ನವನಿಧಿ - ಪದ್ಮ ಮಹಾಪದ್ಮ ಶಂಖ ಮಕರ ಕಚ್ಫಪ ಮುಕುಂದ ನೀಲವರ್ಚ ಎಂಬ ಒಂಬತ್ತು ವಿಧದ ಕುಬೇರನ ರತ್ನಗಳನ್ನು ನವನಿಧಿಗಳೆನ್ನುತ್ತಾರೆ.

ಮಾರ್ಕಂಡೇಯ ಪುರಾಣದಂತೆ ಪದ್ಮಿನೀ ಎಂಬ ಹೆಸರಿನ ವಿದ್ಯೆಗೆ ಲಕ್ಷ್ಮಿ ಅಧಿದೇವತೆ. ಅದಕ್ಕೆ ಆಧಾರ ವಾಗಿರುವ ಪದ್ಮ ಮಹಾಪದ್ಮ ಮಕರ ಕಚ್ಛಪ ಮುಕುಂದ ನೀಲ ನಂದ ಶಂಖ ಎಂಬ ಈ ಎಂಟೂ ನಿಧಿಗಳು.

ಪದ್ಮ ಎಂಬುದು ಸಾತ್ತ್ವಿಕನಿಧಿ. ಇದರ ಕಟಾಕ್ಷ ಇರುವವ ಚಿನ್ನ ಬೆಳ್ಳಿ ತಾಮ್ರಗಳ ಕ್ರಯವಿಕ್ರಯದಿಂದ ಹೆಚ್ಚು ಸಂಪಾದಿಸುತ್ತಾನೆ. ಯಜ್ಞಯಾಗಾದಿ ಸತ್ಕಾರ್ಯ ಮಾಡುವವರಿಗೆ ಹಣವನ್ನು ಕೊಡುತ್ತಾನೆ. ಛತ್ರ ಮತ್ತು ದೇವಾಲಯವನ್ನು ಕಟ್ಟಿಸುತ್ತಾನೆ. ಮಕ್ಕಳು ಮೊಮ್ಮಕ್ಕಳ ಕಾಲಕ್ಕೂ ಈ ನಿಧಿ ಅನುವರ್ತಿಸುತ್ತದೆ.

ಮಹಾಪದ್ಮವೂ ಸಾತ್ತ್ವಿಕನಿಧಿಯೇ. ಇದರ ಕಟಾಕ್ಷ ಇರುವವ ಸಾತ್ತ್ವಿಕನಾಗಿರುತ್ತಾನೆ ಮತ್ತು ಪದ್ಮರಾಗಗಳ ವ್ಯಾಪಾರ ಮಾಡುತ್ತಾನೆ. ಸಚ್ಛೀಲರಿಗೆ ವಸತಿ ಸೌಲಭ್ಯ ಕಲ್ಪಿಸುತ್ತಾನಲ್ಲದೆ ಸಹಾಯದ್ರವ್ಯವನ್ನೂ ಕೊಡುತ್ತಾನೆ. ಒಳ್ಳೆಯ ಶೀಲವಂತನಾಗಿರುತ್ತಾನೆ. ಈ ನಿಧಿ ಮುಂದಿನ ಏಳು ತಲೆಮಾರಿನವರೆಗೂ ವಂಶಪಾರಂಪರ್ಯವಾಗಿ ನಡೆದು ಬರುತ್ತದೆ.

ಮಕರ ಎಂಬ ನಿಧಿ ತಾಮಸಗುಣ ಪ್ರಧಾನವಾದದ್ದು. ಇದರ ಕಟಾಕ್ಷ ಇರುವವ ತಮೋಗುಣದಿಂದ ಕೂಡಿದ್ದರೂ ಒಳ್ಳೆಯ ಶೀಲವಂತನಾಗಿದ್ದು ರಾಜರಿಗೆ ಮಿತ್ರನಾಗಿರುತ್ತಾನೆ. ಕತ್ತಿ ಬಾಣ ಮೊದಲಾದ ಶಸ್ತ್ರಗಳು ಮತ್ತು ಚರ್ಮಗಳ ಕ್ರಯ ವಿಕ್ರಯ ಮಾಡುತ್ತಾನೆ. ಶೂರರಿಗೆ ಹಣ ಕೊಡುತ್ತಾನೆ. ಈ ನಿಧಿ ಮಕ್ಕಳಿಗೆ ಅನುವರ್ತಿಸುವುದಿಲ್ಲ. ಕಳ್ಳರಿಂದಾಗಲೀ ಯುದ್ಧದಿಂದಾಗಲೀ ಈತನ ಸಂಪತ್ತು ನಾಶವಾಗುತ್ತದೆ.

ಕಚ್ಛ ಎಂಬ ನಿಧಿಯೂ ತಾಮಸಗುಣ ಪ್ರಧಾನವಾದದ್ದೇ. ಇದರ ಕಟಾಕ್ಷ ಇರುವವ ತಮೋಗುಣ ಪ್ರಧಾನನಾಗುತ್ತಾನೆ. ಶಿಷ್ಟರಲ್ಲದವರೊಡನೆ ಈತನ ವ್ಯವಹಾರ. ಈತ ಯಾರನ್ನೂ ನಂಬುವುದಿಲ್ಲ. ಆಮೆ ಓಡಿನಿಂದ ತನ್ನ ಶರೀರವನ್ನು ಮುಚ್ಚಿಕೊಂಡಿರುವಂತೆ ಈತ ತನ್ನ ನಿಧಿಯನ್ನು ಗೋಪ್ಯವಾಗಿ ಮುಚ್ಚಿಡುತ್ತಾನೆ. ಇವನು ಸರ್ವಕಾಲದಲ್ಲೂ ವ್ಯಾಕುಲಚಿತ್ತನಾಗಿರುತ್ತಾನೆ. ತಾನೂ ಭೋಗಿಸುವುದಿಲ್ಲ. ಯಾರಿಗೂ ದಾನ ಮಾಡುವುದಿಲ್ಲ. ಭೂಮಿಯಲ್ಲಿ ಸಂಪತ್ತನ್ನು ನಿಕ್ಷೇಪ ಮಾಡುತ್ತಾನೆ. ಒಂದು ತಲೆಮಾರಿನವರೆಗೆ ಮಾತ್ರ ಈ ನಿಧಿ ಅನುವರ್ತಿಸುತ್ತದೆ.

ಮುಕುಂದ ಎಂಬ ನಿಧಿ ರಜೋಗುಣ ಪ್ರಧಾನವಾದದ್ದು. ಇದರ ದೃಷ್ಟಿ ಇರುವವ ರಜೋಗುಣ ಪ್ರಧಾನವಾಗಿರುತ್ತಾನೆ. ವೀಣೆ ಕೊಳಲು ಮೃದಂಗ ಮೊದಲಾದ ಗೀತ ವಾದ್ಯಗಳಲ್ಲಿ ಅಭಿಲಾಷೆ ಉಳ್ಳವನಾಗುತ್ತಾನೆ. ಸಂಗೀತಗಾರರು ವಂದಿಮಾಗಧ ಸೂತ ವಿಟ ಮತ್ತು ನೃತ್ಯದವರಿಗೆ ಹೇರಳವಾಗಿ ಹಣವನ್ನು ಕೊಡುತ್ತಾನಲ್ಲದೆ ತಾನೂ ಭೋಗಿಸುತ್ತಾನೆ. ಕುಲಟೆಯರಲ್ಲಿ ಅನುರಕ್ತನಾಗುತ್ತಾನೆ. ಈ ಸಂಪತ್ತು ಅವನೊಡನೆಯೇ ಮುಕ್ತಾಯವಾಗುತ್ತದೆ.

ನಂದ ಎಂಬ ನಿಧಿ ಸತ್ತ್ವ ಮತ್ತು ರಜೋಗುಣಗಳುಳ್ಳದ್ದಾಗಿದೆ. ಇದರ ಕಟಾಕ್ಷವುಳ್ಳವ ದೀರ್ಘಾಯುಷಿ. ಸರ್ವವಿಧ ರತ್ನಗಳ ಹಾಗೂ ವಾದ್ಯಗಳ ವ್ಯಾಪಾರ ಮಾಡುತ್ತಾನೆ. ಸ್ವಜನರಿಗೂ ಅಭ್ಯಾಗತರಿಗೂ ಆಧಾರನಾಗಿರುತ್ತಾನೆ. ಅಪಮಾನೋಕ್ತಿಗಳನ್ನು ಸ್ವಲ್ಪವೂ ಸಹಿಸುವುದಿಲ್ಲ. ಸ್ತೋತ್ರಪ್ರಿಯನಾಗಿರುತ್ತಾನೆ. ಬಹುಪತ್ನಿಯರಿಂದ ಕೂಡಿದ ಇವನಿಗೆ ಹೆಚ್ಚು ಸಂತಾನವಿರುತ್ತದೆ. ಏಳು ತಲೆಮಾರಿನವರೆಗೂ ಈ ನಿಧಿ ಅನುವರ್ತಿಸುತ್ತದೆ.

ನೀಲ ಎಂಬ ನಿಧಿಯೂ ಸತ್ತ್ವ ಮತ್ತು ರಜೋಗುಣಗಳಿಂದ ಕೂಡಿದ್ದಾಗಿದೆ. ಇದರ ಕಟಾಕ್ಷವುಳ್ಳವ ಸತ್ತ್ವ ಮತ್ತು ರಜೋಗುಣಗಳಿಂದ ಕೂಡಿದ್ದಾಗಿದೆ. ಇದರ ಕಟಾಕ್ಷವುಳ್ಳವ ಸತ್ತ್ವ ಮತ್ತು ರಜೋಗುಣ ಪ್ರಧಾನನಾಗುತ್ತಾನೆ. ಈತ ಸ್ನೇಹಪರನಲ್ಲ. ಈತನ ಪ್ರೀತಿ ಸಹಜವೂ ಸ್ಥಿರವೂ ಆದುದಲ್ಲ. ಹತ್ತಿಬಟ್ಟೆ ಧಾನ್ಯ ಮತ್ತು ಫಲಪುಷ್ಪಗಳನ್ನೂ ಮುತ್ತು ವಿದ್ರುಮ ಶಂಖ ಮೊದಲಾದ ಬಿಳಿಯ ವರ್ಣದ ರತ್ನಗಳನ್ನೂ ಜಲೋತ್ಪನ್ನ ವಸ್ತುಗಳನ್ನೂ ವ್ಯಾಪಾರ ಮಾಡುವುದರಲ್ಲಿ ಈತನಿಗೆ ಹೆಚ್ಚು ಅಭಿಲಾಷೆ. ಕೆರೆ ಆರಾಮ ಕಟ್ಟೆಗಳನ್ನು ಕಟ್ಟಿಸುವುದು ವೃಕ್ಷಗಳನ್ನು ಬೆಳೆಸುವುದು ಈತನಿಗೆ ಪ್ರಿಯ. ಗಂಧ ಪುಷ್ಪಾದಿಗಳನ್ನು ಉಪಭೋಗಿಸುತ್ತಾನೆ. ಮೂರು ತಲೆಮಾರಿನವರೆಗೆ ಈ ಸಂಪತ್ತು ಅನುವರ್ತಿಸುತ್ತದೆ.

ಶಂಖ ಎಂಬ ನಿಧಿ ರಜಸ್ಸು ಮತ್ತು ತಮಸ್ಸುಗಳಿಂದ ಕೂಡಿರುತ್ತದೆ. ಇದರ ಕಟಾಕ್ಷ ಇರುವವನಿಗೆ ರಜಸ್ತಮೋಗುಣಗಳು ಅಧಿಕವಾಗಿರುತ್ತದೆ. ತನ್ನ ಸಂಪಾದನೆಯನ್ನು ಈತ ತಾನೊಬ್ಬನೇ ಭೋಗಿಸುತ್ತಾನೆ. ಹಳಸಿದ ಅನ್ನವನ್ನೂ ಬಿಡುವುದಿಲ್ಲ. ಕೊಳಕುಬಟ್ಟೆಯನ್ನೇ ಧರಿಸುತ್ತಾನೆ. ಸ್ನೇಹಿತರು ಹೆಂಡತಿ ಮತ್ತು ಮಕ್ಕಳಿಗೆ ಕೊಡದೆ ಸರ್ವಕಾಲದಲ್ಲೂ ತನ್ನ ಪೋಷಣೆಯಲ್ಲೇ ನಿರತನಾಗಿರುತ್ತಾನೆ.

ನಿಧಿದೇವತೆಗಳ ಕಟಾಕ್ಷದಿಂದ ಮೇಲೆ ತಿಳಿಸಿರುವ ಗುಣಗಳು ವ್ಯಕ್ತಿಗಳಲ್ಲಿ ಉಂಟಾಗುತ್ತವೆ. ಎರಡು ಮೂರು ನಿಧಿದೇವತೆಗಳ ಕಟಾಕ್ಷವಿದ್ದರೆ ಆ ಎಲ್ಲದರ ಗುಣಗಳೂ ಅವನಲ್ಲಿ ಅವಿರ್ಭವಿಸುತ್ತವೆ.

ಮುಮ್ಮಡಿ ಕೃಷ್ಣರಾಜ ಒಡೆಯರವರಿಂದ ರಚಿತವಾದ ಶ್ರೀತತ್ತ್ವನಿಧಿ ಎಂಬ ಗ್ರಂಥದಲ್ಲಿನ ಒಂಬತ್ತು ಪ್ರಕರಣಗಳಲ್ಲಿ ಒಂದೊಂದು ಪ್ರಕರಣವನ್ನೂ ಆಯಾ ಪ್ರಕರಣದಲ್ಲಿ ವಿವರಿಸಿರುವ ವಿಷಯಕ್ಕೆ ಸಂಬಂಧಪಟ್ಟ ನಿಧಿ ಎಂದು ಸಾಂಕೇತಿಕವಾಗಿ ಕರೆಯಲಾಗಿದೆ. ಹೀಗೆ ಅದರಲ್ಲಿ ಶಕ್ತಿನಿಧಿ ವಿಷ್ಣುನಿಧಿ ಶಿವನಿಧಿ ಬ್ರಹ್ಮನಿಧಿ ವೈಷ್ಣವನಿಧಿ ಶೈವನಿಧಿ ಆಗಮನಿಧಿ, ಕೌತುಕನಿಧಿ ಎಂಬ ಒಂಬತ್ತು ನಿಧಿಗಳಿವೆ. (ಎಸ್.ಎನ್.ಕೆ.)