ನಾಗಯ್ಯ ವಿ 1904-1973 ಚಿತ್ರನಟ, ಗಾಯಕ, ಸಂಗೀತ ನಿರ್ದೇಶಕ. ದಕ್ಷಿಣ ಭಾರತ ಚಿತ್ರರಂಗದ ಆರಂಭ ದಶಕಗಳಲ್ಲಿ ಸಿನಿಮಾ ಕ್ಷೇತ್ರದ ಆಧಾರಸ್ತಂಭಗಳಲ್ಲೊಬ್ಬರಾಗಿದ್ದವರು. ತೆಲುಗು ಚಿತ್ರಗಳಲ್ಲಿ ಪ್ರಮುಖವಾಗಿ ಅಭಿನಯಿಸುತ್ತಿದ್ದು, ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿಯೂ ಹೆಸರು ಮಾಡಿದ್ದರು. ಚಿತ್ತೂರು ನಾಗಯ್ಯ ಎಂದೇ ಖ್ಯಾತರಾದ ಇವರು ಗುಂಟೂರು ಜಿಲ್ಲೆಯ ರೇಪಲ್ಲಿಯಲ್ಲಿ ಮಾರ್ಚ್ 24, 1904ರಂದು ಜನಿಸಿದರು. ಚಿತ್ತೂರು ಜಿಲ್ಲೆಯ ಚಂದ್ರಗಿರಿಯಲ್ಲಿ ವಿದ್ಯಾಭ್ಯಾಸ ಹಾಗೂ ಸಂಗೀತಾಭ್ಯಾಸ. ಸ್ವಲ್ಪ ಕಾಲ ಕಾರಕೂನರಾಗಿ ದುಡಿದರು. ಲಲಿತಕಲೆಗಳಲ್ಲಿ ಚಿಕ್ಕಂದಿನಿಂದಲೇ ಆಸಕ್ತರಿದ್ದು ಹಾರ್ಮೋನಿಯಂ ವಾದಕರಾಗಿ, ಗಾಯಕರಾಗಿ ಹಾಗೂ ನಟರಾಗಿ ತೆಲುಗು ರಂಗಭೂಮಿಗೆ ಸೇವೆ ಸಲ್ಲಿಸಿದರು. ಚಿತ್ತೂರಿನ ರಾಮವಿಲಾಸ ಸಭಾದ ಸದಸ್ಯರಾಗಿ ಅದು ಅಭಿನಯಿಸುತ್ತಿದ್ದ ನಾಟಕಗಳಿಗೆ ಸಂಗೀತ ನಿರ್ದೇಶಕರಾಗಿ ಗಾಯಕರಾಗಿ ಕೆಲಸ ಮಾಡಿದರು. ಮುಸುರಿ ಸುಬ್ರಹ್ಮಣ್ಯ ಅಯ್ಯರ್, ಜಿ.ಎನ್.ಬಾಲಸುಬ್ರಹ್ಮಣ್ಯ ಅವರ ಮಾರ್ಗದರ್ಶನದಲ್ಲಿ ಸಂಗೀತ ಸಾಧನೆ ನಡೆಯಿತು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಿಯಾಶೀಲರಾಗಿ ಭಾಗವಹಿಸಿ 18 ತಿಂಗಳ ಕಾಲ ಸೆರೆಮನೆಗೂ ಹೋಗಬೇಕಾಯಿತು. ಟ್ವಿನ್ಸ್ ಹಚಿನ್ಸ್ ಗಾನಮುದ್ರಿಕೆ ಸಂಸ್ಥೆಗಳಲ್ಲಿ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡಿದರು. ಕರ್ನಾಟಕ ಸಂಗೀತ ಶ್ರೀಮಂತಗೊಳಿಸಿದ ವಾಗ್ಗೇಯಕಾರರ ಪ್ರತಿಗಳ ಅಸಂಖ್ಯ ಗಾನಮುದ್ರಿಕೆಗಳು ಹೊರಬರಲು ಕಾರಣರಾದರು. ಮದರಾಸಿನ ಆಂಧ್ರಮಹಾಸಭೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ಬಿ.ಎನ್. ರೆಡ್ಡಿ ಅವರ ಪರಿಚಯವಾಗಿತ್ತು. ಬಿ.ಎನ್. ರೆಡ್ಡಿ ಆಗ ಆಡಿಟರ್ ಆಗಿದ್ದರು. ಕಲೆಯಲ್ಲಿ ಆಸಕ್ತಿ ಹೊಂದಿದ್ದರು. ಆಗತಾನೆ ಕೊಲ್ಹಾಪುರದಿಂದ ಮದರಾಸಿಗೆ ತೆರಳಿದ್ದ ಎಚ್.ಎಮ್. ರೆಡ್ಡಿ ಅವರ ಜೊತೆಗೂಡಿ ರೇಣುಕಾ ಫಿಲಮ್ಸ್ ಎಂಬ ಚಿತ್ರನಿರ್ಮಾಣ ಸಂಸ್ಥೆ ಸ್ಥಾಪಿಸಿ ಗೃಹಲಕ್ಷ್ಮೀ ಎಂಬ ಚಿತ್ರ ನಿರ್ಮಿಸಲು ಆರಂಭಿಸಿದ್ದರು. ಈ ಚಿತ್ರದಲ್ಲಿ ನಾಗಯ್ಯ ಅವರಿಗೆ ದೇಶಭಕ್ತನ ಪಾತ್ರ. ಈ ಪಾತ್ರದಲ್ಲಿ ಹಾಡಿದ ಪಾನನಿರೋಧ ಪ್ರಚಾರಕ ಹಾಡು -ಕಳ್ಳು ಮಾನಂದೊಯ್ ಬಾಬು ಕಳ್ಳು ತೆರಕೊಂಡೊಯ್ ಗೀತೆ ಅತ್ಯಂತ ಜನಪ್ರಿಯವಾಯಿತು. ನಾಗಯ್ಯ ಅವರ ಪ್ರತಿಭೆಯನ್ನು ಜನ, ಚಿತ್ರರಂಗ ಗುರುತಿಸಿತು. ನಾಗಿರೆಡ್ಡಿ ವಾಹಿನಿ ಸಂಸ್ಥೆ ಆರಂಭಿಸಿದರು. ನಾಗಯ್ಯ ಆ ಸಂಸ್ಥೆ ಸೇರಿ ರೆಡ್ಡಿ ಅವರ ಬೆಂಬಲಕ್ಕೆ ನಿಂತರು. ವಂದೇ ಮಾತರಂ (1939) ನಾಯಕ ನಟನಾಗಿ ಅಭಿನಯಿಸಿದ ಚಿತ್ರ. ಜನಪ್ರಿಯ ಸುಮಂಗಲಿ (1940) ದೇವತಾ (1941) ಭಕ್ತಿ ಪೋತನ (1942) ಸ್ವರ್ಗ ಸೀಮಾ (1945) ತ್ಯಾಗಯ್ಯ (1946) ಯೋಗಿ ವೇಮನ (1947) ಈ ಯಶಸ್ವೀ ಚಿತ್ರಗಳ ಸಾಲು. ನಾಗಯ್ಯ ಅವರಿಗೆ ಚಿತ್ರರಂಗದಲ್ಲಿ ಹೂವು ಚೆಲ್ಲಿದ ಹಾದಿ. ದಕ್ಷಿಣ ಭಾರತದಲ್ಲೇ ಅತ್ಯಂತ ಹೆಚ್ಚಿನ ಸಂಭಾವನೆ ಪಡೆದ ನಟರ ಸ್ಥಾನ ಪಡೆದರು. ತ್ಯಾಗಯ್ಯ ಚಿತ್ರ ನಾಗಯ್ಯ ಅವರ ಅಚ್ಚುಮೆಚ್ಚಿನ ಚಿತ್ರ. ನಿರ್ಮಾಪಕ, ನಿರ್ದೇಶಕ, ಸಂಗೀತ ನಿರ್ದೇಶಕ, ಗಾಯಕ, ನಾಯಕ, ಸ್ಮರಣೀಯ ಚಿತ್ರ. ದಕ್ಷಿಣ ಭಾರತದ ಸರ್ವ ಶ್ರೇಷ್ಠ ಚಿತ್ರಗಳಲ್ಲಿ ಅಗರಸ್ಥಾನ ಪಡೆದ ಸಂಗೀತ ಚಿತ್ರ. ಜೆಮಿನಿ ಸ್ಟುಡಿಯೋ ನಿರ್ಮಾಣದ (1946) ಆ ಕಾಲದ ಒಂದು ಭಕ್ತಿ ಪ್ರಧಾನ ಸಂಗೀತ ಚಿತ್ರ. ನಟರಾಗಿ, ನಿರ್ಮಾಪಕರಾಗಿ ಸಂಗೀತ ನಿರ್ದೇಶಕರಾಗಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅಚ್ಚಳಿಯದ ಹೆಸರಾಗಿದ್ದಾರೆ. ತೆಲುಗು ಚಿತ್ರಸಂಗೀತಕ್ಕೆ ಕರ್ನಾಟಕ ಸಂಗೀತದ ಶಾಸ್ತ್ರೀಯ ಅಂಶವನ್ನು ಮಿಳಿತಗೊಳಿಸಲು ಇವರು ಕಾರಣರಾದರು.

 	ತೆಲುಗು, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಮುಖ್ಯನಟರಾಗಿ, ಪೋಷಕನಟರಾಗಿ ಅಭಿನಯಿಸಿದ್ದಾರೆ. ಭಕ್ತ ಮಾರ್ಕಂಡೇಯ (1956), ಅಮರಶಿಲ್ಪಿ ಜಕಣಾಚಾರಿ (1964) ನಾಗಯ್ಯ ಪಾತ್ರವಹಿಸಿದ ಕನ್ನಡ ಚಿತ್ರಗಳು. ವಿವಾಹ ಬಂಧಂ 1964, ವಿಂಗ್‍ವೀಟುಪೆಣ್ 1966, ಕುಮಾರಿಪೆಣ್ 1967, ಶ್ರೀಕೃಷ್ಣಾವತಾರಮ್ 1968, ಕುಲಗೌರಮ್ 1972, ಕೃಷ್ಣಾಂಜನೇಯ ಯುದ್ಧಂ, ಸಂಪೂರ್ಣ ರಾಮಾಯಣ, ಶಭಾಸ್ ಪಾಪಣ್ಣ, ಶಕ್ತಿಲೀಲ (1973) ಇವು ಪ್ರಖ್ಯಾತ ಚಲನ ಚಿತ್ರಗಳು. 

	ನಾಗಯ್ಯ ಅವರ ಅಭಿನಯ ಗಾಯನಕ್ಕೆಸಂದ ಪ್ರಶಸ್ತಿಗಳು ಗೌರವಗಳು ಹಲವಾರು, ತಿರುವಾಂಕೂರು ಸಂಸ್ಥಾನದ ಮಹಾರಾಜರು, ವಿದ್ವತ್ ಸಭೆಯಲ್ಲಿ ಸಕಲರಾಜಮರ್ಯಾದೆಗಳೊಂದಿಗೆ ಅಭಿನವ ತ್ಯಾಗರಾಜ ಘೋಷಿಸಿ ತಮ್ಮ ಅರ್ಧಾಸನ ನೀಡಿ ಗೌರವಿಸಿದರು. ಮೈಸೂರು ಅರಸರು ಹರಿಯಾಣದಲ್ಲಿ ಸುವರ್ಣ ನಾಣ್ಯಗಳನ್ನು ನೀಡಿ, ರಾಮನ್ ಪದಕವಿರುವ ಚಿನ್ನದ ಹಾರ ತೊಡಿಸಿದರು.
 ಚಿತ್ರರಂಗಕ್ಕೆ ಸಂದ ಇವರ ಕಲಾಸೇವೆಯನ್ನು ಮನ್ನಣೆ ಮಾಡಿ ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. 30-12-1973ರಲ್ಲಿ ತಮ್ಮ 72ನೇ ವಯಸ್ಸಿನ ವೃದ್ಧಾಪ್ಯದಲ್ಲಿವರು ನಿಧನರಾದರು.	

(ಎಸ್.ಎಸ್.ಎಂ.ಯು.)