ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾಯಿ ಹುಚ್ಚು

ನಾಯಿ ಹುಚ್ಚು- ನಾಯಿಗಳಲ್ಲಿ ಪ್ರಧಾನವಾಗಿ ಕಂಡುಬರುವ ಅಂಟುಜಾಡ್ಯ (ರೇಬೀಸ್). ವೈರಸ್‍ಗಳಿಂದ ಉಂಟಾಗುತ್ತದೆ. ಸಾಧಾರಣವಾಗಿ ಇದು ನಾಯಿಗಳ ರೋಗವಾದರೂ ನರಿ, ತೋಳ, ಕಾಡುನಾಯಿ ಮತ್ತು ಕರಡಿಗಳಲ್ಲೂ ಕಂಡುಬರುವುದುಂಟು. ಬೇರೆ ಪ್ರಾಣಿಗಳು ಹಾಗೂ ಮಾನವ ಕೂಡ ಈ ರೋಗಕ್ಕೆ ತುತ್ತಾಗುವುದುಂಟು. ಹುಚ್ಚು ನಾಯಿ ಅಥವಾ ಹುಚ್ಚು ಹಿಡಿದ ತೋಳ ಮುಂತಾದ ಪ್ರಾಣಿಗಳು ಇತರ ಪ್ರಾಣಿಗಳನ್ನು, ಮಾನವರನ್ನು ಕಚ್ಚುವುದರಿಂದ ಜೊಲ್ಲಿನ ಮೂಲಕ ವೈರಸ್ ಹರಡಿ ರೋಗ ಪ್ರಸರಿಸುತ್ತದೆ. ಬಾವಲಿಗಳು ಕೂಡ ಈ ರೋಗವನ್ನು ಹರಡುವುವು. ವೈರಸ್ ದೇಹವನ್ನು ಹೊಕ್ಕ ಮೇಲೆ ನರಗಳ ತುದಿಗಳಿಗೂ ಅಂಗಾಶಗಳಿಗೂ ಹರಡಿ ನರಗಳ ಮೂಲಕ ಸಾಗಿ ಮಿದುಳು ಅಥವಾ ಬೆನ್ನುಹುರಿಯನ್ನು ತಲಪುತ್ತವೆ. ನರಮಂಡಲಕ್ಕೆ ಮಾತ್ರ ಸೀಮಿತವಾಗಿರುವ ಈ ವೈರಸ್‍ಗಳು ನ್ಯೂರೋಟಾಕ್ಸಿನ್ ಎಂಬ ವಿಷವನ್ನು ಉತ್ಪಾದಿಸುವುವು. ರೋಗ ಚಿಹ್ನೆಗಳಿಗೆ ಈ ವಿಷವೇ ಕಾರಣ.

ಈ ರೋಗ ಒಮ್ಮೆಲೇ ಕಾಣಿಸಿಕೊಳ್ಳದು. ದೀರ್ಘಾವಧಿಯ ಹುದುಗುವಿಕೆಯ ನಂತರ ರೋಗ ಲಕ್ಷಣಗಳು ಕಾಣಿಸಿಕೊಳ್ಳುವುವು. ಸಾಮಾನ್ಯವಾಗಿ ನಾಯಿ ಕಚ್ಚಿದ ಮೂರು ತಿಂಗಳ ಮೇಲೆ ರೋಗ ಹೊರಹೊಮ್ಮುವುದಾದರೂ ಕೆಲವು ಸಲ 10 ದಿನಗಳೊಳಗೆ ಅಥವಾ ಒಂದು ಇಲ್ಲವೆ ಎರಡು ವರ್ಷಗಳ ಅನಂತರ ಕಾಣಿಸಿಕೊಳ್ಳಬಹುದು. ಹುದುಗುವಿಕೆಯ ಅವಧಿ ಕಚ್ಚಿಸಿಕೊಂಡ ಪ್ರಾಣಿ, ಕಚ್ಚಲ್ಪಟ್ಟಸ್ಥಳ ಮುಂತಾದುವನ್ನು ಅವಲಂಬಿಸಿ ವ್ಯತ್ಯಾಸವಾಗುತ್ತದೆ. ಬೇರೆ ಪ್ರಾಣಿಗಳಿಗೆ ಹೋಲಿಸಿದರೆ ಮನುಷ್ಯರಲ್ಲಿ ಕಾಣಿಸಿಕೊಳ್ಳುವುದು ಬಹಳ ಕಾಲದ ಅನಂತರ. ಅಂತೆಯೇ ಕಚ್ಚಿದ ಸ್ಥಳ ಮಿದುಳಿನಿಂದ ದೂರವಿದ್ದಷ್ಟೂ ರೋಗ ಲಕ್ಷಣ ಹೊರಕಾಣಿಸಿಕೊಳ್ಳುವುದು ತಡ.

ನಾಯಿ ಹುಚ್ಚಿನಲ್ಲಿ ಉಗ್ರ ಮತ್ತು ಅರನಾರಿ ಎಂಬ ಎರಡು ಬಗೆಗಳುಂಟು.

ಉಗ್ರ ಬಗೆಯ ನಾಯಿಹುಚ್ಚಿನಲ್ಲಿ ರೋಗ ಚಿಹ್ನೆಗಳು ಕಾಣಿಸಿಕೊಳ್ಳುವುದು ಶೀಘ್ರ ಗತಿಯಲ್ಲಿ. ರೋಗಿ ಕಳವಳಕ್ಕೀಡಾಗುವುನಲ್ಲದೆ ಅಸ್ತಿಮಿತಗೊಳ್ಳುತ್ತಾನೆ. ಹಾಗೂ ಅನಿದ್ರೆಯಿಂದ ನರಳುತ್ತಾನೆ. ಮೈಯ ತಾಪ ಏರುತ್ತದೆ. ಅನಂತರ ನೀರನ್ನು ಕಂಡರೆ ಹೆದರಿಕೆ ಆರಂಭವಾಗುತ್ತದೆ. ಆಹಾರವನ್ನಾಗಲೀ ಪಾನೀಯಗಳನ್ನಾಗಲೀ ನುಂಗುವಾಗ ಸೆಳೆತವುಂಟಾಗುತ್ತದೆ. ದ್ರವ ಪದಾರ್ಥಗಳನ್ನು ನೋಡಿದ ಮಾತ್ರಕ್ಕೆ ರೋಗಿ ಉದ್ರೇಕಿತನಾಗುತ್ತಾನೆ. ಹಾಗೆಯೇ ಗಾಳಿ ಬೀಸಿದರೂ ಕೂಡ ಇದೇ ತೆರನ ಪ್ರತಿಕ್ರಿಯೆ ಉಂಟಾಗುತ್ತದೆ. ಮಾನಸಿಕವಾಗಿ ರೋಗಿ ಸ್ವಸ್ಥವಾಗಿರುತ್ತಾನೆ. ಆದರೂ ಧ್ವನಿ ಕೆಡುವುದು, ಸೆಳೆತದ ಹಿಡಿಯಲ್ಲಿರುವಾಗ ನಾಯಿ ಬಗಳುವ ರೀತಿ, ಕೆಮ್ಮುವುದು - ಇವು ಇನ್ನಿತರ ಲಕ್ಷಣಗಳು.

ಅರನಾರಿ ಬಗೆಯಲ್ಲಿ ಚಿಹ್ನೆಗಳು ಮಾತ್ರ ಪ್ರಬಲವಾಗಿರುವುದಿಲ್ಲ. ಹಲವು ಬಾರಿ ರೋಗ ಪತ್ತೆಯಾಗದಿರಬಹುದು. ಜ್ವರ, ತಲೆನೋವು, ವಾಂತಿಯಾಗುವಿಕೆ, ಸುಸ್ತು ಇವು ಇದರ ಲಕ್ಷಣಗಳು. ಕೊನೆಗೆ ಪಾಶ್ರ್ವವಾಯು ಕಾಣಿಸಿಕೊಳ್ಳುವುದು. ಈ ಬಗೆಯ ನಾಯಿಹುಚ್ಚು ಸಸ್ಯಾಹಾರಿ ಪ್ರಾಣಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ನಾಯಿಹುಚ್ಚು ಮನುಷ್ಯನಲ್ಲಿ ಒಮ್ಮೆ ಕಾಣಿಸಿಕೊಂಡರೆ ಸಾವು ನಿಶ್ಚಿತ. ಇದಕ್ಕೆ ಚಿಕಿತ್ಸೆ ರೋಗ ನಿರೋಧ ಒಂದೆ. ರೋಗ ಲಕ್ಷಣಗಳು ಒಮ್ಮೆ ಹೊರಹೊಮ್ಮಿದ ಮೇಲೆ ನಿವಾರಣೆ ಅಸಾಧ್ಯ. ನಾಯಿ ಜಾತಿ ಪ್ರಾಣಿಗಳೂ ರೇಬೀಸ್ ರೋಗದ ವೈರಾಣುವಿನ ಸಹಜ ಆಶ್ರಯದಾತರು. ಈ ಪ್ರಾಣಿಗಳಲ್ಲಿ ರೋಗ ಲಕ್ಷಣಗಳಿಲ್ಲದೆಯೇ ವೈರಾಣುಗಳ ಜೊಲ್ಲಿನಲ್ಲಿರುವುದು ಸಾಧ್ಯ. ಆದುದರಿಂದ ಕಚ್ಚಿದ ನಾಯಿಯನ್ನು ಹತ್ತು ದಿನ ಗಮನಿಸುವುದಲ್ಲದೆ, ಯಾರಿಗೆ ನಾಯಿ ಕಚ್ಚಿದೆಯೋ, ಅಂತಹವರು ಒಟ್ಟು ಆರು ಲಸಿಕೆಗಳನ್ನು ಕಚ್ಚಿದ ದಿನ (0 ದಿನ) ಕಚ್ಚಿದ 3 ನೆಯ ದಿನ, ಕಚ್ಚಿದ 7 ನೆಯ ದಿನ, ಕಚ್ಚಿದ 14 ನೆಯ ದಿನ, ಕಚ್ಚಿದ 28 ನೆಯ ದಿನ, ಹಾಗೂ ಕಚ್ಚಿದ 90 ನೆಯ ದಿನ ರೋಗ ಲಸಿಕೆ ಪಡೆದುಕೊಳ್ಳ ಬೇಕು. ಪ್ರಾಣಿಗಳಿಗೂ ಇದು ಅನ್ವಯವಾಗುತ್ತದೆ. ನಾಯಿಗಳನ್ನು ಸಾಕುವವರು ಪ್ರತಿವರ್ಷವೂ ಲಸಿಕೆ ಕೊಡಿಸುವುದು ಕಡ್ಡಾಯಮಾಡಿಕೊಳ್ಳಬೇಕು. 

ರೇಬೀಸ್ ರೋಗವು ನಾಯಿ ಬೆಕ್ಕುಗಳಿಗಿಂತ ಬೇರೆ ಸಾಕು ಪ್ರಾಣಿಗಳಾದ ಹಸು, ಎಮ್ಮೆ ಮುಂತಾದ ಪ್ರಾಣಿಗಳಲ್ಲಿ ಬೇಗನೆ ಕಾಣಿಸಿಕೊಳ್ಳುತ್ತದೆ. ರೋಗ ಲಕ್ಷಣಗಳು ಮುಖ್ಯವಾಗಿ ಹುಲ್ಲು, ಮೇವು ಬಿಡುವುದು, ಕಣ್ಣು ಕೆಂಪಾಗುವುದು, ಹಸುಗಳು ಬೆದೆಗೆ ಬಂದಾಗ ಕೂಗುವಂತೆ ಯಾವಾಗಲೂ ಕೂಗುವುದು, ತಲೆಯನ್ನು ಗೋಡೆಗೆ ಗುದ್ದುವುದು, ಗಂಟಲಲ್ಲಿ ಏನೋ ಸಿಕ್ಕಿಕೊಂಡಂತೆ ಕೆಮ್ಮುವುದು. ನಾಯಿಗಳು ಹೆಚ್ಚಾಗಿ ಹಸುಗಳ/ಎಮ್ಮೆಗಳ ಮುಸುಡಿಗೆ ಕಚ್ಚುವುದರಿಂದ ಲಕ್ಷಣಗಳು ಬಹುಬೇಗ ಕಾಣಿಸಿಕೊಂಡು ಬಹುಬೇಗ ಸಾವನ್ನಪ್ಪುತ್ತದೆ.

ಪ್ರಥಮ ಚಿಕಿತ್ಸೆ: ನಾಯಿ ಕಚ್ಚಿದ ತಕ್ಷಣ, ಕಚ್ಚಿದ ಜಾಗವನ್ನು ಸಾಬೂನಿನಿಂದ/ಮಾರ್ಜಕಗಳಿಂದ ಹತ್ತು ನಿಮಿಷ ಒಂದೇ ಸಮನೆ ತೊಳೆದಲ್ಲಿ, ಕಚ್ಚಿದ ಭಾಗದಲ್ಲಿರಬಹುದಾದ ಶೇಕಡಾ 90 ಭಾಗ ರೋಗಾಣುಗಳು ಸಾವನ್ನಪ್ಪುತ್ತವೆ. ಹಾಗೂ ನಂತರ ನಿಯಮಿತ ದಿನಗಳಲ್ಲಿ (0,3,7,14,28 ಮತ್ತು 90) ಲಸಿಕೆ ಹಾಕಿದಲ್ಲಿ ರೋಗದಿಂದ ಮುಕ್ತಿ ಹೊಂದುವ ಸಂಭವನೀಯತೆ ಹೆಚ್ಚು.

ಹುಚ್ಚು ಹಿಡಿದ ನಾಯಿಯಲ್ಲಿ ಜಲದ್ವೇಷದ ಲಕ್ಷಣಗಳಾವುವೂ ಕಂಡುಬರುವುದಿಲ್ಲ. ಅದಕ್ಕೆ ಜ್ವರ ಬರುತ್ತದೆ ಮತ್ತು ಅದರಲ್ಲಿ ಸಿಡುಕಿನ ಸ್ವಭಾವ ಕಂಡುಬರುತ್ತದೆ. ಅಂಥ ನಾಯಿ ಹುಚುಹುಚ್ಚಾಗಿ ಅಲೆದಾಡುತ್ತಿದ್ದು ದಾರಿಯಲ್ಲಿ ಸಿಕ್ಕವರನ್ನೆಲ್ಲಾ ಕಚ್ಚುತ್ತದೆ. ಬರುಬರುತ್ತಾ ಅದರ ಬಗುಳುವಿಕೆ ಬದಲುಗೊಂಡು, ಅದಕ್ಕೆ ಆಹಾರವನ್ನು ನುಂಗಲು ಕಷ್ಟವಾಗುತ್ತದೆ. ಪಾಶ್ರ್ವಪೀಡಿತವಾಗಿ ಎರಡರಿಂದ ಐದು ದಿನಗಳ ತರುವಾಯ ಸತ್ತುಹೋಗುತ್ತದೆ. (ಎಸ್.ಎಂ.ಸಿ.) (ಪರಿಷ್ಕರಣೆ: ಎಸ್.ಎ.ದತ್ತಾ)