರೆದಿರುವುದೂ ಇವರ ಬಹುಮುಖ್ಯ ಸಾಧನೆ. ಚಾಳುಕ್ಯ ಶಿಲ್ಪದ ಭಾಗವೆಂದೇ ಅದುವರೆಗೂ ಪರಿಗಣಿಸಲ್ಪಟ್ಟಿದ್ದ ಹೊಯ್ಸಳ ಕಟ್ಟಡಗಳಲ್ಲಿ ಕಂಡುಬರುವ ಶೈಲಿಯ ವಿಶಿಷ್ಟತೆಯನ್ನು ಗುರುತಿಸಿ, ಅದಕ್ಕೆ ಹೊಯ್ಸಳ ಶೈಲಿ ಎಂಬ ಪ್ರತ್ಯೇಕವಾದ ಹೆಸರು ಕೊಟ್ಟ ಕೀರ್ತಿ ಇವರದು. ವಾಸ್ತು, ಶಿಲ್ಪ, ಶಾಸನ ಮತ್ತು ನಾಣ್ಯಗಳನ್ನು ಕುರಿತ ಅನೇಕ ಸಂಶೋಧನ ಲೇಖನಗಳನ್ನು ಮಿಥಿಕ್ ಸೊಸೈಟಿಯ ತ್ರೈಮಾಸಿಕ ಮತ್ತು ಇಂಡಿಯನ್ ಆ್ಯಂಟಿಕ್ವರಿ ಪತ್ರಿಕೆಗಳಲ್ಲಿ ಪ್ರಕಟಿಸಿದರು.

ಇವರು ಪ್ರಕಟಿಸಿರುವ ಕರ್ನಾಟಕ ಕವಿಚರಿತ್ರೆಯ ಮೂರು ಸಂಪುಟಗಳು ಇವರ ಪಾಂಡಿತ್ಯಪರಿಶ್ರಮಗಳಿಗೆ ಸಾಕ್ಷಿಯಾಗಿವೆ. ಸುಮಾರು ಎಂಟನೆಯ ಶತಮಾನದಿಂದ ಹತ್ತೊಂಬತ್ತನೆಯ ಶತಮಾನದ ಅವದಿsಯಲ್ಲಿ ಬಾಳಿದ 1,100ಕ್ಕೂ ಮಿಕ್ಕ ಕನ್ನಡ ಕವಿಗಳು ಮತ್ತು ಅವರ ಕೃತಿಗಳನ್ನು ಕುರಿತ ವಿವರಗಳು ಈ ಸಂಪುಟಗಳಲ್ಲಿವೆ. ಕಾವ್ಯಾವಲೋಕನ, ಭಾಷಾಭೂಷಣ ಮತ್ತು ಶಬ್ದಾನುಶಾಸನಗಳನ್ನು ಸಂಪಾದಿಸಿದ್ದಾರೆ. ನೀತಿಮಂಜರಿ (1911), ನಗೆಗಡಲು (1898), ಶಾಸನಪದ್ಯಮಂಜರಿ (1923) ಇವು ಇವರ ಇತರ ಕೃತಿಗಳು. ಹಿಸ್ಟರಿ ಆಫ್ ಕನ್ನಡ ಲಿಟರೇಚರ್, ಹಿಸ್ಟರಿ ಆಫ್ ಕನ್ನಡ ಲಾಂಗ್ವೇಜ್ ಇವು ಇವರು ಇಂಗ್ಲಿಷಿನಲ್ಲಿ ಪ್ರಕಟಿಸಿರುವ ಎರಡು ಗ್ರಂಥಗಳು.

ಭಾರತ ಸರ್ಕಾರದ ಪ್ರಾಚ್ಯ ವಿದ್ಯಾ ಇಲಾಖೆ, ಏಷ್ಯಾಟಿಕ್ ಸೊಸೈಟಿ, ಹೈದರಾಬಾದಿನ ಪ್ರಾಚ್ಯ ವಿದ್ಯಾ ಸಮಿತಿ, ಪ್ಯಾರಿಸ್ಸಿನ ಪ್ರಾಚ್ಯ ವಿದ್ಯಾಸಂಸ್ಥೆ, ಬೆಂಗಳೂರಿನ ಮಿಥಿಕ್ ಸೊಸೈಟಿ ಮುಂತಾದ ಹತ್ತಾರು ದೇಶವಿದೇಶಗಳ ಸಂಘಸಂಸ್ಥೆಗಳೊಂದಿಗೆ ಇವರು ನಿಕಟಸಂಪರ್ಕ ಹೊಂದಿದ್ದರು.

ಇವರು ಸಲ್ಲಿಸಿದ ನಾಡುನುಡಿಗಳ ಸೇವೆಗೆ ಮನ್ನಣೆ ಎಂಬಂತೆ ಹಲವು ಬಗೆಯ ಪ್ರಶಸ್ತಿಗಳೂ ಬಹುಮಾನಗಳೂ ಬಂದುವು. 1907ರಲ್ಲಿ ಇವರಿಗೆ ರಾಯಲ್ ಏಷ್ಯಾಟಿಕ್ ಸೊಸೈಟಿಯ ಗೌರವ ಸದಸ್ಯತ್ವ ದೊರೆಯಿತು. 1913ರಲ್ಲಿ ಆಗಿನ ಮೈಸೂರು ಮಹಾರಾಜರು ಪ್ರಾಕ್ತನ ವಿಮರ್ಶವಿಚಕ್ಷಣ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದರು. 1916ರಲ್ಲಿ ಬ್ರಿಟಿಷ್ ಸರ್ಕಾರದಿಂದ ರಾವ್‍ಬಹದ್ದೂರ್ ಪ್ರಶಸ್ತಿ ಬಂತು. ಕಲ್ಕತ್ತದ ಅಖಿಲಭಾರತ ಸಾಹಿತ್ಯ ಸಂಘ 1924ರಲ್ಲಿ ಇವರಿಗೆ ಪ್ರಾಚ್ಯ ವಿದ್ಯಾವೈಭವ ಎಂಬ ಬಿರುದನ್ನಿತ್ತು ಸನ್ಮಾನಿಸಿತು. 1934ರಲ್ಲಿ ಕೇಂದ್ರ ಸರ್ಕಾರ ಮಹಾಮಹೋಪಾಧ್ಯಯ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿತು. ಧಾರವಾಡದಲ್ಲಿ 1918ರಲ್ಲಿ ನಡೆದ 4ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇವರು ಅಧ್ಯಕ್ಷರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಇವರನ್ನು ಕುರಿತು ಒಂದು ಜೀವನ ಚರಿತ್ರೆಯನ್ನು ಪ್ರಕಟಿಸಿದೆ. 1936 ಡಿಸೆಂಬರ್ 6ರಂದು ನಿಧನಹೊಂದಿದರು. (ಎನ್.ಎ.ಆರ್.)