ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನರಸಿಂಹಾಚಾರ್, ಎಸ್ ಜಿ

(ಎಸ್.ಜಿ.ನರಸಿಂಹಾಚಾರ್)

ಎಸ್.ಜಿ.ನರಸಿಂಹಾಚಾರ್ (ಕ್ರಿ.ಶ.1862-1907). ಪ್ರಾಚೀನ ಕನ್ನಡ ಕಾವ್ಯಗಳನ್ನು ಸಂಪಾದಿಸಿ ಹೊರತಂದ ಮೊದಲ ಕನ್ನಡಿಗರು; ಸ್ವತಃ ಕವಿಗಳೂ ಹೌದು. ಹುಟ್ಟಿದ್ದು ಶ್ರೀರಂಗಪಟ್ಟಣದಲ್ಲಿ. ಅಲ್ಲಿ ಮತ್ತು ಮೈಸೂರಿನಲ್ಲಿ ವ್ಯಾಸಂಗ ಮಾಡಿದರು. ಅನಂತರ ಹುಟ್ಟೂರಿನಲ್ಲೇ ಕೆಲಕಾಲ ಉಪಾಧ್ಯಾಯರಾಗಿದ್ದರು. ಕನ್ನಡವೇ ಅಲ್ಲದೆ ಸಂಸ್ಕøತ, ತಮಿಳು ಭಾಷೆಗಳಲ್ಲಿಯೂ ಪಾಂಡಿತ್ಯ ಪಡೆದಿದ್ದ ಇವರು ವಿದ್ಯಾಭ್ಯಾಸ ಇಲಾಖೆಯಲ್ಲಿ ಭಾಷಾಂತರಕಾರರಾಗಿ ದುಡಿದರು. ಮೈಸೂರು ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿ ಪಂಡಿತರಾಗಿಯೂ ಕೆಲಸ ಮಾಡಿದರು.

ಇವರು ಮತ್ತು ಎಂ.ಎ ರಾಮಾನುಜಯ್ಯಂಗಾರ್ ಒಟ್ಟಾಗಿ ಕರ್ಣಾಟಕ ಕಾವ್ಯಮಂಜರಿ ಎಂಬ ಮಾಸ ಪತ್ರಿಕೆಯನ್ನು ಆರಂಭಿಸಿದರು. (1892). ಈ ಮಾಲೆಯಲ್ಲಿ ನೂರಾರು ಪ್ರಾಚೀನ ಕೃತಿಗಳು ಪ್ರಕಟವಾದವು. ಪ್ರೋತ್ಸಾಹವಿಲ್ಲದಿದ್ದ ಕಾಲದಲ್ಲಿ ಅತ್ಯಂತ ನಿಷ್ಠೆ ಅಭಿಮಾನಗಳಿಂದ ಆರು ವರ್ಷ ನಡೆದ ಈ ಮಾಲೆ ಹಠಾತ್ತನೆ ಸ್ಥಗಿತಗೊಂಡಿತು. ಮತ್ತೆ ಎರಡು ವರ್ಷಗಳ ಅನಂತರ ಇವರು ಕರ್ಣಾಟಕ ಕಾವ್ಯ ಕಲಾನಿಧಿ ಎಂಬ ಮಾಸಪತ್ರಿಕೆಯನ್ನು ಹೊರತಂದು ಅದರಲ್ಲಿ ಪ್ರಾಚೀನ ಕಾವ್ಯ ಪ್ರಕಟಣೆಯನ್ನು ಇಪ್ಪತ್ತು ವರ್ಷ ಅವಿರತವಾಗಿ ಮುಂದುವರಿಸಿದರು. ಈ ಇಬ್ಬರೂ ಜೊತೆಗೂಡಿ ಕೈಗೊಂಡ ಇನ್ನೊಂದು ಯೋಜನೆ ಎಂದರೆ ಮಹಾಭಾರತ ಕಥಾ ಪ್ರಸಂಗಗಳ ಗದ್ಯಾನುವಾದ. ನರಸಿಂಹಾಚಾರ್ಯರೇ ಸ್ವತಃ ಗ್ರಂಥ ಸಂಪಾದನೆ ಮಾಡಿರುವುದೂ ಉಂಟು. ಮೊದಲು ಪಂಪನ ಆದಿಪುರಾಣವನ್ನು(೧೯೦೦) ಮೈಸೂರು ಪ್ರಾಚ್ಯ ಸಂಶೋಧನಾಲಯದವರಿಗಾಗಿ ಇವರು ಸಂಪಾದಿಸಿಕೊಟ್ಟಿದ್ದಾರೆ. ಹಲವಾರು ಹಸ್ತಪ್ರತಿಗಳನ್ನು ನೋಡಿ ಸಂಪಾದಿಸಿದ ಈ ಕೃತಿಗೆ ಕವಿಚರಿತ್ರೆ ಹಾಗೂ ಕಾವ್ಯದ ಆಕರಗಳ ಬಗ್ಗೆ ಬೆಲೆಯುಳ್ಳ ಪೀಠಿಕೆಯನ್ನು ಸಹ ಬರೆದಿದ್ದಾರೆ. ಆಗ್ಗೆ ಅತ್ಯಂತ ಜನಪ್ರಿಯವಾಗಿದ್ದ ಪದ್ಯಸಾರದ ರಸಪೂರ್ಣ ಪದ್ಯಗಳ ಆಯ್ಕೆಯಲ್ಲಿಯೂ ಇವರ ಪಾತ್ರ ಮಹತ್ತ್ವದ್ದು.

ಕರ್ಣಾಟಕ ಕವಿಚರಿತ್ರೆಯನ್ನು ರೂಪಿಸಿದ ರಾ.ನರಸಿಂಹಾಚಾರ್ಯರ ಸೋದರ ಅಳಿಯಂದಿರಾದ ಇವರು, ಆ ಕೆಲಸದಲ್ಲಿ ಅವರಿಗೆ ವಿಶೇಷ ಸಹಾಯಕರಾಗಿದ್ದರು. ಪ್ರಥಮ ಸಂಪುಟದಲ್ಲಿಯ ಕಾವ್ಯ ವಿಮರ್ಶನ ಅಂಶಗಳು ಬಹುತೇಕ ಇವರವೇ ಇರಬಹುದು ಎಂದು ಊಹಿಸಲಾಗಿದೆ.

ಸಹೃದಯ ವಿದ್ವಾಂಸ, ಹೊಸಗನ್ನಡ ಕಣ್ಮಣಿ ಎಂದು ಖ್ಯಾತರಾಗಿದ್ದ ಇವರು ಕಾಳಿದಾಸನ ರಘುವಂಶದಿಂದ - ಅಜನೃಪಚರಿತೆ ಹಾಗೂ ದಿಲೀಪಚರಿತೆಗಳನ್ನು ಆಯ್ದು ಷಟ್ಪದಿ ರೂಪದಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರೇಪಿತ ಕ್ರಿಯಾ ಸಮಾಗಮ ಎಂಬ ಕಂದ ಕಾವ್ಯವನ್ನು ರಚಿಸಿದ್ದಾರೆ. ಇಂಗ್ಲಿಷಿನಿಂದ ಭಾವಗೀತೆಗಳನ್ನು ಕನ್ನಡಕ್ಕೆ ತಂದ ಮೊದಲಿಗರಲ್ಲಿ ಇವರೊಬ್ಬರು. ಇಪ್ಪತ್ತನೆಯ ಶತಮಾನದ ಮೊದಲ ದಶಕಗಳಲ್ಲಿ ಪ್ರಚುರವಾಗಿದ್ದ ಕನ್ನಡ ಪಠ್ಯ ಪುಸ್ತಕಗಳಲ್ಲಿ ಸೇರಿದ್ದ ಇಂಗ್ಲಿಷ್ ಪದ್ಯಾನುವಾದಗಳೆಲ್ಲ ಇವರದೇ ಎನ್ನಲಾಗಿದೆ. ಶ್ರೀಯವರಿಗಿಂತ ಮುಂಚೆ ಇಂಗ್ಲಿಷ್ ಕವಿತೆಯಿಂದ ಸ್ಫೂರ್ತರಾಗಿ ಕಾವ್ಯಕ್ರಿಯೆ ನಡೆಸಿದವರಲ್ಲಿ ಪ್ರಮುಖರಾದ ಇವರದು ರಸೈಕ ದೃಷ್ಟಿ. ಭಾಷಾಶೈಲಿಯಲ್ಲಿ ಸರಳತೆ, ಜನಸಾಮಾನ್ಯರ ಭಾಷೆಯಲ್ಲಿ ಬರಹ- ಇವು ಇವರ ಗುರಿ. ನಡುಗನ್ನಡದಲ್ಲಿ ಪ್ರಚುರವಾಗಿದ್ದ ಚೌಪದಿ, ಷಟ್ಪದಿ, ಸಾಂಗತ್ಯ, ಗೋವಿನ ಮಟ್ಟುಗಳನ್ನೇ ಹೊಸ ಭಾವ, ಹೊಸವಸ್ತು, ಹೊಸಭಾಷೆಗೆ ಹೊಂದಿಕೆಯಾಗುವಂತೆ ಇವರು ಬಳಸಿದರು. ಹೊಸ ಪದವಿನ್ಯಾಸ, ಪದಲಾಲಿತ್ಯಗಳಿದ್ದರೂ ಪ್ರಾಸದ ಬಗ್ಗೆ ನಿಷ್ಠರಾಗಿದ್ದರು. ಶಾಲೆಯ ಮಕ್ಕಳನ್ನೇ ಹೆಚ್ಚು ಗಮನದಲ್ಲಿಟ್ಟುಕೊಂಡು ಕಾವ್ಯರಚನೆ ಮಾಡಿದ ಇವರನ್ನು ಶಿಶುಸಾಹಿತ್ಯದ ಆದ್ಯ ಪ್ರವರ್ತಕರು ಎನ್ನಬಹುದು. ಇವರ ಮಳೆಗಾಲ, ಕಾಮನಬಿಲ್ಲು, ನೇಗಿಲು, ನಕ್ಷತ್ರ, ಕಾವೇರಿಯ ಮಹಿಮೆ, ಮಲಗುವ ಹೊತ್ತು, ಹೊಗೆಯ ಗಾಡಿ, ಚಂದ್ರ ಇತ್ಯಾದಿ ಕವನಗಳು ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ ಎಂಬ ಗೋವಿನ ಬಾಳನ್ನು ಕುರಿತ ಪದ್ಯ ಅತ್ಯಂತ ಜನಪ್ರಿಯವಾಗಿದೆ. ಇವರು ಇನ್ನೆರಡು ಸ್ವತಂತ್ರ ಕವಿತೆಗಳೆಂದರೆ ಎಂ. ಶಿಂಗ್ರಯ್ಯನವರ ಶ್ರೀ ಚಾಮರಾಜೇಂದ್ರ ಒಡೆಯರ್ ಚರಿತ್ರೆಯಲ್ಲಿ ಸೇರಿರುವ ಎರಡು ಪದ್ಯಗಳು; 1894ರಲ್ಲಿ ರಚಿಸಿದ ಚಾಮರಾಜೇಂದ್ರ ಒಡೆಯರ್ ಚರಮಗೀತೆ, ಹಾಗೂ ಶ್ರೀ ಕೃಷ್ಣರಾಜ ಒಡೆಯರ್ ಪಟ್ಟಕ್ಕೆ ಬಂದಾಗ ರಚಿಸಿದ ಮಂಗಳ ಪದ್ಯ.

ಮದರಾಸು ಸರ್ಕಾರದ ಶಿಕ್ಷಣ ಇಲಾಖೆಯ ಆಂಗ್ಲ ಇನ್‍ಸ್ಪೆಕ್ಟರೊಬ್ಬರು ಇಂಗ್ಲಿಷಿನಲ್ಲಿ ರಚಿಸಿದ ಬುಕ್ಸ್ ಫಾರ್ ದಿ ಬ್ರೇನ್ಸ್ ಎಂಬ ಕೃತಿಗಳನ್ನು ಇವರು ಅನುವಾದ ಮಾಡಿದ್ದಾರೆ. ಹಿಂದೂ ದೇಶದ ಚರಿತ್ರೆ, ಅಲ್ಲಾವುದ್ದೀನನ ಅದ್ಭುತ ದೀಪ, ಈಸೋಪನ ಕಥೆಗಳು, ಗಲಿವರನ ಸಂಚಾರ, ಭಾರತ ವೀರ ಚರಿತ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ಇವರು ಮಾಡಿದ್ದಾರೆನ್ನಲಾದ ಉತ್ತರರಾಮ ಚರಿತೆಯ ಮೂರು ಅಂಕಗಳ ಅನುವಾದ ಉಪಲಬ್ಧವಿಲ್ಲ.

ಇವರು ಬೇರೆ ಗ್ರಂಥಕರ್ತರಿಗೂ ಕವನಗಳನ್ನು ರಚಿಸಿಕೊಡುತ್ತಿದ್ದರು. 1885ರಲ್ಲಿ ಪ್ರಕಟವಾದ ಬಿ. ವೆಂಕಟಾಚಾರ್ಯರ ದುರ್ಗೇಶನಂದಿನಿ ಕಾದಂಬರಿಯಲ್ಲಿನ ಶರಣು ವಿಮಲೆಯ ಚರಣಕೆ ಎಂಬ ಹಾಸ್ಯ ಪದ್ಯ, ಬಾಪು ಸುಬ್ಬರಾಯರ ಚಂಡಮಾರುತ ನಾಟಕದಲ್ಲಿ ಷೇಕ್ಸ್‍ಪಿಯರನ ಟೆಂಪೆಸ್ಟ್‍ನಿಂದ ಅನುವಾದಿಸಿದ ಎರಡು ಪದ್ಯಗಳು, ವರದಾಚಾರ್ಯರ ನಾಟಕಗಳಲ್ಲಿ ಬಳಕೆಯಾಗುತ್ತಿದ್ದ ಹಲವು ಹಾಡುಗಳು ಇವರ ರಚನೆಗಳೇ.

1907ರಲ್ಲಿ ಧಾರವಾಡದಲ್ಲಿ ನೆಡೆದ ಕರ್ನಾಟಕ ಗ್ರಂಥಕರ್ತರ ಪ್ರಥಮ ಸಮ್ಮೇಳನದ ಅಧ್ಯಕ್ಷರಾಗಿ ಇವರ ಆಯ್ಕೆಯಾದದ್ದು ಅಂದಿನ ಲೇಖಕರಲ್ಲಿ ಇವರಿಗಿದ್ದ ಗಣ್ಯಸ್ಥಾನಕ್ಕೆ ಸಾಕ್ಷಿಯಾಗಿದೆ.

    (ಎಸ್.ಎಸ್.ಎಂ.ಯು.)