ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾಗರತ್ನ, ಆರ್

ನಾಗರತ್ನ, ಆರ್ -

    23ನೇ ಡಿಸೆಂಬರ್ 1944ರಲ್ಲಿ ಜನಿಸಿದ ಡಾ|| ಆರ್. ನಾಗರತ್ನರವರು 1967ರಲ್ಲಿ ಎಂ.ಬಿ.ಬಿ.ಎಸ್. ಪದವಿಯನ್ನು ಪೂರೈಸಿದರು.  ಡಾ|| ಆರ್. ನಾಗರತ್ನರವರು ನಂತರ ಎಂ.ಡಿ (ಮೈಸೂರು ವಿಶ್ವವಿದ್ಯಾಲಯ) ಮತ್ತು ಎಂ.ಆರ್.ಸಿ.ಪಿ (ಲಂಡನ್) ಪೂರೈಸಿದರು.  ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯ ಸಹಶಸ್ತ್ರಚಿಕಿತ್ಸತರಾಗಿ, ಸಿ.ಜಿ. ಆಸ್ಪತ್ರೆ ಮತ್ತು ಜೆ.ಜೆ.ಎಂ. ಮೆಡಿಕಲ್ ಕಾಲೇಜು, ದಾವಣಗೆರೆ, ಲಂಡನ್‍ನಗರದ ಆಸ್ಪತ್ರೆಗಳಲ್ಲಿ ಮುಖ್ಯ ವೈದ್ಯಕೀಯ ಸೇವಾನಿರೀಕ್ಷಕರಾಗಿ, ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸಿದ್ದಾರೆ.  ಅಲ್ಲದೇ ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರ, ಯೋಗಚಿಕಿತ್ಸೆ ನಿಲಯದಲ್ಲಿ ಮುಖ್ಯ ವೈದ್ಯಕೀಯ ನಿರೀಕ್ಷಕರಾಗಿ ಕಾರ್ಯ ನಿರ್ವಹಿಸಿದ ಇವರು ಪ್ರಸ್ತುತ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ, ವಿವೇಕಾನಂದ ಕೇಂದ್ರ, ಯೋಗ ಸಂಶೋಧನಾ ಫೌಂಡೇಶನ್ ಮತ್ತು ಸುಹೃದಯ ಪಾಲಿಕ್ಲಿನಿಕ್, ಚಾಮರಾಜಪೇಟೆ, ಬೆಂಗಳೂರು ಇಲ್ಲಿ ವೈದ್ಯಕೀಯ ಮತ್ತು ಯೋಗ ಚಿಕಿತ್ಸೆ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ದೇಶ, ವಿದೇಶಗಳ ಹಲವಾರು ಸಂಘ ಸಂಸ್ಥೆಗಳ ಅಧಿಕೃತ ಸದಸ್ಯತ್ವ ಹೊಂದಿರುವ ಇವರು ಐ.ಎಂ.ಎ.ಯಿಂದ ವೈದ್ಯದಾನದ ಪುರಸ್ಕಾರ ಮತ್ತು ಮಹಿಳಾ ಲೋಕಕ್ಕೆ ಯೋಗ ವಿಧಾನದಿಂದ ಸಲ್ಲಿಸಿರುವ ಸೇವೆಗಾಗಿ ಕರ್ನಾಟಕ ಕಲ್ಪವಲ್ಲಿ (ಕರ್ನಾಟಕ ರಾಜ್ಯ ಮಹಿಳಾ ಸಂಸ್ಥೆ ಶಾಶ್ವತಿ) ಪ್ರಶಸ್ತಿ ಪಡೆದಿದ್ದಾರೆ.  ಬೆಂಗಳೂರಿನ ಬಳಿ ವಿವೇಕಾನಂದ ಯೋಗ ಕೇಂದ್ರ ಸ್ಥಾಪಿಸಿ, ಈಗ ಅದು ಡೀಮ್ಡ್ ವಿಶ್ವವಿದ್ಯಾಲಯವಾಗಿ ಬೆಳೆಯುವಷ್ಟರವರೆಗೆ ಶ್ರಮ ವಹಿಸಿರುವ ಡಾ|| ಆರ್. ನಾಗರತ್ನರವರು ಭಾರತದ ಕೀರ್ತಿಯನ್ನು ಯೋಗದ ಮೂಲಕ ದೇಶ ವಿದೇಶಗಳಲ್ಲಿ ಹರಡಿ ತಮ್ಮ ಬದುಕನ್ನೇ "ಯೋಗ"ಕ್ಕಾಗಿ ಮೀಸಲಿರಿಸಿದ್ದಾರೆ.

(ಡಾ. ವಸುಂಧರಾ ಭೂಪತಿ)