ನವಲಗುಂದ - ಕರ್ನಾಟಕ ರಾಜ್ಯದ ಧಾರವಾಡ ಜಿಲ್ಲೆಯ ಒಂದು ತಾಲ್ಲೂಕು; ಈ ತಾಲ್ಲೂಕಿನ ಮುಖ್ಯಸ್ಥಳ. ತಾಲ್ಲೂಕಿನ ಉತ್ತರದಲ್ಲಿ ಬೆಳಗಾಂವಿ ಜಿಲ್ಲೆಯ ಪರಸಗಡ ಮತ್ತು ಧಾರವಾಡ ಜಿಲ್ಲೆಯ ನರಗುಂದ ತಾಲ್ಲೂಕುಗಳು. ಈಶಾನ್ಯದಲ್ಲಿ ರೋಣ, ಪೂರ್ವ ಮತ್ತು ಆಗ್ನೇಯದಲ್ಲಿ ಗದಗ, ದಕ್ಷಿಣದಲ್ಲಿ ಕುಂದಗೋಳ, ನೈಋತ್ಯ ಮತ್ತು ಪಶ್ಚಿಮದಲ್ಲಿ ಹುಬ್ಬಳ್ಳಿ ಮತ್ತು ಧಾರವಾಡ ತಾಲ್ಲೂಕುಗಳು ಇವೆ.
ತಾಲ್ಲೂಕಿನ ವಿಸ್ತೀರ್ಣ 1,08.16 ಚ.ಕಿ.ಮೀ. ಜನಸಂಖ್ಯೆ 1,76,641 (2001). ಪಟ್ಟಣದ ಜನಸಂಖ್ಯೆ 22,200 (2001). ತಾಲ್ಲೂಕಿನಲ್ಲಿ ಒಟ್ಟು 17,824 ಮನೆಗಳಿವೆ. ಇಲ್ಲಿರುವ ಗ್ರಾಮಗಳ ಸಂಖ್ಯೆ 58. ನವಲಗುಂದ, ಅಣ್ಣಿಗೇರಿ ಇವು ತಾಲ್ಲೂಕಿನಲ್ಲಿರುವ ಪಟ್ಟಣಗಳು.
ಈ ತಾಲ್ಲೂಕು ಈಶಾನ್ಯದ ಕಡೆಗೆ ಸ್ವಲ್ಪ ಮಟ್ಟಿಗೆ ಇಳಿಜಾರಾಗಿರುವ, ಆದರೆ ಸ್ಥೂಲವಾಗಿ ಮೈದಾನವೆನ್ನಬಹುದಾದ ಪ್ರದೇಶ. ಇಲ್ಲಿ ದೊಡ್ಡ ನದಿಗಳು ಯಾವುವೂ ಹರಿಯುವುದಿಲ್ಲ. ಈ ತಾಲ್ಲೂಕಿನ ದಕ್ಷಿಣ ಭಾಗದಲ್ಲಿ ಬಲ್ಲರವಾಡದ ಬಳಿ ಪ್ರವೇಶಿಸುವ ಬೆಣ್ಣಿಹಳ್ಳ ಉತ್ತರದಿಕ್ಕಿಗೆ ಹರಿದು ಅನಂತರ ಈಶಾನ್ಯ ದಿಕ್ಕಿಗೆ ತಿರುಗಿ, ಮೂಗನೂರಿನ ಬಳಿಯಲ್ಲಿ ನರಗುಂದ ತಾಲ್ಲೂಕನ್ನು ಪ್ರವೇಶಿಸುತ್ತದೆ. ಮುಂದೆ ಸ್ವಲ್ಪ ದೂರ ಇದು ಇವೆರಡೂ ತಾಲ್ಲೂಕುಗಳ ಗಡಿಯಾಗಿ ಹರಿದು ಮಲಪ್ರಭಾ ನದಿಯನ್ನು ಕೂಡುತ್ತದೆ. ಈ ತಾಲ್ಲೂಕಿನಲ್ಲಿ ಹರಿಯುವ ಇನ್ನೊಂದು ಹೊಳೆ ತುಪರಿಹಳ್ಳ. ಇದು ಪಶ್ಚಿಮದಲ್ಲಿ ತಾಲ್ಲೂಕನ್ನು ಪ್ರವೇಶಿಸುತ್ತದೆ. ಸ್ವಲ್ಪ ದೂರ ಪೂರ್ವ ದಿಕ್ಕಿಗೆ ಹರಿಯುವ ಈ ನದಿ ಅಳಗವಾಡಿಯ ಹತ್ತಿರ ದಕ್ಷಿಣಕ್ಕೆ ತಿರುಗುತ್ತದೆ. ಅನಂತರ ಇದು ಆಗ್ನೇಯ ದಿಕ್ಕಿನಲ್ಲಿ ಹರಿಯುತ್ತದೆ. ಇದು ನವಲಗುಂದ ಪಟ್ಟಣದ ವಾಯವ್ಯದಲ್ಲಿ ಬೆಣ್ಣಿಹಳ್ಳವನ್ನು ಸೇರುತ್ತದೆ. ಆಗ್ನೇಯದಲ್ಲಿ, ಕಿತ್ತೂರಿನ ಹತ್ತಿರ ತಾಲ್ಲೂಕನ್ನು ಹೋಗುವ ಹೊಳೆ ಹಂದಿಗನಹಳ್ಳ. ಇದು ತಾಲ್ಲೂಕಿನ ಪೂರ್ವಭಾಗದಲ್ಲಿ ಉತ್ತರದ ಕಡೆಗೆ ಹರಿಯುತ್ತದೆ. ಇದೂ ಬೆಣ್ಣಿಹಳ್ಳವನ್ನು ಸೇರುತ್ತದೆ. ಇವೆರಡೂ ಕೂಡುವುದು ತಡಹಾಳದ ಬಳಿಯಲ್ಲಿ. ಹಂದಿಗನಹಳ್ಳವನ್ನು ಕೂಡುವ ಹೊಳೆ ಪಿಂಜರಹಳ್ಳ. ಇವೆರಡೂ ತುಪ್ಪದ ಕುರಹಟ್ಟಿಯ ಬಳಿಯಲ್ಲಿ ಕೂಡುತ್ತವೆ. ತಾಲ್ಲೂಕಿನಲ್ಲಿ ವರ್ಷಕ್ಕೆ ಸರಾಸರಿ 660 ಮಿ.ಮೀ.ಗಳಷ್ಟು ಮಳೆಯಾಗುತ್ತದೆ.
ತಾಲ್ಲೂಕಿನಲ್ಲಿ ಅರಣ್ಯಗಳಿಲ್ಲ. ಇಲ್ಲಿಯದು ಕಪ್ಪು ಎರೆ ನೆಲ. ಹೊಳೆ ತೊರೆಗಳ ಹಾಗೂ ಮಾನವನಿರ್ಮಿತವಾದ ಬಾವಿಕೆರೆಗಳ ಪ್ರದೇಶ ವ್ಯವಸಾಯಕ್ಕೆ ಅನುಕೂಲವಾಗಿದೆ. ಬತ್ತ, ಗೋಧಿ, ಜೋಳ, ಸೇಂಗ, ಎಣ್ಣೆಬೀಜಗಳು, ಹತ್ತಿ, ಕುಸುಬೆ, ಕಡಲೆ ಬೆಳೆಯುತ್ತವೆ. ಮಳೆಯ ಅಭಾವದಿಂದಾಗಿ ಪದೇಪದೇ ಈ ತಾಲ್ಲೂಕು ಬರಕ್ಕೆ ತುತ್ತಾಗುತ್ತಿತ್ತು. ಮಲಪ್ರಭಾ ಬಲದಂಡೆ ಕಾಲುವೆಯಿಂದಾಗಿ ಪರಿಸ್ಥಿತಿ ಸುಧಾರಿಸುತ್ತಿದೆ. ಪಶುಪಾಲನೆಯೂ ತಾಲ್ಲೂಕಿನ ಒಂದು ಕಸುಬು. ಇಲ್ಲಿಯ ದನಗಳು ಒಳ್ಳೆಯ ತಳಿಯವೆಂದು ಪ್ರಸಿದ್ಧವಾಗಿವೆ. ಕೈಮಗ್ಗ, ಚರ್ಮ ಹದಗಾರಿಕೆ, ಚರ್ಮದ ಸರಕುಗಳ ತಯಾರಿಕೆ, ಗೂಡಾರ, ಜಮಖಾನೆ, ಮರದ ತೊಟ್ಟಿಲು ಮತ್ತು ಆಟಿಕೆಗಳ ತಯಾರಿಕೆ-ಇವು ಇಲ್ಲಿಯ ಸಣ್ಣ ಕೈಗಾರಿಕೆಗಳು. ಗೂಡಾರ ಜಮಖಾನೆಗಳು ತಾಲ್ಲೂಕಿನಿಂದ ಹೊರಗೂ ವ್ಯಾಪಾರವಾಗುತ್ತದೆ. ಗದಗ-ಹುಬ್ಬಳ್ಳಿ ರೈಲುಮಾರ್ಗ ಈ ತಾಲ್ಲೂಕಿನ ದಕ್ಷಿಣ ಭಾಗದಲ್ಲಿ ಸಾಗುತ್ತದೆ. ಅಣ್ಣಿಗೇರಿ, ಹೆಬಸೂರು ಇವು ರೈಲುದಾಣಗಳು. ಹುಬ್ಬಳ್ಳಿ-ಬಿಜಾಪುರ ರಸ್ತೆ ಈ ತಾಲ್ಲೂಕನ್ನು ಹಾದು ಹೋಗುತ್ತವೆ. ನವಲಗುಂದದ ನೈಋತ್ಯಕ್ಕೆ ಸುಮಾರು 5 ಕಿಮೀ. ದೂರದಲ್ಲಿರುವ ಯಮನೂರಿನಲ್ಲಿ ನಡೆಯುವ ರಾಜಾಬಾಗ್ ಸವಾರ್ ಉರುಸಿನಲ್ಲಿ ಹಿಂದೂ ಮುಸಲ್ಮಾನರಿಬ್ಬರೂ ಭಾಗವಹಿಸುತ್ತಾರೆ. ಅಣ್ಣಿಗೇರಿಯಲ್ಲಿ ಅಮೃತೇಶ್ವರ ದೇವಾಲಯ ಇದೆ.
ಈ ತಾಲ್ಲೂಕಿನ ಪ್ರದೇಶ ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಪಟ್ಟಿತ್ತು. 15ನೆಯ ಶತಮಾನದ ನಡುಗಾಲದಲ್ಲಿ ಅಲ್ಲಾ-ಉದ್-ದೀನನ ಸೋದರಳಿಯ ಜಲಾಲುದ್ದೀನ್ ಇದರ ಆಡಳಿತ ನಿರ್ವಹಿಸುತ್ತಿದ್ದ. 1690ರ ವೇಳೆಗೆ ಇದು ಮೊಗಲ್ ಚಕ್ರವರ್ತಿ ಔರಂಗ್‍ಜೇóಬನಿಗೆ ಸೇರಿತ್ತು. ಈ ಪ್ರದೇಶದ ಕಂದಾಯ ವಸೂಲಿಯ ಹಕ್ಕು ದೇಸಾಯರದಾಗಿತ್ತು. 1747ರಲ್ಲಿ ಇದು ಮರಾಠರ ಆಡಳಿತಕ್ಕೆ ಒಳಪಟ್ಟಿತ್ತು. 1778ರಲ್ಲಿ ಹೈದರ್ ಅಲಿ ಇದನ್ನು ವಶಪಡಿಸಿಕೊಂಡ. 18ನೆಯ ಶತಮಾನದ ಕೊನೆಯ ವೇಳೆಗೆ ಇದು ಧೋಂಡೋಪಂತ ಗೋಖಲೆಯ ಅಧೀನವಾಯಿತು. 1817ರಲ್ಲಿ ಬ್ರಿಟಿಷರು ಇದರ ಆಡಳಿತವನ್ನು ರಾಮರಾವ್ ಎಂಬವನಿಗೆ ವಹಿಸಿಕೊಟ್ಟರೆಂದು ಹೇಳಲಾಗಿದೆ.
ಈ ತಾಲ್ಲೂಕಿನ ಆಡಳಿತ ಕೇಂದ್ರ ನವಲಗುಂದ. ಇದು ಧಾರವಾಡದ ಪೂರ್ವಕ್ಕೆ ಸುಮಾರು 47 ಕಿ.ಮೀ. ದೂರದಲ್ಲಿ ಬೆಣ್ಣೆಹಳ್ಳದ ಬಲದಂಡೆಯ ಮೇಲೆ ಇದೆ. ಜನಸಂಖ್ಯೆ 11,985 (1971). ಇದೊಂದು ವ್ಯಾಪಾರ ಕೇಂದ್ರ. ಪ್ರತಿ ಮಂಗಳವಾರ ಇಲ್ಲಿ ಸಂತೆ ಸೇರುತ್ತದೆ. ಧಾನ್ಯ, ಎಣ್ಣೆ, ಹತ್ತಿ ಮತ್ತು ದನಗಳ ವ್ಯಾಪಾರ ನಡೆಯುತ್ತದೆ. ಗೂಡಾರ, ತೊಟ್ಟಿಲು, ಆಟಿಕೆಗಳ ತಯಾರಿಕೆ ಹಾಗೂ ಮಾರಾಟ ಆಗುತ್ತವೆ. 1870ರಿಂದ ಪುರಸಭೆಯ ಆಡಳಿತಕ್ಕೆ ಒಳಪಟ್ಟಿರುವ ಈ ಪಟ್ಟಣಕ್ಕೆ ನೀಲವ್ವನ ಕೆರೆಯಿಂದ ರಕ್ಷಿತ ನೀರಿನ ಸರಬರಾಜಾಗುತ್ತದೆ. ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸೇರಿದ ಶಂಕರ್ ಆಟ್ಸ್ ಕಾಲೇಜು, ಒಂದು ಪ್ರೌಢಶಾಲೆ ಹಾಗೂ 6 ಪ್ರಾಥಮಿಕ ಶಾಲೆಗಳಿವೆ. ಹತ್ತು ಹಾಸಿಗೆಗಳುಳ್ಳ ಒಂದು ಸರ್ಕಾರಿ ಆಸ್ಪತ್ರೆ ಹಾಗೂ 6 ಖಾಸಗಿ ದವಾಖಾನೆಗಳಿವೆ. ಗ್ರಂಥಾಲಯವಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು ನವಲಗುಂದದಲ್ಲಿ ಹೊಸದಾಗಿ ಬಸ್ ನಿಲ್ದಾಣವನ್ನು ಕಟ್ಟಿಸಿದ್ದಾರೆ. ಊರಿನಲ್ಲಿ 20 ಕಿಮೀ.ಉದ್ದದ ರಸ್ತೆಗಳುಂಟು. ನವಲಗುಂದ ಪಟ್ಟಣದಿಂದ ಹುಬ್ಬಳ್ಳಿ-ಧಾರವಾಡ, ಗದಗ, ಬಾದಾಮಿ, ನರಗುಂದ, ಗೋಕಾಕ, ಬಿಜಾಪುರ ಹಾಗೂ ಅಣ್ಣಿಗೇರಿಗಳಿಗೆ ಪಕ್ಕಾ ರಸ್ತೆ ಸಂಪರ್ಕವುಂಟು. ನವಲಗುಂದದ ದಕ್ಷಿಣಕ್ಕೆ ಸುಮಾರು 10 ಕಿ.ಮೀ. ದೂರದಲ್ಲಿರುವ ಅಣ್ಣಿಗೇರಿ ಇದರ ಹತ್ತಿರದ ರೈಲು ನಿಲ್ದಾಣ. ಇಲ್ಲಿರುವ ಗವಿಮಠದಲ್ಲಿ ಪ್ರತಿ ವರ್ಷವೂ ನಡೆಯುವ ಎಡೆಯೂರು ಸಿದ್ಧಲಿಂಗೇಶ್ವರ ಜಾತ್ರೆ ಪ್ರಸಿದ್ಧವಾದ್ದು. (ಎಸ್.ಎನ್.ಎ.ಆರ್.ಇ.)